ಕೆಲವು ತಿಂಗಳುಗಳ ಹಿಂದೆ ಮುಂಬೈನಲ್ಲಿ ಕೆಲವು ಜನರ ಒಂದು ತಂಡವನ್ನು ಬಂಧಿಸಲಾಯಿತು. ಅವರಿಂದ ಸುಮಾರು 12ಕ್ಕೂ ಹೆಚ್ಚು ಯುವತಿಯರನ್ನು ಮುಕ್ತಗೊಳಿಸಲಾಯಿತು. ಆ ಯುವತಿಯರನ್ನು ಬಾರ್‌ ಗರ್ಲ್ ಆಗಿಸಿ ದೇಹ ವ್ಯಾಪಾರದ ಅನೈತಿಕ ಕಾರ್ಯದಲ್ಲಿ ತೊಡಗಿಸಲಾಗಿತ್ತು. ಅವರೆಲ್ಲರಲ್ಲಿ ಒಂದು ಸಮಾನತೆ ಇತ್ತು. ಅವರೆಲ್ಲ ಸುಂದರಿಯರಾಗಿದ್ದರು. ಅವರು ಮಾಡೆಲ್‌ಆಗಬೇಕೆಂಬ, ಟಿ.ವಿ. ಅಥವಾ ಸಿನಿಮಾ ತಾರೆಯರಾಗಬೇಕೆಂಬ ಅಭಿಲಾಷೆ ಹೊತ್ತು ಬಂದಿದ್ದರು.

ಆದರೆ ಕೆಲವು ತಿಂಗಳುಗಳ ಬಳಿಕ ಸ್ಛೋಟಗೊಂಡ ಸುದ್ಧಿ ಭಯಾನಕವಾಗಿತ್ತು. ಆ `ಗುಂಪಿನ ಸದಸ್ಯರು’ ಬೇರೆ ಬೇರೆ ನಗರಗಳಲ್ಲಿ ಜಾಹೀರಾತು ಕೊಟ್ಟು ಅವರನ್ನು ಸಂದರ್ಶನ ಮಾಡಿ ತಮ್ಮ ಬಳಿ ಕರೆಸಿಕೊಂಡಿದ್ದರು. ಅವರಲ್ಲಿ ಹುದುಗಿದ್ದ ಆಕಾಂಕ್ಷೆಯನ್ನು ಹುರಿದುಂಬಿಸಿ, ಅವರಿಗೆ ತೋರಿಸಿದ ದೃಶ್ಯ ಬಹಳ ರೋಮಾಂಚನಕಾರಿಯಾಗಿತ್ತು. ಅದರಲ್ಲಿ ಯಾವುದೇ ಹುಡುಗಿ ಬಲಿ ಬೀಳಬಹುದಾಗಿತ್ತು. ಕೆಲವು ದಿನಗಳ ತರಬೇತಿ ಬಳಿಕ ನಿಮಗೆ ಟಿ.ವಿ. ಹಾಗೂ ಸಿನಿಮಾಗಳಲ್ಲಿ ಅವಕಾಶ ದೊರಕಿಸಿ ಕೊಡಲಾಗುವುದೆಂದು ಹೇಳಿದ್ದರು.

ಆದರೆ ಆದದ್ದೇನು? ಇದೇ ಆಸೆ ಹೊತ್ತು ಅವರೆಲ್ಲ ಮುಂಬೈಗೆ ಬಂದರು. ಅಲ್ಲಿ ಅವರಿಗೆ ಅಸಭ್ಯ ದೇಹಪ್ರದರ್ಶನ ಮಾಡುವಂತಹ ನೃತ್ಯಗಳ ತರಬೇತಿ ನೀಡಲಾಯಿತು. ನೀವೆಲ್ಲ ಆಧುನಿಕತೆ ಬೆಳೆಸಿಕೊಳ್ಳಬೇಕು ಎಂದು ಅವರಿಗೆ ಹೇಳುತ್ತ ಅವರ ಲೈಂಗಿಕ ಶೋಷಣೆ ಮಾಡಲಾರಂಭಿಸಿದರು. ಚಿತ್ರೀಕರಣದ ನೆಪದಲ್ಲಿ ಅವರ ಪೋರ್ನ್‌ ಚಿತ್ರ ತಯಾರಿಸಲಾಯಿತು. ಕೊನೆಯಲ್ಲಿ ಅವರಿಗೆ ಹೋಟೆಲ್‌ಗಳಲ್ಲಿ ಡ್ಯಾನ್ಸರ್‌ ಮತ್ತು ಕಾಲ್ ಗರ್ಲ್ ಕೆಲಸ ಕೊಡಿಸಲಾಯಿತು. ಜೊತೆಗೆ ಅವರನ್ನು ಹೈಪ್ರೊಫೈಲ್ ‌ಕಾಲ್ ‌ಗರ್ಲ್ ಆಗಿಸಿ ಅವರ ಹಿಡಿತವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡರು. ಏಕೆಂದರೆ ದೇಹ ಮಾರಾಟದ ಈ ದಂಧೆಯಿಂದ ಬರುವ ಅಪಾರ ಪ್ರಮಾಣದ ಹಣವನ್ನು ತಾವೇ ಎಗರಿಸುವುದಾಗಿತ್ತು. ಅವರನ್ನು ಮುಕ್ತಗೊಳಿಸುವ ಹೊತ್ತಿಗೆ ಅವರು ತುಂಬಾ ಹೆದರಿದ್ದರು. ಯಾರ ವಿರುದ್ಧ ಅವರು ಒಂದು ಶಬ್ದ ಮಾತನಾಡಲು ಇಷ್ಟಪಡುತ್ತಿರಲಿಲ್ಲ. ಏಕೆಂದರೆ ಬ್ಲ್ಯಾಕ್‌ಮೇಲ್ ‌ಭಯದಿಂದ ಅವರು ಲೈಂಗಿಕ ಒತ್ತೆಯಾಳಿನಂತಾಗಿದ್ದರು.

