ಎಲ್ಲೆಲ್ಲೂ ಚುರಿ ಚುರಿ ಎನ್ನುವ ಬಿಸಿಲು, ಧೂಳು ಮಣ್ಣು, ಧಗೆ, ಸೆಕೆ ಎಲ್ಲಾ ಸೇರಿಕೊಂಡು ಬೇಸಿಗೆ ಸಾಕಪ್ಪಾ ಸಾಕು ಎನಿಸಿಬಿಡುತ್ತದೆ. ನಮ್ಮ ಚರ್ಮ, ಕೂದಲು ತನ್ನ ನೈಸರ್ಗಿಕ ಕಾಂತಿ ಕಳೆದುಕೊಳ್ಳುತ್ತದೆ. ಆದರೆ ಕೆಲವು ವಿಷಯಗಳ ಕುರಿತು ಎಚ್ಚರಿಕೆ ವಹಿಸಿದರೆ, ನಾವು ಈ ಬೇಸಿಗೆಯಲ್ಲೂ ಕೂಲ್ & ಫ್ರೆಶ್‌ ಆಗಿರಬಹುದು.

ಕ್ಷಾರಯುಕ್ತ ನೀರಿನ ಸ್ನಾನ

ಬೇಸಿಗೆಯಲ್ಲಿ ದಿನಾ ಸ್ನಾನ ಮಾಡುವುದರಿಂದ ದೇಹದ ದುರ್ವಾಸನೆ, ಸೋಂಕು, ರೋಗಾಣುಗಳಿಂದ ನಮಗೆ ಮುಕ್ತಿ ಸಿಗುತ್ತದೆ. ಸ್ನಾನ ನಮ್ಮ ರೋಗನಿರೋಧಕ ಶಕ್ತಿ ಗಳಿಸುವ ಮೊದಲ ಕ್ರಮವಾಗಿದೆ.

ಈ ಸೀಸನ್‌ನಲ್ಲಿ ನಮ್ಮ ದೇಹದಿಂದ ಧಾರಾಳ ಬೆವರು ಹರಿಯುತ್ತದೆ, ಇದರಿಂದ ದೇಹದಲ್ಲಿನ ಎಷ್ಟೋ ಕಶ್ಮಲಗಳು ದೂರವಾಗುತ್ತವೆ. ಸ್ನಾನದ ಕಾರಣ ಈ ಕಶ್ಮಲಗಳು ತೊಳೆದು ಹೋಗಿ ದೇಹ ಶುದ್ಧಗೊಳ್ಳುತ್ತದೆ. ಜೊತೆಗೆ  ಕೀಟಾಣು, ವೈರಸ್‌, ಬ್ಯಾಕ್ಟೀರಿಯಾಗಳೂ ದೂರವಾಗುತ್ತವೆ. ಒಳ್ಳೆಯ ಸ್ನಾನ ಉತ್ತಮ ನಿದ್ದೆಗೆ ಮೂಲ. ನಿಮ್ಮ ಸ್ನಾನದ ಬಕೆಟ್‌ ನೀರಿಗೆ 4 ಹರಳು ಕಲ್ಲುಪ್ಪು ಹಾಕಿ ದೊಡ್ಡ ಕೋಲಿನಿಂದ ತಿರುಗಿಸಿ, ಚೆನ್ನಾಗಿ ವಿಲೀನಗೊಳ್ಳುವಂತೆ ಮಾಡಿ ಅದರಿಂದ ಸ್ನಾನ ಮಾಡಿ. ಇದರಿಂದ ನಿಮ್ಮ ವೃದ್ಧಾಪ್ಯ ದೂರವಾಗಿ ಚಿರಯೌವನ ಉಳಿಯುತ್ತದೆ. ಇದರಿಂದ ದೇಹದ ಚರ್ಮ ಮೃದು, ಕಾಂತಿಯುತವಾಗುತ್ತದೆ. ನಿಮಗೆ ಹೆಚ್ಚು ತಾಜಾತನದ ಅನುಭವವಾಗುತ್ತದೆ.

