ಅದೊಂದು ಆಹ್ಲಾದಕರ ಸಂಜೆ. ದೆಹಲಿಯ ವೈಭವೋಪೇತ ಕನ್ವೆನ್ಷನ್ ಸೆಂಟರ್. ಕ್ಯಾಮೆರಾಗಳ ಜಗಮಗಿಸುವ ಬೆಳಕು ಎಲ್ಲೆಡೆ ಬೀಳುತ್ತಿತ್ತು. ಭದ್ರತಾ ಅಧಿಕಾರಿಗಳು ತಮ್ಮ ವಾಕಿ-ಟಾಕಿ ಯಲ್ಲಿ ಮಾತನಾಡುತ್ತಿದ್ದರು. ಸೂಟು ಧರಿಸಿದ್ದ ಜನರ ಸಂಭ್ರಮವೋ ಸಂಭ್ರಮ. ಮಂತ್ರಿಗಳು, ಗಣ್ಯರು, ಉದ್ಯೋಗಪತಿಗಳು ಹಾಗೂ ವಿದೇಶಿ ಅತಿಥಿಗಳಿಂದ ಸಭಾಂಗಣ ತುಂಬಿಹೋಗಿತ್ತು. ಮೊದಲ ಸಾಲಿನಲ್ಲಿ ದೇಶದ ಪ್ರತಿಷ್ಠಿತ ವ್ಯಕ್ತಿಗಳು ಆಸೀನರಾಗಿದ್ದರು. ಮೂರನೇ ಸಾಲಿನ ಒಂದು ಮೂಲೆಯಲ್ಲಿ, ಸಾಧಾರಣ ಹತ್ತಿಯ ನೂಲಿನ ಸೀರೆಯುಟ್ಟ, ಸ್ವಲ್ಪ ವಯಸ್ಸಾದ, ಮಹಿಳೆಯೊಬ್ಬರು ಕುಳಿತಿದ್ದರು. ಅವರು ಕ್ಯಾಮರಾಗಳ ಗಮನ ಸೆಳೆಯುವಷ್ಟು ಆಕರ್ಷಕವಾಗಿ ಇರಲಿಲ್ಲ ! ಅವರೇ ಲಕ್ಷ್ಮಿ ಪಿಚಾಯಿ.

ಅವರು ಯಾರು ಎಂಬುದು ಗೊತ್ತಿದ್ದವರು ಕೆಲವರು ಮಾತ್ರ. ಸ್ಪಾಟ್ ಲೈಟ್ ಬೀಳುತ್ತಿದ್ದುದು ಆಕೆಯ ಮಗ, ವಿಶ್ವದ ದೈತ್ಯ ಸಾಫ್ಟ್ ವೇರ್ ಸಂಸ್ಥೆ ಗೂಗಲ್ ನ CEO ಆದ, ಭಾರತದ ಹೆಮ್ಮೆಯ – ಸುಂದರ ಪಿಚಾಯಿ ಮೇಲೆ !

ಸುಂದರ ಪಿಚಾಯಿ, ಇವರೇ ಅನೇಕ ಕಠಿಣಾತಿಕಠಿಣ ಪರೀಕ್ಷೆಗಳನ್ನು ಎದುರಿಸಿ, ಗೆದ್ದು, ಈ ಅತ್ಯುಚ್ಛ ಸ್ಥಾನವನ್ನು ಗಳಿಸಿದಾತ.

ಅಂದು ಭಾರತ ಸರ್ಕಾರವು ಈ ಮಾತೃಭೂಮಿ ಮಗನನ್ನು ಸತ್ಕರಿಸುವ ಸಮಾರಂಭವನ್ನು ಏರ್ಪಡಿಸಿತ್ತು !

