ನಾನು ತುಂಬಾನೇ ಅದೃಷ್ಟವಂತೆ ಅಂತ ಮನಸ್ಛೂರ್ತಿಯಾಗಿ ಹೇಳಬಲ್ಲೆ. ಏಕೆಂದರೆ ಈ ಕಲಾಕ್ಷೇತ್ರದಲ್ಲಿ ಅದರಲ್ಲೂ ಕಿರುತೆರೆ ಲೋಕದಲ್ಲಿ ನಾನು ಹೊಸದೇನನ್ನೊ ಮಾಡಲು ಕೈ ಹಾಕಿದಾಗಲೆಲ್ಲ ಎಲ್ಲರೂ ಬೆಂಬಲ ನೀಡುತ್ತಿದ್ದರು. ನನ್ನ ಕೆಲಸಕ್ಕೆ ಭೇಷ್ ಅಂತ ಬೆನ್ನು ತಟ್ಟಿ ಕಳುಹಿಸೋರು ನಮ್ಮ ಹಿಂದೆ ಇದ್ದಾಗ ಮಾತ್ರ ಏನಾದರೂ ಸಾಧ್ಯ ಅಲ್ವಾ....!'' ಎನ್ನುತ್ತಾ ಶೃತಿ ನಾಯ್ಡು ತಮ್ಮ ಕಾಲ ಬದುಕಿನ ಪಯಣದ ಒಂದೊಂದೇ ಪುಟಗಳನ್ನು ತೆರೆಯುತ್ತಾ ಹೋದರು.
ಹೌದು, ಇಂದು ಕಿರುತೆರೆ ಲೋಕದಲ್ಲಿ ಶೃತಿಯದು ಮಹತ್ತರ ಸಾಧನೆ. ನಟಿ, ನಿರ್ದೇಶಕಿ, ಹಾಗೂ ತನ್ನದೇ ಆದ ಪ್ರೊಡಕ್ಷನ್ ಹೌಸ್ ಮಾಡಿಕೊಂಡು ನೂರಾರು ಕಲಾವಿದರಿಗೆ, ತಂತ್ರಜ್ಞರಿಗೆ ಪ್ರತಿನಿತ್ಯ ಕೆಲಸ ಸಿಗವಂತೆ ಮಾಡಿದ್ದಾರೆ.
ಈ ಕಲಾ ಲೋಕಕ್ಕೆ ಬಂದದ್ದಾರೂ ಹೇಗೆ?
ನಮ್ಮೂರು ಮೈಸೂರು, ಅಲ್ಲೇ ವಿದ್ಯಾಭ್ಯಾಸ. ಮನೆಯಲ್ಲಿ ನೀನು ಹೀಗೇ ಇರಬೇಕು, ಇದನ್ನೇ ಮಾಡಬೇಕು ಅಂತ ಅಪ್ಪ ಅಮ್ಮ ಎಂದಿಗೂ ಹೇಳಿದವರಲ್ಲ. ಎಂಜಿನಿಯರಿಂಗ್ ಸೇರಿಕೊಂಡ ಮೇಲೆ ನನಗ್ಯಾಕೋ ಒಂದೇ ಕಡೆ ಕುಳಿತು ಓದುವುದು, ನಾಲ್ಕು ಗೋಡೆ ನಡುವೆ ನನ್ನನ್ನು ನಾನು ಕೂಡಿ ಹಾಕಿಕೊಳ್ಳಲು ಖಂಡಿತಾ ಇಷ್ಟವಿರಲಿಲ್ಲ. 24 ತಾಸು ಬಿಜಿಯಾಗಿರಬೇಕು. ಏನಾದರೂ ಕ್ರಿಯೇಟಿವ್ ಆಗಿ ಮಾಡುತ್ತಿರಬೇಕು ಎಂಬುದು ನನ್ನಾಸೆಯಾಗಿತ್ತು.
ಸ್ನೇಹಿತರೊಬ್ಬರು ನನ್ನ ಫೋಟೋ ನೋಡಿ ಏಕೆ ಮಾಡೆಲ್ ಆಗಬಾರದು ಅಂದರು. ಹಾಗೆಯೇ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ನನಗ್ಯಾವತ್ತೂ ನಟಿಯಾಗಬೇಕು ಎಂದು ಅನಿಸಿರಲಿಲ್ಲ. ಆದರೂ ನನಗದು ತುಂಬಾ ಹಿಡಿಸಿತು. `ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಅನಂತ್‌ನಾಗ್‌ರಿಗೆ ಜೋಡಿಯಾಗಿ ನಟಿಸಿದಾಗಲಂತೂ ಜನ ತುಂಬಾನೇ ಇಷ್ಟಪಟ್ಟರು, ನಾನು ನಟಿಯಾಗಿ ಜನಪ್ರಿಯ ಆಗುತ್ತಿರುವಾಗಲೇ ನಿರ್ದೇಶನದತ್ತ ಆಸೆ ವಾಲತೊಡಗಿತು.
