ಕುದುರೆ ಸವಾರಿ ಭಲೇ ಮಜಾ!

ಶ್ರೀದೇವಿಯ ಶೋಕ ಸಭೆಗೆ ನಸುನಗುತ್ತಾ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ‌ಆಗಿ ಟೀಕೆಗೆ ಒಳಗಾದ ಜ್ಯಾಕ್ಲಿನ್‌ ಇದೀಗ ಕುದುರೆ ಸವಾರಿ ಕಲಿಯುತ್ತಿದ್ದಾಳಂತೆ. ಈಗಾಗಲೇ ಪೋಲ್‌ ಡ್ಯಾನ್ಸಿಂಗ್‌, ಪಿಯಾನೋ ನುಡಿಸಿದ್ದಾಯಿತು. ಜ್ಯಾಕ್ಲಿನ್‌ ಇದೀಗ ತಾನೇ ಸಲ್ಮಾನ್‌ ಖಾನ್‌ ಜೊತೆ `ರೇಸ್‌’ ಚಿತ್ರೀಕರಣ ಮುಗಿಸಿ ಮತ್ತೊಂದು ಚಿತ್ರಕ್ಕೆ ರೆಡಿ ಆಗಿದ್ದಾಳೆ.

ರಣವೀರ್‌ ಎಂಥ ಅಭ್ಯಾಸಕ್ಕೂ ರೆಡಿ

ಇತ್ತೀಚೆಗೆ ರಣವೀರ್‌ ಸಿಂಗ್‌ ಸದಾ ಪೊಲೀಸ್‌ ಠಾಣೆಗೆ ಎಡತಾಕುತ್ತಿದ್ದಾನಂತೆ. ಅಯ್ಯೋ… ತಪ್ಪು ಊಹಿಸಬೇಡಿ, ಈತ ತನ್ನ ಮುಂದಿನ `ಸಿಂಬಾ’ ಚಿತ್ರದಲ್ಲಿ ಇನ್‌ಸ್ಪೆಕ್ಟರ್‌ ಪಾತ್ರ ವಹಿಸಲಿರುವುದರಿಂದ ಹೀಗಾಗಿದೆ ಅಷ್ಟೆ. `ಪದ್ಮಾವತ್‌’ ಚಿತ್ರದಲ್ಲಿ ನೆಗೆಟಿವ್‌ಪಾತ್ರ ವಹಿಸಿದ್ದರೂ, ವಿಮರ್ಶಕರಿಂದ ಪ್ರಶಂಸೆ ಗಿಟ್ಟಿಸಿದ್ದ. ಆ ಕುರಿತಾಗಿ ಈತ, “ನಾನು ಯಾವುದೇ ಪಾತ್ರ ವಹಿಸಲಿ, ಅದನ್ನು ಹೃದಯ ಪೂರ್ವಕವಾಗಿ ನಿಭಾಯಿಸುತ್ತೇನೆ. ಆ ಪಾತ್ರದ ಪರಕಾಯ ಪ್ರವೇಶ ಮಾಡಲು ಎಂಥ ಕಠಿಣ ಅಭ್ಯಾಸಕ್ಕೂ ರೆಡಿ,” ಎನ್ನುತ್ತಾನೆ.

ಕತ್ರೀನಾ ಅಭಯ್‌ ಮುಂದುವರಿದ ರೊಮಾನ್ಸ್

`ಜಬ್‌ ತಕ್‌ ಹೈ ಜಾನ್‌’ ಚಿತ್ರದಲ್ಲಿ ಶಾರೂಖ್‌ ಜೊತೆ ರೊಮಾನ್ಸ್ ಮುಗಿಸಿದ್ದ ಕತ್ರೀನಾ, ಈಗ ಆತನ ಎದುರೇ ಇನ್ನೊಬ್ಬರ ಜೊತೆ ಲವ್ ಸಾಂಗ್ಸ್ ಹಾಡಲಿದ್ದಾಳೆ. ಆನಂದ್‌ ರಾಯ್‌ರ `ಝೀರೋ’ ಚಿತ್ರದಲ್ಲಿ ಶಾರೂಖ್‌ ಬದಲು ಅಭಯ್‌ ಡಿಯೋಲ್ ‌ಜೊತೆ ರೊಮಾನ್ಸ್ ನಡೆಸಲಿದ್ದಾಳೆ. ನಂಬಲರ್ಹ ಮೂಲಗಳ ಪ್ರಕಾರ ಈಕೆ ಈ ಚಿತ್ರದಲ್ಲಿ ಆಲ್ಕೋಹಾಲಿಕ್‌ ಅಡಿಕ್ಟ್ ಪಾತ್ರ ಮಾಡುತ್ತಿದ್ದಾಳೆ. ಇವಳ ಈ ಚಾಳಿ ಬಿಡಿಸುವುದೇ ಶಾರೂಖ್‌ ಕೆಲಸವಂತೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮ ವಿಜ್ಞಾನಿಯ ಪಾತ್ರ  ವಹಿಸುತ್ತಾಳಂತೆ.

