ಬೆಂಗಳೂರಿನ ಜನನಿಬಿಡ ಅಥವಾ ನಗರದ ಹೃದಯ ಭಾಗವೆನಿಸಿಕೊಂಡಿರುವ ಗಾಂಧಿ ಬಜಾರಿನ ತುಂಬಾ ಬರಿಯ ಜನರೇ ಜನರು. ಆದರೆ ಇವೆಲ್ಲದರ ನಡುವೆ ಅಪರೂಪವೆನಿಸುವಂತೆ ಬಹಳ ದೊಡ್ಡ ಪುರಾತನ ಮನೆಯೊಂದು ನೋಡಲು ನಿಮಗೆ ಸಿಗುತ್ತದೆ. ಗೇಟಿನ ಹೊರ ಭಾಗದಿಂದ ಏನೂ ಗೊತ್ತಾಗುವುದಿಲ್ಲ. ಒಳ ಹೊಕ್ಕೊಡನೆಯೇ ಸಸ್ಯಕಾಶಿಗೇ ಹೋದಂತೆ ಭಾಸವಾಗುತ್ತದೆ.
ಮನೆಯ ಮುಂದೆ ಬೆಳ್ಳನೆಯ ಪುಟ್ಟ ಪುಟ್ಟ ಹೂಗಳು. ಬಿಳುಪನ್ನು ಹೆಚ್ಚಿಸುವ ಎನ್ನುವ ಕಡುಗೆಂಪಿನ ಎಲೆಗಳನ್ನು ಮೈದುಂಬಿಸಿಕೊಂಡ ಸಸ್ಯಗಳು. ಅದರ ಹಿಂಭಾಗಕ್ಕೆ ಗುಲಾಬಿ ಬಣ್ಣದ ಎಲೆಗಳು. ಪಕ್ಕದಲ್ಲಿ ಅವೆಲ್ಲಕ್ಕೂ ತಂಪನ್ನು ಸೂಸುವ ಸ್ವಲ್ಪ ಎತ್ತರದ ಹಸಿರು ಗಿಡಗಳು, ಹಳೆಯ ಕಾಲದ ಅರಮನೆಗಳ ಕಿಟಕಿಗಳನ್ನು ನೆನಪಿಸುವ ಎತ್ತರದ ನಡು ಗೋಡೆ, ಅದರ ಕೆಳ ಭಾಗದಲ್ಲಿ ಸಾಲಾಗಿ ಕಡುಗೆಂಪು ಮತ್ತು ಹಸಿರು ಮಿಶ್ರಿತ ಎಲೆಗಳ ಕುಂಡಗಳು, ಸಮಸ್ತ್ರವನ್ನು ಧರಿಸಿವೆಯೇನೋ ಎಂದು ಭಾಸವಾಗುವಂತೆ ಈ ಕುಂಡಗಳ ಪಕ್ಕಕ್ಕೆ ನಿಂತ ಹಸಿರು ಬಣ್ಣದ ಕ್ಯಾಕ್ಟಸ್‌ನ್ನು ಹೊತ್ತಿರುವ ಸಾಲು ಕುಂಡಗಳು, ಕಾಂಪೌಂಡಿನ ಮೇಲ್ಭಾಗಕ್ಕೆ ಪುಟ್ಟ ಹಸಿರು ಬಾಳೆಯ ಗೊನೆಗಳಂತೆ ತೊನೆದಾಡುವ ಕ್ಯಾಕ್ಟಸ್‌ಗಳು. ಅದರ ಮುಂದಿನ ಕಾಲು ದಾರಿಯ ಪಕ್ಕಕ್ಕೆ ನೆಟ್ಟಗೆ ನಿಂತ ಮರ, ಅದರ ಸುತ್ತಲೂ ಜೋಡಿಸಿಟ್ಟ ಹೂವಿನ ಕುಂಡಗಳು, ತೋಟದ ಬಹು ಭಾಗವನ್ನು ಆಕ್ರಮಿಸಿರುವ ಹಸಿರು ನೆಲ ಹಾಸು, ಅದರ ಉದ್ದಕ್ಕೂ ಕೆಂಪಗೆ ಹೊಳೆಯುತ್ತಾ ನಿಂತ ಗಿಡಗಳು, ಮನೆಯ ಮುಂದೆ ಚಾಮರದಂತಹ ಗಿಡಗಳು, ಮನೆಯೊಡತಿಗೆ ಗಾಳಿಯನ್ನು ಬೀಸುತ್ತಿದೆಯೇನೋ ಎನ್ನುವಂತೆ ಅತ್ತ ಬಾಗಿದೆ. ಸ್ವಲ್ಪ ಮುಂದೆ ಬಂದರೆ ದಟ್ಟ ಹಸಿರು, ಕಡುಗೆಂಪು, ತಿಳಿ ಹಸಿರು ಗಿಡಗಳಿಂದ ಕಂಗೊಳಿಸುವ ಸಸ್ಯಕಾಶಿ.
