ಕನ್ನಡಿಗರಿಗೆ ಕನ್ನಡವೆಂದರೆ ತಾಯಿ ಇದ್ದಂತೆ. ಆದರೆ ಕರ್ನಾಟಕದಲ್ಲಿರುವ ಅದೆಷ್ಟೋ ಮಂದಿಗೆ ಕನ್ನಡವೆಂದರೆ ತಾತ್ಸಾರ. ಕೆಲಸಕ್ಕಾಗಿ ಇಲ್ಲಿಗೆ ಬಂದು ವರ್ಷಗಳೇ ಕಳೆದರೂ ಕನ್ನಡ ಕಲಿಯುವ ಮನಸ್ಸು ಮಾಡುವವರು ಕಡಿಮೆಯೇ. ಬದಲಾಗಿ ನಾವು ಕನ್ನಡ ಕಲಿಯುವುದಿಲ್ಲ. ಕನ್ನಡಿಗರು ಸರಿಯಿಲ್ಲ ಅಂತ ಇಲ್ಲಿಯವರ ಮೇಲೆಯೇ ದರ್ಪ ತೋರುವವರೇ ಹೆಚ್ಚು. ಕನ್ನಡ ಉಳಿಸಿ ಎಂದು ಹೋರಾಟ ನಡೆಯುತ್ತಿರೋ ಈ ಸಂದರ್ಭದಲ್ಲಿ ಅಮೆರಿಕ ಮೂಲದ ಉದ್ಯಮಿ ಮತ್ತು ಕ್ಯಾಲಿಫೋರ್ನಿಯಾ ಬುರ್ರಿಟೋ ಸಂಸ್ಥಾಪಕ ಬರ್ಟ್ ಮುಲ್ಲರ್ ಕನ್ನಡವೊಂದು ಅದ್ಭುತ ಭಾಷೆ ಎನ್ನುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.ಕನ್ನಡದ ಬಗ್ಗೆ ಅವರು ಹೇಳಿರುವ ಮಾತುಗಳು ನಿಜಕ್ಕೂ ಹೃದಯ ಉಕ್ಕಿ ಬರುವಂತಿವೆ. ಹೌದು ಕ್ಯಾಲಿಫೋರ್ನಿಯಾ ಬುರ್ರಿಟೋ ಸಂಸ್ಥಾಪಕ ಬರ್ಟ್ ಮುಲ್ಲರ್ ಅವರು ಬೇರೆ ಊರುಗಳಿಂದ ಕರ್ನಾಟಕಕ್ಕೆ ಬರುವ ಜನರಿಗೆ ಕನ್ನಡ ಕಲಿಯುವಂತೆ ಕರೆ ನೀಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಬೆಂಗಳೂರು ಭಾರತದ ಅಮೆರಿಕ ಇದ್ದಂತೆ. ಕನ್ನಡ ಒಂದು ಅದ್ಭುತ ಭಾಷೆ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಕನ್ನಡ ಕಲಿಯಲು ಮತ್ತು ಮಾತನಾಡಲು ಪ್ರಯತ್ನಿಸಬೇಕು ಎಂದು ಮುಲ್ಲರ್ ಸಲಹೆ ನೀಡಿದ್ದಾರೆ.
13ನೇ ವಯಸ್ಸಿನಲ್ಲಿ ಅಮೆರಿಕ ತೊರೆದು ಭಾರತಕ್ಕೆ ಬಂದಿದ್ದ ಬರ್ಟ್ ಮುಲ್ಲರ್ ಇಲ್ಲಿಯೇ ಶಿಕ್ಷಣ ಮುಗಿಸಿ, ದಕ್ಷಿಣ ಕ್ಯಾಲಿಫೋರ್ನಿಯಾ ಶೈಲಿಯ ಬುರ್ರಿಟೋ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಸಂದರ್ಶನ ನೀಡಿರುವ ಅವರು ಕನ್ನಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾವು ನಮ್ಮದಲ್ಲದ ಸ್ಥಳಕ್ಕೆ ಹೋದಾಗ ಆ ಸ್ಥಳದ ಸಂಸ್ಕೃತಿಯ ಬಗ್ಗೆ ಸ್ವಲ್ಪವಾದರೂ ಕಲಿಯಲು ಪ್ರಯತ್ನಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ನಾನು ಕೂಡ ಸ್ವಲ್ಪ ಕನ್ನಡ ಮಾತನಾಡುತ್ತೇನೆ. ಕನ್ನಡ ನಿಜಕ್ಕೂ ಅದ್ಭುತ ಭಾಷೆಯಾಗಿದ್ದು, ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು. ಕನ್ನಡದಲ್ಲೇ ಮಾತನಾಡಬೇಕು ಎಂದು ಬರ್ಟ್ ಮುಲ್ಲರ್ ಹೇಳಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಉಳಿದಿದ್ದ ಬರ್ಟ್ ಮುಲ್ಲರ್ ಅವರು ಕನ್ನಡ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹಲವು ಸಿನಿಮಾಗಳನ್ನು ನೋಡಿರುವುದಾಗಿಯೂ ಸಂದರ್ಶನದಲ್ಲಿ ಹೇಳಿದ್ದಾರೆ. ಮುಲ್ಲರ್ ಬೆಂಗಳೂರಿನಲ್ಲಿ “ಕ್ಯಾಲಿಫೋರ್ನಿಯಾ ಬುರ್ರಿಟೋ” ರೆಸ್ಟೋರೆಂಟ್ ತೆರೆಯುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ. ಈ ವಿಡಿಯೋ ನೋಡಿ ಕನ್ನಡಿಗರೆಲ್ಲ ಖುಷಿಯಾಗಿದ್ದು, ಮುಲ್ಲರ್ ಅವರನ್ನು ಕನ್ನಡದ ಕಂದ ಎಂದು ಕರೆದಿದ್ದಾರೆ.
ಅಮೇರಿಕನ್ ಉದ್ಯಮಿಯಾದ ಬರ್ಟ್ ಮುಲ್ಲರ್ ಮೆಕ್ಸಿಕನ್-ಪ್ರೇರಿತ ಪಾಕಪದ್ಧತಿಯನ್ನು ಭಾರತೀಯ ಅಭಿರುಚಿಗಳಿಗೆ ಪರಿಚಯಿಸುವ ಕನಸಿನೊಂದಿಗೆ ಬೆಂಗಳೂರಿಗೆ ಬಂದರು. ಇಂದು ಅವರ ಕ್ಯಾಲಿಫೋರ್ನಿಯಾ ಬುರ್ರಿಟೋ ಭಾರತದಾದ್ಯಂತ 103 ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕ 196 ಕೋಟಿ ಆದಾಯ ಹೊಂದಿರುವ ಬ್ರ್ಯಾಂಡ್ ಆಗಿ ಬೆಳೆದು ನಿಂತಿದೆ.