ಈ ಜಗತ್ತಿನಲ್ಲಿ ಸ್ಥಿರವಾಗಿರುವುದು ಏನಾದರೂ ಇದೆಯೆಂದರೆ ಅದು ಧರ್ಮ!’ ಈ ರಾಗವನ್ನು ಸದಾ ಬಡಬಡಿಸುವ ಪೂಜಾರಿ ಪುರೋಹಿತರಿಗೆ ಈಗ ಧಾರ್ಮಿಕ ಕರ್ಮಕಾಂಡಗಳ ಮುಖಾಂತರ ಕೆನೆ ನೆಕ್ಕುವುದನ್ನು ಮುಂದುವರಿಸಲು ಧಾರ್ಮಿಕ ಸಿದ್ಧಾಂತಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ತಮ್ಮ ಹೊಟ್ಟೆಗೆ ಕಲ್ಲು ಬೀಳುತ್ತದೆ ಎಂದು ಅವರಿಗೆ  ಗೊತ್ತಾಗಿಬಿಟ್ಟಿದೆ.

ಧರ್ಮದ ವಹಿವಾಟಿನಲ್ಲೂ ಈಗ ಬೇರೆ ವಹಿವಾಟುಗಳ ಹಾಗೆ ಸಾಕಷ್ಟು ಬದಲಾವಣೆ ಆಗಿದೆ. ಹೀಗೆ ಮಾಡುವುದರ ಹಿಂದೆ ಯಾವುದೇ ಧಾರ್ಮಿಕ ನಿರ್ದೇಶನದ ಉದಾರತೆ ಇಲ್ಲ. ಇದು ಧಾರ್ಮಿಕ ಅಂಗಡಿಕಾರರ ಆರ್ಥಿಕ ಸ್ವಾರ್ಥ.ಹಣ ಗಳಿಸಲು ಧರ್ಮದ ಮೋಸಗಾರರು ಹೇಗೆ ಗೋಸುಂಬೆ ರೀತಿಯಲ್ಲಿ ಬಣ್ಣ ಬದಲಾಯಿಸುತ್ತಾರೆ ಎಂಬುದಕ್ಕೊಂದು ಉದಾಹರಣೆ ಗಮನಿಸಿ. 42 ವರ್ಷದ ಲಕ್ಷ್ಮೀನಾರಾಯಣ ಎಂಬುವರು ಮೃತಪಟ್ಟಿದ್ದರು. ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಅವರ ಚಿತೆಗೆ ಪುತ್ರನೇ ಅಗ್ನಿಸ್ಪರ್ಶ ಮಾಡಿಸಬೇಕಿತ್ತು. ಆದರೆ ಲಕ್ಷ್ಮಿನಾರಾಯಣರಿಗೆ ಗಂಡು ಮಕ್ಕಳಿರಲಿಲ್ಲ. ಆದರೆ ಅಲ್ಲಿ ಉಪಸ್ಥಿತರಿದ್ದ ಪುರೋಹಿತರು ಚಿತೆಗೆ ಬೆಂಕಿ ಇಡುವ ಕೆಲಸವನ್ನು ಅವರ ಇಬ್ಬರು ಪುತ್ರಿಯರಿಗೆ ಕೊಟ್ಟರು. ಇಂತಹ ಅನೇಕ ಸುದ್ದಿಗಳನ್ನು ನಾವು ಆಗಾಗ ಪತ್ರಿಕೆಯಲ್ಲಿ ಓದುತ್ತಿರುತ್ತೇವೆ. ಲಕ್ಷ್ಮೀ ನಾರಾಯಣರವರ ಇಬ್ಬರೂ ಪುತ್ರಿಯರಿಗೆ ತಲೆಗೆ ಪೇಟಾ ಕಟ್ಟಿ ಅವರನ್ನು ಮನೆಯ ಉಸ್ತುವಾರಿಗಳು ಎಂದು ಘೋಷಿಸಲಾಯಿತು. ಅದೇ ಸಂದರ್ಭದಲ್ಲಿ ಇದು ಹೊಸ ಪರಂಪರೆ ಎಂದು ಘೋಷಿಸಲಾಯಿತು. ಇದರಿಂದ ಹೆಣ್ಣುಮಕ್ಕಳ ಬಗೆಗಿನ ಗೌರವ ಹೆಚ್ಚುತ್ತದೆ ಎಂದೂ ಹೇಳಲಾಯಿತು.

