“ನಮಗೆ ಗೊತ್ತಿರುವ ಕಲೆಯಲ್ಲಿ ನಮಗೆ ವಿಶ್ವಾಸವಿರಬೇಕು. ನಾನು ಅದನ್ನು ಚೆನ್ನಾಗಿ ಮಾಡ್ತೀನಿ ಎಂಬ ಧೈರ್ಯ ನಮಗಿರಬೇಕು,” ಎಂದು ಸಹನಾ ವಿಶ್ವಾಸಪೂರ್ವಕವಾಗಿ ಹೇಳುತ್ತಾರೆ.

ಸಹನಾ ಪಿಂಜಾರ್‌…… ಅಂದು ಬೀದಿ ನಾಟಕಗಳಲ್ಲಿ ಅರಳು ಹುರಿದಂತಹ ಮಾತುಗಳಿಂದ ಗಮನಸೆಳೆಯುತ್ತಿದ್ದ ಪುಟ್ಟ ಹುಡುಗಿ ಇಂದು ಕಲಾವಿದರು ಹೇಗೆ ನಟಿಸಬೇಕು, ರಂಗ ವೇದಿಕೆ ಹೇಗಿರಬೇಕು, ಬೆಳಕಿನ ವಿನ್ಯಾಸ ಹೇಗಿರಬೇಕು, ಧ್ವನಿ ಹೇಗಿದ್ದರೆ ಚೆನ್ನ ಎಂದು ಕರಾರುವಾಕ್ಕಾಗಿ ಹೇಳಿಕೊಡು ತಜ್ಞೆ.

ಕಡುಬಡತನದಿಂದ ಬಂದ ಈ ಹುಡುಗಿಗೆ ಇಷ್ಟೆಲ್ಲ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು? ಇದರ ಹಿನ್ನೆಲೆಯ ಬಗ್ಗೆ ತಡಕಾಡಿದಾಗ ಸದಾ ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ, ಏನನ್ನಾದರೂ ವಿಶಿಷ್ಟವಾದುದನ್ನು ಮಾಡಿ ತೋರಿಸಬೇಕೆಂಬ ಛಲವೇ ಆಕೆಯನ್ನು ಇಂದು ಈ ಮಟ್ಟದಲ್ಲಿ ತಂದು ನಿಲ್ಲಿಸಿದೆ.

ರಂಗ ದೀಕ್ಷೆ

04

ಸಹನಾಳ ಹುಟ್ಟೂರು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಎಚ್‌. ವೀರಾಪುರ. ತಂದೆ ಬಾಲೇಸಾಬ್‌, ತಾಯಿ ಗೌರಿಬೀ. ಊರೂರಿಗೆ ಅಲೆದಾಡಿ ಗಾದಿ ಹಾಕಿಕೊಡು ಕೈಕಸುಬು ಹೊಂದಿದ ಕುಟುಂಬ. ಸಹನಾ ಬಹುಶಃ ಅಲ್ಲಿಯೇ ಇದ್ದಿದ್ದರೆ ಆಕೆ ಸಾಧಾರಣ ಹುಡುಗಿಯಾಗಿಯೇ ಉಳಿಯುತ್ತಿದ್ದರೋ ಏನೋ!

ಸಹನಾರ ತಾಯಿಯ ಊರು ಹೊಸಪೇಟೆ. ತಾಯಿಯ ತಮ್ಮ ಅಂದರೆ ಸೋದರಮಾವ ಅಬ್ದುಲ್ ‌ಪಿಂಜಾರ್‌ ರಂಗಕರ್ಮಿ. ತಮ್ಮ ಮನೆತನದ ಮೂಲ ಉದ್ಯೋಗ ಗಾದಿ ತಯಾರಿಸಿಕೊಡುವುದರ ಜೊತೆಗೆ ಅವರು ಬೀದಿ ನಾಟಕಗಳಿಂದ ಜನಜಾಗೃತಿ ಮಾಡುವುದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಕ್ಕನ ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕೆಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಹೀಗಾಗಿ ಸಹನಾ ಸೇರಿದಂತೆ ಆಕೆಯ ಮೂವರು ಸೋದರರನ್ನೂ ಹೊಸಪೇಟೆಯ ತಮ್ಮ ಮನೆಗೆ ಕರೆತಂದು ಓದಿಸಿದರು.

