ನನ್ನ ಬಾಲ್ಯ ಗೆಳತಿ ಪ್ರಾರ್ಥನಾ ಫೋಟೋಗ್ರಫಿ ಸ್ಟುಡಿಯೋ ಪ್ರಾರಂಭಿಸಿದ್ದಳು. ಫೇಸ್‌ಬುಕ್‌ನಲ್ಲಿ ಅವಳು ತೆಗೆದಿದ್ದ ಫೋಟೋಗಳನ್ನು ನೋಡಿ ನಾನು ಬೆರಗಾದೆ. ಅವಳ ಫೋಟೋಗಳಲ್ಲಿನ ಸುಂದರ ಬ್ಯಾಕ್‌ಗ್ರೌಂಡ್‌ ಮತ್ತು ಬಣ್ಣಗಳ ನೈಜ  ಹೊಂದಾಣಿಕೆಯನ್ನು ನೋಡಿದರೆ ಯಾವುದೋ ನುರಿತ ಪೇಂಟರ್‌ನ ಕೈಚಳಕ ಎಂಬಂತೆ ತೋರುತ್ತಿತ್ತು. ವ್ಯಕ್ತಿಯ ಮನಸ್ಸಿನ ಭಾವನೆಗಳು ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುವಂತಿರುತ್ತಿತ್ತು. ಅವಳ ಫೋಟೋಗಳಲ್ಲಿನ ದೃಶ್ಯಗಳು ಯಾವುದೋ ಸ್ವಪ್ನಲೋಕದ್ದೆಂಬಂತೆ ಭಾಸವಾಗುತ್ತಿತ್ತು. ಅವುಗಳಲ್ಲಿ ವೈವಿಧ್ಯತೆ ಎದ್ದು ತೋರುತ್ತಿತ್ತು.

ಶಾಲೆಯಲ್ಲಿದ್ದಾಗಲೂ ಪ್ರಾರ್ಥನಾ ತನ್ನ ರಚನಾತ್ಮಕತೆಗೆ ಹೆಸರಾಗಿದ್ದಳು. ನಮ್ಮ ಆರ್ಟ್ಸ್ ಟೀಚರ್‌ ವಿದ್ಯಾರ್ಥಿಗಳಿಗೆ ಚಿತ್ರಗಳನ್ನು ಕತ್ತರಿಸಿ ಒಂದು ಫೈಲ್ ಮಾಡಿ ತರಲು ಹೇಳಿದಾಗ ಅವಳು ಅದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು. ಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಆ ಫೈಲ್‌ ಕೂಡ ಪ್ರದರ್ಶಿತವಾಗಿದ್ದು, ಎಲ್ಲ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವಳ ಆ ಕಲಾತ್ಮಕತೆ ಇಂದು ಅವಳ ಫೋಟೋಗ್ರಫಿಯಲ್ಲಿ ಕಂಡುಬರುತ್ತಿದೆ.

ಗೆಳತಿಯೊಡನೆ ಭೇಟಿ

ಬಾಲ್ಯದ ಗೆಳತಿಯನ್ನು ಭೇಟಿ ಮಾಡಲು ಮನಸ್ಸು ತವಕಿಸುತ್ತಿತ್ತು. ಅವಳಿಂದ ನಮ್ಮ ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳುವ ಆಲೋಚನೆಯೂ ಬಂದಿತು. ಅವಕಾಶ ಸಿಕ್ಕಿದೊಡನೆ ಪತಿ ಮತ್ತು ಮಕ್ಕಳೊಡನೆ ಬೆಂಗಳೂರು ತಲುಪಿದೆ. ಪ್ರಾರ್ಥನಾಳಿಗೆ ಫೋನ್‌ ಮಾಡಿ, “ನಿನ್ನನ್ನು ಭೇಟಿಯಾಗಲು ಬರುತ್ತಿದ್ದೇನೆ,” ಎಂದೆ.“

ಇಷ್ಟು ವರ್ಷಗಳ ಮೇಲಾದರೂ ನಿನಗೆ ನನ್ನನ್ನು ಭೇಟಿ ಮಾಡಲು ಟೈಮ್ ಸಿಕ್ಕಿದೆಯಲ್ಲ,” ಅನಿರೀಕ್ಷಿತ ಕರೆಯಿಂದ ಅಚ್ಚರಿಗೊಂಡ ಪ್ರಾರ್ಥನಾ ಸಂತೋಷದಿಂದ ಹೇಳಿದಳು.

