ನೀವು ಒಂದು ದಿನದಲ್ಲಿ 15-16 ಗಂಟೆ ಫೋನ್‌ ಜೊತೆಗೆ ಕಾಲ ಕಳೆಯುತ್ತೀರಾ? ನೀವು ಮುಂಜಾನೆ ಏಳುತ್ತಿದ್ದಂತೆ ಫೇಸ್‌ಬುಕ್‌ ಹಾಗೂ ವಾಟ್ಸ್ ಆ್ಯಪ್‌ ಚೆಕ್‌ ಮಾಡುತ್ತೀರಾ? ನಿಮ್ಮ ಫೋನ್‌ ಕರೆಗಂಟೆ ಯಾವಾಗಲೂ ಹೊಡೆದುಕೊಳ್ಳುತ್ತಾ ಇರುತ್ತಾ

ನೀವು ಫೋನ್‌ ಚೆಕ್‌ ಮಾಡಿದಾಗ ಅದರಲ್ಲಿ ಅಂಥದ್ದೇನೂ ಮಹತ್ವದ್ದು ಇರುವುದಿಲ್ಲ. ನಿಮಗೆ ಇಂತಹ ಅಭ್ಯಾಸ ಇದ್ದರೆ ನೀವು ಅದನ್ನು ಬದಲಿಸಿಕೊಳ್ಳಿ. ಏಕೆಂದರೆ ನೀವು ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಅಂಟಿಕೊಳ್ಳುತ್ತ ಹೋದರೆ ನೀವು ಗಂಭೀರ ರೋಗಗಳ ಕಪಿಮುಷ್ಟಿಗೆ ಸಿಲುಕಬಹುದು. ನೀವು ಫೇಸ್‌ಬುಕ್‌, ವಾಟ್ಸ್ಆ್ಯಪ್‌, ಟ್ವಿಟರ್‌ನಲ್ಲಿ ಇಡೀ ದಿನ ಸಮಯ ವ್ಯರ್ಥ ಮಾಡುತ್ತಿದ್ದರೆ ನಿಮಗೆ ಖಿನ್ನತೆ, ಬೆನ್ನುನೋವು, ಕಣ್ಣುನೋವಿನ ತೊಂದರೆ ಬಾಧಿಸಬಹುದು. ಸಾಮಾಜಿಕ ಜಾಲತಾಣಗಳ ಲಾಭ ಹಾಗೂ ಹಾನಿಯ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಿ. ಮೊದಲು ಅದರ ಲಾಭಗಳ ಬಗ್ಗೆ….

ಎಲ್ಲ ಸುಲಭ

ಫೇಸ್‌ಬುಕ್‌ ಅಥವಾ ವಾಟ್ಸ್ಆ್ಯಪ್‌ ಇವೆರಡು ಜನರನ್ನು ತುಂಬಾ ನಿಕಟಗೊಳಿಸಿವೆ. ಸಂಬಂಧಿಕರು ಸ್ನೇಹಿತರು ಸಪ್ತಸಮುದ್ರ ದೂರ ಇದ್ದರೂ ಅವರೊಂದಿಗೆ ಉಚಿತವಾಗಿ ಮಾತುಕತೆ ನಡೆಸಬಹುದು. ಹಿಂದೆ ವಿದೇಶದಲ್ಲಿದ್ದ ಯಾರ ಜೊತೆಗಾದರೂ ಮಾತಾಡಬೇಕೆಂದರೆ ಪ್ರತಿ ನಿಮಿಷಕ್ಕೆ 40-50 ರೂ. ಕೊಡಬೇಕಾಗುತ್ತಿತ್ತು. ಈಗ ಆ ದುಬಾರಿ ದಿನಗಳು ಹೊರಟುಹೋದವು. ಸೋಶಿಯಲ್ ನೆಟ್‌ ವರ್ಕಿಂಗ್‌ನಿಂದ ಎಲ್ಲ ಈಗ ಸುಲಭವಾಗಿದೆ.