ಸನೀ ಈಗ ಅವಳಿ ಮಕ್ಕಳ ತಾಯಿ

ಸನೀ ಲಿಯೋನ್‌ ಈ ಬಾರಿ ತನ್ನ ಹಾಟ್‌ನೆಸ್‌ಗೆ ಬದಲಾಗಿ, ತನ್ನ ಅವಳಿ ಮಕ್ಕಳಿಂದಾಗಿ ಸುದ್ದಿಯಲ್ಲಿದ್ದಾಳೆ. ಕಳೆದ ವರ್ಷ 2 ವರ್ಷದ ಹೆಣ್ಣುಮಗುವನ್ನು ದತ್ತು ಪಡೆದ ಈಕೆ, ಬಾಡಿಗೆ ತಾಯಿಯ ನೆರವು ಪಡೆದು ಅವಳಿ ಮಕ್ಕಳ ಜೈವಿಕ ತಾಯಿ ಆಗಿದ್ದಾಳೆ. ಶಾರೂಖ್‌, ಕರಣ್‌ ಜೋಹರ್‌, ತುಷಾರ್‌ ಕಪೂರ್‌ ನಂತರ ಸನೀ ಪತಿ ಡೇನಿಯರ್‌ ಜೊತೆಗೂಡಿ ಸರೋಗೆಸಿಯಿಂದ ಜೈವಿಕ ತಾಯಿ ಎನಿಸಿದ್ದಾಳೆ. ಇದಕ್ಕೆ ಸುಮ್ಮನಿರಲಾರದ ರಾಖಿ ಸಾವಂತ್‌, `ನೀನು ಯಾವಾಗ ಬಸುರಾದೆ? ಮಕ್ಕಳನ್ನು ಯಾವಾಗ ಹಡೆದೆ?’ ಎಂದವಳಿಗೆ ಸರೋಗೆಸಿಯ ತಲೆಬುಡ ಗೊತ್ತಿಲ್ಲ ಎಂಬುದನ್ನು ಇಡೀ ಬಾಲಿವುಡ್‌ಗೆ ಗೊತ್ತಾಗಿಸಿ, ಇಂಗು ತಿಂದ ಮಂಗನಂತಾದಳು.

ರಾಣಿಯ ಅಲಂಕಾರ

ಮನೆಯವರ ಕೋಪಕ್ಕೆ ಮೂಲ ತನ್ನ ಮಗಳು, ಕುಟುಂಬದ ಕಾರಣ ಬಾಲಿವುಡ್‌ನಿಂದ 4 ವರ್ಷ ದೂರವಿದ್ದ ರಾಣಿ ಮುಖರ್ಜಿ, ತನ್ನ ಮುಂದಿನ `ಹಿಚ್ಕಿ’ ಚಿತ್ರಕ್ಕಾಗಿ ರೀಬ್ಯಾಕ್‌ ಆಗಿದ್ದಾಳೆ. ಆಕೆ ಚಿತ್ರದ ಶೂಟಿಂಗ್‌ ಮುಗಿಸಿ ಮನೆಗೆ ಹೊರಟಾಗೆಲ್ಲ, ಮನೆಗೆ ಹೋದ ತಕ್ಷಣ ತನ್ನ ಮೇಕಪ್‌ ತೆಗೆಯಲು ಕೂರುತ್ತಾಳಂತೆ. ಅದೇ ಮೇಕಪ್‌ನಲ್ಲಿ ಕುಳಿತರೆ, ಪತಿ ಆದಿತ್ಯ ಹಾಗೂ ಮಗಳು ಆದಿರಾ ಮುಖ ತಿರುಗಿಸುತ್ತಾರಂತೆ. ರಾಣಿ ಹೇಳುತ್ತಾಳೆ, ಮಗಳನ್ನು ಶೂಟಿಂಗ್‌ ಸ್ಪಾಟ್‌ಗೆ ಕರೆದೊಯ್ದು, ಅಲ್ಲಿ ಅವಳನ್ನು ಮಲಗಿಸಿದ ನಂತರವೇ ನನ್ನ ಶೂಟಿಂಗ್‌ ಮುಂದುರಿಸುತ್ತೇನೆ, ಎನ್ನುತ್ತಾಳೆ.

