ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಭಾರತ ಸರ್ಕಾರ ಜವಾಹರ ನವೋದಯ ವಿದ್ಯಾಲಯಗಳನ್ನು 1986ರಲ್ಲಿ ಆರಂಭಿಸಿತು. ಇವು 28 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯಾಪಿಸಿವೆ, ಇವುಗಳಿಗೆ ನವೋದಯ ವಿದ್ಯಾಲಯ ಸಮಿತಿ ಮೂಲಕ ಭಾರತ ಸರ್ಕಾರ ಸಂಪೂರ್ಣ ಆರ್ಥಿಕ ಸಹಕಾರ ನೀಡುತ್ತದೆ. ಜೊತೆಗೆ ಆಡಳಿತ ನಿರ್ವಹಣೆಯನ್ನೂ ಮಾಡುತ್ತಿದೆ.

ಬೋಧನಾ ಮಾಧ್ಯಮ

ಜವಾಹರ್‌ ನವೋದಯ ವಿದ್ಯಾಲಯಗಳಲ್ಲಿ ಬೋಧನಾ ಮಾಧ್ಯಮ ಎಂಟನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾಂತೀಯ ಭಾಷೆಯಾಗಿರುತ್ತದೆ. ಉನ್ನತ ತರಗತಿಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಇಂಗ್ಲಿಷ್‌ ಹಾಗೂ ಸಾಮಾಜಿಕ ವಿಜ್ಞಾನ ವಿಷಯಗಳಿಗೆ ಹಿಂದಿ ಬೋಧನಾ ಮಾಧ್ಯಮವಾಗಿರುತ್ತದೆ.

ಯೋಜನೆಯ ಉದ್ದೇಶ : ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ವಿಶೇಷ ಗುಣಮಟ್ಟದ ಅತ್ಯಾಧುನಿಕ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ಒಳಗೊಂಡ ಮೌಲ್ಯಾಧಾರಿತ ಶಿಕ್ಷಣ ಕೊಡುವುದರ ಜೊತೆಗೆ ಪರಿಸರ ಜಾಗೃತಿ ಉಂಟು ಮಾಡುವುದಾಗಿದೆ. ಇಲ್ಲಿ ಸಾಹಸ ಪ್ರವೃತ್ತಿ ಬೆಳೆಸುವುದರ ಜೊತೆಗೆ ದೈಹಿಕ ಶಿಕ್ಷಣ ಕೂಡ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ 3 ಭಾಷೆಗಳಲ್ಲಿ ಕಲಿಯಲು ಅವಕಾಶವಿದೆ.

ರಾಷ್ಟ್ರೀಯ ಭಾವೈಕ್ಯತೆ : ನವೋದಯ ಶಾಲೆಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಸಲುವಾಗಿ 9ನೇ ತರಗತಿ ವಿದ್ಯಾರ್ಥಿಗಳನ್ನು ಹಿಂದಿ ಮಾತನಾಡದ ರಾಜ್ಯಗಳಿಂದ, ಹಿಂದಿ ಮಾತನಾಡುವ ರಾಜ್ಯಗಳ ಒಂದು ನವೋದಯ ಶಾಲೆಗೆ ಒಂದು ವರ್ಷದ ಮಟ್ಟಿಗೆ ಕಳಿಸಿಕೊಡಲಾಗುತ್ತದೆ. ಅದೇ ರೀತಿ ಹಿಂದಿ ಮಾತನಾಡುವ ರಾಜ್ಯಗಳಿಂದ, ಹಿಂದಿ ಮಾತನಾಡದ ರಾಜ್ಯಗಳಿಗೆ ಕಳಿಸಿಕೊಡಲಾಗುತ್ತದೆ.