ವ್ಯಾಪಾರದ ಸಂಪರ್ಕ ಸೇತುವೆ

ಇತ್ತೀಚೆಗೆ ಇದೊಂದು ಟ್ರೆಂಡ್‌ ಆಗುತ್ತಿದೆ. ವ್ಯಾಪಾರಿಗಳು ತಮ್ಮ ಸರಕನ್ನು ಮಾರಲು ಫೇಸ್‌ಬುಕ್‌ನಲ್ಲಿ ಅದರ ಮಾಹಿತಿ ಹಾಕುತ್ತಾರೆ. ಇಲ್ಲಿ ತಮ್ಮದೇ ಆದ ಪೇಜ್‌ವೊಂದನ್ನು ಸೃಷ್ಟಿಸುತ್ತಾರೆ. ಗ್ರಾಹಕ ತನಗೆ ಆ ವಸ್ತು ಇಷ್ಟವಾದರೆ ಖರೀದಿಸುತ್ತಾನೆ. ಅದರಿಂದಾಗಿ ವ್ಯಾಪಾರಿಗೆ ಲಾಭವಾಗುತ್ತದೆ. ಒಂದುವೇಳೆ  ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಂಡರೆ ಸಾಕಷ್ಟು ಲಾಭ ಮಾಡಿಕೊಳ್ಳಬಹುದು. ದೊಡ್ಡ ದೊಡ್ಡ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ ಅಥವಾ ಟ್ವಿಟರ್‌ನಲ್ಲಿ ಜಾಹೀರಾತುಗಳ ಮುಖಾಂತರ ಸಾಕಷ್ಟು ಹಣ ಗಳಿಸುತ್ತಿವೆ.

ಮಾಹಿತಿ ವಿನಿಮಯದ ಉತ್ತಮ ವೇದಿಕೆ

ನೀವು ಯಾವುದಾದರೊಂದು ಮಾಹಿತಿ ಪಡೆಯಬೇಕಿದ್ದರೆ ಅಥವಾ ಯಾವುದಾದರೊಂದು ಮಹತ್ವದ ವಿಷಯವನ್ನು ಏಕಕಾಲಕ್ಕೆ ಬಹಳಷ್ಟು ಜನರಿಗೆ ತಲುಪಿಸಲು ಸೋಶಿಯಲ್ ನೆಟ್‌ರ್ಕಿಂಗ್‌ ಅತ್ಯುತ್ತಮ ವೇದಿಕೆಯಾಗಬಹುದು. ಇತ್ತೀಚೆಗೆ ಬಹಳಷ್ಟು ಜನರು ತಮ್ಮ ತೊಂದರೆ ತಾಪತ್ರಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿವೇದಿಸಿಕೊಳ್ಳುತ್ತಾರೆ. ಆ ವಿಷಯ ಕಾಳ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ಎಲ್ಲೆಡೆ ಪಸರಿಸುತ್ತದೆ. ಅವರಿಗೆ ತಕ್ಷಣವೇ ಪ್ರತಿಕ್ರಿಯಗಳು ದೊರೆಯುತ್ತವೆ. ಸಾಮಾಜಿಕ ಜಾಲತಾಣಗಳಿಂದ ಲಾಭವಷ್ಟೇ ಅಲ್ಲ, ಅದರಿಂದ ಸಾಕಷ್ಟು ಹಾನಿಯೂ ಆಗುತ್ತದೆ. ಪ್ರೈವೆಸಿ ಹೊರಟು ಹೋಗುತ್ತದೆ.

