1977ರಲ್ಲಿ ಬಿಡುಗಡೆಯಾದ ವರನಟ ರಾಜಕುಮಾರ್, ಬಾಲ ನಟ ಲೋಹಿತ್, ಜಯಪ್ರದ ಮತ್ತು ಅಶೋಕ್ ಅಭಿನಯಿಸಿರುವ ಸನಾದಿ ಅಪ್ಪಣ್ಣ ಚಿತ್ರದಲ್ಲಿ ರಾಜಕುಮಾರ್ ಅವರ ಮನೋಜ್ಞ ಅಭಿನಯ ಒಂದು ಕಡೆಯಾದರೆ, ಆ ಚಿತ್ರದ ನಿಜವಾದ ಕಥಾವಸ್ತು ಸನಾದಿ (ಶಹನಾಯಿ) ಮತ್ತು ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರದ್ದೂ ಮತ್ತೊಂದು ಮಜಲು ಎಂದರೂ ತಪ್ಪಾಗದು. ಆ ಚಿತ್ರದಲ್ಲಿ ರಾಜ್ ಅವರ ಶರೀರಕ್ಕೆ ಶಹನಾಯಿಯ ಮೂಲಕ ಶಾರೀವಾಗಿದ್ದ ನಾಡಿನ ಹೆಸರಾಂತ ಶಹನಾಯಿ ದಂತಕತೆಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ವಾದನ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದಿತ್ತು. ಶಾಸ್ತ್ರೀಯ ಸಂಗೀತ. ಕಛೇರಿಗಳಲ್ಲಿ ಸುಶ್ರಾವ್ಯವಾಗಿ ಶಹನಾಯಿ ನುಡಿಸುತ್ತಾ, ಸಂಗೀತಾಸಕ್ತರ ಗಮನವನ್ನು ಸೆಳೆಯುತ್ತಿದ್ದ ಬಿಸ್ಮಿಲ್ಲಾ ಖಾನ್ ಅವರು ಈ ಸಿನಿಮಾಕ್ಕೆ ನುಡಿಸಲು ಆರಂಭದಲ್ಲಿ ಒಪ್ಪಿಕೊಂಡಿರದಿದ್ದಾಗ, ಸಿನಿಮಾದ ನಿರ್ಮಾಪಕರಾದ ಶ್ರೀ ವಿಕ್ರಂ ಶ್ರೀನಿವಾಸ್ ಅವರು ಪಟ್ಟು ಬಿಡದೇ, ವಾರಣಾಸಿಯಲ್ಲಿ ಕೆಲವು ದಿನಗಳಾ ಇದ್ದು ಅವರ ಮನವೊಲಿಸಿ ಬಿಸ್ಮಿಲ್ಲಾ ಖಾನ್ ಕೆಲವೊಂದು ಷರತ್ತುಗಳೊಂದಿಗೆ ತಮ್ಮ ಸಂಗೀತಗಾರರೊಂದಿಗೆ ಅಂದಿನ ಮದ್ರಾಸಿನಲ್ಲಿ ಹಾಡಿನ ರೀರೆಕಾರ್ಡಿಂಗಿಗೆ ಬಂದು ಅವರ ಇಚ್ಚೆಯಂತೆ ನುಡಿಸಿದ ಸಂಪೂರ್ಣ ರಾಗಗಳಿಗೆ ಯಾವುದೇ ಆಕ್ಷೇಪ ಮಾಡದೇ ಎಲ್ಲವನ್ನೂ ರೆಕಾಂರ್ಡಿಂಗ್ ಮಾಡಿಕೊಂಡು ನಂತರ ನಿರ್ದೇಶಕ ವಿಜಯ್ ಮತ್ತು ಸಂಗೀತ ಸಂಯೋಜಕರಾದ ಜಿ ಕೆ ವೆಂಕಟೇಶ್ ಬಹಳ ಜಾಣ್ಮೆಯಿಂದ ಸೊಗಸಾಗಿ ಬಳಕೆ ಮಾಡಿಕೊಂಡಿದ್ದರಿಂದ ಸೂಪರ್ ಡ್ಯೂಪರ್ ಹಿಟ್ ಆಗಿದ್ದಲ್ಲದೇ ಕನ್ನಡ ಚಿತ್ರರಂಗದ ಮೈಲುಗಲ್ಲು ಎನಿಸಿತು.

