ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನದಾನ ಏರ್ಪಡಿಸಿದ ಐಶ್

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‌ ತನ್ನ 44ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕೆಂದು, ಆ ದಿನ ಮಾತ್ರವಲ್ಲ ವರ್ಷವಿಡೀ 1000ಕ್ಕೂ ಹೆಚ್ಚು ಅನಾಥಮಕ್ಕಳಿಗೆ 2 ಹೊತ್ತೂ ಅನ್ನದಾನದ ಏರ್ಪಾಡು ಮಾಡಿದ್ದಾಳೆ! `ಫನ್ನೆ ಖಾನ್‌’ ಶೂಟಿಂಗ್‌ ಮಧ್ಯೆ ಬಿಡುವು ಮಾಡಿಕೊಂಡ ಐಶ್‌ ಬೇಬಿ ಹೀಗೊಂದು ಅನುಕರಣೀಯ ಬರ್ತ್‌ಡೇ ಆಚರಿಸಿಕೊಂಡು ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ಶಭಾಷ್‌ಗಿರಿ ಗಿಟ್ಟಿಸಿದ್ದಾಳೆ.

 

ಬಟ್ಟೆ ಕಳಚಲು ಸಂಕೋಚವೇಕೆ?

`ರಾಗಿಣಿ  ರಿಟರ್ನ್ಸ್’ ಚಿತ್ರದಲ್ಲಿನ ತನ್ನ ಹಾಟ್‌ ಹಾಟ್‌ ದೃಶ್ಯಗಳಿಂದ ಪಡ್ಡೆ ಹುಡುಗರ ಎದೆಗೆ ಲಗ್ಗೆ ಇಟ್ಟು, ಬೆಳ್ಳಿ ಪರದೆಗೆ ಬೆಂಕಿ ಹಚ್ಚಲು ಬರುತ್ತಿರುವ ಕರಿಶ್ಮಾ ಶರ್ಮಾಳಿಗೆ ಟಾಪ್‌ಲೆಸ್‌ ಆಗುವುದರಲ್ಲಿ ಒಂದಿಷ್ಟೂ ಸಂಕೋಚವಿಲ್ಲವಂತೆ. ಒಂದು ಕಡೆ ಮೀಡಿಯಾ ಎದುರಿಸುತ್ತಾ ಅವಳು ಹೇಳುತ್ತಾಳೆ, “ನನ್ನ ದೇಹವಂತೂ ಬಹು ಸುಂದರ! ಇಂಥ ಗ್ಲಾಮರಸ್‌ ಬಾಡಿ, ಹೊಳೆಯುವ ಸ್ಕಿನ್‌ ತೋರಿಸಿಕೊಳ್ಳುವುದರಲ್ಲಿ ಸಂಕೋಚವೇಕೆ? ಮುಂದಿನ ಚಿತ್ರಗಳಲ್ಲಿ ಕಥೆಗೆ ತೀರಾ ಅನಿವಾರ್ಯವಾದರೆ ಸಂಪೂರ್ಣ ಬಟ್ಟೆ ಕಳಚಲಿಕ್ಕೂ ನಾನು ರೆಡಿ! ಏನಂದ್ರಿ….? ನಮ್ಮ ಮನೆಯವರು ಏನೆಂದುಕೊಳ್ಳುತ್ತಾರೋ ಅಂದಿರಾ? ಖಂಡಿತಾ ಅವರು ತಪ್ಪು ತಿಳಿಯುವುದಿಲ್ಲ. ನಾನೇನೇ ಮಾಡಿದರೂ ಸರಿಯಾಗಿಯೇ ನಿರ್ಧಾರ ತೆಗೆದುಕೊಂಡಿರುತ್ತೇನೆ ಎಂಬ ಆತ್ಮವಿಶ್ವಾಸ ಅವರಿಗಿದೆ.”

ಶಾರೂಖ್‌ ಆಗಲಿದ್ದಾನೆ ಕುಳ್ಳ

ಇತ್ತೀಚೆಗೆ ಬಿಡುಗಡೆಯಾದ ಶಾರೂಖ್‌ನ ಚಿತ್ರಗಳೆಲ್ಲ ತೋಪೆದ್ದುಹೋದವು. ಆದರೆ ಈತನ ಇನ್ನೂ ಹೆಸರಿಡದ ಮುಂದಿನ ಚಿತ್ರ ಆನಂದ್‌ ರಾಯ್‌ರ ನಿರ್ದೇಶನದಲ್ಲಿ ಮೂಡಿಬರಲಿದ್ದು, ಬಹಳ ಭರವಸೆ ಇಟ್ಟುಕೊಂಡಿದ್ದಾನೆ. ಈ ಚಿತ್ರದಲ್ಲಿ ಈತ ಬಿಲ್‌ಕು‌ಲ್ ಕುಳ್ಳನಾಗಿ ಕಾಣಿಸಲಿದ್ದಾನೆ. ಈತ ಇಲ್ಲಿ ಸಾಮಾನ್ಯ ಕುಳ್ಳನಲ್ಲ, ಕತ್ರೀನಾ-ಅನುಷ್ಕಾ ಇಬ್ಬಿಬ್ಬರು ನಾಯಕಿಯರೊಂದಿಗೆ ರೊಮಾನ್ಸ್ ನಡೆಸುತ್ತಾನೆ. ಶಾರೂಖ್‌ನನ್ನು ಅತ್ಯಾಧುನಿಕ ಟೆಕ್ನಿಕ್‌ ನೆರವಿನಿಂದ ಹೀಗೆ ಕುಳ್ಳನನ್ನಾಗಿ ಮಾಡಲಾಗಿದೆಯಂತೆ. 1989ರಲ್ಲಿ ತೆರೆಗೆ ಬಂದು ತಮಿಳು, ಹಿಂದಿಯಲ್ಲೂ ಯಶಸ್ವಿ ಎನಿಸಿದ `ಅಪೂರ್ವ ಸಹೋದರ್‌ಗಳ್‌’ ಚಿತ್ರದಲ್ಲಿ ಕಮಲ್ ಹಾಸನ್‌ ಸಹ ಇದೇ ರೀತಿ ಕುಳ್ಳನಾಗಿ ಕಾಣಿಸಿದ್ದರು, ಇಡೀ ಸಿನಿಮಾದ ಶೂಟಿಂಗ್‌ಗಾಗಿ ಅವರು ನೆಲದಲ್ಲಿ ಅರ್ಧ ದೇಹ ಹೂತಿರಿಸಿದ್ದರು, ಮಂಡಿ ಮಡಿಚಿ ಶೂ ಧರಿಸಿದ್ದರು. ಇಡೀ ಚಿತ್ರ ಹಾಗೆ ಎದುರಿಸುವುದು ಖಂಡಿತಾ ಸಾಧಾರಣ ವಿಷಯವಲ್ಲ. ಆ ಕಾಲದಲ್ಲಿ ಅನಿಮೇಶನ್‌ ಟೆಕ್ನಿಕ್ಸ್ ಇಂದಿನಂತೆ ಇರಲಿಲ್ಲ ಎಂಬುದೇ ಇದಕ್ಕೆ ಕಾರಣ. ಕಮಲ್ ಮುಂದೆ ಶಾರೂಖ್‌ ಕುಳ್ಳನಾಗಿ ಯಶಸ್ವಿಯಾಗುವನೇ? ಕಾಲವೇ ಹೇಳಬೇಕು.

