ಬೆಳಗ್ಗೆಯಿಂದಲೂ ಸುಧಾ ಚಿಂತೆಯಲ್ಲಿದ್ದಾಳೆ. ಸಾಯಂಕಾಲ ಅವಳು ತನ್ನ ಬೆಸ್ಟ್ ಫ್ರೆಂಡ್‌ ಬರ್ತ್‌ಡೇ ಪಾರ್ಟಿಗೆ ಹೋಗಬೇಕಾಗಿದೆ. ಯಾವ ಡ್ರೆಸ್‌ ಧರಿಸಿ ಪಾರ್ಟಿಗೆ ಹೋಗಲಿ ಎಂದೇ ಅವಳಿಗೆ ತಿಳಿಯುತ್ತಿಲ್ಲ. ಅವಳ ವಾರ್ಡ್‌ರೋಬ್‌ನಲ್ಲಿ ಚೆಂದದ ಉಡುಪಿಗೆ ಕೊರತೆ ಇದೆ ಎಂದಲ್ಲ, ಗಿಜಿಗಿಜಿ ಎನ್ನುವಷ್ಟು ಡ್ರೆಸ್‌ಗಳು ಅಲ್ಲಿ ತುಂಬಿವೆ. ಆದರೂ ಯಾವುದನ್ನು ಧರಿಸಬೇಕೆಂದು ಅವಳಿಗೆ ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ.

ಹಬ್ಬದ ಸಂದರ್ಭದಲ್ಲಿ ಅಥವಾ ಯಾವುದಾದರೂ ಸ್ಪೆಷಲ್ ಪಾರ್ಟಿಗೆ ಆಹ್ವಾನ ದೊರೆತ ಸಮಯದಲ್ಲಿ ಮನಸ್ಸು ಉತ್ಸಾಹದಿಂದ ಕುಣಿಯುತ್ತದೆ. ಆದರೆ ಡ್ರೆಸ್‌ ಆಯ್ಕೆ ಮಾಡಲು ಹೊರಟಾಗ ಯಾವುದೂ ಮನಸ್ಸಿಗೆ ಒಪ್ಪದೆ ನಿಮ್ಮ ಮೂಡ್‌ ಹಾಳಾಗಿಬಿಡುತ್ತದೆ. ಆಗ ಇಂತಹ ವಿಶೇಷ ದಿನಗಳಿಗಾಗಿ 1-2 ಡ್ರೆಸ್‌ಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಲಿಲ್ಲವಲ್ಲ ಎಂದು ನಿಮ್ಮ ಮೇಲೆ ನಿಮಗೇ ಕೋಪ ಬರುತ್ತದೆ.

ಇಂತಹ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂದು ಚಿಂತಿಸಬೇಡಿ. ಏಕೆಂದರೆ ಶೇ.90ರಷ್ಟು ಮಹಿಳೆಯರು ಮತ್ತು ಯುವತಿಯರು ಇಂಥದೇ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ನೀವು ಇನ್ನು ಮುಂದೆ ನಿರಾಳವಾಗಿರಲು ಈ ಕೆಲವು ವಿಷಯಗಳ ಬಗ್ಗೆ ಗಮನ ನೀಡಿ :

ವಾರ್ಡ್‌ರೋಬ್‌  ಬ್ಲಂಡರ್ಸ್ ಬೇಡ

ಹೆಚ್ಚಿನ ಮಹಿಳೆಯರು ತಮ್ಮ ವಾರ್ಡ್‌ರೋಬ್‌ನ್ನು ವ್ಯವಸ್ಥಿತವಾಗಿ ಇರಿಸಿಕೊಂಡಿರುವುದಿಲ್ಲ. ಅವರ ವಾರ್ಡ್‌ರೋಬ್‌ನಲ್ಲಿ ಬಟ್ಟೆಗಳು ಹರಡಿರುತ್ತವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ಇರಿಸಿಕೊಳ್ಳಬೇಕು.

