ಪ್ರೊ. ಸುಮಿತ್ರಾರ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. 3 ತಿಂಗಳ ಹಿಂದೆ ಅವರು ಬುಕ್ ಮಾಡಿದ್ದ ಹೊಸ ಆಡೀ ಕಾರು ಬರುವುದಿತ್ತು. ಅರ್ಚಕರು ಕಾರನ್ನು ನಿಗದಿತ ದಿನದಂದು ತೆಗೆದುಕೊಂಡು ಬರಬೇಕೆಂದು ಸೂಚಿಸಿದರು. ಅಂದರೆ ಕಾರು ತರುವ ಮುಹೂರ್ತ ಅಂದಿಗೆ ನಿಗದಿಯಾಗಿತ್ತು.
ಅವರ ಪತಿ ಡಾ. ಚಂದ್ರಭೂಷಣ್ ಹೆಸರಾಂತ ಡಾಕ್ಟರ್. ಅಂದು ಅವರು ತಮ್ಮ ನರ್ಸಿಂಗ್‌ಹೋಂನಲ್ಲಿ ಒಂದು ಆಪರೇಷನ್‌ಮಾಡಬೇಕಿತ್ತು. ಅದನ್ನು ಅವರು ಬೇರೆಯವರಿಗೆ ಒಪ್ಪಿಸಿ ಬಂದಿದ್ದರು. ಏಕೆಂದರೆ ಕಾರು ಪೂಜೆಗಾಗಿ ಅರ್ಚಕರ ಮುಂದೆ ಕುಳಿತುಕೊಳ್ಳುವ ಅನಿವಾರ್ಯತೆ ಇತ್ತು. ಮಗ ವಿನೋದ್ ಎಂಡಿ ಮಾಡುತ್ತಿದ್ದ, ಮತ್ತೊಬ್ಬ ಮಗ ಚಿರಂತನ್ ಎಂಜಿನಿಯರ್ ಆಗಿದ್ದ. ಅಂದು ಅವರಿಬ್ಬರೂ ರಜೆ ಹಾಕಿದ್ದರು. ಡಾಕ್ಟರ್ ಮತ್ತು ಅವರ ಮಕ್ಕಳು ಕಾರು ತೆಗೆದುಕೊಂಡು ಬಂದಾಗ, ಅರ್ಚಕರು ಕಾರಿಗೆ ಹೂಮಾಲೆ ಹಾಕಿ, ಕಾರಿನ ಹಿಂದೆ ಮುಂದೆ ಕುಂಕುಮ ಅರಿಶಿನ ಲೇಪಿಸಿದರು. ಪ್ರತಿಯೊಂದು ಚಕ್ರಕ್ಕೂ ನೀರು ಚಿಮುಕಿಸಿದರು. ನಂತರ ರಸ್ತೆಯಲ್ಲಿ ತೆಂಗಿನಕಾಯಿ ಒಡೆದರು. ಹತ್ತು ಹಲವು ಮಂತ್ರಗಳನ್ನು ಸುಮಾರು ಹೊತ್ತು ಪಠಿಸಿದರು. ಆದರೆ ಅವ್ಯಾವೂ ಮನೆಯ ಯಾರೊಬ್ಬರಿಗೂ ಅರ್ಥ ಆಗಲಿಲ್ಲ. ಆ ಬಳಿಕ ಎಲ್ಲರೂ ಪುರೋಹಿತರ ಕಾಲು ಮುಟ್ಟಿ ನಮಸ್ಕರಿಸಿದರು.
ಪುರಾತನ ಯೋಚನೆ
ಅವರು ಕೊಂಡುಕೊಂಡಿದ್ದು 50 ಲಕ್ಷ ರೂ. ಬೆಲೆಯ ಆಡೀ ಕಾರು. ಪುರೋಹಿತರು ಅದನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಪೂಜಾ ಶುಲ್ಕ 5000 ರೂ. ಎಂದು ಮೊದಲೇ ಸೂಚನೆ ಕೊಟ್ಟಿದ್ದರು. ಬಡ ರೋಗಿಗಳ ರಕ್ತ ಹೀರುವ ಡಾ. ಚಂದ್ರಭೂಷಣ್‌ರಿಗೆ 5000 ರೂ.ಗಳ ದಕ್ಷಿಣೆಯನ್ನು ಪುರೋಹಿತನಿಗೆ ಕೊಡುವುದೇನೂ ಕಷ್ಟವೆನಿಸಲಿಲ್ಲ.
