ಕುಕ್ಕರ್‌ ಬಳಸದೆ ನೇರವಾಗಿ ಪಾತ್ರೆಯಲ್ಲಿ ಅನ್ನ ಮಾಡುವ ಪದ್ಧತಿ ಈಗಲೂ ಬಹುತೇಕ ಉಳಿದಿದೆ. ಅನ್ನ ಇನ್ನೇನು ಬೆಂದಿದೆ ಎನ್ನುವಾಗ, ಅದರ ಮೇಲ್ಭಾಗದಲ್ಲಿ ಹೆಚ್ಚಿನ ನೀರಿನಂಶ ಅಕ್ಕಿಯ ಎಲ್ಲಾ ಪೋಷಕಾಂಶಗಳೊಂದಿಗೆ ಮಡುಗಟ್ಟಿ ನಿಲ್ಲುವ ಗಟ್ಟಿ ದ್ರವವೇ ಗಂಜಿ! ಅನ್ನ ಬಸಿದ ಮೇಲೆ ಬಹುತೇಕರು ಇದನ್ನು ಬಳಸದೆ ಚೆಲ್ಲುವುದುಂಟು. ಈ ಗಂಜಿ ನಮ್ಮಲ್ಲಿ ಮಾತ್ರವಲ್ಲದೆ ಚೀನಾ, ಜಪಾನುಗಳಲ್ಲೂ `ರೈಸ್‌ ವಾಟರ್‌’ ಎಂದು ಖ್ಯಾತವಾಗಿದೆ. ಗಂಜಿ ನಮ್ಮ ಆರೋಗ್ಯಕ್ಕೆ ಪೂರಕವಲ್ಲದೆ ಸೌಂದರ್ಯ ಸಂವರ್ಧನೆಯಲ್ಲಿಯೂ ಹಿರಿಯ ಪಾತ್ರ ವಹಿಸುತ್ತದೆ. ಪೌಷ್ಟಿಕಾಂಶದ ಈ ಖಜಾನೆಯ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿಯೋಣವೇ?

1 ದೊಡ್ಡ ಲೋಟ ಗಂಜಿ ಕುಡಿದರೆ ಅದು ಎನರ್ಜಿ ಡ್ರಿಂಕ್‌ ತರಹ ಕೆಲಸ ಮಾಡುತ್ತದೆ. ನಿಮ್ಮ ರುಚಿಗೆ ತಕ್ಕಂತೆ ಇದಕ್ಕೆ ಉಪ್ಪು, ಮೆಣಸು, ಜೀರಿಗೆ, ಹೆಚ್ಚಿದ ಪುದೀನಾ, ಕೊ.ಸೊಪ್ಪು ಸೇರಿಸಿಕೊಳ್ಳಿ.

ಮಕ್ಕಳಿಗೆ ಕೊಡುವಾಗ ಇದಕ್ಕೆ ಸಮ ಪ್ರಮಾಣದಲ್ಲಿ ಬಿಸಿ ಹಾಲು, 2 ಚಮಚ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿಕೊಟ್ಟರೆ ಮಕ್ಕಳು ಇಷ್ಟಪಟ್ಟು ಸೇವಿಸುತ್ತಾರೆ.

ಗಂಜಿಯ ಸೇವನೆ ನಮ್ಮ ದೇಹದ ಉಷ್ಣತೆಯನ್ನು ನಿಗ್ರಹಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಇದರ ಸೇವನೆ ದೇಹಕ್ಕೆ ಎಷ್ಟೋ ತಂಪು.

ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ಇದನ್ನು ತಪ್ಪದೆ 2 ಸಲ ದಿನಾ ಸೇವಿಸಿ.

ಇದು ಉತ್ತಮ ಕಾರ್ಬೋಹೈಡ್ರೇಟ್‌ ಅಂಶಗಳ ಭಂಡಾರವೇ ಆಗಿದೆ.

ಪ್ರತಿ ದಿನ 2 ಗ್ಲಾಸ್‌ ಗಂಜಿ ಕುಡಿಯುವುದರಿಂದ  ಅಲ್‌ಝೈಮರ್‌ ರೋಗವನ್ನು ನಿಯಂತ್ರಣಕ್ಕೆ ತರಬಹುದು.

