ವಕೀಲರು ಮ್ಯಾಜಿಸ್ಟ್ರೇಟರ ಮುಂದೆ ಫೈಲ್ ಇರಿಸುತ್ತಾ ಹೇಳಿದರು, “ಸರ್, ಇದರಲ್ಲಿ ನನ್ನ ಕಕ್ಷೀದಾರರು ನಿರ್ದೋಷಿ ಎಂದು ಸಾಬೀತುಪಡಿಸುವ 8-10 ಸಾಕ್ಷಿಗಳಿವೆ… ದಯವಿಟ್ಟು ಪರಿಶೀಲಿಸಬೇಕು,” ಎಂದ.
ಅವರು ಫೈಲ್ ತೆರೆದು ನೋಡಿದಾಗ, 500/ ರೂ.ಗಳ ಹೊಚ್ಚ ಹೊಸ 10 ನೋಟುಗಳಿದ್ದವು. “ಸಾಕ್ಷಿಗಳೇನೋ ಸರಿ, ಆದರೆ ಇವಿಷ್ಟು ಸಾಕಾಗುವುದಿಲ್ಲ. ಇನ್ನೂ 8-10 ಇದ್ದರೆ ಮಾತ್ರ ನಿಮ್ಮ ಕಕ್ಷೀದಾರರ ನಿರ್ದೋಷಿತ್ವ ಸಾಬೀತಾಗುತ್ತದೆ,” ಎನ್ನುವುದೇ?
ಸುಮಂತನಿಗೆ ತನ್ನ ನಾಯಿ ಮಾರಬೇಕಿತ್ತು. ಅವನು ತನ್ನ ಎಲ್ಲಾ ಗೆಳೆಯರಿಗೂ sms ಕಳುಹಿಸಿದ. `ನಿಮ್ಮಲ್ಲಿ ಯಾರಿಗೆ ಯಾವಾಗ ನಾಯಿ, ಬೇಕಾದರೂ ಕೂಡಲೇ ನನ್ನನ್ನು ನೆನಪಿಸಿಕೊಳ್ಳಿ.’
ಪತ್ರಕರ್ತರನ್ನು ನೋಡುತ್ತಲೇ ಮಂತ್ರಿ ಮಹೋದಯರ ಜವಾನ ಹೇಳಿದ, “ಮಂತ್ರಿ ಸಾಹೇಬರ ಅಂಗೈನಲ್ಲಿ ದೊಡ್ಡ ಗಾಯ ಆಗಿದೆ. ಇಂದು ಅವರು ನಿಮ್ಮೊಂದಿಗೆ ಮಾತುಕಥೆಗೆ ಕೂರುವುದು ಕಷ್ಟ… ತಾವಿನ್ನೂ….”
ಆಗ ಪತ್ರಕರ್ತರು ತಕ್ಷಣ ಹೇಳಿದರು, “ನಾವು ಅವರೊಂದಿಗೆ ಮಾತನಾಡುತ್ತಾ ಸಂದರ್ಶನ ತೆಗೆದುಕೊಳ್ಳಬೇಕಷ್ಟೇ, ಅದು ಬಿಟ್ಟು ಅವರೆದುರು ಕೂತು ಪಂಜಾ ಆಡಬೇಕೇ?”
ಭಾರತದ ಸ್ವಚ್ಛತಾ ಅಭಿಯಾನದ ಕುರಿತು ನೆನಪಿಸಿಕೊಂಡ ಮಂತ್ರಿಯೊಬ್ಬರು ಹಾದಿಬೀದಿ ಗಮನಿಸುತ್ತಾ ನಗರಪಾಲಿಕೆಯ ಸಿಬ್ಬಂದಿಯನ್ನು ವಿಚಾರಿಸಿದರು, “ಇಂದು ರಸ್ತೆ ಪೂರ್ತಿ ಯಾಕೆ ಅಷ್ಟೊಂದು ಕಾಗದ ಹರಡಿದೆ? ಏನೂ ಕ್ಲೀನ್‌ಮಾಡಲಿಲ್ಲವೇ?”
ಸಿಬ್ಬಂದಿ ಥಟ್ ಅಂತ ವಿವರಣೆ ನೀಡಿದರು, “ಸಾರ್, ಇದು ನಮ್ಮ ಪ್ರಧಾನಮಂತ್ರಿಯವರು ಜನತೆಗೆ ನಿಮ್ಮ ಪರಿಸರ ಸ್ವಚ್ಛವಾಗಿಡಿ ಎಂದು ಸಂದೇಶ ನೀಡಿದ ಕರಪತ್ರಗಳು ಹರಡಿರೋದಷ್ಟೆ. ಅದು ಬೇರೇನೂ ಗಲೀಜಲ್ಲ ಬಿಡಿ…..”
