ಕರ್ನಾಟಕ ಈಜು ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿದ್ದ ಈ ಕ್ರೀಡೋತ್ಸವ ಅಂದು ನೂತನ ರಾಷ್ಟ್ರೀಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿತ್ತು. ಹದಿನೇಳರ ಹರೆಯದ ಯುವ ಈಜುಗಾರ್ತಿ 200 ಮೀ. ಬಟರ್‌ ಪ್ಲೈ ವಿಭಾಗದಲ್ಲಿ 2:21:24 ಕ್ಷಣಗಳಲ್ಲಿ ಗುರಿಮುಟ್ಟಿ ಈ ದಾಖಲೆ ಸ್ಥಾಪಿಸಿದ್ದರು! ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಇನ್ನಷ್ಟು ಉತ್ತಮಪಡಿಸಿ ಕೊಂಡಿದ್ದರು ಎನ್ನುವುದು ಇನ್ನೊಂದು ವಿಶೇಷ.

ಇಂತಹ ಸಾಧನೆ ಮಾಡಿದ ಆ ಯುವ ಈಜುತಾರೆ  ದಾಮಿನಿ ಗೌಡ.

ಸ್ನೇಹಿತರು ಹಾಗೂ ಕ್ರೀಡಾ ಪ್ರೇಮಿಗಳು ಇವರಿಗೆ ಕೊಟ್ಟಿರುವ ಹೆಸರು ಈಜುಕೊಳದ `ಚಿಟ್ಟೆ.’ `ಬಟರ್‌ ಫ್ಲೈ’ ವಿಭಾಗದಲ್ಲಿ ಈ ಯುವ ಈಜುಗಾರ್ತಿ ಹೊಂದಿರುವ ಪರಿಣತಿ ಅಪಾರ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೂ ಒಟ್ಟು 100ಕ್ಕೂ ಮಿಕ್ಕಿ ಪದಕ ಗಳಿಸಿರುವ ಈಕೆ ಮುಂದೆ ಒಲಿಂಪಿಕ್ಸ್ ನಂಥ ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಪದಕಗಳೊಂದಿಗೆ ಕೀರ್ತಿ ತರುವರೆನ್ನುವುದು ಅವರು ತರಬೇತಿ ಪಡೆಯುತ್ತಿರುವ ಬಸವನಗುಡಿ ಈಜುಕೊಳದ ಸಿಬ್ಬಂದಿಗಳ ಭರವಸೆಯ ನುಡಿ. ಇತ್ತೀಚೆಗೆ ಗೌಹಾತಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಎರಡು ವೈಯಕ್ತಿಕ ವಿಭಾಗದ ಪದಕ ಸೇರಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ತಮ್ಮ ಕೊರಳಿಗೆ ಏರಿಸಿಕೊಂಡಿರುವ ಇವರ ಸಾಧನೆಯನ್ನು ಅವಲೋಕಿಸಿದಾಗ ಇದೇನೂ ಉತ್ಪ್ರೇಕ್ಷೆಯ ನುಡಿಗಳಲ್ಲ ಎನಿಸಿತು. ತನ್ನ ಏಳನೇ ವಯಸ್ಸಿನಲ್ಲಿಯೇ ಈಜುಕೊಳಕ್ಕೆ ದುಮುಕಿದ್ದ ದಾಮಿನಿ ಅಂದಿನಿಂದಲೇ ತಮ್ಮ ಪದಕ ಬೇಟೆಯನ್ನು ಪ್ರಾರಂಭಿಸಿದ್ದರು. ಇದೀಗ ಅವರ ಈ ಅಪೂರ್ವ ಪ್ರತಿಭೆಯನ್ನು ಗುರುತಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ಪ್ರಸಕ್ತ ಸಾಲಿನ `ಏಕಲವ್ಯ’ ಪುರಸ್ಕಾರ ನೀಡಿ ಗೌರವಿಸಿದೆ.

DG04

ಅಂದಹಾಗೆ ಇವರು ಈ ಕ್ಷೇತ್ರಕ್ಕೆ ಬರುವುದಕ್ಕೂ ಹಿಂದೆ ಒಂದು ಸ್ವಾರಸ್ಯಕರ ಸನ್ನಿವೇಶವಿತ್ತು. ಅವರೇ ಹೇಳುವಂತೆ, “ಆಗ ನನಗೆ 6-7 ವರ್ಷ. ನನ್ನ ತಾಯಿ ಹೇಮಲತಾರಿಗೆ ನಾನು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಹಂಬಲವಿತ್ತು. ಅದಕ್ಕಾಗಿ ಅವರು ನನ್ನನ್ನು ನೃತ್ಯ, ಚಿತ್ರಕಲೆ ಸೇರಿದಂತೆ ಬ್ಯಾಡ್ಮಿಂಟನ್‌ ತರಬೇತಿಗೂ ಕಳಿಸಿದ್ದರು. ಅದೇ ಪ್ರಕಾರವಾಗಿ ಈಜು ತರಬೇತಿಯೂ ನಡೆದಿತ್ತು.

