ಮಹಿಳೆಯರು ಗೃಹಿಣಿಯಾಗಿರಲಿ ಅಥವಾ ಉದ್ಯೋಗ ಮಾಡುತ್ತಿರಲಿ ಅಡುಗೆಯ ಕೆಲಸವನ್ನಂತೂ ಮಾಡಲೇಬೇಕು. ರುಚಿಕರವಾಗಿ ಅಡುಗೆ ಮಾಡುವುದರ ಜೊತೆಗೆ ಕುಟುಂಬದವರ ಆರೋಗ್ಯದ ಜವಾಬ್ದಾರಿಯೂ ಇರುತ್ತದೆ. ಈ ಎರಡೂ ಜವಾಬ್ದಾರಿಗಳನ್ನು ನಿಭಾಯಿಸಬೇಕೆಂದರೆ ಅಡುಗೆಮನೆಯ ಸ್ವಚ್ಛತೆಯ ಕಡೆಗೆ ವಿಶೇಷ ಗಮನವನ್ನೂ ಕೊಡಬೇಕಾಗುತ್ತದೆ. ಅಡುಗೆ ಮಾಡುವಾಗ ಬಳಸುವ ಎಣ್ಣೆ ಮತ್ತು ಮಸಾಲೆ ಸಾಮಾನುಗಳನ್ನು ಹೊಗೆಯೊಂದಿಗೆ ಹರಡಿ ಕಿಟಕಿ, ಬಾಗಿಲು ಮತ್ತು ಕಪಾಟಿನಲ್ಲಿರಿಸಿದ ಸಾಮಾನುಗಳ ಮೇಲೆಲ್ಲ ಅಂಟಿಕೊಳ್ಳುತ್ತದೆ. ಜೊತೆಗೆ ಎಣ್ಣೆಯ ಜಿಡ್ಡು ಗೋಡೆಯ ಮೇಲೆಲ್ಲ ಹರಡಿ, ಅದಕ್ಕೆ ಧೂಳು ಮೆತ್ತಿಕೊಳ್ಳುತ್ತದೆ ಮತ್ತು ಜೋರು ಗಾಳಿ ಬೀಸಿದಾಗ ಆಹಾರ ಪದಾರ್ಥಗಳೊಳಗೆ ಬೀಳುವ ಸಾಧ್ಯತೆ ಇರುತ್ತದೆ. ಈ ಮಣ್ಣುಧೂಳಿನ ಕಣ ಊಟ ಮಾಡುವಾಗ ಹಲ್ಲಿಗೆ ಸಿಕ್ಕಿದರೆ ರುಚಿಯಾದ ಊಟದ ಆನಂದವನ್ನು ಹಾಳುಮಾಡುತ್ತದೆ. ಅಡುಗೆಮನೆಯ ವಾತಾವರಣವನ್ನು ಮಾಲಿನ್ಯರಹಿತವನ್ನಾಗಿಸಲು ಈಗ ಅನೇಕ ಬಗೆಯ ಅಪ್ಲೈಯನ್ಸ್ ಗಳು ಲಭ್ಯವಿವೆ. ಅಂತಹ ಒಂದು ಉಪಕರಣವೆಂದರೆ ಎಲೆಕ್ಟ್ರಿಕ್‌ ಚಿಮನಿ.

ಚಿಮನಿಯ ಕಾನ್‌ಸೆಪ್ಟ್ ಭಾರತಕ್ಕೆ ಹೊಸದೇನೂ ಅಲ್ಲ. ಪುರಾತನ ಕಾಲದಿಂದಲೂ ಮನೆ ಕಟ್ಟುವಾಗ ಚಿಮನಿಯನ್ನು ನಿರ್ಮಿಸುವುದು ಸ್ವಾಭಾವಿಕವಾಗಿತ್ತು. ಆದರೆ ಈಚಿನ ವರ್ಷಗಳಲ್ಲಿ ಮಲ್ಟಿಸ್ಟೋರೀಡ್‌ ಬಿಲ್ಡಿಂಗ್‌ ಮತ್ತು ಫ್ಲಾಟ್‌ ಕಲ್ಚರ್‌ನಿಂದಾಗಿ  ಚಿಮನಿಯ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಈಗ ಎಲೆಕ್ಟ್ರಿಕಲ್ ಚಿಮನಿಗಳ ಬೇಡಿಕೆ ಹೆಚ್ಚಾಗುತ್ತಿದೆ.