ಜಾಲಕ್ಕೆ ಸಿಲುಕಿಸುವ ಹುನ್ನಾರ ಲೈಂಗಿಕ ಒತ್ತೆಯಾಳಾಗಿಟ್ಟುಕೊಳ್ಳುವ ಉನ್ನತ ಮಟ್ಟದ ಪ್ರಕರಣಗಳ ಮೇಲೆ ಗಮನಹರಿಸಿ. ಅವು ದೇಶವನ್ನೇ ಬೆಚ್ಚಿಬೀಳಿಸಿವೆ.

ಹರಿಯಾಣದ ಹಿಸ್ಸಾರ್‌ನ ಘಟನೆಯೊಂದನ್ನು ನೋಡಿ. ಗೀತಿಕಾ ಎಂಬ ಯುವತಿ ಗೋಪಾಲ ಕಾಂಡಾ ಎಂಬ ರಾಜಕಾರಣಿಯ ಕಪಿಮುಷ್ಠಿಗೆ ಸಿಲುಕಿದ್ದಳು. ಇದು ಕೂಡ ಅಂಥದೇ ಪ್ರಕರಣವಾಗಿತ್ತು. ಗೀತಿಕಾ ಮೊದಲು ಗೋವಾದ ಒಂದು ಕ್ಯಾಸಿನೊದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಅವಳು ಗೋಪಾಲ್ ‌ಕಾಂಡಾ ಸಂಪರ್ಕಕ್ಕೆ ಬಂದಿದ್ದಳು. ಅವಳಿಗೆ ಏನೇನೋ ಆಸೆ ತೋರಿಸಿ ತನ್ನ ಜಾಲದಲ್ಲಿ ಸಿಲುಕಿಸಿದ. ಮೀನಿಗೆ ಕಾಳು ಹಾಕುವ ರೀತಿಯಲ್ಲಿ ಅವಳಿಗೆ ತನ್ನದೇ ಆದ ಏರ್‌ಲೈನ್ಸ್ ನಲ್ಲಿ ಕೆಲಸ ಕೊಡಿಸಿ ಲೈಂಗಿಕ ಒತ್ತೆಯಾಳಿನಂತೆ ಇರಿಸಿಕೊಂಡ. ಉನ್ನತ ಹುದ್ದೆಯಲ್ಲಿದ್ದುಕೊಂಡು ಅವನು ಅವಳ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ.

ತನ್ನ ಪರಿಸ್ಥಿತಿ ಅರಿವಾದಾಗ ಆಕೆ ಆ ಕಂಪನಿಯನ್ನು ಬಿಟ್ಟು ಬೇರೊಂದು ಏರ್‌ಲೈನ್ಸ್ ನಲ್ಲಿ ಕೆಲಸ ಹುಡುಕಿದಳು. ಇಷ್ಟಾಗಿಯೂ ಗೋಪಾಲ್ ‌ಕಾಂಡಾ ಅವಳನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ. ಅವಳ ಮೇಲೆ ಆರೋಪ ಹೊರಿಸಿ ಆ ಕಂಪನಿಯಿಂದ ಹೊರಬರುವಂತೆ ಮಾಡಿದನಲ್ಲದೆ, ತನ್ನದೇ ಏರ್‌ಲೈನ್ಸ್ ನಲ್ಲಿ ಸೇರಿಕೊಳ್ಳುವಂತೆ ಒತ್ತಡ ಹೇರಿದ. ಆ ಬಳಿಕ ಅವನು ಅವಳನ್ನು ಲೈಂಗಿಕವಾಗಿ ಅದೆಷ್ಟು ಹಿಂಸಿಸಿದನೆಂದರೆ ಕೊನೆಗೊಮ್ಮೆ ಅವಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪ್ರಸಂಗ ಎದುರಾಯಿತು.

