- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಮಗ್ಗಿಪುಸ್ತಕ
ನಿರ್ದೇಶನ: ಹರಿವರಾಸನಂ
ನಿರ್ಮಾಣ: ಚಿನ್ನಸ್ವಾಮಿ ಫಿಲಂಸ್
ತಾರಾಂಗಣ: ರಂಜಿತ್ ಕಾಸರಗೋಡು, ರಾನ್ವಿ ಶೇಖರ್, ರಕ್ಷಾ ಗೌಡ, ಕೃಷ್ಣ ಮಹೇಶ್ ವರ್ಧನ್ ತೀರ್ಥಹಳ್ಳಿ, ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಮೊದಲಾದವರು
ರೇಟಿಂಗ್: 3.5/5
ಮೈಸೂರಿನಲ್ಲೊಂದು ಕುಟುಂಬ. ತಂದೆ ನಿಧನದ ನಂತರ ಆವನಿ (ರಾನ್ವಿ ಶೇಖರ್) ಸೇರಿದಂತೆ ಇಬ್ಬರು ಹೆಣ್ಣುಮಕ್ಕಳು ಸೇರಿ ಮೂವರನ್ನು ಸಾಕಿಕೊಂಡಿರುವ ತಾಯಿ. ಬಡತನ ಇದ್ದರೂ ಅವನಿಗೆ ವಿದ್ಯಾಭ್ಯಾಸ ಕೊಡಿಸನೇಕು ಅವಳು ಎಸ್.ಎಸ್.ಎಲ್.ಸಿ. ಮಾಡಬೇಕು ಎನ್ನುವುದು ಅವನಿಯ ತಂದೆಯ ಕಡೆಯಾಸೆ. ಅದಕ್ಕಾಗಿ ತಾಯಿ ಹಗಲಿರುಳು ಮನೆಗೆಲಸ, ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಾ ಜೀವನ ಸವೆಸುತ್ತಿರುತ್ತಾಳೆ. ಅದೇ ಸಮಯದಲ್ಲಿ ಕೊರೋನಾ ಬಂದು ತರಗತಿಗಳು ನಿಂತಾಗ ಆನ್ ಲೈನ್ ತರಗತಿ ಪ್ರಾರಂಭವಾಗಿರುತ್ತದೆ. ಆದರೆ ಈ ಅವನಿ ಕುಟುಂಬದಲ್ಲಿ ಸ್ಮಾರ್ಟ್ ಫೋನ್ ಇರುವುದಿಲ್ಲ ಹಾಗಾಗಿ ಆನ್ ಲೈನ್ ತರಗತಿಗೆ ಹಾಜರಾಗಲು ಆಗುವುದಿಲ್ಲ. ಅದಕ್ಕಾಗಿ ಅವನಿ ವಿಧ ವಿಧದ ಪ್ರಯತ್ನ ನಡೆಸಿ ಕಷ್ಟ ಎದುರಿಸುತ್ತಾಳೆ. ಕಡೆಗೂ ಮೊಬೈಲ್ ಒಂದು ಸಿಕ್ಕುತ್ತದೆ... ಮುಂದೇನು? ಅವಳು ಎಸ್.ಎಸ್.ಎಲ್.ಸಿ. ಪಾಸ್ ಆಗುವ ಮೂಲಕ ತಂದೆಯ ಆಸೆ ನೆರವೇರಿತೆ? ಅದಕ್ಕಾಗಿ ಆಕೆ ಅನುಭವಿಸಿದ್ದ ನಾನಾ ಕಷ್ಟಗಳು ಅಂತ್ಯವಾಗಿ ಹೋದವೆ? ಇದುವೇ ಮಗ್ಗಿಪುಸ್ತಕ ಸಿನಿಮಾದ ಪ್ರಮುಖ ಕಥಾನಕ.
ಅವನಿ ಪಾತ್ರದಲ್ಲಿ ರಾನ್ವಿ ಶೇಖರ್ ಉತ್ತಮವಾಗಿ ಅಭಿನಯಿಸಿದ್ದಾರೆ. ಸಾಮಾನ್ಯ ಬಡ ಕುಟುಂಬದ ಹೆಣ್ನಾಗಿ ಅವರ ಪಾತ್ರ ಇಡೀ ಕಥೆಯಲ್ಲಿ ಜೀವಾಳವಾಗಿದೆ. ಅದಲ್ಲದೆ ಅವರ ತಾಯಿಯ ಪಾತ್ರದಲ್ಲಿ ರಕ್ಷಾ ಗೌಡ ಸಹ ಅಷ್ಟೇ ಉತ್ತಮವಾಗಿ ನಟಿಸಿದ್ದಾರೆ. ದಡ್ಡ ಪ್ರವೀಣ್ ಖ್ಯಾತಿಯ ರಂಜಿತ್ ಕಾಸರಗೋಡು ಚಿತ್ರದ ದ್ವಿತೀಯಾರ್ಧದಲ್ಲಿ ಬಂದರೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆಯುತ್ತಾರೆ. ಉಳಿದಂತೆ ಬೇರೆಲ್ಲಾ ಪಾತ್ರವರ್ಗ ಕಥೆಗೆ ತಕ್ಕಂತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಜೀವನವೇ ಒಂದು ಲೆಕ್ಕಾಚಾರ ಅದುವೇ ಮಗ್ಗಿ ಪುಸ್ತಕ ಎನ್ನುವುದನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ. ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಚಿತ್ರ ಇದಾಗಿದೆ. ಅದರಲ್ಲಿಯೂ ಮೊಬೈಲ್ ಅತಿಯಾದ ಬಳಕೆಯಿಂದ ಇಂದಿನ ಮಕ್ಕಳು ಏನೆಲ್ಲಾ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ ಎನ್ನುವುದನ್ನು ವಿವರಿಸಲಾಗಿದೆ. ಚಿತ್ರದ ಪ್ರಥಮಾರ್ಧ ಸ್ವಲ್ಪ ಸುದೀರ್ಘ ಎನಿಸಿದರೂ ದ್ವಿತೀಯಾರ್ಧ ಹಾಗೂ ಕ್ಲೈಮ್ಯಾಕ್ಸ್ ಉತ್ತಮ ಸಂದೇಶ ಹೊಂದಿದೆ.

ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯ ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಹಾಡುಗಳ ಪೈಕಿ ಮೊಬೈಲ್ ಗೀಳನ್ನು ಹೇಳುವ ಹಾಡು ಹಾಗೂ ಅಪ್ಪನ ಕುರಿತಂತೆ ಇರುವ ಹಾಡುಗಳು ಹೆಚ್ಚು ಗಮನ ಸೆಳೆಯುತ್ತದೆ. ನಂದಕುಮಾರ್ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಸಂಕಲನ ಉತ್ತಮವಾಗಿದೆ.





