– ಶಶಿಪ್ರಭಾ ಭಟ್‌, ಉಡುಪಿ.

ಕೇಸ್‌ 1 : ಸಮಯ ಸಂಜೆ 5-6ರ ನಡುವೆ ಮಹಿಳೆಯರಿಗಾಗಿಯೇ ವಿಶೇಷ ಫೋನ್‌ ಕರೆಯೊಂದು ಬರತೊಡಗಿತು. ಆ ಫೋನ್‌ ಕರೆ ಬಂದಿರುವುದು ದೈವ ಚಮತ್ಕಾರವನ್ನು ಅರುಹಲೆಂದು. ಅದರಲ್ಲಿ ದೊರೆತ ಮಾಹಿತಿ ಏನೆಂದರೆ, ಮನೆಯಲ್ಲಿ ಉಪಯೋಗಿಸಲಾಗುವ ಕಲ್ಲಿನ ವಸ್ತುಗಳು ತಮ್ಮದೇ ಆದ ದೈವಶಕ್ತಿಯಿಂದ ಆಕಸ್ಮಿಕವಾಗಿ ಕೆತ್ತನೆಯ ರೂಪ ಪಡೆದುಕೊಂಡಿವೆ. ಕಲ್ಲಿನ ಮೂರ್ತಿಗಳನ್ನು ಪೂಜಿಸದೇ ಇರುವುದರಿಂದ ದೇವಿ ಮುನಿಸಿಕೊಂಡಿದ್ದಾಳೆ. ಯಾವ ವ್ಯಕ್ತಿ ಪೂಜೆ ಅರ್ಚನೆಯಲ್ಲಿ ನಿರಾಸಕ್ತಿ ತೋರಿಸುತ್ತಾರೊ, ಅವರು ಖಂಡಿತವಾಗಿಯೂ ಸಂಕಟಕ್ಕೆ ಸಿಲುಕುತ್ತಾರೆ ಎಂದು ಆ ಕರೆಯಲ್ಲಿ ತಿಳಿಸಲಾಗಿತ್ತು. ಈ ವಿಷಯ ಮನವರಿಕೆ ಆಗುತ್ತಿದ್ದಂತೆ ಮಹಿಳೆಯರು ಆ ಗೃಹೋಪಯೋಗಿ ಕಲ್ಲಿನ ಉಪಕರಣಗಳನ್ನು ನೋಡಲು ಧಾವಿಸಿದರು. ಆ ಸಲಕರಣೆಗಳಲ್ಲಿ ಅಷ್ಟಿಷ್ಟು ಪರಿವರ್ತನೆ ಗೋಚರಿಸಿದರೂ, ಅದನ್ನು ದೈವೀಶಕ್ತಿಯ ಪ್ರಭಾವ ಎಂದು ಭಾವಿಸಿ ತಕ್ಷಣವೇ ಪೂಜೆ ಮಾಡುವುದರಲ್ಲಿ ನಿರತರಾದರು. ಈ ವಿಷಯ ಎಲ್ಲೆಲ್ಲೂ ಪಸರಿಸಿ ಇಡೀ ಜಿಲ್ಲೆಗೆ ವ್ಯಾಪಿಸಿತು. ಹಲವು ವಾರಗಳ ತನಕ ಈ ವಿಧಿವಿಧಾನಗಳು ಜಾರಿಯಲ್ಲಿದ್ದವು. ಉತ್ತರಪ್ರದೇಶದ ಅಲಹಾಬಾದ್‌, ಕೌಶಾಂಬಿ, ಪ್ರತಾಪಗಢ, ಫತ್ತೇಪುರ, ಕಾನಪುರ, ರಾಯಬರೇಲಿ, ಅಮೇಥಿ ಮುಂತಾದ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಚಾರ ಮಾಡಲಾಗಿತ್ತು.

