2010ರಲ್ಲಿ ಮಾಸ್ಟರ್ ಶೆಫ್ ಸೀಸನ್1ರ ವಿನ್ನರ್ ಆಗಿರುವ ಪಂಕಜ್ ಭದೋರಿಯಾರ ಪರಿಚಯವನ್ನು ಹೊಸದಾಗಿ ಮಾಡಿಕೊಡಬೇಕಾಗಿಲ್ಲ. `ಶೆಫ್ ಪಂಕಜ್‌ರ ರೆಸಿಪೀಸ್, ಲಾಭದಾಯಕ ಕಿಚನ್, 3 ಕೋರ್ಸ್ ವಿತ್ ಪಂಕಜ್, ಪಂಕಜ್ ಭದೋರಿಯಾರ ಡ್ಯಾಶಿಂಗ್ ಕಿಚನ್' ಇತ್ಯಾದಿ ಅನೇಕ ಟಿವಿ ಶೋಗಳು ಈಕೆ ಎಂಥ ಸುಪ್ರಸಿದ್ಧ, ಜನಪ್ರಿಯ ಶೆಫ್ ಎಂದು ನಿರೂಪಿಸುತ್ತವೆ.
ಇವರ 2 ಕುಕ್‌ಬುಕ್ಸ್ ಆದ `ಬಾರ್ಬಿ : ಐ ಆ್ಯಮ್ ಶೆಫ್, ಚಿಕನ್ ಫ್ರಂ ಮೈ ಕಿಚನ್,' ವಿಶ್ವದೆಲ್ಲೆಡೆ ಹಲವು ಭಾಷೆಗಳಲ್ಲಿ ಜನಪ್ರಿಯತೆ ಗಳಿಸಿಕೊಟ್ಟಿದೆ. ಇಬ್ಬರು ಮಕ್ಕಳ ತಾಯಿಯಾದ ಸ್ಕೂಲ್ ಟೀಚರ್ ಪಂಕಜ್, ಮಾಸ್ಟರ್ ಶೆಫ್ ಆದದ್ದು ಹೇಗೆ? ಇವರು ಹೇಗೆ ತಮ್ಮ ಕುಟುಂಬ ಸಂಭಾಳಿಸುತ್ತಾ ಕೆರಿಯರ್‌ನಲ್ಲಿ ಈ ಉನ್ನತ ಮಟ್ಟ ಮುಟ್ಟಿದರು..... ಇದನ್ನೆಲ್ಲ ಇವರಿಂದಲೇ ತಿಳಿಯೋಣ ಬನ್ನಿ.
ಯಾವಾಗಿನಿಂದ ನಿಮಗೆ ಅಡುಗೆ ಕರಗತ ಆಯ್ತು?
ನನ್ನ ಪಾಲಕರಿಗೆ ಮೊದಲಿನಿಂದಲೂ ಅಡುಗೆ ಕೆಲಸದಲ್ಲಿ ಬಹಳ ಆಸಕ್ತಿ. ಅವರಿಬ್ಬರೂ ರುಚಿರುಚಿಯಾಗಿ ಅಡುಗೆ ಮಾಡುತ್ತಿದ್ದರು. ಜನರನ್ನು ವಿವಿಧ ಪಾರ್ಟಿಗಳಿಗೆ ಕರೆದು, ಅವರಿಗೆ ತಮ್ಮ ಕೈಯಾರೆ ತಯಾರಿಸಿದ ಬಗೆಬಗೆಯ ತಿನಿಸುಗಳನ್ನು ಉಣಬಡಿಸುವುದು ಅವರ ಮೆಚ್ಚಿನ ಹವ್ಯಾಸವಾಗಿತ್ತು. ಆಗ ನನಗೆ ಅರಿವಾಗಿದ್ದು ಎಂದರೆ, ಈ ರೀತಿ ಉತ್ತಮ ಅಡುಗೆ ತಯಾರಿಸುವುದರಿಂದ ತಿನ್ನಲು ರಸಗವಳ ಸಿಗುವುದು ಮಾತ್ರವಲ್ಲದೆ ಬೇಕಾದಷ್ಟು ಹೊಗಳಿಕೆಯೂ ಸಿಗುತ್ತದೆ ಎಂಬುದು.