fashion

ಅವಲೋಕಿಸಿ

ನಿಮ್ಮ ವಾರ್ಡ್‌ರೋಬ್‌ನ್ನು ಆಗಾಗ್ಗೆ ಪರೀಕ್ಷಿಸಿ ನೋಡುತ್ತಿರಿ. ಯಾವುದಾದರೂ ಡ್ರೆಸ್‌ ನಿಮಗೆ ಅನ್‌ಫಿಟ್‌,  ಔಟ್‌ಡೇಟೆಡ್‌ ಅಥವಾ ಓಲ್ಡ್ ಸ್ಟೈಲ್‌ ಎನಿಸಿ, ಅದನ್ನು ಧರಿಸಲು ನಿಮಗೆ ಮನಸ್ಸಿಲ್ಲ ಎನಿಸಿದರೆ ಕೂಡಲೇ ಅದನ್ನು ವಾರ್ಡ್‌ರೋಬ್‌ನಿಂದ ಹೊರಗೆ ತೆಗೆಯಿರಿ. ಇಂಥ ಡ್ರೆಸ್‌ಗಳ ಇರುವಿಕೆಯಿಂದ ನಿಮಗೆ ವಿಶೇಷ ಸಂದರ್ಭಗಳಲ್ಲಿ ಸೂಕ್ತವಾದ ಡ್ರೆಸ್‌ ಆರಿಸಲು ಅಡಚಣೆಯಾಗುತ್ತದೆ.

ಮೋಹ ಬೇಡ

ಕೆಲವು ಮಹಿಳೆಯರು ಇಂಥ ಅನ್‌ಫಿಟ್‌, ಔಟ್‌ಡೇಟೆಡ್‌ ಡ್ರೆಸ್‌ಗಳನ್ನು ವಾರ್ಡ್‌ರೋಬ್‌ನಲ್ಲಿ ಉಳಿಸಿಕೊಂಡಿರುತ್ತಾರೆ. ಏಕೆಂದರೆ ಅವರು ಆ ಡ್ರೆಸ್‌ನೊಂದಿಗೆ ಒಂದು ಭಾವನಾತ್ಮಕ ಬೆಸುಗೆ ಹೊಂದಿರುತ್ತಾರೆ. ಇದು ನನ್ನ ಅಮ್ಮ ಕೊಟ್ಟದ್ದು, ಇದು ನಾನು ಸಿಂಗಪುರದಿಂದ ತಂದಿದ್ದು, ಇದು ನನ್ನ ವೆಡ್ಡಿಂಗ್‌ ಆ್ಯನಿವರ್ಸರಿಯದು ಇತ್ಯಾದಿ…. ಇಂಥ ಭಾವನೆಗಳನ್ನು ದೂರ ಮಾಡಿ ಅವುಗಳನ್ನು ವಾರ್ಡ್‌ರೋಬ್‌ನಿಂದ ಹೊರತೆಗೆಯಿರಿ.

ಆಲ್ಬಮ್ ಮಾಡಿ

ನಿಮ್ಮ ಬಳಿ ಎಷ್ಟು ಡ್ರೆಸೆಸ್‌ ಇವೆ, ಯಾವ ಸ್ಟೈಲ್‌ನದ್ದು, ಯಾವ ಬಣ್ಣದ್ದು ಎಂಬುದೆಲ್ಲ ನಿಮಗೆ ನೆನಪಿರುವುದಿಲ್ಲ. ಅವುಗಳ ಬಗ್ಗೆ ಒಂದು ಆಲ್ಬಮ್ ಮಾಡಿ ನಿಶ್ಚಿಂತೆಯಿಂದಿರಿ. ಮೊಬೈಲ್ ಕ್ಯಾಮೆರಾದಿಂದ ನಿಮ್ಮ ಪ್ರತಿಯೊಂದು  ಡ್ರೆಸ್‌ನ ಫೋಟೋ ತೆಗೆದು ಸೇವ್ ಮಾಡಿ ಇಟ್ಟುಕೊಳ್ಳಿ. ಅದನ್ನು ನೋಡಿ ವಿಶೇಷ ಸಂದರ್ಭಕ್ಕೆ ಬೇಕಾದ ಡ್ರೆಸ್‌ನ್ನು ಆರಿಸಿಕೊಳ್ಳಬಹುದು.