ಗಂಜಿಯ ಸೇವನೆಯಿಂದ ಭೇದಿಯ ಸಮಸ್ಯೆ ದೂರಾಗುತ್ತದೆ. ಸುಸ್ತು, ನಿತ್ರಾಣ ದೂರವಾಗಿ ತಾಜಾತನ ಮೂಡುತ್ತದೆ. ಇದು ಎಲ್ಲಾ ವಯೋಮಾನದವರಿಗೂ ಒಪ್ಪುತ್ತದೆ.

ಗ್ಯಾಸ್‌ ಟ್ರಬಲ್ ಇರುವವರಿಗೆ ನಿಜಕ್ಕೂ ಇದು ರಾಮಬಾಣ.

ಇದು ಸೌಂದರ್ಯವರ್ಧಕ ಕೂಡ. ಇದು ವಿಟಮಿನ್‌, ಖನಿಜಾಂಶಗಳಿಂದ ಕೂಡಿದೆ.

ಮಂದವಾದ ಗಂಜಿ ಬೆಸ್ಟ್ ಫೇಶಿಯಲ್ ಕ್ಲೀನರ್‌. ಒಂದು ನಿಂಬೆ ಗಾತ್ರದ ಹತ್ತಿಯನ್ನು ಗಂಜಿಯಲ್ಲಿ ಅದ್ದಿ ಮುಖವನ್ನು ಒಂದು ಬದಿಯಿಂದ ಒಂದೇ ದಿಕ್ಕಿನಲ್ಲಿ ಒರೆಸಿರಿ. ಅದು ಒಣಗಿದಾಗ ತಣ್ಣೀರಿನಿಂದ ತೊಳೆಯಿರಿ. ಇದರ ನಿಯಮಿತ ಬಳಕೆ ಮುಖದ ಚರ್ಮವನ್ನು ಮೃದು, ಕೋಮಲಗೊಳಿಸಿ ಕಸುವು ತುಂಬುತ್ತದೆ.

ಫೇಶಿಯಲ್ ಟೋನರ್‌ ತರಹ ಇದನ್ನು ಬಳಸಿರಿ. ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿ, ಮುಖದ ಮೇಲೆ ಕೈಯಾಡಿಸಿ. ಆಗ ಇದು ಓಪನ್‌ ಪೋರ್ಸ್‌ನ್ನು ಕ್ಲೋಸ್‌ ಮಾಡುತ್ತದೆ.

ಆ್ಯಕ್ನೆಯಿಂದ ಪೀಡಿತರು ಅದರ ನಿವಾರಣೆಗಾಗಿ ಇದನ್ನು ಪ್ರತಿನಿತ್ಯ (1 ತಿಂಗಳ ಕಾಲ) ಮುಖಕ್ಕೆ ಹಚ್ಚಬೇಕು. ಜೊತೆಗೆ ಇದು ಆ್ಯಸ್ಟ್ರಿಂಜೆಂಟ್‌ನ ಕೆಲಸವನ್ನೂ ಮಾಡುತ್ತದೆ.

ಇದರ ಪಿಷ್ಟದ (ಸ್ಟಾರ್ಚ್‌) ಘಟಕ ಚರ್ಮದಲ್ಲಿನ ಎಗ್ಝಿಮಾ ಭಾಗವನ್ನು ವಾಸಿ ಮಾಡಲಿಕ್ಕೂ ಪೂರಕ. ತೆಳು ಕಾಟನ್‌ ಬಟ್ಟೆಯನ್ನು ಇದರಲ್ಲಿ ಅದ್ದಿ, ಆ ಭಾಗಕ್ಕೆ ಮಸಾಜ್‌ ಮಾಡಿ. ಹೀಗೆ ಮತ್ತೆ ಮತ್ತೆ (1 ತಿಂಗಳು) ಮಾಡಿ.

ಸನ್‌ಬರ್ನ್‌ಗೆ ಈಡಾದ ತ್ವಚೆಗೂ ಚಿಲ್ಡ್ ಗಂಜಿ ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ.

