ಮದುವೆ ಆದ ಮೇಲೆ ಪ್ರತಿಯೊಬ್ಬ ಹುಡುಗಿಗೂ ಬರುವ ಒಂದೇ ಚಿಂತೆ ಎಂದರೆ, ಅಡುಗೆ ಸರಿಯಾಗಿ ಮಾಡಿ ಅತ್ತೆಮನೆಯಲ್ಲಿ ಸೈ ಎನಿಸಿಕೊಳ್ಳಬೇಕು. ತಾನು ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟಾಗಬಾರದು ಎನಿಸುತ್ತಿರುತ್ತದೆ.
– ಗಟ್ಟಿ ಮೊಸರನ್ನು ಕಡೆದು ಮಜ್ಜಿಗೆ ಮಾಡುವಾಗ, ಕೇವಲ ನೀರಷ್ಟೇ ಬೆರೆಸದೆ, ತುಸು ತೆಳ್ಳಗಿನ ಹಾಲನ್ನೂ ಬೆರೆಸಿರಿ.
– ಕಸೂರಿಮೇಥಿಯನ್ನು ತವಾ ಮೇಲೆ ಲಘುವಾಗಿ ಹುರಿದು ನಂತರ ಬಳಸಿರಿ.
– ಮನೆಯಲ್ಲೇ ಪನೀರ್ ತಯಾರಿಸುವುದಾದರೆ ಅದರಲ್ಲಿ ಉಳಿದ ನೀರನ್ನು ಚಪಾತಿ ಹಿಟ್ಟು ಕಲಸಲು ಅಥವಾ ಯಾವುದೇ ಗ್ರೇವಿ ತಯಾರಿಗೆ ಬಳಸಿಕೊಳ್ಳಿ.
– ಪಾಲಕ್ ಸೊಪ್ಪಿನ ಗ್ರೇವಿ ತಯಾರಿಸುವಾಗ, ಅಗತ್ಯವಾಗಿ ಅದಕ್ಕೆ ಟರ್ನಿಪ್ ಹೆಚ್ಚಿಹಾಕಿ, ಆಗ ರುಚಿ ಹೆಚ್ಚುತ್ತದೆ.
– ಕೋಫ್ತಾ ತಯಾರಿಸುವಾಗ ಜೊತೆಗೆ ಗಟ್ಟಿ ಹುಣಿಸೇ ರಸ ಬೆರೆಸಿ ರೋಲ್ ಮಾಡಿ.
– ಉಪ್ಪಿನಕಾಯಿಯ ಮಸಾಲೆ ಬೇರೆ ಮಾಡಿ. ಇದಕ್ಕೆ ತುಸು ಉಪ್ಪು ಹಾಕಿ, ಹಸಿ ಮೆಣಸಿನಕಾಯಿಗಳನ್ನು ಸೀಳಿಕೊಂಡು ಅದಕ್ಕೆ ತುಂಬಿಸಿ, ಲಘುವಾಗಿ ಬಾಡಿಸಿ ಊಟದ ಜೊತೆ ನೆಂಚಿಕೊಳ್ಳಲು ಕೊಡಿ.
– ದೋಸೆಯ ತವಾಗೆ ಏನಾದರೂ ಮೆತ್ತಿದ್ದರೆ, ಅದನ್ನು ಬಟ್ಟೆಯಲ್ಲಿ ಒರೆಸಿ, ಲಘುವಾಗಿ ಉಪ್ಪು ಹುರಿಯಿರಿ. ಅದು ಪೂರ್ತಿ ಬಿಡುತ್ತದೆ. ನಂತರ ದೋಸೆ ತಯಾರಿಸಿ.
– ಪರೋಟ ತಯಾರಿಸುವಾಗ, ಲಟ್ಟಿಸಿದ ಹಿಟ್ಟಿನ ಮೇಲೆ ಹದನಾಗಿ ಎಣ್ಣೆ ಸವರುತ್ತಾ, ಒಣ ಹಿಟ್ಟು ಉದುರಿಸಿ, ತ್ರಿಕೋನಾಕಾರವಾಗಿ ಮಡಚಿ, ಮತ್ತೆ ಮತ್ತೆ ಎಣ್ಣೆ ಸವರುತ್ತಾ ಲಟ್ಟಿಸಿ. ಅದು ಸೊಗಸಾಗಿರುತ್ತದೆ.