ಆದರೆ ತನ್ನ ಡೆತ್‌ನೋಟ್‌ನಲ್ಲಿ ಆಕೆ ಗೋಪಾಲ್ ‌ಕಾಂಡಾನ ಸಕಲ ಲೈಂಗಿಕ ಹಗರಣಗಳನ್ನು ಬಿಚ್ಚಿಟ್ಟಿದ್ದಳು. ಆಗಲೇ ಲೈಂಗಿಕ ದಿಗ್ಭಂಧನದ ವಿಷಯ ಬೆಳಕಿಗೆ ಬಂತು. ಇಲ್ಲದಿದ್ದರೆ ಆ ವ್ಯಕ್ತಿ ಇನ್ನೂ ಅದೆಷ್ಟು ಹೆಣ್ಣು ಮಕ್ಕಳನ್ನು ದಿಗ್ಬಂಧನದಲ್ಲಿಡುತ್ತಿದ್ದನೊ ಏನೋ.

ಲೈಂಗಿಕವಾಗಿ ದಿಗ್ಬಂಧನದಲ್ಲಿಡುವವರ ಪಟ್ಟಿ ಬಹಳ ದೀರ್ಘವಾಗಿದೆ. ಆದರೆ ಇಂತಹ ಪ್ರಕರಣಗಳಲ್ಲಿಯೇ ವಿಚಿತ್ರ ಪ್ರಕರಣವೊಂದು ಕೆಲವು ತಿಂಗಳುಗಳ ಹಿಂದೆ ಬೆಳಕಿಗೆ ಬಂದಿತು. ಈ ಪ್ರಕರಣ ಏಷ್ಯಾದ ಅತ್ಯಂತ ಪ್ರಖ್ಯಾತ ಪತ್ರಕರ್ತರಲ್ಲಿ ಒಬ್ಬರೆನಿಸಿಕೊಂಡ ತೇಜ್‌ಪಾಲ್ ‌ಅವರ ಜೊತೆಗೆ ತಳುಕು ಹಾಕಿಕೊಂಡಿದೆ. ತೆಹ್ಕಾ ಪತ್ರಿಕೆಯ ಸಂಪಾದಕ 51 ವರ್ಷದ ತೇಜ್‌ಪಾಲ್ ‌ಗೋವಾದ ಒಂದು ಪಂಚತಾರಾ ಹೋಟೆಲಿನಲ್ಲಿ ತನ್ನದೇ ಆಫೀಸಿನಲ್ಲಿ ಕೆಲಸ ಮಾಡುವ ಯುವತಿಯ ಜೊತೆ ದುರ್ವರ್ತನೆ ತೋರಿದರು ಎಂಬ ಆರೋಪ ಅವರ ಮೇಲಿದೆ.

ಐಪಿಸಿಯ ಹಲವು ಕಲಂಗಳನ್ವಯ ಅವರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು, ತನ್ನ ಸಂರಕ್ಷಕ ಎಂದು ಹೇಳಿಕೊಳ್ಳುವ ಯುವತಿಯ ಮೇಲೆಯೇ ಅವರು ಅತ್ಯಾಚಾರ ಎಸಗಿರುವ ಆರೋಪ ಕೂಡ ಹೊರಿಸಲಾಗಿದೆ.

ಅತಿ ಮಹತ್ವಾಕಾಂಕ್ಷೆಯ ದುಷ್ಪರಿಣಾಮ

24 ವರ್ಷದ ಕವಿಯಿತ್ರಿ ಮಧುಮಿತಾ ಶುಕ್ಲಾ ಹಾಗೂ ಉತ್ತರಪ್ರದೇಶ ರಾಜಕಾರಣಿ ಅಮರಮಣಿ ತ್ರಿಪಾಠಿ ಪ್ರಕರಣ ಇಡೀ ರಾಜ್ಯವನ್ನು ತಲ್ಲಣಗೊಳಿಸಿತ್ತು. ಹಲವು ವರ್ಷಗಳ ಕಾಲ ನಡೆದ ಈ ಪ್ರೇಮ ಪ್ರಕರಣ ಮಧುಮಿತಾರ ದುರಂತ ಸಾವಿನಲ್ಲಿ ಕೊನೆಗೊಂಡಿತು. ಆ ಮೂಲಕವೇ ಅದು ಜಗಜ್ಜಾಹೀರಾಯಿತು.

ದೇಶದ ಇತರೆ ಭಾಗಗಳಲ್ಲೂ ಸೆಕ್ಸ್ ಅಪರಾಧಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ತಮ್ಮ ಗೌರವಕ್ಕೆ ಚ್ಯುತಿ ತಂದುಕೊಂಡರು. ಭಂರಿದೇವಿ ಮಹಿಪಾಲ ಮದೇರನಾ, ಅಭಿಷೇಕ ಮನುಸಿಂಘ್ವಿ, ಗೋಪಾಲ ಕಾಂಡಾ ಹಾಗೂ ಗೀತಿಕಾ ಹೀಗೆ ಅನೇಕ ಲೈಂಗಿಕ ಹಗರಣಗಳು ನಮ್ಮನ್ನು ಆ ಬಗ್ಗೆ ಯೋಚಿಸುವಂತೆ ವಿವಶರಾಗಿಸುತ್ತವೆ.