ಆತ್ಮಹತ್ಯೆಗೂ ಯತ್ನಿಸಿದ್ದೆ

ಸಾಮಾನ್ಯ ಜನರಿಗಿಂತ ಮಾನಸಿಕ ಒತ್ತಡದ ಸಮಸ್ಯೆ ಸೆಲೆಬ್ರಿಟಿಗಳನ್ನು ಕಾಡುವುದೇ ಹೆಚ್ಚು. ತಮ್ಮನ್ನು ತಾವು ಅತಿ ಆಕರ್ಷಕವಾಗಿ ತೋರ್ಪಡಿಸಿಕೊಳ್ಳುವ ಉತ್ಸಾಹದಲ್ಲಿ ಹಾಗೂ ಸ್ಟಾರ್‌ಡಮ್ ನ ಕುರುಡು ಓಟದಲ್ಲಿ ಎಷ್ಟೋ ತಾರೆಯರು ಡಿಪ್ರೆಶನ್‌ಗೆ ಜಾರುತ್ತಾರೆ. ದೀಪಿಕಾ ನಂತರ ಇಲಿಯಾನಾ ಸಹ ಈ ಬಗ್ಗೆ ಬಾಯಿ ತೆರೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೊಂಡಿದ್ದಾಳೆ. ತನ್ನ ಸ್ಟ್ರಗಲ್, ಡಿಪ್ರೆಶನ್‌ಗಳ ಬಗ್ಗೆ ಹೇಳುತ್ತಾಳೆ, “ನಾನು ಬಹಳ ಸಂಕೋಚ ಸ್ವಭಾವದವಳು. ನನ್ನದು ಗ್ಲಾಮರಸ್‌ ಬಾಡಿ ಆದ್ದರಿಂದ ಸಿನಿಮಾಗಳಿಗೆ ಬಂದೆ. ನಾನು ಎಷ್ಟೋ ಸಲ ಬೇಸರದಲ್ಲೇ ಇದ್ದುಬಿಡುತ್ತಿದ್ದೆ. ಆದರೆ ನಾನು ಡಿಪ್ರೆಶನ್‌ಗೆ ಒಳಗಾಗಿದ್ದೇನೆಂದು ಗೊತ್ತಿರಲಿಲ್ಲ. ಜನ ನನ್ನನ್ನು ನಾನಿರುವ ಹಾಗೆಯೇ ಸ್ವೀಕರಿಸಲಿ ಎಂದು ಕಾಯುತ್ತಿದ್ದೆ. ಒಂದು ಸಲ ಆತ್ಮಹತ್ಯೆ ಮಾಡಿಕೊಂಡು ಎಲ್ಲಾ ಮುಗಿಸಿಬಿಡೋಣ ಎಂಬ ನಿರ್ಧಾರಕ್ಕೂ ಬಂದಿದ್ದೆ.”