– ಪಾಯಸ, ಖೀರು ತಯಾರಿಸುವಾಗ ಅದು ಬಹಳ ತೆಳ್ಳಗಾಗಿದ್ದರೆ, ಜಾಸ್ತಿ ಕಸ್ಟರ್ಡ್ಗೆ ಇದರ ಅಂಶವನ್ನೇ ಬಳಸಿ ಕದಡಿಕೊಂಡು ಪಾಯಸಕ್ಕೆ ಬೆರೆಸಿಕೊಳ್ಳಿ.
– ಚಪಾತಿ ಗಟ್ಟಿಯಾಗಿದೆ ಎನಿಸಿದರೆ, ಹಿರಿಯರಿಗೆ ಅದರ ಮೇಲೆ ಬಿಸಿ ಬಿಸಿ ಸಾಂಬಾರ್ ಹಾಕಿಕೊಡಿ. ಮಕ್ಕಳಿಗೆ, ಚಪಾತಿ ತುಂಡರಿಸಿ, ಸಕ್ಕರೆ ಕದಡಿದ ಬಿಸಿ ಬಿಸಿ ಹಾಲು ಹಾಕಿ ಸವಿಯಲು ಕೊಡಿ.
– ಹಣ್ಣು ಹುರುಳಿಕಾಯಿ ಬೀಜ (ರಾಜ್ಮಾ), ಹಲಸಂದೆ ಕಾಳು, ಕಡಲೆಕಾಳು ಇತ್ಯಾದಿ ಬೆರೆಸಿ ಗ್ರೇವಿ ಮಾಡುವಾಗ, ಜೊತೆಗೆ 1 ಕಪ್ ಟೊಮೇಟೊ ಪ್ಯೂರಿ ಬೆರೆಸಿ ಗ್ರೇವಿ ತಯಾರಿಸಿ, ಅದು ರುಚಿಯಾಗಿರುತ್ತದೆ.
– ಯಾವುದೇ ವ್ಯಂಜನಕ್ಕೆ ನೇರವಾಗಿ ಕಚ್ಚಾ ಪನೀರ್ ಬೆರೆಸುವುದಿದ್ದರೆ, ಅದನ್ನು ಸ್ವಲ್ಪ ಹೊತ್ತು ಅರಿಶಿನ ಕದಡಿದ ನೀರಲ್ಲಿ ನೆನೆಹಾಕಿ.
– ಯಾವುದೇ ಕಾಳು ಅಥವಾ ತರಕಾರಿ ಬೇಯಿಸಿ, ನಂತರ ಅದರ ಸಾಂಬಾರ್, ಗ್ರೇವಿ ತಯಾರಿಸುವಾಗ ಅದರ ನೀರನ್ನು ಜೊತೆಗೇ ಬೆರೆಸಿ ಕುದಿಸಬೇಕು.
– ಪಲಾವ್ ತಯಾರಿಸುವಾಗ ಅನ್ನಕ್ಕೆ ಉಪ್ಪು ಹಾಕಿ ಬೇಯಿಸಿ. ಆಮೇಲೆ ಇದಕ್ಕೆ ಫ್ರೈ ಮಾಡಿದ ತರಕಾರಿ ಬೆರೆಸಿ ಮುಂದುವರಿಸಿ. ಪಲಾವ್ ಉದುರಾಗಿರುತ್ತದೆ.
– ಚಪಾತಿಗೆ ಹಿಟ್ಟು ಕಲಸುವಾಗ ತುಸು ಬೆಚ್ಚಗಿನ ನೀರು ಬೆರೆಸಿ ನಾದಿಕೊಳ್ಳಿ. ಚಪಾತಿ ಸಾಫ್ಟ್ ಸಾಫ್ಟ್ ಆಗಿರುತ್ತದೆ.
– ಯಾವುದೇ ಬಗೆಯ ಬೋಂಡ, ಬಜ್ಜಿ, ಪಕೋಡ ತಯಾರಿಸುವಾಗ ಜೊತೆಗೆ ತುಸು ಸೋಡ ಬೆರೆಸಿಕೊಳ್ಳಿ, ಗರಿಗರಿ ಆಗುತ್ತವೆ.
– ಆಲೂ ಬೇಯಿಸಿ ಫ್ರಿಜ್ನಲ್ಲಿರಿಸಿ. ನಂತರ ಬೇಕಾದಂತೆ ಕತ್ತರಿಸಿ ಹೊಂಬಣ್ಣಕ್ಕೆ ಕರಿಯಿರಿ. ಇದನ್ನು ಹುಳಿಸಿಹಿ ಚಟ್ನಿ ಜೊತೆ ಸವಿಯಿರಿ.