ಯಾವುದದು....?
ನಿನ್ನಿಂದ ಈ ಕೆಲಸ ಸಾಧ್ಯವಿಲ್ಲ. ನಿನ್ನಿಂದ ಆಗೋಲ್ಲ... ಇಂಥ ಮಾತುಗಳು ನನ್ನೆದುರು ಯಾರೇ ಆಡಿದರೂ ನಾನದನ್ನು ಮಾಡಿ ತೋರಿಸೋ ಬುದ್ಧಿ ಮೊದಲಿನಿಂದಲೂ ನನ್ನಲ್ಲಿದೆ. `ನಮ್ಮಮ್ಮ ಶಾರದೆ....' ಧಾರಾವಾಹಿಯಲ್ಲಿ ನಟಿಸುವಾಗ ನಿರ್ದೇಶನದ ಬಗ್ಗೆ ನನಗಿದ್ದ ಆಸಕ್ತಿ ಕಂಡು ನಿರ್ದೇಶಕ ರಮೇಶ್ ಒಂದು ಸೀನನ್ನು ಡೈರೆಕ್ಟ್ ಮಾಡು ಅಂದರು. ಅದು ಚಾನೆಲ್ ಹೆಡ್‌ಗೂ ಇಷ್ಟವಾಯ್ತು. ಆಗ ರಮೇಶ್ ಈ ಸೀನನ್ನು ಶೃತಿ ಡೈರೆಕ್ಟ್ ಮಾಡಿದ್ದು ಅಂತ ಹೇಳಿದರು. ಅದಾದ ನಂತರ `ಚಿ.ಸೌ. ಸಾವಿತ್ರಿ' ಧಾರಾವಾಹಿಯನ್ನು ಸ್ವತಂತ್ರವಾಗಿ ನಾನೇ ನಿರ್ದೇಶಿಸಲು ಅವಕಾಶ ಸಿಕ್ಕಿತು. ಸಾಕಷ್ಟು ಯಶಸ್ವಿಯಾಯ್ತು. ದೊಡ್ಡ ದೊಡ್ಡ ಕಲಾವಿದರ ಬಳಗವೇ ಇತ್ತು. ಜೈಜಗದೀಶ್, ಬಿ.ವಿ. ರಾಧಾ ಇನ್ನೂ ಅನೇಕ ಪ್ರತಿಭಾವಂತ ಕಲಾವಿದರಿದ್ದರು. ಹಾಗೆಯೇ ನನ್ನದೇ ಆದ ಪ್ರೊಡಕ್ಷನ್ ಹೌಸ್ ಶುರುಮಾಡಿದೆ.
ರಿಸ್ಕ್ ಅಂತ ಅನ್ನಿಸಲಿಲ್ವಾ.....?
ಶಾಲೆಯಲ್ಲಿರುವಾಗಲೇ ನನಗೆ ಕಲೆ, ನಟನೆ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ. ನಾಟಕಗಳಲ್ಲಿ ನಟಿಸಿದ್ದೆ. ನಿಜ ಹೇಳಬೇಕೆಂದರೆ ನನಗಿದುವರೆಗೂ ಯಾವುದೇ ರೀತಿಯಲ್ಲಿ ಕಷ್ಟ ಅನಿಸಿಲ್ಲ. ರಿಸ್ಕ್ ಅಂತೂ ಖಂಡಿತಾ ಇಲ್ಲ. ಎಲ್ಲರೂ ಸಪೋರ್ಟ್ ಮಾಡೋದ್ರಿಂದ, ಅದರಲ್ಲೂ ನನ್ನ ಜೊತೆ ಕೆಲಸ ಮಾಡುವವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು. ಎಲ್ಲರೂ ಒಟ್ಟಾಗಿ ಕುಳಿತು ಕೆಲಸ ಮಾಡ್ತೀವಿ. ನಮ್ಮದು ದೊಡ್ಡ ಕುಟುಂಬ.