ಸನಾದಿ ಅಪ್ಪಣ್ಣ ಚಿತ್ರಕ್ಕೆ ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ನುಡಿಸಲು ಒಪ್ಪಿಕೊಂಡು ರೆಕಾರ್ಡಿಂಗಿಗೆ ಬರುತ್ತಿದ್ದಾರೆ ಎಂದು ತಿಳಿದಾಕ್ಷಣ, ರಾಜಕುಮಾರ್ ಅವರು ತಮ್ಮ ಎಲ್ಲಾ ಸಿನಿಮಾಗಳ ಚಿತ್ರೀಕರಣವನ್ನು ರದ್ದುಗೊಳಿಸಿ ಹಾಡುಗಳ ರೆಕಾರ್ಡಿಂಗ್ ಮಾಡುವಾಗ ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ವಾದನಮಾಡುವಾಗ ತಲ್ಲೀನದಿಂದ ಆಲಿಸುತ್ತಾ, ಗಾಯಕನ ಹಾವ-ಭಾವ ಅಭ್ಯಸುತ್ತಲೇ ಅವರಿಬ್ಬರೂ ಬಹಳ ಆತ್ಮೀಯರಾಗಿ ಹೋದರು. ಬೆಂಗಳೂರಿನ ಊರ್ವಶಿ ಚಿತ್ರಮಂದಿರಲ್ಲಿ ಆ ಸಿನಿಮಾದ ಶತದಿನೋತ್ಸವ ಸಮಾರಂಭದಲ್ಲಿ ಮತ್ತೆ ಆ ದಿಗ್ಗಜರಿಬ್ಬರ ಸಮಾಗಮದಲ್ಲಿ, ಸಿನಿಮಾ ನೋಡುವಾಗ ಸ್ವತಃ ನಾನೇ ಶಹನಾಯಿ ನುಡಿಸುತ್ತಿದ್ದಂತಹ ಅನುಭವ ನನಗಾಯಿತು ಎಂದು ಬಿಸ್ಮಿಲ್ಲಾ ಖಾನ್ ಅವರು ರಾಜಕುಮಾರ್ ಅವರ ಅಭಿನಯವನ್ನು ಹೊಗಳಿದ್ದಕ್ಕೆ ಪ್ರತಿಯಾಗಿ, ಈ ಚಿತ್ರದಲ್ಲಿ ನಾನು ಕೇವಲ ಅಪ್ಪಣ್ಣನಾಗಿ ಪಾತ್ರವಹಿಸಿದ್ದೆ. ಆದರೆ ಇಡೀ ಚಿತ್ರದ ಜೀವಾಳವೇ ಬಿಸ್ಮಿಲ್ಲಾ ಖಾನ್‌ರ ಅವರ ವಾದನ ಎಂದು ಪರಸ್ಪರ ಮೆಚ್ಚಿಕೊಂಡಿದ್ದರು. ಇವರಿಬ್ಬರ ಗೆಳೆತನ ಎಷ್ಟರಮಟ್ಟಿಗಿತ್ತು ಎಂದರೆ, ರಾಜಕುಮಾರ್ ಅವರು ಉತ್ತರ ಭಾರತದ ಕಡೆ ಹೋಗುವಾಗಲೆಲ್ಲಾ, ಇಲ್ಲಿನ ಉತ್ಕೃಷ್ಟವಾದ ಸುಗಂಧಭರಿತ ಅಗರಬತ್ತಿಗಳನ್ನು ಬಿಸ್ಮಿಲ್ಲಾ ಖಾನ್‌ರಿಗಾಗಿ ತೆಗೆಕೊಂಡು ಹೋಗಿ ಕೊಡುತ್ತಿದ್ದರಂತೆ.
ಇಂತಹ ಹೆಸರಾಂತ ಹಿಂದೂಸ್ಥಾನಿ ಸಂಗೀತ ದಿಗ್ಗಜ ಬಿಸ್ಮಿಲ್ಲಾ ಖಾನ್ ಅವರು 1916 ರ ಮಾರ್ಚ್ 21 ರಂದು ಇಂದಿನ ಬಿಹಾರದ ಬಕ್ಸಾರ್ ಜಿಲ್ಲೆಯ ಭೋಜ್‌ಪುರ ಪ್ರದೇಶದ ದುಮ್ರಾನ್ ರಾಜ್ಯದ (ಈಗ ದುಮ್ರಾನ್ ಪಟ್ಟಣ) ಮಹಾರಾಜ ಕೇಶವ್ ಪ್ರಸಾದ್ ಸಿಂಗ್ ಅವರ ಆಸ್ಥಾನದಲ್ಲಿ ಆಸ್ಥಾನ ಸಂಗೀತಗಾರರಾಗಿದ್ದಂತಹ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಕ್ಸ್ ಖಾನ್ ಮತ್ತು ಮಿತ್ತನ್‌ಬಾಯಿ ಅವರ ಎರಡನೇ ಮಗನಾಗಿ ಜನಿಸಿದರು. ತಮ್ಮ ಮೊದಲಿನ ಮಗನಿಗೆ ಶಮ್ಸುದ್ದೀನ್ ಎಂಬ ಹೆಸರಿದ್ದು, ಅಣ್ಣನೊಂದಿಗೆ ತಮ್ಮನ ಹೆಸರೂ ಸಹಾ ಪ್ರಾಸಬದ್ಧವಾಗಿರಲಿ ಎಂದು ಖಮ್ರುದ್ದೀನ್ ಎಂದು ಹೆಸರಿಡುತ್ತಾರೆ. ಆದರೆ ಅದೇ ಸಂಸ್ಥಾನದಲ್ಲಿ ಸಂಗೀತಗಾರರಾಗಿದ್ದ ಅವರ ಅಜ್ಜಂದಿರಾಗಿದ್ದಂತಹ ಉಸ್ತಾದ್ ಸಲಾರ್ ಹುಸೇನ್ ಖಾನ್ ಮತ್ತು ಶೆಹನಾಯಿ ವಾದಕರಾಗಿದ್ದ ರಸೂಲ್ ಬಕ್ಸ್ ಖಾನ್ ನವಜಾತ ಶಿಶುವನ್ನು ನೋಡಿ, ಇದು ಬಿಸ್ಮಿಲ್ಲಾ ಅರ್ಥಾತ್ ಅಲ್ಲಾಹನ ಆಶೀರ್ವಾದ ಎಂದು ಹೇಳಿದ್ದೇ ತಡಾ ಆ ಮಗುವಿಗೆ ಅಂದಿನಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯಲಾರಂಭಿಸಿದರು.