ಇಮೇಜ್‌ ಚಿತ್ರಗಳನ್ನು ಫ್ಲಾಪ್‌ಗೊಳಿಸುತ್ತದೆ

ಸೋನಾಕ್ಷಿ `ದಬಂಗ್‌’ ಚಿತ್ರದಿಂದ ಸಲ್ಮಾನ್‌ಗೆ ಎದುರಾಗಿ ಬೀಟೌನ್‌ ಚಿತ್ರಗಳಲ್ಲಿ ಎಂಟ್ರಿಕೊಟ್ಟವಳು. ಆಗಿನಿಂದ ಈಗಿನವರೆಗೆ ಈಕೆಯ ಚಿತ್ರಗಳೇನೋ ಬೇಕಾದಷ್ಟು ಬಂದವು, ಆದರೆ ಸಕ್ಸಸ್‌ ಆದದ್ದು ಮಾತ್ರ ಬೆರಳೆಣಿಕೆಯಷ್ಟು. ಈಕೆಯ 5 ಚಿತ್ರಗಳು 100  ಕೋಟಿ ಕ್ಲಬ್‌ ಸೇರಿದ್ದರೂ ಅದರ ಶ್ರೇಯಸ್ಸೆಲ್ಲಾ ಹೀರೋ ಪಾಲಾಯಿತು. ತನ್ನ ಇತ್ತೀಚಿನ `ಇತ್ತಫಾಕ್‌’ ಚಿತ್ರದ ಕುರಿತು ಸೋನಾಕ್ಷಿ ಹೇಳುತ್ತಾಳೆ, “ಈಗಲೂ ಜನ ನನ್ನನ್ನು ಸೀದಾ ಸಾದಾ ಪಕ್ಕದ್ಮನೆ ಹುಡುಗಿ ಪಾತ್ರದಲ್ಲೇ ನೋಡಬಯಸುತ್ತಾರೆ. `ದಬಂಗ್‌’ ನಂತರ ನಾನು ಇಂತಹ ಪಾತ್ರಗಳಿಗೆ ಅಂಟಿಕೊಂಡಿದ್ದೇನೆ. ನಾನು ಇತರ ಪಾತ್ರಗಳಲ್ಲಿ ಬಂದರೆ ಜನ ಸ್ವೀಕರಿಸುವುದೇ ಇಲ್ಲ. ನಂಬಲರ್ಹ ಸುದ್ದಿಗಳ ಪ್ರಕಾರ, `ದಬಂಗ್‌-3′ ಚಿತ್ರಕ್ಕೂ ಸೋನಾಕ್ಷಿ ಹೆಸರು ಫೈನಲ್ ಆಗಿದೆಯಂತೆ.

ನಾಯಕಿಯರನ್ನೂ ಟೈಂಬಾಂಬ್‌ ತರಹ ನೋಡಲಾಗುತ್ತದೆ

ಮಲ್ಲಿಕಾ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಚಡಪಡಿಸುತ್ತಿರುವ ಅಕ್ಷಯ್‌ ಕುಮಾರ್‌, ವಿನೋದ್‌ ಕಾರಣವಿಲ್ಲದೆ ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ಹುಡುಗಾಟಿಕೆಯ ಮಾತಿಗೆ ಹೆಸರಾದ ಅಕ್ಷಯ್‌ ಏನಾದರೊಂದು ಎಡವಟ್ಟಿಗೆ ಸಿಕ್ಕಿಕೊಳ್ಳುತ್ತಾರೆ. ಅವರ ಇಂಥಹುದೇ ಮಾತುಗಳನ್ನು ಜನ ತಪ್ಪಾಗಿ ಅರ್ಥೈಸಿದ್ದರು. ಅಂದಹಾಗೆ ಅವರು ಬಾಲಿವುಡ್‌ ನಾಯಕಿಯರ ಕುರಿತಾಗಿ ಹೇಳಿದ್ದು ಎಂದರೆ, ನಮ್ಮಲ್ಲಿ ಎಲ್ಲಾ ಕಡೆ ಹೀರೋಯಿನ್ಸನ್ನು ಟೈಂಬಾಂಬ್‌ ತರಹ ನೋಡಲಾಗುತ್ತದೆ ಎಂದರು. ಅವರನ್ನು ಟೈಂಬಾಂಬ್‌ ಎಂಬುದರ ಅಭಿಪ್ರಾಯ, ನಾಯಕಿಯ ವಯಸ್ಸಿನ ಕುರಿತಾಗಿತ್ತು. ತುಸು ವಯಸ್ಸಾದವರು ಯಾವುದೋ ಒಂದು ಪಾತ್ರ ಸಿಗಲಿ ಎಂದು ಬಹಳ ಹಂಬಲಿಸುತ್ತಾರೆ. ಆದರೆ ನಾಯಕರ ಜೊತೆ ಹೀಗಾಗುವುದಿಲ್ಲ. ಬಾಲಿವುಡ್ ಗೆ ಇಂಥ ಎರಡೆರಡು ಬಗೆಯ ಮಾನದಂಡ ಸಲ್ಲದು ಎಂದರು.

ಶ್ರೀದೇವಿ ಬೋನಿ ಕಪೂರ್‌ಗೆ ರಾಖಿ ಕಟ್ಟಿದ್ದರೆ

54 ದಾಟಿದ ಶ್ರೀದೇವಿ ಬೋನಿ ಕಪೂರ್‌ರ ಮದುವೆ ಆ ಕಾಲದ ಆಶ್ಚರ್ಯಜನಕ ಘಟನೆಗಳಲ್ಲಿ  ಒಂದು ಎಂದರೆ ನಂಬಲೇಬೇಕು. ಏಕೆಂದರೆ ಹವಾಹವಾಯಿ ಎನ್ನುತ್ತಿದ್ದ ಈ ಸುಂದರಿಯ ಗ್ಲಾಮರ್‌ ತಾರಕಕ್ಕೆ ಏರಿದ್ದಾಗ, ಈಕೆ ಮಿಥುನ್‌ ಚಕ್ರವರ್ತಿಯ ಪ್ರೇಮದಲ್ಲಿ ಹುಚ್ಚಿಯಾಗಿದ್ದಳು. ಆಗ ಮೀಡಿಯಾ ಸಹಿತ ಎಲ್ಲರೂ ಇವರಿಬ್ಬರ ಮದುವೆ ಆಗಿಯೇ ಆಗುತ್ತದೆ ಎಂದು ಕಾಯುತ್ತಿದ್ದರು. ಶ್ರೀದೇವಿ ಸಹ ಮಿಥುನ್‌ ತನ್ನ ಮೊದಲ ಪತ್ನಿಯನ್ನು ತ್ಯಜಿಸಿ ಬಂದು ತನ್ನನ್ನೇ ಮದುವೆಯಾಗಲಿ ಎಂದು ಬಹಳ ಬಯಸುತ್ತಿದ್ದಳು. `ಮಿಸ್ಟರ್‌ ಇಂಡಿಯಾ’ ಚಿತ್ರದ ಶೂಟಿಂಗ್‌ ಶುರುವಾದಾಗಿನಿಂದ ಅದರ ನಿರ್ದೇಶಕ ಬೋನಿ ಕಪೂರ್‌ ನಾಯಕಿ ಶ್ರೀದೇವಿಯತ್ತ ವಾಲತೊಡಗಿದರು. ಇದರಿಂದ ಮಿಥುನ್‌ಗೆ ಸಂದೇಹ ಮೂಡಿತು. ಆತನ ಸಂದೇಹ ನಿವಾರಿಸಲು ಶ್ರೀದೇವಿ ಬೋನಿ ಕಪೂರ್‌ರನ್ನು ಆತನ ಎದುರು ನಿಲ್ಲಿಸಿ ತಾನೇ ರಾಖಿ ಕಟ್ಟಿದಳು! ಶ್ರೀದೇವಿಯ ತಾಯಿ ಚೆನ್ನೈನಲ್ಲಿ ತುಂಬಾ ಕಾಯಿಲೆಗೆ ಈಡಾದಾಗ, ಶ್ರೀದೇವಿ ಮುಂಬೈ-ಮದ್ರಾಸ್‌ ಎಂದು ಅಲೆದಾಡಬೇಕಾಯಿತು. ಆಗ ಬೋನಿ ಅವರಿಗೆಲ್ಲ ತುಂಬಾ ಸಹಾಯ ಮಾಡಿ ತಮ್ಮ ಪ್ರೀತಿ ಗಟ್ಟಿ ಮಾಡಿಕೊಂಡರು.