“ನೀನೀಗ ಪ್ರಸಿದ್ಧ ಫೋಟೋಗ್ರಾಫರ್‌ ಆಗಿದ್ದೀಯ. ನನ್ನನ್ನು ಭೇಟಿ ಮಾಡಲು ಬರೋದಕ್ಕೆ ನಿನಗೆ ಟೈಮ್ ಎಲ್ಲಿ ಸಿಗುತ್ತದೆ? ಆದ್ದರಿಂದ ನಾನೇ ಬರುತ್ತಿದ್ದೇನೆ. ನೀನು ಮೊದಲಿನಿಂದಲೂ  ಒಳ್ಳೆ ಆರ್ಟಿಸ್ಟ್ ಆಗಿದ್ದೆ. ನಿನ್ನ ಈಗಿನ ಸಾಧನೆಯನ್ನು ಕಣ್ಣಾರೆ ಕಂಡು ಹೋಗೋಣ ಜೊತೆಗೆ ನಿನ್ನಿಂದ ಒಂದು ಫೋಟೋ ತೆಗೆಸಿಕೊಳ್ಳಬೇಕು ಅಂತಲೂ ಆಸೆ.”

“ಓಹೋ! ಹಾಗಾದರೆ ಕೆಲಸ ಇಟ್ಟುಕೊಂಡು ಬರುತ್ತಿದ್ದೀಯ ಅಂತ ಆಯಿತು. ಆಗಲಿ, ಈ ನೆಪದಲ್ಲಾದರೂ ನಾವು ಭೇಟಿಯಾಗುವುದಕ್ಕೆ ಅವಕಾಶ ಆಗುತ್ತಿದೆಯಲ್ಲ. ಇಷ್ಟು ದಿನ ನಿನ್ನ ಮನೆ, ಮಕ್ಕಳು ಅನ್ನೋ ಕಾರಣಗಳನ್ನೇ ಕೇಳಿದ್ದಾಯಿತು,” ಪ್ರಾರ್ಥನಾ ನನ್ನನ್ನು ಛೇಡಿಸಿದಳು.

ಮೆಟ್ರೊ ಟ್ರೇನ್‌ನಲ್ಲಿ ಬಂದರೆ ಸ್ಟೇಷನ್‌ ಸಮೀಪದಲ್ಲೇ ಮನೆ ಇರುವುದೆಂದು ಹೇಳಿ ತನ್ನ ಮನೆಯ ವಿಳಾಸ ತಿಳಿಸಿದಳು.

ಜೀವಂತ ಚಿತ್ರಗಳು

ಮೆಟ್ರೋ ಟ್ರೇನ್‌ ಇಳಿದು ಕೊಂಚ ದೂರ ನಡೆದು ಬರುಷ್ಟರಲ್ಲಿ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ನಮ್ಮನ್ನು ನಿರೀಕ್ಷಿಸುತ್ತಿದ್ದ ಪ್ರಾರ್ಥನಾ ಕಾಣಿಸಿದಳು. ಡ್ರಾಯಿಂಗ್‌ ರೂಮ್ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಫೋಟೋಗಳ ಕಡೆಗೆ ನನ್ನ ದೃಷ್ಟಿ ಹರಿಯಿತು. ಒಂದು ಕಡೆ ಅವಳ ಕುಟುಂಬದ ಫೋಟೋ, ಇನ್ನೊಂದು ಕಡೆ ಅವರ ಪ್ರವಾಸ ಕಾಲದಲ್ಲಿ ತೆಗೆಯಲಾಗಿದ್ದ ಪ್ರಕೃತಿಯ ದೃಶ್ಯಗಳು. ಫೋಟೋ ಫ್ರೇಮ್ ನಲ್ಲಿ ಇತರೆ ಚಿತ್ರಗಳು, ಇದನ್ನೆಲ್ಲ ನೋಡುತ್ತಾ ಬೇರೆಯೇ ಒಂದು ಲೋಕಕ್ಕೆ ಬಂದಿರುವಂಥ ಅನುಭವವಾಯಿತು. ಒಂದು ಫೋಟೋವನ್ನು ನೋಡುತ್ತಿದ್ದಂತೆ ಕಣ್ಣುಗಳು ಅಲ್ಲೇ ಕೀಲಿಸಿದವು. ಗುರುತು ಹಿಡಿಯುತ್ತಾ ಕೇಳಿದೆ, “ನಿಮ್ಮ ತಂದೆ ತಾಯಿ ಅಲ್ಲವೇ? ಮತ್ತು ಪಕ್ಕದಲ್ಲಿರುವುದು ನಿನ್ನ ಅಕ್ಕ ತಾನೇ?”

