ಗಂಡ ಹೆಂಡತಿ ಆನಂದದ ಕ್ಷಣಗಳ ಸುಖಾನುಭವವನ್ನೇನೋ ಮಾಡಿಕೊಳ್ಳುತ್ತಾರೆ. ಅದರ ಜೊತೆ ಜೊತೆಗೆ ಕಹಿ ಕ್ಷಣಗಳು ಅವರಿಗೆ ಸವಾಲಿನಂತೆ ಕಂಡುಬಂದು, ಸ್ನೇಹಮಯ ವಾತಾವರಣದಲ್ಲಿ ಇರಲು ಪ್ರೇರಣೆ ನೀಡುತ್ತವೆ. ವಿವಾಹರಹಿತ ಸಮಾಜ ಒಂದು ಮೋಜಿನ ಪ್ರಪಂಚದಂತೆ ಕಂಡುಬರುತ್ತದೆ. ವಿವಾಹವೆನ್ನುವುದು ಸ್ತ್ರೀ-ಪುರುಷರ ಸಂಬಂಧಕ್ಕೆ ಒಂದು ಗೌರವಾನ್ವಿತ ಸ್ಥಾನ ನೀಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೊದಲು ಪರಿಚಯ, ನಂತರ ಪ್ರೀತಿ, ಬಳಿಕ ಮದುವೆ. ನಮ್ಮ ಸಮಾಜದಲ್ಲಿ ಮೊದಲು ಮದುವೆ, ನಂತರ ಪ್ರೀತಿ ಪ್ರೇಮ. ಹೆಚ್ಚಿನ ಮದುವೆಗಳು ಸಾಮಾನ್ಯವಾಗಿ ಅಪರಿಚಿತ ಕುಟುಂಬಗಳ ಯುವಕ-ಯುವತಿಯರ ನಡುವೆ ಆಗುತ್ತದೆ. ಇಂದಿನ ವಿವಾಹಗಳ ಸನ್ನಿವೇಶವೇ ಬೇರೆ...
ದಂಪತಿಗಳಾಗುವ ಬಹಳಷ್ಟು ಯುವಕ-ಯುವತಿಯರು ಮೊದಲಿನಿಂದಲೇ ಪರಿಚಿತರಾಗಿರುತ್ತಾರೆ. ಪರಸ್ಪರ ಪ್ರೀತಿಸುತ್ತಿರುತ್ತಾರೆ ಅಥವಾ ಇಲ್ಲ ಎನ್ನುವುದು ಅಷ್ಟೇನೂ ಮಹತ್ವದ್ದಲ್ಲ. ಪ್ರೀತಿಸಿ ಮದುವೆಯಾಗುವವರಿಗೂ ಈಗ ಅಷ್ಟೇ ಮಾನ್ಯತೆ ದೊರಕುತ್ತಿದೆ.
ಖುಷಿಯಿಂದ ಸಂಬಂಧ ನಿಭಾಯಿಸಿ
ಮದುವೆ ಯಾರೊಂದಿಗಾದರೂ ಆಗಲಿ, ಎಲ್ಲಿಯೇ ಆಗಲಿ, ಹುಡುಗ-ಹುಡುಗಿ ಇಬ್ಬರೂ ಪರಸ್ಪರರನ್ನು ಅರಿತುಕೊಳ್ಳುವುದು ಅತ್ಯವಶ್ಯಕ. ಏಕೆಂದರೆ ಜೀವನವನ್ನು ಪ್ರೀತಿಪೂರ್ವಕವಾಗಿ ಬಹು ವರ್ಷಗಳ ಕಾಲ ನಿಭಾಯಿಸುವಂತಾಗಬೇಕು. ಜೀವನದಲ್ಲಿ ಖುಷಿ ಹೊರಗಿನಿಂದ ಬರುವಂಥದ್ದಲ್ಲ. ಗಂಡ-ಹೆಂಡತಿ ಪರಸ್ಪರರ ಭಾವನೆಗಳನ್ನು ಗೌರವಿಸುತ್ತ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕು. ಇಬ್ಬರೂ ಇಷ್ಟಪಟ್ಟರೆ ಇದು ಖಂಡಿತ ಸಾಧ್ಯವಿದೆ. ಮನೆಯ ಯಾವೊಂದೂ ಕೆಲಸದ ಜವಾಬ್ದಾರಿ ಒಬ್ಬರದ್ದೇ ಆಗಿರುವುದಿಲ್ಲ. ನಮ್ಮ ನಮ್ಮ ಅನುಕೂಲಕ್ಕೆ ಕೆಲವೊಂದು ಕೆಲಸಗಳ ಜವಾಬ್ದಾರಿಯನ್ನು ಒಬ್ಬೊಬ್ಬರು ಹಂಚಿಕೊಂಡು ಮಾಡಬಹುದು. ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತವೆ. ಇದನ್ನು ಗಂಡನಾದವನು ಗಮನಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಉದಾಹರಣೆಗಾಗಿ ಹೇಳಬೇಕೆಂದರೆ, ಅಡುಗೆ ಮಾಡುವಾಗ ಗಂಡ ಹೆಂಡತಿಗೆ ಅಷ್ಟಿಷ್ಟು ನೆರವಾಗುವುದು, ಹೆಂಡತಿ ಉದ್ಯೋಗ ಮಾಡಲು ಚಕಾರ ಎತ್ತದಿರುವುದು ಹಾಗೂ ಮನೆಯ ಇತರೆ ಕೆಲಸ ಕಾರ್ಯಗಳಲ್ಲಿ ನೆರವಾಗುವುದು.
