– ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್ ವುಡ್ ಗೆ ಮತ್ತೆ ಶುಕ್ರದೆಸೆ ಆರಂಭವಾಗಿದೆ ಎನ್ನಬಹುದು,ಇತ್ತೀಚಿಗಷ್ಟೇ
ಖ್ಯಾತ ಉದ್ಯಮಿ ವಿಜಯ್ ಟಾಟಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದು, ಒಟ್ಟೊಟ್ಟಿಗೆ ಆರು ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಚಿತ್ರೋದ್ಯಮಕ್ಕೆ ಬೆನ್ನೆಲುಬಾಗಿ ನಿಲ್ಲಲು ಸಿದ್ಧ ಎಂದು ಚಿತ್ರರಂಗದ ಗಣ್ಯರು ರಾಜಕೀಯದ ನಾಯಕರ ಸಮ್ಮುಖದಲ್ಲಿ ಹೇಳಿದ್ದರು. ಈ ಸಂಸ್ಥೆಯ ಲೋಗೋ ವನ್ನು ನಟ, ನಿರ್ದೇಶಕ , ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಅಂದು ವಿಶೇಷ ಗುರುಪೂರ್ಣಿಮೆಯ ದಿನದಂದು ಹೇಳಿದಂತೆ ಆರು ಚಿತ್ರಗಳ ಪೈಕಿ ಈಗ ಎರಡು ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಮಾಡಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಖ್ಯಾತ ಉದ್ಯಮಿ ವಿಜಯ್ ಟಾಟಾ ಅವರ ನೂತನ ನಿರ್ಮಾಣ ಸಂಸ್ಥೆಯಾದ *ಅಮೃತ ಸಿನಿ ಕ್ರಾಫ್ಟ್* ಮೂಲಕ ಎರಡು ಚಿತ್ರದ ಪೂಜೆಯನ್ನ ಮಾಡಿದ್ದು , ಪ್ರೊಡಕ್ಷನ್ ನಂಬರ್ 2 ನಲ್ಲಿ ದೊಡ್ಮನೆ ಕುಡಿ ವರನಟ ಡಾ. ರಾಜಕುಮಾರ್ ರವರ ಮೊಮ್ಮಗ ವಿನಯ್ ರಾಜಕುಮಾರ್ ನಟನೆಯಲ್ಲಿ ಡಿ.ಎಸ್.ಪಿ ವರ್ಮ ನಿರ್ದೇಶನದ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ತಮ್ಮ ಮೊದಲ ಸಿನಿಮಾ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ಹಾಗೆಯೇ ಮತ್ತೊಂದು ಪ್ರೊಡಕ್ಷನ್ ನಲ್ಲಿ ಮಹಿಳಾ ನಿರ್ದೇಶಕಿ ಮಾನಸ ಸಾರಥ್ಯದಲ್ಲಿ ಚಿತ್ರಕ್ಕೂ ಪೂಜೆ ನೆರವೇರಿಸುವ ಮೂಲಕ ಕೆಲಸಕ್ಕೆ ಮುಂದಾಗಿದ್ದಾರೆ. ಈ ಎರಡು ಚಿತ್ರದ ಕೆಲಸ ವೇಗವಾಗಿ ಚಾಲನೆ ಪಡೆದಿದ್ದು ಆದಷ್ಟು ಬೇಗ ಹೆಚ್ಚಿನ ಮಾಹಿತಿಯನ್ನು ನೀಡುವುದರ ಮೂಲಕ ಚಿತ್ರದ ಮಹೂರ್ತವನ್ನು ನೆರವೇರಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಒಂದು ಪರ್ಫೆಕ್ಟ್ ಪ್ಲಾನ್ ಮೂಲಕ ಚಿತ್ರ ನಿರ್ಮಾಣ ಮಾಡಿದರೆ ಖಂಡಿತ ಯಶಸ್ಸನ್ನ ಕಾಣಬಹುದು ಎಂಬ ನಂಬಿಕೆಯೊಂದಿಗೆ ಬಂದಿರುವಂತಹ ಖ್ಯಾತ ಉದ್ಯಮಿ ವಿಜಯ್ ಟಾಟಾ ಪ್ರಕಾರ ಪ್ರತಿಯೊಂದುಕ್ಕೂ ಪೂರ್ವ ಸಿದ್ಧತೆ ಬಹಳ ಮುಖ್ಯ, ಆ ನಿಟ್ಟಿನಲ್ಲಿ ನಮ್ಮ ತಂಡ ಬಹಳ ಅಚ್ಚುಕಟ್ಟಾದಂತ ಕೆಲಸ ಮಾಡುತ್ತಿದೆ. ನಾವು ಬರೀ ಚಿತ್ರ ನಿರ್ಮಾಣ ಮಾಡುವುದಷ್ಟೇ ಕೆಲಸವಲ್ಲ , ಚಿತ್ರದ ಬಗ್ಗೆ ಮಾರ್ಕೆಟಿಂಗ್ ಮಾಡಿ ಯಾವ ಸಮಯದಲ್ಲಿ ಚಿತ್ರ ರಿಲೀಸ್ ಮಾಡಬೇಕು , ಚಿತ್ರದ ಕಂಟೆಂಟ್ ತಕ್ಕ ಹಾಗೆ ಪ್ರಚಾರ , ಬಿಸಿನೆಸ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಚರ್ಚೆ ಮಾಡಿ ಚಿತ್ರಮಂದಿರಕ್ಕೆ ಬರುತ್ತೇವೆ. ಒಂದಷ್ಟು ರಿಸರ್ಚ್
ಮಾಡಿದ್ದೇವೆ. ಒಳ್ಳೆಯ ಚಿತ್ರಗಳ ನಿರ್ಮಾಣ ಜೊತೆಗೆ ಚಿತ್ರೀಕರಣ ಅರ್ಧಕ್ಕೆ ನಿಂತಿರುವ ಚಿತ್ರಗಳಿಗೂ ಸಾತ್ ಕೊಡಬೇಕು, ಹೊಸ ನಿರ್ದೇಶಕ , ಕಲಾವಿದರಿಗೆ ಅವಕಾಶ ಸಿಗುವಂತಾಗಬೇಕು, ಹಾಗೆಯೇ ಚಿತ್ರವನ್ನ ವಿತರಣೆ ಮಾಡುವದಕ್ಕೂ ನಿರ್ಧಾರ ಮಾಡಿದ್ದೇವೆ. ಅವಶ್ಯಕತೆ ಇರುವ ಚಿತ್ರ ನಿರ್ಮಾಪಕರಿಗೂ ಕೂಡ ಸಾತ್ ನೀಡುವ ಉದ್ದೇಶವಿದೆ. ನಿರಂತರವಾಗಿ ಚಿತ್ರೋದ್ಯಮದಲ್ಲಿ ನಮ್ಮನ್ನ ನಾವು ತೊಡಗಿಸಿಕೊಳ್ಳಬೇಕೆಂಬುದು ನಮ್ಮ ಆಸೆ ಎಂದಿದ್ದಾರೆ. ಸದ್ಯಕ್ಕೆ ಈಗ ಎರಡು ಪ್ರೊಡಕ್ಷನ್ ಸ್ಕ್ರಿಪ್ಟ್ ಪೂಜೆ ಆರಂಭವಾಗಿದ್ದು ಸದ್ಯದಲ್ಲೇ ಮತ್ತಷ್ಟು ಮಾಹಿತಿಯನ್ನು ಸಿದ್ಧತ ಚಿತ್ರ ತಂಡ ನೀಡಲಿದೆ.