– ಕಾದಾರಿದ ಹಾಲಿನಲ್ಲಿ ಅವಲಕ್ಕಿ ನೆನೆಹಾಕಿ. ಬೇರೆ ಗಟ್ಟಿ ಹಾಲನ್ನು ಚೆನ್ನಾಗಿ ಮರಳಿಸಿ, ತುಸು ಹಿಂಗಿಸಿ. ಇದಕ್ಕೆ ನೆನೆದ ಅವಲಕ್ಕಿ ಸಕ್ಕರೆ ಹಾಕಿ ಕದಡಿಕೊಳ್ಳಿ. ತುಸು ಏಲಕ್ಕಿಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ. ದಿಢೀರ್ ಖೀರು ರೆಡಿ!
– ಹುಳಿಸಿಹಿ ಚಟ್ನಿಗೆ ಎಂದೂ ಕೃತಕ ಬಣ್ಣ ಬೆರೆಸದಿರಿ. ಬದಲಿಗೆ ಬ್ಯಾಡಗಿ ಒಣ ಮೆಣಸಿನಕಾಯಿ ಒಗ್ಗರಣೆ ಕೊಡಿ.
– ಅಂಟ (ಗೋಂದು)ನ್ನು ಹುರಿದು ಪೌಡರ್ ಮಾಡಿಕೊಂಡು ಅದಕ್ಕೆ ಗೋಧಿಹಿಟ್ಟು ಬೆರೆಸಿ ಚೆನ್ನಾಗಿ ನಾದಿರಿ. ಇದಕ್ಕೆ ಬೂರಾ ಸಕ್ಕರೆ, ತುಪ್ಪದಲ್ಲಿ ಹುರಿದ ದ್ರಾಕ್ಷಿ-ಗೋಡಂಬಿ ಹಾಕಿ ರವೆ ಉಂಡೆ ತರಹ ಲಡ್ಡು ಮಾಡಿ.
– ಬೆಲ್ಲದ ಪಾಕ ತಯಾರಿಸುವಾಗ ಮರೆಯದೆ ಪ್ರತಿ ಸಲ ಅದನ್ನು ಸೋಸಿಕೊಳ್ಳಿ. ಆಗ ಅಡಿ ಭಾಗದಲ್ಲಿ ಕಲ್ಮಶಗಳು ನಿಲ್ಲುತ್ತವೆ.
– ಕುಲ್ಛಿ ತಯಾರಿಸುವಾಗ ಚಿಟಕಿ ಸೋಡ ಅದಕ್ಕೆ ಬೆರೆಸಿಡಿ, ಆಗ ಕೆನೆ ಕಟ್ಟದೆ ಕುಲ್ಛಿ ಸ್ಮೂತಾಗಿ ಬರುತ್ತದೆ.
– ಬಟ್ಟೆ ಮೇಲೆ ಜಿಡ್ಡು ತಗಲಿದಾಗ, ತಕ್ಷಣ ಅದಕ್ಕೆ ಗೋಧಿಹಿಟ್ಟು, ಮೈದಾ ಅಥವಾ ಟಾಲ್ಕಂ ಪೌಡರ್ ಉದುರಿಸಿ. ಸ್ವಲ್ಪ ಹೊತ್ತು ಬಿಟ್ಟು ಬ್ರಶ್ ಮಾಡಿ, ವಾಶ್ ಮಾಡಿ.
– ಗ್ಯಾಸ್ ಸ್ಟವ್ ಮೇಲೆ ತುಪ್ಪದ ಕಲೆಗಳಾದರೆ, ಅದರ ಮೇಲೆ ಸೋಡ ಉದುರಿಸಿ, ಚೆನ್ನಾಗಿ ಉಜ್ಜಿ ಶುಚಿಗೊಳಿಸಿ.
– ಅಡುಗೆ ಕೆಲಸ ಪೂರ್ತಿ ಆದ ನಂತರ, ಒದ್ದೆ ಕೈಗಳ ಮೇಲೆ ಗೋಧಿಹಿಟ್ಟು ಉದುರಿಸಿಕೊಂಡು ಶುಚಿಗೊಳಿಸಿ. ಎಲ್ಲ ಕೊಳೆಯೂ ಹೋಗುತ್ತದೆ.
– ಹುಳಿಸಿಹಿ ಚಟ್ನಿಗೆ ತಪ್ಪದೆ 2 ಚಿಟಕಿ ಉಪ್ಪು ಹಾಗೂ ಖಾರದ ಚಟ್ನಿಗೆ ಮರೆಯದೆ 2-3 ಚಿಟಕಿ ಸಕ್ಕರೆ ಸೇರಿಸಿ.
– ಬಿ. ಶಶಿಕಲಾ