ಭಾವನಾ

ಭಾವನಾ ಅಂದಕೂಡಲೇ ಥಟ್ಟನೆ ನೆನಪಿಗೆ ಬರೋದು `ಗಾಳಿಪಟ' ಚಿತ್ರದ ಚಿನಕುರುಳಿ ಪಾತ್ರದ ಹುಡುಗಿ. ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಾವನಾ ಒಬ್ಬ ಉತ್ತಮ ನೃತ್ಯಪಟು ಆಗಿದ್ದರಿಂದ ಭಾವಾಭಿನಯವನ್ನು ಸಲೀಸಾಗಿ ಮಾಡುತ್ತಿದ್ದಳು.

ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿ ಬಂದ ಭಾವನಾ ಒಬ್ಬ ಬಿಝಿ ಮಾಡೆಲ್ ಆಗಿಯೂ ಕಾಣಿಸಿಕೊಳ್ಳುತ್ತಾಳೆ. ಜಾಹೀರಾತುಗಳಲ್ಲಿ ಭಾವನಾಳನ್ನು ಆಗಾಗ್ಗೆ ನೋಡುತ್ತಲೇ ಇರುತ್ತೇವೆ.

`ಯಾವುದೇ ನಟಿಗಾಗಲೀ ತಾನು ಬಯಸುಂಥ ಪಾತ್ರ ಸಿಗುವುದು ಬಹಳ ಕಡಿಮೆ. ಅಂಥರ ಗುಂಪಿಗೆ ನಾನು ಸೇರುತ್ತೇನೆ. ಅಭಿನಯಕ್ಕೆ ಹೆಚ್ಚು ಸ್ಕೋಪ್‌ ಇರುವಂಥ, ಈಗಿನ ಯುವಪೀಳಿಗೆಗೆ ಹತ್ತಿರವಾಗುವಂಥ ಪಾತ್ರಗಳು ಸಿಕ್ಕಾಗ ಖುಷಿಯಾಗುತ್ತೆ,' ಎಂದು ಭಾವನಾ ಹೇಳುತ್ತಾಳೆ.

ಇತ್ತೀಚೆಗೆ ಬಿಡುಗಡೆಗೊಂಡು ಎಲ್ಲರ ಗಮನ ಸೆಳೆದ `ದಯವಿಟ್ಟು ಗಮನಿಸಿ' ಚಿತ್ರದಲ್ಲೂ ಭಾವನಾ ಗಮನಾರ್ಹ ಪಾತ್ರ ಮಾಡಿದ್ದಳು. `ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ ನಟಿಸಿದ್ದ ಭಾವನಾ ಇದೀಗ ಜೋಗಿ ಪ್ರೇಮ್ ಜೊತೆ `ಗಾಂಧಿಗಿರಿ' ಚಿತ್ರದಲ್ಲಿ ನಟಿಸುತ್ತಿದ್ದಾಳೆ.

ಜಾಹೀರಾತುಗಳಲ್ಲಿ ಅತಿ ಹೆಚ್ಚು ಹೆಸರು ಪಡೆದ ಗೋಲ್ಡ್ ವಿನ್ನರ್‌, ಸಂತೂರ್‌, ಎಸ್‌.ವಿ.ಟಿ.ಎಂ. ಜ್ಯೂವೆಲರಿ, ಚೆನ್ನೈ ಸಿಲ್ಕ್ಸ್ ಮತ್ತು ಶಕ್ತಿ ಮಸಾಲ ಆ್ಯಡ್‌ಗಳಲ್ಲಿ ಭಾವನಾ ಮಿಂಚಿದ್ದಾಳೆ. ನೃತ್ಯಪಟು ಆಗಿರುವುದರಿಂದ ತನ್ನದೇ ಆದ ನೃತ್ಯಶಾಲೆ ಪ್ರಾರಂಭಿಸಿರುವ ಭಾವನಾ ಡ್ಯಾನ್ಸ್ ಜೊತೆಗೆ ಫಿಟ್‌ನೆಸ್‌ ಸ್ಟುಡಿಯೋ ಶುರು ಮಾಡಿ ಪರಿಣಿತಿ ಹೊಂದಿರುವಳು. ವಿವಿಧ ಪ್ರಕಾರದ ನೃತ್ಯವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾಳೆ. ಈಗಾಗಲೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾವನಾಳ `ಶ್ಯಾಡೋಸ್‌'ನಲ್ಲಿ ನೃತ್ಯ ಕಲಿಯುತ್ತಿದ್ದಾರಂತೆ.