ಅಂತೂ ನಿಧಿಗೊಂದು ಚಿತ್ರ ಸಿಕ್ಕಿತು

`ಮುನ್ನಾ ಮೈಕೆಲ್’ ಚಿತ್ರದಲ್ಲಿ ಟೈಗರ್‌ ಶ್ರಾಫ್‌ಗೆ ನಾಯಕಿಯಾದ ನಿಧಿ, ಆ ಚಿತ್ರ ತೋಪಾದ್ದರಿಂದ ಮನೆಯಲ್ಲಿ ನೊಣ ಓಡಿಸುತ್ತಾ ಕುಳಿತಿದ್ದಳು. ಮೊದಲ ಚಿತ್ರವೇ ಹೀಗಾದದ್ದು ಅವಳ ದುರಾದೃಷ್ಟವೇ ಸರಿ. ಹೀಗಾಗಿ ನಿರ್ಮಾಪಕರು ಇವಳಿಗೆ ಹೊಸ ಆಫರ್‌ನೀಡಲೇ ಇಲ್ಲ. ಅಂತೂ ನಿರ್ದೇಶಕ ನಾರಾಯಣ್‌ ಸಿಂಗ್‌ ಇವಳಿಗೆ `ಏಕ್‌ ಪ್ರೇಮ್ ಕಥಾ’ ಚಿತ್ರದಲ್ಲಿ ಚಾನ್ಸ್ ಕೊಟ್ಟಿದ್ದರಿಂದ, ಅಂತೂ ನಿಧಿಗೊಂದು ಚಿತ್ರ ಸಿಕ್ಕಿತು!

ಇಂದಿನ ಆಧುನಿಕ ಚಿತ್ರಗೀತೆಗಳು ಹೆಣ್ಣನ್ನು ಅಗೌರವಿಸುತ್ತಿವೆ

ಸದಾ ತಮ್ಮ ಖಡಕ್‌ ಹೇಳಿಕೆಗಳಿಂದ ಹೆಸರಾಗಿರುವ ಶಬಾನಾ ಆಜ್ಮಿ, “ಇತ್ತೀಚಿನ ಚಿತ್ರಗಳ ಐಟಂ ಸಾಂಗ್‌ ಸಾಹಿತ್ಯ ಕಂಡು ಬಹಳ ದುಃಖವಾಗುತ್ತದೆ. ಎಲ್ಲದರಲ್ಲೂ ಹೆಣ್ಣನ್ನು ಸೆಕ್ಸಿ ಸಿಂಬಲ್ ಆಗಿರಿಸಿದ್ದಾರೆ. ಇಂಥ ಹಾಡು ಕೇಳಿದರೆ ಕೆಂಡದಂಥ ಸಿಟ್ಟು ಬರುತ್ತದೆ. `ಮೈ ತಂದೂರಿ ಮುರ್ಗಿ ಹ್ಞೂಂ…. ಮುಝೆ ಘಟಕ್‌ಲೋ ಆಲ್ಕೋಹಾಲ್ ‌ಕೆ ಸಾಥ್‌….’ ಮುಂತಾದ ಹಾಡುಗಳನ್ನು ಕೇಳಿದಾಗ ಅಸಹ್ಯ ಉಕ್ಕುತ್ತದೆ. ಇಂಥ ಹಾಡುಗಳನ್ನು ಚಿತ್ರರಂಗ ಖಂಡಿತಾ ದೂರವಿಡಬೇಕು. ಪಬ್ಲಿಸಿಟಿ ಹೆಸರಿನಲ್ಲಿ ಹೆಣ್ಣನ್ನು ಅಗೌರವಿಸುವ ಹಕ್ಕು ಯಾರಿಗೂ ಇಲ್ಲ!” ಎನ್ನುತ್ತಾರೆ.