ಸುಳ್ಳು ಭರವಸೆ

ಲೈಂಗಿಕ ಒತ್ತೆಯಾಳಿನಂತೆ ಇರಬೇಕಾಗಿ ಬರುವ ಯುವತಿ ತನ್ನನ್ನು ಆ ಸ್ಥಿತಿಗೆ ತಂದಿಟ್ಟ ವ್ಯಕ್ತಿಯಿಂದ ಲೈಂಗಿಕ ಶೋಷಣೆಗೆ ತುತ್ತಾಗಬೇಕಾಗುತ್ತದೆ. ಅವನೇ ಸ್ವತಃ ಅವಳನ್ನು ಶೋಷಿಸಬಹುದು ಇಲ್ಲಿ ಇನ್ನೊಬ್ಬರ ಮುಖಾಂತರ ಅವಳನ್ನು ಶೋಷಿಸಬಹುದು. ಹೀಗೆ ಮಾಡುವುದು ಮಾಡಿಸುವುದು ಕೂಡ ದೇಹ ವ್ಯಾಪಾರದ ಹಾಗೆ ಅನೈತಿಕ ಕೆಲಸವೇ ಹೌದು. ಆದರೆ ಅವರ ಬಂಧಿಯಾಗಿರುವ ಕಾರಣದಿಂದ ಆಕೆ ತನಗಿಷ್ಟವಿಲ್ಲದಿದ್ದರೂ ಹೀಗೆ ಮಾಡುವುದು ಅನಿವಾರ್ಯವಾಗುತ್ತದೆ.

ಅಂದಹಾಗೆ ಯಾವುದೇ ಹುಡುಗಿ ಉದ್ದೇಶಪೂರ್ವಕವಾಗಿ ಲೈಂಗಿಕ ಸೆರೆಯಾಳಾಗಲು ಇಷ್ಟಪಡುವುದಿಲ್ಲ. ಅದೇ ರೀತಿ ಬೇರೆ ಯಾರದೋ ಸನ್ನಿ ಗಮನಿಸಿ ಇನ್ಯಾರೊಂದಿಗೊ ತನ್ನ ದೇಹ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ತಿಳಿದುಬರುವ ವಿಷಯವೇನೆಂದರೆ, ಒಂದು ಷಡ್ಯಂತ್ರದ ರೂಪದಲ್ಲಿ ಇದು ಸ್ವೇಚ್ಛಾಪರವಾಗಿ ಆರಂಭವಾಗುತ್ತದೆ. ಆದರೆ ಅದರ ಬಗೆಗೆ ಯುವತಿಗೆ ಕಿಂಚಿತ್ತೂ ಸುಳಿವು ದೊರಕುವುದಿಲ್ಲ.

ಒಪ್ಪಿಗೆ ಕೊಡುವ ಮುಂಚೆ

ಹುಡುಗಿಯರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುಲ ಮುಂಚೆ ಅವರಿಗೆ ಭಾರಿ ಆಕರ್ಷಣೆಯ ಆಶ್ವಾಸನೆಗಳನ್ನು ಕೊಡಲಾಗಿರುತ್ತದೆ. ಅದು ವಾಸ್ತವಿಕವಾಗಿ ಅವರಿಂದ ಬಹಳ ದೂರವಾಗಿರುತ್ತದೆ. ಅರ್ಹತೆ ಮತ್ತು ಆಫರ್‌ಗೆ ಒಂದಕ್ಕೊಂದು ಸಂಬಂಧ ಇರುವುದಿಲ್ಲ.

ಗೀತಿಕಾ ಪ್ರಕರಣದಲ್ಲೂ ಹಾಗೆಯೇ ಆಗಿತ್ತು. ಗೋಪಾಲ್ ಕಾಂಡಾ ಅವಳ ಮುಂದೆ ಆಕರ್ಷಕ ಪ್ರಸ್ತಾಪ ಇಡುತ್ತಾ, ಅವಳನ್ನು ತನ್ನ ಏರ್‌ಲೈನ್ಲ್ ಕಂಪನಿಯಲ್ಲಿ ಡೈರೆಕ್ಟರ್‌ ಮಾಡುವುದಾಗಿ ಹೇಳಿದ್ದ. ತನ್ನಲ್ಲಿ ಅಂತಹ ವಿಶೇಷತೆ ಏನಿದೆ, ತನ್ನನ್ನು ಡೈರೆಕ್ಟರ್‌ ಆಗಿ ಏಕೆ ಮಾಡುತ್ತಿದ್ದಾರೆ ಎಂದು ಆಕೆ ಈ ಬಗ್ಗೆ ಒಂದು ಕ್ಷಣ ಕೂಡ ಯೋಚಿಸಲಿಲ್ಲ. ಆಕೆ ಹೀಗೇನಾದರೂ ಆಗಲೇ ಯೋಚಿಸಿದ್ದರೆ, ಈ ರೀತಿ ದುಷ್ಟಕೂಟದಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲ.

