ಕೆಲವು ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಇಡದೆ ಷೇರುಗಳಲ್ಲಿ ಹಾಕುತ್ತಾರೆ. ಆದರೆ ಕಳೆದ ವರ್ಷ ಷೇರು ಮಾರುಕಟ್ಟೆಯ ಏರಿಳಿತ ಜನರ ಮನಸ್ಸಿನಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರಿತು. ಇದು ಸಾಮಾನ್ಯ ಹೂಡಿಕೆದಾರನ ವಿಶ್ವಾಸವನ್ನೇ ಅಲುಗಾಡಿಸಿಬಿಟ್ಟಿತು.
ಬಹಳಷ್ಟು ಹೂಡಿಕೆದಾರರು ತಾವು ಹೂಡಿದ ಮೊತ್ತ ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ನಂಬಿ ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಇಳಿದಿದ್ದರು. ಆದರೆ ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಅಲ್ಲಿಂದ ವಾಪಸ್ಸಾದರು. ಇನ್ನು ಕೆಲವರು ಆತ್ಮಹತ್ಯೆಗೆ ಶರಣಾದ ಉದಾಹರಣೆಗಳು ಕೂಡ ನಮ್ಮ ಕಣ್ಮುಂದೆ ಇವೆ.
ಷೇರು ಮಾರುಕಟ್ಟೆಯ ಈ ದುಸ್ಥಿತಿಯಿಂದಾಗಿ ತಮ್ಮ ಹೂಡಿಕೆ ಮೊತ್ತದ ಮೇಲೆ ಸಾಮಾನ್ಯ ಪ್ರತಿಫಲ ದೊರೆಯುವುದು ಕೂಡ ಕಷ್ಟಕರ ಎನಿಸಿದಾಗ ಹೂಡಿಕೆದಾರರು ತಮ್ಮ ಮೊತ್ತವನ್ನು ಬೇರೆ ಸುರಕ್ಷಿತ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಯೋಚಿಸಲಾರಂಭಿಸಿದರು.
ಕಳೆದ ವರ್ಷವಷ್ಟೇ ದೇಶದ ನಾಲ್ಕನೇ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷ ಬಿ. ರಾಮಲಿಂಗರಾಜು ಕಂಪನಿಯಲ್ಲಿ ಹಣಕಾಸು ಅವ್ಯವಹಾರ ನಡೆಸಿ ರಾಜೀನಾಮೆ ನೀಡಿದರು. ಇದು ಸಾವಿರಾರು ಕೋಟಿ ರೂ.ಗಳ ಅವ್ಯವಹಾರ. ಇದರಲ್ಲಿ ಷೇರು ಹೂಡಿಕೆದಾರರಿಗೆ ಸಾವಿರಾರು ರೂ.ಗಳ ಹಾನಿಯಾಯಿತು. ಈ ಕಂಪನಿಯ ಸಾಮ್ರಾಜ್ಯ ಇಡೀ ವಿಶ್ವದಾದ್ಯಂತ ಪಸರಿಸಿದೆ. ಇದರಲ್ಲಿ 53,000 ಜನರು ಕೆಲಸ ಮಾಡುತ್ತಿದ್ದಾರೆ. ಸುಮಾರು ಒಂದು ದಶಕದ ಮುಂಚೆ ರಾಜು ಹಣಕಾಸು ಬ್ಯಾಂಕಿಂಗ್ ಕಂಪನಿಗಳ ಠೇವಣಿದಾರರ 100 ಕೋಟಿ ರೂ.ಗಳ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಡಿಫಾಲ್ಟರ್ ಆಗಿದ್ದರು. ಈ ಕಂಪನಿಯ ಹೆಸರು ನಾಗಾರ್ಜುನ ಫೈನಾನ್ಸ್. ಅದರ ಚೇರ್‌ಮನ್ ಹೆಸರು ಕೂಡ ಕೆ.ಎಸ್. ರಾಜು. ಇಬ್ಬರೂ ಹೈದರಾಬಾದ್‌ನವರೇ. ಇಬ್ಬರೂ ಕಾರ್ಪೋರೆಟ್ ಜಗತ್ತನ್ನು ನಡುಗಿಸಿಬಿಟ್ಟರು.