ಮೆಂಟಲ್ ಅಲ್ಲ ತಾನೇ ಎಂದ ಕಂಗನಾ

ಕಂಗನಾ ರಾಣಾವತ್‌ ತನ್ನ ಹಿಂದಿನ ಆ್ಯಟಿಟ್ಯೂಡ್‌ನಲ್ಲಿ ಮತ್ತೆ ಕಾಣಿಸಲಿದ್ದಾಳೆ. `ಮಣಿಕರ್ಣಿಕಾ : ದಿ ಕ್ವೀನ್‌ ಆಫ್‌ ಝಾನ್ಸಿ’ ಶೂಟಿಂಗ್‌ನಿಂದ ಫ್ರೀ ಆದ ಮೇಲೆ ರಾಜ್‌ಕುಮಾರ್‌ ರಾವ್ ಜೊತೆ `ಮೆಂಟಲ್ ಹೈ ಕ್ಯಾ?’ ಚಿತ್ರದ ನಾಯಕಿ ಆಗಿದ್ದಾಳೆ. ತಮಿಳು ನಿರ್ಮಾಪಕರ ಮೊದಲ ಹಿಂದಿ ಚಿತ್ರವಿದು. ಈ ಚಿತ್ರದ ಕಥೆ, ಮಾನಸಿಕವಾಗಿ ಅಸ್ವಸ್ಥಳಾದ ಒಬ್ಬ ಮಹಿಳೆಯ ಕುರಿತಾದುದಂತೆ.

25 ಕೋಟಿ ಮೌಲ್ಯದ ಒಂದೇ ಸೀನ್‌ಗೆ ಶ್ರದ್ಧಾಳ ಆ್ಯಕ್ಷನ್‌

ಬಾಹುಬಲಿ ಖ್ಯಾತಿಯ ಪ್ರಭಾಸ್‌ರ `ಸಾಹೋ’ ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರದ ಶೂಟಿಂಗ್‌ ಭರದಿಂದ ಸಾಗಿದೆ. ತೆಲುಗು ಮೂಲದ ಈ ಚಿತ್ರ ತಮಿಳು, ಹಿಂದಿಯಲ್ಲೂ ಡಬ್‌ ಆಗುತ್ತಿದೆ. ಮೂರೂ ಕಡೆ ಸಲ್ಲಬಲ್ಲ ನಾಯಕಿಯ ಆಯ್ಕೆಗಾಗಿ ನಿರ್ದೇಶಕರು ಪಡಬಾರದ ಪಾಡುಪಟ್ಟರಂತೆ…..! ಅಂತೂ ಕೊನೆಗೆ ಶ್ರದ್ಧಾ ಕಪೂರ್‌ ಆಯ್ಕೆಯಾದಳು.ಈ ಚಿತ್ರದ ಎಲ್ಲಾ ಆ್ಯಕ್ಷನ್‌ಗಳನ್ನೂ ಪ್ರಭಾಸ್‌ ತಾವೇ ಸ್ಟಂಟ್‌ ನಟರ ನೆರವಿಲ್ಲದೆ ಮಾಡಿದ್ದಾರೆ. ಒಂದು ದೃಶ್ಯಕ್ಕಾಗಿ ಈ ಚಿತ್ರಕ್ಕೆ 25 ಕೋಟಿ ರೂ. ವೆಚ್ಚ ಮಾಡಿದ್ದಾರಂತೆ. ಇದಕ್ಕಾಗಿ ಬಾಲಿವುಡ್‌ನ ಆ್ಯಕ್ಷನ್‌ ಡೈರೆಕ್ಟರ್‌ ಕ್ಯಾನಿ ಬೇಟ್ಸ್ ರ ನೆರವು ಪಡೆಯಲಾಯಿತು. `ಬಾಹುಬಲಿ’ ಚಿತ್ರಕ್ಕಿಂತಲೂ `ಸಾಹೋ’ ಇನ್ನೂ ಅದ್ಧೂರಿ ಆಗಬೇಕೆಂಬುದು ನಿರ್ಮಾಪಕರ ಹೆಬ್ಬಯಕೆ.

ಭೂಮೀಯ ಹೆಬ್ಬಯಕೆ…..

