ಮನೆ ಎಂದರೆ ಮನುಷ್ಯ ಜೀವಿಸಲು, ಉಳಿಯಲು ಒಂದು ತಾಣ, ಆದರೆ ಈಗ ಮನೆ ಎಂಬುದು ಬರಿಯ ಅಗತ್ಯವಾಗಿ ಉಳಿದಿಲ್ಲ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅಲಂಕಾರಕ್ಕೂ ಅಲ್ಲಿ ಪ್ರಾಧಾನ್ಯತೆ ಬಂದಿತು. ಈಗ ಬರಿಯ ಅಲಂಕಾರ ಒಂದು ಹೆಜ್ಜೆ ಮುಂದೆ ಹೋಗಿ ವೈಭವಯುತವಾದ  ಮನೆಗಳು ಅರ್ಥಾತ್‌ ಬಂಗಲೆಗಳು, ನುರಿತ ವಿನ್ಯಾಸಕಾರರಿಂದ ರೂಪುಗೊಂಡವು. ಈಗ ನಮ್ಮ ಬೆಂಗಳೂರು ಇಡೀ ವಿಶ್ವದ ಗಮನವನ್ನೇ ಸೆಳೆದಿದೆ. ವಿಶ್ವದ ಎಲ್ಲರಿಗೂ ಬೆಂಗಳೂರಿನಲ್ಲಿ ಒಂದು ಮನೆಯನ್ನು, ಅದೂ ಸ್ವಂತ ಮನೆಯನ್ನು ಹೊಂದುವ ಆಸೆ. ಅಂತೆಯೇ ಇಲ್ಲಿಯವರಿಗೂ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಹೊಂದುವ ಆಸೆ. ಅವರವರ ಜೇಬಿಗೆ ತಕ್ಕಂತೆ ಬೆಂಗಳೂರಿನ ಸುತ್ತಮುತ್ತ ಒಂದಕ್ಕಿಂತ ಒಂದು, ಸುಂದರ ಮನಸೆಳೆಯುವ ಮನೆಗಳು ಕಾಣಸಿಗುತ್ತವೆ. ಇದು ಬರಿಯ ಮನೆಯ ಮಾತಾಯಿತು. ಮನೆ ಎಂದಾಗ ಮನೆಯಲ್ಲಿರುವ ಎಲ್ಲರ ಬೇಕು ಬೇಡಗಳನ್ನು ಗಮನಿಸಬೇಕಾಗುತ್ತದೆ. ಮನೆ ಎನ್ನುವುದು ಮನೆಯವರೆಲ್ಲರಿಗೂ ಸೇರಿದ್ದಾದ್ದರಿಂದ ಮನೆಯಲ್ಲಿನ ಹಿರಿಯರಿಂದ ಹಿಡಿದು ಪುಟ್ಟ ಮಕ್ಕಳ ಅವಶ್ಯಕತೆಗಳಿಗೂ ಗಮನ ಕೊಡಬೇಕಾಗುತ್ತದೆ. ಆದರೆ ನಮ್ಮ ಕೋಣೆ ಅರ್ಥಾತ್‌ ಬೆಡ್‌ ರೂಮ್ ಎಂದಾಗ ಅಲ್ಲಿನ ರೂಪುರೇಷೆಗೆ ನಮಗೆ ಎಲ್ಲಿಲ್ಲದ ಸ್ವಾತಂತ್ರ್ಯ, ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಅಲ್ಲಿ ಪೂರೈಸಿಕೊಳ್ಳಬಹುದು. ನಮ್ಮ ಕೋಣೆ ಎನ್ನುವುದು ಸ್ವಂತದ ವಿಷಯ, ಅದರ ರೂಪಿಸುವಿಕೆ ಅಲ್ಲಿ ವಾಸಿಸುವವರ ಅಗತ್ಯಕ್ಕೆ ಅವರ ಆದ್ಯತೆಗೆ ಮತ್ತು ಕಾಂತಿಕೆಗೂ ಒಂದು ಸವಾಲೆನಿಸುತ್ತದೆ. ಹೆಚ್ಚು ಹೆಚ್ಚು ಹಣ ಖರ್ಚು ಮಾಡಿ ನಮ್ಮ ಕೋಣೆಯನ್ನು ಅಲಂಕರಿಸುವ ಪರಿ ಒಂದು ರೀತಿಯಾದರೆ, ಸಣ್ಣ ಸಣ್ಣ ವಿಷಯಗಳಿಗೆ ಗಮನಕೊಟ್ಟು ಕೋಣೆಯನ್ನು ಚಂದವಾಗಿ ಕಾಣುವಂತೆ ಮಾಡುವುದು ಜಾಣತನ ಮತ್ತು ನಿಮ್ಮ ಕಲಾತ್ಮಕತೆಗೆ ಸವಾಲೂ ಹೌದು. ಈಗ ಒಂದು ಕೋಣೆಯನ್ನು ಸುಂದರವಾಗಿರಿಸುವ ಪರಿ ಹೇಗೆ ಎನ್ನುವುದನ್ನು ಯೋಚಿಸೋಣ.

