ದೀಪಾವಳಿಯಂದು ಹೊರಗಿನ ಕೊಳೆಯ ಸ್ವಚ್ಛತೆಯ ಜೊತೆಗೆ ಮನಸ್ಸಿನ ಕೊಳೆ ಹಾಗೂ ಕತ್ತಲೆಯನ್ನೂ ದೂರ ಮಾಡುವುದು ಬಹಳ ಅಗತ್ಯ. ಬೆಳಗ್ಗೆ ಇಬ್ಬನಿಯ ಹನಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುವಂತೆ ನಮ್ಮ ಮನಸ್ಥಿತಿಯೂ ನಮ್ಮ ಮುಖದಲ್ಲಿ ಹೊಳೆಯುತ್ತದೆ. ಮನಸ್ಸನ್ನು ಸಕಾರಾತ್ಮಕ ಭಾವನೆಗಳಿಂದ ಪ್ರಕಾಶಿತಗೊಳಿಸಿದರೆ ಅದರ ಸೌಂದರ್ಯ ಮುಖದಲ್ಲಿ ಹೊಳೆಯತೊಡಗುತ್ತದೆ ಮತ್ತು ದೀಪಾವಳಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರುತ್ತದೆ.
ಮನಸ್ಸಿನಲ್ಲಿ ಕತ್ತಲು ಮತ್ತು ಕೊಳೆಯನ್ನು ಹರಡುವ ಕೆಲವು ಪ್ರಮುಖ ಭಾವನೆಗಳು ಈ ಪ್ರಕಾರವಾಗಿವೆ.
ಸಂಶಯ
ನಾವೆಲ್ಲರೂ ಸಂಶಯ ಅಂದರೆ ಅನುಮಾನದ ಶಿಕಾರಿಗಳಾಗಿದ್ದೇವೆ. ವಿಶೇಷವಾಗಿ ಮಹಿಳೆಯರು ಹೆಚ್ಚು ಅನುಮಾನ ಪ್ರಕೃತಿಯವರಾಗಿರುತ್ತಾರೆ. ವಿಲಿಯಂ ಶೇಕ್ಸ್ ಪಿಯರ್, ನಮ್ಮ ಸಂಶಯವೇ ನಮಗೆ ಹೆಚ್ಚು ಮೋಸ ಮಾಡುತ್ತದೆ ಎಂದು ಹೇಳುತ್ತಾನೆ. ನಾವು ಯಶಸ್ಸು ಪಡೆಯಬಹುದಾಗಿದ್ದರೂ ಸಹ ಅದರಿಂದಾಗಿ ನಮ್ಮ ಕೈಗಳಿಂದ ಯಶಸ್ಸು ಜಾರಿಹೋಗುತ್ತದೆ. ಆದ್ದರಿಂದ ಈ ದೀಪಾವಳಿಯಲ್ಲಿ ನಮ್ಮ ಮನಸ್ಸಿನಿಂದ ಎಲ್ಲ ರೀತಿಯ ಅನುಮಾನಗಳನ್ನೂ ದೂರ ಮಾಡಿ ಸಂಪೂರ್ಣ ವಿಶ್ವಾಸದೊಂದಿಗೆ ಬದುಕಿನ ಪಯಣದಲ್ಲಿ ಮುಂದೆ ಸಾಗಬೇಕು.
ಭಯವನ್ನು ಓಡಿಸಿ : ಫಾರ್ಮುಲಾ ಒನ್ ಕಾರ್ ರೇಸರ್ ನಾರಾಯಣ ಕಾರ್ತಿಕ್ ಹೀಗೆ ಹೇಳುತ್ತಾರೆ, ``ಜೀವನದಲ್ಲಿ ಭಯಕ್ಕೆ ಯಾವುದೇ ಜಾಗವಿಲ್ಲ. ನಾನು ಭಯದೊಂದಿಗೆ ಗೆಳೆತನ ಮಾಡಿಕೊಂಡಿದ್ದೇನೆ. ಭಯದ ಜಾಗವನ್ನು ವಿಶ್ವಾಸ ತೆಗೆದುಕೊಂಡಿದೆ.''