ಮಾಯಿಶ್ಚರೈಸರ್‌ ಸನ್‌ಸ್ಕ್ರೀನ್‌

ಬೇಸಿಗೆ ಕಾಲದಲ್ಲಿ ಚರ್ಮ ನಿರ್ಜೀವವಾಗಿ ಒಣಗಿ ಹೋದಂತೆ ಕಾಣಿಸುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳು ಚರ್ಮವನ್ನು ಹಾಳುಮಾಡುತ್ತವೆ. ಹೀಗಿರುವಾಗ ನೀವು ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್‌ ಕ್ರೀಂ ಬಳಸಬೇಕು. ಇದರಿಂದ ಚರ್ಮದ ಆರ್ದ್ರತೆ ಮತ್ತು ಹೊಳಪು ಉಳಿದುಕೊಳ್ಳುತ್ತದೆ. ನೈಸರ್ಗಿಕ ವಿಧಾನಗಳಿಂದಲೂ ಚರ್ಮವನ್ನು ಮಾಯಿಶ್ಚರೈಸ್‌ಗೊಳಿಸಬಹುದು.

ಬೇಸಿಗೆಯಲ್ಲಿ ಸೂರ್ಯನ UV ಕಿರಣಗಳ ಸಂಪರ್ಕದಿಂದ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಚರ್ಮ ತೀವ್ರವಾಗಿ ಉರಿಯಲೂಬಹುದು. ಹೀಗಾಗಿ ಅತ್ಯಧಿಕ SPF ಸನ್‌ಸ್ಕ್ರೀನ್‌ ಬಳಸಲೇಬೇಕು. ಇದು ಸೂರ್ಯನ UV ಕಿರಣಗಳಿಂದ ಚರ್ಮವನ್ನು ರಕ್ಷಿಸಲು ರಕ್ಷಾಕವಚವಾಗಿ ನಿಲ್ಲುತ್ತದೆ. ಏನಿಲ್ಲವೆಂದರೂ ಕನಿಷ್ಠ 30 SPFನ ಸನ್‌ಸ್ಕ್ರೀನ್‌ ಬಳಸಲೇಬೇಕು. ಮನೆಯಿಂದ ಹೊರಗೆ ಹೊರಡುವ 15-20 ನಿಮಿಷ ಮೊದಲೇ ಇದನ್ನು ಹಚ್ಚಿಕೊಳ್ಳಿ.

ಚರ್ಮದ ಸಂರಕ್ಷಣೆ

ಈ ಸೀಸನ್‌ನಲ್ಲಿ ಚರ್ಮದ ರಕ್ಷಣೆ ಮಾಡದಿದ್ದರೆ ಸನ್‌ಬರ್ನ್‌, ಅಂಟಂಟು ಚರ್ಮ, ಸ್ಕಿನ್‌ ಅಲರ್ಜಿ ಇತ್ಯಾದಿ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಆದ್ದರಿಂದ ಈ ಉರಿಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಹೀಗೆ ಕಾಪಾಡಿಕೊಳ್ಳಿ :

ಸಾಧ್ಯವಾದಷ್ಟೂ ಉರಿಸಿಬಿಸಿಲಿಗೆ ಹೋಗಲೇಬೇಡಿ. ಸೂರ್ಯನ ನೇರ ಕಿರಣಗಳು ತ್ವಚೆಯ ಕೊಲೋಜನ್‌ ಎಲಾಸ್ಟಿಕ್ ಟಿಶ್ಯುಗಳನ್ನು ನಾಶ ಮಾಡುತ್ತದೆ. ಬೆಳಗ್ಗೆ ಅಥವಾ ಸಂಜೆ ನಿಮ್ಮ ಹೊರಗಿನ ಕೆಲಸ ಮುಗಿಸಿ. ಅನಿವಾರ್ಯವಾಗಿ ಹೋಗುವುದಿದ್ದರೆ 30-40 SPFನ ಸನ್‌ಸ್ಕ್ರೀನ್‌ ಹಚ್ಚಿ, ಛತ್ರಿ ಸಹಿತ ಹೊರಡಿ.

ಬಿಸಿಲಿಗೆ ಹೊರಡುವ ಮುಂಚೆ ತಂಪು ಕನ್ನಡಕ ಧರಿಸಿ. ಅದು ಕಪ್ಪು ಬಣ್ಣದ್ದಾದರೆ ಉತ್ತಮ, ಆಗ ಕಂಗಳ ಕೆಳಗಿನ ನಾಜೂಕು ತ್ವಚೆ ಸುರಕ್ಷಿತವಾಗುತ್ತದೆ.