ಕೋಣೆ 1

ಒಂದು ಕೋಣೆಗೆ ಕನಿಷ್ಠ ಒಂದು ಮಂಚ ಅಗತ್ಯ. ಓದಲು ಅಥವಾ ಕಂಪ್ಯೂಟರ್‌ ಉಪಯೋಗಿಸಲು ಒಂದು ಮೇಜು, ಕೋಣೆಯ ಒಂದು ಭಾಗಕ್ಕೆ ಬಾಲ್ಕನಿ ಮತ್ತು ಅದರ ಆಚೆ ಸುಂದರ ಹಸಿರನ್ನು ಹೊತ್ತ ಒಂದು ಮರವಿದ್ದರೆ ನಿಮ್ಮ ಜೀವನ ಲಕ್ಷುರಿ ಎಂದುಕೊಳ್ಳಿ. ಅದು ನಿಜಕ್ಕೂ ನಿಮ್ಮ ಕೋಣೆಗೆ ಹೆಚ್ಚಿನ ಶೋಭೆಯನ್ನು ನೀಡುವುದಲ್ಲದೆ, ನಿಮ್ಮ ಮನಸ್ಸಿಗೂ ತಂಪನ್ನು ಉಣಿಸುತ್ತದೆ.

ಮೊದಲಿಗೆ ಒಂದು ನಿರ್ದಿಷ್ಟ ಬಣ್ಣವನ್ನು ಆಯ್ದುಕೊಳ್ಳಿ. ಅಂತೆಯೇ ನಿಮ್ಮ ಕೋಣೆಗೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಆ ಬಣ್ಣಕ್ಕೆ ಹೊಂದುವಂತೆ ಆರಿಸಿಕೊಳ್ಳಿ. ಉದಾ.: ತೆಳು ಕೇಸರಿ ಅಥವಾ ಕಿತ್ತಳೆಯ ಹಣ್ಣಿನ ಹೊಂಬಣ್ಣ ನೀವು ಆಯ್ದುಕೊಂಡಿದ್ದೀರಿ ಎಂದುಕೊಳ್ಳಿ, ಮೊದಲಿಗೆ ನಿಮ್ಮ ಮಂಚದ ಮೇಲಿನ ಬೆಡ್‌ಶೀಟ್‌ನ್ನು ಆರಿಸಿಕೊಳ್ಳಿ. ಆ ಬಣ್ಣದೊಂದಿಗೆ ಹೊಂದುವ ಸ್ವಲ್ಪ ಗಾಢವಾದ ಬಣ್ಣದ ರಜಾಯ್‌ ಅಥವಾ ಕ್ವಿಲ್ಟ್ ‌ನ್ನು ಆರಿಸಿಕೊಳ್ಳಿ. ಇವನ್ನು ಬಾಲ್ಕನಿಗೆ ಕಿತ್ತಳೆಯ ಮತ್ತು ಬಿಳಿಯ ಬಣ್ಣದ ಕರ್ಟನ್ ಹಾಕಿದಾಗ, ಬಿಸಿಲಿದ್ದಾಗ ಕಿತ್ತಳೆಯ ಬಣ್ಣದ ಪರದೆ ಅರ್ಥಾತ್‌ ಕರ್ಟನ್‌ ನಿಮ್ಮ ಕೋಣೆಗೆ ಹೊಂಬಣ್ಣವನ್ನು ಚೆಲ್ಲಿದಂತಿದ್ದರೆ ಅದೇ ಬಿಳಿಯ ಬಣ್ಣದ ಪರದೆಯನ್ನು ಎಳೆದಾಗ ಬೆಳದಿಂಗಳನ್ನು ಹಾಸಿದಂತೆ ಕಾಣುತ್ತದೆ. ಹಾಸಿಗೆಯ ಹಾಸುವಿಕೆ ಮತ್ತು ಹೊದಿಕೆಯನ್ನು ಆರಿಸಿದ್ದಾಯಿತು.