ಅವರು ಮೂವರೂ ಗತಿಸಿ ಹೋಗಿದ್ದರು. ಆದರೆ ಆ ಫೋಟೋದಲ್ಲಿನ ಜೀವಂತ ಕಳೆ ಅವರು ನಮ್ಮೊಂದಿಗಿರುವ ಭಾವನೆ ಮೂಡಿಸುತ್ತಿತ್ತು. ಮೃತ್ಯುವಶರಾಗಿರುವ ನಮ್ಮ ಪ್ರೀತಿಪಾತ್ರರ ಫೋಟೋವನ್ನು ನೋಡಿದಾಗ ಅವರ ನೆನಪಾಗಿ ಮನಸ್ಸಿಗೆ ಬೇಸರವಾಗುವುದಲ್ಲವೇ ಎಂದು ನಾನು ಯೋಚಿಸುತ್ತಿದ್ದೆ.

ನನ್ನ ಮನೋಲಹರಿಯನ್ನು ಅರ್ಥ ಮಾಡಿಕೊಂಡವಳಂತೆ ಪ್ರಾರ್ಥನಾ ಹೇಳಿದಳು, “ನೀನೇನು ಯೋಚಿಸುತ್ತಿದ್ದೀಯೆ ಅಂತ ಗೊತ್ತು. ಮೊದಲು ನಾನೂ ಹಾಗೇ ಯೋಚಿಸಿ, ಆ ಫೋಟೋಗಳನ್ನು ಹಾಕೋದು ಬೇಡ ಅಂದುಕೊಂಡಿದ್ದೆ. ಆದರೆ ನನ್ನ ಕಲೆಗೆ ಪ್ರೇರಣೆ, ಪ್ರೋತ್ಸಾಹ ಎಲ್ಲ ಸಿಕ್ಕಿದ್ದು ಅವರಿಂದಲೇ. ಅವರ ಆಶೀರ್ವಾದದಿಂದಲೇ ನಾನು ನನ್ನ ಕನಸನ್ನು ಪೂರ್ಣ ಮಾಡೋದಕ್ಕೆ ಸಾಧ್ಯವಾಗುತ್ತಿದೆ. ಅವರ ಚಿತ್ರ ಇಲ್ಲಿರೋದರಿಂದ ಅವರು ನನ್ನ ಜೊತೆಗೆ ಇರುವ ಅನುಭವವಾಗುತ್ತದೆ. ನನ್ನ ಮಕ್ಕಳು ಬೇರೆ ಬೇರೆ ಊರಿನಲ್ಲಿದ್ದಾರೆ. ಹೀಗಾಗಿ ಒಂಟಿತನದ ಭಾವನೆಯನ್ನು ಇದು ಹೋಗಲಾಡಿಸುತ್ತದೆ. ಅಂಗಡಿಯಿಂದ ಚಿತ್ರಗಳನ್ನು ತಂದು ತೂಗು ಹಾಕಿದಾಗ ಮನೆಯೇನೋ ಸುಂದರವಾಗಿ ಕಾಣುತ್ತದೆ. ಆದರೆ ಸ್ವಂತಿಕೆಯ ಭಾವನೆ ಬರುವುದಿಲ್ಲ. ನಮ್ಮ ಪ್ರೀತಿ ಪಾತ್ರರ ಫೋಟೋಗಳನ್ನು ಗೋಡೆಗೆ ಹಾಕಿದ ಮೇಲೆಯೇ ನನಗೆ ಈ ಸುಖಾನುಭವದ ಅರಿವಾಯಿತು.”