ಕೂದಲನ್ನು ಸ್ವಸ್ಥ, ಹೊಳೆ ಹೊಳೆಯುವಂತೆ ಮಾಡಲು ಇದನ್ನೇ ಶ್ಯಾಂಪೂ ತರಹ ಬಳಸಿರಿ. ಅಂದರೆ ನಿಮ್ಮ ರೆಗ್ಯುಲರ್‌ ಶ್ಯಾಂಪೂ ಹಚ್ಚಿ ತೊಳೆದ ಬಳಿಕ, ಇದನ್ನು ಬಳಸಬೇಕು. ಹೀಗೆ ವಾರಕ್ಕೆ 2 ಸಲ ಮಾಡುವುದರಿಂದ ಕೂದಲಿಗೆ ಹೆಚ್ಚಿನ ಲಾಭವಿದೆ.

ಗಂಜಿ ಕೂದಲಿಗೆ ಹೇರ್‌ ಕಂಡೀಶನರ್‌ ತರಹ ಕೆಲಸ ಮಾಡುತ್ತದೆ. ಇದಕ್ಕೆ ಕೆಲವು ಹನಿ ಲ್ಯಾವೆಂಡರ್‌ ಅಥವಾ ರೋಸ್‌ಮೆರಿ ಬೆರೆಸಿ, ಕೂದಲಿಗೆ ಹಚ್ಚಿ ಸುಮಾರು 10 ನಿಮಿಷ ಹಾಗೇ ಬಿಡಿ. ನಂತರ ಹನಿ ಹನಿಯಾಗಿ ನೀರು ಬಿಡುತ್ತಾ ಮಸಾಜ್‌ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಗಂಜಿಗೆ ಮೂಲತಃ `UV’ ಕಿರಣಗಳನ್ನು ಹೀರಿಕೊಳ್ಳುವ, ಆ್ಯಂಟಿ ಆಕ್ಸಿಡೆಂಟಾಗಿ ವರ್ತಿಸುವ, ಆರ್ದ್ರತೆ ಉಳಿಸಿಕೊಳ್ಳುವ ಗುಣಗಳಿವೆ. ಚರ್ಮದಲ್ಲಿನ ಸುಕ್ಕುಗಳನ್ನು ನಿವಾರಿಸಿ, ಹೆಚ್ಚುತ್ತಿರುವ ವಯಸ್ಸಿನ ಪ್ರಕೋಪ ತಾಕದಂತೆ ಮಾಡುತ್ತದೆ.

ಚರ್ಮದ ಉರಿ, ರಾಶೆಸ್‌ ದೂರ ಮಾಡಲು ತಂಪಾದ ಗಂಜಿಯನ್ನು ಸವರಿ, ಒಣಗಿಸಿ, ತೊಳೆಯಿರಿ.

ಕೂದಲಿಗೆ ಇದರ ನಿಯಮಿತ ಬಳಕೆ, ಅದನ್ನು ಹೆಚ್ಚು ಸಶಕ್ತಗೊಳಿಸಿ, ಹೊಳೆಯುವಂತೆ ಮಾಡುತ್ತದೆ, ಕೂದಲು ಮುರಿಯದಂತೆ ತಡೆಯುತ್ತದೆ. ಉದ್ದ ಬೆಳೆಸುತ್ತದೆ. ಇದರ ಹೆಚ್ಚಿನ ಲಾಭ ಪಡೆಯಲು ಗಂಜಿಯನ್ನು ಕೂದಲಿಗೆ ಹಚ್ಚಿ 20 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಹೀಗಾಗಿ ಮುಂದಿನ ಸಲ ನೀವು ಯಾವಾಗ ಅನ್ನ ಮಾಡಿದರೂ, ತುಸು ಹೆಚ್ಚೇ ನೀರು ಬೆರೆಸಿ, ಗಂಜಿ ಬಸಿದು, ಅದರಿಂದ ಈ ಮೇಲ್ಕಂಡ ಲಾಭ ಪಡೆಯಿರಿ. ಇದನ್ನು ಫ್ರಿಜ್‌ನಲ್ಲಿರಿಸಿ 4-5 ದಿನಗಳ ಕಾಲ ಹಾಯಾಗಿ ಬಳಸಬಹುದು. ಬಳಸುವ ಮುಂಚೆ ಚೆನ್ನಾಗಿ ಗೊಟಾಯಿಸಿ, ಒಂದೇ ಹದ ಇರುವಂತೆ ಮಾಡಿ.

– ಜಿ. ಮಾಧುರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