ನೀವು ಡ್ರೆಸ್‌ ಕೊಳ್ಳಲು ಮಾರ್ಕೆಟ್‌ಗೆ ಹೋದಾಗಲೂ ಆಲ್ಬಮ್ ನೋಡಿಕೊಂಡು ನಿಮ್ಮಲ್ಲಿಲ್ಲದಿರುವ ಸ್ಟೈಲ್‌, ಕಲರ್‌, ಪ್ರಿಂಟ್‌ನ ಡ್ರೆಸ್‌ ಕೊಂಡುಕೊಳ್ಳಬಹುದು.

ಡ್ರೆಸ್‌ ವಿಂಗಡಣೆ

ವಾರ್ಡ್‌ರೋಬ್‌ನಲ್ಲಿ ಅನೇಕ ಶೆಲ್ಫ್ ಗಳಿರುತ್ತವೆ. ಕ್ಯಾಶುಯೆಲ್ ಡ್ರೆಸ್‌, ಪಾರ್ಟಿ ಡ್ರೆಸ್‌, ಹೆವಿ ಡ್ರೆಸ್‌, ಆಫೀಸ್‌ ಡ್ರೆಸ್‌ ಇತ್ಯಾದಿಗಳನ್ನು ಬೇರೆ ಬೇರೆ ಶೆಲ್ಫ್ ಗಳಲ್ಲಿ ಇಡುವುದರಿಂದ ಡ್ರೆಸ್‌ ಹುಡುಕಾಟದಲ್ಲಿ ಸಮಯ ಉಳಿಯುತ್ತದೆ, ಬೇಸರ ತಪ್ಪುತ್ತದೆ.

ಹೋಂವರ್ಕ್‌ ಮಾಡಿ

ಶಾಪಿಂಗ್‌ಗೆ ಹೊರಡುವ ಮೊದಲು ಸರಿಯಾಗಿ ಹೋಂವರ್ಕ್‌ ಮಾಡಿ. ನೀವು ಯಾವ ಸ್ಟೈಲ್‌, ಕಲರ್‌ ಮತ್ತು ಬೆಲೆಯ ಡ್ರೆಸ್‌ ಕೊಳ್ಳಬೇಕೆಂದಿರುವಿರಿ ಎಂಬುದನ್ನು ಗುರುತು ಹಾಕಿಕೊಳ್ಳಿ. ಯಾವ ಬಗೆಯ ಔಟ್‌ಫಿಟ್‌, ಅಂದರೆ ಕ್ಯಾಶುಯಲ್, ಅಫಿಶಿಯಲ್, ಹೆವಿ ಅಥವಾ ಪಾರ್ಟಿವೇರ್‌, ಕೊಳ್ಳ ಬಯಸುವಿರಿ ಎಂಬುದರ ಬಗ್ಗೆಯೂ ಗಮನವಿರಿಸಿಕೊಳ್ಳಿ.

