ಶತಶತಮಾನಗಳಿಂದ ಜಗತ್ತು ಮಹಿಳೆಯರನ್ನು ಸಪ್ತ ಪರದೆಗಳ ಹಿಂದೆ ಬಚ್ಚಿಟ್ಟು, ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟಿತ್ತು. ಅವಳ ಮೇಲೆ ಸತತ ನಿಗಾ ಇಡಲಾಯಿತು. ಏಕೆಂದರೆ ಸಮಾಜ ಹಾಕಿದ ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಆಕೆ ಉಲ್ಲಂಘಿಸುತ್ತಿದ್ದಾಳೆಯೇ ಎಂದು ಕಂಡುಕೊಳ್ಳಲು ಪುರುಷ ಅವಳಿಗಾಗಿ ಪ್ರತಿಯೊಂದು ಕಡೆ ಗಡಿರೇಖೆ ಎಳೆದ. ಅವಳ ದೇಹ ಹಾಗೂ ಮನಸ್ಸಿಗೆ ಯಾವಾಗ ಯಾವ ವಸ್ತುವಿನ ಅವಶ್ಯಕತೆ ಇದೆ, ಅದನ್ನು ಎಷ್ಟರಮಟ್ಟಿಗೆ ಕೊಡಬೇಕು ಎನ್ನುವುದನ್ನು ಪುರುಷ ತನ್ನ ಅಗತ್ಯಕ್ಕನುಗುಣವಾಗಿ ನಿರ್ಧರಿಸಿದ. ಆದರೆ ಎಲ್ಲಕ್ಕೂ ಒಂದು ಇತಿಮಿತಿ ಎನ್ನುವುದು ಇದ್ದೇ ಇರುತ್ತದೆ. ಈ ಒತ್ತಡ ಹುದುಗಿಸಿಡುವುದು ಕೊನೆಗೊಮ್ಮೆ ನಿಲ್ಲಲೇಬೇಕಿತ್ತು.
ಶಿಕ್ಷಣ ಅವಳಲ್ಲಿ ಬಲ ತುಂಬಿತು. ಪ್ರಜಾಪ್ರಭುತ್ವ ಅವಳಿಗೆ ನೆಲೆ ನಿಲ್ಲಲು ಅವಕಾಶ ಕೊಟ್ಟಿತು. ಯೋಚನೆ, ವಿಚಾರ ಮಾಡುವ ಹಾಗೂ ತನ್ನ ಹಕ್ಕುಗಳ ಬಗ್ಗೆ ಅರಿತುಕೊಳ್ಳಲು ಅವಕಾಶ ಕೊಟ್ಟಿತು. ಕಳೆದ ಹಲವು ದಶಕಗಳಲ್ಲಿ ಮಹಿಳೆ ಬಂಡೆದ್ದು ಇಲ್ಲಿ ಮನೆಯ ಪರಿಸ್ಥಿತಿಗಳಿಂದ ರೋಸಿ ಹೋಗಿ, ಅನಿವಾರ್ಯ ಪರಿಸ್ಥಿತಿಗಳಿಂದ ಆರ್ಥಿಕವಾಗಿ ಸ್ಥಿರತೆ ಕಂಡುಕೊಳ್ಳಲು ನಾಲ್ಕು ಗೋಡೆಗಳಿಂದ ಹೊರಗೆ ಹೆಜ್ಜೆ ಹಾಕಿದಳು. ಕಳೆದ 2 ದಶಕಗಳಲ್ಲಿ ಆರ್ಥಿಕ ಬಲವರ್ಧನೆಯ ಜೊತೆಗೆ ವೈಚಾರಿಕವಾಗಿ ಸಾಕಷ್ಟು ಗಟ್ಟಿಗಳಾದಳು. ಅವಳಿಗೆ ತನ್ನ ಕಾಯದಿಂದಲ್ಲ, ವ್ಯಕ್ತಿಯ ರೂಪದಲ್ಲಿ ಒಂದು ಗುರುತು ಸಿಕ್ಕಿತು.