ಕೇಸ್‌ 2 : ಸ್ಥಳ : ಕೇಸ್‌ 1ರ ಎಲ್ಲ ಸ್ಥಳಗಳು. ಸಮಯ : ಮುಂಜಾನೆ 7-8. ಗ್ರಾಮೀಣ ಮಹಿಳೆಯರಲ್ಲಿ ಒಂದು ಸುದ್ದಿ ಹಬ್ಬತೊಡಗಿತು. ದೇವಿ ನನ್ನೆದುರು ಬಂದು ಹೇಳಿದಳು, “ನನ್ನ ಪೂಜೆ ಮಾಡಿ, ಹೆಣ್ಣುಮಕ್ಕಳು, ಸೋದರಿಯರಿಗೆ ಸೀರೆಗಳನ್ನು. ಸಿಹಿ ತಿಂಡಿಗಳನ್ನು ಕಳಿಸಿಕೊಡಿ. ಇದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.”

ಕೇಸ್‌ 3 : ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಅರಖಾ ಎಂಬ ಗ್ರಾಮದಲ್ಲಿ ಹಸುವೊಂದು ವಿಚಿತ್ರ ಆಕಾರದ ಕರುವಿಗೆ ಜನ್ಮ ನೀಡುತ್ತದೆ. ಸ್ಥಳೀಯ ಮಹಿಳೆಯರು ಅಲ್ಲಿಗೆ ಧಾವಿಸುತ್ತಾರೆ. ಹೂಮಾಲೆಗಳು, ಪ್ರಸಾದ, ಹಣ ಅರ್ಪಿಸುವಿಕೆ ಶುರುವಾಗುತ್ತದೆ. 2 ದಿನಗಳ ಬಳಿಕ ಅವರು ಪೂಜಿಸುತ್ತಿದ್ದ ಕರು ಸತ್ತು ಹೋಗುತ್ತದೆ.

ಕೇಸ್‌ 4 : ಉತ್ತರ ಪ್ರದೇಶದ ಕೌಶಾಂಬಿ ಎಂಬಲ್ಲಿ ವಿಚಿತ್ರ ಆಕಾರದ ಮಗುವೊಂದು ಜನಿಸಿತ್ತು. ಆ ಮಗುವನ್ನು ನೋಡಲು ಜನ ನೂಕು ನುಗ್ಗಲು. ಪ್ರಸಾದ, ಹಣ, ಹೂಮಾಲೆಗಳ ಅರ್ಪಣೆ ಶುರುವಾಯಿತು. ಕೆಲವೇ ದಿನಗಳಲ್ಲಿ ಆ ಮಗು ಸತ್ತುಹೋಯಿತು.

ಕೇಸ್‌ 5 : ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಧಂಧಮಾ ಎಂಬ ಗ್ರಾಮದಲ್ಲಿ ಎರಡು ಕೋತಿಗಳು ಸಾಕಷ್ಟು ಹೊತ್ತು ಕಾದಾಡಿ ಕೊನೆಗೆ ಎರಡೂ ಮೃತಪಟ್ಟವು. ಊರಿನ ಜನರು ಇದನ್ನು ಬಾಲಾಜಿಯ ಕೃಪೆ ಎಂದು ಭಾವಿಸಿ. ಆ ಕೋತಿಗಳ ಸ್ಮರಣಾರ್ಥ ದೇಗುಲವೊಂದನ್ನು ನಿರ್ಮಿಸಿ ಧರ್ಮದ ಹೆಸರಿನಲ್ಲಿ ವಹಿವಾಟು ಆರಂಭಿಸಿದರು. ಅದು ಈಗಲೂ ಮುಂದುವರಿದಿದೆ.

ಈ ಉದಾಹರಣೆಗಳನ್ನು ನೋಡಿದಾಗ, ಭಾರಿ ಪ್ರಮಾಣದಲ್ಲಿ ಬೂಟಾಟಿಕೆಯ ಹೆಸರಿನಲ್ಲಿ ಮೋಸ ಮಾಡುವ ಹೊಸ ವಿಧಾನವಿದು. ಇಂತಹ ಸುದ್ದಿಗಳನ್ನು ಸಾಮಾನ್ಯವಾಗಿ ಮೂಢನಂಬಿಕೆಯಿಂದ ಗ್ರಸ್ತರಾಗಿರುವವರು, ಬೂಟಾಟಿಕೆಯ ಪ್ರವೃತ್ತಿಯವರು ಹಬ್ಬಿಸುತ್ತಾರೆ. ಇವೆಲ್ಲವನ್ನು ಕಣ್ಮುಚ್ಚಿಕೊಂಡು ನಂಬುವವರೆಂದರೆ ಗ್ರಾಮೀಣ ಮಹಿಳೆಯರು.

ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳ ಮುಖಾಂತರ ಗ್ರಾಮೀಣ ಮಹಿಳೆಯರಲ್ಲಿ ಅಷ್ಟಿಷ್ಟು ಜಾಗೃತಿ ಉಂಟಾಗಿದೆ. ಹೀಗಾಗಿ ಪೂಜೆಪುನಸ್ಕಾರ, ಮಾಟ ಮಂತ್ರ ಮಾಡುವ ಪುರೋಹಿತರು, ಮಂತ್ರವಾದಿಗಳ ದಂಧೆಗೆ ಅಷ್ಟಿಷ್ಟು ಕಡಿವಾಣ ಬಿದ್ದಿದೆ. ಹೀಗಾಗಿ ಮೋಸ ಮಾಡುವ ದಂಧೆಯನ್ನೇ ಬಂಡವಾಳ ಮಾಡಿಕೊಳ್ಳುವ ಇವರು ಬಡವರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ.

ಪುರೋಹಿತರುಗಳ ಮೋಜು : ಧರ್ಮದ ಹೆಸರಿನಲ್ಲಿ ಈ ರೀತಿಯ ಮೂಢನಂಬಿಕೆಗಳನ್ನು ಪಸರಿಸಿ ಧರ್ಮದ ಗುತ್ತಿಗೆದಾರರು ಅಂದರೆ ಪೂಜಾರಿ ಪುರೋಹಿತರು ಭಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಪೂಜಾ ಸಾಮಗ್ರಿಗಳನ್ನು ಮಾರುವವರಿಗೂ ಇದರಲ್ಲಿ ಭಾರಿ ಗಳಿಕೆ ಆಗುತ್ತಿದೆ.  ಅತ್ತ ಬಡಜನತೆ ಈ ದಂಧೆಕೋರರ ದಾಳಿಗೆ ಸಿಲುಕಿ ಇನ್ನಷ್ಟು ಕಂಗಾಲು ಆಗುತ್ತಿದ್ದಾರೆ.

ಮೋಸದ ಜಾಲ : ಈ ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ, ದಾನ ದಕ್ಷಿಣೆಗಳನ್ನು ಕೊಡುವುದರಿಂದ ದೇಶ ಉದ್ಧಾರವಾಗುತ್ತದೆ ಎಂದಾದರೆ, ನಮ್ಮ ದೇಶ ಎಂದೋ ಮುಂಚೂಣಿಯಲ್ಲಿರುತಿತ್ತು. ದಾನ ಕೊಡುವವರು, ಪೂಜೆ ಪುನಸ್ಕಾರ ಮಾಡುವವರು ಎಂದೂ ಬಡವರಾಗಿರುತ್ತಿರಲಿಲ್ಲ. ನಿಸ್ಸಂತಾನದವರೂ ಆಗಿರುತ್ತಿರಲಿಲ್ಲ, ಯಾರೇ ಆದರೂ ಓದದೇ ಪಾಸಾಗಬಹುದಿತ್ತು. ಯಾರೂ ಅನಾರೋಗ್ಯಕ್ಕೆ ತುತ್ತಾಗುತ್ತಿರಲಿಲ್ಲ. ಅಂದರೆ ಪೂಜೆ ಪುನಸ್ಕಾರ ಮಾಡುವವರು ಪ್ರತಿಯೊಂದು ಬಗೆಯ ತಾಪತ್ರಯಗಳಿಂದ ದೂರ ಇರುತ್ತಿದ್ದರು. ಆದರೆ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಪೂಜೆ ಪುನಸ್ಕಾರಗಳನ್ನು ಕೈಕೊಂಡಾಗ್ಯೂ ಬಡತನ ಇನ್ನೂ ತಾಂಡವವಾಡುತ್ತಿದೆ. ಇದರ ನೇರ ಅರ್ಥ ಪೂಜಾರಿ ಪುರೋಹಿತರು, ಜ್ಯೋತಿಷಿಗಳ ಕಪಿಮುಷ್ಟಿಗೆ ಸಿಲುಕಿ ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಇಂತಹ ಬಹುತೇಕ ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಪಟ್ಟಿರುತ್ತವೆ. ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥ ಮಹಿಳೆಯರ ಸಂಖ್ಯೆ ಈಗಲೂ ಭಾರಿ ಸಂಖ್ಯೆಯಲ್ಲಿದೆ. ಹೀಗಾಗಿ ಅವರಿವರು ಹೇಳಿದ್ದನ್ನು ಅವರು ಬಹುಬೇಗ ನಂಬಿ ಮೋಸಗಾರರ ಬಲೆಗೆ ಸಿಲುಕುತ್ತಾರೆ.