ಕರ್ನಾಟಕದಲ್ಲಿ ಪ್ರಸ್ತುತ 28 ನವೋದಯ ಶಾಲೆಗಳಿದ್ದು, ಭಾರತದಾದ್ಯಂತ 588 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರವೇಶ ಪ್ರಕ್ರಿಯೆ ಹೇಗೆ? : ಜವಾಹರ್‌ ನವೋದಯ ಶಾಲೆಗೆ ಪ್ರತಿ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆಗಾಗಿ ಜಾಹೀರಾತು ನೀಡಲಾಗುತ್ತದೆ.

ಯಾವ ಜಿಲ್ಲೆಯಲ್ಲಿ ನವೋದಯ ಶಾಲೆ ಇದೆಯೋ, ಅದೇ ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಸರ್ಕಾರಿ ಅನುದಾನ ಪಡೆದ `ಬಿ’ ಪ್ರಮಾಣ ಪತ್ರದ ಕೋರ್ಸಿನ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆಯಲ್ಲಿ 5ನೇ ತರಗತಿ ಓದುತ್ತಿರುವವರಾಗಿರಬೇಕು.

ಪ್ರವೇಶ ಪರೀಕ್ಷೆ : ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಜನವರಿ ಮೊದಲ ವಾರ ಅಥವಾ ಎರಡನೇ ವಾರ ಪ್ರವೇಶ ಪರೀಕ್ಷೆ ನಡೆಯುತ್ತದೆ.

ಪರೀಕ್ಷೆಯ ಮಾಧ್ಯಮ 5ನೇ ತರಗತಿಯಲ್ಲಿ ಓದುತ್ತಿರುವ ಭಾಷಾ ಮಾಧ್ಯಮವೇ ಆಗಿರುತ್ತದೆ. ಪ್ರವೇಶ ಪರೀಕ್ಷೆಯು ಒಟ್ಟು 100 ಅಂಕಗಳದ್ದಾಗಿದ್ದು, ಸಮಯಾವಕಾಶ 2 ಗಂಟೆ ಇರುತ್ತದೆ.

ಮಾನಸಿಕ ಸಾಮರ್ಥ್ಯದ 50 ಪ್ರಶ್ನೆಗಳಿರುತ್ತವೆ. ಅದಕ್ಕೆ 1 ಗಂಟೆಯ ಅವಧಿ ಹಾಗೂ ಅಂಕಗಣಿತ ಹಾಗೂ ಭಾಷಾ ಪರೀಕ್ಷೆ ತಲಾ 25 ಅಂಕಗಳದ್ದಾಗಿದ್ದು, ಎರಡಕ್ಕೂ ತಲಾ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಮೀಸಲಾತಿ

ಪ್ರತಿಯೊಂದು ಜಿಲ್ಲೆಯಲ್ಲಿರುವ ನವೋದಯ ಶಾಲೆಗೆ ಶೇ.75ರಷ್ಟು ಸ್ಥಾನಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ಶೇ.25ರಷ್ಟು ಸ್ಥಾನಗಳನ್ನು ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಆಯಾ ಜಿಲ್ಲೆಯ ಜನಸಂಖ್ಯೆಯ ಆಧಾರದ ಮೇಲೆ ಅವಲಂಬಿಸಿದೆ.

ಆಯ್ಕೆಯಾದ ಒಟ್ಟು ಅಭ್ಯರ್ಥಿಗಳಲ್ಲಿ 1/3ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.

ವಿಕಲಚೇತನ ಮಕ್ಕಳಿಗೆ ಶೇ.3ರಷ್ಟು ಸ್ಥಾನಗಳು ಮೀಸಲಿರುತ್ತವೆ. ಭಾಷಾ ಪರೀಕ್ಷೆ ತಲಾ 25 ಅಂಕಗಳದ್ದಾಗಿದ್ದು, ಎರಡಕ್ಕೂ 30-30 ನಿಮಿಷಗಳ ಅವಧಿ ನೀಡಲಾಗುತ್ತದೆ.

ಜವಾಹರ ನವೋದಯ ವಿದ್ಯಾಲಯ, ಬಾಗಲೂರು-562 149. ಬೆಂಗಳೂರು ನಗರ ಜಿಲ್ಲೆ,

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