ಹೆಣ್ಣುಮಕ್ಕಳ ಮೇಲೆ ಗುರಿ

ಈ ನಿರ್ಧಾರ ಅಥವಾ ಹೊಸ ಪಂಪರೆಯ ಅರ್ಥ ಈಗ ಧರ್ಮ ಮುಂಚಿನ ಹಾಗೆ ಹುಡುಗಿಯರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದಿಲ್ಲ ಎಂದಲ್ಲ. ಆದರೆ ಯಾವ ಮನೆಯಲ್ಲಿ ಗಂಡು ಮಕ್ಕಳು ಇರುತ್ತಾರೋ, ಅಲ್ಲಿ ಹೆಣ್ಣುಮಕ್ಕಳಿಗೆ ಈ ಹಕ್ಕು ದೊರಕುವುದಿಲ್ಲ. ಲಿಂಗತಾರತಮ್ಯಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ದೊರೆಯಲು ಸಾಧ್ಯವೇ ಇಲ್ಲ. ಅದರನ್ವಯ ಭೇದಭಾವವನ್ನು ಹಾಗೆಯೇ ಉಳಿಸಿಕೊಂಡು ಹೋಗಲಾಗುತ್ತದೆ. ಅದರ ಜೊತೆ ಜೊತೆಗೆ ಹುಡುಗಿಯರನ್ನು ಧರ್ಮದ ಹೊಸ ಗ್ರಾಹಕರನ್ನಾಗಿ ಮಾಡಲಾಗುತ್ತಿದೆ. ಮಗನಿಲ್ಲದ ತಂದೆಯ ನಿಧನಾನಂತರ ಧಾರ್ಮಿಕ ರೀತಿ ನೀತಿ ಅನುಸರಿಸದೆ ಇರುವುದಿಲ್ಲ. ಅದರ ಹೆಸರಿನಲ್ಲಿ ಮಗಳ ಮೂಲಕ ದಾನದಕ್ಷಿಣೆಯನ್ನು ಕಬಳಿಸುವುದು ಪೂಜಾರಿ ಪುರೋಹಿತರ ಗುರಿಯಾಗಿರುತ್ತದೆ.

ಧರ್ಮ ಹೇಗೆ ಅರ್ಥ ಪ್ರಧಾನವಾಗಿದೆ ಎನ್ನುವುದನ್ನು ಮೇಲಿನ ಉದಾಹರಣೆಯಿಂದ ತಿಳಿದುಕೊಳ್ಳಬಹುದು. ಯಾರಿಗೆ ಮೊದಲು ಗಂಡುಮಕ್ಕಳು ಇರುತ್ತಿರಲಿಲ್ಲವೋ, ಅವರ ಅಂತಿಮ ಸಂಸ್ಕಾರವನ್ನು ಸಂಬಂಧಗಳಲ್ಲಿ ಯಾರಾದರೊಬ್ಬರು ಪುರುಷರು ನಿಭಾಯಿಸುತ್ತಿದ್ದರು. ಅಂದಹಾಗೆ ಇದರ ಖರ್ಚನ್ನು ಮೃತನ ಹೆಂಡತಿಯೇ ಕೊಡುತ್ತಿದ್ದಳು.