ಸಹನಾ ಚಿಕ್ಕವರಿದ್ದಾಗಿನಿಂದಲೇ ಬಲು ಮಾತುಗಾತಿ. ಆಕೆಯನ್ನು ತಮ್ಮ ಬೀದಿ ನಾಟಕಗಳಲ್ಲಿ ತೊಡಗಿಸುವುದರ ಮೂಲಕ ಪಿ. ಅಬ್ದುಲ್ ‌ಅವರು ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ವಿಸ್ತರಿಸುತ್ತ ಹೋದರು. `ಹುಡುಗಿ ಓದಲೇಬೇಕು’ ಎಂಬ ಬೀದಿ ನಾಟಕದ ಮೂಲಕ ಈ ಪುಟ್ಟ ಹುಡುಗಿ ಹೊಸಪೇಟೆ ನಾಗರಿಕರ ಗಮನ ಸೆಳೆಯುವಂತಾಯಿತು. ಆಗ ಆಕೆಯ ವಯಸ್ಸು ಕೇವಲ 8 ಮಾತ್ರ.

DSCN3282

ಬೀದಿ ನಾಟಕಗಳು ಜನರಲ್ಲಿ ಅರಿವು ಮೂಡಿಸುತ್ತವೆ. ಅವರಲ್ಲಿನ ಮೂಢನಂಬಿಕೆ ನಿವಾರಿಸಲು ನೆರವಾಗುತ್ತವೆ ಎಂಬ ಸ್ಪಷ್ಟ ಕಲ್ಪನೆ ಅಬ್ದುಲ್ ಅವರಿಗಿತ್ತು. ಹೊಸ ಹೊಸ ವಿಷಯಗಳನ್ನಿಟ್ಟುಕೊಂಡ ಬೀದಿ ನಾಟಕಗಳಿಂದ ಅವರು ಹೊಸಪೇಟೆಯಲ್ಲಷ್ಟೇ ಅಲ್ಲ, ಇಡೀ ಬಳ್ಳಾರಿ ಜಿಲ್ಲೆಯಾದ್ಯಂತ ವಿಶಿಷ್ಟ ಕ್ರಾಂತಿಯನ್ನೇ ಮಾಡಿದ್ದಾರೆ.

ಭಾವೈಕ್ಯತಾ ವೇದಿಕೆಯಡಿ `ಕಾಲರಾ,’ `ನಾವು ಮನುಜರು,’ `ಈ ನೆಲ ಈ ಜಲ,’ `ಅರಿವು,’ `ಜೀತ ಪದ್ಧತಿ,’ `ಚುನಾವಣೆ,’ `ದಹನ,’ `ಬಂದರು ಬಂದರು,’ `ನೆರವು,’ `ಕಳ್ಳಕಳ್ಳ ಎಚ್ಚರಿಕೆ,’ `ಓ ಮತದಾರ ಪ್ರಭುವೆ,’ `ಮಗಳು ಮಾತನಾಡಿದಳು’ ಮುಂತಾದ ಅನೇಕ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಸಹನಾ ಈ ನಾಟಕಗಳಲ್ಲಿ ಒಂದು ಸಾಮಾನ್ಯ ಪಾತ್ರವೇ ಆಗಿದ್ದರೂ ತನ್ನ ಅಭಿನಯ ಚಾತುರ್ಯ ಹಾಗೂ ಮಾತುಗಳಿಂದ ಎಲ್ಲರ ಗಮನಸೆಳೆಯುತ್ತಿದ್ದರು. ಈ ಪುಟ್ಟ ಬಾಲೆಗೆ ಮಾವ ಅಬ್ದುಲ್ ‌ಒಂದು ರೀತಿಯಲ್ಲಿ ರಂಗದೀಕ್ಷೆಯನ್ನೇ ಕೊಟ್ಟುಬಿಟ್ಟಿದ್ದರು.