ಕಲ್ಲಿನಿಂದ ತಯಾರಿಸಿದ ಗೃಹೋಪಯೋಗಿ ಉಪಕರಣಗಳು ದೈವಬಲದಿಂದ ಕೆತ್ತಿದಂತೆ ಕಾಣುತ್ತಿರುವ ಬಗ್ಗೆ ಎಂಜಿನಿಯರಿಂಗ್‌ ವಿಭಾಗದ ಪ್ರೊಫೆಸರ್‌ ಡಾ. ಆರ್‌.ಸಿ. ವೈಶ್ಯ ಅವರು ಹೀಗೆ ಹೇಳುತ್ತಾರೆ, “ಅತಿಯಾದ ಬಿಸಿಲಿನಿಂದ ಕಲ್ಲುಗಳು ಕೂಡ ದುರ್ಬಲಗೊಳ್ಳುತ್ತವೆ. ಒಮ್ಮೊಮ್ಮೆ ಅವು ಸೀಳುಬಿಟ್ಟು ಪ್ರತ್ಯೇಕಗೊಳ್ಳಬಹುದು. ಕಲ್ಲು ದುರ್ಬಲಗೊಂಡಿರುವ ಕಾರಣದಿಂದ ಅವು ಒಂದು ರೀತಿಯಲ್ಲಿ ಕೆತ್ತಿದಂತೆ ಭಾಸವಾಗಬಹುದು. ಇದು ಸೃಷ್ಟಿಯ ಒಂದು ಸಹಜಕ್ರಿಯೆ. ಆ ರೀತಿಯ ವದಂತಿಗಳನ್ನು ನಂಬಬಾರದು.

”ಅದೇ ರೀತಿಯಲ್ಲಿ ಪ್ರಾಣಿಗಳಲ್ಲಿ ಹಾಗೂ ಮನುಷ್ಯರಲ್ಲಿ ವಿಚಿತ್ರ ಆಕಾರದ ಮಕ್ಕಳು ಜನಿಸುವುದು ಬಹುದೊಡ್ಡ ಅಚ್ಚರಿಯೇನಲ್ಲ. ಈ ಕುರಿತಂತೆ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುವ ಡಾ. ಆರ್‌.ಪಿ. ಮೌರ್ಯ ಹೀಗೆ ಹೇಳುತ್ತಾರೆ, “ಜೆನೆಟಿಕ್‌ ರಚನೆಯಲ್ಲಿನ ವ್ಯತ್ಯಾಸ, ಹುಟ್ಟು ವೈಕಲ್ಯಗಳು, ವೈದ್ಯಕೀಯ ಲೋಪಗಳ ಕಾರಣಗಳಿಂದಲೂ ವಿಚಿತ್ರ ಆಕಾರದ ಕೂಸುಗಳು ಜನಿಸಬಹುದು. ಆ ಕೂಸುಗಳು ಗಣೇಶ ಅಥವಾ ಬೇರೆ ಯಾವುದಾದರೂ ಆಕೃತಿ ಪಡೆದುಕೊಳ್ಳಬಹುದು.