ಬಗೆಬಗೆಯ ಫೋಟೋಗಳು

ಬೆಡ್‌ರೂಮ್ ನಲ್ಲಿ ಪ್ರಾರ್ಥನಾ ತಾನೇ ಸೆರೆಹಿಡಿದಿದ್ದ ಬಗೆಬಗೆಯ ದೃಶ್ಯಗಳ ಫೋಟೋಗಳನ್ನು ತೂಗು ಹಾಕಿದ್ದಳು. ಮನೆಯ ಇತರ ಕೋಣೆಗಳೂ ಸಹ ಮನೋಹರವಾದ ಫೋಟೋಗಳಿಂದ ಕಣ್ಣಿಗೆ ತಂಪೆರೆಯುವಂತಿದ್ದವು. ಅವುಗಳಿಂದ ಅತ್ಯಂತ ಪ್ರಭಾವಿತಳಾಗಿ ನಾನು ಹೇಳಿದೆ, “ಫೋಟೋವನ್ನು ಯಾರು ಬೇಕಾದರೂ ತೆಗೆಯಬಹುದು. ಆದರೆ ಅದರಲ್ಲಿ ಸ್ವಂತಿಕೆ ತುಂಬಿಸುವುದನ್ನು ನಿನ್ನಿಂದಲೇ ಕಲಿಯಬೇಕು ಪ್ರಾರ್ಥನಾ. ಈ ಗುಣವೇ ನಿನ್ನನ್ನು ಬೇರೆ ಫೋಟೋಗ್ರಾಫರ್‌ಗಳಿಗಿಂತ ವಿಶೇಷವಾಗಿ ಪ್ರತ್ಯೇಕಿಸಿರುವುದು.”

ನಾವು ಫೋಟೋಗಳನ್ನು ನೋಡುತ್ತಿರುವಾಗ ಪ್ರಾರ್ಥನಾ ತಿಂಡಿ ಕಾಫಿ ತಂದಿತ್ತಳು. ಕಾಫಿ ಕುಡಿಯುತ್ತಾ ನಾನು ಹೇಳಿದೆ, “ಹಿಂದೆ ನಾವು ಫೋಟೋ ತೆಗೆಸಿದ ಮೇಲೆ ಅದನ್ನು ಆಲ್ಪಮ್ ನಲ್ಲಿ ಹಾಕಿ ಬೀರುವಿನಲ್ಲಿ ಇಟ್ಟುಬಿಡುತ್ತಿದ್ದೆವು. ಫೋಟೋವನ್ನು ವಿಶೇಷ ರೀತಿಯಲ್ಲಿ ತೆಗೆದು, ಅದನ್ನು ಹೀಗೆ ಅಂದವಾಗಿ ಪ್ರದರ್ಶಿಸಬಹುದು ಅನ್ನೋದನ್ನು ಈಗ ನಿನ್ನಿಂದ ಕಲಿತಂತಾಯಿತು. ಆದರೆ….”

ನಾನು ಮಾತು ಮುಗಿಸುವ ಮೊದಲೇ ಪ್ರಾರ್ಥನಾ ಹೇಳಿದಳು, “ಹಿಂದೆ ಫೋಟೋಗ್ರಫಿ ಅಂದರೆ ಕಷ್ಟದಾಯಕ ಮತ್ತು ದುಬಾರಿ ಹವ್ಯಾಸ ಅನ್ನೋ ಭಾವನೆ ಇತ್ತು ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ಹಾಗಿರಲಿಲ್ಲ. ಆಗೆಲ್ಲ ಕ್ಯಾಮೆರಾದಿಂದಲೇ ಫೋಟೋ ತೆಗೆಯಬೇಕಿತ್ತು. ಅದಕ್ಕೆ ರೀಲ್‌ ಹಾಕೋದು, ಫೋಟೋ ತೆಗೆದ ಮೇಲೆ ವಾಶಿಂಗ್‌, ಪ್ರಿಂಟಿಂಗ್‌ ಅಂತ ಓಡಾಡಬೇಕಿತ್ತು. ಫೋಟೋಗ್ರಾಫರ್‌ನನ್ನು ಕರೆಸಿ ಫೋಟೋ ತೆಗೆಸೋದಂತೂ ಇನ್ನೂ ಹೆಚ್ಚು ಖರ್ಚಿನ ವಿಷಯ.“