ಬೀದಿ ನಾಟಕಗಳು ಹಾಗೂ ಸಾಮಾಜಿಕ ಚಟುವಟಿಕೆಗಳಿಂದಾಗಿ ಅವಿವಾಹಿತರಾಗಿದ್ದ ಪಿ. ಅಬ್ದುಲ್ ‌ಅವರಿಗೆ ಕನ್ನಡದ ಅನೇಕ ರಂಗಕರ್ಮಿಗಳ ಪರಿಚಯವಿತ್ತು. ಅವರು ಆಗಾಗ ಅವರ ಬಳಿ ಹೋಗಿ ಸಲಹೆ ಸೂಚನೆ ಪಡೆದು ತಮ್ಮ ಬೀದಿನಾಟಕಗಳಿಗೆ ಆಧುನಿಕತೆಯ ಸ್ಪರ್ಶ ನೀಡುವುದರ ಮೂಲಕ `ಸಮಕಾಲೀನ ರಂಗಕರ್ಮಿ’ ಎನಿಸಿಕೊಂಡಿದ್ದರು. ಅವಕಾಶ ಸಿಕ್ಕಾಗೆಲ್ಲ ಸಹನಾರಿಗೂ ಅವರ ಪರಿಚಯ ಮಾಡಿಸಿದರು.

ಸಿ. ಬಸವಲಿಂಗಯ್ಯ ಅವರ ಬಳಿ ದೈಹಿಕ ಚಲನೆ, ಧ್ವನಿ ಏರಿಳಿತ, ನಡಿಗೆಯ ಬಗ್ಗೆ ತರಬೇತಿ, ಸಿ.ಜಿ.ಕೆ. ಅವರ ಬಳಿ 20 ದಿನದ ತರಬೇತಿ ಸಹನಾರ ಅಭಿನಯಕ್ಕೆ ಮತ್ತಷ್ಟು ರೂಪುಕೊಟ್ಟಿತು. ಸಿಜಿಕೆ ನಿರ್ದೇಶಿಸಿದ `ಅಲ್ಲೇ ಇದ್ದರು’ ನಾಟಕದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.

ವಾಸ್ತವದ ಪಾಠ

06

 

ರಂಗತಜ್ಞರಿಂದ ಸಹನಾಗೆ ತರಬೇತಿ ಕೊಡಿಸುವುದರ ಜೊತೆ ಜೊತೆಗೆ, ಅವರು ತಮ್ಮ ಬೀದಿ ನಾಟಕದ ಕಲಾವಿದರಿಗೆ ವಾಸ್ತವ ಜೀವನದ ಮುಖಾಮುಖಿ ಕೂಡ ಮಾಡಿಸುತ್ತಿದ್ದರು. ಒಂದು ಬೀದಿ ನಾಟಕದಲ್ಲಿ ಸಹನಾಗೆ ಕಸಗುಡಿಸುವ ಮಹಿಳೆಯ ಪಾತ್ರ ಮಾಡಬೇಕಿತ್ತು. ಅದಕ್ಕೆ ಅವರ ಮಾವ ಆಕೆಯನ್ನು ಬೆಳಬೆಳಗ್ಗೆ ನಗರದ ಬೀದಿ ಬದಿ ಕರೆದುಕೊಂಡು ಹೋಗಿ ಕಸಗುಡಿಸುವವರ ಚಟುವಟಿಕೆ, ಅವರ ಭಾವಭಂಗಿಯ ದರ್ಶನ ಮಾಡಿಸುತ್ತಿದ್ದರು. ಹಮಾಲಿಯೊಬ್ಬನ ಪಾತ್ರದ ಬಗ್ಗೆ ಅರಿತುಕೊಳ್ಳಲು ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಆ ವ್ಯಕ್ತಿಯ ಆಗಿನ ಮುಖ ಭಾವನೆ, ದೇಹ ಚಲನೆಯ ಬಗ್ಗೆ ಎಳೆಎಳೆಯಾಗಿ ವಿವರಿಸುತ್ತಿದ್ದರು.