ಕ್ವಾಂಟಿಟಿ ಅಲ್ಲ ಕ್ವಾಲಿಟಿ

ವಾರ್ಡ್‌ರೋಬ್‌ನಲ್ಲಿ ಡ್ರೆಸೆಸ್‌ನ ಸಂಖ್ಯೆ ಹೆಚ್ಚಿಸುವ ಬದಲು ಗುಣಮಟ್ಟದ ಬಗ್ಗೆ ವಿಶೇಷ ಗಮನ ನೀಡಿ. ಸಾಮಾನ್ಯವಾಗಿ ಮಹಿಳೆಯರು ಕ್ವಾಲಿಟಿ ಕಡೆಗೆ ಗಮನ ಕೊಡದೆ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೋಡುತ್ತಾರೆ. ಅವರ ವಾರ್ಡ್‌ರೋಬ್‌ನಲ್ಲಿ ಡ್ರೆಸ್‌ಗಳೇನೋ ತುಂಬಿರುತ್ತವೆ. ಆದರೆ ವಿಶೇಷ ಸಂದರ್ಭಗಳಿಗಾಗಿ ಅವರ ಬಳಿ ಸರಿಯಾದ ಡ್ರೆಸ್‌ ಇರುವುದಿಲ್ಲ. ಆದ್ದರಿಂದ ಸ್ಪೆಷಲ್ ಪಾರ್ಟಿಗಳಿಗೆ ಸೂಕ್ತವಾದ ಡ್ರೆಸೆಸ್‌ ಇರುವಂತೆ ನೋಡಿಕೊಳ್ಳಿ. ಹಾಗೆಂದ ಮಾತ್ರಕ್ಕೆ ಹೆವಿ ಮತ್ತು ಪಾರ್ಟಿವೇರ್‌ ಡ್ರೆಸೆಸ್‌ ಸಂಖ್ಯೆಯೇ ಹೆಚ್ಚಾಗಿದ್ದು, ಕ್ಯಾಶುಯಲ್, ಅಫಿಶಿಯಲ್ ಡ್ರೆಸೆಸ್‌ ಕಡಿಮೆಯಾಗದಂತೆಯೂ ಗಮನಿಸಿಕೊಳ್ಳಿ.

ಫಿಟಿಂಗ್

ಎಷ್ಟೇ ಬೆಲೆ ಬಾಳುವ ಡ್ರೆಸ್‌ ಆಗಿರಲಿ, ಅದರ ಫಿಟಿಂಗ್‌ ಸರಿಯಿಲ್ಲದಿದ್ದರೆ ಅದು ಚೆನ್ನಾಗಿ ಕಾಣುವುದಿಲ್ಲ. ಆದ್ದರಿಂದ ನಿಮ್ಮ ಮೈಮಾಟಕ್ಕೆ ಅನುರೂಪವಾದ ಡ್ರೆಸ್‌ನ್ನೇ ಆರಿಸಿಕೊಳ್ಳಿ. ಬೇರೆಯವರ ಮೈಗೆ ಹೊಂದಿಕೆಯಾಗಿರುವ ಡ್ರೆಸ್‌ ನಿಮಗೂ ಹೊಂದಿಕೆಯಾಗುತ್ತದೆ ಎಂದು ಭಾವಿಸಬೇಡಿ. ನೀವು ಅದನ್ನು ಧರಿಸಿ ಟ್ರೈ ಮಾಡಿ ನೋಡಿ. ನಿಮ್ಮ ಮೈಮಾಟಕ್ಕೆ ಹೊಂದಿಕೆಯಾಗಿ ಕಂಡರೆ ಮಾತ್ರ ಕೊಂಡುಕೊಳ್ಳಿ.

ಯಾವುದೇ ಡ್ರೆಸ್‌ ಕೊಳ್ಳುವಾಗ ಒಂದು ಸಲ ಧರಿಸುವುದಷ್ಟೇ ಎಂದುಕೊಂಡು ಕೊಳ್ಳಬೇಡಿ. ಯಾವಾಗಲೂ ಧರಿಸಿ ನೋಡಿಯೇ ಖರೀದಿಸಿ. ಏಕೆಂದರೆ ಕೊಂಡು ತಂದ ಮೇಲೆ ಇಷ್ಟವಾಗಲಿಲ್ಲವೆಂದು ಅದು ವಾರ್ಡ್‌ರೋಬ್‌ನ ಮೂಲೆಯನ್ನು ಸೇರುವಂತಾಗಬಾರದು.