ಬೇಸಿಗೆಯಲ್ಲಿ ಡೇಲಿ ಸ್ಕಿನ್‌ಗೆ ಕ್ಲೀನಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಅಗತ್ಯ ಮಾಡಿಸಿ. ಇದಕ್ಕಾಗಿ ನಿಮ್ಮ ಚರ್ಮಕ್ಕೆ ಅನುರೂಪವಾದ ಪ್ರಾಡಕ್ಟ್ಸ್ ಖರೀದಿಸಿ ಅಥವಾ ನೈಸರ್ಗಿಕ ವಸ್ತುಗಳಾದ ಹಸಿ ಹಾಲು (ಕ್ಲೀನಿಂಗ್‌), ಗುಲಾಬಿ ಜಲ (ಟೋನಿಂಗ್‌), ಆ್ಯಲೋವೆರಾ ಜೆಲ್ ‌(ಮಾಯಿಶ್ಚರೈಸಿಂಗ್‌) ಇತ್ಯಾದಿ.

ವಾರದಲ್ಲಿ ಕನಿಷ್ಠ 1 ದಿನ ಚರ್ಮವನ್ನು ಅಗತ್ಯ ಎಕ್ಸ್ ಫಾಲಿಯೇಟ್‌ ಮಾಡಿಸಿ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಚರ್ಮದ ಹೊರ ಪದರದಲ್ಲಿನ ಮೃತ ಕೋಶಗಳು ಸರಿಯುತ್ತವೆ.

ಕೂದಲಿನ ಆರೈಕೆ

ಬೇಸಿಗೆಯಲ್ಲಿ ಹ್ಯುಮಿಡಿಟಿ ಲೆವೆಲ್ ‌ಅಧಿಕ ಇರುವುದರಿಂದ, ಕೂದಲಿಗೆ ಹಾನಿ ತಪ್ಪಿದ್ದಲ್ಲ. ಆದ್ದರಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆಗಳು.

ಈ ಸೀಸನ್‌ನಲ್ಲಿ ಸಹಜ ರೀತಿಯಲ್ಲಿ ಕೂದಲಿಗೆ ಸ್ಟೈಲ್ ನೀಡಿ. ಡ್ರೈಯರ್‌ ಇತ್ಯಾದಿಗಳ ಹೀಟ್‌ ಬೇಡ.

ಶ್ಯಾಂಪೂ ಹಚ್ಚಿ ತಲೆ ಸ್ನಾನ ಮುಗಿಸಿದ ನಂತರ, ಚೆನ್ನಾಗಿ ಒಣಗಿದ ಮೇಲೆ, ಕೂದಲಿನ ತುದಿಯಿಂದ ಬುಡದವರೆಗೂ ಉಗುರು ಬೆಚ್ಚಗಿನ ಎಣ್ಣೆ ಬಳಸಿ ಮಸಾಜ್‌ ಮಾಡಿ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ, ಕೂದಲು ಕಾಂತಿಯುತ, ಆರೋಗ್ಯಕರ ಆಗುತ್ತದೆ.

ನೀವು ಈಜಲು ಹೊರಟಿದ್ದರೆ, ಮೊದಲು ತಲೆಗೂದಲನ್ನು ತೊಳೆದು ಒದ್ದೆ ಮಾಡಿಕೊಳ್ಳಿ. ಆಗ ಈಜುಕೊಳದ ನೀರಿನಲ್ಲಿನ ಕ್ಲೋರಿನ್‌ ಅಂಶವನ್ನು ಇದು ಹೆಚ್ಚು ಹೀರದು.

ಕೂದಲಿಗೆ ನಿಯಮಿತವಾಗಿ ಕಂಡೀಶನರ್‌, ಹೇರ್‌ ಸನ್‌ಸ್ಕ್ರೀನ್‌ ಕ್ರೀಂ ಹಚ್ಚುತ್ತಿರಬೇಕು.