ಇಲ್ಲಿ ಏಳುವ ಪ್ರಶ್ನೆಯೆಂದರೆ ಸಂಪೂರ್ಣ ಸಾಕ್ಷರ ಕುಟುಂಬವೊಂದು ಹೊಸ ತಂತ್ರಜ್ಞಾನದ ಕಾರೊಂದನ್ನು ಖರೀದಿಸಿದ ಬಳಿಕ ಹಳೆಯ ಪರಂಪರೆಯ ಪೂಜೆಯನ್ನು ಏಕೆ ಮಾಡಿಸುತ್ತದೆ? ಮಂತ್ರ, ಜಪ, ಪೂಜೆ ಪ್ರವಚನಗಳು ಕಾರಿನಲ್ಲಿ ಕುಳಿತುಕೊಳ್ಳುವವರನ್ನು ಮತ್ತು ಚಲಾಯಿಸುವವರನ್ನು ರಕ್ಷಣೆ ಮಾಡುತ್ತದೆಯೇ?
ಯಾರಾದರೊಬ್ಬರು ಸೀಟು ಬೆಲ್ಟ್ ಧರಿಸದಿದ್ದರೆ, ಸುರಕ್ಷತೆಯ ನಿಯಮ ಪಾಲಸದಿದ್ದರೆ, ಕುಡಿದು ಗಾಡಿ ಓಡಿಸದಿದ್ದರೆ, ನಟ್‌ಬೋಲ್ಟ್ ಗಳ ಮಾಹಿತಿ ಹೊಂದಿರದಿದ್ದರೆ ಪುರೋಹಿತರ ಪೂಜೆ ಪುನಸ್ಕಾರ, ಮಂತ್ರಗಳು ಅವರನ್ನು ಕಾಪಾಡುತ್ತವೆಯೇ? ಪ್ರತಿದಿನ ರಸ್ತೆಗಳಲ್ಲಿ ಸಾವಿರಾರು ಅಪಘಾತಗಳು ಸಂಭವಿಸುತ್ತವೆ. ಆ ಅಪಘಾತಗಳಲ್ಲಿ ಕಾರುಗಳು ನಜ್ಜುಗುಜ್ಜಾಗಿ ಹೋಗಿರುತ್ತವೆ. ಆ ಕಾರುಗಳನ್ನೂ ಪೂಜೆ ಮಾಡಲಾಗಿರುತ್ತದೆ.
ಮುಂದೇನು?
ನಾವು ಆಧುನಿಕ ವಿಜ್ಞಾನದ ಹೊಸ ಹೊಸ ತಂತ್ರಜ್ಞಾನನ್ನು ಕರಗತ ಮಾಡಿಕೊಂಡು, ಸುಖ ಸೌಲಭ್ಯಗಳನ್ನು ಅನುಭವಿಸಿ ಖುಷಿಪಡುತ್ತೇವೆ. ಆದರೆ ಮಾನಸಿಕವಾಗಿ ನಾವಿನ್ನೂ ಪುರಾತನ ಯುಗದಲ್ಲೇ ಇದ್ದೇವೆ. ಪುರೋಹಿತರು, ಮೌಲ್ವಿಗಳು ಹೇಳಿದಂತೆ ಧರ್ಮಕರ್ಮ, ದಾನದಕ್ಷಿಣೆ ಇವು ನಮ್ಮನ್ನು ಬಿಡುತ್ತಲೇ ಇಲ್ಲ ಅಥವಾ ಅವನ್ನು ನಾವೇ ಬಿಡುತ್ತಿಲ್ಲವೇನೋ!
ಕಾರು ಖರೀದಿಸಿದ ಬಳಿಕ ಕಾರಿನಲ್ಲಿ ಕುಳಿತವರು ನಾವು ಕಾರಿಗೆ ಪೂಜೆ ಮಾಡಿಸಿದ್ದೇವೆ, ಈಗ ನಾವು ಮನಸ್ಸಿಗೆ ಬಂದಂತೆ ಕಾರು ಓಡಿಸಿದರೂ ನಮಗೇನೂ ಆಗುವುದಿಲ್ಲ ಎಂದು ಯೋಚಿಸುತ್ತಾರೆ. ಆದರೆ ಡ್ರೈವಿಂಗ್ ಮೇಲೆಯೇ ನಮ್ಮ ಅಳಿವು, ಉಳಿವು ಅವಲಂಬಿಸಿರುವಾಗ ಪುರೋಹಿತರು ಪೂಜೆ ಮಾಡಿಸಿದರೆ ಮಾತ್ರ ನಮಗೆ ತೃಪ್ತಿ ಎಂದು ಭಾವಿಸುವುದೇಕೆ? ಅವರು ಹೇಳಿದ ಸಮಯಕ್ಕೆ ಸರಿಯಾಗಿ ಶೋರೂಂನಿಂದ ಗಾಡಿ ತೆಗೆದುಕೊಂಡು ಬರಬೇಕೆನ್ನುವುದು, ಪೂಜೆ ಪುನಸ್ಕಾರದ ಬಳಿಕವೇ ವಾಹನ ಚಲಾಯಿಸುವ ಧೋರಣೆ ಅನುಸರಿಸಬೇಕೆ?