ಟೀಚರ್ ಹೊಸ ರ್ಷದ ಮೊದಲ ದಿನ ವಿದ್ಯಾರ್ಥಿಗಳಿಗೆ ಹೇಳಿದರು, “ನಿಮ್ಮಲ್ಲಿ ಯಾರು ದೊಡ್ಡ ಸೋಮಾರಿ ಸ್ವಲ್ಪ ಎದ್ದು ನಿಲ್ಲಿ. ಅವರಿಗೆ ಬಹುಮಾನ ಸಿಗಲಿದೆ….”
ಅವರ ಮಾತು ಕೇಳಿ ಎಲ್ಲರೂ ಎದ್ದು ನಿಂತರು. ಆದರೆ ಗುಂಡ ಮಾತ್ರ ಇನ್ನೂ ಹಾಗೇ ಕುಳಿತಿದ್ದ.
ಟೀಚರ್ : ಗುಂಡ ನೀನೇ ಇಂದಿನ ವಿಜೇತ! ಎಲ್ಲರಿಗಿಂತ ದೊಡ್ಡ ಸೋಮಾರಿ ಎಂದು ಎದ್ದು ನಿಲ್ಲದೆ ನಿರೂಪಿಸಿರುವೆ. ಈ ಬಹುಮಾನ ತಗೋ ಬಾ…
ಗುಂಡ (ಆಕಳಿಸುತ್ತಾ) : ಅಯ್ಯೋ… ಅದನ್ನು ಯಾರ ಕೈಲಾದ್ರೂ ನನ್ನ ಡೆಸ್ಕಿಗೆ ಕಳುಹಿಸಿ ಟೀಚರ್…..
ಕ್ಲಾಸಿನಲ್ಲಿ ಟೀಚರ್ ಪಾಠ ಮಾಡುತ್ತಾ, ಅದನ್ನು ವಿವರಿಸುವಾಗ ಇಡೀ ತರಗತಿಯಲ್ಲಿ ಓಡಾಡುತ್ತಾ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿದ್ದರು. ಗುಂಡನ ಬಳಿ ಬಂದು ನೋಡುತ್ತಾರೆ, ಅವನಿನ್ನೂ ಮೊದಲನೇ ಪಾಠವನ್ನೇ ಓದುತ್ತಿದ್ದ.
ಟೀಚರ್ : ಇದೇನೋ ಗುಂಡ, ನಾನು 5ನೇ ಪಾಠ ಮಾಡ್ತಿದ್ದೀನಿ, ನೀನಿನ್ನೂ ಮೊದಲನೇ ಪಾಠದಲ್ಲೇ ಕೂತಿದ್ದಿ?
ಗುಂಡ : ಏನು ಮಾಡಲಿ ಟೀಚರ್, ನಾನಿದನ್ನು ಮುಗಿಸೋಣ ಅಂತ ಕೊನೆಯ ಪುಟಕ್ಕೆ ಹೋಗ್ತೀನಿ, ಅದರಲ್ಲಿ `ರೀಡ್ ಅಗೇನ್’ ಅಂತ ಸೂಚನೆ ಇದೆ.
ಪ್ರಕಾಶ್ ಹಳ್ಳಿಯಲ್ಲಿ ಶಾಲೆ ಮುಗಿಸಿ ಬೆಂಗಳೂರಿನ ಕಾಲೇಜಿನಲ್ಲಿ ಓದಲು ಸೇರಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ. ಅವನ ಸಹಪಾಠಿ ಸತೀಶ್ ಪ್ರಕಾಶ್‌ನನ್ನು ಹುಡುಕುತ್ತಾ ಅವನ ಹಾಸ್ಟೆಲ್‌ಗೇ ಬಂದ.
ಪ್ರಕಾಶ್ : ಇದೇನಪ್ಪ ಈ ಮಹಾನಗರದ್ದು ವಿಚಿತ್ರ ಕಾಯಿಲೆ! 1-2 ದಿನ ಪರಿಚಿತರಾದವರು ಸಹ ಮಾರನೇ ದಿನವೇ ರೂಂ ಹುಡುಕಿಕೊಂಡು ಬಂದು 100/ ರೂ. ಸಾಲ ಕೊಡು ಅಂತಾರೆ….
ಸತೀಶ್ : ಛೇ…. ಛೇ! ಎಲ್ಲರೂ ಒಂದೇ ಅಂದುಕೊಳ್ಳಬೇಡ. ನಿನ್ನ ಹತ್ತಿರ ದುಡ್ಡಿಲ್ಲದಿದ್ದರೆ ನೇರವಾಗಿ ಹೇಳಿಬಿಡು, ನಾನೂ ನೀನು ಪರಿಚಿತರಾಗಿ 1 ತಿಂಗಳ ಮೇಲಾಯ್ತು.