ಈಗ ಸಣ್ಣ ಕುಟುಂಬಗಳದ್ದೇ ದರ್ಬಾರು, ಸಂಬಂಧಿಕರಲ್ಲೂ ನಿಕಟತೆ ಇಲ್ಲ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಶೇ.30ರಷ್ಟು ಕುಟುಂಬಗಳಲ್ಲಿ ಈಗ ಗಂಡು ಸಂತಾನ ಇಲ್ಲದಂತಾಗಿದೆ. ಒಂದು ಒಳ್ಳೆಯ ಸಂಗತಿಯೆಂದರೆ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಪಾಲನೆ ಪೋಷಣೆ ಮಾಡಿ ಚೆನ್ನಾಗಿ ಓದಿಸುತ್ತಿದ್ದಾರೆ. ಉದ್ಯೋಗ ಮಾಡಲು ಕೂಡ ಅವಕಾಶ ಕೊಡುತ್ತಿದ್ದಾರೆ. ಗಂಡು ಮಗ ಇರದ್ದಿದ್ದರೇನಾಯ್ತು, ನಾವು ಹೆಣ್ಣುಮಕ್ಕಳನ್ನೇ ಗಂಡು ಮಕ್ಕಳೆಂದು ಭಾವಿಸುತ್ತೇವೆ ಎನ್ನುತ್ತಿದ್ದಾರೆ.

ಹುಡುಗಿಯರು ಚೆನ್ನಾಗಿ ಓದಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುತ್ತಿದ್ದಾರೆ. ಆದರೆ ಧರ್ಮ ಸಮಸ್ಯೆ ಮಾತ್ರ ಹಾಗೆಯೇ ಉಳಿಯಿತು. ಅಂದರೆ ತಂದೆಯ ನಿಧನಾನಂತರ ಅವರ ಧಾರ್ಮಿಕ ಸಂಸ್ಕಾರಗಳನ್ನು ಯಾರು ಕೈಗೊಳ್ಳಬೇಕು ಎನ್ನುವುದು.

ಬಲೆ ಬೀಸಿದರು

ಈಗ ಹುಡುಗಿಯರು ಕಾರು, ಟ್ರೇನು ನಡೆಸುತ್ತಿದ್ದಾರೆ. ವಿಮಾನ ಕೂಡ ಹಾರಿಸುತ್ತಿದ್ದಾರೆ. ಕೈಯಲ್ಲಿ ಸಿಕ್ಕಾಪಟ್ಟೆ ಹಣ ಚಲಾವಣೆ ಆಗುತ್ತಿದೆ. ಇಷ್ಟಾಗ್ಯೂ ಅವರಿಗೆ ಧಾರ್ಮಿಕ ಹಕ್ಕುಗಳು ಇರಲಿಲ್ಲ. ಇದರಿಂದ ಧರ್ಮದ ಅಂಗಡಿಕಾರರ ಮೇಲೆ ಅಪಾಯದ ಕರಿನೆರಳು ಕವಿಯುತ್ತಿದೆ. ಹಾಗೊಂದು ವೇಳೆ ಮಗ ಇಲ್ಲವೆಂದು ಜನರು ಸಂಸ್ಕಾರಗಳನ್ನು ನಿರ್ಲಕ್ಷಿಸಿದರೆ ಹಾನಿ ತಮಗೆ ಎನ್ನುವುದು ಧಾರ್ಮಿಕ ಅಂಗಡಿಕಾರರ ಕಳವಳವಾಗಿತ್ತು.