ಮನೆಯತ್ತ ಸಾಗುವ ಹಾದಿಯಲ್ಲಿ ಯಾವುದೊ ಉದ್ಯಾನವನದಲ್ಲಿ ಸಾಗುತ್ತಿರುವೆವೆಂಬ ಭಾವವನ್ನು ನೀಡುವ ಅಕ್ಕಪಕ್ಕಗಳನ್ನು ತುಂಬಿಕೊಂಡಿರುವ ಬಣ್ಣ ಬಣ್ಣದ ವರ್ಣಿಸಲಸದಳವಾದ ಗಿಡಗಳು ಯಾರೋ ನುರಿತ ಕಲಾವಿದ ಬಣ್ಣಗಳ ಜೊತೆ ಆಟವಾಡುತ್ತಾ ಎಲ್ಲವೂ ಕಣ್ತುಂಬಿಸುವಂತೆ ಮೂಡಿಸಿರುವ ಸಸ್ಯ ಸಮೂಹ. ಆಗಮಿಸುವವರ ಹಾದಿಯಲ್ಲಿ ಅಕ್ಕಪಕ್ಕ ಸ್ವಾಗತ ಹಾಡುತ್ತಿವೆಯೇನೋ ಎನ್ನುವಂತಿರುವ ವರ್ಣರಂಜಿತ ತರುಲತೆಗಳು.
ಈ ಸುಂದರ ತೋಟದಲ್ಲಿ 400ಕ್ಕಿಂತಲೂ ಹೆಚ್ಚು ಸಸ್ಯಗಳಿವೆ. ಸಾಧಾರಣ ಗಿಡಗಳಿಂದ ಹಿಡಿದು ಅತಿ ಅಪರೂಪವೆನಿಸುವ ಗಿಡಗಳಿವೆ. ಉದಾಹರಣೆಗೆ ಆರ್ಕಿಡ್, ಟೆಲಾನ್ಸಿಯಾ ಅಥವಾ ಏರ್‌ಪ್ಲಾಂಟ್ ಎನ್ನುವ ಗಿಡಗಳು ಮತ್ತು ಬೀಜಗಳನ್ನು ಬೇರೆ ಬೇರೆ ದೇಶಗಳಿಂದ ತರಿಸಲಾಗಿದೆ. ಸೌತ್ ಈಸ್ಟ್ ಏಷ್ಯಾದಿಂದ ತರಿಸಿದ ಗಿಡಗಳು ಬಹಳ ಚೆನ್ನಾಗಿ ಬೆಳೆದಿವೆ. ಕೆಲವಂತೂ ಬಹಳ ಸಮೃದ್ಧಿಯಾಗಿ ಬೆಳೆದಿವೆ.
ಕೆಲವು ಸಸ್ಯಗಳು ಪರಿಸರದ ಗಾಳಿಯ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ. ಅಂತಹವುಗಳಲ್ಲಿ ಪೀಸ್ ಲಿಲಿ, ಸ್ಪಾಟಿಫಿಲಮ್, ಟೆಸ್ಟಸ್ ಫ್ಲೈ ಮುಂತಾದ ಗಿಡಗಳು ತೋಟದ ಎಲ್ಲ ಕಡೆಯಲ್ಲೂ ಪಸರಿಸಿವೆ. ಒಳಾಂಗಣದ ತೋಟದಲ್ಲಿ ಆರ್ಕಿಡ್ಸ್ ಮತ್ತು ಆಫ್ರಿಕನ್ ವಲ್ವೆಟ್ ಸಸ್ಯಗಳಿವೆ. ಆಫ್ರಿಕನ್ ವಲ್ವೆಟ್‌ನಿಂದ ಹೊರಸೂಸುವ ವೈಬ್ರೇಶನ್ಸ್ ನಿಂದ ಸುತ್ತಲಿನ ವಾತಾವರಣ ಶಾಂತವಾಗುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.
ಪ್ರತಿ ವರ್ಷ ಲಾಲ್‌ಬಾಗ್ ಪುಷ್ಪ ಪ್ರದರ್ಶನದಲ್ಲಿ ಇವರಿಗೆ ಯಾವಾಗಲೂ ಬಹುಮಾನ ಮೀಸಲು. ಕಳೆದ ಹದಿನೈದು ವರ್ಷಗಳಿಂದ ಹೋಮ್ ಗಾರ್ಡ್‌ನ ವಿಭಾಗದಲ್ಲಿ ಬಹುಮಾನ ಬಂದಿದೆ.