ಋತುಮಾನದ ಬದಲಾವಣೆ, ವಿಪರೀತ ಗಾಳಿ, ಧೂಳು, ಪರಿಸರ ಮಾಲಿನ್ಯ ಇತ್ಯಾದಿಗಳಿಂದ ಚರ್ಮ ಹೆಚ್ಚಿನ ಪ್ರಭಾವಕ್ಕೆ ಒಳಗಾಗುತ್ತದೆ. ಹೀಗಿರುವಾಗ ಅದರ ಸೂಕ್ತ ಪೋಷಣೆ ಮಾಡದಿದ್ದರೆ, ಸಮಯಕ್ಕೆ ಮೊದಲೇ ವಯಸ್ಸಾದವರಂತೆ ಮುಖದಲ್ಲಿನ ಚರ್ಮ ಸುಕ್ಕು, ನಿರಿಗೆಗಳಿಂದ ಕೂಡಿ ಜೋತುಬಿದ್ದಂತೆ ಕಾಣಿಸುತ್ತದೆ. ನಿಮ್ಮ ಚರ್ಮದ ಪ್ರಕೃತಿಗೆ ಅನುಸಾರವಾಗಿ (ಅಂದ್ರೆ ಅದು ನಾರ್ಮಲ್, ಡ್ರೈ ಅಥವಾ ಆಯ್ಲಿ ಆಗಿರಬಹುದು) ಮನೆಯಲ್ಲೇ ಒಂದಿಷ್ಟು ಲೇಪನ (ಫೇಸ್ ಪ್ಯಾಕ್ಸ್) ಗಳನ್ನು ಸಿದ್ಧಪಡಿಸಿಕೊಂಡು, ಮುಖಕ್ಕೆ ನೀಟಾಗಿ ಹಚ್ಚಿ, ಅದು ಸ್ವಸ್ಥ, ಸುಂದರ, ಹೊಳೆ ಹೊಳೆಯುವಂತೆ ಮಾಡಿ.
ಈ ಲೇಪನಗಳಿಂದ ಚರ್ಮ ಕಾಂತಿಯುತವಾಗುತ್ತದೆ. ಹೀಗಾಗಿಯೇ ಮದುವೆಗೆ 1 ತಿಂಗಳು ಮೊದಲೇ, ನವವಧುವಿಗೆ ಪ್ರತಿದಿನ ಇಂಥ ಲೇಪನ ಬಳಸುತ್ತಾರೆ. ಆದರೆ ಈ ಪರಿಯ ಲೇಪನಕ್ಕಾಗಿ ನೀವು ಬಳಸುತ್ತಿರುವ ವಸ್ತುಗಳ ಮಿಶ್ರಣ, ನಿಮ್ಮ ಚರ್ಮದ ಪ್ರಕೃತಿಗೆ ಅನುಕೂಲವಾಗಿರಬೇಕು. ಜೊತೆಗೆ ಇದನ್ನು ಸ್ಕ್ರಬ್‌ಮಾಡುವಾಗ ಸಿಕ್ಕಾಪಟ್ಟೆ ಉಜ್ಜದೆ, ಕೈಗಳಿಂದ ಲಘುವಾಗಿ ಮಸಾಜ್‌ಮಾಡಬೇಕು. ಒರಟು ವರ್ತನೆಯಿಂದ ಚರ್ಮ ಕುಂದಬಹುದು. ರಾಶೆಸ್‌ತಪ್ಪಿಸಲು ಲಘುವಾಗಿ ಕೈಗಳನ್ನು ವರ್ತುಲಾಕಾರವಾಗಿ ಮುಖದ ಮೇಲೆ ಆಡಿಸಿ.