ಈ ರೀತಿ ನನಗೆ ಅಡುಗೆ ಕೆಲಸ ಸ್ವಾರಸ್ಯಕರ ಎನಿಸಿ, 11ರ ಹುಡುಗಿ ಆಗಿದ್ದಾಗಲೇ ಅಡುಗೆ ತಯಾರಿಸಲಾರಂಭಿಸಿದೆ. ಮೊದಲಿನಿಂದಲೂ ನನಗೆ ಅಡುಗೆಯಲ್ಲಿ ನಾನಾ ತರಹದ ಪ್ರಯೋಗ ಮಾಡುವುದೆಂದರೆ ಆಸೆ! ಇಂಟರ್‌ನ್ಯಾಷನಲ್ ಫುಡ್ ಅಂದ್ರೆ ಚೈನೀಸ್, ಇಟ್ಯಾಲಿಯನ್, ಥಾಯ್ ರೆಸಿಪೀಸ್ ನನಗೆ ಆಡುವ ಆಟ ಎನಿಸಿತು. ಮದುವೆ ಆದ ನಂತರ ನನ್ನ ಪತಿ ಸಹ ಸ್ಮಾರ್ಟ್ ಫುಡೀ ಅಂತ ಗೊತ್ತಾಯ್ತು. ಹೀಗಾಗಿ ಕುಕಿಂಗ್ ಎಕ್ಸ್ ಪೆರಿಮೆಂಟ್ಸ್ ಮುಂದುವರಿಯಿತು.
ನೀವು ಬಹಳ ಸಣ್ಣ ವಯಸ್ಸಿನಲ್ಲೇ ಪೇರೆಂಟ್ಸ್ ಕಳೆದುಕೊಂಡಿರಿ. ಹೀಗಿರುವಾಗ ನೀವು ಕೆರಿಯರ್‌ನಲ್ಲಿ ಹೇಗೆ ಮುಂದುವರಿಯಲು ಸಾಧ್ಯವಾಯಿತು?
ನಾನು ಉ.ಪ್ರ.ದ ಲಖ್ನೋದಲ್ಲಿ ಹುಟ್ಟಿ ಬೆಳೆದವಳು. ನಾನು 13 ವರ್ಷದವಳಾಗಿದ್ದಾಗ ನನ್ನ ತಂದೆ ತೀರಿಕೊಂಡರು. 21 ಮುಟ್ಟುವ ಹೊತ್ತಿಗೆ ಅಮ್ಮನನ್ನು ಕಳೆದುಕೊಂಡೆ. ನಮ್ಮಮ್ಮ ಸದಾ ಹೇಳುತ್ತಿದ್ದರು. ಶಿಕ್ಷಣ ಎಂಬುದು ಅಮೂಲ್ಯ ಆಸ್ತಿ, ಇದನ್ನು ನಮ್ಮಿಂದ ಯಾರೂ ಕದಿಯಲಾಗದು. ಹೀಗಾಗಿ ಓದನ್ನು ನಿಲ್ಲಿಸಬೇಡ ಎನ್ನುತ್ತಿದ್ದರು. ನಮ್ಮಮ್ಮ ಆ ಕಾಲದಲ್ಲಿ ಹೈಸ್ಕೂಲು ಕಲಿತಿದ್ದರಷ್ಟೆ, ಹೀಗಾಗಿ ಉತ್ತಮ ಕೆಲಸ ದೊರಕಿರಲಿಲ್ಲ. ಅದಕ್ಕಾಗಿಯೇ ನಾನು ಉನ್ನತ ಶಿಕ್ಷಣ ಪಡೆಯಬೇಕೆಂದು ಹೇಳುತ್ತಿದ್ದರು. ನಾನು ಆಂಗ್ಲ ಭಾಷೆಯಲ್ಲಿ ಎಂ.ಎ. ಮಾಡಿ ಹೈಸ್ಕೂಲು ಶಿಕ್ಷಕಿಯಾದೆ.
ಮದುವೆಯಾಗಿ ಅತ್ತೆ ಮನೆಗೆ ಬಂದಾಗ, ಪಾರ್ಟಿಗಾಗಿ ಪೂರ್ತಿ ಅಡುಗೆ ಜವಾಬ್ದಾರಿ ನನ್ನದೇ ಆಗಿರುತ್ತಿತ್ತು. ಅತಿಥಿಗಳು ಬಾಯಿ ತುಂಬಾ ಹೊಗಳುತ್ತಿದ್ದರು. ಇದರಿಂದ ಪ್ರೇರಣೆ ಪಡೆದು ನಾನು ಏನಾದರೂ ಮಾಡಿ ಸಾಧಿಸಬೇಕು ಎನಿಸಿತು. ಆಗ ನಾನು ಟಿವಿಯಲ್ಲಿ ಮಾಸ್ಟರ್ ಶೆಫ್ ಆ್ಯಡ್ ನೋಡಿದೆ. ಆಗ ನಾನು ಟೀಚಿಂಗ್ ಬಿಟ್ಟು ಇದಕ್ಕೆ ಸೇರಿದೆ. ಇದರಲ್ಲಿ ವಿಜೇತಳಾದ ಮೇಲೆ ನಾನು ನನ್ನ ಪ್ಯಾಶನನ್ನೇ ಪ್ರೊಫೆಶನ್ ಆಗಿಸಿಕೊಂಡೆ.