ಕೇಸರಿ ಖೀರ್ ಕದಂಬ್
ಸಾಮಗ್ರಿ : 10-12 ಸಣ್ಣ ಗಾತ್ರದ ರಸಗುಲ್ಲ, 250 ಗ್ರಾಂ ಸಿಹಿ ಖೋವಾ, ಅರ್ಧ ಕಪ್ ಪುಡಿಸಕ್ಕರೆ, ಅರ್ಧ ಚಮಚ ಕೇದಗೆ ಎಸೆನ್ಸ್, 4-5 ಚಮಚ ಕಾದಾರಿದ ಗಟ್ಟಿ ಹಾಲು, 10-12 ಎಸಳು ಕೇಸರಿ, 2 ಚಮಚ ಪಿಸ್ತಾ ಚೂರು.
ವಿಧಾನ : ಚೆನ್ನಾಗಿ ಖೋವಾ ಮಸೆದು ಅದರಿಂದ 4-5 ಚಮಚ ಖೋವಾ ಬೇರೆ ಇಡಿ. ಉಳಿದ ಭಾಗಕ್ಕೆ ಹಾಲು, ಪುಡಿಸಕ್ಕರೆ ಬೆರೆಸಿಕೊಂಡು ಚೆನ್ನಾಗಿ ಮ್ಯಾಶ್ ಮಾಡಿ. ಈಗ ಪ್ರತಿ ರಸಗುಲ್ಲಾದಿಂದಲೂ ಪಾಕ ಬೇರ್ಪಡಿಸಿ. ಖೋವಾ ಮಿಶ್ರಣವನ್ನು ಸಣ್ಣ ನಿಂಬೆ ಗಾತ್ರ ಮಾಡಿಕೊಳ್ಳಿ. ಇದರ ಮಧ್ಯೆ ರಸಗುಲ್ಲ ಇರಿಸಿ, ಪೂರ್ತಿ ಕವರ್ ಆಗುವಂತೆ ಮಾಡಿ. ಕೇಸರಿ ಎಸಳನ್ನು ಕೇದಗೆ ಎಸೆನ್ಸ್ ನಲ್ಲಿ ನೆನೆಹಾಕಿ, ಚೆನ್ನಾಗಿ ಮಸೆಯಿರಿ. ಉಳಿದ ಖೋವಾವನ್ನು ಸ್ಟೀಲ್ ಜರಡಿಯಲ್ಲಿ ಅದುಮಿ, ಒಂದೇ ಆಕಾರದ ಬೂಂದಿಕಾಳಿನಂತೆ ಉದುರಲಿ. ಪ್ರತಿ ಉಂಡೆಯನ್ನೂ ಇದರ ಮೇಲೆ ಹೊರಳಿಸಿ. ನಂತರ ಉಂಡೆ ಮೇಲೆ ತುಸು ಒತ್ತಿ, ಕೇಸರಿ ಪಿಸ್ತಾ ಅಲ್ಲಿ ಮೆತ್ತಿಕೊಳ್ಳುವಂತೆ ಮಾಡಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿ ಒಂದು ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.
ಅನಾನಸ್ ಬರ್ಫಿ
ಸಾಮಗ್ರಿ : 100-100 ಗ್ರಾಂ ತುರಿದ ಪನೀರ್-ಖೋವಾ, ಅರ್ಧರ್ಧ ಕಪ್ ಮಾಗಿದ ಅನಾನಸ್ ತುರಿ ಪುಡಿಸಕ್ಕರೆ, ಕೊಬ್ಬರಿ ತುರಿ, 10-12 ಎಸಳು ಕೇಸರಿ, 1 ಚಮಚ ಪಿಸ್ತಾ ಚೂರು, 3-4 ಹನಿ ಪೈನಾಪಲ್ ಎಸೆನ್ಸ್.