ಆಯುಷ್ಮಾನ್‌ ಜೊತೆ ಫಿಲ್ಮೀ ಕೆರಿಯರ್‌ ಆರಂಭಿಸಿದ ಭೂಮೀ ಪೆಡ್ನೇಕರ್‌, ಇಬ್ಬರೂ ಒಟ್ಟಿಗೆ `ಶುಭ‌ಮಂಗಲ್ ಸಾವಧಾನ್‌’ ಟಿ.ವಿ ಶೋನಲ್ಲಿ ಕಾಣಿಸಿಕೊಂಡಾಗ, ಆ್ಯಂಕರ್‌ ನೇಹಾ ಮೊದಲು ಆಯುಷ್ಮಾನ್‌ನನ್ನು ಸೆಕ್ಸ್ ಇಲ್ಲದೆ ಎಷ್ಟು ದಿನ ಇರಬಲ್ಲೆ ಎಂದು ಕೇಳಿದಾಗ, ಎಷ್ಟು ದಿನ ತಾನು ಶೂಟಿಂಗ್‌ಗಾಗಿ ಔಟ್‌ಡೋರ್‌ ಹೋಗುತ್ತೇನೋ, ಅಷ್ಟು ದಿನ ಇರಬಲ್ಲೆ ಎಂದ. ಇದೇ ಪ್ರಶ್ನೆಯನ್ನು ಭೂಮೀಗೆ ಕೇಳಿದಾಗ, ಅವಳು ಉತ್ತರಿಸುವ ಮೊದಲೇ ಇವನೇ, ಕೇವಲ 1 ಗಂಟೆ ಮಾತ್ರ ಅವಳು ಸೆಕ್ಸ್ ಬಿಟ್ಟಿರಬಲ್ಲಳು ಎಂದುಬಿಟ್ಟ! ಯಾರು ಭೂಮೀ ಜೊತೆ ಡೇಟ್‌ಗೆ ಹೊರಡುತ್ತಾರೋ ಅವರಿಗೆ ಇದು ಸ್ಪಷ್ಟವಾಗಲಿದೆ ಎಂದಾಗ, ಆಕೆ ಅದನ್ನು ಅಲ್ಲಗಳೆಯಲಿಲ್ಲ.

ದಬಂಗ್‌ ಗರ್ಲ್ ಆಯುಷ್ಮಾನ್‌ರ ಲವ್ವಿಡವ್ವಿ

`ದಬಂಗ್‌’ ಚಿತ್ರದಲ್ಲಿ ಬಬಿತಾ ಪಾತ್ರ ವಹಿಸಿ ಪೈಲ್ವಾನ್‌ ಗಿರಿಯಲ್ಲಿ ವಿಶ್ವಾದ್ಯಂತ ಸೈ ಎನಿಸಿಕೊಂಡ ಫಾತಿಮಾ ಸನಾಶೇಖ್‌, ಆಮೀರ್‌ರ ನೇತೃತ್ವದಲ್ಲಿ ತನ್ನ ಕೆರಿಯರ್‌ ಶುರು ಮಾಡಿದ್ದಳು. ಹೀಗಾಗಿ ಈಕೆ ಈಗ ಅಮಿತ್‌ ಶರ್ಮ ನಿರ್ದೇಶನದ `ಬಧಾಯಿ ಹೋ’ ಚಿತ್ರದಲ್ಲಿ ಆಯುಷ್ಮಾನ್‌ ಖುರಾನಾರ ರೊಮ್ಯಾಂಟಿಕ್‌ ಜೋಡಿ ಆಗಲಿದ್ದಾಳೆ. ಪೈಲ್ವಾನ್‌ ಗಿರಿ ಇದೀಗ ರೊಮ್ಯಾಂಟಿಕ್‌ ಆಗಿ ಹೇಗೆ ಕ್ಲಿಕ್‌ ಆಗಲಿದೆಯೋ ಕಾದು ನೋಡಬೇಕು.

