– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ ಎ14 ಆರೋಪಿ ಪ್ರದೋಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್ ಕೋರ್ಟ್ ಅನುಮತಿ ನೀಡಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಿರುವ ಪ್ರಕರಣದಲ್ಲಿ ಪ್ರದೋಷ್ ನೀಡಲಿರುವ ಹೇಳಿಕೆಗಳು ತನಿಖೆ ಮತ್ತು ವಿಚಾರಣೆಯ ಮುಂದಿನ ಹಂತದಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ.
ಮಾಫಿ ಸಾಕ್ಷಿಯಾಗಲು ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದ್ದು, ಆಗಸ್ಟ್ 25ರಂದು ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಪ್ರಕಟಿಸಿದ್ದಾರೆ.
ಮಾಫಿ ಸಾಕ್ಷಿಯಾಗಲು ಒಪ್ಪಿರುವ ಪ್ರದೋಷ್‌ಗೆ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದೆ. ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅವರು ಜೈಲಿನಲ್ಲೇ ಇರಬೇಕು. ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಸುಳ್ಳು ಸಾಕ್ಷಿ ನೀಡಿದ ಪ್ರಕರಣ ದಾಖಲಿಸುವುದರ ಜೊತೆಗೆ, ಮಾಫಿ ಸಾಕ್ಷಿಯ ಸ್ಥಾನವನ್ನು ರದ್ದುಪಡಿಸಿ ಮತ್ತೆ ಆರೋಪಿಯನ್ನಾಗಿ ಪರಿಗಣಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಪ್ರದೋಷ್ ತಮ್ಮ ಗಮನಕ್ಕೆ ಬಂದಿರುವ ಎಲ್ಲ ಸತ್ಯಾಂಶಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಬೇಕು. ಯಾವುದೇ ಪ್ರಮುಖ ವಿಚಾರವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರೆ ಅವರನ್ನು ಮಾಫಿ ಸಾಕ್ಷಿಯಿಂದ ಮತ್ತೆ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್‌ಗೆ ತಲುಪಿಸಲಾಗುತ್ತಿದೆ.
ಪ್ರದೋಷ್ ದರ್ಶನ್‌ಗೆ ಆಪ್ತರಾಗಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದ ಹಲವು ಪ್ರಮುಖ ಸಂಗತಿಗಳ ಬಗ್ಗೆ ಅವರಿಗೆ ಮಾಹಿತಿ ಇರುವ ಸಾಧ್ಯತೆಯಿದೆ. ಪ್ರಕರಣದ ವಿವಿಧ ಹಂತಗಳ ಕುರಿತು ಅವರು ನೀಡಲಿರುವ ಹೇಳಿಕೆಗಳು ತನಿಖಾ ಸಂಸ್ಥೆಗೆ ಹಾಗೂ ಪ್ರಾಸಿಕ್ಯೂಷನ್‌ಗೆ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಮಾಫಿ ಸಾಕ್ಷಿಯಾಗಲು ತಮ್ಮ ಮೇಲೆ ಯಾವುದೇ ರೀತಿಯ ಪ್ರಭಾವ ಅಥವಾ ಒತ್ತಡ ಹೇರಲಾಗಿಲ್ಲ ಎಂದು ಪ್ರದೋಷ್ ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರಿಂದ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ದಾಖಲಿಸಿಕೊಂಡಿರುವ ಕೋರ್ಟ್, ಇದೀಗ ಮಾಫಿ ಸಾಕ್ಷಿಯ ವಿಚಾರಣೆಯ ಮುಂದಿನ ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟಿದೆ.





