– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ದೈವ
ನಿರ್ದೇಶನ: ಎಂ. ಜಯರಾಮ್
ನಿರ್ಮಾಣ: ಜಯಮ್ಮ ಪದ್ಮರಾಜ್
ತಾರಾಂಗಣ: ಎಂ ಜಯರಾಜ್, ನೀತು ರಾಯ್, ಸುರಭಿ ರೆಡ್ಡಿ, ನಿಶ್ವಿಕಾ ಶೆಟ್ಟಿ, ಬಲ ರಾಜವಾಡಿ, ಮಂಜುನಾಥ್ ಸೂರ್ಯ ಮತ್ತಿತರರು
ರೇಟಿಂಗ್: 3/5
“ದೈವ” ಎನ್ನುವುದೊಂದು ಹಳ್ಳಿಯ ಕಥೆ. ಜಮೀನ್ದಾರಿ ಪದ್ದತಿ, ಸಾಲದ ನೆಪದಲ್ಲಿ ರೈತರ ಸುಲಿಗೆ ಎಲ್ಲದರ ಜೊತೆಗೆ ಜೋಗಿ ಪರಂಪರೆಯ ಕಥೆಯೂ ಇಲ್ಲಿದೆ. ಅದೊಂದು ಹಳ್ಳಿ ಅಲ್ಲಿ ಶಾಲೆ ಇದ್ದರೆ ಮಕ್ಕಳು ಓದಿ ವಿದ್ಯಾವಂತರಾದರೆ ತಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎನ್ನುವ ಕಾರಣಕ್ಕೆ ಶಾಲೆ ತೆರೆಯಲು ಬಿಡದ ಜಮೀನ್ದಾರ ಕಾಳೇಗೌಡ (ಬಲ ರಾಜವಾಡಿ) ಊರಿನ ಹೆಣ್ಣುಗಳ ಮೇಲೆ ಕಣ್ಣು ಹಾಕುವ ಅವನ ಮಗ ರುದ್ರ (ಅರುಣ್) ಇವರಂತಹವರಿಗೆ ಹೆದರಿ ತಾವು ಬೆಳೆದ ಬೆಳೆಯನ್ನು ಜಮೀನ್ದಾರನ ಸಾಲಕ್ಕೆ ಎಂದು ಅವನ ಪಾಲಿಗೊಪ್ಪಿಸಿ ಕಷ್ಟ ಸಹಿಸಿ ಬದುಕುವ ಮಂದಿ. ಅವರೆಲ್ಲರ ನಡುವೆ ಶಿವಾನುಗ್ರಹದಿಂಡ ಹುಟ್ಟಿದ ದೇವ (ಎಂಜೆ ಜಯರಾಜ್) ಅವನೂ ಕಾಳೇಗೌಡನ ಜೊತೆಗೆ ಬಲಗೈಯಾಗಿ ನಿಂತಿರುತ್ತಾನೆ. ಅದು ಕಾಳೇಗೌಡನ ದಬ್ಬಾಳಿಕೆಗೆ ಮತ್ತಷ್ಟು ಬಲ ತುಂಬುತ್ತದೆ. ಇಂತಹಾ ವೇಳೆಯಲ್ಲಿ ರುದ್ರ ತನ್ನ ಅಕ್ಕನನ್ನು ಕೊಂದಿದ್ದಾನೆ ಎಂದು ಕೇಸ್ ಓಪನ್ ಮಾಡಿಸಲು ಮೌಲ್ಯ (ನಿಶ್ವಿಕಾ) ಆಗಮನವಾಗುತ್ತದೆ. ಅಲ್ಲಿಂದ ಮುಂದೆ ದೇವನ ಬಾಲ್ಯದ ಗೆಳತಿ ಕಾಳೇಗೌಡನ ಪುತ್ರಿ ಸೃಷ್ಟಿ ಊರಿಗೆ ಬರುತ್ತಾಳೆ ಇಲ್ಲಿಂದ ಕಥೆಯಲ್ಲಿ ನಾನಾ ತಿರುವು,, ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ದೇವನ ಬಾಲ್ಯದಲ್ಲಿ ಕಂಡ ಕಷ್ಟಗಳು ಜಮೀನ್ದಾರನ ದಬ್ಬಾಳಿಕೆ, ರೈತನ ಸಮಸ್ಯೆ ಎಲ್ಲವೂ ಇಲ್ಲಿದೆ. ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ಒಂದು ಸಂದೇಶವೂ ಇದೆ.
ಬಡವ ಶ್ರೀಮಂತರ ನಡುವಿನ ವ್ಯತ್ಯಾಸ, ಬಡವರು ತಿರುಗಿ ಬಿದ್ದರೆ ಏನಾಗುತ್ತದೆ ಎನ್ನುವುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇಳಿದ್ದಾರೆ. ಆದರೆ ಈ ಕಥೆಯಲ್ಲಿ ಯಾವ ಹೊಸತನವಿಲ್ಲ ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಸಂಭಾಷಣೆ ಗಮನ ಸೆಳೆಯುವಂತಿದೆ. ಸಂಗೀತ, ಛಾಯಾಗ್ರಹಣ, ಸಂಕಲನ ಕಥೆಗೆ ಪೂರಕವಾಗಿದೆ. ಜಯರಾಜ್ ಸ್ವತಃ ನಿರ್ದೇಶನ ಮಾಡಿದ್ದು ತಾವೇ ನಾಯಕನಾಗಿ ಸಹ ಅಭಿನಯಿಸಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ನಾಯಕನಾಗಿ ಅವರು ಗಮನ ಸೆಳೆಯುತ್ತಾರೆ. ನಾಯಕಿಯರು ಮೂವರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಖಳನಾಯಕರಾಗಿ ಬಲ ರಾಜವಾಡಿ ಹಾಗೂ ಅರುಣ್ ಮಿಂಚಿದ್ದಾರೆ. ಎನ್.ಜಿ.ಒ. ಶಿಕ್ಷಕರಾಗಿ ಮಂಜುನಾಥ್ ಸೂರ್ಯ ಅಭಿನಯ ಚೆನ್ನಾಗಿ ಬಂದಿದೆ. ಉಳಿದ ಪಾತ್ರವರ್ಗ ತಾವು ಕಥೆಗೆ ತಕ್ಕಂತೆ ಅಭಿನಯಿಸಿದ್ದಾರೆ.,
ಒಟ್ಟಾರೆ ಹೊಸ ಪ್ರತಿಭೆಗಳು ಸೇರಿ ಹಳೆಯದೆನ್ನಬಹುದಾದ ಕಥೆಯೊಂದನ್ನು ಮತ್ತೆ ತೆರೆ ಮೇಲೆ ತೀರಿಸಿದ್ದಾರೆ. ಆದರೆ ಯಾವ ಜಂಜಡವಿಲ್ಲದೆ ಸಾಮಾನ್ಯ ಮನರಂಜನೆ ಚಿತ್ರ ನೋಡಬೇಕೆನ್ನುವವರಿಗೆ “ದೈವ” ಉತ್ತಮ ಆಯ್ಕೆ ಆಗುತ್ತದೆ.