ನೀನಾಸಂ ಪ್ರವೇಶ

10

ಪಿ. ಅಬ್ದುಲ್ ‌ಅವರಿಗೆ ನೀನಾಸಂನ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ಅವರೊಂದಿಗೂ ಸಂಪರ್ಕವಿತ್ತು. ಒಂದು ಸಲ ಸುಬ್ಬಣ್ಣನವರು ಹಂಪಿ ಕನ್ನಡ ವಿ.ವಿ.ಗೆ ಭೇಟಿ ನೀಡಲು ಬಂದಿದ್ದಾಗ ಹಾಗೆಯೇ ಹೊಸಪೇಟೆಗೂ ಬಂದು ಪಿ. ಅಬ್ದುಲ್ ಅವರ ಚಟುವಟಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

“ಭಾವೈಕ್ಯತಾ ವೇದಿಕೆಯ ಕೆಲವರು ನಿಮ್ಮ ನೀನಾಸಂನಲ್ಲಿ ತರಬೇತಿ ಪಡೆಯಲು ಇಚ್ಛಿಸುತ್ತಿದ್ದಾರೆ, ಅವಕಾಶ ದೊರಕಬಹುದೆ?” ಎಂದು ಅಬ್ದುಲ್ ‌ಸುಬ್ಬಣ್ಣನವರನ್ನು ಕೇಳಿದ್ದರು. ನೀನಾಸಂನಲ್ಲಿ ಪ್ರವೇಶ ಪ್ರಕ್ರಿಯೆ, ಸಂದರ್ಶನಗಳೆಲ್ಲ ಮುಗಿದು ಹೋಗಿದ್ದವು. ಆದರೂ ಕೆ.ವಿ. ಸುಬ್ಬಣ್ಣನವರು, “ಯಾರನ್ನಾದರೂ ಒಬ್ಬರನ್ನು ಕಳಿಸಬಹುದು,” ಎಂದು ಹೇಳಿದ್ದರು. ಒಂದೆರಡು ದಿನಗಳಲ್ಲೇ ಸಹನಾ ನೀನಾಸಂ ಅಂಗಳದಲ್ಲಿದ್ದರು. ಅಲ್ಲಿ ಪ್ರವೇಶ ಪಡೆದವರು ಬಹುತೇಕ ಪದವೀಧರರು. ಆದರೆ ಸಹನಾ ಮಾತ್ರ ಪ್ರಥಮ ಪಿಯುಸಿ ಮುಗಿಸಿದ್ದ ಅತ್ಯಂತ ಕಿರಿಯ ವಿದ್ಯಾರ್ಥಿನಿ.

ನೀನಾಸಂಗೆ ಹೋದ ಬಳಿಕವೇ ಸ್ಟೇಜ್‌ ನಾಟಕಗಳು ಹೇಗಿರುತ್ತವೆ, ನಾಟಕವೊಂದಕ್ಕೆ ಸಾಹಿತ್ಯ ಎಷ್ಟು ಮುಖ್ಯವೋ, ಅದರ ಜೊತೆಗೆ ಕಲಾವಿದರ ಶಬ್ದಗಳ ಉಚ್ಚಾರ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎನ್ನುವುದು ಗೊತ್ತಾಯಿತು.

ಅಲ್ಲಿ ಸಹನಾಗೆ `ಬಿರುಕು,’ `ಹಂಸ ದಮಯಂತಿ,’ `ಸ್ಮಶಾನ ಕುರುಕ್ಷೇತ್ರ,’ `ವೆನಿಸ್‌ನ ವರ್ತಕ,’ `ಅಂಧೇರಿ ನಗರ ಚೌಪಟ್‌ ರಾಜಾ’ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರಕಿತು. ತರಬೇತಿಯ ಬಳಿಕ ಅವರು ಒಂದು ವರ್ಷ `ನೀನಾಸಂ ತಿರುಗಾಟ’ದ ಜೊತೆಗೂ ಇದ್ದರು. `ಥ್ರೀ ಸಿಸ್ಟರ್ಸ್’ ನಾಟಕದಲ್ಲಿನ ಪಾತ್ರ ಸಹನಾಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ಮಾದರಿ ಸೃಜನಶೀಲತೆ

3

ನೀನಾಸಂ ಬಳಿಕ ಸಹನಾ ಪುನಃ ಹೊಸಪೇಟೆಯ ತಮ್ಮ ಮಾನವ `ಭಾವೈಕ್ಯತಾ ವೇದಿಕೆ’ಯ ಬೀದಿ ನಾಟಕಗಳಲ್ಲಿ ತೊಡಗಿಕೊಂಡರು. ಜೊತೆಗೆ ಅರ್ಧಕ್ಕೆ ನಿಂತಿದ್ದ ಕಾಲೇಜು ವಿದ್ಯಾಭ್ಯಾಸವನ್ನೂ ಮುಂದುವರಿಸಿದರು.