ವಿರೋಧಿಸುವವರನ್ನು ಬಗ್ಗುಬಡಿಯುವೆ

ಸಂಜಯ್‌ ಲೀಲಾ ಬನ್ಸಾಲಿಯವರ ಐತಿಹಾಸಿಕ ಚಿತ್ರ `ಪದ್ಮಾವತ್’ ಇಷ್ಟೆಲ್ಲ ವಿರೋಧಗಳ ನಡುವೆಯೂ ರಿಲೀಸಿಂಗ್‌ ಡೇಟ್‌ ಹುಡುಕಿದೆ. ದೀಪಿಕಾ ಒಬ್ಬಳನ್ನೇ ರಾಣಿ ಪದ್ಮಾವತಿಯಾಗಿ ತೋರಿಸಲು ರೇಷ್ಮೆ ಒಡವೆಗಳಿಗಾಗಿ ಕೋಟ್ಯಂತರ ರೂ.ಸುರಿಯಲಾಗಿದೆ. ದೀಪಿಕಾಳ ಜ್ಯೂವೆಲರಿಯನ್ನು ದೆಹಲಿಯ ಡಿಸೈನರ್‌ ರಿಂಕಿ ಮತ್ತು ಹರ್‌ಪ್ರೀತ್‌ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ 400 ಕಿಲೋ ತೂಕದ ಚಿನ್ನವನ್ನು 200 ಕುಶಲಕರ್ಮಿಗಳಿಂದ 600 ದಿನಗಳವರೆಗೂ ತಯಾರಿ ಮಾಡಿಸಲಾಗಿದೆ. ಇದೇ ತರಹ ರಾಣಿಯಾಗಿ ಮಾರ್ಪಡಲು ದೀಪಿಕಾ 30 ಕಿಲೋ ಲಹಂಗಾವನ್ನು 100 ದಿನಗಳವರೆಗೆ 10-12 ತಾಸು ಸತತ ಧರಿಸಿರಬೇಕಾಗಿತ್ತು. ಆಗ ಮಾತ್ರ ಆಕೆ ಮಹಾರಾಣಿ ಪದ್ಮಾವತಿ ಎನಿಸಿಕೊಳ್ಳಲು ಸಾಧ್ಯವಾಯಿತು.

ಚಿತ್ರದುದ್ದಕ್ಕೂ ದೀಪಿಕಾ ತುಂಬ ಕಷ್ಟಪಡಬೇಕಾಯಿತು. ಹಾಗಾಗಿಯೇ ಆಕೆ ಕೆಲವು ದಿನಗಳ ಹಿಂದೆ ಬಲು ಆತ್ಮವಿಶ್ವಾಸದಿಂದ ಯಾರು ಈ ಚಿತ್ರವನ್ನು ವಿರೋಧಿಸುವರೋ ತಾನು ಅವರನ್ನು ನೇರವಾಗಿ ಎದುರಿಸುವೆ ಎಂದು ಹೇಳಿದ್ದಳು. ಈ ವಿರೋಧ ಎಲ್ಲಿಗೆ ಮುಟ್ಟಿತೆಂದರೆ, ಕೇಂದ್ರದ ಮುಖ್ಯಮಂತ್ರಿಯೊಬ್ಬರು ಖುದ್ದಾಗಿ ಸ್ಮೃತಿ ಇರಾನಿಗೆ ಪತ್ರ ಬರೆದು ಚಿತ್ರ ಬಿಡುಗಡೆ ಆಗಬಾರದೆಂದು ತಡೆದಿದ್ದರು.

