ಕೆಲವು ಜನರು ಮುಂಜಾನೆ ಉಪಾಹಾರವೆಂದರೆ ಮೂಗು ಮುರಿಯುತ್ತಾರೆ. ಮುಂಜಾನೆ ಹೊಟ್ಟೆ ತುಂಬ ತಿಂಡಿ ತಿಂದರೆ ಎಲ್ಲಿ ತಮ್ಮ ತೂಕ ಹೆಚ್ಚುತ್ತೊ ಎಂದು ಅವರಿಗೆ ಹೆದರಿಕೆಯಾಗುತ್ತದೆ. ಅವರ ಈ ಯೋಚನೆ ಸಂಪೂರ್ಣ ತಪ್ಪು. ಆರೋಗ್ಯಕರ ಉಪಾಹಾರ ಸೇವನೆಯಿಂದ  ಹತ್ತು ಹಲವು ಲಾಭಗಳಿವೆ.

ದೇಹದಲ್ಲಿ ಎನರ್ಜಿ ಅಥವಾ ಶಕ್ತಿಯನ್ನು ಕಾಯ್ದುಕೊಂಡು ಹೋಗಲು, ತೂಕ ಕಡಿಮೆ ಮಾಡಲು ಕೂಡ ಮುಂಜಾನೆ ಉಪಾಹಾರ ನೆರವಾಗುತ್ತದೆ. ಒಂದು ಸಂಗತಿ ಗಮನದಲ್ಲಿರಲಿ, ಅದೇನೆಂದರೆ ನಿಮ್ಮ ಸ್ನ್ಯಾಕ್ಸ್ ನಲ್ಲಿ ಕ್ಯಾಲೋರಿ ಪ್ರಮಾಣ 100-150ಕ್ಕಿಂತ ಹೆಚ್ಚಾಗಬಾರದು.

ಆರೋಗ್ಯಕರ ಸ್ನ್ಯಾಕ್ಸ್

ಆರೋಗ್ಯಕರ ಸ್ನ್ಯಾಕ್ಸ್ ಕೇವಲ ಹಸಿವನ್ನಷ್ಟೇ ಹಿಂಗಿಸುವುದಿಲ್ಲ, ಅದು ಬಹಳ ಹೊತ್ತಿನತನಕ ಹೊಟ್ಟೆಯನ್ನು ತುಂಬಿಡುತ್ತದೆ. ಇದರಲ್ಲಿ ಕ್ಯಾಲೋರಿಯ ಪ್ರಮಾಣ ಹೆಚ್ಚಿಗೆ ಇರುವುದಿಲ್ಲ. ಹೀಗಾಗಿ ತೂಕ ಹೆಚ್ಚುವ ಅಪಾಯ ಕಡಿಮೆಯಾಗುತ್ತದೆ.

ಕೆಲವು ಆರೋಗ್ಯಕರ ಕಿವಿಮಾತುಗಳು

ಹಣ್ಣುಗಳು : ಹಣ್ಣುಗಳನ್ನು ಎಲ್ಲಕ್ಕೂ ಉತ್ತಮ ಸ್ನ್ಯಾಕ್ಸ್ ಎಂದು ಭಾವಿಸಲಾಗುತ್ತದೆ. ಹಣ್ಣುಗಳನ್ನು ರಸದ ರೂಪದಲ್ಲಿ ಸೇವಿಸದೆ ಹಾಗೆಯೇ ಇಡಿಯಾಗಿ ಸೇವಿಸುವುದು ಒಳ್ಳೆಯದು. ಇವುಗಳಲ್ಲಿ ಮಿನರಲ್ಸ್ ಮತ್ತು ವಿಟಮಿನ್‌ಗಳ ಜೊತೆ ಜೊತೆಗೆ ಕಬ್ಬಿಣಾಂಶ ಕೂಡ ಹೇರಳವಾಗಿರುತ್ತದೆ. ಯಾವ ಹಣ್ಣುಗಳನ್ನು ಸಿಪ್ಪೆ ಸಹಿತ ಸೇವಿಸಲು ಸಾಧ್ಯ, ಅಂಥವನ್ನು ಹಾಗೆಯೇ ಸೇವಿಸಿ. ದೊಡ್ಡ ಗಾತ್ರದ ಹಣ್ಣುಗಳನ್ನು ಕತ್ತರಿಸಿ ಒಂದು ಬಟ್ಟಲಿನಷ್ಟು ಅವಶ್ಯ ಸೇವಿಸಿ. ಹಣ್ಣುಗಳು ತಕ್ಷಣವೇ ಎನರ್ಜಿ ದೊರಕಿಸಿಕೊಡುತ್ತವೆ. ಅದರಿಂದ ಮಾನಸಿಕ ಚುರುಕುತನ ಹೆಚ್ಚುತ್ತದೆ.