ಬಣ್ಣದ ಆಯ್ಕೆ

ಎಲ್ಲ ಬಣ್ಣದ ಡ್ರೆಸ್‌ಗಳು ಎಲ್ಲರಿಗೂ ಒಪ್ಪುತ್ತವೆ ಎಂದು ಭಾವಿಸಬೇಡಿ. ಡ್ರೆಸ್‌ ಕೊಳ್ಳುವ ಮೊದಲು ಅದನ್ನು ಧರಿಸಿ ಹಗಲು ಬೆಳಕಿನಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳಿ. ಯಾವ ಬಣ್ಣದ ಡ್ರೆಸ್‌ ನಿಮ್ಮ ಮುಖಕ್ಕೆ ಕಾಂತಿ ನೀಡುವುದೋ ಅದನ್ನೇ ಆರಿಸಿಕೊಳ್ಳಿ.

ಎಕ್ಸ್ ಕ್ಲೂಸಿವ್‌ ಡ್ರೆಸ್‌

ಇದು ಎಕ್ಸ್ ಕ್ಲೂಸಿವ್ ಡ್ರೆಸ್‌ನ ಕಾಲವಾಗಿದೆ. ಆದ್ದರಿಂದ ಬೇರೆಯವರ ಡ್ರೆಸಿಂಗ್‌ ಸ್ಟೈಲ್‌ನ್ನು ಅನುಸರಿಸದೆ ಸ್ವತಃ ನಿಮ್ಮದೇ ಆದ ಒಂದು ಹೊಸ ಬಗೆಯ ಸ್ಟೈಲ್ ಮೂಡಿಸಿ. ಟಿವಿ ಸೀರಿಯಲ್ ಅಥವಾ ಸಿನಿಮಾ ನಟಿಯರನ್ನು ಕಾಪಿ ಮಾಡಬೇಡಿ. ನಿಮ್ಮ ವಾರ್ಡ್‌ರೋಬ್‌ನಿಂದ ಔಟ್‌ಡೇಟೆಡ್‌ ಡ್ರೆಸ್‌ಗಳನ್ನು ಹೊರತೆಗೆಯಲೂ ಸಹಾಯವಾಗುತ್ತದೆ.

ಡ್ರೆಸ್‌ಗಳ ಸಂರಕ್ಷಣೆ

ಡೇಲಿ ವೇರ್‌ಗಳನ್ನು ಆಗಾಗ್ಗೆ ಒಗೆದು ಪ್ರತ್ಯೇಕವಾಗಿರಿಸಿ. ಪಾರ್ಟಿವೇರ್‌ಗಳನ್ನು ಡ್ರೈಕ್ಲೀನ್‌ ಮಾಡಿಸಿ. ಯಾವುದಾದರೂ ಡ್ರೆಸ್‌ನ ಹೊಲಿಗೆ, ಜರಿ ಅಥವಾ ಚಮಕಿ ಸಡಿಲವಾಗಿದ್ದರೆ ಸರಿಪಡಿಸಿ. ಹೆಚ್ಚು ಡ್ರೆಸ್‌ಗಳನ್ನು ಒಂದರ ಮೇಲೆ ಒಂದರಂತೆ ಇರಿಸಬೇಡಿ. ರೇಷ್ಮೆ ಸೀರೆಗಳ ಮಡಿಕೆ ಬದಲಾಯಿಸುತ್ತಿರಿ.

ಹೊರಗಿನಿಂದ ಬಂದಾಗ ನೀವು ಬಿಚ್ಚಿದ ಬಟ್ಟೆಯನ್ನು ಚೆನ್ನಾಗಿ ಒದರಿ, ಹ್ಯಾಂಗರ್‌ಗೆ ಹಾಕಿ. ಬೆವರು ಆರಿದ ಮೇಲಷ್ಟೇ ವಾರ್ಡ್‌ರೋಬ್‌ನಲ್ಲಿಡಿ. ಹುಳು ಹುಪ್ಪಟೆಗಳಿಂದ ರಕ್ಷಿಸಲು ಬಟ್ಟೆಗಳ ಮಧ್ಯೆ ನ್ಯಾಫ್ತಲಿನ್‌ ಬಾಲ್ಸ್ ಅಥವಾ ಓಡೋನಿಲ್‌ ಇರಿಸಿ.

– ಎಂ. ಅಪರ್ಣಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