“ನಾನು ಬೇರೆಲ್ಲಾ ತರಬೇತಿಗಿಂತಲೂ ಈಜು ತರಬೇತಿಯಲ್ಲಿ ಅತ್ಯಂತ ಶೀಘ್ರವಾಗಿ ಪರಿಣತಿ ಸಾಧಿಸಿದೆ. ಹಾಗೆ 2006ರಲ್ಲಿ ತಮಿಳುನಾಡಿನ ನೈವೇಲಿಯಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಹಲವು ಪದಕಗಳನ್ನು ಜಯಿಸಿದ್ದೆ. ಇದರ ನಂತರದಲ್ಲಿ ಈಜು ಅಭ್ಯಾಸಕ್ಕೇ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ. ಕಳೆದ ಹತ್ತು ವರ್ಷಗಳ ಪಯಣ ನನ್ನಲ್ಲಿ ಸಂತಸ ಮೂಡಿಸಿದೆ. ಕೆಲವೊಮ್ಮೆ ಬೇಸರದ ಸಂಗತಿಗಳು ನಡೆದಿವೆ. ಕಷ್ಟಗಳು ಎದುರಾಗಿವೆ, ಆದರೆ ಎಲ್ಲ ಒಂದು ಪಾಠವೆಂದು ಭಾವಿಸಿದ್ದೇನೆ.’’

DG06

ನೀರಿಗಿಳಿದರೆ ಸಾಕು ರೆಕ್ಕೆ ಮೂಡಿದ ಮೀನಿನಂತೆ ಈಜುತ್ತಾರೆ ದಾಮಿನಿ. ಇವರ ತಂದೆ ಕೃಷ್ಣಪ್ಪ ಮತ್ತು ತಾಯಿ ಹೇಮಲತಾ. ಕೃಷ್ಣಪ್ಪನವರು ಸಹ ತಮ್ಮ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು. ಇನ್ನು ತಾಯಿ ಹೇಮಲತಾ ರಾಜ್ಯಮಟ್ಟದ ಖೋಖೋ ಆಟಗಾರ್ತಿ. ಹೀಗಾಗಿ ಮನೆಯಲ್ಲಿ ಸಹಜವಾಗಿ ಕ್ರೀಡಾ ಸ್ಛೂರ್ತಿಯ ವಾತಾವರಣವಿತ್ತು. ಇದೇ ಕಾರಣದಿಂದ ದಾಮಿನಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೆಲ್ಲಾ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.

ಬೆಂಗಳೂರಿನ ಜೆ.ಪಿ. ನಗರದ ಸೇಂಟ್‌ ಪಾಲ್ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ರಾಷ್ಟ್ರೀಯ ದಾಖಲೆ ಮುರಿಯುವಂಥ ಪ್ರದರ್ಶನವನ್ನು ನೀಡಿ ಭೇಷ್‌ ಎನ್ನಿಸಿಕೊಂಡಿದ್ದ ಇವರು, ಇದೀಗ ಜೈನ್‌ ಕಾಲೇಜಿನಲ್ಲಿ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ. ಬಸವನಗುಡಿ ಈಜು ಕೇಂದ್ರದಲ್ಲಿ ಈಜು ತರಬೇತಿ ಪಡೆಯುತ್ತಿರುವ ಇವರಿಗೆ ಕೋಚ್‌ ಪ್ರದೀಪ್‌ ಕುಮಾರ್‌ ಈಜಿನ ಎಲ್ಲಾ ತಂತ್ರಗಳನ್ನೂ ಮನದಟ್ಟು ಮಾಡಿಸಿದ್ದಾರೆ.