ಅಂದಿನ ಕಾಲದಲ್ಲಿ ಹೀಗಿತ್ತು ಬಾಲಿವುಡ್

50ರ ದಶಕದ ಕ್ಯಾಬರೆ ಡ್ಯಾನ್ಸರ್‌ ಕುಕ್ಕೂ ವೋರೇ ರಾಜ್‌ ಕಪೂರ್‌ರ 1949ರ `ಬರ್ಸಾತ್‌’ ಚಿತ್ರದಲ್ಲಿ ಬಳುಕುವ ಬಳ್ಳಿಯಂಥ ಹೆಣ್ಣೊಬ್ಬಳು, `ಪತ್‌ಲಿ ಕಮರ್‌ ಹೈ ತಿರಚಿ ನಝರ್‌ ಹೈ…’ ಎನ್ನುತ್ತಾ ತನ್ನ ಸೊಂಟದ ಮೇಲೆ ಕೈ ಇಟ್ಟುಕೊಂಡು ಎಂಥ ಗ್ಲಾಮರ್‌ ಪೋಸ್‌ ನೀಡುತ್ತಿದ್ದಳೆಂದು ಈಗಿನ ಐಟಂ ನಟಿಯರು ನೋಡಿ ಕಲಿಯಬೇಕು. ಆಕೆ ಯಾರಂತೀರಿ? ಕುಕ್ಕೂ ಮೋರೇ! ಈಕೆ ಗೀತಾ ಬಾಲಿ, ಹೆಲೆನ್‌ರಂಥ ಘಟಾನುಘಟಿಗಳಿಗಿಂತಾ ಹಳಬಳು. ಆ್ಯಂಗ್ಲೋ ಇಂಡಿಯನ್‌ ಕುಕ್ಕೂ ತನ್ನ ಡ್ಯಾನ್ಸ್ ಮೋಡಿಯಿಂದ, 40-50ರ ದಶಕದ ಸಿನಿಮಾಗಳಲ್ಲಿ  ತನ್ನ ಕ್ಯಾಬರೆ ಝಲಕ್‌ ಪ್ರದರ್ಶಿಸಿ ಎಲ್ಲರ ಮನ ಗೆದ್ದಿದ್ದಳು. ಆ ಚಿತ್ರಗಳಲ್ಲಿ ನಿರ್ಮಾಪಕರು ತಮ್ಮ ಚಿತ್ರ ಹಿಟ್‌ಗೊಳಿಸಲು , ನಾಯಕಿಗಿಂತ ಮೊದಲು ಈಕೆಯನ್ನೇ ಬುಕ್‌ಮಾಡಿಕೊಳ್ಳುತ್ತಿದ್ದರಂತೆ, ಅಷ್ಟು ಬಿಝಿ ಆಕೆ! ಅಂದ ಕಾಲತ್ತಿಲೆ, ಕೇವಲ ಒಂದು ಡ್ಯಾನ್ಸಿಗಾಗಿ ಈಕೆ ಅತಿ ಹೆಚ್ಚಿನ ಸಂಭಾವನೆ 6000/ ರೂ. ಪಡೆಯುತ್ತಿದ್ದಳಂತೆ! ಹುಚ್ಚೆದ್ದು ಕುಣಿಯುತ್ತಿದ್ದ ಅಂದಿನ ಪಡ್ಡೆಗಳಿಗಾಗಿ ನಿರ್ಮಾಪಕರು ಅಷ್ಟು ದುಬಾರಿ ಸಂಭಾವನೆ ತೆರುತ್ತಿದ್ದರಂತೆ. ಈ ದುಬಾರಿ ಮೊತ್ತ ತೆರಲಾರದೆ ಅವರು ಹೆಲೆನ್‌ಗೆ ಮೊರೆ ಹೋಗುತ್ತಿದ್ದರಂತೆ! ಆ ಕಾಲದಲ್ಲಿ ಆಕೆ ಎಷ್ಟು ಶ್ರೀಮಂತಳು ಎಂದರೆ, ಎಲ್ಲೆಲ್ಲೂ ಅದರ ಚರ್ಚೆ ಆಗುತ್ತಿತ್ತು. ಇಷ್ಟೆಲ್ಲ ಇದ್ದರೂ ಆಕೆಗೆ ನೆಮ್ಮದಿಯ ಸಾವು ದೊರಕಲಿಲ್ಲ. ಅಂದಿನ ಕಾಲದಲ್ಲಿ 3 ಕಾರುಗಳ ಒಡತಿ ಈಕೆ. ಒಂದರಲ್ಲಿ ತಾನು ಹೋಗಿ, ಇನ್ನೊಂದರಲ್ಲಿ ಹೆಲೆನ್‌ಳನ್ನು ಕಳುಹಿಸಿ, ಮತ್ತೊಂದರಲ್ಲಿ ಈಕೆಯ ನಾಯಿಯನ್ನು ಕಳುಹಿಸುತ್ತಿದ್ದಳಂತೆ! ಆದರೆ ಮುಂದೆ ಆದಾಯ ತೆರಿಗೆಯವರ ದಾಳಿಯಿಂದ ನಲುಗಿದ ಈಕೆ, ಗಳಿಸಿದ್ದನ್ನೆಲ್ಲ ಕಳೆದುಕೊಂಡಳು.