ಥಿಯಾಸಫಿಕ್‌ಮನ್ಸ್ ಕಾಲೇಜಿನ ಪದವಿ ತರಗತಿಗೆ ಸೇರಿದ ಬಳಿಕ ಅವರ ನಿರ್ದೇಶನ ಹಾಗೂ ಮುಖಂಡತ್ವದ ಗುಣಗಳು ಹೊರಹೊಮ್ಮಿದವು. ಇವರ ನೇತೃತ್ವದಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರು ವಿಜಾಪುರ ಮಹಿಳಾ ವಿವಿಯ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಾಲೇಜಿಗೆ 8 ಪ್ರಥಮ ಬಹುಮಾನಗಳನ್ನು ತಂದರು. ಇದು ಸಹನಾರ ಕುಶಲ ನೇತೃತ್ವಕ್ಕೊಂದು ಸಾಕ್ಷಿ. ಈ ಮಧ್ಯೆ ಸಹನಾ ಶಾಲೆಯೊಂದರಲ್ಲಿ `ಡ್ರಾಮಾ ಟೀಚರ್‌’ ಆಗಿಯೂ ನೇಮಕಗೊಂಡರು. ಅರೆಕಾಲಿಕ ಹುದ್ದೆಯಲ್ಲಿದ್ದ ಅವರಿಗೆ ಹೇಳಿಕೊಳ್ಳುವಂತಹ ಸಂಬಳವೇನೂ ಇರದಿದ್ದರೂ ತಮ್ಮ ಸಾಮರ್ಥ್ಯ, ಸೃಜನಶೀಲತೆ ತೋರಿಸಲು ಅವರಿಗೆ ಅದೊಂದು ಒಳ್ಳೆಯ ವೇದಿಕೆಯಾಯಿತು.

ಮಕ್ಕಳಲ್ಲಿ ಹುದುಗಿರುವ ಕಲೆಯನ್ನು ಹೊರಹೊಮ್ಮಿಸಲು ಸಹನಾ ಹಾಗೂ ಇತರರು ಪ್ರತಿವರ್ಷ ಹೊಸಪೇಟೆಯಲ್ಲಿ ಬೇಸಿಗೆ ಶಿಬಿರ ಕೂಡ ನಡೆಸುತ್ತಿದ್ದಾರೆ.

ಎನ್‌ಎಸ್‌ಡಿ ಒಲವು

ಬೇರೆ ಬೇರೆ ರಂಗಕರ್ಮಿಗಳು ಹಾಗೂ ನೀನಾಸಂನಿಂದ ತರಬೇತಿ ಪಡೆದ ಬಳಿಕ ಆಕೆಗೆ ರಾಷ್ಟ್ರೀಯ ನಾಟಕ ಶಾಲೆ ಸೇರಬೇಕೆನ್ನುವ ತುಡಿತ ಹೆಚ್ಚಾಯಿತು. ಆಗಾಗ ದೆಹಲಿ ಹಾಗೂ ಉತ್ತರ ಭಾರತದ ವಿವಿಧೆಡೆ ನಡೆಯುತ್ತಿದ್ದವು `ಎನ್‌ಎಸ್‌ಡಿ ಫೆಸ್ಟಿವಲ್‌’ಗೆ ಸಹನಾ ಸೇರಿದಂತೆ ಮನೆಯ ಇತರರನ್ನು ಕೂಡ ಪಿ. ಅಬ್ದುಲ್ ‌ಕರೆದುಕೊಂಡು ಹೋಗುತ್ತಿದ್ದರು.