ಸಾಮಾನ್ಯವಾಗಿ ಜನರು ಮುಂಜಾನೆ ಏಳುತ್ತಲೇ ಫೋನ್‌ ನೋಡುತ್ತಾರೆ. ದಿನವಿಡೀ ಫೋನ್‌ ಜೊತೆ ಒಡನಾಟ ಇದ್ದೇ ಇರುತ್ತದೆ. ರಾತ್ರಿ ಕೂಡ ಮಾತುಕತೆ ಮುಂದುವರಿದಿರುತ್ತದೆ. ಒಮ್ಮೆ ಫೇಸ್‌ಬುಕ್‌ ನೋಡುತ್ತಾರೆ. ಇನ್ನೊಮ್ಮೆ ವಾಟ್ಸ್ಆ್ಯಪ್‌ ಚೆಕ್‌ ಮಾಡುತ್ತಾರೆ. ಸ್ಟೇಟಸ್‌ ಜೊತೆಗೆ ತಮ್ಮ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೊಡುತ್ತಾರೆ. ಹೀಗಾಗಿ ನಮಗೆ ಪ್ರೈವೆಸಿ ಎಂಬುದು ಉಳಿಯುವುದೇ ಇಲ್ಲ. ಯಾರೇ ಆಗಲಿ ನಮ್ಮ ಕುರಿತಂತೆ ಸರ್ಚ್‌ ಮಾಡಬಹುದಾಗಿದೆ. ಉದಾಹರಣೆಗಾಗಿ ನಾವು ಎಲ್ಲಿರುತ್ತೇವೆ, ಏನು ಮಾಡುತ್ತೇವೆ, ಯಾರು, ಯಾರು ನಮಗೆ ನಿಕಟರಾಗಿದ್ದಾರೆ. ಹೀಗೆ ಏನೆಲ್ಲ ಮಾಹಿತಿಗಳು ಅಪರಿಚಿತರಿಗೆ ಗೊತ್ತಾಗುವುದು. ನಮ್ಮ ಕುರಿತಾಗಿ ಇಷ್ಟೊಂದು  ವಿವರ ನೀಡುವ ಅವಶ್ಯಕತೆ ಇದೆಯೇ?

ರೋಗಗಳಿಗೆ ಆಹ್ವಾನ

ಸಂಶೋಧನೆಯ ಪ್ರಕಾರ, ಸಾಮಾಜಿಕ ಜಾಲತಾಣಗಳನ್ನು ಬಳಸುವವರು ದಿನಕ್ಕೆ 10-12 ಗಂಟೆ ಅದರಲ್ಲಿಯೇ ಕಳೆಯುತ್ತಾರೆ. ರಾತ್ರಿ ಕೂಡ ಆನ್‌ಲೈನ್‌ನಲ್ಲಿ  ಚ್ಯಾಟ್‌ ಮಾಡುತ್ತಿರುತ್ತಾರೆ. ಸತತ 15-20 ನಿಮಿಷಗಳ ಕಾಲ ಫೋನ್‌ನ್ನು ಚೆಕ್‌ ಮಾಡುತ್ತಿರುವುದರಿಂದ ಕಣ್ಣುಗಳಿಗೆ ಸಾಕಷ್ಟು ಮಟ್ಟಿಗೆ ದಣಿವಾಗುತ್ತದೆ. ಕ್ರಮೇಣ ಮಂದದೃಷ್ಟಿಗೆ ಅದು ಕಾರಣವಾಗಬಹುದು. ಇಡೀ ದಿನ ಸಿಸ್ಟಮ್ ನಲ್ಲಿ ಫೇಸ್‌ಬುಕ್‌ ತೆರೆದುಕೊಂಡು ಕುಳಿತಿರುವುದು ಅಥವಾ ಸ್ಕೈಪ್‌ನಲ್ಲಿ ವಿಡಿಯೋ ಚಾಟ್‌ ಮಾಡುತ್ತಾ ಇರುವುದರಿಂದ ಬೆನ್ನುಮೂಳೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತದೆ.

ಸಮಯ ವ್ಯರ್ಥ

ಎಷ್ಟೋ ಸಲ ನಾವು ನಮ್ಮ ಅತ್ಯಗತ್ಯ ಕೆಲಸ ಬಿಟ್ಟು ಫೋನ್‌ನಲ್ಲಿ ಮೆಸೇಜ್‌ ಚೆಕ್‌ ಮಾಡುತ್ತಾ ಕುಳಿತುಬಿಡುತ್ತೇವೆ. ಸಂದೇಶ ನೋಡುತ್ತ ನೋಡುತ್ತ ಅದು ಯಾವಾಗ ದೀರ್ಘ ಚ್ಯಾಟ್‌ ಮಾಡುತ್ತೇವೆ ಗೊತ್ತೇ ಆಗುವುದಿಲ್ಲ. ಇದರಿಂದಾಗಿ ಸಮಯ ವ್ಯರ್ಥ ಆಗುತ್ತದೆ. ಹೀಗಾಗಿ ಫೋನ್‌ ಬಳಕೆಗೆ ಇತಿಮಿತಿ ಹಾಕಿಕೊಳ್ಳಿ.

