ಸರಸ್ವತಿ *

RRR ಚಿತ್ರದ ನಂತರ ಮಹೇಶ್‍ ಬಾಬು ಅಭಿನಯದಲ್ಲಿ ಎಸ್‍.ಎಸ್‍. ರಾಜಮೌಳಿ ಒಂದು ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಕೇಳಿ ಬಂದಿತ್ತು. ಆ ಚಿತ್ರದ ಹೆಸರೇನು, ಕಥೆ ಏನಿರಬಹುದು, ಚಿತ್ರ ಯಾವ ಹಂತದಲ್ಲಿದೆ ಮುಂತಾದ ಹಲವು ಪ್ರಶ್ನೆಗಳಿಗೆ ರಾಜಮೌಳಿ ಕೊನೆಗೂ ಉತ್ತರ ನೀಡಿದ್ದಾರೆ. ಚಿತ್ರಕ್ಕೆ ‘ವಾರಣಾಸಿ’ ಎಂಬ ಹೆಸರಿಡಲಾಗಿದ್ದು, ಈ ಚಿತ್ರದ ಟೈಟಲ್‍ ಟೀಸರ್, ಶನಿವಾರ ರಾತ್ರಿ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

Varanasi

‘ವಾರಣಾಸಿ’ ಚಿತ್ರದ ಟೈಟಲ್‍ ಟೀಸರ್ ಅನಾವರಣಕ್ಕೆಂದೇ ದೊಡ್ಡ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವುದರ ಜೊತೆಗೆ ದೇಶ-ವಿದೇಶಗಳಿಂದ ಮಾಧ್ಯಮದವರು ಸಾಕ್ಷಿಯಾಗಿದ್ದರು. 110/130 ಅಡಿಯ ಬೃಹತ್ತಾದ ಎಲ್‍.ಇ.ಡಿ ಪರದೆಯನ್ನು ಈ ಕಾರ್ಯಕ್ರಮಕ್ಕಾಗಿ ಸೃಷ್ಟಿಸಲಾಗಿತ್ತು. ಅದಕ್ಕಾಗಿ 45 ಜನರೇಟರ್ ಗಳನ್ನು ಬಳಸಲಾಗಿತ್ತು. ವೇದಿಕೆಯ ಮೇಲೆ ವಾರಣಾಸಿಯ ಮಣಿಕರ್ಣಿಕಾ ಘಾಟ್ ಅನ್ನು ಪ್ರತಿನಿಧಿಸುವ ಸೆಟ್‍ಗಳನ್ನು ನಿರ್ಮಿಸಲಾಗಿತ್ತು. ಇದೆಲ್ಲದರ ಮಧ್ಯೆಯೇ, ಚಿತ್ರದ ಟೀಸರ್ ಅನಾವರಣಗೊಳಿಸಲಾಯಿತು. ಗೂಳಿಯ ಮೇಲೆ ಕುಳಿತು, ಮಹೇಶ್‍ ಬಾಬು ತ್ರಿಶೂಲ ಹಿಡಿದು ಬರುವಾಗ, ‘ಜೈ ಬಾಬು, ಜೈಜೈ ಬಾಬು’ ಎಂಬ ಅಭಿಮಾನಿಗಳು ಕೂಗು ಮುಗಿಲು ಮುಟ್ಟಿತ್ತು.

Varanasi2

ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ‘ವಾರಣಾಸಿ’ ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್‍ ಬಿಝಿನೆಸ್‍ ಸಂಸ್ಥೆಗಳಡಿ ಕೆ.ಎಲ್‍. ನಾರಾಯಣ ಮತ್ತು ಎಸ್‍.ಎಸ್. ಕಾರ್ತಿಕೇಯ ಜೊತೆಯಾಗಿ ನಿರ್ಮಿಸುತ್ತಿದ್ದು, ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್‍ ಕಥೆ-ಚಿತ್ರಕಥೆ ರಚಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್‍ ಬಾಬು, ಭೈರವ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್‍ ಸುಕುಮಾರನ್‍, ಮೋಹಿನಿ ಮತ್ತು ಕುಂಭ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು 2027ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ರಾಜಮೌಳಿ, ತೆಲುಗು ಚಿತ್ರರಂಗಕ್ಕೆ ಪ್ರೀಮಿಯಮ್ ಫುಲ್ ಸ್ಕ್ರೀಮ್ ಐಮ್ಯಾಕ್ಸ್ ಫಾರ್ಮ್ಯಾಟ್ ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ.