ಅನೇಕ ಲಾಭಗಳು
ಇಂಥ ಫೇಸ್ ಪ್ಯಾಕ್ ಬಳಕೆಯಿಂದ ಚರ್ಮದಲ್ಲಿ ಆರ್ದ್ರತೆ ಮತ್ತು ಹೊಳಪು ಉಳಿಯುತ್ತದೆ. ಅದು ಡೆಡ್ ಸ್ಕಿನ್ ತೊಲಗಿಸಿ, ಚರ್ಮಕ್ಕೆ ಹೊಸ ತಾಜಾತನ ನೀಡುತ್ತದೆ. ಇಂಥ ಲೇಪನಗಳಿಂದಾಗಿ, ಚರ್ಮದಲ್ಲಿನ ರಕ್ತಸಂಚಾರ ಸುಸೂತ್ರ ಆಗುತ್ತದೆ. ಇದನ್ನು ರಿಮೂವ್‌ಮಾಡುವಾಗ ಚರ್ಮಕ್ಕೆ ಸಹಜವಾಗಿ ಮಸಾಜ್ ಸಿಗುತ್ತದೆ. ಸುಕ್ಕು, ನಿರಿಗೆ, ಮೊಡವೆಗಳಿಂದ ಮುಕ್ತಿ ಸಿಗುತ್ತದೆ.
ಹೆಚ್ಚಿನ ಲೇಪನಗಳಿಗೆ ಅರಿಶಿನವೇ ಮೂಲ. ಹೀಗಾಗಿ ನ್ಯಾಚುರಲ್ ಆ್ಯಂಟಿ ಸೆಪ್ಟಿಕ್ ಆದ ಇದರಿಂದ ಚರ್ಮ ಹಲವು ರೋಗಗಳಿಂದ ಮುಕ್ತಿ ಪಡೆಯುತ್ತದೆ. ಹೀಗೆಲ್ಲ ಅನೇಕ ಲಾಭಗಳಿದ್ದರೂ, ಲೇಪನದ ಮೂಲ ಪದಾರ್ಥಗಳು ನಿಮ್ಮ ಚರ್ಮಕ್ಕೆ ಅನುರೂಪವಾಗಿಯೇ ಇರಬೇಕು ಎಂಬುದನ್ನು ಗಮನಿಸಿ. ಉದಾ : ಡ್ರೈ ಸ್ಕಿನ್ ಇರುವವರು ಎಂದೂ ತಮ್ಮ ಲೇಪನಕ್ಕೆ ನಿಂಬೆ, ಕಿತ್ತಳೆ ರಸದಂಥ ಹುಳಿ ಪದಾರ್ಥ ಬಳಸಬಾರದು.
ಬಣ್ಣ ತೇಲಿಸುವ ಲೇಪನಗಳು
ಗೌರವರ್ಣ ಪಡೆಯವ ಬಯಸುವ ಹೆಣ್ಣುಮಕ್ಕಳು ಹೀಗೆ ಮಾಡಿ :
2 ಚಮಚ ಹಾಲಿನ ಕೆನೆ, 1 ಚಮಚ ಕಡಲೆ ಹಿಟ್ಟಿಗೆ ಅರ್ಧ ಸಣ್ಣ ಚಮಚ ಅರಿಶಿನ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ನೀಟಾಗಿ ಸವರಿ 10-15 ನಿಮಿಷ ಹಾಗೇ ಬಿಡಿ. ಹೀಗೆ ದಿನಕ್ಕೆ 2 ಸಲ, 3-4 ತಿಂಗಳು ಮಾಡಿದರೆ, ಮುಖದ ಬಣ್ಣ ಎಷ್ಟೋ ಸುಧಾರಿಸುತ್ತದೆ.
1 ಚಮಚ ಉದ್ದಿನಬೇಳೆಯನ್ನು ಹಸಿ ಹಾಲಿನಲ್ಲಿ ನೆನೆಸಿ, ನುಣ್ಣಗೆ ಪೇಸ್ಟ್ ಮಾಡಿ. ನಂತರ ಇದಕ್ಕೆ ಗುಲಾಬಿ ಜಲ ಬೆರೆಸಿ ನೀಟಾಗಿ ಮುಖಕ್ಕೆ ಹಚ್ಚಿರಿ. ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ಗುಂಡಗೆ ಕೈಯಾಡಿಸುತ್ತಾ ಪ್ಯಾಕ್ ತೆಗೆದುಬಿಡಿ. ಚರ್ಮದ ಕಾಂತಿ ಹೆಚ್ಚುತ್ತದೆ.