ವಿಧಾನ : ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಲಘುವಾಗಿ ಖೋವಾ ಹುರಿಯಿರಿ, ಆದರೆ ಅದರ ಬಣ್ಣ ಬದಲಾಗಬಾರದು. ಅದೇ ತರಹ ತುಸು ತುಪ್ಪದಲ್ಲಿ ಪನೀರ್ ಹುರಿಯಿರಿ. ಕೊನೆಯಲ್ಲಿ ಇದಕ್ಕೆ ಅನಾನಸ್ ಸೇರಿಸಿ ಕೆದಕಿ ಕೆಳಗಿಳಿಸಿ. ಈ ಎರಡು ಮಿಶ್ರಣಗಳೂ ತಣ್ಣಗಾದ ಮೇಲೆ ಅದಕ್ಕೆ ಪುಡಿಸಕ್ಕರೆ, ಕೊಬ್ಬರಿ, ತುಸು ಮ್ಯಾಶ್‌ಗೊಳಿಸಿದ ಕೇಸರಿ ಸೇರಿಸಿ, ಒಂದು ಪ್ಲೇಟ್ ಮೇಲೆ ಸಮನಾಗಿ ಬರುವಂತೆ ಹರಡಿಕೊಳ್ಳಿ. ಇದರ ಮೇಲೆ ಪಿಸ್ತಾ ಚೂರು ಉದುರಿಸಿ. ಇದನ್ನು 3 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ, ನಂತರ ಬರ್ಫಿಗಳಾಗಿ ಕತ್ತರಿಸಿ ಸವಿಯಲು ಕೊಡಿ.
ಬೇಸನ್ ಬಾದಾಮಿ ಬರ್ಫಿ
ಸಾಮಗ್ರಿ : 2 ಕಪ್ ಕಡಲೆಹಿಟ್ಟು, 300 ಗ್ರಾಂ ಸಕ್ಕರೆ, 1 ಕಪ್ ತುಪ್ಪ, 2 ಚಮಚ ಬಾದಾಮಿ ಪುಡಿ, 150 ಗ್ರಾಂ ಖೋವಾ, 2 ತುಂಡಾಗಿ ಕತ್ತರಿಸಿದ 5-6 ಚಮಚ ಬಾದಾಮಿ, ತುಸು ಏಲಕ್ಕಿಪುಡಿ, ಹಾಲು, ನೀರು.
ವಿಧಾನ : ಖೋವಾ ಮಸೆದು, ಲಘುವಾಗಿ ಹುರಿದು ಬೇರೆ ಇಡಿ. ಕಡಲೆಹಿಟ್ಟಿಗೆ 2 ಚಮಚ ಕರಗಿದ ತುಪ್ಪ, 3-4 ಚಮಚ ಹಾಲು ಬೆರೆಸಿ ಚೆನ್ನಾಗಿ ಕಲಸಿಡಿ. 10 ನಿಮಿಷ ಹಾಗೇ ಬಿಡಿ. ನಂತರ ಸ್ಟೀಲ್ ಜರಡಿಯಲ್ಲಿ ಒತ್ತಿ ತೆಗೆದು ಸಮಾನಾಕಾರದ ಬೂಂದಿ ಕಾಳಾಗಿಸಿ. ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಬಿಸಿ ಮಾಡಿ ಅದರಲ್ಲಿ ಈ ಬೇಸನ್ ಹಾಕಿ ಹುರಿಯಿರಿ. ತುಸು ಹುರಿದ ಮೇಲೆ ಉಳಿದ ತುಪ್ಪ ಬೆರೆಸಿ, ಚೆನ್ನಾಗಿ ಪರಿಮಳ ಬರುವಂತೆ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಏಲಕ್ಕಿ, ಬಾದಾಮಿ ಪುಡಿ ಬೆರೆಸಿರಿ. ಪಕ್ಕದ ಒಲೆಯಲ್ಲಿ ಸಕ್ಕರೆಗೆ ತುಸು ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ಅದನ್ನು ಈ ಹುರಿದ ಮಿಶ್ರಣಕ್ಕೆ ಬೆರೆಸಿರಿ. ನಂತರ ಒಲೆ ಆರಿಸಿ, ಈ ಮಿಶ್ರಣವನ್ನು ಮತ್ತಷ್ಟು ಕೆದಕಬೇಕು. ಕೊನೆಗೆ ಇದು ಬಾಣಲೆಗೆ ಅಂಟದೆ ಬಿಟ್ಟುಕೊಂಡಾಗ, ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಯಲ್ಲಿ ಹರಡಿಕೊಳ್ಳಿ, ನಡುನಡುವೆ ಬಾದಾಮಿ ಅಂಟಿಸಿ. ಆರಿದ ನಂತರ ಬರ್ಫಿ ಕತ್ತರಿಸಿ ಸವಿಯಲು ಕೊಡಿ.