ಆದರೆ ಈಗ ನಮ್ಮ ಮೊಬೈಲ್‌ ಫೋನ್‌ನಲ್ಲೇ ಕ್ಯಾಮೆರಾ ಕೂಡ ಇರುವುದರಿಂದ ಸುಲಭ ಆಗಿದೆ. ಸಮಯ ಉಳಿಯುತ್ತದೆ. ನಾವು ಬೇರೆಯವರ ಫೋಟೋ ತೆಗೆಯುವುದಲ್ಲದೆ, ಜೊತೆಗೆ ನಮ್ಮ ಫೋಟೋ ಸಹ ತೆಗೆದುಕೊಳ್ಳಬಹುದು. ಇದನ್ನೇ ಸೆಲ್ಛೀ ಅಂತ ಕರೆಯೋದು ಮತ್ತು ಇದು ಈಗ ಬಹಳ ಪ್ರಚಲಿತವಾಗಿದೆ.

“ನಾವು ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ನಮ್ಮ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿರುವುದರಿಂದ ನಮ್ಮನ್ನು ನಾವು ಸುಂದರವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಹೀಗೆ ಈ ಫೋಟೋಗ್ರಫಿ ನಮ್ಮ ವ್ಯಕ್ತಿತ್ವಕ್ಕೊಂದು ವಿಶೇಷ ರಂಗನ್ನು ನೀಡುತ್ತದೆ. ಆದರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಸುಂದರ ದೃಶ್ಯಗಳ ಫೋಟೋ ತೆಗೆಯುವಾಗ ನಮ್ಮ ಗಮನವೆಲ್ಲ ಕ್ಯಾಮೆರಾ ಕಡೆಗೆ ಇರುತ್ತದೆ. ಆ ಸೌಂದರ್ಯವನ್ನು ಆಸ್ವಾದಿಸಿ ಆನಂದಿಸಬೇಕೆಂಬುದನ್ನೇ ಮರೆತುಬಿಡುತ್ತೇವೆ. ಜೊತೆಗೆ ಇಂತಹ ಸಂದರ್ಭದಲ್ಲಿ ಅನೇಕ ಬಾರಿ ದುರ್ಘಟನೆಗಳೂ ಸಂಭವಿಸುತ್ತವೆ.”

ಫೋಟೋಗ್ರಫಿಯಲ್ಲಿ ಕ್ರಾಂತಿ

“ಹಿಂದೆ ಫೋಟೋಗಳು ಬ್ಲ್ಯಾಕ್‌ ಅಂಡ್ ವೈಟ್‌ ಆಗಿರುತ್ತಿದ್ದವು. ತಂತ್ರಜ್ಞಾನ ಮುಂದುವರಿದಿರಲಿಲ್ಲ. ತಮ್ಮ ಫೋಟೋ ನೋಡಿ `ಚೆನ್ನಾಗಿ ಬಂದಿಲ್ಲ,’ ಎಂದರೆ `ನೀವು ಇರೋ ಹಾಗೆ ಫೋಟೋ ಬರುತ್ತೆ,’ ಎಂದು ಫೋಟೋಗ್ರಾಫರ್‌ ಹೇಳುತ್ತಿದ್ದುದುಂಟು. ಆದರೆ ಈಗ ಡಿಜಿಟ್‌ ಕ್ಯಾಮೆರಾದ ಆವಿಷ್ಕಾರದಿಂದ ಫೋಟೋಗ್ರಫಿಯಲ್ಲಿ ಕ್ರಾಂತಿ ಉಂಟಾಗಿದೆ. ಕ್ಯಾಮೆರಾಗೆ ರೀಲ್‌ ಹಾಕಬೇಕಿಲ್ಲ ಮತ್ತು ಫೋಟೋವನ್ನು ವಾಶ್‌ ಮಾಡಿಸಬೇಕಿಲ್ಲ. ಫೋಟೋ ತೆಗೆದ ಕೂಡಲೇ ನಾವದನ್ನು ನೋಡಲು ಸಾಧ್ಯವಾಗಿದೆ. ಬಣ್ಣದ ಫೋಟೋ ನಮ್ಮ ಜೀವನದ ರಂಗೇರಿಸಿದೆ.