ಸುಂದರ ಪಿಚಾಯಿ ತನ್ನ ತಾಯಿಯ ಕಡೆ ಗಮನ ಹರಿಸುತ್ತಿದ್ದರು. ಆದರೆ ಆಕೆಗೆ ಅದು ಇಷ್ಟವಾಗುವಂತೆ ಕಾಣುತ್ತಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಏರಿದಾಗ ಅಬ್ಬರದ ಜಯಘೋಷ ಕೇಳಿ ಬಂತು. ಅವರ ಮಾತುಗಳು ಅತ್ಯಂತ ಪ್ರಭಾವಶಾಲಿ ಆಗಿದ್ದವು. ಅವರ ಮಾತುಗಳು ನಿಷ್ಠೆ, ಕನಸುಗಳು, ಹೋರಾಟ ಮತ್ತು ಆಳವಾದ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದವು. ಅವರು ತಮ್ಮ ಮಾತಿನಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ವಿಜ್ಞಾನಿಗಳು, ಕಲಾವಿದರು, ಉದ್ಯೋಗ ಪತಿಗಳು ಮುಂತಾದವರ ಹೆಸರನ್ನು ಉಲ್ಲೇಖಿಸಿದರು. ಕಡೆಗೆ ಅವರ ಧ್ವನಿ ಸ್ವಲ್ಪ ಮೆತ್ತಗಾಯಿತು. ಅವರು ಹೇಳಿದರು

“ನಾವು ಈ ದಿನ ಕೇವಲ ಸುಂದರ ಪಿಚಾಯಿ ಅವರನ್ನು ಗೌರವಿಸುತ್ತಿಲ್ಲ. ಮಗನ ಅಧ್ಯಯನಕ್ಕಾಗಿ ತನ್ನ ಊಟವನ್ನು ತ್ಯಾಗ ಮಾಡಿದ ಮಹಾತಾಯಿ ಒಬ್ಬಳ ಜೀವನ ಪ್ರಯಾಣವನ್ನೂ ಗೌರವಿಸುತ್ತಿದ್ದೇವೆ”

ಸುಂದರ ಪಿಚಾಯಿಯ ಹೃದಯದ ಬಡಿತ ಈ ಮಾತನ್ನು ಕೇಳಿ ಹೆಚ್ಚಾಯಿತು. ಅವರು ಎಂದೂ ಸಾರ್ವಜನಿಕವಾಗಿ ಈ ವಿಷಯವನ್ನು ಹೇಳಿರಲಿಲ್ಲ. ತಕ್ಷಣ ನೆರದಿದ್ದ ಸಭಿಕರಲ್ಲಿ ಗುಸು-ಗುಸು ಆರಂಭವಾಯಿತು. ಕ್ಯಾಮೆರಾ ಗಳು ಈ ಕ್ಷಣವನ್ನು ಸೆರೆಹಿಡಿಯಲು ಅತ್ತ ತಿರುಗಿದವು. ಸಭಿಕರು ಮೌನವಾಗಿ ನೋಡತೊಡಗಿದರು.

ಮೋದಿಯವರು ವೇದಿಕೆಯ ಮೆಟ್ಟಿಲನ್ನು ಇಳಿಯ ತೊಡಗಿದರು. ಅವರು ನೇರವಾಗಿ ಸುಂದರ ಪಿಚಾಯಿ ಕಡೆ ಹೋಗಲಿಲ್ಲ ! ಅದಕ್ಕೆ ಬದಲಾಗಿ ಮೂರನೇ ಸಾಲಿನಲ್ಲಿ ತಣ್ಣಗೆ ಕುಳಿತಿದ್ದ ಅವರ ತಾಯಿಯ ಕಡೆ ಹೆಜ್ಜೆ ಹಾಕಿದರು.

ಲಕ್ಷ್ಮಿ ಅವರಿಗೆ ಒಂದು ಕ್ಷಣ ದಿಗ್ ಭ್ರಮೆ ಉಂಟಾಯಿತು. ನಮಸ್ಕರಿಸಲೆಂದು ಎತ್ತಿದ ಕೈಗಳು ನಡುಗುತ್ತಿದ್ದವು ! ನೋಡುತ್ತಿದ್ದವರು ಒಂದು ಕ್ಷಣ ಉಸಿರಾಟವನ್ನೇ ನಿಲ್ಲಿಸಿಬಿಟ್ಟರು !

ಮೋದಿಯವರು ಮೆಲ್ಲನೆ ಹೇಳಿದರು “ಕೇವಲ ನಿಮ್ಮ ತ್ಯಾಗದಿಂದ ಅಷ್ಟೇ ಇದು ಸಾಧ್ಯವಾಯಿತು”.