ಬಾಲ್ಕನಿಗೆ ರಂಗು ರಂಗಿನ ಮತ್ತು ಬೆಳ್ಳನೆಯ ಪರದೆಗಳನ್ನು ಹಾಕಿದ್ದಾಯಿತು. ಮಂಚದ ಮೇಲೆಯೂ ಕೇಸರಿ ಮತ್ತು ಬಿಳಿಯ ಬಣ್ಣದ ಕಾಂಬಿನೇಷನ್‌ನನ್ನೇ ಬಳಸಬಹುದು. ಶ್ವೇತವರ್ಣದ ಉದ್ದನೆಯ ದಿಂಬುಗಳ ಮಧ್ಯದಲ್ಲಿ ಗಾಢ ಬಣ್ಣದ ಮೂರು ಚೌಕಾಕಾರದ ದಿಂಬುಗಳು ಎದ್ದು ಕಾಣುತ್ತದೆ. ಮಂಚದ ಮುಂದುಗಡೆ ಅದೇ ರೀತಿಯಲ್ಲಿ ಮ್ಯಾಟ್‌ನ್ನು ಹಾಸಿದ್ದಾಯಿತು. ಪಕ್ಕದ ವಾಕ್‌ ಇನ್ ವಾರ್ಡ್‌ರೋಬ್‌ನ ಬಾಗಿಲ ಮುಂದೆ ಅದೇ ಬಣ್ಣದ ಒಂದು ಫುಟ್‌ರಗ್‌ ಬರಲಿ. ಮಂಚದ ಎದುರಿನ ಭಾಗದಲ್ಲಿ ಹೊಳೆಯುವ

ಹೊಂಬಣ್ಣದ ಮಣಿಗಳನ್ನು ಹೊಂದಿರುವ ಎರಡು ಕ್ಯಾಂಡಲ್ ಸ್ಟ್ಯಾಂಡ್‌ ಮಿನುಗುತ್ತಿರುತ್ತದೆ. ಪಕ್ಕದಲ್ಲಿ ಅದೇ ರೀತಿಯ ಒಂದು ಸುಂದರ ಬೋಗುಣಿ ಕೆಳಗೆ ಮತ್ತೆರಡು ಪುಟ್ಟ ಪುಟ್ಟ  ಭರಣಿಗಳು, ಅದರೊಳಗೆ ಅಗತ್ಯವೆನಿಸಿದ ತಕ್ಷಣಕ್ಕೆ ಸಿಗಬೇಕೆನಿಸುವ ಪುಟ್ಟ ವಸ್ತುಗಳನ್ನು ಹಾಕಿಡಬಹುದು. ಅಲ್ಲಲ್ಲಿ ಮೂಡಿಸುವ ಈ ಚಿಕ್ಕ ಚಿಕ್ಕ ಅಲಂಕಾರಿಕ ವಸ್ತುಗಳು ಕೋಣೆಯ ಅಂದಕ್ಕೆ ಮೆರುಗನ್ನು ನೀಡುತ್ತದೆ. ಅದು ದುಬಾರಿಯಾಗಿ ಇರಬೇಕೆಂದಿಲ್ಲ. ತೆಗೆದುಕೊಳ್ಳುವ ವಸ್ತುಗಳ ಆಯ್ಕೆ ಮುಖ್ಯ. ಈ ರೀತಿ ನಿಮ್ಮ ಕೋಣೆಯನ್ನು ಅಲಂಕರಿಸಿದಾಗ ನಿಮ್ಮ ಮುಖದಲ್ಲಿ ಮೆಚ್ಚುಗೆಯ ಮುಗುಳ್ನಗೆ ಮೂಡದೆ ಇರದು.