ಮೇಕಪ್

ಬೇಸಿಗೆಯಲ್ಲಿ ಮೇಕಪ್‌ ಆದಷ್ಟೂ ಲೈಟ್‌ ಆಗಿರಲಿ. ಹಾಗಾಗಿ ಈ ಸೀಸನ್‌ನಲ್ಲಿ ವಾಟರ್‌ ಪ್ರೂಫ್‌ ಮೇಕಪ್‌ ಉತ್ತಮ ಆಯ್ಕೆ. ಬೇಸಿಗೆಯಲ್ಲಿ ಐಶ್ಯಾಡೋ ಕ್ರೀಂ ಅಥವಾ ಗ್ಲಿಟರ್‌ ಬಳಸಲೇಬೇಡಿ. ತೆಳು ಬಣ್ಣದ ಕೇಕ್‌ ಐ ಶ್ಯಾಡೋ ಬಳಸಿರಿ. ಕಂಗಳ ಮೇಕಪ್‌ಗಾಗಿ ಒಂದೇ ಬಣ್ಣದ ಶೇಡ್ಸ್ ಬಳಸಿರಿ. ಐ ಲೈನರ್‌ ಜೊತೆ ವಾಟರ್‌ ಪ್ರೂಫ್‌ ಮಸ್ಕರಾ ಬಳಸಿರಿ. ತುಟಿಗಳಿಗಾಗಿ ತೆಳು ಬಣ್ಣದ ಪೀಚ್‌, ಗುಲಾಬಿ ಲಿಪ್‌ಸ್ಟಿಕ್‌ ಬಳಸಿರಿ.

ಹೈಡ್ರೇಟೆಡ್‌ ಆಗಿರುವುದು ಹೇಗೆ?

ನೀವು ಹೊರಗೆ ಹೊರಡುವಾಗೆಲ್ಲ 2 ಲೀ.ನ ತಂಪು ನೀರು ತುಂಬಿರುವ ಬಾಟಲ್ ಇರಲಿ. ಅರ್ಧ ಗಂಟೆಗೊಮ್ಮೆ ನೀರು ಕುಡಿಯಿರಿ. ಒಂದು ದಿನಕ್ಕೆ ಕನಿಷ್ಠ 10-12 ಗ್ಲಾಸ್‌ ನೀರು ಕುಡಿಯಲೇಬೇಕು. ಇದರಿಂದ ದೇಹ ಹೈಡ್ರೇಟೆಡ್‌ ಆಗಿ, ಶಕ್ತಿ ತುಂಬಿರುತ್ತದೆ. ಈ ಸೀಸನ್‌ನಲ್ಲಿ ನೀರಿನಂಶ ಹೆಚ್ಚು ಇರುವಂಥ ಹಣ್ಣುತರಕಾರಿಗಳನ್ನೇ ಸೇವಿಸಿ. ಉದಾ : ಕಲ್ಲಂಗಡಿ ಹಣ್ಣು, ದ್ರಾಕ್ಷಿ, ಮೂಸಂಬಿ, ಕಿತ್ತಳೆಹಣ್ಣು, ಟೊಮೇಟೊ, ಸೌತೇಕಾಯಿ, ಮೂಲಂಗಿ, ಕ್ಯಾರೆಟ್‌, ಸೋರೆಕಾಯಿ ಇತ್ಯಾದಿ.

ಡಿಯೋ ಬಳಸದಿರಿ

ಬೆವರಿನ ದುರ್ಗಂಧ ದೂರ ಮಾಡಲು ಎಲ್ಲರೂ ಡಿಯೋ ಬಳಸುವುದು ತಿಳಿದ ವಿಷಯ. ತೀರಾ ಬೇಕೇ ಬೇಕೆನಿಸಿದರೆ ಉತ್ತಮ ಬ್ರಾಂಡೆಡ್‌ ಮಾತ್ರ ಕೊಳ್ಳಿರಿ. ಆದರೆ ಡಿಯೋನಲ್ಲಿ ಕೆಮಿಕಲ್ಸ್ ಇರುತ್ತದೆಂಬುದು ಮಾತ್ರ ನಿಜ. ಇಂಥವು ಕೇವಲ ಬೆವರಿನ ದುರ್ವಾಸನೆಯನ್ನು ನಿಗ್ರಹಿಸುವ ಕೆಲಸವನ್ನಷ್ಟೇ ಮಾಡುತ್ತವೆ. ಇದನ್ನು ನೀವು ಡೈರೆಕ್ಟ್ ಸ್ಕಿನ್‌ ಮೇಲೆ ಸ್ಪ್ರೇ ಮಾಡಿದ್ದೇ ಆದರೆ, ಸೂರ್ಯನ ಸಂಪರ್ಕಕ್ಕೆ ಬಂದ ತಕ್ಷಣ ಇದು ಅಲರ್ಜಿಗೆ ಕಾರಣ ಆಗಬಹುದು. ಆದ್ದರಿಂದಲೇ ಅಗ್ಗದ ಮಾಲು ಬಿಟ್ಟು ಖ್ಯಾತ ಬ್ರಾಂಡ್‌ನದನ್ನೇ ಆರಿಸಿ. ಬೇಸಿಗೆಯಲ್ಲಿ ಅಗತ್ಯವಾಗಿ ಉತ್ಕೃಷ್ಟ ಪರಿಮಳ ಬೀರುವ ಟಾಲ್ಕಂ ಪೌಡರ್‌, ಫ್ರಾಗ್ರೆನ್ಸ್ ಯುಕ್ತ ಸೋಪ್‌ಮಾತ್ರ ಬಳಸಬೇಕು.