ಅಲ್ಲಿಗೆ ಹೋಗಿ ಬಂದ ಬಳಿಕ ಎನ್‌ಎಸ್‌ಡಿ ಸೇರಲೇಬೇಕೆಂಬ ಅವರ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. ಮೊದಲ ಸಂದರ್ಶನದಲ್ಲೇನೋ ಅವರು ಪಾಸಾದರು. ಆದರೆ ದ್ವಿತೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಆದರೂ ಛಲಬಿಡದೆ ಸಹನಾ ದೆಹಲಿಯ ಹೆಸರಾಂತ ರಂಗಕರ್ಮಿ ಸಪ್ಧರ್‌ ಹಶ್ಮಿ ಅವರನ್ನು ಭೇಟಿಯಾಗಿ ಅವರಿಂದ 20 ದಿನದ ಕಠಿಣ ತರಬೇತಿ ಪಡೆದುಕೊಂಡರು. ಇದು ಮರುವರ್ಷ ಅವರಿಗೆ ಎನ್‌ಎಸ್‌ಡಿ ಸೇರಲು ಅನುಕೂಲ ವಾತಾವರಣವನ್ನೇ ಸೃಷ್ಟಿಸಿತು.

ಎನ್‌ಎಸ್‌ಡಿ ಸಹನಾರಲ್ಲಿದ್ದ ಪ್ರತಿಭೆಯನ್ನು ಹೊರಹೊಮ್ಮಿಸಲು ಸಹಕಾರಿಯಾಯಿತು. ಅಭಿನಯದ ಜೊತೆ ಜೊತೆಗೆ ಅವರು ಅಲ್ಲಿ ಡಿಸೈನ್‌ ಮತ್ತು ಡೈರೆಕ್ಷನ್‌ ಬಗ್ಗೆ ಹೆಚ್ಚಿಗೆ ತಿಳಿದುಕೊಂಡರು.

ತರಬೇತಿ ಬಳಿಕ ಸಹನಾ ಚಂಡೀಗಢದಲ್ಲಿ `ಜನ್ನತ್‌ ಮಹಲ್’ ಎಂಬ ನಾಟಕ ನಿರ್ದೇಶಿಸಿ ರಂಗಕರ್ಮಿಗಳು ಹಾಗೂ ಪತ್ರಿಕೆಗಳಿಂದ ಮುಕ್ತ ಪ್ರಶಂಸೆಗೆ ಪಾತ್ರರಾದರು. `ಜನ್ನತ್‌ ಮಹಲ್’ನ ಅರ್ಧ ನಾಟಕ ಬುರ್ಖಾದೊಳಗಡೆಯೇ ನಡೆಯುತ್ತದೆ. ಪ್ರೇಕ್ಷಕ ಬುರ್ಖಾದ ಪರದೆಯಿಂದಲೇ ಅದನ್ನು ನೋಡುತ್ತಿರುವಂತೆ ವಿಶೇಷ ವಿನ್ಯಾಸ ಮಾಡಿದ್ದುದು ಸಹನಾರ ಅದ್ಭುತ ವಿನ್ಯಾಸಕ್ಕೊಂದು ಸಾಕ್ಷಿ. ಎನ್‌ಎಸ್‌ಡಿ ತಂಡದೊಂದಿಗೆ ಸಹನಾ ಚೀನಾದ ಬೀಜಿಂಗ್‌ನಲ್ಲಿ ನಡೆದ ನಾಟಕೋತ್ಸವಕ್ಕೂ ಭೇಟಿ ನೀಡಿದ್ದರು. ಅಲ್ಲಿನ ರಂಗ ಚಟುವಟಿಕೆಗಳು, ವಿದ್ಯಾರ್ಥಿಗಳ ಕಲಾ ನೈಪುಣ್ಯತೆಯನ್ನು ಅರಿತುಕೊಳ್ಳಲು ಅವರಿಗೆ ಉತ್ತಮ ಅವಕಾಶ ದೊರಕಿತು.