”ಸಮಾಜದಲ್ಲಿ ಪಸರಿಸಿರುವ ಇತರೆ ಬಗೆಯ ಮೂಢನಂಬಿಕೆಗಳ ಬಗ್ಗೆ ಡಾ. ಮೌರ್ಯ ಅವರು ಹೇಳುವುದು ಹೀಗೆ, “ಗ್ರಾಮೀಣ ಮುಗ್ಧ ಮಹಿಳೆಯರನ್ನು ದಾರಿ ತಪ್ಪಿಸುವುದರಲ್ಲಿ ಭಾರತೀಯ ಪುರೋಹಿತ ವ್ಯವಸ್ಥೆ ನಂಬರ್‌ ಒನ್‌ ಸ್ಥಾನದಲ್ಲಿದೆ. ಎಷ್ಟು ಹೆಚ್ಚು ಜನರನ್ನು ದಾರಿ ತಪ್ಪಿಸುತ್ತಾರೋ ಅಷ್ಟೇ ಹೆಚ್ಚು ಲಾಭವಾಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಮುಗ್ಧರಿಂದ ಹಣವನ್ನು ಕಿತ್ತುಕೊಳ್ಳಲು ಇದೆಲ್ಲ ನಡೆಯುತ್ತದೆ.

”ಒಂದು ವೇಳೆ ಪೂಜೆ ಪುನಸ್ಕಾರದಲ್ಲಿ ಹಣದ ಚಲಾವಣೆ ನಿಂತುಹೋದರೆ ಮೂಢನಂಬಿಕೆಯೇ ನಿಂತುಹೋದಂತೆ. ಸರ್ಕಾರಿ ಸಂಸ್ಥೆಗಳು ಹಾಗೂ ಅರೆ ಸರ್ಕಾರಿ ಸಂಘಟನೆಗಳು ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಬೇಕಿದೆ.

– ಜಿ. ಭವಾನಿ

 

ಪ್ರೇಮದ ಈ ಪರಿ

ಮುಗ್ಧತೆಯ ನೋಟ ಬೀರುತ್ತಾ

ಕಣ್ಣೆವೆಗಳು ಮಿಟುಕದೆ ಮೆಲ್ಲನೆ ಬಡಿದ

ಎದುರಿಗೆ ಕಂಡಾಗ ಆ ಮುಖ

ಅವನೇ ಆಗಿದ್ದ ಇವಳ ಪ್ರಿಯತಮ!

ಕಣ್ಣು ಕೋರೈಸುವ ಮಿಂಚಿನಂತೆ

ಧರೆಗಿಳಿದ ಗಗನದ ಸಿಡಿಲಿನಂತೆ

ಆ ನೋಟ ಎದುರಿಸಲಾಗದೆ ಮೈ ನಡುಗಿತು

ಮೌನವಾಗಿ ತುಟಿಗಳು ಬರಿದೇ ನಕ್ಕವು.

ತಕ್ಷಣ ಮುಖಾರವಿಂದ ಸರಿಯಿತು ಪಕ್ಕ

ಮೋಡಗಳ ಮರೆಯಿಂದ ಚಂದ್ರಮ ನಕ್ಕ!

ಮೌನ ಸಂದೇಶದಲ್ಲೇ ಕೇಳಿದಳು ಅವಳು

ನಾನೇನು ಅಪರಾಧ ಮಾಡಿಲ್ಲ ತಾನೇ….?

ಪ್ರೇಮ ಸರೋವರದಲ್ಲಿ ಮಿಂದೆದ್ದು

ಪುಳಕಿತಳಾದಳು ಈ ಪಾವನಿ

ಪ್ರೇಮದ ಈ ಪರಿಯೇ ಅಪರಾಧವಾದರೆ

ಮುಳ್ಳಿನ ಮಧ್ಯೆ ಗುಲಾಬಿಯು ತಪ್ಪೆಂಬಿರಾ?

ಕಸ್ತೂರಿ ಮೃಗ ಹೇಗಿದ್ದರೇನು

ಅದರ ಪರಿಮಳ ಹೀಗಳೆವಿರಾ?

ಹಾಗೆಯೇ ಈ ಪ್ರೇಮದ ಪರಿ

ಹೇಗಿದ್ದರೂ ಆಗುತ್ತದೆ ಹೃದಯಕ್ಕೆ ನಿವೇದನೆ

ಇಂಥ ಅಪರಾಧ ನಡೆಯಲಿ ಮತ್ತೆ ಮತ್ತೆ

ಈ ಪ್ರೇಮರೋಗಕ್ಕೆ ಉಂಟೆ ಮದ್ದು?

ಈ ಪ್ರೇಮಾಲಾಪನೆಗೆ ಸಿಗದಿರಲಿ ಕೊನೆ ಎಂದೂ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