ನೇಲ್ ಆರ್ಟ್ ಮೂಲಕ ನೀವು ನಿಮ್ಮ ಉಗುರುಗಳ ಬಣ್ಣ, ಥೀಂ, ಋತು, ಮೂಡ್ ಯಾವುದೇ ಬಗೆಯ ದೃಶ್ಯಗಳಿಂದ ಅಲಂಕರಿಸಬಹುದು. ನೀವು ಬಯಸಿದರೆ ಉಗುರುಗಳ ಮೇಲೆ ಡಾರ್ಕ್ ಲೈಟ್ ಬಣ್ಣಗಳನ್ನೂ ಪ್ರಯೋಗಿಸಬಹುದು. ನೇಲ್ ಆರ್ಟ್‌ಗೆ ಮೊದಲು ನಿಮ್ಮ ಉಗುರಿನ ಸ್ವಚ್ಛತೆ ಮತ್ತು ಅದರ ಆಕಾರ ಹಾಗೂ ಕಂಡೀಶನಿಂಗ್ ಕಡೆಯೂ ಗಮನಹರಿಸಬೇಕು. ಇದಕ್ಕಾಗಿ ಉಗುರನ್ನು ಸ್ವಲ್ಪ ಹೊತ್ತು ನಿಂಬೆ, ಸ್ವೀಟ್ ಸೋಡಾ ಬೆರೆತ ತುಸು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಅದ್ದಿರಬೇಕು. ನಂತರ ಅದನ್ನು ಒಣ ಟವೆಲ್‌ನಿಂದ ಒರೆಸಿಡಿ. ಇದಾದ ಮೇಲೆ ಉಗುರನ್ನು ಫೈಲರ್ ನೆರವಿನಿಂದ ಬಯಸಿದ ಆಕಾರ ಕೊಟ್ಟು, ಅವು ಅತ್ಯುತ್ತಮವಾಗಿ ಕಾಣುವಂತೆ ಮಾಡಬೇಕು. ಬಯಸಿದರೆ ಉಗುರಿಗೆ ನೀವು ಗೋಲ, ಅಂಡ, ಚೌಕ ಇತ್ಯಾದಿ ಶೇಪ್ ನೀಡಬಹುದು.
ಈಗ ಉಗುರನ್ನು ಸುರಕ್ಷಿತವಾಗಿಡಲು ಅದರ ಮೇಲೆ ನೇಲ್ ಪ್ರೈಮರ್ ಹಚ್ಚಿದ ನಂತರ ಬೇಸ್ ಕೋಟ್ ಹಚ್ಚಿರಿ. ಹೀಗೆ ಮಾಡುವುದರಿಂದ ನಿಮ್ಮ ಉಗುರಿಗೆ ಹಳದಿ ಬಣ್ಣ ಬರುವುದಿಲ್ಲ. ಬೇಸ್ ಕೋಟ್‌ನ ಮೊದಲ ಪದರ ಆರಿದ ನಂತರ 2ನೇ ಕೋಟ್ ಅಪ್ಲೈ ಮಾಡಿ. ಇದು ಒಣಗಿದ ನಂತರ ಬೇರೆ ಯಾವುದೇ ಮ್ಯಾಚಿಂಗ್ ನೇಲ್ ಕಲರ್‌ನಿಂದ ನಿಮ್ಮಿಷ್ಟದ ಡಿಸೈನ್ ಮಾಡಿಕೊಳ್ಳಿ. ಮನೆಯಲ್ಲಿ ತುಸು ಚಿಕ್ಕದಾದ ಬ್ರಶ್ಶಿನ ಸಹಾಯದಿಂದ ನೀವು ಡಿಸೈನ್ ಮಾಡಬಹುದು ಅಥವಾ ಮಾರ್ಕೆಟ್‌ನಲ್ಲಿ ನೇಲ್ ಆರ್ಟ್‌ಗಾಗಿಯೇ ಇರುವ ಸಾಕಷ್ಟು ಟೂಲ್ಸ್ ಕೊಂಡು ತಂದು ಮನೆಯಲ್ಲೇ ಬಳಸಿಕೊಳ್ಳುವುದು ಎಷ್ಟೋ ಸುಲಭ ಮತ್ತು ಉತ್ತಮ.