ಸಂಬಂಧದಲ್ಲಿ ಕಹಿ ಉಂಟಾಗುವುದೇಕೆ?
ಗಂಡ-ಹೆಂಡತಿಯ ನಡುವೆ ಮತಭೇದ ಉಂಟಾಗುವ ಕಾರಣಗಳ ಬಗ್ಗೆ ಪಟ್ಟಿ ಮಾಡಿದಾಗ, ಹೆಚ್ಚಿನ ಪ್ರಕರಣಗಳಲ್ಲಿ ಪರಸ್ಪರರ ಕುಟುಂಬಗಳ ಬಗ್ಗೆ ಜಗಳಗಳುಂಟಾಗುತ್ತವೆ. ಗಂಡಹೆಂಡತಿಯ ಜೀವನದಲ್ಲಿ ಬೇರೆ ಇನ್ನಾರೋ ಸ್ಥಾನ ಪಡೆದುಕೊಳ್ಳುತ್ತಾರೆ. ಮದುವೆಯ ಬಳಿಕ ಹೆಂಡತಿಯ ಸರ್ ನೇಮ್ ಬದಲಾಗಿ ಗಂಡನದ್ದು ಸೇರಿಕೊಳ್ಳುತ್ತದೆ. ಕೆಲವು ಪತ್ನಿಯರು ತಮ್ಮ ಹಳೆಯ ಸರ್‌ನೇಮ್ ನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಎಷ್ಟೋ ಪರಿವಾರಗಳಲ್ಲಿ ಹೊಸದಾಗಿ ಮದುವೆಯಾದ ವ್ಯಕ್ತಿ, ತನ್ನ ನೂತನ ಪತ್ನಿಯ ಬೇಕು-ಬೇಡಗಳನ್ನು ಮನಬಿಚ್ಚಿ ಹಂಚಿಕೊಳ್ಳಲಾರ. ಎಷ್ಟೋ ಸಲ ಆಕೆಯ ಆಸೆಗಳನ್ನು ಬಲವಂತಾಗಿ ಅದುಮಿಡುತ್ತಾನೆ. ಇಂಥ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಚೆನ್ನಾಗಿ ಅರಿತುಕೊಂಡಾಗ ಮಾತ್ರ ಬಾಳು ಹಸನಾಗುತ್ತದೆ.
ಎಲ್ಲಕ್ಕೂ ಮೊದಲು ನೂತನ ಪತಿಪತ್ನಿಯರು ಪರಸ್ಪರ ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಆಗ ಮಾತ್ರ ಕೌಟುಂಬಿಕ ವಾತಾವರಣ ಚೆನ್ನಾಗಿರಲು ಸಾಧ್ಯ. ಮಕ್ಕಳು ಆಗ ಸಹಜವಾಗಿ ಉತ್ತಮ ಸಂಸ್ಕಾರ ಪಡೆಯುತ್ತಾರೆ. ಸಾಮಾನ್ಯವಾಗಿ ಇಂದಿನ ಕಾಲದಲ್ಲೂ ತಾಯಿ ತಂದೆಯರು ತಮ್ಮ ಮಕ್ಕಳ ಮದುವೆ ಮಾಡಿ ಮುಗಿಸಿದ ನಂತರ, ಅದನ್ನು ತಮ್ಮ ಕಾಲದ ಮದುವೆಗಳಿಗೆ ಹೋಲಿಸುತ್ತಾರೆ. ಇಂದಿನ ಕಾಲಕ್ಕೆ ಎಲ್ಲ ಅಷ್ಟು ಅಚ್ಚುಕಟ್ಟಾಗಿಲ್ಲ ಎಂಬುದು ಗೊತ್ತಿರುವ ಸಂಗತಿಯೇ!