ಅಂತ್ಯ ಸಂಸ್ಕಾರ ಒಂದು ಮಹತ್ವದ ಧಾರ್ಮಿಕ ಸಂಸ್ಕಾರ. ಅದರಿಂದ ಪಂಡಿತ ಪುರೋಹಿತರಿಗೆ ಸಾಕಷ್ಟು ಆದಾಯ ಬರುತ್ತದೆ. 11-12ನೇ ದಿನದ ಭೋಜನದ ಬಳಿಕ ಪ್ರತಿವರ್ಷ ಶ್ರಾದ್ಧ ಹಾಗೂ ಇತರೆ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಬೇಕಾಗುತ್ತದೆ. ಅವನ್ನು ಮಾಡುವವರು ಯಾರೂ ಇಲ್ಲವೆಂದರೆ ಜನರು ಅವನ್ನು ಮಾಡುವುದಿಲ್ಲ. ಹೀಗಾಗಿ ಹೊಸ ಪುಕಾರು ಶುರು ಮಾಡಿದರು. ಗಂಡು ಮಗ ಇರದಿದ್ದರೇನಾಯ್ತು, ಹೆಣ್ಣು ಮಗಳು ಆ ವಿಧಾನ ಮುಂದುವರಿಸುತ್ತಾಳೆ.

ನಿನ್ನೆ ಮೊನ್ನೆಯವರೆಗೆ ಧರ್ಮ ಮಹಿಳೆಯನ್ನು ನರಕದ ದ್ವಾರವೆಂದು ಹೇಳುತ್ತಿತ್ತು. ಅವಳು ಪ್ರಾಣಿಗಳಿಗೆ ಸಮ ಎಂದು ಹೇಳಲಾಗುತ್ತಿತ್ತು. ಈಗ ಧೋರಣೆ ಬದಲಾಗಿದೆ. ಈ ಅಳೆದು ತೂಗಿದ ಧೋರಣೆ ಪೂಜಾರಿ ಪುರೋಹಿತರ ಹಣ ಗಳಿಸುವ ಹುನ್ನಾರವಾಗಿದೆ.

ತಂದೆಯ ಪಾರ್ಥಿವ ಶರೀರಕ್ಕೆ ಮಗ ಅಗ್ನಿ ಸಂಸ್ಕಾರ ಮಾಡಿದರೆ ಮಾತ್ರ ಪುಣ್ಯ ಪ್ರಾಪ್ತಿ ಎಂದು ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ ವಿಚಾರವನ್ನು ಹೊರ ತೆಗೆಯಬೇಕಿತ್ತು. ಗಂಡು ಮಕ್ಕಳಿಲ್ಲದ ತಂದೆಗೆ ಈ ರೀತಿ ಹುಡುಗಿಯರಿಗೆ ಅಗ್ನಿ ಸಂಸ್ಕಾರದ ಹಕ್ಕು ನೀಡುವುದರ ಮೂಲಕ ಬದಲಾವಣೆ ತಂದಿದ್ದೇವೆ ಎಂದು ಎದೆ ತಟ್ಟಿಕೊಂಡು ಹೇಳಿದರು. ಆದರೆ ಹೀಗೆ ಹೇಳಿದುದರ ಹಿಂದಿನ ಉದ್ದೇಶವಾದರೂ ಏನು?

ಮೋಕ್ಷದ ಚಿಂತೆ

ಹೆಣ್ಣುಮಕ್ಕಳಿಂದ ತಂದೆಯ ಚಿತೆಗೆ ಅಗ್ನಿಸ್ಪರ್ಶದ ಸುದ್ದಿಯ ಪರಿಣಾಮ ಇತರೆಡೆ ಕೂಡ ಕಂಡು ಬರಲಾರಂಭಿಸಿದೆ. ಪ್ರಕಾಶ್‌ ನಿವೃತ್ತ ಸರ್ಕಾರಿ ಅಧಿಕಾರಿ. ತಾನು ತೀರಿಕೊಂಡ ಬಳಿಕ ತನಗೆ ಮೋಕ್ಷ ದೊರೆಯುತ್ತದೊ ಇಲ್ಲವೋ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಈಗ ಅವರ ಚಿಂತೆ ದೂರವಾಗಿದೆ. ಪ್ರಕಾಶ್‌, ಬರೆದಿಟ್ಟಿರುವ ವಿಲ್‌ನಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳೇ ಅಂತ್ಯ ಸಂಸ್ಕಾರ ನೆರವೇರಿಸಬೇಕು ಹಾಗೂ ಇತರೆ ವಿಧಿ ವಿಧಾನಗಳನ್ನು ಪೂರೈಸಬೇಕು ಎಂದು ಬರೆಯಿಸಿದರು.