ತೆಲುಗು ಚಿತ್ರರಂಗದಲ್ಲಿ `ಶಿಖಾ' ಎಂದೇ ಖ್ಯಾತಳಾಗಿರುವ ಭಾವನಾ ಒಂದು ಸಿನಿಮಾದಲ್ಲಿ ವಿಕಲಚೇತನ ಮಗುವಿಗೆ ಅಮ್ಮನ ಪಾತ್ರದಲ್ಲಿ ನಟಿಸಿ ಗಂಭೀರವಾದ ವಿಮರ್ಶೆ ಗಳಿಸಿದ್ದಾಳೆ. ಆಗಿನಿಂದ ಅವಳಿಗೆ ಇಂಥ ವಿಕಲಚೇತನ ಮಕ್ಕಳಿಗಾಗಿ ಏನಾದರೂ ಆರ್ಥಿಕ ಸಹಾಯ ಮಾಡಬೇಕೆಂಬ ದೃಢ ನಿಲುವು ಇದೆಯಂತೆ. ಸಂದರ್ಭ ಸಿಕ್ಕಿದಾಗೆಲ್ಲ ಅಂಥವರಿಗೆ ಹೃತ್ಪೂರ್ವಕ ನೆರವು ನೀಡುತ್ತಿದ್ದಾಳೆ. ಯಾವುದೇ ಪಾತ್ರ ಸಿಕ್ಕಿದರೂ ಭಾವನಾ ಥಟ್ಟನೆ ಒಪ್ಪುವವಳಲ್ಲ. ಅದರಲ್ಲಿ ಪರ್ಫಾರ್ಮೆನ್ಸ್ ಇದ್ದರೆ ಮಾತ್ರ, ಪಾತ್ರ ಚಿಕ್ಕದಾದರೂ ಸಹ ಅದು ಎಲ್ಲರೂ ಗುರುತಿಸುವಂತಿರಬೇಕು ಎಂಬುದು ಅವಳ ಆಯ್ಕೆಯ ವಿಷಯ. ಗ್ಲಾಮರ್‌, ಹೆಸರು, ಹಣಕ್ಕೆ ಎಂದೂ ಮಹತ್ವ ಕೊಟ್ಟವಳಲ್ಲ.

ಎಲ್ಲರಿಗಿಂತ ಮೆಚ್ಚಿನ ಹೀರೋ ಸುದೀಪ್‌. ಮೊದಲಿನಿಂದಲೂ ಕಿಚ್ಚನ ಅಪ್ಪಟ ಅಭಿಮಾನಿಯಾದ ಭಾವನಾ ಒಂದು ಚಿತ್ರದಲ್ಲಾದರೂ ಕಿಚ್ಚನಿಗೆ ನಾಯಕಿಯಾಗುವ ಹಿರಿಯಾಸೆ ಹೊಂದಿದ್ದಾಳೆ. ಫ್ಯಾಷನ್‌ ವಿಷಯದಲ್ಲಿ ಸೀರೆಯೇ ಬೆಸ್ಟ್ ಎನ್ನುವ ಭಾವನಾ, ಅದು ಆಲ್ ಟೈಮ್ ಸೂಟೆಬಲ್ ಎನ್ನುತ್ತಾಳೆ.

ಒಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಲೆಯನ್ನು ಹುಡುಕುವ ಭಾವನಾ ಒಬ್ಬ ಉತ್ತಮ ನಟಿಯಾಗಿ ಇನ್ನಷ್ಟು ಹೆಸರು ಮಾಡಬೇಕೆಂದು ಬಯಸುತ್ತಾಳೆ.

- ಸರಸ್ವತಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