– ರಾಘವೇಂದ್ರ ಅಡಿಗ ಎಚ್ಚೆನ್

‘ಜೋಗಿ’ ಪ್ರೇಮ್‍ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರವು ಏಪ್ರಿಲ್‍ 30ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದಕ್ಕೂ ಮೊದಲು ಏಪ್ರಿಲ್‍ 22ರ ಬುಧವಾರ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.
‘ನೀವೆಲ್ಲರೂ ನಮಗೆ 2 ಗಂಟೆ 20 ನಿಮಿಷ ಸಮಯ ಕೊಡಿ. ಇದು ಫ್ಯಾಮಿಲಿ ಎಂಟರ್​ಟೇನರ್ ಸಿನಿಮಾ. ಆದರೆ ಸ್ವಲ್ಪ ಕ್ರೌರ್ಯ ಇದೆ. ಏಪ್ರಿಲ್ 30ರಂದು ನಿಮ್ಮನ್ನು ನಂಬಿಕೊಂಡೇ ನಿಮ್ಮ ಮುಂದೆ ಬರುತ್ತಿದ್ದೇವೆ. ಈ ಚಿತ್ರದ ಹೀರೋ ನಾನಲ್ಲ, ನಮ್ಮ ನಿರ್ದೇಶಕರು. ಅವರು ಈ ಚಿತ್ರಕ್ಕೆ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಸಿನಿಮಾ ನೋಡಿದರೆ ನಿಮಗೆ ತಿಳಿಯುತ್ತದೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
‘ಕೆಡಿ: ದಿ ಡೆವಿಲ್’ 1970ರ ದಶಕದ ಬೆಂಗಳೂರಿನ ಒಂದು ಕರಾಳ ಪ್ರಪಂಚದ ಒಂದು ಪ್ರಬಲ ನೋಟವನ್ನೊದಗಿಸಿದೆ. ಅಪರಾಧ, ಅವ್ಯವಸ್ಥೆ ಮತ್ತು ಭಯವನ್ನು ತೋರಿಸುವ ನಗರದ ಭಯಾನಕ ದೃಶ್ಯಗಳೊಂದಿಗೆ ಟ್ರೇಲರ್​ ಪ್ರಾರಂಭವಾಗುತ್ತದೆ. ಧ್ರುವ ಸರ್ಜಾ ಅವರನ್ನು ಭೂಗತ ಲೋಕದಲ್ಲಿ ಏರುವ ಉಗ್ರ ಮತ್ತು ನಿರ್ಭೀತ ಗ್ಯಾಂಗ್​ಸ್ಟರ್ ಕೆಡಿಯಾಗಿ ಪರಿಚಯಿಸಲಾಗಿದೆ. 2 ನಿಮಿಷ 47 ಸೆಕೆಂಡುಗಳ ಟ್ರೇಲರ್​​ ಹೊಡೆದಾಟ, ಸ್ಫೋಟ ಸೇರಿ ಹಲವು ರೂಪದಲ್ಲಿ ತೀವ್ರ ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡಿದೆ.
ಪುನೀತ್ ರಾಜ್​​ಕುಮಾರ್ ಚಿತ್ರದ ಡೈಲಾಗ್;
ವಿಶೇಷ ಎಂದರೆ ಟ್ರೈಲರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಡೈಲಾಗ್ ಇದೆ.ಟ್ರೇಲರ್ ಕ್ಲೈಮ್ಯಾಕ್ಸ್​ ಅಲ್ಲಿ ಧ್ರುವ ಸರ್ಜ ಮಚ್ಚನ್ನು ಹಿಡಿದಿರುತ್ತಾರೆ. ಅವರ ಹೆಗಲೇಮೆಲ ಓರ್ವ ವ್ಯಕ್ತಿಯನ್ನು ಮಲಗಿಸಿಕೊಂಡಿರುತ್ತಾರೆ. ಸುತ್ತಲೂ ಇರೋ ವಿಲನ್​​ಗಳಿಗೆ ಧ್ರುವ ಡೈಲಾಗ್ ಒಂದನ್ನು ಹೇಳುತ್ತಾರೆ. ‘ಮೊದಲನೆಬಾರಿ ಮಚ್ಚು ಹಿಡಿದಿದ್ದೇನೆ.ಅಪ್ಪಿತಪ್ಪಿ ಕೈಕಾಲು ಉಳಿದುಕೊಂಡರೆ ನಿಮ್ಮ ಹೆತ್ತ ತಾಯಿಗೆ ತಪ್ಪಾಯ್ತು ಎಂದು ಹೇಳಿಬಿಡಿ ಅಣ್ಣ’ ಎಂದು ಧ್ರುವ ಸರ್ಜಾ ಉತ್ತರ ಕರ್ನಾಟಕ ಸ್ಟೈಲ್​​ನಲ್ಲಿ ಹೇಳುತ್ತಾರೆ. ಈ ಡೈಲಾಗ್ ಪುನೀತ್ ಸಿನಿಮಾದಲ್ಲೂ ಇತ್ತು. ಪುನೀತ್ ಅವರ ರಾಜ್ ದಿ ಶೋ ಮ್ಯಾನ್’ ಸಿನಿಮಾದಲ್ಲೂ ಇದೇ ರೀತಿಯ ಸಂಭಾಷಣೆ ಬರುತ್ತದೆ. ‘ಅಣ್ಣ ಲೈಫ್ ಅಲ್ಲಿ ಇದೇ ಮೊದಲ ಬಾರಿ ಮಚ್ಚು ಹಿಡಿದಿದ್ದೇನೆ. ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕಬೇಡಿ ಅಣ್ಣ’ ಎಂದು ಹೇಳುತ್ತಾರೆ ಪುನೀತ್. ‘ರಾಜ್ ದಿ ಶೋ ಮ್ಯಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್. ಈ ಕಾರಣದಿಂದಲೇ ಅವರು ‘ಕೆಡಿ’ ಸಿನಿಮಾದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲು ಈ ಡೈಲಾಗ್ ಇಟ್ಟಿರಬಹುದು ಎನ್ನಲಾಗುತ್ತಿದೆ.
ಧ್ರುವ ಸರ್ಜಾ, ರಮೇಶ್‍ ಅರವಿಂದ್‍, ರಕ್ಷಿತಾ ಪ್ರೇಮ್‍, ಅರ್ಜುನ್‍ ಜನ್ಯ ಮುಂತಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