2 ಚಮಚ ಕಡಲೆಹಿಟ್ಟು, 1 ಚಮಚ ಕೊಬ್ಬರಿ ಎಣ್ಣೆ, ತುಸು ಹಸಿ ಹಾಲು ಬೆರೆಸಿ ಪೇಸ್ಟ್ ಮಾಡಿ. ಇಡೀ ದೇಹಕ್ಕೆ ಹಚ್ಚಿಕೊಂಡು, ಸ್ವಲ್ಪ ಹೊತ್ತು ಒಣಗಿಸಿ ನಂತರ ಕೈಗಳಿಂದ ಅವನ್ನು ಬಿಡಿಸಿ, ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಚರ್ಮ ಬಲು ಮೃದುವಾಗುತ್ತದೆ.
ಚನ್ನಂಗಿ ಬೇಳೆ (ಕೇಸರಿ ಬೇಳೆ)ಯನ್ನು ಹುರಿಯದೆ ಹಸಿಯಾಗಿಯೇ ಪುಡಿ ಮಾಡಿ. ಇದರ 2 ಚಮಚಕ್ಕೆ 1 ಮೊಟ್ಟೆಯ ಬಿಳಿ ಭಾಗ, 2-3 ಹನಿ ನಿಂಬೆರಸ, 1 ಚಮಚ ಹಸಿ ಹಾಲು ಬೆರೆಸಿಕೊಂಡು ಪೇಸ್ಟ್ ಮಾಡಿ ದಿನ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
1 ಚಮಚ ಮೊಸರು, 1 ಚಮಚ ಕಡಲೆಹಿಟ್ಟು, 1 ಚಿಟಕಿ ಅರಿಶಿನ, 2-3 ಹನಿ ನಿಂಬೆರಸ ಬೆರೆಸಿ ಗಾಢ ಪೇಸ್ಟ್ ತಯಾರಿಸಿ. ಇದನ್ನು ಮುಖ, ಕುತ್ತಿಗೆ, ಕೈಕಾಲುಗಳಿಗೆ ಸವರಿ 10-12 ನಿಮಿಷ ಹಾಗೇ ಬಿಡಿ. ನಂತರ ನಿಧಾನವಾಗಿ ಕೈಯಿಂದ ತೆಗೆದು ಸ್ನಾನ ಮಾಡಿ.
ಒಂದು ಚಮಚ ಮುಲ್ತಾನಿ ಮಿಟ್ಟಿ ಪೌಡರ್‌ಗೆ ತುಸು ಹಾಲಿನ ಕೆನೆ, ಗುಲಾಬಿ ಜಲ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಲೇಪಿಸಿ 15 ನಿಮಿಷ ಹಾಗೇ ಬಿಡಿ. ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
1 ಚಮಚ ಸಾಸುವೆಯನ್ನು ತುಸು ಹಾಲಿನಲ್ಲಿ ನೆನೆಸಿ ನುಣ್ಣಗೆ ಪೇಸ್ಟ್ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ಬಣ್ಣ ಸುಧಾರಿಸುವುದಲ್ಲದೆ, ಚರ್ಮದ ಕಾಂತಿ ಹೆಚ್ಚುತ್ತದೆ.
ಮೊಸರಿನಿಂದ ಮುಖದ ಕಾಂತಿ ಹೆಚ್ಚುತ್ತದೆ. ನಿಂಬೆಯಿಂದ ಜಿಡ್ಡುಜಿಡ್ಡಾಗುವಿಕೆ ತಾನಾಗಿ ತಗ್ಗುತ್ತದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಹಚ್ಚುವುದರಿಂದ ಮುಖ ಕಳೆಗೂಡುತ್ತದೆ.