ಇಷ್ಟು ಹೇಳಿದ ಮೋದಿ ತಲೆತಗ್ಗಿಸಿ ಲಕ್ಷ್ಮಿ ಅವರ ಪಾದಗಳಿಗೆ ನಮಸ್ಕರಿಸಿದರು ! ಇಡೀ ಸಭಾಂಗಣದಲ್ಲಿ ನೆರೆದಿದ್ದ ಜನ ನಿಶಬ್ದವಾಗಿ ಮೇಲೆದ್ದು ಈ ಗೌರವಾರ್ಪಣೆಯಲ್ಲಿ ಭಾಗಿಯಾದರು. ಈ ದೃಶ್ಯವನ್ನು ತೆರೆಹಿಡಿಯಲು ಅಲ್ಲಿದ್ದ ಕ್ಯಾಮೆರಾಗಳೆಲ್ಲವೂ ಚುರುಕಾದವು.

ಸುಂದರ ಪಿಚಾಯಿ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತು. ಹೀಗಾಗಬಹುದು ಎಂದು ಅವರು ಕನಸಿನಲ್ಲೂ ಊಹಿಸಿರಲಿಲ್ಲ !

ಅವರು ಹಲವಾರು ವರ್ಷ ಅಮೆರಿಕಾದ ಸಿಲಿಕಾನ್ ವ್ಯಾಲಿ ಯಲ್ಲಿ ಕಳೆದಿದ್ದರು. ಅವರು ಬೇಕಾದಷ್ಟು ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು, ಮತ್ತು ರಾಜರುಗಳನ್ನ ಭೇಟಿ ಮಾಡಿದ್ದರು. ಆದರೆ ಯಾರೂ ಅವರ ತಾಯಿಯನ್ನು ಮೋದಿಯವರು ಗೌರವಿಸಿದಷ್ಟು ಗೌರವಿರಲಿಲ್ಲ ! ಆ ತಾಯಿ ಏಳಲು ಪ್ರಯತ್ನಿಸಿದರು. ಆಗ ಮೋದಿಯವರೇ ಆಕೆಗೆ ಕೈ ನೀಡಿ, ಆಸರೆ ಕೊಟ್ಟು, ಕೈ ಹಿಡಿದು, ವೇದಿಕೆಗೆ ಕರೆ ತಂದರು. ಆಕೆ ಒಲ್ಲೆ ಎಂದರೂ ಅವರ ಕೈಬಿಡದ ಮೋದಿ ಆಕೆಯನ್ನು ಧೈರ್ಯವಾಗಿ ಪ್ರೇಕ್ಷಕರ ಎದುರು ನಿಲ್ಲಲು ಸಹಾಯ ಮಾಡಿದರು. ಆಗ ಕೇಳಿ ಬಂದಿದ್ದು ಪ್ರೇಕ್ಷಕರ ಗಡಚಿಕ್ಕುವ ಚಪ್ಪಾಳೆ !

ಸುಂದರ ಪಿಚಾಯಿ ತನ್ನ ತಾಯಿಯ ಪಕ್ಕದಲ್ಲಿ ನಿಂತರು. ಅವರ ಕಣ್ಣುಗಳಲ್ಲಿ ಸುರಿಯುತ್ತಿತ್ತು – ಆನಂದ ಭಾಷ್ಪ ! ಹಿಂದೆ ನಡೆದ ಘಟನೆಗಳೆಲ್ಲ ಪ್ರವಾಹದಂತೆ ಅವರ ಮನಸ್ಸಿನ ಪರದೆಯ ಮೇಲೆ ಒಮ್ಮೆ ಹಾದುಹೋಯಿತು.