ಸ್ಪ್ರೌಟ್ಸಲಾಡ್‌ : ಸ್ಪ್ರೌಟ್‌ ಅಂದರೆ ಮೊಳಕೆ ಕಾಳುಗಳನ್ನು `ಸೂಪರ್‌ ಫುಡ್ಸ್’ ಎಂದು ಕರೆಯಲಾಗುತ್ತದೆ. ಏಕೆಂದರೆ ಇವು ಪೋಷಕಾಂಶಗಳಿಂದ ತುಂಬಿ ತುಳುಕುತ್ತಿರುತ್ತವೆ. ಇವನ್ನು ಸ್ವಲ್ಪ ಪ್ರಮಾಣದಲ್ಲಿ ಕುದಿಸಿಕೊಂಡು ಅದರಲ್ಲಿ ಟೊಮೇಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಸಣ್ಣಗೆ ಕತ್ತರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ. ಅದರ ಮೇಲೆ ಸ್ವಲ್ಪ ಉಪ್ಪು, ನಿಂಬೆರಸ ಹಾಕಿಕೊಳ್ಳಿ. ಹೆಸರು, ಮಡಕೆ, ಕಡಲೆ, ಹಲಸಂದೆ ಮುಂತಾದವುಗಳಿಂದ ಮೊಳಕೆ ತಯಾರಿಸಿಕೊಳ್ಳಬಹುದು.

ಕಡಲೆ ಸ್ಪ್ರೌಟ್ : ಕಡಲೆ ಕಾಳುಗಳು ಒಳ್ಳೆಯ ಸ್ನ್ಯಾಕ್ಸ್ ಆಗಿವೆ. ಏಕೆಂದರೆ ಇದರಲ್ಲಿ ಕಾರ್ಬೊಹೈಡ್ರೇಟ್‌ ಹಾಗೂ ಪ್ರೋಟೀನ್‌ ಹೇರಳ  ಪ್ರಮಾಣದಲ್ಲಿ ಇರುತ್ತದೆ. ಇದರಲ್ಲಿ ಕೊಬ್ಬಿನಂಶ ಅಷ್ಟೇನೂ ಇರುವುದಿಲ್ಲ. ಇದು ನಮ್ಮ ದೇಹವನ್ನು ಶಕ್ತಿಯಿಂದ ಭರ್ತಿ ಮಾಡುತ್ತದೆ. ಒಂದುವೇಳೆ ಕಡಲೆ ಮೊಳಕೆಯುಕ್ತವಾಗಿದ್ದರೆ ಇನ್ನೂ ಒಳ್ಳೆಯದು. ಏಕೆಂದರೆ ಮೊಳಕೆ ಬಂದಾಗ ಪೋಷಕಾಂಶಗಳ ಪ್ರಮಾಣ ಇನ್ನೂ ಹೆಚ್ಚುತ್ತದೆ. ಅವನ್ನು ಸ್ವಲ್ಪ ಕುದಿಸಿ, ಹುರಿದು ಸಹ ಸೇವಿಸಬಹುದು. ಮಸಾಲೆಯುಕ್ತ ಕಡಲೆ ಕೂಡ ಬಹಳ ಸ್ವಾದಿಷ್ಟವಾಗಿರುತ್ತದೆ.