ಮೋಸದ ಕಂಪನಿಗಳ ದರ್ಬಾರು
ಷೇರು ಮಾರುಕಟ್ಟೆ ಕರಡಿಯ ಹಿಡಿತಕ್ಕೆ ಅಂದರೆ ಕುಸಿತಕ್ಕೊಳಗಾದದ್ದು ಏಕೆ ಎಂದು ಬಹಳಷ್ಟು ಹೇಳಲಾಗಿದೆ. ಒಬ್ಬ ಸಾಮಾನ್ಯ ಹೂಡಿಕೆದಾರ ತನ್ನ ಹಣವನ್ನು ಹೂಡಿಕೆ ಮಾಡುವಾಗ ಏನು ಮಾಡಬೇಕು, ಏನು ಮಾಡಬಾರದು ಎಂದೆಲ್ಲ ಕಿವಿಮಾತುಗಳನ್ನು ಹೇಳಲಾಗುತ್ತದೆ. ಇನ್ನೊಂದೆಡೆ ಮೋಸದ ಕಂಪನಿಗಳ ದರ್ಬಾರು ಹಾಗೆಯೇ ಮುಂದುವರಿದಿದೆ. ಈ ಕಂಪನಿಗಳ ಧೂರ್ತ ಜನರು ಬಗೆಬಗೆಯ ಆಮಿಷಗಳನ್ನು ಒಡ್ಡಿ ಹಣ ಸಂಗ್ರಹಿಸಿ ರಾತ್ರೋರಾತ್ರಿ ಪಲಾಯನ ಮಾಡುತ್ತಾರೆ. ಇನ್ನು ಕೆಲವು ಕಂಪನಿಗಳು ಕೃತ್ರಿಮ ಏರಿಕೆ ತೋರಿಸಿ ಹಣ ಗಳಿಸುವಲ್ಲಿ ನಿರತರಾಗಿವೆ. ಷೇರು ಮಾರುಕಟ್ಟೆಯ ಏಕೈಕ ನಿಯಂತ್ರಿತ ಸಂಸ್ಥೆ `ಸೆಬಿ' ಅರ್ಥಾತ್‌ಭಾರತೀಯ ಷೇರು ವಿನಿಮಯ ಕೇಂದ್ರ `ತಪ್ಪು ಮಾಡಿ ಮತ್ತು ಆ ತಪ್ಪಿನಿಂದ ಪಾಠ ಕಲಿತುಕೊಳ್ಳಿ' ಎಂಬ ನಿಯಮದನ್ವಯ ಸುಧಾರಣೆ ತರುವಲ್ಲಿ ವ್ಯಸ್ತವಾಗಿದೆ. ಸೆಬಿಯ ಕಾರ್ಯನಿರ್ವಹಣೆಯ ಈ ವ್ಯವಸ್ಥೆಯ ಲಾಭವನ್ನು ಚಾಣಾಕ್ಷ ಕಂಪನಿಗಳ ಪ್ರವರ್ತಕರು ಪಡೆದುಕೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯ ರಕ್ಷಣಾಕರ್ತರ ಪಾತ್ರ ವಹಿಸುವ ಸಂಸ್ಥೆ ಎಲ್ಲಿಯತನಕ ತನ್ನ ತಪ್ಪನ್ನು ಗುರುತಿಸಿ ಅದನ್ನು ನಿವಾರಿಸಿಕೊಳ್ಳುತ್ತೋ, ಅಲ್ಲಿಯತನಕ ಈ ಚಾಣಾಕ್ಷ ಮೋಸಗಾರರು ಹಾಗೆಯೇ ಮೋಸ ಮಾಡುತ್ತಿರುತ್ತಾರೆ.