ಚಿಮನಿಗಳು ಅಡುಗೆಮನೆಯನ್ನು ಡಸ್ಟ್ ಫ್ರೀ ಮಾಡುವುದರೊಂದಿಗೆ ಸುಂದರನ್ನಾಗಿಸುತ್ತವೆ. ಆದರೆ ಅವನ್ನು ಆರಿಸುವಾಗ ಅಡುಗೆಮನೆಯ ಆಕಾರ ಮತ್ತು ನಿಮ್ಮ ಅಗತ್ಯಗಳ ಬಗ್ಗೆ ಗಮನವಿರಿಸಬೇಕು.

ಚಿಮನಿಯ ಪ್ರಕಾರಗಳು

ಚಿಮನಿ 2 ಬಗೆಗಳಲ್ಲಿ ದೊರೆಯುತ್ತವೆ. ಡಕ್ಟಿಂಗ್‌ ಚಿಮನಿ ಮತ್ತು ಡಕ್ಟ್ ಲೆಸ್ ಚಿಮನಿ.

ಡಕ್ಟಿಂಗ್ಚಿಮನಿ  : ಈ ಬಗೆಯ ಚಿಮನಿಯಲ್ಲಿ ಅಡುಗೆಮನೆಯ ಹೊಗೆ ಮತ್ತು ಗ್ಯಾಸ್‌ಗಳು ಪಿವಿಸಿ ಪೈಪ್‌ನ ಮೂಲಕ ಹೊರಗೆ ಹೋಗುತ್ತವೆ. ಈ ಚಿಮನಿಯ ವೈಶಿಷ್ಟ್ಯವೆಂದರೆ ಇದರಲ್ಲಿ ಅಳವಡಿಸಿರುವ ಮೆಶ್‌ ಮತ್ತು ಬಫೆಲ್‌ ಫಿಲ್ಟರ್‌ ಅಡುಗೆ ಮಾಡುವಾಗ ಹೊಗೆಯೊಂದಿಗೆ ಹರಡುವ ಅಂಟನ್ನೂ ಹೀರಿಕೊಳ್ಳುತ್ತದೆ. ಆದರೆ ಈ ಚಿಮನಿ ದೊಡ್ಡ ಅಳತೆಯ ಅಡುಗೆಮನೆಗೆ ಸೂಕ್ತವಾಗಿರುತ್ತದೆ. ಇದರಲ್ಲಿ ಅಳವಡಿಸಿರುವ ಪಿವಿಸಿ ಪೈಪ್‌ನ್ನು ಕೂರಿಸಲು ಹೆಚ್ಚು ಸ್ಥಳ ಬೇಕಾಗುತ್ತದೆ. ನಿಮ್ಮ ಅಡುಗೆಮನೆ ದೊಡ್ಡದಾಗಿದ್ದರೆ, ಈ ಚಿಮನಿಯನ್ನು ಆರಿಸಿ. ಇದೇ ಮಾದರಿಯ ಫ್ಲೆಕ್ಸಿಬಲ್ ಡಕ್ಟ್ ಚಿಮನಿಯೂ ಅಂಗಡಿಯಲ್ಲಿ ದೊರೆಯುತ್ತದೆ. ಇದರ ಡಕ್ಟ್ ನ್ನು ಅವಶ್ಯಕತೆಗೆ ತಕ್ಕಂತೆ ಇರಿಸಿಕೊಳ್ಳಬಹುದು. ಇಂಥ ಚಿಮನಿಯನ್ನು ಚಿಕ್ಕ ಅಡುಗೆಮನೆಗೂ ಹಾಕಿಸಿಕೊಳ್ಳಬಹುದು.