ಕೋಣೆ 2

ಎಲ್ಲ ಕೋಣೆಗಳಿಗೂ ಬಾಲ್ಕನಿ ಇರಲೇಬೇಕೆಂದೇನೂ ಇಲ್ಲ. ಅದಿಲ್ಲದಿದ್ದರೂ ಕೋಣೆಯನ್ನು ಚಂದವಾಗಿ ರೂಪಿಸಲು ಸಾಧ್ಯ. ನಾವು ಮೊದಲನೆಯ ಉದಾಹರಣೆ ದೊಡ್ಡವರ ಕೋಣೆ ಎಂದುಕೊಂಡರೆ, ಈ ಎರಡನೆಯದು ಮಕ್ಕಳ ಕೋಣೆಯಾಗಬಹುದು. ಮಕ್ಕಳಿಗೆ ಹೊಳೆಯುವ ಹಳದಿ ಬಣ್ಣ ಬಹು ಪ್ರಿಯ. ಅದರ ಜೊತೆ ಮತ್ತೆ ಬಿಳಿಯ ಬಣ್ಣದ ಹೊಂದಾಣಿಕೆ ಮೃದುತನವನ್ನು ಸೂಸುತ್ತದೆ. ಮಂಚದ ಬಣ್ಣ ಡಾರ್ಕ್‌ ಬ್ರೌನ್‌. ಆದ್ದರಿಂದ ತಿಳಿಯ ಹಳದಿ ಮತ್ತು ಶ್ವೇತ ಬಣ್ಣದ ಕಾಂಬಿನೇಷನ್‌ ಕಣ್ಣಿಗೆ ಮುದವೆನಿಸುತ್ತದೆ. ಪಕ್ಕದ ಕಿಟಕಿಗೆ ಹಾಕಿದ ಬ್ಲೈಂಡ್‌ಗಳು ಸಹ ಸ್ವಲ್ಪ ಮಟ್ಟಿಗೆ ಇದೇ ಬಣ್ಣವನ್ನು ಹೋಲುವಂತಿರಲಿ. ಮೂಲೆಯಲ್ಲೊಂದು ಗಾಢವಾದ ಕಂದು ಬಣ್ಣದ ಹೂಜಿಗೆ ಕಂದು ಮತ್ತು ಹಳದಿಯ ಬಣ್ಣದ ಹೂಗಳು ಅದರಲ್ಲೂ ಒಣ ಹೂಗಳು ಮೂಲೆಯ ಅಂದವನ್ನು ಹೆಚ್ಚಿಸುತ್ತವೆ. ಒಣ ಹೂಗಳ ನಿರ್ವಹಣೆಯೂ ಸುಲಭ. ಮಂಚದ ಮುಂದೆ ಹಾಸಿದ ಮ್ಯಾಟ್‌ ಮತ್ತು ಪಕ್ಕದ ಬಾತ್‌ರೂಮಿನ ಬಾಗಿಲ ಮುಂದೆ ಹಾಸಿದ ಮ್ಯಾಟ್‌ ಸಹ ಅದೇ ಬಣ್ಣದ್ದಿದ್ದಾಗ ಒಂದು ರೀತಿಯ ಕೋಣೆಯ ಅಲಂಕಾರ ಮುಕ್ತಾಯದ ಹಂತಕ್ಕೆ ಬರುತ್ತದೆ. ಜೊತೆಗೆ ಎದುರಿಗೆ ಮೂಡಿಸಿರುವ ಫೋಟೋ ಫ್ರೇಮ್, ಪಕ್ಕದಲ್ಲಿರುವ ಪೆನ್ಸಿಲ್ ‌ಸ್ಟ್ಯಾಂಡ್‌, ಕೆಳಗಿರಿಸಿರುವ ಚಿತ್ತಾರದ ಅಲಂಕಾರಿಕ ಬೋಗುಣಿ ಎಲ್ಲ ಮತ್ತಷ್ಟು ಸುಂದರ ನೋಟವನ್ನು ನೀಡುತ್ತದೆ. ಒಂದು ವಿಷಯವನ್ನು ಗಮನಿಸಬೇಕು. ಹೆಚ್ಚು ಹೆಚ್ಚು ಅಲಂಕಾರಿಕ ವಸ್ತುಗಳನ್ನು ತುಂಬಲೂಬಾರದು. ಇದ್ದೂ ಇಲ್ಲದಂತೆ, ಸದ್ದಿಲ್ಲದಂತೆ ಕೋಣೆಯ ಅಂದವನ್ನು ಹೆಚ್ಚಿಸುವಷ್ಟು ವಸ್ತುಗಳು ಸಾಕು. ಮಿತವಾದ ಅಲಂಕಾರ ಸರಳತೆಯನ್ನು ಮೂಡಿಸುತ್ತದೆ.