Varanasi3

ಟೀಸರ್ ಬಿಡುಗಡೆಯ ನಂತರ ಮಾತನಾಡಿದ ರಾಜಮೌಳಿ, ‘ನನಗೆ ಬಾಲ್ಯದಿಂದಲೂ ರಾಮಾಯಣ ಮತ್ತು ಮಹಾಭಾರತವೆಂದರೆ ಬಹಳ ಇಷ್ಟ. ಇದು ನನ್ನ ಡ್ರೀಮ್‍ ಪ್ರಾಜೆಕ್ಟ್. ರಾಮಾಯಣದ ಒಂದು ಪ್ರಮುಖ ಪ್ರಸಂಗವನ್ನು ಆಧರಿಸಿ ಚಿತ್ರ ಮಾಡುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಒಂದೊಂದು ದೃಶ್ಯವನ್ನೂ ಚಿತ್ರೀಕರಿಸುವಾಗ ಗಾಳಿಯಲ್ಲಿ ತೇಲಾಡಿದಂತಹ ಭಾವನೆ ಬರುತ್ತಿತ್ತು. ರಾಮನಂತಹ ಪ್ರಶಾಂತವಾದ ಪಾತ್ರಕ್ಕೆ ಮಹೇಶ್‍ ಸೂಟ್‍ ಆಗುತ್ತಾರಾ ಎಂಬ ಪ್ರಶ್ನೆ ಇತ್ತು. ಮೊದಲ ದಿನ ಮಹೇಶ್‍ ಬಾಬು ಅವರನ್ನು ರಾಮನ ವೇಷದಲ್ಲಿ ನೋಡಿ ರೋಮಾಂಚನವಾಯಿತು. ಇದುವರೆಗೂ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಪ್ರತಿಯೊಂದನ್ನೂ ಹೊಸದಾಗಿ ಯೋಚಿಸಿ, ಪ್ಲಾನ್‍ ಮಾಡುವುದರ ಜೊತೆಗೆ ಹಲವು ಸವಾಲುಗಳನ್ನು ಸ್ವೀಕರಿಸಿದ್ದೇವೆ’ ಎಂದರು.

ನಮ್ಮ ತಂದೆ (ದಿವಂಗತ ನಟ ಕೃಷ್ಣ) ನನಗೆ ಪೌರಾಣಿಕ ಪಾತ್ರದಲ್ಲಿ ನಟಿಸು ಎಂದು ಯಾವಾಗಲೂ ಹೇಳುತ್ತಿದ್ದರು ಎಂದ ಮಹೇಶ್‍ ಬಾಬು, ‘ಅವರಿದ್ದಾಗ ಅದು ಸಾಧ್ಯವಾಗಿರಲಿಲ್ಲ. ಈಗ ಸಾಧ್ಯವಾಗುತ್ತಿದೆ. ಇದು ನನ್ನ ಡ್ರೀಮ್‍ ಪ್ರಾಜೆಕ್ಟ್. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವಂತಹ ಒಂದು ಅಪರೂಪದ ಅವಕಾಶ. ಅದಕ್ಕಾಗಿ ಎಷ್ಟು ಬೇಕಾದರೂ ಕಷ್ಟಪಡಲು ನಾನು ಸಿದ್ಧ. ಎಲ್ಲರೂ ಹೆಮ್ಮೆಪಡುವಂತೆ ಕೆಲಸ ಮಾಡುತ್ತೇನೆ. ಈ ಚಿತ್ರ ಬಿಡುಗಡೆಯಾದಾಗ, ಇಡೀ ದೇಶ ನಮ್ಮ ಬಗ್ಗೆ ಹೆಮ್ಮೆಪಡುತ್ತದೆ’ ಎಂದರು.

ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ಎಲ್‍. ನಾರಾಯಣ, ಕಥೆಗಾರ ವಿಜಯೇಂದ್ರ ಪ್ರಸಾದ್‍, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಕಲಾವಿದರಾದ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್‍ ಸುಕುಮಾರನ್‍ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