ಕರ್ಬೂಜಾ ಮತ್ತು ಕುಂಬಳ ಬೀಜಗಳ ತಿರುಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖ, ಕುತ್ತಿಗೆಗೆ ಸವರಬೇಕು. ಒಣಗಿದ ನಂತರ ಬೆಚ್ಚನೆ ನೀರಿನಲ್ಲಿ ಸ್ನಾನ ಮಾಡಿ. ಕೆಲವು ವಾರಗಳ ನಂತರ ಬಣ್ಣ ಸುಧಾರಿಸುತ್ತದೆ.
1 ಬ್ರೆಡ್ ಸ್ಲೈಸ್‌ನ್ನು ಹಾಲಿನಲ್ಲಿ ನೆನೆಸಿ, ಚೆನ್ನಾಗಿ ಕಿವುಚಿ ಮುಖಕ್ಕೆ ಹಚ್ಚಬೇಕು. 10 ನಿಮಿಷಗಳ ನಂತರ ಅದು ತಾನಾಗಿ ಉದುರುತ್ತದೆ. ನಂತರ ಬಿಸಿ ನೀರಲ್ಲಿ ಮುಖ ತೊಳೆಯಿರಿ. ಇದರಿಂದ ಡೆಡ್‌ಸ್ಕಿನ್‌ದೂರಾಗುತ್ತದೆ.
1 ಚಮಚ ಕಡಲೆಹಿಟ್ಟಿಗೆ 2 ಚಿಟಕಿ ಅರಿಶಿನ, 2-3 ಹನಿ ನಿಂಬೆ ರಸ, ತುಸು ಹಸಿ ಹಾಲು ಬೆರೆಸಿ ದಿನ ಮುಖಕ್ಕೆ ಹಚ್ಚಿರಿ. ಕೆಲವು ದಿನಗಳವರೆಗೂ ಹೀಗೆ ಮುಂದುವರಿಸಿ, ಉತ್ತಮ ಫಲಿತಾಂಶ ಪಡೆಯಬಹುದು.
ಡ್ರೈ ಸ್ಕಿನ್‌ಗಾಗಿ
2 ಚಮಚ ಅಕ್ಕಿಹಿಟ್ಟು, 2 ಸಣ್ಣ ಚಮಚ ಜೇನುತುಪ್ಪ, 1 ಚಮಚ ಮೊಟ್ಟೆಯ ಬಿಳಿ ಭಾಗ ಮಿಶ್ರಣ ಮಾಡಿ ಲೇಪನ ತಯಾರಿಸಿ. ಇದನ್ನು ಮುಖ, ಕುತ್ತಿಗೆಗೆ ಹಚ್ಚಿ 10 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
2 ಚಮಚ ಜವೆಗೋಧಿ ಹಿಟ್ಟು, 1 ಮೊಟ್ಟೆ ಹಳದಿ ಭಾಗ, 1 ಸಣ್ಣ ಚಮಚ ಜೇನುತುಪ್ಪ, ತುಸು ಹಸಿ ಹಾಲು ಬೆರೆಸಿ ಲೇಪನ ತಯಾರಿಸಿ, ಮುಖ ಕುತ್ತಿಗೆಗೆ ಸವರಿಕೊಳ್ಳಿ. 10-15 ನಿಮಿಷ ಬಿಟ್ಟು ಮುಖ ತೊಳೆಯಿರಿ.
2 ಚಮಚ ಚಂದನದ ಪುಡಿಗೆ ಗುಲಾಬಿ ಜಲ ಬೆರೆಸಿ ಲೇಪನ ರೆಡಿ ಮಾಡಿ. ಇದನ್ನು ಮುಖಕ್ಕೆ ನೀಟಾಗಿ ಸವರಿ 15-20 ನಿಮಿಷ ಒಣಗಲು ಬಿಡಿ.