ಲೆಮನ್‌, ಮೆಂಥಾಲ್, ಲ್ಯಾವೆಂಡರ್‌, ರೋಸ್‌, ಜ್ಯಾಸ್ಮಿನ್‌ನಂಥ ಹಲವು ಬಗೆಗಳಲ್ಲಿ ಲಭ್ಯವಿರುವ ಸೋಪ್‌ಪೌಡರ್‌ ನೈಸರ್ಗಿಕ ಸುಗಂಧದಿಂದ ಕೂಡಿರುತ್ತವೆ. ಇಂಥ ಆಕರ್ಷಕ ಸುಗಂಧದ ಸೋಪು, ಟಾಲ್ಕಂ ಪೌಡರ್‌ ನಿಮ್ಮನ್ನು ಆಂತರಿಕವಾಗಿ ತಾಜಾ ಆಗಿಡುತ್ತದೆ. ಇವುಗಳಲ್ಲಿ ಚಿಕಿತ್ಸೀಯ ಗುಣಗಳೂ ಇರುತ್ತವೆ. ಪೌಡರ್‌ ನಿಮ್ಮ ಕಂಕುಳು, ಬಿಕಿನಿ ಏರಿಯಾದಲ್ಲಿ ಮಾಯಿಶ್ಚರ್‌ಹೀರಿಕೊಳ್ಳುತ್ತದೆ. ಇದರಿಂದ ಬೆವರಿನ ದುರ್ವಾಸನೆ ಸಹಜವಾಗಿ ಅಡಗುತ್ತದೆ. ಹಾಗಾಗಿ ಫಂಗಲ್ ಇನ್‌ಪೆಕ್ಷನ್‌ ಕೂಡ ಆಗುವುದಿಲ್ಲ. ಬೇಸಿಗೆಯಲ್ಲಿ ಈ ಬೆವರಿನ ಸಮಸ್ಯೆ ನಿರಂತರ. ದೇಹದ ಕೆಲವು ಭಾಗಗಳಲ್ಲಿ ಕೂದಲಿನ ಉಪಸ್ಥಿತಿ ಅನಿವಾರ್ಯ. ಈ ಕೂದಲಿನ ಕಾರಣ ಬೆವರು, ದುರ್ವಾಸನೆ, ಸೋಂಕು ಹೆಚ್ಚುತ್ತವೆ. ಹೀಗಾಗಿ ಬೇಸಿಗೆಯ ಕಾಟ ಹೆಚ್ಚುವುದಕ್ಕೆ ಮೊದಲೇ ಈ ಅನಗತ್ಯ ಕೂದಲನ್ನು ನಿವಾರಿಸಿಕೊಳ್ಳುವುದು ಒಳ್ಳೆಯದು.

ಇಂಥ ಅನಗತ್ಯ ಕೂದಲಿನ ನಿವಾರಣೆಗಾಗಿ ವ್ಯಾಕ್ಸಿಂಗ್‌, ಶೇವಿಂಗ್‌ ಅತಿ ಸುಲಭದ ವಿಧಾನಗಳು. ಆದರೆ ಶಾಶ್ವತವಾಗಿ ಇಂಥ ಕೂದಲನ್ನು ತೊಲಗಿಸಬೇಕೆಂದರೆ ಲೇಸರ್‌ ಟೆಕ್ನಿಕ್‌ ವಿಧಾನವೊಂದೇ ಸುಲಭ ಆಯ್ಕೆ. ಇದು ಬಲು ಯಶಸ್ವೀ ಹಾಗೂ ಉತ್ತಮ ಆಯ್ಕೆ ಸಹ.