ಅವರು ಇದ್ದುದು ಚೆನ್ನೈ ನ ಎರಡು ಕೋಣೆಗಳ ಒಂದು ಸಾಧಾರಣ ಮನೆಯಲ್ಲಿ. ಅದರ ಗೋಡೆಗಳು ಮಂಕಾಗಿ ಬಣ್ಣ ಕಳೆದುಕೊಂಡಿದ್ದವು. ಅವರ ಮನೆಯಲ್ಲಿ ಆಗ ರೆಫ್ರಿಜಿರೇಟರ್ ಕೂಡ ಇರಲಿಲ್ಲ ! ತಂದೆ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು. ಮಕ್ಕಳಿಗೆ ಆಟಿಕೆಗಳನ್ನು ತರುವಷ್ಟು ಅವರು ಶ್ರೀಮಂತರಾಗಿರಲಿಲ್ಲ. ಕೇವಲ ಸರ್ಕ್ಯೂಟ್ ಡಯಾಗ್ರಮ್ ಗಳು, ಸೋಲ್ದರಿಂಗ್ ವೈರ್ ಗಳು ಹಾಗೂ ಕೆಟ್ಟು ಹೋದ, ಯಾರೋ ನೀಡಿದ ರೇಡಿಯೋ ತರುತ್ತಿದ್ದರು. ಸುಂದರ್ ತನ್ನ ತಂದೆಗೆ ಗಂಟೆಗಳ ಗಟ್ಟಲೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದ.

ತಾಯಿ ಅಕ್ಕಿ ಕಾಳುಗಳನ್ನು ಉಪಯೋಗಿಸಿ ಮಗನಿಗೆ ಗಣಿತ ಕಲಿಸುತ್ತಿದ್ದರು. ಸುಂದರ ಕಾಲೇಜಿಗೆ ಸೇರಿದಾಗ ಫೀಸು ನೀಡಲು ಆ ತಾಯಿ ತನ್ನ ಮದುವೆಯಲ್ಲಿ ನೀಡಲಾಗಿದ್ದ ಬಂಗಾರದ ಬಳೆಗಳನ್ನು ಮಾರಿದ್ದರು ! ಆದರೆ ಇದನ್ನು ಯಾರಿಗೂ ಹೇಳಿರಲಿಲ್ಲ. ಕೇಳಿದವರಿಗೆ “ಹೇಗೋ ತೂಗಿಸಿದರೆ ಆಯಿತು” ಎಂದು ಉತ್ತರಿಸುತ್ತಿದ್ದರು !

ಶಾಲೆಯಲ್ಲಿ ಸುಂದರ ತಂಟೆ ಮಾಡದ ಹುಡುಗ. ಆದರೆ ಅವನಿಗೆ ವಿಷಯಗಳನ್ನು ತಿಳಿದುಕೊಳ್ಳಲು ಅಪಾರ ಕುತೂಹಲ. ಅವನ ಶಿಕ್ಷಕರು ಅವನ ಬಗ್ಗೆ ಹೀಗೆ ಹೇಳುತ್ತಾರೆ “ಇವನ ನೆನಪಿನ ಶಕ್ತಿ ಅದ್ಭುತ! ಇವನು ಒಮ್ಮೆ ಡಯಲ್ ಮಾಡಿದ ಟೆಲಿಫೋನ್ ನಂಬರ್ ಗಳನ್ನು ಮತ್ತೆಂದೂ ಮರೆಯುತ್ತಿರಲಿಲ್ಲ!”

ಅವನ ಸಹಪಾಠಿಗಳು, ಅವನ ಹಳೆಯ, ಸವೆದು ಹೋದ, ಶೂಗಳ ಬಗ್ಗೆ ಅಥವಾ ಅವನು ತರುತ್ತಿದ್ದ ಊಟದ ಡಬ್ಬಿಯ ಬಗ್ಗೆ ಅವನನ್ನು ಕಿಚಾಯಿಸುತ್ತಿದ್ದರು. ಅದಕ್ಕೆಲ್ಲ ಸುಂದರ್ ನಸುನಕ್ಕು ಸುಮ್ಮನೆ ಅವರಿಂದ ದೂರ ಹೋಗುತ್ತಿದ್ದ.

ಬಿರು ಬೇಸಿಗೆಯಲ್ಲಿ, ವಿದ್ಯುತ್ ಹೊರಟು ಹೋಗಿ, ಫ್ಯಾನ್ ತಿರುಗದಿದ್ದಾಗ, ಬೆವರಿನಿಂದ ನೆನೆದ ನೆಲದಲ್ಲೇ ಸುಂದರ್ ಮತ್ತು ಅವನ ಅಣ್ಣ ಮಲಗುತ್ತಿದ್ದರು. ಎಷ್ಟೋ ರಾತ್ರಿಗಳು ಅವರ ತಾಯಿ ಒಂದು ರಟ್ಟಿನ ತುಂಡಿನಿಂದ ಮಕ್ಕಳಿಗೆ ಗಾಳಿ ಬೀಸುತ್ತಿದ್ದರು ! ರಾತ್ರಿ ಮಲಗದಿದ್ದರೂ ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಆಹಾರ ಸಿದ್ಧಪಡಿಸುತ್ತಿದ್ದರು.

