– ರಾಘವೇಂದ್ರ ಅಡಿಗ ಎಚ್ಚೆನ್.
ಸಿನಿಪ್ರಿಯರ ಬಹುದಿನಗಳ ಕನಸು ನನಸಾಗಿದ್ದು, ಭಾರಿ ಕುತೂಹಲ ಕೆರಳಿಸಿದ ʼಕಾಂತಾರ ಚಾಪ್ಟರ್ 1ʼ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇದರ ಬೆನ್ನಲ್ಲೇ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ, ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕಾಗಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್‌ಗೆ ಧನ್ಯವಾದ ಅರ್ಪಿಸಿದರು.
ʼʼಕಾಂತಾರ ಚಾಪ್ಟರ್ 1ʼ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿರುವ ಸಿನಿಮಾ. ಈ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ಅವರ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನನ್ನ ವೃತ್ತಿ ಜೀವನದ ಮೊದಲ ಹೆಜ್ಜೆಯಲ್ಲಿ ಬೆಂಬಲ ನೀಡಿದ್ದಕ್ಕೆ ಧನ್ಯವಾದʼʼ ಎಂದು ರುಕ್ಮಿಣಿ ತಿಳಿಸಿದರು.
ʼʼರಿಷಬ್ ಶೆಟ್ಟಿ ಅವರಿಗೆ ಎಷ್ಟು ಬಾರಿ ಥ್ಯಾಂಕ್ಸ್ ಹೇಳಿದರೂ ಸಾಲದು. ಈ ಸಿನಿಮಾವನ್ನು ನಾನು ಕೇವಲ ನಟಿಯಾಗಿ ಮಾಡಿಲ್ಲ. ಅಭಿನಯಿಸುತ್ತ ನಾನೂ ಬೆಳೆದಿದ್ದೇನೆ. ಚಿತ್ರ ನನ್ನನ್ನು ತುಂಬ ಬದಲಾಯಿಸಿದೆ. ಇದೆಲ್ಲ ಸಾಧ್ಯವಾಗಿದ್ದ ರಿಷಬ್ ಅವರ ನಂಬಿಕೆ ಮತ್ತು ಪ್ರೋತ್ಸಾಹದಿಂದ. ಡಬ್ಬಿಂಗ್ ಮಾಡುವಾಗ, ಟ್ರೈಲರ್ ನೋಡುವಾಗ ಆ ಬೆಳವಣಿಗೆ ಗಮನಕ್ಕೆ ಬಂತುʼʼ ಎಂದು ಅವರು ಭಾವುಕರಾದರು.
ಮುಂದುವರಿದು, ʼʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಎ ಪ್ರೀಮಿಯರ್‌ನಿಂದ ಹಿಡಿದು ಇಲ್ಲಿ ತನಕ ಪ್ರೋತ್ಸಾಹ ನೀಡಿದ್ದೀರಿ. ನಿಮ್ಮ ತಂಡದಲ್ಲಿ ಅವಕಾಶ ನೀಡಿದ್ದಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಪ್ರಗತಿ ಶೆಟ್ಟಿ ಕೂಡ ಅಷ್ಟೇ ಸಹಕಾರ ನೀಡಿದ್ದಾರೆ. ವಸ್ತ್ರ ವಿನ್ಯಾಸಕಿಯಾಗಿ ಮಾತ್ರವಲ್ಲ ಶೂಟಿಂಗ್‌ನಲ್ಲೂ ನೆರವಾಗಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದ ಭಾಗವಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಎಷ್ಟೇ ಒತ್ತಡ ಇದ್ದರೂ ರಿಷಬ್ ಅದನ್ನು ನಮ್ಮ ಮೇಲೆ ಹೇರುತ್ತಿರಲಿಲ್ಲʼʼ ಎಂದರು.