ಧಾರ್ಮಿಕ ಆಡಂಬರ
ಒಂದು ನಗರದಲ್ಲಿ ವಾಹನ ಗಣಪತಿ ಮಂದಿರವಿದೆ. ಹೊಸದಾಗಿ ವಾಹನ ಖರೀದಿಸಿದವರು ಆ ದೇವಸ್ಥಾನದ ಮುಂದೆ ನಿಲ್ಲಿಸಿ ಪುರೋಹಿತರ ಕಡೆಯಿಂದ ಪೂಜೆ ನೆರವೇರಿಸುತ್ತಾರೆ. ಈ ಕಾರಣದಿಂದ ಪುರೋಹಿತರಿಗೆ ಯಥೇಚ್ಛ ಪ್ರಮಾಣದಲ್ಲಿ ದಕ್ಷಿಣೆ ಲಭಿಸುತ್ತದೆ. ಇದೆಲ್ಲವನ್ನು ನೋಡಿದರೆ ನಾವೆತ್ತ ಸಾಗುತ್ತಿದ್ದೇವೆ ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು ಲೇಟೆಸ್ಟ್ ಕಾರು ಖರೀದಿಸಿ ಧೂರ್ತ ಪುರೋಹಿತರಿಗೆ ಹಣ ಕೊಟ್ಟು ಆಶೀರ್ವಾದ ಪಡೆಯುವುದೆಂದರೇನು? ಇದೆಂಥ ಮೂರ್ಖರ್ತನ? ನಾವು ಡಾಕ್ಟರ್, ಎಂಜಿನಿಯರ್, ವಿಜ್ಞಾನಿ ಹೀಗೆ ಏನೆಲ್ಲ ಆಗುತ್ತೇವೆ. ಆದರೆ ಧಾರ್ಮಿಕ ಮೂಢನಂಬಿಕೆಗಳನ್ನು ಮಾತ್ರ ಬಿಡುವುದಿಲ್ಲ. ಏಕೆಂದರೆ ನಮ್ಮಲ್ಲಿ ಮೂಢನಂಬಿಕೆಯ ಬೇರುಗಳು ಅದೆಷ್ಟು ಆಳವಾಗಿ ಬೇರೂರಿವೆ ಎಂದರೆ, ಅದರಿಂದ ನಾವು ಮುಕ್ತವಾಗಿ ಹೊರಬರಲು ಸಾಧ್ಯವೇ ಆಗುತ್ತಿಲ್ಲ.
ಧಾರ್ಮಿಕ ಆಡಂಬರಕ್ಕೆ ಬಲಿಯಾಗಿ ನಮ್ಮ ಪೂರ್ವಜರು ಮಾಡಿದ ತಪ್ಪನ್ನು ನಾವು ಸುಶಿಕ್ಷಿತರಾಗಿ, ಆಧುನಿಕರಾಗಿ ಅದನ್ನೇ ಮುಂದುವರಿಸಿಕೊಂಡು ಹೊರಟಿದ್ದೇವೆ. ಇದು ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಅನುಕರಣೆ ಮಾಡಲಾಗುತ್ತಿದೆ. ಗ್ರೇಟ್‌ಬ್ರಿಟನ್‌ನಲ್ಲೂ ಹೊಸ ಕಾರು ಖರೀದಿಸಿ `ಹೋಲಿ ವಾಟರ್’ ಸಿಂಪಡಿಸಿ ಪೂಜಿಸಲಾಗುತ್ತದೆ.