“ನವೀನ ತಂತ್ರಜ್ಞಾನದಿಂದಾಗಿ ಫೋಟೋ ಎಡಿಟಿಂಗ್‌ನಲ್ಲೂ ಕ್ರಾಂತಿಯ ಅಲೆ ಎದ್ದಿದೆ. ಸಾಧಾರಣ ರೂಪದ ಯುವತಿಯರನ್ನೂ ಫೋಟೋದಲ್ಲಿ ರೂಪವತಿಯರನ್ನಾಗಿ ಬಿಂಬಿಸಬಹುದಾಗಿದೆ. ರೀಲ್‌ ಮತ್ತು ರಿಯಲ್ ವ್ಯಕ್ತಿತ್ವದಲ್ಲಿ ಸಾಮ್ಯತೆಯೇ ತೋರುವುದಿಲ್ಲ. ಆದರೆ ಸಾಮಾನ್ಯ ಜನರು ತಮ್ಮ ಫೋಟೋ ತೆಗೆದುಕೊಂಡು ಅದರ ಪ್ರಿಂಟ್‌ಔಟ್‌ ನೋಡಿದಾಗ, ಅವರಿಗೆ ಎಡಿಟಿಂಗ್‌ ಬಗೆಗಿನ ತಿಳಿವಳಿಕೆ ಇಲ್ಲದೆ, ಫೋಟೋ ಚೆನ್ನಾಗಿ ಬಂದಿಲ್ಲ ಎಂದುಕೊಳ್ಳುತ್ತಾರೆ. ಅಂಥ ಸಮಯದಲ್ಲಿ ಅವರು ನಮ್ಮಂತಹ ಎಕ್ಸ್ ಪರ್ಟ್‌ ಹತ್ತಿರ ಬರಬೇಕಾಗುತ್ತದೆ,” ಎಂದು ಹೇಳುತ್ತಾ ಭುಜ ಕುಣಿಸಿ ಕಿರುನಗೆ ಬೀರಿದಳು.

“ಸರಿಯಾಗಿ ಹೇಳಿದ ಪ್ರಾರ್ಥನಾ, ಮೊದಲಿಗೂ ಈಗ್ಗೂ ಫೋಟೋಗ್ರಫಿಯಲ್ಲಿ ಬಹಳ ವ್ಯತ್ಯಾಸ ಇದೆ. ಈಗ ನೀನು ನನಗೆ ನಮ್ಮದೊಂದು ಫ್ಯಾಮಿಲಿ ಫೋಟೋ ತೆಗೆದುಕೊಡು. ಅದನ್ನು ನಮ್ಮ ಮನೆಯಲ್ಲಿ ತೂಗು ಹಾಕಿ ಮನೆಗೊಂದು ವಿಶೇಷ ಕಳೆ ಬರುವ ಹಾಗೆ ಮಾಡೋಣ. ನಮ್ಮಿಬ್ಬರ ಫೋಟೋ ಸಹ ಒಂದಿರಲಿ. ಅದು ನಮ್ಮ ಈ ಭೇಟಿಯ ನೆನಪಾಗಿರುತ್ತದೆ. ಆದರೆ ಒಂದು ರಿಕ್ವೆಸ್ಟ್…. ನಿನ್ನ ಬಿಲ್‌ನಲ್ಲಿ ನನಗೆ ರಿಯಾಯಿತಿ ತೋರಿಸಬೇಕು.”

ಪ್ರಾರ್ಥನಾ ನಗುತ್ತಾ ನನಗೆ ಹೊಡೆಯುವವಳಂತೆ ಕೈಯೆತ್ತಿದಳು. ಅವಳ ಆ ಸ್ನೇಹಪೂರ್ಣ ನಗುವಿನಲ್ಲಿ ನಾವೆಲ್ಲರೂ ಸಂತೋಷದಿಂದ ಪಾಲ್ಗೊಂಡೆವು.

– ಸಿ.ಎಸ್‌. ಚೈತ್ರಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