ಅಂದಹಾಗೆ ಬದುಕಿನಲ್ಲಿ ನಮ್ಮ ಶಕ್ತಿಯ ಅರಿವಾಗದಿದ್ದರೆ, ನಮ್ಮ ಮನಸ್ಸಿನಲ್ಲಿ ಭಯ ಮೂಡುತ್ತದೆ. ನಾವು ಕಾರಣವಿಲ್ಲದೆ ಹೆದರತೊಡಗುತ್ತೇವೆ. ನಮ್ಮ ಕಣ್ಣುಗಳ ಮುಂದೆ ಅಜ್ಞಾನ ಮತ್ತು ಮೂಢನಂಬಿಕೆಯ ಹೊಗೆ ಮುಚ್ಚಿಕೊಳ್ಳುತ್ತದೆ. ನಾವು ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ಬದುಕನ್ನು ಹಾಳು ಮಾಡಿಕೊಳ್ಳುತ್ತೇವೆ. ಆದ್ದರಿಂದ ನಾವು ನಮ್ಮ ಬದುಕಿನಿಂದ ಅಸಂಭವ ಹಾಗೂ ಭಯವನ್ನು ತೆಗೆದು ಎಸೆಯಬೇಕು. ಭಯ ಅಜ್ಞಾನದಿಂದ ಹುಟ್ಟುತ್ತದೆ. ಅಜ್ಞಾನ ಮೂಢನಂಬಿಕೆಗೆ ಜನ್ಮ ಕೊಡುತ್ತದೆ. ಹೀಗಾಗಿ ಬಿಟ್ಟರೆ? ಹಾಗಾಗಿ ಬಿಟ್ಟರೆ? ಎಂದು ನಾವು ಭಯಪಡುತ್ತೇವೆ. ಆದ್ದರಿಂದ ನಾವು ಭಯವನ್ನು ನಮ್ಮ ಬದುಕಿನಿಂದ ಹೊರಹಾಕಿ ಮನಸ್ಸಿನಲ್ಲಿ ವಿಶ್ವಾಸದ ದೀಪ ಹಚ್ಚಬೇಕು.
ಕ್ರೋಧ : ಮನುಷ್ಯನ ಅತ್ಯಂತ ದೊಡ್ಡ ಶತ್ರು ಕ್ರೋಧ. ಅದು ಅಹಂಕಾರದಿಂದ ಹುಟ್ಟುತ್ತದೆ. ಕೋಪದಲ್ಲಿ ವ್ಯಕ್ತಿ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಅದರಿಂದ ತನ್ನ ಶರೀರಕ್ಕೆ ಹಾನಿ ತಂದುಕೊಳ್ಳುತ್ತಾನೆ. ಸಂಬಂಧಗಳಲ್ಲೂ ಬಿರುಕು ಮೂಡುತ್ತದೆ. ಕೋಪಗೊಂಡ ವ್ಯಕ್ತಿಯಿಂದ ಜನರ ಜೊತೆಗೆ ಸಂತಸಗಳೂ ದೂರ ಓಡುತ್ತವೆ. ಊಹಿಸಿಕೊಳ್ಳಿ, ಯಾವಾಗಲೂ ಕಿರುಚುತ್ತಿರುವ ಮಹಿಳೆ ಎಂದಿಗೂ ಗಂಡನಿಗೆ ಪ್ರಿಯಳಾಗಿರುವುದಿಲ್ಲ.
ಅಸೂಯೆ, ದ್ವೇಷ : ನಾವು ಆಗಾಗ್ಗೆ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ಇತರರನ್ನು ದ್ವೇಷಿಸಲು, ಅಸೂಯೆಪಡಲು ಕಳೆಯುತ್ತೇವೆ. ನಮ್ಮ ಮೆದುಳನ್ನು ಕಲುಷಿತಗೊಳಿಸುತ್ತೇವೆ. ಇನ್ನೊಬ್ಬರಿಗೆ ಬೇಸರ ಉಂಟು ಮಾಡುತ್ತೇವೆ. ಟಿ.ವಿ. ಸೀರಿಯಲ್ ಗಳನ್ನೇ ತೆಗೆದುಕೊಳ್ಳಿ ಹೆಚ್ಚಿನ ಸೀರಿಯಲ್ ಗಳಲ್ಲಿ ಒಬ್ಬಾಕೆ ಅಸೂಯೆಯಿಂದ ಇನ್ನೊಬ್ಬಾಕೆಯ ವಿರುದ್ಧ ಷಡ್ಯಂತ್ರಗಳನ್ನು ರಚಿಸುತ್ತಿರುತ್ತಾಳೆ. ಅಂತಹ ಭಾವನೆಗಳು ನಮ್ಮನ್ನು ಕೆರಳಿಸುತ್ತವೆ. ದೀಪಾವಳಿಯಂದು ನಮ್ಮ ಮನಸ್ಸಿನಿಂದ ಇಂತಹ ಕಲುಷಿತ ಭಾವನೆಗಳನ್ನು ದೂರ ಮಾಡಿ ಒಳ್ಳೆಯ ಹಾಗೂ ಸಕಾರಾತ್ಮಕ ವಿಚಾರಗಳಿಗಾಗಿ ಜಾಗ ಉಂಟುಮಾಡಬೇಕು.