ಹೀಗಾಗಿ ಅಂತಹ ಬಣ್ಣದ ಮಾತುಗಳಿಗೆ ಮರುಳಾಗದೆ, ಯಾರೇ ಇಂತಹ ಅವಾಸ್ತವ ಪ್ರಸ್ತಾಪ ಕೊಟ್ಟರೂ ಆ ಬಗ್ಗೆ ಯೋಚನೆ ಮಾಡುವ ಶಕ್ತಿ ಯುವತಿಯರಲ್ಲಿರಬೇಕು. ಆ ವ್ಯಕ್ತಿ ಕೊಟ್ಟ ಪ್ರಸ್ತಾಪ ತರ್ಕಕ್ಕೆ ನಿಲುಕುತ್ತದೆಯೇ ಎಂದು ವಿಚಾರ ಮಾಡಿ ನೋಡಬೇಕು. ಹಾಗೊಮ್ಮೆ ಆ ಮಾತಿನಲ್ಲಿ ಹುರುಳಿಲ್ಲ ಎಂದು ನಿಮಗೆ ಖಚಿತವಾದರೆ ಅದು ನಿಮ್ಮನ್ನು ಬಲೆಗೆ ಬೀಳಿಸುವ ಜಾಲ ಎಂದು ಭಾವಿಸಿ.

ಮುಂಬೈ ಪ್ರಕರಣದಲ್ಲಿ ನಡೆದದ್ದು ಪೂರ್ವನಿಯೋಜಿತ ಅಪರಾಧವೇ ಆಗಿತ್ತು. ಅದರಲ್ಲಿ ಯುವತಿಯ ಮನೆಯವರು ಕೂಡ ಆ ಬಲೆಗೆ ಸಿಲುಕಿದ್ದರು. ಏಕೆಂದರೆ ಆಕರ್ಷಕ ಜಾಹೀರಾತು ಕೊಟ್ಟು ಸಂದರ್ಶನವನ್ನು ಅತ್ಯಂತ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಸಲಾಗಿತ್ತು. ಸಾಮಾನ್ಯವಾಗಿ ಇಂತಹ ಪ್ರಕ್ರಿಯೆಗಳು ಸಂದೇಹಕ್ಕೆಡೆ ಮಾಡಿಕೊಡುವುದಿಲ್ಲ. ಆದರೆ ಜಾಹೀರಾತಿನ ಸತ್ಯಾಸತ್ಯತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಹಾಗೆಂದೇ ಪತ್ರಿಕೆಗಳ ಜಾಹೀರಾತು ಪುಟದಲ್ಲಿ ಜಾಹೀರಾತುಗಳ ಭರವಸೆಯ ಬಗ್ಗೆ ನೀವೇ ಖಾತ್ರಿಪಡಿಸಿಕೊಳ್ಳಿ ಎಂದು ಉಲ್ಲೇಖಿಸಲ್ಪಟ್ಟಿರುತ್ತದೆ. ಜಾಹೀರಾತಿನಲ್ಲಿ ಕೊಟ್ಟ ಭರವಸೆ ಮತ್ತು ಪ್ರಸ್ತುತಿಕರಣದಿಂದ ಏನಾದರೂ ಸಮಸ್ಯೆಗಳುಂಟಾದರೆ ಅದಕ್ಕೆ ಪತ್ರಿಕೆ ಹೊಣೆಯಲ್ಲ ಎಂದು ಟಿಪ್ಪಣಿ ಕೊಟ್ಟಿರುತ್ತಾರೆ.

ಸಮಾಜ ಸೇವಕಿ ಹರ್ಷಿಕಾ ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ದುಷ್ಟ ಮನೋಭಾವದ ಜನರು ಅತಿ ಮಹತ್ವಾಕಾಂಕ್ಷೆಯುಳ್ಳ ಹುಡುಗಿಯರನ್ನು ತಮ್ಮ ಜಾಲದಲ್ಲಿ ಸುಲಭವಾಗಿ ಸಿಲುಕಿಸುತ್ತಾರೆ. ತನ್ನ ತಂದೆತಾಯಿ, ಗಂಡ ಅಥವಾ ಕುಟುಂಬದವರಿಂದ ಅಸಮಾಧಾನಗೊಂಡರು ಸಹ ಇಂಥವರ ಆಮಿಷಕ್ಕೆ ಬಹುಬೇಗ ತುತ್ತಾಗುತ್ತಾರೆ.