ಹಾಳಾಗುತ್ತಿರುವ ಮಕ್ಕಳು

ಮೊದಲು ಮಕ್ಕಳು ಅಜ್ಜಿ-ತಾತನ ಜೊತೆ ಸಮಯ ಕಳೆಯುತ್ತಿದ್ದರು. ಸಂಜೆ ಹೊತ್ತು ತಮ್ಮ ಸ್ನೇಹಿತರೊಂದಿಗೆ ಆಟ ಆಡುತ್ತಿದ್ದರು. ಆದರೆ ಈಗ ಮಕ್ಕಳು ತಮ್ಮಷ್ಟಕ್ಕೆ ತಾವು ಎಂಬಂತೆ ಇರುತ್ತಿದ್ದಾರೆ. ಬೇರಾವ ಚಟುವಟಿಕೆಗೂ ಅವರ ಬಳಿ ಸಮಯವೇ ಇರುವುದಿಲ್ಲ ಎಂಬಂತಾಗಿದೆ. ಉದ್ಯೋಗಸ್ಥ ದಂಪತಿಗಳು ತಮ್ಮ ಮಕ್ಕಳಿಗೆ ಅವಧಿಗೆ ಮುನ್ನವೇ ಕೆಲವು ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಅವರು ಹೆಚ್ಚಿನ ಸಮಯನ್ನು ಮೊಬೈಲ್, ಲ್ಯಾಪ್‌ಟಾಪ್‌ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ಕೆಲವು ಮಕ್ಕಳು ಪೋರ್ನ್ ಮೂವೀಸ್‌ ಕೂಡ ನೋಡುತ್ತಾರೆ. ಅದರ ದುಷ್ಪರಿಣಾಮ ಬಹುಬೇಗ ತಂದೆ ತಾಯಿಯರ ಅರಿವಿಗೆ ಬರುತ್ತದೆ.

– ಎಂ. ಅಶಾಲತಾ

ಸದ್ಬಳಕೆ ಹೇಗೆ?

– ಫೋನ್‌ಗಳ ಬಳಕೆ ಮಿತಗೊಳಿಸಿ.

– ಯಾವಾಗಲೂ ಆನ್‌ಲೈನ್‌ನಲ್ಲಿಯೇ ಇರಬೇಡಿ.

– ಮೊದಲು ಅಗತ್ಯ ಕೆಲಸಗಳನ್ನು ಪೂರೈಸಿ.

– ಕಾಲ್ಪನಿಕ ಸ್ನೇಹಿತರೊಂದಿಗೆ ಕಾಲ ಕಳೆಯುವುದಕ್ಕಿಂತ ನಿಮಗಾಗಿಯೇ ಸ್ವಲ್ಪ ಸಮಯ ಮೀಸಲಟ್ಟುಕೊಳ್ಳಿ. ಅಪರಿಚಿತರು ನಿಮ್ಮ ಅಮೂಲ್ಯ ಸಮಯ ಹಾಳು ಮಾಡುತ್ತಾರೆ.

– ನಿಮ್ಮ ಪ್ರತಿಯೊಂದು ಆಗುಹೋಗುಗಳನ್ನು ಫೇಸ್‌ಬುಕ್‌ನಲ್ಲಿ ಹಾಕಬೇಡಿ. ಅದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.

– ಮೇಲಿಂದ ಮೇಲೆ ಫೋನ್‌ ಚೆಕ್‌ ಮಾಡ್ತಾ ಇರಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