ಅಲಿಗೆ ಹತ್ತಿದ ಮಿರ್ಜಾಪುರಿ ಬಣ್ಣ

`ಫಕರೆ’ ಚಿತ್ರದಲ್ಲಿ ಜಾಫರ್‌ನ ಪಾತ್ರ ವಹಿಸಿದ ಅಲಿ ಫೈಜಲ್ ಈಗ ಥೇಟ್‌ ಮಿರ್ಜಾಪುರಿ ಸ್ಟೈಲ್‌ನ ಬಣ್ಣದ ವೇಷದಲ್ಲಿ ಡಾನ್‌ ಆಗಿ ಕಾಣಿಸಲಿದ್ದಾನೆ. ಈತ ತನ್ನ ಮುಂದಿನ `ಮಿರ್ಜಾಪುರ್‌’ ಚಿತ್ರದಲ್ಲಿ ನೆಗೆಟಿವ್ ಪಾತ್ರ ನಿಭಾಯಿಸಲಿದ್ದಾನೆ. ಈ ಚಿತ್ರಕ್ಕಾಗಿ ಈತ ಹಾಲಿವುಡ್‌ ನಟ ಬ್ರಾಡ್‌ ಪಿಟ್‌ ತರಹ ಗೆಟಪ್‌ ಬದಲಾಯಿಸಿದ್ದಾನೆ. ಏಕೆಂದರೆ ಈತನ ಪಾತ್ರ ಬ್ರಾಡ್‌ ಪಿಟ್‌ನ `ಫೈಟ್‌ ಕ್ಲಬ್‌’ ಚಿತ್ರದ ತರಹವಂತೆ. `ದಿ ಅದರ್‌ ಎಂಡ್‌ ಆಫ್‌ ಲೈನ್‌’ ಆಂಗ್ಲ ಚಿತ್ರದಿಂದ ಡೆಬ್ಯು ಪಡೆದ ಅಲಿ, `ವಿಕ್ಟೋರಿಯಾ  ಅಬ್ದುಲ್’ ಚಿತ್ರದಲ್ಲಿನ ನಟನೆಗಾಗಿಯೂ ಸಾಕಷ್ಟು ಪ್ರಶಂಸೆಗಳು ಸಿಕ್ಕಿದ್ದವು.

ಸುಶ್ಮಿತಾಳ ಫಿಟ್‌ನೆಸ್‌ ಮಂತ್ರ

42ರ ವಸಂತ ದಾಟಿದ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌, ಇಂದಿಗೂ ಸಹ 21 ವರ್ಷಗಳ ಹಿಂದೆ ತನ್ನ ಮೊದಲ `ದಸ್ತಕ್‌’ ಚಿತ್ರದಲ್ಲಿ ಕಾಣುತ್ತಿದ್ದಂತೆಯೇ ಸ್ಲಿಮ್ ಟ್ರಿಮ್ ಆಗಿಯೇ ಕಾಣಿಸುತ್ತಿದ್ದಾಳೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಈ ಮಾಜಿ ಸುಂದರಿ, ವ್ಯಾಯಾಮ ಮಾಡುವಾಗಿನ ತನ್ನ ಗ್ಲಾಮರಸ್‌ ಆ್ಯಬ್ಸ್ ನ ಫೋಟೋವನ್ನು ಫೇಸ್‌ಬುಕ್‌ಗೆ ಹಾಕಿದ್ದಳು. ನಂಬಲರ್ಹ ಮೂಲಗಳ ಪ್ರಕಾರ ಈಕೆಗೆ ಸುಮಾರು ದಿನಗಳಿಂದ ಸ್ಲಿಪ್‌ ಡಿಸ್ಕ್ ಸಮಸ್ಯೆ ಇದ್ದು, ಆ ಕಾರಣದಿಂದ ಜಿಮ್ ಗೆ ಹೋಗುವುದನ್ನೇ ಬಿಟ್ಟಿದ್ದಳು. ಹೀಗಾಗಿ ಮನೆಯಲ್ಲೇ ವ್ಯಾಯಾಮ, ಏರೋಬಿಕ್ಸ್ ಮಾಡಿ ತನ್ನನ್ನು ಪರ್ಫೆಕ್ಟ್ ಫಿಟ್‌ ಆಗಿರಿಸಿಕೊಳ್ಳುತ್ತಾಳೆ.

ತೆಗೆದು ಕೆನ್ನೆಗೆ ಬಾರಿಸಿದರೆ……

ರಾಜಕುಮಾರ್‌ ರಾಯ್‌ರ ಹೊಸ `ಮೇರೆ ಶಾದಿ ಮೇ ಝರೂರ್‌ ಆನಾ’ ಚಿತ್ರದ ನಾಯಕಿ ಕೃತಿ ಖರ್ಬಂದಾ, ಯಾರ ಮೇಲೆ ಇಷ್ಟು ಕೋಪಗೊಂಡಿದ್ದಾಳೋ ಏನೋ…. ಅದು ಬೇರಾರೂ ಅಲ್ಲ, ಕಿರುತೆರೆಯ ಸೊಸೆ ಹೀನಾ ಖಾನ್‌. ಆಕೆ ಪ್ರಕಾರ, ದಕ್ಷಿಣದ ಚಿತ್ರ ನಿರ್ದೇಶಕರು ನಾಯಕಿಯರನ್ನು ಮೊದಲು ದಪ್ಪಗಾಗಿ, ಆಮೇಲೆ ಚಾನ್ಸ್ ಕೊಡ್ತೀನಿ ಅಂತಾರಂತೆ. ಛೇ…ಛೇ…! ಎಲ್ಲಾದರೂ ಉಂಟೆ? ನಾನಂತೂ ಖಂಡಿತಾ ಡುಮ್ಮಿ ಆಗಲ್ಲಪ್ಪ, ಅದಕ್ಕೆ ನಾನು ದಕ್ಷಿಣದ ಚಿತ್ರಗಳನ್ನು ಸಾರಾಸಗಟಾಗಿ ನಿರಾಕರಿಸಿಬಿಟ್ಟೆ ಅಂತಾಳೆ ಈ ಅಮ್ಮಣ್ಣಿ.

ಇದನ್ನು ಕೇಳಿಸಿಕೊಂಡ ದಕ್ಷಿಣ ಮೂಲದ ಕೃತಿ, ಹನ್ಸಿಕಾ, ಖುಷ್ಬೂ ಎಲ್ಲರೂ ಸೇರಿಕೊಂಡು ಇವಳ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.

