ಮಲೆನಾಡಿನ ತವರೂರಾದ ಚಿಕ್ಕಮಗಳೂರು ನನ್ನ ಊರು. ಹುಟ್ಟಿದ್ದು, ಬೆಳದದ್ದು ಬಾಲ್ಯ, ಹರೆಯ ಎಲ್ಲವೂ ಅಲ್ಲಿಯೇ. ನಾವು ಚಿಕ್ಕವರಿರುವಾಗ ಪ್ರತಿ ವರ್ಷ ಸೀತಾಳಯ್ಯನ ಗಿರಿ, ಬಾಬಾ ಬುಡನ್ ಗಿರಿ, ನಿರ್ವಾಣ ಸ್ವಾಮಿ ಮಠಕ್ಕೆ ಹೋಗುವುದು ರೂಢಿ. ಆಗ ನಮ್ಮ ಊರು ಅಷ್ಟೊಂದು ಫೇಮಸ್ ಆಗಿರಲಿಲ್ಲ. ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಚುನಾವಣೆಗೆ ನಿಂತದ್ದೇ, ಇಡೀ ವಿಶ್ವಕ್ಕೆ ಚಿಕ್ಕಮಗಳೂರಿನ ಹೆಸರು ಗೊತ್ತಾಯಿತು. ಆಗ ಜನತಾ ಪಾರ್ಟಿಯಲ್ಲಿದ್ದ ರಾಮಕೃಷ್ಣ ಹೆಗಡೆಯವರು ಹೇಳಿದ ಒಂದು ಮಾತು ನನಗೆ ಈಗಲೂ ನೆನಪಿದೆ. ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನ ಚಿಕ್ಕ ಮಗಳಾದರೆ, ನಾನು ಚಿಕ್ಕಮಗಳೂರಿನ ಅಳಿಯ ಎಂದು. ಅವರ ಹೆಂಡತಿ ಚಿಕ್ಕಮಗಳೂರಿನವರು. ಒಟ್ಟಿನಲ್ಲಿ ಅದೆಲ್ಲಾ ಈಗ ಇತಿಹಾಸವಾಗಿದೆ. ಈಗ ಅವರಿಬ್ಬರೂ ಇಲ್ಲ.
ಆದರೆ ಚಿಕ್ಕಮಗಳೂರು ಹಿಂದೆಂದಿಗಿಂತಲೂ ಬಹಳ ಕೀರ್ತಿಯನ್ನು ಪಡೆದಿದೆ. ಹೇಳಬೇಕೆಂದರೆ ನಮ್ಮೂರು ಮಲೆನಾಡಿನ ತವರೂರು, ಅಲ್ಲಿಯ ಗಿರಿ ಶಿಖರಗಳು, ಕಾಫೀ ತೋಟಗಳು ನೋಡಲು ಬಲು ಚೆನ್ನ. ಸುತ್ತಮುತ್ತಲೂ ಹಸಿರನ್ನು ತನ್ನೊಡಲು ತುಂಬಿಕೊಂಡಿರುವ ಚಿಕ್ಕಮಗಳೂರಿನ ಸೊಬಗನ್ನು ಮಾತುಗಳಲ್ಲಿ ಹೇಳಲು ಅಸಾಧ್ಯ. ಅದನ್ನು ನೋಡಿಯೇ ತೀರಬೇಕು. ಅದಲ್ಲದೆ, ಇತ್ತ ನೋಡಿದರೆ ಗಿರಿ ಶಿಖರಗಳು, ಅತ್ತ ತಿರುಗಿಡರೆ ವಿಶ್ವ ವಿಖ್ಯಾತ ಬೇಲೂರು, ಹಳೇಬೀಡು. ಇನ್ನೂ ಸ್ವಲ್ಪ ಮುಂದೆ ಸಾಗಿದರೆ ಎತ್ತರದ ಗೊಮ್ಮಟನ ಶ್ರವಣಬೆಳಗೊಳ, ಮತ್ತೊಂದು ದಿಕ್ಕಿಗೆ ಶೃಂಗೇರಿ! ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಅತ್ಯಂತ ಹೆಚ್ಚು ಮಳೆ ಸುರಿಯುವ ಮತ್ತು ಬುಗುರಿಯಂತೆ ಗಿರಗಿರನೆ ತಿರುಗುವ ಸೂರ್ಯನ ರೂಪವನ್ನು ನೋಡಲು ಅವನು ತನ್ನ ಸೂರ್ಯಾಸ್ತಮಾನಕ್ಕೆ ಪ್ರಸಿದ್ಧವಾದ ಆಗುಂಬೆ. ಹತ್ತಿರದಲ್ಲೇ ಇರುವ ಮುಂಗಾರು ಮಳೆ ಚಲನಚಿತ್ರದಿಂದ ತನ್ನನ್ನು ಗುರುತಿಸಿಕೊಂಡ ಸಕಲೇಶಪುರ..... ಹೀಗೆ ಚಿಕ್ಕಮಗಳೂರಿನ ಸುತ್ತಮುತ್ತ ನೋಡಲು ಬಹಳಷ್ಟು ಪ್ರವಾಸಿ ತಾಣಗಳಿವೆ. ಹಸಿರು ಪ್ರಕೃತಿ, ವಿಶ್ವವಿಖ್ಯಾತ ಶಿಲ್ಪ ವೈಭವ, ಆಸಕ್ತ ಪ್ರವಾಸಿಗರಿಗೆ ಮತ್ತಿನ್ನೇನು ಬೇಕು ಅಲ್ಲವೇ?