ಪುರೋಹಿತರ ಬೂಟಾಟಿಕೆ
ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುವ ಮ್ಯಾನೇಜರ್ ಸತ್ಯಜಿತ್ ಹೀಗೆ ಹೇಳುತ್ತಾರೆ, “5 ವರ್ಷಗಳ ಹಿಂದೆ ಮದುವೆಯಾಗುತ್ತಲೇ ನಾವು ಕಾರೊಂದನ್ನು ಖರೀದಿಸಿದೆವು. ಅದಕ್ಕಾಗಿ ನಾವು ಯಾವ ಪುರೋಹಿತರನ್ನು ಕೇಳಲಿಲ್ಲ. ದಾನದಕ್ಷಿಣೆ ಕೊಡಲಿಲ್ಲ, ಮುಹೂರ್ತ ಕೇಳಿ ಕಾರು ತರಲು ಹೋಗಲಿಲ್ಲ. ನಾವಿಬ್ಬರೂ ಹಾಗೆ ಸುಮ್ಮನೆ ಹೋಗಿ ಗಾಡಿ ತೆಗೆದುಕೊಂಡು ಬಂದೆವು. ಬರುವಾಗ ಹೋಟೆಲ್‌ನಲ್ಲಿ ತಿಂಡಿ ತಿಂದುಕೊಂಡು ಖುಷಿಯಿಂದ ಬಂದೆವು. ಈಗ ಗಾಡಿ ಖರೀದಿಸಿ 5 ವರ್ಷವಾಯಿತು. ನಮಗೆ 3 ವರ್ಷದ ಮಗನಿದ್ದಾನೆ. ಕಾರಿಗೆ ಈವರೆಗೂ ಒಂದೇ ಒಂದು ಗೆರೆ ಸಹ ಬಿದ್ದಿಲ್ಲ.”
ಅವರ ಪತ್ನಿ ನಿಧಿ ಈ ಕುರಿತಂತೆ ಹೀಗೆ ಹೇಳುತ್ತಾರೆ, “ನನ್ನ ಪತಿ ಬಹಳ ಸುರಕ್ಷಿತವಾಗಿ ಡ್ರೈವಿಂಗ್ ಮಾಡುತ್ತಾರೆ. ಒಂದು ವೇಳೆ ನಾವು ಕಾರು ತೆಗೆದುಕೊಳ್ಳುವ ಮುಂಚೆ ನಮ್ಮ ಅತ್ತೆಮಾವನವರ ಸಲಹೆ ಕೇಳಿದ್ದರೆ ಅವರು ಅದೆಷ್ಟು ಪೂಜೆ ಪುನಸ್ಕಾರಗಳ ಬಗ್ಗೆ ಹೇಳ್ತಿದ್ದರೊ ಏನೋ, ಅದೆಷ್ಟು ಮೊತ್ತವನ್ನು ದಕ್ಷಿಣೆಯ ರೂಪದಲ್ಲಿ ಕೊಡಬೇಕಾಗುತ್ತಿತ್ತೊ ಏನೋ… ನಾವು ಅವರಿಗೆ ಕಾರು ತೆಗೆದುಕೊಂಡ ಬಳಿಕವೇ ತಿಳಿಸಿದೆವು.”
ಸುರಕ್ಷತಾ ನಿಯಮ ಮಹತ್ವದ್ದು
ಜಗತ್ತು ಅದೆಷ್ಟೋ ಮುಂದೆ ಸಾಗಿದೆ. ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇವೆ. ಹೊಸ ತಂತ್ರಜ್ಞಾನ ಕಂಡು ಎಲ್ಲರೂ ಬೆರಗಾಗುತ್ತಲೇ ಇದ್ದಾರೆ. ಆದರೆ ಮೂಢನಂಬಿಕೆ, ಕಂದಾಚಾರ, ಪುರೋಹಿತರು, ಮೌಲ್ವಿಗಳ ಬಾಬತ್ತಿನಲ್ಲಿ ನಮ್ಮ ಯೋಚನೆಗಳು ಬಹಳ ದುರ್ಬಲರಾಗಿ ಬಿಡುತ್ತೇವೆ.
ನಿಮ್ಮ ಯೋಚನೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಿ. ಜೀವನದಲ್ಲಿ ಬರುವ ಕಷ್ಟನಷ್ಟಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡಿ. ಹೊಸ ಕಾರು ತೆಗೆದುಕೊಂಡಾಗ ಪೂಜಾರಿ ಪುರೋಹಿತರ ಬಳಿ ಹೋಗುವುದಲ್ಲ, ನಿಮ್ಮ ಕುಟುಂಬದವರು, ಸ್ನೇಹಿತರ ಜೊತೆ ಆ ಖುಷಿಯನ್ನು ಅನುಭವಿಸಿ. ಪುರೋಹಿತರ ಭ್ರಮೆಯ ಜಾಲದಲ್ಲಿ ಸಿಲುಕಬೇಡಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿಯೇ ಇದೆ.
ಆದರೆ ಯಾರೋ ಪುರೋಹಿತನ ಮಂತ್ರತಂತ್ರ, ಪೂಜೆಯಲ್ಲಿ ಖಂಡಿತ ಅಲ್ಲ. ಸುರಕ್ಷತಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ವಾಹನದ ಆನಂದ ಪಡೆದುಕೊಳ್ಳಿ.
– ಪೂರ್ಣಿಮಾ ಆನಂದ್