ನೀರಿನ ಅಲೆಗಳನ್ನು ಸೀಳಿಕೊಂಡು ಮುನ್ನುಗ್ಗುವ ದಾಮಿನಿ ಹೇಳುವಂತೆ, “ಹುಡುಗರಿಗೆ ಹೋಲಿಸಿದರೆ ಹುಡುಗಿಯರು ಹೆಚ್ಚು ಚುರುಕಾಗಿ ಈಜಲಾರರು ಎಂದು ಜನ ಆಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಆದರೆ ಹಾಗಲ್ಲ. ಇದೀಗ ಹುಡುಗಿಯರು ಸಹ ಹುಡುಗರಷ್ಟೇ ಏನು… ಇನ್ನೂ ಚುರುಕಾಗಿ ಈಜಬಲ್ಲರು. ನನ್ನ ಕೋಚ್‌ ಪ್ರದೀಪ್‌ ಕುಮಾರ್‌ ಸರ್‌ ನನಗೆ ಅತ್ಯಂತ ವೇಗವಾಗಿ ಈಜುವುದನ್ನು ಕಲಿಸಿದ್ದಾರೆ,” ಎನ್ನುವ ದಾಮಿನಿ, “ಈ ವಯಸ್ಸಿಗೆ ಇಷ್ಟೆಲ್ಲಾ ಸಾಧನೆ ಹೇಗೆ ಸಾಧ್ಯ?” ಎನ್ನುವ ಪ್ರಶ್ನೆಗೆ, “ನಿರಂತರ ಅಭ್ಯಾಸದ ಜೊತೆಗೆ ಯಾವಾಗಲೂ ನನ್ನಷ್ಟಕ್ಕೆ ನಾನು ಉತ್ತಮ ಈಜುಗಾರ್ತಿ ಆಗಬೇಕೆಂದು ಹೇಳಿಕೊಳ್ಳುತ್ತಿರುತ್ತೇನೆ, ಎಂದರೆ ನನ್ನನ್ನು ನಾನು ಮೋಟಿವೇಟ್‌ ಮಾಡಿಕೊಳ್ಳುತ್ತಿರುತ್ತೇನೆ. ಇನ್ನು ಪ್ರತಿನಿತ್ಯ ಎರಡು ಗಂಟೆ ಈಜುವುದರಿಂದ ನಮ್ಮ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಮನಸ್ಸಿನ ಏಕಾಗ್ರತೆ ವೃದ್ಧಿಸುತ್ತದೆ. ನಾನು ಅದನ್ನು ಸ್ವತಃ ಕಂಡುಕೊಂಡಿದ್ದೇನೆ,” ಎನ್ನುತ್ತಾರೆ ದಾಮಿನಿ.

“ಮೈಖೇಲ್‌ ಫಿಲಿಪ್ಸ್, ದಾರಾ ಟೊರೇಸ್‌ ನನ್ನ ಅಚ್ಚುಮೆಚ್ಚಿನ ಈಜುಪಟುಗಳು,” ಎನ್ನುವ ದಾಮಿನಿಗೆ ಟೆನಿಸ್‌ ಮತ್ತು ಬ್ಯಾಡ್ಮಿಂಟನ್‌ ಎಂದರೂ ಅಷ್ಟೇ ಆಸಕ್ತಿ ಇದೆ. ಟೆನಿಸ್‌ ತಾರೆ ರೋಜರ್‌ ಫೆಡರರ್‌ ಮತ್ತು ಸೆರೆನಾ ವಿಲಿಯಮ್ಸ್ ಎಂದರೆ ಇವರಿಗೆ ಅಚ್ಚುಮೆಚ್ಚು. “ಫೆಡರರ್‌ ಟೆನಿಸ್‌ನಿಂದ ನಿೃತ್ತರಾಗುವುದಕ್ಕೂ ಮುನ್ನ ನಾನೊಮ್ಮೆ ಅವರ ಆಟ ನೋಡಬೇಕೆನ್ನುವುದು ನನ್ನ ಬಯಕೆ. ಅದಕ್ಕಾಗಿ ನಾನು ಫ್ರಾನ್ಸ್, ಇಂಗ್ಲೆಂಡ್‌ ಸೇರಿ ಎಲ್ಲಿಗೆ ಹೋಗಲೂ ಸಿದ್ಧ!” ಎಂದು ನಗು ಬೀರುತ್ತಾರೆ.

“ನಮ್ಮ ದೇಶದಲ್ಲಿ ಈಜುಗಾರರಿಗೆ ತಕ್ಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ“ ಎಂದು ಬೇಸರ ವ್ಯಕ್ತಪಡಿಸುತ್ತಾರೆ. “ಸರ್ಕಾರಗಳು ಈಜು ತರಬೇತಿಗೆ ಬೇಕಾದಷ್ಟು ಪ್ರೋತ್ಸಾಹ ನೀಡಿದ್ದಾದಲ್ಲಿ ನಮ್ಮಲ್ಲಿಯೂ ಒಲಿಂಪಿಕ್‌ ಪದಕ ವಿಜೇತ ಈಜುಗಾರರನ್ನು ಸೃಷ್ಟಿಸಲು ಸಾಧ್ಯವಿದೆ,” ಎನ್ನುವ ಇವರು ಮುಂದೆ 2018ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಿದ್ಧತೆಯಲ್ಲಿದ್ದಾರೆ.