ಎನ್‌ಎಸ್‌ಡಿಯಿಂದ ವಾಪಸ್ಸಾದ ಬಳಿಕ ಅವರು ಬೆಂಗಳೂರಿನ ಅದರ ಪ್ರಾದೇಶಿಕ ಕೇಂದ್ರದಲ್ಲಿ ಆರು ತಿಂಗಳ ಕಾಲ `ಕ್ಲಾಸ್‌ ಕೋ ಆರ್ಡಿನೇಟರ್‌’ ಆಗಿ ಕಾರ್ಯ ನಿರ್ವಹಿಸಿದರು. ಎನ್‌ಎಸ್‌ಡಿ ಅವರಲ್ಲಿನ ನಿರ್ದೇಶನದ ನೈಪುಣ್ಯತೆ, ರಂಗವಿನ್ಯಾಸ ಹಾಗೂ ಬೆಳಕಿನ ವಿನ್ಯಾಸದ ಬಗೆಗಿನ ಕಲ್ಪನೆಯನ್ನು ಹೊರಹೊಮ್ಮಿಸಲು ಸಹಾಯ ಮಾಡಿತು. ಅವರ ಇದೇ ವೈಶಿಷ್ಟ್ಯತೆ ಚೆನ್ನೈನ `ನಿಗ್‌ ಥಿಯೇಟರ್‌’ನ ನಟ ಷಣ್ಮುಖ ರಾಜ್‌ ಅವರ ಗಮನ ಸೆಳೆಯಿತು. ಅವರ ಥಿಯೇಟರ್‌ನಲ್ಲಿ ಅಭಿನಯಿಸಲ್ಪಡುವ ನಾಟಕಗಳಿಗೆ ಸೆಟ್‌ ಡಿಸೈನ್ಸ್, ಬೆಳಕಿನ ವಿನ್ಯಾಸ ಕೈಗೊಂಡು ಅವರಿಂದ ಪ್ರಶಂಸೆಗೆ ಪಾತ್ರರಾದರು. ಅವರು ಈಗಲೂ ಚೆನ್ನೈಗೆ ಮೇಲಿಂದ ಮೇಲೆ ಹೋಗಿ ತಮ್ಮ ಹೊಸ ಹೊಸ ಕಲ್ಪನೆಗಳನ್ನು ಅನುಷ್ಠಾನಕ್ಕೆ ತರುತ್ತಿರುತ್ತಾರೆ.

ಎನ್‌ಎಸ್‌ಡಿಯಿಂದ ತರಬೇತಿ ಪಡೆದು ಅವರು ಉನ್ನತ ಹುದ್ದೆಯನ್ನೇ ಪಡೆಯಬಹುದಿತ್ತು. ಆದರೆ ಅವರು ಹೊಸಪೇಟೆಯ ನಂಟು ಬಿಡಲಿಚ್ಛಿಸದೆ ಭಾವೈಕ್ಯತಾ ವೇದಿಕೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ.

`ರಂಗತಂತ್ರಗಳ ಮೂಲಕ ಶಿಕ್ಷಣ’ ನೀಡುವ ವಿಶಿಷ್ಟ ಶಾಲೆಯೊಂದನ್ನು ತೆರೆಯಬೇಕೆನ್ನುವ ಹಂಬಲ ಅವರಿಗಿದೆ. ರಂಗಾಸಕ್ತ ಯುವಕ ಯುವತಿಯರ ಹೊಸ ತಂಡ ಕಟ್ಟಿ ಸಾಮಾಜಿಕ ಸಂದೇಶ ನೀಡುವ ವಿಶಿಷ್ಟ ನಾಟಕಗಳನ್ನು ನಿರ್ದೇಶನ ಮಾಡಬೇಕೆಂಬ ಆಸೆ ಕೂಡ ಇದೆ.

ನಾವು ನಿಂತ ನೀರಾಗಬಾರದು

“ನಮಗೆ ಗೊತ್ತಿರುವ ಕಲೆಯಲ್ಲಿ ನಮಗೆ ನಂಬಿಕೆ ಇರಬೇಕು. ನಾನು ಅದನ್ನು ಚೆನ್ನಾಗಿ ಮಾಡ್ತೀನಿ ಎಂಬ ಧೈರ್ಯ ನಮಗಿರಬೇಕು. ನಾವು ಎಂದೂ ನಿಂತ ನೀರಾಗಬಾರದು. ಸಮಯದ ಸದುಪಯೋಗ ಮಾಡಿಕೊಂಡು ನಮ್ಮಲ್ಲಿರುವ ಕಲೆಯನ್ನು ಹೊರ ಹೊಮ್ಮಿಸಲು ಪ್ರಯತ್ನಿಸಬೇಕು. ಯಾವುದೇ ಒಂದು ಕಲೆಯನ್ನು ಪ್ರೊಫೆಶನಲ್ ಆಗಿ ತೆಗೆದುಕೊಂಡಾಗ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ,” ಎಂದು ಸಹನಾ ಮಹಿಳೆಯರಿಗೆ ಕಿವಿಮಾತು ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