ಪ್ರಕಾಶ್‌ ಅವರಂತಹ ಅದೆಷ್ಟೋ ಜನ ಅದರಿಂದ ಪ್ರೇರಿತರಾಗಿದ್ದಾರೆ. ಆದರೆ ಅವರಿಗೆ ಇದೆಲ್ಲ ಏಕೆ ಮಾಡುತ್ತಿದ್ದಾರೆ ಎಂಬುದರ ಕಲ್ಪನೆ ಇಲ್ಲ. ಮಗ ಮಾಡಬೇಕಾದುದನ್ನು ಮಗಳು ಮಾಡುತ್ತಾಳೆ ಎನ್ನುವುದೇನೊ ಸತ್ಯ. ಆದರೆ ಶ್ರಾದ್ಧ, ಪಿಂಡ, ಅರ್ಪಣೆ, ತರ್ಪಣೆ ಹೆಸರಿನಲ್ಲಿ ದಾನ ದಕ್ಷಿಣೆಯನ್ನು ಕೈಗೆ ಬಂದಷ್ಟು ಬಾಚಿಕೊಳ್ಳುವುದೇ ಅವರ ಧ್ಯೇಯವಾಗಿದೆ.

ಮುಕ್ತಿಯ ಮಾಧ್ಯಮ ಏಕೆ ಬಾಗುತ್ತಿದೆ ಎನ್ನುವುದು ಗಂಡು ಸಂತಾನವಿಲ್ಲದ ದಂಪತಿಗಳಿಗೆ ಅರಿವಾಗುತ್ತಿಲ್ಲ. ಅಂದಹಾಗೆ ಈ ಮುಕ್ತಿ ಎಂದರೇನು? ಅದು ಮುಂಚೆ ಗಂಡು ಮಕ್ಕಳಿಂದ ಮಾತ್ರ ದೊರೆಯುತ್ತಿದ್ದು ಈಗ ಹೆಣ್ಣುಮಕ್ಕಳಿಂದಲೂ ದೊರೆಯಲಾರಂಭಿಸಿದೆಯೇ?

ಹೆಣ್ಣುಮಕ್ಕಳನ್ನು ಚೆನ್ನಾಗಿ ಪಾಲನೆ ಪೋಷಣೆ ಮಾಡಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದು ಒಳ್ಳೆಯ ವಿಷಯವೇ ಸರಿ. ಆದರೆ ಅವರನ್ನು ಮೂಢನಂಬಿಕೆಯ ಬಲಿಪಶುಗಳನ್ನಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ?

ಪೂಜಾರಿ ಪುರೋಹಿತರಿಗೆ ದಾನ ದಕ್ಷಿಣೆಯ ಚಿಂತೆ ಇದೆಯೇ ಹೊರತು ಹೆಣ್ಣು, ಗಂಡು ಬೇಧಭಾವ ಇಲ್ಲ. ಹೆಣ್ಣುಮಕ್ಕಳಾದರೆ ಕೇಳಿದಷ್ಟು ಕೊಟ್ಟುಬಿಡುತ್ತಾರೆ. ಚೌಕಾಶಿ ಮಾಡುವುದಿಲ್ಲ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.

