- ಲಲಿತಾ ಗೋಪಾಲ್
ಆ ದಿನಗಳಲ್ಲೂ ಮಹಿಳೆಯರು ಸ್ವಚ್ಛವಾಗಿದ್ದುಕೊಂಡು ಆರೋಗ್ಯಪೂರ್ಣ ಜೀವನದ ಆನಂದ ಪಡೆಯಬೇಕು. ಈ ನಿಟ್ಟಿನಲ್ಲಿ ಡಾ. ಪ್ರೀತಿ ಅವರ ಪ್ರಯತ್ನ ಪ್ರಶಂಸನಾರ್ಹವಾಗಿದೆ.
ಎಷ್ಟೊಂದು ವಿಪರ್ಯಾಸದ ಸಂಗತಿ ನೋಡಿ, ನಾವು ಚಂದ್ರನ ಮೇಲೆ ಹೋಗಿ ಬಂದಿದ್ದೇವೆ, ಇನ್ನೊಂದೆಡೆ ಈಗಲೂ ಮುಟ್ಟಿಗೆ ಸಂಬಂಧಪಟ್ಟಂತೆ ಮೂಢನಂಬಿಕೆಗಳ ಕಪ್ಪು ಛಾಯೆ ಇನ್ನು ಹಾಗೆಯೇ ಆವರಿಸಿಕೊಂಡಿದೆ. ಮುಟ್ಟು ಎನ್ನುವುದು ಯಾವುದೇ ಹುಡುಗಿ ಅಥವಾ ಮಹಿಳೆಗೆ ನೈಸರ್ಗಿಕವಾಗಿ ಆರೋಗ್ಯದಿಂದಿರುವ ಸಂಕೇತ. ಆದರೆ ಅದನ್ನು ಅಸಹ್ಯದ ಘಟನೆ ಎಂದು ಪರಿಗಣಿಸಲಾಗುತ್ತದೆ. ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕಲಾಗುತ್ತದೆ. ಹಾಗಾಗಿ ಇದರ ಬಗ್ಗೆ ಏನೇ ಚರ್ಚೆಗಳಿದ್ದರೂ ಕದ್ದುಮುಚ್ಚಿ ಮಾತನಾಡುವಂತಹ ಸ್ಥಿತಿ ಇದೆ.
ಮುಕ್ತವಾಗಿ ಮಾತನಾಡಬೇಕು
ಮುಟ್ಟಿಗೆ ಸಂಬಂಧಪಟ್ಟಂತೆ ಆ ಮೂಢನಂಬಿಕೆಗಳನ್ನು ನಿವಾರಿಸುವ ಕುರಿತಂತೆ ಸಾಥಿಯಾ ಫೌಂಡೇಶನ್‌ನ ಸಂಸ್ಥಾಪಕಿ ಡಾ. ಪ್ರೀತಿ ಹೀಗೆ ಹೇಳುತ್ತಾರೆ, ``ಮಹಿಳೆಗೆ ಸಂಬಂಧಪಟ್ಟ ಈ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆಯಾಗಬೇಕು. ಆ ನೋವಿನ ಅನುಭೂತಿಯನ್ನು ಅರ್ಥೈಸಿಕೊಳ್ಳಬೇಕು ಹಾಗೂ ಆ ಮೌನವನ್ನು ಓಡಿಸಬೇಕು. ಮುಟ್ಟಿನ ಮೂಢನಂಬಿಕೆಗಳಿಂದ ಹೊರಬರಲು ನಿರಂತರ ಪ್ರಯತ್ನ ಪಡುವುದು ಅವಶ್ಯ.''
- ಈಗಲೂ ಕೂಡ ಸಮಾಜದಲ್ಲಿ ಇದನ್ನು ಅಪವಿತ್ರ ಎಂದು ಭಾವಿಸಲಾಗುತ್ತದೆ. ಈ ಕುರಿತಂತೆ ಜನರು ಮಾತನಾಡಲು ಕೂಡ ಹಿಂದೇಟು ಹಾಕುತ್ತಾರೆ.