ನಂತರ ಲಘುವಾಗಿ ಅದನ್ನು ಕೈಗಳಿಂದ ರಿಮೂವ್‌ಮಾಡಿ, ಮುಖ ತೊಳೆಯಿರಿ.
1 ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಡಿ. ಇದಕ್ಕೆ ತುಸು ಜೇನುತುಪ್ಪ, ಕೆಲವು ಹನಿ ನಿಂಬೆರಸ ಬೆರೆಸಿ ಪೇಸ್ಟ್ ಮಾಡಿ ಹದನಾಗಿ ಮುಖಕ್ಕೆ ಹಚ್ಚಿರಿ. 5-6 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ನಿರಿಗೆಗಳು ತಗ್ಗುತ್ತವೆ.
1 ಚಮಚ ಬಾದಾಮಿ ಪುಡಿ, 1 ಚಮಚ ಹಾಲಿನ ಕೆನೆ 1 ಚಮಚ ಕೇಸರಿ ಬೇಳೆಯ ಪುಡಿ, ಅರ್ಧ ಚಮಚ ಗುಲಾಬಿ ಜಲ, ಕೆಲವು ಹನಿ ಆಲಿವ್ ಆಯಿಲ್‌ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖ, ಕುತ್ತಿಗೆ, ದೇಹದ ಎಲ್ಲಾ ಭಾಗಕ್ಕೂ ಸವರಬೇಕು. ಅರ್ಧ ಗಂಟೆ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ. ಚರ್ಮ ಹೆಚ್ಚಿನ ಕಾಂತಿ ಗಳಿಸಿ, ಲವಲವಿಕೆ ಮೂಡಿಸುತ್ತದೆ.
ಆಯ್ಲಿ ಚರ್ಮಕ್ಕಾಗಿ
2 ಚಮಚ ಜವೆ ಗೋಧಿಹಿಟ್ಟು, 2 ಚಮಚ ಮಾಗಿದ ಸೇಬಿನ (ಸಿಪ್ಪೆ ಹೆರೆದದ್ದು) ಪೇಸ್ಟ್, ತುಸು ಹಸಿ ಹಾಲು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ, 10-15 ನಿಮಿಷ, ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ.
2-3 ಚಮಚ ಒಣಕಿತ್ತಳೆ ಸಿಪ್ಪೆಯ ಪುಡಿಗೆ ತುಸು ಹಸಿ ಹಾಲು, ಗುಲಾಬಿಜಲ ಬೆರೆಸಿ ತುಸು ಗಾಢ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೇ ಬಿಡಿ. ಆಮೇಲೆ ಮುಖ ತೊಳೆದರೆ, ಚರ್ಮ ಕಾಂತಿಯುತವಾಗಿ ನಳನಳಿಸುತ್ತದೆ.
1-2 ಚಮಚ ಮೊಸರಿಗೆ, 1-2 ಚಮಚ ಸೌತೆ ಪೇಸ್ಟ್, ತುಸು ಗುಲಾಬಿಜಲ ಬೆರೆಸಿ ಪೇಸ್ಟ್ ರೆಡಿ ಮಾಡಿ. ಇದನ್ನು ಮುಖಕ್ಕೆ ನೀಟಾಗಿ ಸವರಿ, 10-15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ.
2 ಚಮಚ ಚಂದನದ ಪುಡಿ, 1 ಚಮಚ ತಾಜಾ ಬೇವಿನ ಎಲೆಯ ಪೇಸ್ಟ್, 1 ಚಮಚ ಗುಲಾಬಿ ದಳದ ಪೇಸ್ಟ್, 1 ಸಣ್ಣ ಚಮಚ ಗೋಧಿ ತೌಡಿನ ಪೇಸ್ಟ್, 2 ಚಿಟಕಿ ಅರಿಶಿನ, ತುಸು ಗುಲಾಬಿ ಜಲ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿರಿ. 12-15 ನಿಮಿಷ ಬಿಟ್ಟು ನಿಧಾನವಾಗಿ ಕೈಯಿಂದ ತಟ್ಟುತ್ತಾ, ಅದನ್ನು ರಿಮೂವ್ ಮಾಡಿ. ಆಮೇಲೆ ತಣ್ಣೀರಿನಿಂದ ತೊಳೆದಕೊಳ್ಳಿ.