ಉತ್ತರಕ್ಕೆ ಹೋಲಿಸಿದಾಗ ದಕ್ಷಿಣದ ನಟಿಯರು ತುಸು ದಪ್ಪ ಅಲ್ಲವೇ ಎಂದು ಕೃತಿಯನ್ನು ವಿಚಾರಿಸಿದಾಗ, “ದಕ್ಷಿಣದ ನಾಯಕಿಯರು ತುಸು ಬಬ್ಲಿ ಎಂಬುದೇನೋ ನಿಜ, ಇದರರ್ಥ ಅವರು ಮಹಾ ಡುಮ್ಮಿಯರು ಅಂತ ಖಂಡಿತಾ ಅಲ್ಲ! ಹೀನಾಳನ್ನು ಕಂಡರೆ ನನಗೆ ಗೌರವವಿದೆ, ನಿಜ. ಆದರೆ ಆಕೆಯ ಈ ಸ್ಟೇಟ್‌ಮೆಂಟ್‌ ಕೇಳಿದಾಗ ತೆಗೆದುಕೊಂಡು ಕೆನ್ನೆಗೆ ಬಾರಿಸೋಣ ಅನ್ಸುತ್ತೆ….” ಎಂದು ಬುಸುಗುಡುತ್ತಾಳೆ ಕೃತಿ.

ರೊಮಾನ್ಸ್ ಗಾಗಿ ರಸ್ತೆಗಿಳಿದ ಪೂಜಾ

ಮಹೇಶ್‌ ಭಟ್‌ರ ನಿರ್ದೇಶನದಲ್ಲಿ 1991ರಲ್ಲಿ  ಬಂದ `ಸಡಕ್‌’ ಚಿತ್ರದಲ್ಲಿ ಅವರ ಹಿರಿಯ ಮಗಳು ಪೂಜಾ ಭಟ್‌ ಸಂಜಯ್‌ ದತ್ತ್ ಜೊತೆ ರಸ್ತೆಗಿಳಿದು ನರ್ತಿಸಿದ್ದಳು. ಇದೀಗ ಅದೇ ಯಶಸ್ವೀ ಚಿತ್ರದ ಸೀಕ್ವೆಲ್‌ `ಸಡಕ್‌-2′ ಮೂಡಿಬರಲಿದೆ. ಈ ಚಿತ್ರದಲ್ಲಿ ಪೂಜಾಳ ಪಾತ್ರಕ್ಕೆ ಇವರ ಕಿರಿಮಗಳು ಆಲಿಯಾ ಭಟ್‌ ಮತ್ತು ಸಂಜಯ್‌ ದತ್ತ್ ಪಾತ್ರದಲ್ಲಿ ಸಿದ್ದಾರ್ಥ್‌ ಮಲ್ಹೋತ್ರಾ ನಟಿಸಲಿದ್ದಾರೆ.

ಈ ಚಿತ್ರದ ಕುರಿತಾಗಿ ಪೂಜಾ, “ಈ ಚಿತ್ರದಲ್ಲೂ ನಾನೂ ಸಂಜೂ ಇರ್ತೀವಿ. ಪಾರ್ಟ್‌ 1 ಎಲ್ಲಿ ಮುಗಿಯಿತೋ ಅಲ್ಲಿಂದಲೇ ಪಾರ್ಟ್‌2  ಕಥೆ ಶುರುವಾಗುತ್ತದೆ. ನನ್ನ ತಂಗಿಯಾಗಿ ಆಲಿಯಾ ಮುಂದುವರಿಯುತ್ತಾಳೆ,” ಎನ್ನುತ್ತಾಳೆ.

 

ಹುಡುಗನ ಪಾತ್ರವಾದ್ದರಿಂದ ಒಪ್ಪಿಕೊಂಡೆ

5 ಅಡಿ 11 ಅಂಗುಲ ಎತ್ತರದ ಜೊತೆಗೆ ಉತ್ತಮ ಅಭಿನಯದ ಛಾತಿಯನ್ನೂ ಹೊಂದಿರುವ ನೆಟ್‌ಬಾಲ್‌, ಬಾಸ್ಕೆಟ್‌ಬಾಲ್‌ಗಳ ಕ್ರೀಡಾಪಟು ಪ್ರಾಚೀ ತೆಹಾನ್‌ ಈಗಾಗಲೇ ಕಿರುತೆರೆಯಲ್ಲಿ ಸೈ ಎನಿಸಿದ್ದಾಳೆ. `ದೀಯಾ ಔರ್‌ ಬಾತಿ’ಯಿಂದ ಕೆರಿಯರ್‌ ಆರಂಭಿಸಿದ ಈಕೆ ಇತ್ತೀಚೆಗೆ ಸ್ಟಾರ್‌ಪ್ಲಸ್‌ನಲ್ಲಿ `ಇಕ್ಯಾವನ್‌’ ಧಾರಾವಾಹಿಯಲ್ಲಿ ಗುಜರಾತಿ ಹುಡುಗಿಯ ಪಾತ್ರ ನಿವರ್ಹಿಸುತ್ತಿದ್ದಾಳೆ.

ಇದರ ಕುರಿತಾಗಿ ಪ್ರಾಚೀ, “ಗುಜರಾತ್‌ನ ಮಣ್ಣಿನ ಮೂಲ ಕಥಾಹಂದರ ಹೊಂದಿರುವ ಈ ಧಾರಾವಾಹಿಯಲ್ಲಿ, ಹುಡುಗಾಟದ ಪೋಕರಿ ಸ್ವಭಾವದ ಹುಡುಗಿಯಾಗಿ ಇಲ್ಲಿ ನಟಿಸಿದ್ದೇನೆ. ಅವಳಿಗೆ ತಾಯಿ ಇಲ್ಲ. 4 ಮಂದಿ ಗಂಡಸರ ಪಾಲನೆಯಲ್ಲಿ ಬೆಳೆದವಳು. ಈ ಪಾತ್ರದ ಬಗ್ಗೆ ಹೇಳಿದಾಗ ತಕ್ಷಣ ಒಪ್ಪಿದೆ. ಅಸಲಿಗೆ ನಾನು ಬೆಳೆದಿರುವುದೂ ಹಾಗೇ!” ಎನ್ನುತ್ತಾಳೆ.