ಡಕ್ಟ್ ಲೆಸ್‌ ಚಿಮನಿ : ಫ್ಯಾನ್‌ ಮತ್ತು ಮೋಟರ್‌ನಿಂದ ಕೂಡಿದ ಚಿಮನಿಯಲ್ಲಿ ಗ್ರೀಸ್‌ ಫಿಲ್ಟರ್‌ ಮತ್ತು ಚಾರ್‌ಕೋಲ್‌ ಫಿಲ್ಟರ್‌ನ್ನು ಅಳವಡಿಸಲಾಗಿರುತ್ತದೆ. ಅಡುಗೆ ಮಾಡುವಾಗ ಹೊರಡುವ ಹೊಗೆಯು ಗ್ರೀಸ್‌ ಫಿಲ್ಟರ್‌ನ್ನು ತಲುಪಿದಾಗ ಅದು ಜಿಡ್ಡನ್ನು ಹೀರಿಕೊಳ್ಳುತ್ತದೆ. ಅಲ್ಲಿಂದ ಹೊಗೆಯು ಚಾರ್‌ಕೋಲ್ ಫಿಲ್ಟರ್‌ನ್ನು ಹಾದು ಹೋದಾಗ ಅದು ಮಸಾಲೆಯ ವಾಸನೆಯನ್ನು ಹೀರಿಕೊಂಡು ಅಡುಗೆ ಮನೆಯನ್ನು ಫ್ರೆಶ್‌ ಆಗಿಸುತ್ತವೆ. ಆದರೆ ಈ ಚಿಮನಿ ಅಡುಗೆಮನೆಯ ಕಾವನ್ನು ಹೋಗಲಾಡಿಸಲಾರದು. ಅಲ್ಲದೆ ಇದರಲ್ಲಿರುವ ಚಾರ್‌ಕೋಲ್ ಫಿಲ್ಟರ್‌ನ್ನು ಆಗಾಗ ಬದಲಾಯಿಸಬೇಕಾಗುತ್ತದೆ.

ಫಿಲ್ಟರ್‌ ಆಯ್ಕೆ ಮತ್ತು ಸ್ವಚ್ಛತೆ

ಚಿಮನಿಯ ಮುಖ್ಯ ಭಾಗವಾದ ಫಿಲ್ಟರ್‌ನ ಬಗ್ಗೆಯೂ ಸರಿಯಾದ ತಿಳಿವಳಿಕೆ ಹೊಂದಿರುವುದು ಅಗತ್ಯ. ಫಿಲ್ಟರ್‌ ಅನೇಕ ಬಗೆಯಲ್ಲಿ ದೊರೆಯುತ್ತದೆ ಮತ್ತು ಎಲ್ಲವುಗಳ ಕೆಲಸ ವಿಭಿನ್ನವಾಗಿರುತ್ತದೆ.

ಮೆಶ್‌ ಫಿಲ್ಟರ್‌ : ಸಣ್ಣ ಸಣ್ಣ ತೂತುಗಳಿಂದ ಕೂಡಿದ ಈ ಫಿಲ್ಟರ್‌ ಹೊಗೆ ಮತ್ತು ಜಿಡ್ಡಿನ ಜೊತೆಗೆ ಹಾರಾಡುವ ಕಣಗಳನ್ನು  ಹೀರಿಕೊಳ್ಳುತ್ತದೆ.

ಸ್ವಚ್ಛಗೊಳಿಸುವ ವಿಧಾನ : ತೂತುಗಳಲ್ಲಿ ಜಿಡ್ಡು ಸೇರುವ ಕಾರಣದಿಂದ ಈ ಫಿಲ್ಟರ್ ನ್ನು ನಿತ್ಯ ಸ್ವಚ್ಛಗೊಳಿಸಬೇಕಾಗುತ್ತದೆ. ಸಾಬೂನಿನ ನೀರಿನಿಂದ ಇದನ್ನು ಸ್ವಚ್ಛಗೊಳಿಸಬಹುದು.