ಕೆಲವು ಟ್ರೆಂಡಿ ನೇಲ್ ಆರ್ಟ್ ವಿಧಾನಗಳನ್ನು ತಿಳಿಯೋಣ :
ಬಂಜಾರಾ ನೇಲ್ ಆರ್ಟ್ : ಕಪ್ಪು ನೇಲ್ ಪಾಲಿಶ್ ಜೊತೆ ಸ್ಟಡ್ಸ್ ವುಳ್ಳ ಈ ಟ್ರೆಂಡ್‌ನ್ನು ನಿಮ್ಮ ಇಷ್ಟದ ಪ್ರಕಾರ, ಸ್ಟಡ್ ಸೈಜ್ ಬದಲಾಯಿಸುತ್ತಾ ಹಚ್ಚಬಹುದು. ಇದಕ್ಕಾಗಿ ಕಪ್ಪು ಬಣ್ಣದ ಮ್ಯಾಟ್ ನೇಲ್ ಪಾಲಿಶ್‌ನ ಒಂದು ಕೋಟ್ ಹಚ್ಚಿರಿ. ಅದು ಒಣಗಲಿ. ನಂತರ ಇದರ ಮೇಲೆ ಗಾಢ ಬಣ್ಣದ ಪದರ ಹಚ್ಚಿರಿ. ಇದು ಇನ್ನೂ ಹಸಿ ಇರುವಾಗಲೇ ಚಿಮಟಾದ ನೆರವಿನಿಂದ ಸ್ಟಡ್ಸ್ ತೆಗೆದು ಒಂದು ನಿಶ್ಚಿತ ಪ್ಯಾಟರ್ನ್‌ನಲ್ಲಿ ಹಚ್ಚಿರಿ. ಇದು ಪೂರ್ತಿ ಸೆಟಲ್ ಆದ ನಂತರ, ಇದನ್ನು ದೀರ್ಘಕಾಲದ ಬಳಕೆಗಾಗಿ, ಟ್ರಾನ್ಸ್ ಲೂಸೆಂಟ್ ಟಾಪ್ ಕೋಟ್ ಹಚ್ಚಿರಿ. ಮಿಡ್ ನೈಟ್ ಬ್ಲೂ ಮತ್ತು ಗ್ರೇ ನೇಲ್ ಎನಾಮಲ್‌ನಲ್ಲೂ ಸಹ ಇದೇ ತರಹದ ಪ್ಯಾಟರ್ನ್ ಮಾಡಿಕೊಳ್ಳಬಹುದು.
ಸ್ಮೈಲಿ ನೇಲ್ ಆರ್ಟ್ : ಲೇಟೆಸ್ಟ್ ಟ್ರೆಂಡ್‌ನಲ್ಲಿ ಇದು ಇನ್ ಆಗಿದೆ. ನಮ್ಮೆಲ್ಲರಿಗೂ ಈಗ ಮೊಬೈಲ್ ಮೆಸೇಜುಗಳಲ್ಲಿ ಸ್ಮೈಲಿ ಬಳಸುವುದು ಕಾಮನ್ ಆಗಿದೆ. ನಿಮ್ಮ ಉಗುರುಗಳ ಮೇಲೂ ಇಂಥ ಸಾಧಾರಣ, ಬೆಟರ್ ಎನಿಸುವ ಸ್ಮೈಲಿ ಮಾಡಿಕೊಂಡರೆ ಆಗ ಎಲ್ಲರ ಗಮನ ನಿಮ್ಮತ್ತಲೇ ಇರುತ್ತದೆ. ಕಪ್ಪು, ಹಳದಿ ಬಣ್ಣ ಬಿಟ್ಟು ಇದರಲ್ಲಿ ಬಿಳಿ, ಕೆಂಪು, ಗುಲಾಬಿ ಬಣ್ಣ ಬಳಸಬಹುದು. ಇದರಿಂದ ಈ ಡಿಸೈನ್ ಆಕರ್ಷಕ ಎನಿಸುತ್ತದೆ.