ವಿಜ್ಞಾನದ ಟೀಚರ್ ಅಂದು ವಿಜ್ಞಾನಿಗಳು ಹಾಗೂ ಅವರ ಹೊಸ ಹೊಸ ಆವಿಷ್ಕಾರಗಳ ಕುರಿತು ವಿವರಿಸುತ್ತಾ, “ಎಡಿಸನ್ ಬಲ್ಬ್ ಕಂಡುಹಿಡಿದು ನಮಗೆ ಕತ್ತಲಲ್ಲಿ ಬೆಳಕು ನೀಡಿದ. ಗೆಲಿಲಿಯೋ ಟೆಲಿಸ್ಕೋಪ್ ಕಂಡುಹಿಡಿದು ನಾವು ನಿಂತ ಜಾಗದಿಂದ ಆಕಾಶದ ನಕ್ಷತ್ರಗಳನ್ನು ಹತ್ತಿರದಿಂದ ನೋಡುವಂತೆ ಮಾಡಿದ. ಮಾರ್ಕೋನಿ ರೇಡಿಯೋ ಕಂಡುಹಿಡಿದು ನಮ್ಮ ಮನರಂಜನೆಗೆ ಸಂಗೀತ, ಮಾಹಿತಿಗೆ ಸುದ್ದಿ ಕೇಳಿಸಿದ…..”
“ಅದಿರಲಿ ಟೀಚರ್, ಈ ಪರೀಕ್ಷೆ ಅನ್ನೋ ಪೆಡಂಭೂತವನ್ನು ಕಂಡುಹಿಡಿದು ನಮಗೆ ಇಂಥ ಚಿತ್ರಹಿಂಸೆ ನೀಡಿದ ಪುಣ್ಯಾತ್ಮ ಯಾರು?” ಎಂದು ಕೊನೆಯ ಬೆಂಚಿನಿಂದ ಧ್ವನಿಯೊಂದು ಮೊಳಗಿತು.
ರಾತ್ರಿ 2 ಗಂಟೆಗೆ ಡಾಕ್ಟರ್ ಮೊಬೈಲ್‌ಗೊಂದು ಕಾಲ್ ಬಂತು.
ರೋಗಿ : ಡಾಕ್ಟರ್, ನೀವು ಮನೆಗೆ ಬಂದು ಈಗ ಚಿಕಿತ್ಸೆ ನೀಡಿದರೆ ಎಷ್ಟು ಫೀಸ್?
ಡಾಕ್ಟರ್ : ಕೇವಲ 300/
ರೋಗಿ : ನಿಮ್ಮನ್ನು ಕ್ಲಿನಿಕ್‌ನಲ್ಲಿ ಭೇಟಿಯಾದರೆ?
ಡಾಕ್ಟರ್ : ಕೇಲ 150/ ರೂ.
ರೋಗಿ : ತಕ್ಷಣ ನೀವು ಕ್ಲಿನಿಕ್‌ಗೆ ಹೊರಡಿ, ನಾನು ನಿಮ್ಮನ್ನು ಅಲ್ಲೇ ಬಂದು ಕಾಣುವೆ.
ಅರವಿಂದ್ ತನ್ನ ಜೊತೆ ನಡೆದು ಬರುತ್ತಿದ್ದ ಗೆಳೆಯ ಅವಿನಾಶನ ಬೂಟಿನ ಸದ್ದಿನಿಂದ ತಲೆನೋವು ಬಂದು ರೇಗಿದ, “ಇದೇಕೆ ನಿನ್ನ ಈ ಹೊಸ ಶೂ ಇಷ್ಟೊಂದು ಸದ್ದು ಮಾಡ್ತಿದೆ…. ಕದ್ದಿದ್ದೇನು…?”
ಅವಿನಾಶ್ ಥಟ್ ಅಂತ ಉತ್ತರಿಸಿದ, “ಏ…. ಏನು ಹಾಗೆಂದುಬಿಟ್ಟೆ? ಹಾಗಿದ್ದಿದ್ದರೆ ಪ್ಯಾಂಟ್ ಮತ್ತು ಕೋಟ್ ಸಹ ಸದ್ದು ಮಾಡಬೇಕಿತ್ತು ಗೊತ್ತಾ?”
ಕಿರಣ್ ಹಾಗೂ ಕಾಂತಿ ಕಾಲೇಜಿನ ಆದರ್ಶ ಪ್ರೇಮಿಗಳೆಂದೇ ಪ್ರಸಿದ್ಧರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರಲ್ಲೂ ಜಗಳವಾಗಿ, ಮಾತುಕಥೆ ನಿಂತೇಹೋಯಿತು. ಕಾಂತಿ ಇದರಿಂದ ಬಹಳ ಬೇಸರಗೊಂಡಿದ್ದಳು. ಒಂಟಿಯಾಗಿದ್ದಾಗ ಇಬ್ಬರೂ ಹಳೆಯ ಮಧುರ ನೆನಪುಗಳನ್ನು ಮೆಲುಕುಹಾಕುತ್ತಾ ನಿಡುಸುಯ್ಯುತ್ತಿದ್ದರು.