ಮೂರು ಹುಚ್ಚು ಪೊಲೀಸರ ಕಥೆ

ಸೋನಿ ಸಬ್‌ ಟಿ.ವಿಯಲ್ಲಿ ಇದೀಗ ಮನರಂಜನೆಗಾಗಿ ಹೊಸ ಧಾರಾವಾಹಿಯಲ್ಲಿ ಮೂರು ಎಸ್‌.ಐ.ಗಳು ಬರುತ್ತಿದ್ದಾರೆ. ತಮ್ಮ ಚಿತ್ರವಿಚಿತ್ರದ ಪ್ರಸಂಗಗಳಿಂದ ಎಲ್ಲರನ್ನೂ ನಗಿಸುತ್ತಾರೆ. `ಪಾರ್ಟ್‌ನರ್‌ ಟ್ರಬಲ್ ಹೋಗಯೀ ಡಬಲ್’ ಹೆಸರಿನ ಇದರಲ್ಲಿ ಜಾನೀ ಲೀವರ್‌, ಕೀಕೂ ಶಾರದಾ, ವಿಪುಲ್‌ ರಾಯ್‌ ಪ್ರಧಾನ ಪಾತ್ರಧಾರಿಗಳು. ಇವರುಗಳ ಮಧ್ಯೆ ನಡೆಯುವ ತಿಕ್ಕಾಟ ಹಾಸ್ಯದ ಹೂರಣ ಹೊಂದಿದೆ. ಜಾನಿ ಲೀವರ್‌ ಮೊದಲ ಬಾರಿ ಸಬ್‌ನಲ್ಲಿ ಕಾಣಿಸಿದ್ದಾರೆ. ಕೀಕೂ ಈಗಾಗಲೇ `ಕಪಿಲ್‌ ಶರ್ಮ ಕಾಮಿಡಿ ಶೋ’ನಲ್ಲಿದ್ದರು.

ಅಣ್ಣನಂತೆ ಕಾಣಿಸಲು ಯತ್ನಿಸಿರುವೆ

ಅನಿಲ್ ಕಪೂರ್‌ ಶ್ರೀದೇವಿ ಜೊತೆ ನಟಿಸಿದ್ದ `ಲಮ್ಹೆ’ ಚಿತ್ರವನ್ನು ಜನ ಇನ್ನೂ ಮರೆತಿಲ್ಲ. ಅವರ ತಮ್ಮ ಸಂಜಯ್‌ ಕಪೂರ್‌ `ಲಮ್ಹೆ’ ಚಿತ್ರದಂತೆಯೇ ಕಥಾಹಂದರ ಹೊಂದಿರುವ `ದಿಲ್‌ ಸಂಭಾಲ್ ಜಾ ಝರಾ’ ಧಾರಾವಾಹಿಯಲ್ಲಿ ಸೋನಿಯಲ್ಲಿ ಕಾಣಿಸಲಿದ್ದಾರೆ. ಇದರಲ್ಲಿ ಈತ ಅನಂತ್‌ ಪಾತ್ರ ನಿರ್ವಹಿಸಿದ್ದಾರೆ. ಯಶಸ್ವಿ ಉದ್ಯಮಿಯಾದ ಈತ ಪ್ರಾಣ ಸ್ನೇಹಿತನೊಂದಿಗೆ ಉತ್ತಮ ಒಡನಾಟ ಹೊಂದಿದ್ದರೆ, ಆತನ ಮಗಳು ಈ ಪ್ರೌಢ ಉದ್ಯಮಿಯನ್ನೇ ಪ್ರೇಮಿಸಿ ವಿವಾಹ ಆಗಬಯಸುತ್ತಾಳೆ. ತ್ರಿವೇಣಿಯವರ `ಹೃದಯಗೀತಾ’ ಕಾದಂಬರಿ ನೆನಪಾಯಿತೇ? ಅಲ್ಲೂ ಹೀಗೆ ನಡೆಯುತ್ತದೆ. ಆ ಕಾಲಕ್ಕೆ ಅದು ಕ್ರಾಂತಿಕಾರಿ ಕಾಂದಬರಿ ಎನಿಸಿತ್ತು. ಈ ಧಾರಾವಾಹಿಯಿಂದ ಕಿರುತೆರೆಗೆ ಎಂಟ್ರಿ ಪಡೆದಿರುವ ಸಂಜಯ್‌, ಥೇಟ್‌ ಅನಿಲ್‌‌ರನ್ನೇ ಹೋಲುತ್ತಾರೆ.

ಪ್ರಸ್ತದ ಮಧ್ಯೆ ಬೆಂಕಿ

ಟಿ.ವಿಯ `ಅಗ್ನಿಫೇರಾ’ ಧಾರಾವಾಹಿಯಲ್ಲಿ ಪ್ರಸ್ತದ ಶೂಟಿಂಗ್‌ ನಡೆಸುತ್ತಿದ್ದರೆ ಸಾಕ್ಷಾತ್‌ ಅಗ್ನಿ ಕಾಣಿಸಿಕೊಳ್ಳುವುದೇ? ನಟಿ ಯುಕ್ತಿ ಪ್ರಸ್ತದ ದೃಶ್ಯದಲ್ಲಿ ಭಯಪಡುತ್ತಾ ನಟಿಸುತ್ತಿದ್ದಾಗ ಅದೂ ಅವಳ ಸೀರೆಗೇ ಧುತ್ತೆಂದು ಬೆಂಕಿ ಬೀಳಬೇಕೇ? ಪಲ್ಲಂಗದ ಬಳಿ ಅತ್ಯಧಿಕ ಕ್ಯಾಂಡಲ್ಸ್ ಇರಿಸಿದ್ದೇ ಈ ಅವಾಂತರಕ್ಕೆ ಕಾರಣವಂತೆ. ಅಂತೂ ಯುಕ್ತಿ ಬಚಾವ್‌!

