- ರಾಘವೇಂದ್ರ ಅಡಿಗ ಎಚ್ಚೆನ್.
ಹೊಸ ವರ್ಷದ ಸಂಭ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಿಹಿ ಸುದ್ದಿ ಕೊಟ್ಟಿದ್ದಾರೆ. ಈ ಬಾರಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ ಆಕಾಶ ಮುಟ್ಟಲಿದೆ. ಅಪ್ಪು ಅಗಲಿ ವರ್ಷಗಳ ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಪರಮಾತ್ಮನ ನೆನಪು ಹಚ್ಚಹಸಿರಾಗಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಯತ್ನಿಸುತ್ತಲೇ ಇದ್ದಾರೆ. ಪ್ರತಿ ವರ್ಷ ಮಾರ್ಚ್ 17ರಂದು ಅಭಿಮಾನಿಗಳು ಅದ್ಧೂರಿಯಾಗಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸುತ್ತಾ ಬರ್ತಿದ್ದಾರೆ. ಇದೇ ಸಂಭ್ರಮದಲ್ಲಿ ಪುನೀತ್ ನಟಿಸಿದ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗ್ತಿದೆ. ಅದೇ ರೀತಿ 'ಜಾಕಿ' ಹಾಗೂ 'ಅಪ್ಪು' ಸಿನಿಮಾಗಳು ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿದ್ದವು. ಈ ವರ್ಷ ಮತ್ತೊಂದು ಹಿಟ್ ಸಿನಿಮಾ ಮರು ಬಿಡುಗಡೆಗೆ ಸಜ್ಜಾಗುತ್ತಿದೆ.

ಅಪ್ಪು ನಟಿಸಿದ ಬಹುತೇಕ ಸಿನಿಮಾಗಳು ಸಕ್ಸಸ್ ಕಂಡಿವೆ. ತಮ್ಮದೇ ಹೋಂ ಬ್ಯಾನರ್ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. 2005ರಲ್ಲಿ ತೆರೆಗೆ ಬಂದಿದ್ದ 'ಆಕಾಶ್' ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ಅಭಿ ಬಳಿಕ ಪುನೀತ್ ಹಾಗೂ ರಮ್ಯಾ ಜೋಡಿ ಮತ್ತೊಮ್ಮೆ ಜೊತೆಯಾಗಿ ಪ್ರೇಕ್ಷಕರನ್ನು ರಂಜಿಸಿತ್ತು. ಮಹೇಶ್ ಬಾಬು ನಿರ್ದೇಶನದ ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಈ ವರ್ಷ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಮಾರ್ಚ್ 13ಕ್ಕೆ 'ಆಕಾಶ್' ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುವುದಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಿಸಿದ್ದಾರೆ, 4K ರೀ-ಮಾಸ್ಟರ್ಡ್ ವರ್ಷನ್ ಸಿನಿಮಾ ತೆರೆಗಪ್ಪಳಿಸಲಿದೆ. ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ... ಎಷ್ಟೇ ವರ್ಷ ಆದರೂ ಮರೆಯಾಗದ ಕಥೆಗೆ ಸಾಕ್ಷಿಯಾಗಲು ಸಿದ್ಧರಾಗಿ. ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಆಕಾಶ್ ಚಿತ್ರಮಂದಿರಗಳಿಗೆ ಮರಳುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.
200 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ್ ಕಂಡು 'ಆಕಾಶ್' ಸಿನಿಮಾ ದಾಖಲೆ ಬರೆದಿತ್ತು. ಶ್ರೀ ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದರು. ಆರ್. ಪಿ ಪಟ್ನಾಯಕ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿತ್ತು. ಅವಿನಾಶ್, ಆಶೀಷ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಕಿಶೋರ್, ಟೆನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ ತಾರಾಗಣದಲ್ಲಿದ್ದರು. ಜನಾರ್ಧನ್ ಮಹರ್ಷಿ ಚಿತ್ರಕ್ಕೆ ಕತೆ ಬರೆದಿದ್ದರು. ಮಹೇಶ್ ಬಾಬು ಚಿತ್ರಕಥೆ ಸಿದ್ಧಪಡಿಸಿದ್ದರು. ಎಂ. ಎಸ್ ರಮೇಶ್ ಸಂಭಾಷಣೆ, ಪ್ರಸಾದ್ ಬಾಬು ಛಾಯಾಗ್ರಹಣ ಚಿತ್ರಕ್ಕಿತ್ತು. ಅಣ್ಣಾವ್ರು, ವರದಪ್ಪ ಕೇಳಿ ಓಕೆ ಮಾಡಿದ ಕೊನೆಯ ಸಿನಿಮಾ ಕತೆ ಇದು. ಕೇವಲ 4 ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲಾಗಿತ್ತು. ಸಹ ನಿರ್ದೇಶಕರಾಗಿದ್ದ ಮಹೇಶ್ ಬಾಬು 'ಆಕಾಶ್' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ನಾಯಕಿ ಪಾತ್ರಕ್ಕೆ ಸಾಕಷ್ಟು ಹೆಸರುಗಳು ಕೇಳಿಬಂದರೂ ಅಂತಿಮವಾಗಿ ರಮ್ಯಾ ಫೈನಲ್ ಆಗಿದ್ದರು. ಕಲ್ಮಶ ಇಲ್ಲದ ಮಧ್ಯಮವರ್ಗದ ಯುವಕನ ಕಥೆ ಚಿತ್ರದಲ್ಲಿದೆ. ಹಾಗಾಗಿ ಶಿವರಾಜ್‌ಕುಮಾರ್ ಸಲಹೆಯಂತೆ ಚಿತ್ರಕ್ಕೆ 'ಆಕಾಶ್' ಎಂಬ ಟೈಟಲ್ ಫಿಕ್ಸ್ ಮಾಡಿದ್ದರು. ಚಿತ್ರದ ಹಾಡುಗಳು ಹಿಟ್ ಆಗಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಹಾಗಾಗಿ ಗೆಲುವು ಸುಲಭವಾಗಿತ್ತು.
'ಜಾಕಿ' ಹಾಗೂ 'ಅಪ್ಪು' ಬಳಿಕ ಪುನೀತ್ ನಟನೆಯ 'ಪರಮಾತ್ಮ' ಚಿತ್ರ ರೀ-ರಿಲೀಸ್ ಮಾಡಬೇಕು ಎಂದು ಅಭಿಮಾನಿಗಳು ಕೇಳುತ್ತಿದ್ದರು. ಆದರೆ ಈ ಬಾರಿ 'ಆಕಾಶ್' ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ' ಸಿನಿಮಾ ಮರುಬಿಡುಗಡೆ ಆಗುವ ನಿರೀಕ್ಷೆಯಿದೆ.