ಇದಕ್ಕಿಂತಲೂ ಘೋರವೆಂದರೆ, ಈಕೆಯನ್ನು ಕ್ಯಾನ್ಸರ್‌ ಮುತ್ತಿದಾಗ! ಯಾವ ನಿರ್ದೇಶಕರನ್ನು ಈಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳೋ, ಆತ ಈಕೆಯ ಚಿಕಿತ್ಸೆಗೆ ಮುಂದಾಗಲಿಲ್ಲ. ನಂತರ ಆಕೆ ಪೈಸೆ ಪೈಸೆಗೂ ಲೆಕ್ಕ ಹಾಕಿ ಬದುಕಿದಳು. ಅಂತ್ಯ ಕಾಲದಲ್ಲಿ ಬಾಲಿವುಡ್‌ ಈಕೆಯನ್ನು ಮರೆತೇಬಿಟ್ಟಿತು, ಕೊರಗಿ ಸಾಯುವ ಸ್ಥಿತಿ ಬಂದಿತು.

ಕುಲ್ಛಿ ಕ್ಯೂಟ್

ಈ ಕುಲ್ಛಿ ಕ್ಯೂಟ್‌ ಮಾತ್ರವಲ್ಲ, ಗಾಯಕಿಯೂ ಹೌದು ಸ್ಟಾರ್‌ ಪ್ಲಸ್‌ನ ಹೊಸ `ಕುಲ್ಛಿ ಕುಮಾರ್‌ ಬಾಜಿರಾವ್’ ಶೋನಲ್ಲಿ 7 ವರ್ಷದ ಪುಟ್ಟ ಬಾಲಕಿ ಕುಲ್ಛಿ ಪಾತ್ರ ನಿರ್ವಹಿಸುತ್ತಿರುವ ಆಕೃತಿ ಶರ್ಮ ವಾಸ್ತವದಲ್ಲಿ ಬಲು ಕ್ಯೂಟಿ ಹುಡುಗಿ. ಇದೇ ಅವಳ ಮೊದಲ ಶೋ. ಹೇಮಾ, ಮಾಧುರಿಯರ ಅಭಿಮಾನಿಯಾದ ಈ ಕುಲ್ಛಿ, ಸುಮಧುರವಾಗಿ ಹಾಡಬಲ್ಲಳು. ಇವಳ ಹಾಡುಗಾರಿಕೆ ಹಾಗೂ ಬಾಲಲೀಲೆಗಳೇ ಈ ಧಾರಾವಾಹಿಯ ಜೀವಾಳ. ಆಲ್ ದಿ ಬೆಸ್ಟ್ ಕುಲ್ಛಿ!

ಕಿರುತೆರೆಗೆ ಮರಳಿ ಬಂದ ಅರುಣಾ ಇರಾನಿ

ಹಿಂದಿ ಚಿತ್ರರಂಗದ ಹಿರಿಯ ಕಲಾವಿದೆ ಅರುಣಾ ಇರಾನಿ ತಮ್ಮ ಆಳವಾದ ನಟನೆಯಿಂದ  B/W ಝಮಾನಾದಿಂದ ಹೆಸರಾದವರು. ಕಿರುತೆರೆಯಲ್ಲೂ ಸುಮಾರು ಧಾರಾವಾಹಿಗಳಲ್ಲಿ ಅಮ್ಮ, ಅತ್ತೆ ಆದರು. ಅನಾರೋಗ್ಯದ ಕಾರಣ 2 ವರ್ಷಗಳ ಸುದೀರ್ಘ ಬ್ರೇಕ್‌ ಪಡೆದಿದ್ದ ಈಕೆ ಇದೀಗ ಮತ್ತೆ ಸೋನಿ ಟಿ.ವಿ.ಯ `ಪೋರಸ್‌’ ಧಾರಾವಾಹಿಗಾಗಿ ಮರಳಿದ್ದಾರೆ.

“ಒಂದು ಉತ್ತಮ ಕಥೆ ಸಿಗಲಿ ಎಂದು ಕಾಯುತ್ತಿದ್ದೆ. ಪೋರಸ್‌ನಲ್ಲಿ ರಾಜಮಾತೆಯ ಪಾತ್ರ ಬಹಳ ಇಷ್ಟವಾಯ್ತು. ಇಂಥ ಮೆಗಾ ಶೋದಲ್ಲಿ ತುಸು ಸಣ್ಣ ಪಾತ್ರವೇ ಆದರೂ ಅದು ಎಷ್ಟು ಪ್ರಮುಖ ಎಂಬುದೇ ಇಂಪಾರ್ಟೆಂಟ್‌,” ಎನ್ನುತ್ತಾರೆ ಅರುಣಾ.