ಕೆಲವು ಯುವತಿಯರು ತಮ್ಮ ನೋವನ್ನು ಯಾವಾಗಲೂ ಸ್ನೇಹಿತರು ಹಾಗೂ ಗೆಳತಿಯರ ಮುಂದೆ ಹೇಳುತ್ತಿರುತ್ತಾರೆ. ಇದೇ ಮುಂದೆ ಅವರಿಗೆ ಅಭ್ಯಾಸವಾಗಿಬಿಡುತ್ತದೆ. ದುಷ್ಟ ಪ್ರವೃತ್ತಿಯ ಜನರು ಇಂತಹ ಹುಡುಗಿಯರ ಶೋಧದಲ್ಲಿಯೇ ಇರುತ್ತಾರೆ. ಅವರು ಬಗೆಬಗೆಯ ಆಮಿಷ ಹಾಗೂ ಮರಳು ಮಾಡುವ ಮಾತುಗಳಿಂದ ಅಷ್ಟೇ ಬೇಗನೇ ಅವರ ಹಿತಚಿಂತಕರಾಗಿಬಿಡುತ್ತಾರೆ.

ಅವರನ್ನು ಭಾವನಾತ್ಮಕವಾಗಿ ತಮ್ಮ ಜಾಲದಲ್ಲಿ ಸಿಲುಕಿಸಿಕೊಂಡ ಬಳಿಕ ಲೈಂಗಿಕವಾಗಿ ಶೋಷಣೆ ಮಾಡಲು ಆರಂಭಿಸುತ್ತಾರೆ. ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡು ಬಳಿಕ ಬ್ಲ್ಯಾಕ್‌ಮೇಲ್ ‌ಮಾಡಲು ಶುರುಮಾಡುತ್ತಾರೆ.

ದುಷ್ಟಚಕ್ರದಲ್ಲಿ ಸಿಲುಕಿದ ಬಳಿಕ

ಹುಡುಗಿಯರಿಗೆ ತಾವು ದುಷ್ಟಚಕ್ರದಲ್ಲಿ ಸಿಲುಕಿದ್ದೇವೆ ತಮ್ಮನ್ನು ಬ್ಲ್ಯಾಕ್‌ಮೇಲ್ ‌ಮಾಡಲಾಗುತ್ತಿದೆ ಎಂದೆನಿಸಿದರೆ, ಬುದ್ಧಿವಂತಿಕೆಯಿಂದ, ಚಾಣಾಕ್ಷತನದಿಂದ ಆ ವ್ಯೂಹದಿಂದ ತಮ್ಮನ್ನು ಬಚಾವ್ ಮಾಡಿಕೊಳ್ಳಲು ತಕ್ಷಣವೇ ಏನಾದರೊಂದು ಉಪಾಯ ಕಂಡಕೊಳ್ಳಬೇಕು.

ಎಲ್ಲಕ್ಕೂ ಮುಂಚೆ ನೀವು ಕೈಗೊಳ್ಳಬೇಕಾದ ದೃಢ ನಿರ್ಧಾರವೆಂದರೆ, ಬ್ಲ್ಯಾಕ್‌ ಮೇಲರ್‌ ಹೇಳಿದಂತೆ ಕುಣಿಯುವುದನ್ನು ನಿಲ್ಲಿಸಬೇಕು ಹಾಗೂ ಸವಾಲುಗಳನ್ನು ಎದುರಿಸಲು ತತ್ಪರರಾಗಬೇಕು. ಅವರು ನಿಮಗೆ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು. ಇಂತಹ ಜನ ಬಹುತೇಕವಾಗಿ ಬೆದರಿಕೆ ಹಾಕಿಯೇ ಹೆದರಿಸಲು ನೋಡುತ್ತಾರೆ. ಆದರೆ ಬೆದರಿಕೆ ಹಾಕಿದಂತೆ ಅದನ್ನು ಕಾರ್ಯರೂಪಕ್ಕೆ ತರುವ ಧೈರ್ಯ ಇರುವುದಿಲ್ಲ. ತನ್ನ ವಿರುದ್ಧ ಸಿಡಿದೆದ್ದಿರುವುದನ್ನು ನೋಡಿ ಅವನಿಗೆ ಒಳಗೊಳಗೆ ಭಯವಾಗಿ ತಾವು ಬಿಗು ಧೋರಣೆಯಿಂದಿರುವ ಬಗ್ಗೆ ನಾಟಕ ಮಾಡುತ್ತಾರೆ. ಅಪರಾಧ ಪ್ರಜ್ಞೆ ಅವರಲ್ಲಿ ಭಯಭೀತಿಯನ್ನುಂಟು ಮಾಡುತ್ತದೆ. ಅವರು ಹೊಂದಾಣಿಕೆ ಮಾಡಿಕೊಳ್ಳಲು ಒತ್ತಡ ಹೇರಲಾರಂಭಿಸುತ್ತಾರೆ.