ಎಳ್ಳು ಬೆಲ್ಲ : ಚಳಿಗಾಲದಲ್ಲಿ ಎಳ್ಳು ಹಾಗೂ ಬೆಲ್ಲಕ್ಕಿಂತ ಮತ್ತೊಂದು ಒಳ್ಳೆಯ ಸ್ನ್ಯಾಕ್ಸ್ ಇರಲಾರದೇನೊ? ಎಳ್ಳು ಹಾಗೂ ಬೆಲ್ಲ ಮಿಶ್ರಣ ಮಾಡಿ. ತಯಾರಿಸಿದ ಲಡ್ಡು ವಿಟಮಿನ್‌, ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶದಿಂದ ಭರ್ತಿಯಾಗಿರುತ್ತದೆ. ಇದರಲ್ಲಿ ಕ್ಯಾಲೋರಿ ಪ್ರಮಾಣ ಅಧಿಕವಾಗಿರುತ್ತದೆ. ಹೀಗಾಗಿ ಒಂದಕ್ಕಿಂತ ಹೆಚ್ಚಾಗಿ ಲಡ್ಡು ಸೇವನೆ ಮಾಡಬೇಡಿ.

ಬೇಯಿಸಿದ ಮೊಟ್ಟೆ : ಒಂದು ಬೇಯಿಸಿದ ಮೊಟ್ಟೆಯಲ್ಲಿ 70 ಕ್ಯಾಲೋರಿ ಇರುತ್ತದೆ. ಒಂದು ವೇಳೆ ನೀವು ಸ್ನ್ಯಾಕ್ಸ್ ನಲ್ಲಿ 2 ಮೊಟ್ಟೆ ತಿಂದರೂ 140 ಕ್ಯಾಲೋರಿ ಮಾತ್ರ ಸೇವಿಸಿದಂತೆ ಆಗುತ್ತದೆ. ಮೊಟ್ಟೆ ವಿಟಮಿನ್‌ ಮತ್ತು ಮಿನರಲ್ಸ್ ನಿಂದ ಭರ್ತಿಯಾಗಿರುತ್ತದೆ. ಪ್ರೋಟೀನು ಪಚನಗೊಳ್ಳಲು ತಡವಾಗುತ್ತದೆ. ಇದರಿಂದ ದೇಹ ಹಾಗೂ ಮೆದುಳಿನಲ್ಲಿ ನಿರಂತರ ಶಕ್ತಿ ಪೂರೈಕೆಯಾಗುತ್ತದೆ.

ವೆಜಿಟೆಬಲ್ ಸೂಪ್‌ : ಸಾಕಷ್ಟು ಪೋಷಕಾಂಶಗಳಿಂದ ತುಂಬಿರುತ್ತವೆ. ಒಂದು ಬಟ್ಟಲು ಟೊಮೇಟೊ ಸೂಪ್‌ನಲ್ಲಿ  70 ಕ್ಯಾಲೋರಿ ಇರುತ್ತದೆ. ಸೋರೆಕಾಯಿಯಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇರುತ್ತದೆ. ಇದರ ಒಂದು ಬಟ್ಟಲು ಸೂಪ್‌ನಲ್ಲಿ 4-5 ಕ್ಯಾಲೋರಿ ಮಾತ್ರ ಇರುತ್ತದೆ. ಹೆಸರುಕಾಳಿನ ಸೂಪ್‌ ಕೂಡ  ತುಂಬಾ ಒಳ್ಳೆಯದು. ಅದು ಪ್ರೋಟೀನ್‌ನಿಂದ ಸಮೃದ್ಧವಾಗಿರುತ್ತದೆ.

ಡ್ರೈಫ್ರೂಟ್ಸ್ : ಒಣ ಹಣ್ಣುಗಳು ಪ್ರೋಟೀನ್‌, ಆರೋಗ್ಯಕರ ಕೊಬ್ಬು, ಮಿನರಲ್ಸ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿರುತ್ತವೆ. ಆದರೆ ಇವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಏಕೆಂದರೆ ಇದರಲ್ಲಿ ಕ್ಯಾಲೋರಿ ಹೇರಳವಾಗಿರುತ್ತದೆ. ಒಂದು ಮುಷ್ಟಿಯಷ್ಟು ಒಣ ಹಣ್ಣುಗಳು (ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಅಖರೋಟು) ಸಾಕು. ಈ ಒಣಹಣ್ಣುಗಳಲ್ಲಿ ನಾರಿನಂಶ ಹೇರಳವಾಗಿರುತ್ತದೆ.