ಕಾಫೀ ತೋಟ : ಅದಕ್ಕೆ ಏನೋ ಅಂದಿನ ಕಾಫಿ ತೋಟಗಳೆಲ್ಲಾ ಈಗ ರೆಸಾರ್ಟ್, ಹೋಂ ಸ್ಟೇಗಳಾಗಿ ಪರಿವರ್ತಿತವಾಗಿವೆ. ನಮ್ಮ ಊರು ಯಾವಾಗಲೂ ಪ್ರವಾಸಿಗರಿಂದ ತುಂಬಿರುತ್ತದೆ. ಚೈತ್ರ ಮಾಸದ ನಂತರ ಮಲ್ಲಿಗೆಯ ಜಡೆಯಂತೆ ತನ್ನ ಕೊಂಬೆ ರೆಂಬೆಗಳನ್ನು ಅಚ್ಚ ಬಿಳಿಯ ಶ್ವೇತರ್ಣದ ಹೂಗಳಿಂದ ತುಂಬಿಕೊಂಡು ಕಂಗೊಳಿಸುವ ಕಾಫೀ ತೋಟಗಳು, ಆ ಸಮಯವನ್ನು ಬ್ಲಾಸಂ ಸೀಸನ್ ಅಂದರೆ ಹೂ ಬಿಡುವ ಕಾಲ ಎನ್ನುತ್ತಾರೆ. ಡಿಸೆಂಬರ್ ನಲ್ಲಿ ಹೊಳೆಯುವ ಕೆಂಪು ಬಣ್ಣದಿಂದ ಮನಸೆಳೆಯುವ ಕಾಫಿ ಹಣ್ಣುಗಳು, ಆ ಹಣ್ಣುಗಳ ಸಿಪ್ಪೆಯನ್ನು ಸುಲಿದು, ಸಿಪ್ಪೆಯಿಂದ ಬೀಜಗಳನ್ನು ಬೇರೆ ಮಾಡುವ ಪಲ್ಪಿಂಗ್ ಯಂತ್ರದ ಪ್ರಕ್ರಿಯೆ. ಇವೆಲ್ಲವನ್ನೂ ನೋಡಿಕೊಂಡೆ ನಾವು ಬೆಳೆದದ್ದು. ಒಟ್ಟಾರೆ ಚಿಕ್ಕಮಗಳೂರಿನಂತಹ ಪ್ರವಾಸಿ ತಾಣ ಮತ್ತೊಂದಿಲ್ಲ.
12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂ : ಇದರ ಜನಪ್ರಿಯತೆಗೆ ಕಳಸವಿಟ್ಟಂತೆ. ಹನ್ನೆರಡು ವರ್ಷಕ್ಕೊಮ್ಮೆ ಅರಳಿ, ಗಿರಿಶಿಖರಗಳನ್ನು ಮೈದುಂಬಿಕೊಂಡು ಶೋಭಿಸುವ ನೀಲ ವರ್ಣದ ಕುರಂಜಿ ಹೂವಿನದೇ ಬೆಂಗಳೂರಿನ ತುಂಬಾ ಮಾತಾಗಿದೆ. ಮತ್ತೆ ಇನ್ನು ಹನ್ನೆರಡು ವರ್ಷದ ನಂತರ ನೋಡಲು ಸಿಗುವ ಆ ಹೂಗಳನ್ನು ನೋಡಿಯೇ ಬಿಡೋಣ. ಹನ್ನೆರಡು ವರ್ಷಗಳ ನಂತರ ಏನಾಗುವುದೋ, ಈಗಲೇ ಹೋಗಿ ಬಂದುಬಿಡೋಣ ಎಂದು ಬೆಂಗಳೂರಿನ ಜನರೆಲ್ಲಾ ಚಿಕ್ಕಮಗಳೂರಿನತ್ತ ಸಾಗುತ್ತಿದ್ದಾರೆ. ಈ ಅಪರೂಪದ ಹೂವಿನ ಚೆಲುವನ್ನು ನೋಡಲು ಎಲ್ಲರಿಗೂ ಆಸೆ. ಆ ಹೂವಿನ ರಾಶಿ ಬಿಂಕದಿಂದ ಬೀಗುತ್ತಿದೆ. ಇನ್ನೆಷ್ಟು ದಿನ ಅಕ್ಟೋಬರ್ ಕೊನೆಯ ತನಕ ಅಷ್ಟೇ ಪಶ್ಚಿಮ ಘಟ್ಟದ ನೀಲ ಶಿಖರಗಳಿಂದ ಈ ಹೂವಿಗೆ ನೀಲ ಕುರಂಜಿ ಎನ್ನುವ ಹೆಸರು ಬಂದಿದೆ ಎನ್ನುತ್ತಾರೆ. ಮಲೆನಾಡಿನ ಚುಮು ಚುಮು ಚಳಿಗೆ, ಗಿರಿ ಶಿಖರಗಳೆಲ್ಲಾ ನೀಲ ವರ್ಣದ ಹೊದಿಕೆಯನ್ನು ಗಟ್ಟಿಯಾಗಿ ಹೊದ್ದುಕೊಂಡು ಪಡಿಸುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತದೆ. ನೋಡಲೆರಡು ಕಣ್ಣು ಸಾಲದು!