ಇಂತಹ ಸ್ಥಿತಿಯಲ್ಲಿ ಹೆಣ್ಣುಮಕ್ಕಳನ್ನು ವ್ಯಾವಹಾರಿಕ ದೃಷ್ಟಿಕೋನದಲ್ಲಿ ಬೆಳೆಸಿಕೊಳ್ಳಬೇಕು. ಆದರೆ ಆ ಪ್ರಯತ್ನ ನಡೆಯುತ್ತಿಲ್ಲ. ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಮೂಢನಂಬಿಕೆ ಪಸರಿಸುವವರು ಹೆಣ್ಣುಮಕ್ಕಳ ಮೇಲೆ ಮುಗಿಬೀಳುತ್ತಿದ್ದಾರೆ. ತಮ್ಮ ಮೂಢನಂಬಿಕೆ ಮಂತ್ರವನ್ನು ಎಲ್ಲರೂ ಯಾವಾಗಲೂ ಪಠಿಸುತ್ತ ಇರಬೇಕು ಎನ್ನುವುದು ಅವರ ಧ್ಯೇಯವಾಗಿದೆ. ಧಾರ್ಮಿಕ ಇಬ್ಬಂದಿತನ ಎನ್ನುವುದು ತಮ್ಮ ಲಾಭವನ್ನು ಖಾಯಂ ಆಗಿ ಮುಂದುವರಿಸಿಕೊಂಡು ಹೋಗುವ ದುರಾಲೋಚನೆ ಆಗಿದೆ.

ಹಣ ಎಗರಿಸುವ ಮಾಧ್ಯಮ : ಹೋರಾಡಿ, ಗುದ್ದಾಡಿ ದೇಗುಲ ಪ್ರವೇಶಿಸುವ ಹಕ್ಕು ಪಡೆದಿರುವುದು ಅದರಲ್ಲೇನೂ ಬಹಳ ಬದಲಾವಣೆ ತಂದಿಲ್ಲ. ಅವರ ಗೆಲುವು ವಾಸ್ತವದಲ್ಲಿ ಅವರ ಸೋಲೇ ಆಗಿದೆ. ತಂದೆಯ ಸಾವಿನ ಬಳಿಕ ಏನೆಲ್ಲ ವಿಧಿವಿಧಾನ ನಡೆಸಬೇಕೊ ಅದರ ಹಿಂದಿನ ಮೂಲ ಉದ್ದೇಶ ಹಣ ಸೆಳೆಯುವುದಾಗಿದೆ. ಆ ಕಾರಣದಿಂದ ಅವರು ಹುಡುಗಿಯರನ್ನು ಮೂಢನಂಬಿಕೆಯ ಕೂಪಕ್ಕೆ ನೂಕುವುದು ಬಹು ದೊಡ್ಡ ಸಂಚಾಗಿದೆ.

ತಂದೆಯೊಂದಿಗೆ ಹೆಣ್ಣುಮಕ್ಕಳ ನಿಕಟತೆ ಇದ್ದೇ ಇರುತ್ತದೆ. ಪಂಡಿತ ಪುರೋಹಿತರು ಅದರ ದುರ್ಲಾಭ ಪಡೆಯಬೇಕೆನ್ನುತ್ತಾರೆ. ಮೊದಲ ಬಾರಿ ವಿಧಿ ವಿಧಾನಗಳನ್ನು ಪೂರೈಸುವಾಗ ಯುವತಿಯರು ಸ್ವಲ್ಪ ಹೆಚ್ಚೇ ದಾನ ಧರ್ಮ ಮಾಡುತ್ತಾರೆ. ಏಕೆಂದರೆ ತಮ್ಮ ಸಾರ್ಥಕತೆಯನ್ನು ಒರೆಗೆ ಹಚ್ಚಲು ಅವರು ಪ್ರಯತ್ನಿಸುತ್ತಾರೆ. ಇದರಲ್ಲಿ ತಾಯಿ ಕೂಡ ಅವರಿಗೆ ಕುಮ್ಮಕ್ಕು ಕೊಡುತ್ತಾಳೆ. ಆ ಮೂಲಕ ತಮ್ಮ ಕೈಯಲ್ಲಿದ್ದ ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತಾರೆ.

– ಭರತ್‌ ಭೂಷಣ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