ನಾನಂತೂ ಪತ್ನಿ ಭಕ್ತನಾಗಿ ಇರ್ತೀನಿ!

ಸೋನಿ ಸಬ್‌ ಟಿ.ವಿ.ಯ ಹೊಸ `ಸಾತ್‌ ಫೇರೋಂಕಿ ಹೇರಾಫೇರಿ’ ಧಾರಾವಾಹಿಯಲ್ಲಿ ನಟ ಅಮಿತ್‌ ತ್ರಿವೇದಿ, ಪರಿಮ್‌ದೇಸಾಯಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈತ ಇದರಲ್ಲಿ ಮಹಾನ್‌ ಅಮ್ಮಾವ್ರ ಗಂಡ! ಆಕೆಯ ಮುಂದೆ ಬಾಯಿ ತೆರೆಯಲಿಕ್ಕೂ ಧೈರ್ಯವಿಲ್ಲ. ಮುಂದೆ ವಿವಾಹಿತನಾದ ಮೇಲೂ ಹೀಗೆ ಪತ್ನೀಭಕ್ತನಾಗಿ ಇರ್ತೀರಾ ಎಂದು ಕೇಳಿದರೆ, “ಸದ್ಯಕ್ಕಂತೂ ಒಬ್ಬಂಟಿ…. ಮುಂದೆ ಮದುವೆ ಆದ ಮೇಲಂತೂ ಪತ್ನಿಯ ಮಾತು ಚಾಚೂ ತಪ್ಪದೆ ಕೇಳಿದರೆ ಮಾತ್ರ ಸಂಸಾರ ಸುಗಮ ಎಂದು ಈ ಧಾರಾವಾಹಿ ಈಗಾಗಲೇ ಕಲಿಸಿದೆ,” ಎನ್ನುತ್ತಾರೆ.

ಇದು ಕರಣ್‌ ಜೋಹರ್‌ನ ಫಸ್ಟ್ ಲವ್

ಪ್ರತಿಯೊಬ್ಬರ ಜೀವನದಲ್ಲೂ ಯಾರಾದರೂ ಒಬ್ಬ ವ್ಯಕ್ತಿ `ವಿಶಿಷ್ಟ’ ಆಗಿಯೇ ಇರುತ್ತಾರೆ. ಹಾಗೆಯೇ ನಿರ್ದೇಶಕ ಕರಣ್‌ ಜೋಹರ್‌ರ ಜೀವನದಲ್ಲಿ ಅದು ಯಾರಾಗಿರಬಹುದು ಅಂತೀರಿ? ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿರುವ `ಇಂಡಿಯಾಸ್‌ ನೆಕ್ಸ್ಟ್ ಸೂಪರ್‌ ಸ್ಟಾರ್ಸ್‌’ ರಿಯಾಲಿಟಿ ಶೋನಲ್ಲಿ ಒಬ್ಬ ಅಭ್ಯರ್ಥಿ ನತಾಶಾ, ತನ್ನ ತಾಯಿಯೇ ತನ್ನ ಫಸ್ಟ್ ಲವ್ ಎಂದಳು. ಏಕೆಂದರೆ ತನ್ನ ಮಗಳು ರಾಜಕುಮಾರಿಯನ್ನು ಸಾಕಿ ಸಲಹಲು ತಾಯಿ ಪಟ್ಟ ಕಷ್ಟ ಅಪಾರ ಎಂದಳು.

ಇದೇ ಪ್ರಶ್ನೆ ಕರಣ್‌ ಜೋಹರ್‌ಗೆ ಎದುರಾದಾಗ, “ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವೇ ನಾನು ಬಾಲ್ಯದಿಂದ ಪ್ರೀತಿಸುತ್ತಿದ್ದೇನೆ. ಆಕೆಯೇ ನನ್ನ ತಾಯಿ! ನನ್ನ ಇಡೀ ಜೀವನದ ಏಕಮಾತ್ರ ವ್ಯಾಲೆಂಟೈನ್‌ ಎಂದರೆ ಆಕೆ ಮಾತ್ರವೇ….. ಬೇರೆ ಯಾರೂ ನನ್ನ ಜೀವನದಲ್ಲಿಲ್ಲ, ಅಮ್ಮನಿಲ್ಲದೆ ನನಗೆ ಜೀವನವೇ ಇಲ್ಲ!” ಎನ್ನುತ್ತಾರೆ.

Tags:
COMMENT