ಕೋಣೆಗೆ ಸೂರ್ಯನ ಬೆಳಕನ್ನು ನೀಡುವ ಕಿಟಕಿಗಳಿದ್ದರೆ ನಿಜಕ್ಕೂ ಚೆನ್ನ ಮತ್ತು ಆರೋಗ್ಯಕರ, ಅದಕ್ಕನುಗುಣವಾಗಿ ಬೆಳಕಿನ ವಿನ್ಯಾಸವನ್ನು ಮಾಡಬಹುದು. ಕೆಲವರಿಗೆ ಹೊಂಬಣ್ಣದ ಮೃದುತನವನ್ನು ಹೊರ ಹೊಮ್ಮಿಸುವ ಡಿಮ್ ಲೈಟ್‌ ಇಷ್ಟವಾದರೆ ಕೆಲವರಿಗೆ ಹಾಲ್ ಬೆಳಕನ್ನು ಚೆಲ್ಲುವ ಬಿಳಿಯ ಬಣ್ಣದ ಲೈಟುಗಳೇ ಓದಲು ಅನುಕೂಲವಾಗಿರುತ್ತದೆ ಎನ್ನುವ ಭಾವ. ಅವರ ಭಾವಕ್ಕೆ ತಕ್ಕಂತೆ ಆಸೆಗೆ ಅನುಗುಣವಾಗಿ ಕೋಣೆಯನ್ನು ರೂಪಿಸಿ. ಮೆತ್ತನೆಯ ಮಂಚದಲ್ಲಿ ಸಂಗಾತಿಯೊಡನೆ ಪವಡಿಸಿದಾಗ ಬೆಳಗಿನಿಂದ ದುಡಿದ ಆಯಾಸ ಮಾಯವಾಗುತ್ತದೆ. ಸುಖ ನಿದ್ರೆಯನ್ನು ನೀಡುವ ಕೋಣೆಗೆ ಮಿಗಿಲಾದುದು ಇಲ್ಲ. ಹೇಳಬೇಕೆಂದರೆ ನಿಮ್ಮ ಕೋಣೆ ನಿಮ್ಮ ಆಸೆ ಆಶಯಗಳ ಪ್ರತಿರೂಪವಾಗಿರುತ್ತದೆ. ಜೊತೆಗೆ ಜೇಬಿನ ಕಡೆಗೂ ಗಮನವಿಡುವುದು ಅತ್ಯಗತ್ಯ. ಈ ಎಲ್ಲ ಬಹಳ ಕಡಿಮೆ ಬಜೆಟ್‌ನಿಂದಲೂ ಸಾಧ್ಯ.

ಒಟ್ಟಿನಲ್ಲಿ ಇದೇ ರೀತಿ ತಮಗಿಷ್ಟವಾದ ಬೇರೆ ಬೇರೆ ಬಣ್ಣಗಳ ಥೀಮ್ ನ್ನು ಆರಿಸಿಕೊಂಡು ಅದಕ್ಕನುಗುಣವಾಗಿ ಕೋಣೆಯನ್ನು ಅಲಂಕರಿಸಿದಾಗ ನೋಡಿದವರು ವಾಹ್‌ಅನ್ನದೆ ಇರಲಾರರು. ಸ್ವಲ್ಪ ಮಟ್ಟಿನ ಕಲಾತ್ಮಕತೆ, ಬಣ್ಣಗಳ ಹೊಂದಾಣಿಕೆ, ಪುಟ್ಟಪುಟ್ಟ ಅಲಂಕಾರಿಕ ವಸ್ತುಗಳು ಕೋಣೆಯ ಸ್ವರೂಪವನ್ನೇ ಬದಲಿಸಬಲ್ಲದು, ಪ್ರಯತ್ನಿಸಿ ನೋಡಿ.

ಮಂಜುಳಾ ರಾಜ್

Tags:
COMMENT