ಹೀಗಾಗಿ ನೀವು ಆ ವ್ಯಕ್ತಿಯನ್ನು ಎದುರಿಸುವ ಛಲ ಹೊಂದಿದಲ್ಲಿ ಅತ್ಯಂತ ಕಠೋರವಾಗಿ ಅವನ ಪ್ರಸ್ತಾಪಗಳನ್ನು ನಿರಾಕರಿಸಿ ಮತ್ತು ಏನಾಗುತ್ತೋ ಆಗಲಿ ಎಂಬ ನಿರ್ಧಾರಕ್ಕೆ ಬನ್ನಿ.

ನೀವು ಅದೇ ಕ್ಷಣದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಲೈಂಗಿಕ ಶೋಷಣೆ ಮಾಡುವ ವ್ಯಕ್ತಿಯ ವಿರುದ್ಧ, ಅವನ ಮಾಸ್ಟರ್‌ ಮೈಂಡ್‌ ವ್ಯಕ್ತಿಗಳು ಸ್ಥಳ ಮುಂತಾದಗಳ ಬಗ್ಗೆ ಪುರಾವೆ ಸಂಗ್ರಹಿಸಲು ಆರಂಭಿಸಿ. ಘಟನಾ ಸ್ಥಳದ ಸ್ಥಿತಿ, ಸಮಯ ಹಾಗೂ ಅಲ್ಲಿ ಪಾಲ್ಗೊ೧ಡವರ ಮಾಹಿತಿ ಮುಂತಾದವುಗಳನ್ನು ನಿಮ್ಮ ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಏಕೆಂದರೆ ನಿಮ್ಮ ಹೇಳಿಕೆಯನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಸಹಾಯವಾಗಬೇಕು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಸಂಗತಿಯೆಂದರೆ, ಅವರ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿರುವ ಕಾರಣದಿಂದ ಆಕೆ ಪರಿಸ್ಥಿತಿಯ ಕೈಗೊಂಬೆ ಎಂದು ತನಿಖಾಧಿಕಾರಿಗಳು ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಅವಕಾಶ ಸಿಗುತ್ತಿದ್ದಂತೆ ಲಭ್ಯ ಸಾಧನಗಳ ಮುಖಾಂತರ ಪೊಲೀಸರು ಅಥವಾ ಮಹಿಳಾ ಸಂಘಟನೆಗಳ ಸಹಾಯ ಪಡೆದುಕೊಳ್ಳಿ. ಏಕೆಂದರೆ ಅಂಥವರಿಗೆ ಸೂಕ್ತ ಸಮಯದಲ್ಲಿ ಕಾನೂನು ನೆರವು ಲಭಿಸುವಂತಾಗಬೇಕು. ಎಲ್ಲಿಯವರೆಗೆ ನಿಮಗೆ ಪೊಲೀಸರು, ನಿಮ್ಮ ಮನೆಯವರು ಹಾಗೂ ಮಹಿಳಾ ಸಂಘಟನೆಗಳ ಸಹಾಯ ದೊರೆಯುದಿಲ್ಲ ಅಲ್ಲಿಯವರೆಗೆ ಅಪರಾಧಿಗಳಿಗೆ ಕಿಂಚಿತ್ತೂ ಅದರ ಬಗ್ಗೆ ಸುಳಿವು ಸಿಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಅವರು ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಬಹುದು. ಸಂತ್ರಸ್ಥೆಯೊಬ್ಬಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದು ಆಕೆಯ ಕೌಶಲ್ಯವನ್ನು ಅಲಂಬಿಸಿರುತ್ತದೆ.

ನಮ್ಮವರೇ ನಮಗೆ ನೆರವಾಗುತ್ತಾರೆ

ಯಾವಾಗಲೂ ನೆನಪಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಅತ್ಯಂತ ಕಠಿಣ ಸಮಯದಲ್ಲಿಯೇ ನಮ್ಮವರು ನಮಗೆ ನೆರವಾಗುತ್ತಾರೆ. ತಂದೆತಾಯಿ, ಕುಟುಂಬದವರಿಗಿಂತ ಮಿಗಿಲಾದರು ಯಾರಿರಲು ಸಾಧ್ಯ. ಅವರು ನಮಗೆ ಬಯ್ಯಬಹುದು ಎಂದು ಭಯಪಡುವುದಕ್ಕಿಂತ ಅವರ ಮುಂದೆ ನಡೆದ ವಿಷಯವನ್ನೆಲ್ಲ ತಿಳಿಸಿ.