ಈ ಎಲ್ಲಾ ವಿಷಯಗಳನ್ನೂ ನೆನಪಿಡುವುದರ ಜೊತೆಯಲ್ಲೇ, ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಚಮಕಾಯಿಸಲು ಸುಗಂಧಯುಕ್ತ ಪರ್ಫ್ಯೂಮ್ ಬಳಸಿರಿ. ತಾಜಾತನ ಹಾಗೂ ಸುಗಂಧ ಪರಿಮಳದ ಕಾಂಬಿನೇಶನ್‌, ಜನರನ್ನು ನಿಮ್ಮತ್ತ ಆಕರ್ಷಿಸುತ್ತದೆ.

– ಗಿರಿಜಾ ಶಂಕರ್‌

ಅನಗತ್ಯ ಕೂದಲನ್ನು ತೊಲಗಿಸಲು ಮನೆಮದ್ದು

ಮನೆಮದ್ದು ಬಳಸಿ ಅನಗತ್ಯ ಕೂದಲನ್ನು ತೊಲಗಿಸಿ :

ಸಕ್ಕರೆಗೆ ಜೇನುತುಪ್ಪ, ನಿಂಬೆರಸ ಬೆರೆಸಿ ತುಸು ಬಿಸಿ ಮಾಡಿ. ಗಟ್ಟಿ ಆಗಿದೆ ಎನಿಸಿದರೆ ತುಸು ನೀರು ಬೆರೆಸಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಉಗುರು ಬೆಚ್ಚಗಾದಾಗ, ಒಂದು ಸ್ಪಾತುಲಾ ಸಹಾಯದಿಂದ ಇದನ್ನು ಕೈಕಾಲು (ಅನಗತ್ಯ ಕೂದಲಿರುವ ಕಡೆ)ಗಳಿಗೆ ಒಂದು ಪದರದಂತೆ ಹಚ್ಚಬೇಕು. ನಂತರ ಅದರ ಮೇಲೆ ತೆಳು ಬಟ್ಟೆ ಕವರ್‌ ಮಾಡಿ. ಹೇರ್‌ಗ್ರೋಥ್‌ನ ವಿರುದ್ಧ ದಿಕ್ಕಿಗೆ ಬಟ್ಟೆ ಎಳೆದು, ಕೂದಲು ಹೋಗುವಂತೆ ಮಾಡಿ.

2 ಚಮಚ ಪರಂಗಿಕಾಯಿಯ ಪೇಸ್ಟ್ ಗೆ ಅರ್ಧ ಚಮಚ ಅರಿಶಿನ, ತುಸು ನಿಂಬೆರಸ ಬೆರೆಸಿ ಮುಖ, ಕೈಕಾಲಿಗೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೇ ಒಣಗಲು ಬಿಡಿ. ನಂತರ ತೆಳುವಾದ ಕೈಗಳಿಂದ ಸ್ಕ್ರಬ್‌ ಮಾಡುತ್ತಾ, ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ 2 ಸಲ ಹೀಗೆ ಮಾಡುವುದರಿಂದ ಅನಗತ್ಯ ಕೂದಲು ಬೆಳೆಯುವುದಿಲ್ಲ.

ಮುಖ್ಯವಾಗಿ ದ. ಭಾರತದಲ್ಲಿ ಹೆಣ್ಣುಮಕ್ಕಳು ಮೈ ನೆರೆದಾಗಿನಿಂದ, ಸ್ನಾನಕ್ಕೆ ಮುಂಚೆ ಅರಿಶಿನ ಹಚ್ಚಿ ಮುಖ ತೊಳೆಯುತ್ತಾರೆ. ಆಗ ಅನಗತ್ಯ ಕೂದಲು ಗಡ್ಡಮೀಸೆ ತರಹ ಕಾಟ ಕೊಡುವುದಿಲ್ಲ. ಇದನ್ನು ನಿರಂತರ ಮುಂದುವರಿಸಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