ಸಂಕೋಲೆಗಳಿಂದ ಮುಕ್ತ ನಾರಿ ದೇಹ
ಇಂದಿನ ಮಹಿಳೆ ತನ್ನಿಚ್ಛೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುವುದಿಲ್ಲ. ಅವಳು ಏನಾದರೂ ಹೆಚ್ಚೂ ಕಡಿಮೆಯಾದರೆ ಅದರ ಪರಿಣಾಮ ಎದುರಿಸಲು ಸಿದ್ಧಳಿದ್ದಾಳೆ. ಅವಳು ತನ್ನ ವ್ಯಕ್ತಿತ್ವ ಹಾಗೂ ತಿಳಿವಳಿಕೆಯಿಂದ ಈವರೆಗೆ ಮಹಿಳೆಯರಿಗೆ ತೆರೆಯದೇ ಇದ್ದ ಬಾಗಿಲುಗಳನ್ನು ತನಗಾಗಿ ತೆರೆಯುತ್ತಿದ್ದಾಳೆ. ಎಲ್ಲಕ್ಕೂ ದೊಡ್ಡ ಕ್ರಾಂತಿ ದೈಹಿಕ ಮಟ್ಟದಲ್ಲಿ ಬಂದಿದೆ. ಸ್ತ್ರೀ ದೇಹದ ಮೇಲೆ ತನ್ನದೇ ಹಕ್ಕು ಎಂದು ಪ್ರತಿಪಾದಿಸುತ್ತ ಬಂದಿದ್ದ ಪುರುಷನ ದೃಷ್ಟಿಯ ಸಂಕೋಲೆಗಳಿಂದ ಅವಳು ತನ್ನ ದೇಹವನ್ನು ಮುಕ್ತಗೊಳಿಸಿಕೊಂಡಿದ್ದಾಳೆ. ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳು ಅವಳ ದೇಹವನ್ನು ಗಟ್ಟಿಯಾಗಿ ಬಂಧಿಸಿಬಿಟ್ಟಿದ್ದ. ಅವನ್ನು ಅವಳು ಕಿತ್ತು ಬಿಸಾಡಿದ್ದಾಳೆ. ಅವಳು ತನ್ನ ದೈಹಿಕ ಅವಶ್ಯಕತೆಗಳಿಗಾಗಿ ಮುಕ್ತವಾಗಿ ಚರ್ಚಿಸಬಲ್ಲಳು. ಮೊದಲು ಮಹಿಳೆ ತನ್ನ ಇಚ್ಛೆಗಳನ್ನು ಪ್ರಕಟಪಡಿಸಲೂ ಸಂಕೋಚಪಡುತ್ತಿದ್ದಳು. ಅವಳೀಗ ತನಿಚ್ಛೆಯಂತೆ ಬೆಡ್ ಮೇಲೆ ಪುರುಷನನ್ನು ಬೆರಗುಗೊಳಿಸಬಲ್ಲಳು.
ಮದುವೆಗೂ ಮುನ್ನ ಒಪ್ಪಿಗೆಯ ಸೆಕ್ಸ್ ಗೂ ಅವಳಲ್ಲಿ ಯಾವುದೇ ಹಿಂದೇಟು ಉಳಿದಿಲ್ಲ. ಈ ಹೊಸ ಉನ್ಮುಕ್ತ ಸ್ತ್ರೀಯ ಚಲನವಲನಗಳು ಕೆಲವು ದಶಕಗಳ ಮುಂಚೆಯೇ ದಾಖಲಾಗಲು ಶುರುವಾಗಿದ್ದ. ವಿವಾಹದ ಅಸಮಾನ ಸ್ಥಿತಿಗಳಲ್ಲಿ ಬಂಧಿ, ನೈತಿಕ ದ್ವಂದ್ವಗಳಿಗೆ ಉತ್ಸಾಹ, ಅಪರಾಧಪ್ರಜ್ಞೆಯ ಒತ್ತಡದಿಂದ ಹೊರಬಂದು ಈಗ ಒಬ್ಬ ಹೊಸ ಸ್ತ್ರೀಯ ಪಾದಾರ್ಪಣೆ ಆಗಿಬಿಟ್ಟಿದೆ. ಅವಳು ತನ್ನ ಭವಿಷ್ಯವನ್ನು ತಾನೇ ಬರೆದುಕೊಳ್ಳುತ್ತಿದ್ದಾಳೆ. ತನಗೆ ಬೇಕಾದ ರೀತಿಯ ಪೋಷಾಕು ಧರಿಸಿ ತಡರಾತ್ರಿಯ ಪಾರ್ಟಿಗಳಿಗೂ ಅಟೆಂಡ್ ಆಗುತ್ತಿದ್ದಾಳೆ. ದೊಡ್ಡ ದೊಡ್ಡ ಕನಸು ಕಂಡು ಅವನ್ನು ಈಡೇರಿಸಿಕೊಳ್ಳುವ ಶಕ್ತಿ ಕೂಡ ಹೊಂದಿದ್ದಾಳೆ.