2 ಚಮಚ ಜವೆಗೋಧಿ ಹಿಟ್ಟು, 2 ಚಮಚ ಕಡಲೆಹಿಟ್ಟು, 2 ಚಿಟಕಿ ಅರಿಶಿನ, 4-5 ಹನಿ ನಿಂಬೆರಸ, 1-2 ಚಮಚ ಗುಲಾಬಿ ರಸ ಪೇಸ್ಟ್ ತಯಾರಿಸಿ. ಇದನ್ನು ಮುಖ ಮತ್ತು ಇಡೀ ದೇಹಕ್ಕೆ ಹಚ್ಚಬೇಕು. ಒಣಗಿದ ನಂತರ ನಿಧಾನವಾಗಿ ರಿಮೂವ್ ಮಾಡಿ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
ಸುಕ್ಕುಕಲೆಗಳ ಚರ್ಮಕ್ಕಾಗಿ
2 ಚಮಚ ಹಾಲಿನ ಕೆನೆ, ಅರ್ಧ ಚಮಚ ಹಸಿ ಅರಿಶಿನದ ಪೇಸ್ಟ್, ಕೆಲವು ಹನಿ ಗುಲಾಬಿ ಜಲ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಸವರಿ, ಒಣಗಿದ ನಂತರ ತೊಳೆಯಬೇಕು. ಹೀಗೆ ಪ್ರತಿದಿನ 2-3 ವಾರದವರೆಗೆ ಮಾಡಿದರೆ ಕಲೆಗಳು ತಾವಾಗಿ ತಗ್ಗುತ್ತವೆ.
1 ಚಮಚ ತಾಜಾ ಬೇವಿನ ಎಲೆಯ ಪೇಸ್ಟ್, 2 ಚಮಚ ಜವೆಗೋಧಿ ಹಿಟ್ಟು, 2 ಚಮಚ ಕಡಲೆಹಿಟ್ಟು, 2 ಚಮಚ ಮುಲ್ತಾನಿ ಮಿಟ್ಟಿ ಪೌಡರ್, ಅರ್ಧ ಚಮಚ ಜೇನುತುಪ್ಪ, ಕೆಲವು ಹನಿ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ ಮುಖ, ಕುತ್ತಿಗೆಗಳಿಗೆ ಹಚ್ಚಿರಿ. ಹೀಗೆ 3-4 ವಾರ ಮಾಡುವುದರಿಂದ ಕಲೆ ಸುಕ್ಕು ದೂರಾಗುತ್ತದೆ.
2 ಚಮಚ ಹಾಲಿಗೆ ತುಸು ಜವೆಗೋಧಿ ಹಿಟ್ಟು 2 ಚಿಟಕಿ ಅರಿಶಿನ, ಕೆಲವು ಹನಿ ಆಲಿವ್‌ಆಯಿಲ್‌ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖ, ಕೈಕಾಲುಗಳಿಗೆ ನಿಯಮಿತವಾಗಿ ಹಚ್ಚಿಕೊಳ್ಳಿ. ಒಣಗಿದ ನಂತರ ನಿಧಾನವಾಗಿ ರಿಮೂವ್‌ಮಾಡಿ. ಹೀಗೆ 1 ತಿಂಗಳು ಮಾಡಿ ನಿಮ್ಮ ಕಲೆಗಳನ್ನು ನಿವಾರಿಸಿಕೊಳ್ಳಿ.
– ಜಿ. ಮಾಧುರಿ