ಕಾಂತಿ ಕ್ಯಾಂಟೀನ್‌ನಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದಾಗ, ಒಂದು ಮೆಸೇಜ್ ಬಂತು, ಅದನ್ನು ಗಮನಿಸಿದ ಅವಳು ಖುಷಿಯಿಂದ ಕುಣಿದಾಡಿದಳು. ಅದನ್ನು ಗಮನಿಸಿದ ಬೇರೆಯವರು ಏನೆಂದು ವಿಚಾರಿಸಲು, ಕಿರಣನ ಮೆಸೇಜ್ ಬಂದಿದೆ ಎಂದು ಸಂಭ್ರಮಿಸಿದಳು. ಕೂಡಲೇ ಶೀಲಾ ಅವಳಿಂದ ಮೊಬೈಲ್ ಪಡೆದು ಇನ್‌ಬಾಕ್ಸ್ ಗಮನಿಸಿದಾಗ ಅಲ್ಲೊಂದು ಖಾಲಿ ಮೆಸೇಜ್‌ಇತ್ತು.
“ಏ… ಇದು ಬ್ಲ್ಯಾಂಕ್ ಮೆಸೇಜ್!” ಎಂದು ಶೀಲಾ ಉದ್ಗರಿಸಿದಳು.
“ಹೌದು, ಈಗ ನಮ್ಮಿಬ್ಬರ ನಡುವೆ ಮಾತುಕಥೆ ಇಲ್ಲಲ್ಲ….” ಎಂದು ಕಾಂತಿ ಹೇಳಿದಾಗ, ಎಲ್ಲರೂ ಹೋ ಎಂದು ನಗತೊಡಗಿದರು.
ಪರೀಕ್ಷೆ ನಡೆಯುತ್ತಿತ್ತು. ಇಬ್ಬರು ವಿದ್ಯಾರ್ಥಿನಿಯರು ಗುಸುಗುಸು ಮಾತನಾಡುತ್ತಿದ್ದರು.
ಪರೀಕ್ಷಕರು : ಏ ಸುಮಾ…. ಸುಧಾ, ಏನದು ಗುಸುಗುಸು?
ಸುಮಾ : ಏನಿಲ್ಲಾ ಟೀಚರ್, ಸುಧಾ ನನ್ನನ್ನು ಜಪಾನಿನ ರಾಜಧಾನಿ ಯಾವುದೆಂದು ಕೇಳುತ್ತಿದ್ದಳು.
ಪರೀಕ್ಷಕರು : ಅದಕ್ಕೆ… ನೀನು ಉತ್ತರ ಹೇಳಿಬಿಟ್ಟೆಯಾ?
ಸುಮಾ : ಅಯ್ಯೋ…. ನಮ್ಮ ಭಾರತದ್ದೇ ಗೊತ್ತಿಲ್ಲ, ಇನ್ನು ಜಪಾನಿನದೇನು ಗೊತ್ತು ಅಂತ ಕಷ್ಟಸುಖ ಮಾತನಾಡುತ್ತಿದ್ದೆ ಅಷ್ಟೆ.
ಜ್ಯೋತಿಷಿ : ಏನಮ್ಮ, ಬಾಯ್‌ಫ್ರೆಂಡ್‌ನ ಜಾತಕ ಹಿಡಿದುಕೊಂಡು ಬಂದಿದ್ದೀಯಾ ಅನ್ಸುತ್ತೆ. ಅವನ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕಲ್ಲವೇ? ಅದು ಸರಿ, ಎಷ್ಟು ದಿನಗಳಿಂದ ನಡೆಯುತ್ತಿದೆ ನಿಮ್ಮ ಪ್ರೇಮ ಪ್ರಕರಣ……?
ಹುಡುಗಿ : ಅದೇನೂ ಮುಖ್ಯವಲ್ಲ ಬಿಡಿ…. ಅವನ ಭವಿಷ್ಯ ನನ್ನ ಕೈಲೇ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ಅವನ ಗತಕಾಲದ ದಿನಗಳ ಬಗ್ಗೆ ತಿಳಿಸಿ, ಸಾಕು. ಅದನ್ನು ತಿಳಿದುಕೊಂಡು ನಾನು ಮುಂದಿನದನ್ನು ನಿರ್ಧರಿಸುತ್ತೇನೆ.