ಸುಂದರ್ ಗೆ ಅಮೆರಿಕಾದಲ್ಲಿ ಉನ್ನತ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನ ಏನೋ ಸಿಕ್ಕಿತು. ಆದರೆ ವಿಮಾನಯಾನದ ಖರ್ಚನ್ನು ನೆನೆಸಿಕೊಂಡು ಸುಂದರ್, ಅಮೇರಿಕಾಗೆ ಹೋಗಲು ಹಿಂಜರಿದ.”ನೀನು ಅಮೆರಿಕಾಗೆ ಹೋಗು ನಾನು ಬ್ಯಾಂಕಿನವರೊಡನೆ ಮಾತನಾಡುತ್ತೇನೆ” ಎಂದು ತಾಯಿ ಹೇಳಿದರು. ಆದರೆ ಅವರು ಮಾಡಿದ್ದೇನೆಂದರೆ ತಮ್ಮಲ್ಲಿದ್ದ ಚಿನ್ನದ ಕಡೆಯ ಒಡವೆಯ ಮಾರಾಟ !

ಈಗ ಸುಂದರ ಪಿಚಾಯಿ ದೆಹಲಿಯ ಪ್ರತಿಷ್ಠಿತ ಸಭಾಂಗಣದಲ್ಲಿ ಪ್ರಧಾನಮಂತ್ರಿ ಹಾಗೂ ತನ್ನ ತಾಯಿಯೊಡನೆ ನಿಂತಿದ್ದರು. ಆ ಕ್ಷಣ ಸುಂದರ ಪಿಚಾಯಿ ಗೆ ತುತ್ತಲಿನ ಪ್ರಪಂಚವೇ ಮಸುಕಾಯಿತು. ಕೇವಲ ತಾಯಿಯ ಉಸಿರಾಟ ಮತ್ತು ಆಪ್ತತೆಯಿಂದ ಕೈಹಿಡಿದ ಹಿಡಿತ – ಇವಿಷ್ಟು ಮಾತ್ರ ಅನುಭವ ಆಯಿತು. ಚಿಕ್ಕ ಹುಡುಗ ಇದ್ದಾಗ ಮಗನ ಕೈ ಹಿಡಿಯುವಂತೆ ಇತ್ತು ಆ ತಾಯಿಯ ಹಿಡಿತ. ಆಕೆ ಮೆಲ್ಲನೆ ಮಗನ ಕಿವಿಯಲ್ಲಿ ಉಸುರಿದರು “ನೀನು ಹಿಂದಿನದನ್ನೆಲ್ಲ ನೆನಪಿಟ್ಟುಕೊಂಡಿದ್ದೀಯಲ್ಲ, ಅಷ್ಟು ಸಾಕು. ಇಷ್ಟೆಲ್ಲಾ ಪ್ರದರ್ಶನ ಏಕೆ ?”

ಆಗ ಸುಂದರ ಪಿಚಾಯಿ ಹೇಳಿದರು *”ಅಮ್ಮ ನೀನು ಯಾವತ್ತೂ ಏನನ್ನೂ ಕೇಳಲಿಲ್ಲ. ಆದ್ದರಿಂದಲೇ ನಾನು ಯಾವುದನ್ನು ಮರೆತಿಲ್ಲ !*

(ಮರಾಠಿಯಲ್ಲಿ ಜಯಂತ್ ಜೋಶಿಯವರು ಬರೆದ ಕಥನದ ಇಂಗ್ಲಿಷ್ ಅವತರಣಿಕೆಯನ್ನು ಕಳಿಸಿದವರು ಈಗ ಅಮೇರಿಕಾದಲ್ಲಿ ನೆಲೆಸಿರುವ ಶ್ರೀಮತಿ ಅರುಣ ಅವರು. ಇದು ಅದರ ಕನ್ನಡ ಭಾವಾನುವಾದ )

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