ಫ್ರೂಟ್ಸಲಾಡ್‌ : ಹಣ್ಣುಗಳು ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್, ಮಿನರಲ್ಸ್ ಗಳಿಂದ ಸಮೃದ್ಧವಾಗಿರುತ್ತದೆ. ಫ್ರೂಟ್‌ ಚಾಟ್‌ ಒಂದು ಒಳ್ಳೆಯ ಸ್ನ್ಯಾಕ್ಸ್ ಆಗಿದೆ. ನಿಮಗೆ ಇಷ್ಟವಾಗುವ 3-4  ಬಗೆಯ ಹಣ್ಣುಗಳನ್ನು ಮಿಶ್ರಣ ಮಾಡಿ ಫ್ರೂಟ್‌ ಚಾಟ್‌ ತಯಾರಿಸಬಹುದು. ಆದರೆ ಒಂದು ಸಂಗತಿ ನೆನಪಿರಲಿ, ಹಣ್ಣುಗಳು ತಾಜಾ ಆಗಿರಬೇಕು. ಅವನ್ನು ನೈಸರ್ಗಿಕ ರೂಪದಲ್ಲಿಯೇ ಸೇವಿಸಿ. ಫ್ರೂಟ್‌ ಸಲಾಡ್‌ ಮೇಲೆ ಉಪ್ಪು ಅಥವಾ ಮಸಾಲೆಪುಡಿ ಸಿಂಪಡಿಸಿಕೊಳ್ಳಬೇಡಿ. ಹಾಗೆ ಮಾಡುವುದರಿಂದ ಹಣ್ಣುಗಳಲ್ಲಿರುವ ನೀರಿನಂಶ ಬಸಿದುಹೋಗುತ್ತದೆ.

ಕಾರ್ನ್ಚಾಟ್‌ : ಮೆಕ್ಕೆ ಜೋಳದ ಕಾಳುಗಳನ್ನು ಬೇಯಿಸಿಕೊಂಡು. ಅದರಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ಮಿಶ್ರಣ ಮಾಡಿ. ಅದರಲ್ಲಿ ಒಂದಿಷ್ಟು ಉಪ್ಪು ಮತ್ತು ನಿಂಬೆರಸ ಮಿಶ್ರಣಗೊಳಿಸಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ಇನ್ನೂ ಉತ್ತಮವೇ. ನೀವು ಇಷ್ಟಪಟ್ಟರೆ ಕ್ಯಾರೆಟ್‌ ಹಾಗೂ ಸೌತೆ ತುಂಡುಗಳನ್ನು ಮಿಶ್ರಣಗೊಳಿಸಿಕೊಳ್ಳಬಹುದು. ಇದು ಅತ್ಯಂತ ಪೋಷಕಾಂಶವುಳ್ಳ ಸ್ನ್ಯಾಕ್ಸ್ ಆಗಿದೆ.

ಡೇರಿ ಪ್ರಾಡಕ್ಟ್ಸ್ : 1 ಕಪ್‌ ಕೆನೆರಹಿತ ಹಾಲನ್ನು ಕಾರ್ನ್‌ಫ್ಲೇಕ್ಸ್ ಸಹಿತ ಸೇವಿಸಿ. 1 ಕಪ್‌ ಮೊಸರು ಅಥವಾ ರಾಯ್ತಾ ಕೂಡ ಸೇವಿಸಬಹುದು. 1 ಗ್ಲಾಸ್‌ ಉಪ್ಪು ಮಿಶ್ರಿತ ಮಜ್ಜಿಗೆ ಅಥವಾ 1 ಕಪ್‌ ಲಸ್ಸಿ ಕೂಡ ಇದಕ್ಕೆ ಒಳ್ಳೆಯ ಪರ್ಯಾಯವಾಗಿದೆ.

ಹಾಲು ಉತ್ಪನ್ನಗಳು : ಇವು ದೇಹದ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸುತ್ತವೆ. ಹೊಟ್ಟೆ ತುಂಬಿರುವ ಅನುಭೂತಿ ದೊರಕಿಸಿಕೊಡುತ್ತವೆ, ನಮ್ಮಲ್ಲಿ ತಾಜಾತನ ನೀಡುತ್ತವೆ.