ಒಂದು ಮಿನಿ ಸಂದರ್ಶನ ನಾರಾಯಣಿ ಶಾಸ್ತ್ರೀ (ನಟಿ)

17 ವರ್ಷಗಳ ಹಿಂದೆಯೇ ದೂ.ದ.ದಿಂದ ಆ್ಯಕ್ಟಿಂಗ್‌ ಕೆರಿಯರ್‌ ಶುರು ಹಚ್ಚಿಕೊಂಡ ನಾರಾಯಣಿ ಶಾಸ್ತ್ರೀ ಕಲಿತದ್ದು ಕಾನೂನು. ಹಲವು  ಟಿ.ವಿ ಶೋ, ಧಾರಾವಾಹಿ ಚಿತ್ರಗಳಲ್ಲಿ ನಟಿಸಿರುವ ಈಕೆ, ಹೆಚ್ಚಾಗಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿದ್ದಾರೆ. ಸ್ಟಾರ್‌ ಪ್ಲಸ್‌ನಲ್ಲಿ ಸದ್ಯ `ರಿಶ್ತೋಂಕಾ ಚಕ್ರವ್ಯೂಹ್‌’ನಲ್ಲಿ ಬಿಝಿಯಾದ ಈಕೆಯನ್ನು ಮಾತನಾಡಿಸೋಣವೇ?

ಕಾನೂನು ವಿದ್ಯಾರ್ಥಿನಿ ಆ್ಯಕ್ಟಿಂಗ್‌ಗೆ ಬಂದದ್ದು ಹೇಗೆ?

ನಾನು ಪುಣೆಯಲ್ಲಿ ಲಾ ಓದುತ್ತಿದ್ದಾಗ ನನ್ನ ಗೆಳೆಯ ಮನೋಜ್‌ (ಭಾಭೀಜಿ ಘರ್‌ ಪರ್‌ ಹೈ ಖ್ಯಾತಿಯ) ಫೋನ್‌ ಮಾಡಿ ಹೊಸ ಧಾರಾವಾಹಿಯಲ್ಲಿ ನಟಿಸುವೆಯಾ ಎಂದಾಗ, ಈಗಾಗಲೇ ಕಾಲೇಜಿನ ನಾಟಕಗಳ ವೇದಿಕೆ ಏರಿದ್ದ ನಾನು ತಕ್ಷಣ ಒಪ್ಪಿದೆ.

17 ವರ್ಷಗಳಲ್ಲಿ ಕಿರುತೆರೆ ಬದಲಾಗಿದೆ ಅಂತೀರಾ?

2000ಕ್ಕೂ ಮೊದಲು ನಾನು ಧಾರಾವಾಹಿಗಳಲ್ಲಿ ನಟನೆಗೆ ತೊಡಗಿದಾಗ, ದೂ.ದ.ದ `ಬುನಿಯಾದ್‌, ಹಂಲೋಗ್‌’ನಂಥ ಕ್ಲಾಸಿಕ್‌ ನಟರು ನಮಗೆ ಮಾರ್ಗದರ್ಶನಕ್ಕಿದ್ದರು. ಆದರೆ ಕೆಲವರು ಖಾಸಗಿ ವಾಹಿನಿಗಳ ಧಾರಾವಾಹಿಗಳು ಕಿರುತೆರೆಯ ಪರಂಪರೆಗೆ ಕಳಂಕ ತರಲಿವೆ, ಎಲ್ಲ ಹಾಳಾಗುತ್ತದೆ ಎನ್ನುತ್ತಿದ್ದರು. ವ್ಯತ್ಯಾಸ ಈಗ ನಿಮ್ಮ ಕಣ್ಣ ಮುಂದಿದೆ.

ಈಗ ಧಾರಾವಾಹಿಗಳ ಕಥೆ ಬದಲಾಗಿದೆ ಅಂತೀರಾ?

ಇಂದಿನ ಕಥೆಗಳಲ್ಲಿ ಫ್ಯಾಂಟಸಿ, ಕ್ರೈಂ, ಸಸ್ಪೆನ್ಸ್, ಥ್ರಿಲ್‌, ರೊಮಾನ್ಸ್….ಇವೆಲ್ಲಾ ಢಾಳಾಗಿವೆ. ಯಾರು ಯಾವಾಗ ನಾಗಿಣಿ, ದೆವ್ವ ಆಗುತ್ತಾರೋ ಹೇಳಲಾಗದು.

ವರ್ಷಗಟ್ಟಲೆ ನಡೆಯುವ ಇಂಥ ಧಾರಾವಾಹಿಗಳು ಸರಿ ಅಂತೀರಾ?

ನನಗನಿಸುತ್ತೆ…. ದಿನಾ ದಿನಾ ನೋಡುತ್ತಾ ಜನರಿಗೆ ಪಾತ್ರಧಾರಿಗಳು ಅಂದ್ರೆ ತುಂಬಾ ಪ್ರೀತಿ ಬೆಳೆಯುತ್ತೆ. ಹೀಗಾಗಿಯೇ ನಿರ್ದೇಶಕರು ಇವನ್ನು ವರ್ಷಗಟ್ಟಲೆ ಎಳೆಯುತ್ತಾರೆ. ವೀಕ್ಷಕರು ಇವನ್ನು ಮೆಚ್ಚದಿದ್ದರೆ ಬೇಗನೆ ಇದರ TRP ಬಿದ್ದು ಹೋಗುತ್ತದೆ, ಆಗ ಧಾರಾವಾಹಿ ಮೊಟಕಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