- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ನಟ ದಿಗಂತ್ ಇದೀಗ ತೆಲುಗು ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳಿಗಾಗಿ ಬಹಿರಂಗವಾಗಿ ಮನವಿ ಮಾಡಿದ್ದಾರೆ. ಸಮಂತಾ ನಟನೆಯ ಬಹುನಿರೀಕ್ಷಿತ ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ದಿಗಂತ್, ತೆಲುಗು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ನೇರವಾಗಿ ಮತ್ತೊಂದು ಅವಕಾಶ ನೀಡುವಂತೆ ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ದಿಗಂತ್, ತಾವು ಬೆಂಗಳೂರಿನವರಾಗಿದ್ದು ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಈ ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕಿ ನಂದಿನಿ ರೆಡ್ಡಿ ಹಾಗೂ ನಟಿ ಸಮಂತಾ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.
‘ಸಮಂತಾ ಅವರ ಕೆಲಸವನ್ನು ನಾನು ಹಲವು ವರ್ಷಗಳಿಂದ ಮೆಚ್ಚಿಕೊಂಡು ಬಂದಿದ್ದೇನೆ. ನಂದಿನಿ ರೆಡ್ಡಿ ನಿರ್ದೇಶನದ ‘ಓಹ್ ಬೇಬಿ’ ಸಿನಿಮಾ ನನಗೆ ತುಂಬಾ ಇಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಂತಸದ ವಿಚಾರ’ ಎಂದು ಹೇಳಿದರು.
ಭಾಷಣದ ಕೊನೆಯಲ್ಲಿ ಮಾತನಾಡಿದ ದಿಗಂತ್, ‘ನನಗೆ ಮತ್ತೆ ಅವಕಾಶ ನೀಡುತ್ತೀರಾ?’ ಎಂದು ಸಭಿಕರನ್ನು ಪ್ರಶ್ನಿಸಿದರು. ಬಳಿಕ ‘ನನ್ನನ್ನು ನಾನು ಮತ್ತೊಮ್ಮೆ ಸಾಬೀತು ಮಾಡಿಕೊಳ್ಳಲು ಇನ್ನೊಂದು ಅವಕಾಶ ಕೊಡಿ’ ಎಂದು ಮನವಿ ಮಾಡಿದರು.
ಕೆಲ ದಿನಗಳ ಹಿಂದೆ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಕಡಿಮೆಯಾಗುತ್ತಿರುವುದು ಹಾಗೂ ಅವಕಾಶಗಳ ಕೊರತೆಯಿಂದ ಬಾಡಿಗೆ ಆದಾಯದ ಮೇಲೆಯೇ ಜೀವನ ಸಾಗಿಸುವಂತಾಗಿದೆ ಎಂದು ದಿಗಂತ್ ಹೇಳಿಕೊಂಡಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಅವರು ಮುಂದಾಗಿರುವುದು ಗಮನ ಸೆಳೆದಿದೆ.