ಬಿಸ್ಕತ್ತು ಮತ್ತು ಬ್ರೆಡ್‌ : ಮೈದಾ ಬಿಸ್ಕತ್ತುಗಳನ್ನು ಸೇವಿಸಬೇಡಿ. ಗೋದಿಹಿಟ್ಟಿನಿಂದ ತಯಾರಿಸಿದ ಅಥವಾ ಓಟ್ಸ್ ಬಿಸ್ಕತ್ತುಗಳನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ, ಜೊತೆಗೆ ಪೋಷಕಾಂಶಗಳು ಸಾಕಷ್ಟು ಇರುತ್ತವೆ. ಸ್ನ್ಯಾಕ್ಸ್ ನಲ್ಲಿ 3ಕ್ಕಿಂತ ಹೆಚ್ಚು ಬಿಸ್ಕತ್ತು ಸೇವಿಸಬೇಡಿ. ಇವುಗಳ ಜೊತೆಗೆ ಗ್ರೀನ್‌, ಟೀ, ಕಾಫಿ ಅಥವಾ ಚಹಾ ಸೇವಿಸಬಹುದು. ಅವು ದೇಹಕ್ಕೆ ತಕ್ಷಣಕ್ಕೆ ಶಕ್ತಿ ದೊರಕಿಸಿಕೊಡುತ್ತವೆ. ಕಾಫಿ ಅಥವಾ ಚಹಾ ಜೊತೆಗೆ ಒಂದು ಹೋಲ್ ಗ್ರೇನ್‌ ಸ್ಲೈಸ್‌ ಅಥವಾ ಮಲ್ಟಿಗ್ರೇನ್‌ ಬ್ರೆಡ್‌ ಕೂಡ ಒಳ್ಳೆಯ ಕಾಂಬಿನೇಶನ್‌ ಆಗಿದೆ.

ಸಾಲ್ಟೆಡ್ಪೀನಟ್‌ :  ಇದು ಅತ್ಯಂತ ಆರೋಗ್ಯಕರ, ಪೋಷಕಾಂಶಭರಿತ ಸ್ನ್ಯಾಕ್ಸ್ ಆಗಿದೆ. ಒಂದು ಮುಷ್ಟಿ ಕಡಲೆಬೀಜದಲ್ಲಿ 80-90ರಷ್ಟು ಕ್ಯಾಲೋರಿ ಇರುತ್ತದೆ. ಇದರ ಹೊರತಾಗಿ ಇದರಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್ ಕಡಿಮೆ ಇರುತ್ತದೆ. ಹೀಗಾಗಿ ಇದು ಕಾಲಕ್ರಮೇಣ ಶಕ್ತಿ ದೊರಕಿಸುತ್ತ ಹೋಗುತ್ತದೆ. ಹೀಗಾಗಿ ಇದು ಹೆಚ್ಚು ಕಾಲದ ತನಕ ಹೊಟ್ಟೆ ತುಂಬಿದ ಅನುಭೂತಿ ದೊರಕಿಸಿಕೊಡುತ್ತದೆ.

ಎನರ್ಜಿ ಮಟ್ಟ : ಆರೋಗ್ಯಕರ ಉಪಾಹಾರದಲ್ಲಿ ಪ್ರೋಟೀನ್‌, ಆರೋಗ್ಯಕರ ಕೊಬ್ಬು, ಕಾರ್ಬೊಹೈಡ್ರೇಟ್‌ ಸೂಕ್ತ ಪ್ರಮಾಣದಲ್ಲಿರುತ್ತದೆ. ಅವುಗಳ ಸೇವನೆಯಿಂದ ದೇಹದಲ್ಲಿ ಮತ್ತು ಮೆದುಳಿನಲ್ಲಿ ಎನರ್ಜಿ ಸಾಮಾನ್ಯ ಮಟ್ಟದಲ್ಲಿರುತ್ತದೆ.

ಗಮನ ಕೇಂದ್ರೀಕರಿಸಲು ಸಹಾಯ : ಎರಡು ಊಟಗಳ ನಡುವಿನ ಅಂತರ ಹೆಚ್ಚಾದಲ್ಲಿ ನಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಕಾರಾತ್ಮಕ ರೀತಿಯಲ್ಲಿ ಪ್ರಭಾವಿತಗೊಳ್ಳುತ್ತದೆ. ಯಾರು ಎರಡು ಊಟಗಳ ನಡುವೆ ಉಪಾಹಾರ ಸೇವಿಸುತ್ತಾರೊ, ಅವರ ಮೆದುಳು ಪರಿಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತದೆ.

ಡಿ. ನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