ಬಫೆಲ್‌ ಫಿಲ್ಟರ್‌: ಸ್ಟೀಲ್‌ ಮತ್ತು ಅಲ್ಯುಮಿನಿಯಮ್ ನಿಂದ ತಯಾರಿಸಲಾದ ಈ ಫಿಲ್ಟರ್‌ `ಕಟ್‌ ಅಂಡ್‌ ಚಾಪ್‌’ ವಿಧಾನದಲ್ಲಿ ಕೆಲಸ ಮಾಡುತ್ತದೆ. ಇದು ಮಸಾಲೆಯ ಕಣ ಮತ್ತು ಜಿಡ್ಡನ್ನು ಹೊಗೆಯಿಂದ ಬೇರ್ಪಡಿಸುತ್ತದೆ.

ಸ್ವಚ್ಛಗೊಳಿಸುವ ವಿಧಾನ : 5-6 ತಿಂಗಳಿಗೊಮ್ಮೆ ಇದನ್ನು ಸ್ವಚ್ಛಗೊಳಿಸಬೇಕು.

ಚಾರ್‌ಕೋಲ್‌ ಫಿಲ್ಟರ್‌: ಇದು ಮಸಾಲೆಯ ಪರಿಮಳವನ್ನು ಹೀರಿಕೊಳ್ಳುತ್ತದೆ. ಪರಿಮಳ ಹೀರಿಕೊಳ್ಳುವ ಸಾಮರ್ಥ್ಯ ಫಿಲ್ಟರ್‌ನ ಸೈಜ್‌ ಮತ್ತು ಥಿಕ್‌ನೆಸ್‌ನ ಮೇಲೆ ಅವಲಂಬಿತವಾಗಿರುತ್ತದೆ.

ಸ್ವಚ್ಛಗೊಳಿಸುವ ವಿಧಾನ : ಪ್ರತಿ 3-6 ತಿಂಗಳುಗಳಿಗೊಮ್ಮೆ ಇದನ್ನು ಬದಲಾಯಿಸಬೇಕಾಗುತ್ತದೆ.

– ಜಿ. ವರಲಕ್ಷ್ಮಿ 

ಈ ವಿಷಯಗಳ ಬಗ್ಗೆಯೂ ಗಮನವಿರಲಿ

– ಭಾರತೀಯ ಆಹಾರಗಳಲ್ಲಿ ಮಸಾಲೆ ಮತ್ತು ಎಣ್ಣೆಯ ಬಳಕೆ ಅಧಿಕವಾಗಿರುತ್ತದೆ. ಆದ್ದರಿಂದ ಪರಿಮಳವನ್ನು ಹೀರುವ ಸಾಮರ್ಥ್ಯ ಹೆಚ್ಚಿರುವಂತಹ ಚಿಮನಿಯನ್ನೇ ಕೊಳ್ಳಿ.

– ಚಿಮನಿಗೆ ಅಳವಡಿಸಲಾಗಿರುವ ಮೋಟರ್‌ನಿಂದ ಹೆಚ್ಚು ಶಬ್ದ ಬರುತ್ತಿದ್ದರೆ ಅದನ್ನು ತಡೆಯಲು ಸೈಲೆಂಟ್‌ ಕಿಟ್‌ ಬಳಸಬಹುದು.

– ಆಟೋಕ್ಲೀನ್‌ ಫೀಚರ್‌ ಹೊಂದಿರುವ ಚಿಮನಿಯನ್ನೇ ಕೊಳ್ಳಿ. ಇದು ಫಿಲ್ಟರ್‌ಗೆ ಅಂಟಿರುವ ಜಿಡ್ಡನ್ನು 15-20 ನಿಮಿಷಗಳಲ್ಲಿ  ಕರಗಿಸುವುದರಿಂದ ಶ್ರಮವಿಲ್ಲದೆ ಚಿಮನಿ ಸ್ವಚ್ಛವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