ಇಂತಹ ಬೇರೆಬೇರೆ ಪ್ರಕರಣಗಳನ್ನು ನಿರ್ವಹಿಸಿದ ಪೊಲೀಸ್‌ ಅಧಿಕಾರಿ ಸ್ಮೃತಿ ಪ್ರಕಾರ, ಇಂತಹ ಪ್ರಕರಣಗಳಲ್ಲಿ ರಕ್ಷಿಸಿಕೊಳ್ಳುವುದೇ ಉತ್ತಮ. ಅವರ ಸುಳಿಗೆ ಸಿಲುಕಿ ನಲುಗುವುದಕ್ಕಿಂತ ಅದರಿಂದ ಹೊರಬರುವುದೇ ಹೆಚ್ಚು ಶ್ರೇಯಸ್ಕರ. ಏಕೆಂದರೆ ಒಂದು ಸಲ ಆ ಜಾಲದಲ್ಲಿ ಸಿಲುಕಿಬಿಟ್ಟರೆ ಅದರಿಂದ ಪಾರಾಗುವುದು ಕಷ್ಟ ಅದು ಮುಜುಗರ ತರುವ ಸ್ಥಿತಿಯೇ ಹೌದು. ಅಲ್ಲಿಯವರೆಗೆ ಅವಳ ವರ್ತಮಾನ ಹಾಗೂ ಭವಿಷ್ಯದ ಮಾರ್ಗ ಸವಾಲಿನಿಂದ ಕೂಡಿರುತ್ತದೆ. ಹೀಗಾಗಿ ಯಾವುದೇ ಆಮಿಷದ ಪ್ರಸ್ತಾಪ ಬಂದಾಗ ಕಣ್ಣುಮುಚ್ಚಿಕೊಂಡು ಗುಹೆ ಪ್ರವೇಶಿಸುವುದಕ್ಕಿಂತ ಮನೆಯವರು ಹಾಗೂ ಹಿತಚಿಂತಕರ ಸಲಹೆ ಪಡೆಯಿರಿ.

ಬಹುತೇಕ ಹುಡುಗಿಯರು ತಮಗೆ ದೊರೆತ ಆಮಿಷಭರಿತ ಆಹ್ವಾನದ ಬಗ್ಗೆ ಅವರು ತಮ್ಮ ಗೆಳತಿಯರಿಗೂ ಹೇಳುವುದಿಲ್ಲ. ಏಕೆಂದರೆ ತಮಗೆ ದೊರೆತ ಪ್ರಸ್ತಾಪವನ್ನು ಅವರು ಎಗರಿಸಿಬಿಟ್ಟರೆ ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ. ಅಪ್ಪ ಅಮ್ಮನಿಗೆ ಹೇಳಿದರೆ ಅವರು ಈ ಪ್ರಸ್ತಾಪ ಬೇಡ ಎನ್ನುತ್ತಾರೆ ಎಂಬ ಭಯ ಅವರಲ್ಲಿರುತ್ತದೆ. ಈ ಕಾರಣದಿಂದ ವಿಚಾರ ವಿಮರ್ಶೆ ಮಾಡದೆಯೇ ಅವರು ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತಾರೆ. ಇದೇ ಅವರಿಗೆ ಆತ್ಮಘಾತುಕವಾಗಿ ಸಾಬೀತಾಗುತ್ತದೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಎಚ್ಚರಿಕೆಯಿಂದ ಇರುವುದರಲ್ಲಿಯೇ ಜಾಣತನವಿದೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ರೇಖಾ ಕುಮಾರ್

ಲೈಂಗಿಕವಾಗಿ ಬಂಧಿಯಾಗಿಟ್ಟುಕೊಳ್ಳುವ ಪ್ರಕರಣವೆಂದು ಹರಿಯಾಣದ ಹಿಸ್ಸಾರ್‌ನಲ್ಲಿ ಘಟಿಸಿತ್ತು. ಗೀತಿಕಾ ಎಂಬ ಯುವತಿಯನ್ನು ರಾಜಕೀಯ ಮುಖಂಡ ಗೋಪಾಲ ಕಾಂಡಾ ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದ.

ಉತ್ತರ ಪ್ರದೇಶದ ಕವಯತ್ರಿ ಮಧುಮಿತಾ ಶುಕ್ಲಾರನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದಲ್ಲದೆ, ಹತ್ಯೆಗೈದ ಆರೋಪದ ಮೇರೆಗೆ ರಾಜಕೀಯ ಮುಖಂಡ ಅಮರಮಣಿ ತ್ರಿಪಾಠಿ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಪತ್ರಿಕೋದ್ಯಮದಲ್ಲಿ ಅತ್ಯಂತ ಉತ್ತುಂಗದಲ್ಲಿದ್ದ ತೇಜ್‌ಪಾಲ್ ‌ಈಗ ಕಾನೂನಿನ ವಶದಲ್ಲಿದ್ದಾರೆ. ತಮ್ಮನ್ನೇ ಸಂರಕ್ಷಕನೆಂದು ನಂಬಿದ್ದ ಯುವತಿಯ ಮೇಲೆ ಅವರು ಬಲತ್ಕಾರಕ್ಕೆ ಪ್ರಯತ್ನಿಸಿದರೆನ್ನಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