- ಸಾಮಾನ್ಯವಾಗಿ ಹುಡುಗಿಯೊಬ್ಬಳು ಮೊದಲ ಬಾರಿ ಮುಟ್ಟಾದಾಗ ಆಕೆ ಒಮ್ಮೆಲೇ ಮೌನಕ್ಕೆ ಶರಣಾಗಿಬಿಡುತ್ತಾಳೆ. ತನಗೆ ಯಾವುದೋ ರೋಗ ತಗುಲಿದೆ ಎಂದು ಅನಿಸತೊಡಗುತ್ತದೆ. ಆ ಹಂತದಲ್ಲಿ ಆಕೆಗೆ ನಿನಗಾಗಿರುವುದು ರೋಗವಲ್ಲ, ನೀನು ಆರೋಗ್ಯದಿಂದಿರುವ ಸಂಕೇತ ಎಂಬುದನ್ನು ತಿಳಿಸಿ ಹೇಳಬೇಕು. ಹಳ್ಳಿಗಳು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಹುಡುಗಿಯರು ನೋವು ಹಾಗೂ ತೊಂದರೆಯಿಂದ ಬಳಲುತ್ತಿರುತ್ತಾರೆ. ಅವರ ನೋವನ್ನು ಆಲಿಸುವವರು ಯಾರೂ ಇರುವುದಿಲ್ಲ.
ಹೆದರುವ ಹುಡುಗಿಯರು
ಮುಟ್ಟಿಗೆ ಸಂಬಂಧಪಟ್ಟಂತೆ ಜಾಗರೂಕತೆ ಈವರೆಗೂ ಇಲ್ಲವೇ ಇಲ್ಲ ಎಂಬಂತೆ ಇದೆ. ಹುಡುಗಿಯರು ಕಲೆಗಳ ಬಗ್ಗೆ ಸಾಕಷ್ಟು ಹೆದರುತ್ತಾರೆ. ಆ ಸಮಯದಲ್ಲಿ ಅವರು ಶಾಲೆಗೂ ಸಹ ಹೋಗುವುದಿಲ್ಲ. ಇದರಿಂದಾಗಿ ಅವರು ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ. ಉತ್ತರ ಪ್ರದೇಶದ ಆರೋಗ್ಯ ಇಲಾಖೆಯ ಅಂಕಿಅಂಶಗಳ ಮೇಲೊಮ್ಮೆ ಕಣ್ಣು ಹಾಯಿಸಿದಾಗ, 2.8 ಲಕ್ಷ ಹುಡುಗಿಯರು ಮುಟ್ಟಿನ ಕಾರಣಗಳಿಂದಾಗಿ ಶಾಲೆಗೆ ಹೋಗುವುದಿಲ್ಲ. ಈ ದಿನಗಳಲ್ಲಿ ಸ್ವಚ್ಛತೆ ಕಾಪಾಡದ ಕಾರಣದಿಂದ ಸೋಂಕು, ಊತ ಹಾಗೂ ನೋವಿನಿಂದ ನರಳುತ್ತಿರುತ್ತಾರೆ. ಈ ಕುರಿತಂತೆ ಅವರಿಗೆ ಯಾವುದೇ ಮಾಹಿತಿಯೂ ಇರುವುದಿಲ್ಲ, ಅವರಿಗೆ ಯಾರೊಬ್ಬರೂ ಈ ನಿಟ್ಟಿನಲ್ಲಿ ಸಹಾಯ ಮಾಡುವುದಿಲ್ಲ. ಅವರ ಬಳಿ ನ್ಯಾಪ್‌ಕಿನ್ ಕೊಳ್ಳಲು ಹಣ ಇರುವುದಿಲ್ಲ. ಆ ಸಮಯದಲ್ಲಿ ಅವರು ಎಂತಹ ಕೊಳಕು ಬಟ್ಟೆಯನ್ನು ಬಳಸುತ್ತಾರೆಂದರೆ, ಅಂತಹ ಬಟ್ಟೆಯನ್ನು ಯಾರೂ ಸ್ವಚ್ಛತಾ ಕೆಲಸಕ್ಕೆ ಬಳಸುವುದಿಲ್ಲ. ಅಂತಹ ಬಟ್ಟೆಯನ್ನು ಅವರು ಒಂದೆಡೆ ಬಚ್ಚಿಟ್ಟಿರುತ್ತಾರೆ. ಬಿಸಿಲಲ್ಲಿ ಮುಕ್ತ ವಾತಾರಣದಲ್ಲಿ ಅದನ್ನು ಒಣಗಿಸುವುದೂ ಇಲ್ಲ. ಹೀಗಾಗಿ ಅದು ಸೋಂಕಿನಿಂದ ಕೂಡಿರುತ್ತದೆ. ವೆಜೈನ್ ಫಂಗಲ್ ಇನ್‌ಫೆಕ್ಶನ್ ಹಾಗೂ ಸರ್ವೈಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಒದ್ದೆ ಬಟ್ಟೆಯಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.