– ರಾಘವೇಂದ್ರ ಅಡಿಗ ಎಚ್ಚೆನ್‌

ಪದಕ ದಾಖಲೆ ಪ್ರಶಸ್ತಿಗಳು

ದಾಮಿನಿ ಗೌಡರ ಇದುವರೆಗಿನ ಸಾಧನೆಗಳು ಈ ಕೆಳಗಿನಂತಿವೆ :

– 50 ಮೀ. ಫ್ರೀಸ್ಟೈಲ್ (32.01 ಸೆ.), 100 ಮೀ. ಫ್ರೀಸ್ಟೈಲ್ (1:10.22 ಸೆ.), 50 ಮೀ. ಬ್ಯಾಕ್‌ ಸ್ಟ್ರೋಕ್‌ (36.25 ಸೆ.) ಹಾಗೂ 50 ಮೀ. ಬಟರ್‌ ಫ್ಲೈ (33.34 ಸೆ.) ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಾಣ.

– 50 ಮೀ. ಫ್ರೀಸ್ಟೈಲ್ ರಿಲೆಯಲ್ಲಿ ದಾಖಲೆ.

– 50 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ (40.80 ಸೆ.) ಬಂಗಾರದ ಪದಕ.

– ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 3 ಬೆಳ್ಳಿ ಹಾಗೂ 1 ಕಂಚಿನ ಪದಕ.

– 2015 ಜುಲೈನಲ್ಲಿ ಪುಣೆಯಲ್ಲಿ ನಡೆದ ಜೂನಿಯರ್‌ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ ಮತ್ತು 3 ಬೆಳ್ಳಿ ಪದಕ.

– ಒಟ್ಟಾರೆ ಈಜಿನಲ್ಲಿ 9 ಬಾರಿ ರಾಷ್ಟ್ರೀಯ ದಾಖಲೆ ನಿರ್ಮಾಣ ಸೇರಿ 2 ಬಾರಿ ರಾಷ್ಟ್ರೀಯ ಚಾಂಪಿಯನ್‌ ಹಾಗೂ 5 ಬಾರಿ ರಾಜ್ಯ ಮಟ್ಟದ ಚಾಂಪಿಯನ್‌ ಆಗಿ ಹೊರಹೊಮ್ಮಿದ ಹೆಗ್ಗಳಿಕೆ.

– 2014ರಲ್ಲಿ 1ನೇ ದುಬೈ ಅಕ್ವಾಟಿಕ್‌ ಇಂಟರ್‌ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು 2 ಚಿನ್ನ ಹಾಗೂ 1 ಬೆಳ್ಳಿ ಪದಕ ಗಳಿಕೆ.

– 2014 ಪೋರ್ಚುಗಲ್ ಅಕ್ವಾಟಿಕ್‌ ಸ್ಪರ್ಧೆಗಳಲ್ಲಿ ಭಾಗಿ.

– 2014ರಲ್ಲಿ ದೋಹಾ, ಕತಾರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಒಂದನೇ ಫೈನಲ್ ಯೂತ್‌ ಪ್ರೋಗ್ರಾಮ್ ನಲ್ಲಿ ಭಾಗಹಿಸಿದ್ದರು.

– 2015ರಲ್ಲಿ ಸಿಂಗಾಪುರದಲ್ಲಿ ನಡೆದ 5ನೇ ಫೈನಲ್ ವಿಶ್ವ ಜೂನಿಯರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆ

– 2015 ಅಕ್ಟೋಬರ್‌ನಲ್ಲಿ ಥಾಯ್‌ಲ್ಯಾಂಡಿನ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಏಜ್ಡ್ ಗ್ರೂಪ್‌ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದರು.

– 2016ರಲ್ಲಿ ಅಸ್ಸಾಂನ ಗೌಹಾತಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ನಾಲ್ಕು ಸ್ವರ್ಣ ಪದಕಗಳ ಗಳಿಕೆಯ ಸಾಧನೆ.

– 2016ರಲ್ಲಿ ಟರ್ಕಿಯಲ್ಲಿ ನಡೆದ 16ನೇ ಜಿಮ್ನಾಸೈಡ್‌ ರೌಂಡ್‌ ‌ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕದ ಸಾಧನೆ.

– 2016ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ `ಏಕಲವ್ಯ ಪ್ರಶಸ್ತಿ.’

COMMENT