ರವಿ ಕಾಣದ್ದನ್ನು ಕವಿ ಕಾಣುತ್ತಾನೆ, ಕವಿ ಕಾಣದ್ದನ್ನು ಕಲಾವಿದ ನೋಡುತ್ತಾನೆ,' ಎನ್ನುವುದು ಜನಪ್ರಿಯ ನಾಣ್ಣುಡಿ. ಕಲಾವಿದ ಎಂದರೆ ಕೇವಲ ನಟನೆ ಮಾಡುವವರಷ್ಟೇ ಆಗಿರಬೇಕಾಗಿಲ್ಲ. ಚಿತ್ರ ರಚನೆ, ಕರಕುಶಲ ಕಲಾವಿದರೂ ಆಗಿರಬಹುದು. ಅವರ ಕಣ್ಣಿಗೆ ಸಿಕ್ಕಿದ ವಸ್ತುವಿನಿಂದಲೇ ಅವರು ಅಪೂರ್ವವಾದ ಇನ್ನೊಂದು ವಸ್ತುವಿನ ಸೃಷ್ಟಿಯನ್ನು ಮಾಡಬಲ್ಲರು. ಉಪಯೋಗಕ್ಕೆ ಬಾರದ ಕಾಗದ, ಬಟ್ಟೆ, ಕಾರ್ಡ್‌ಬೋರ್ಡ್‌, ಪ್ಲಾಸ್ಟಿಕ್‌ ಹಾಳೆ ಏನೇ ಇದ್ದರೂ ಇಂತಹ ಕಲಾವಿದರ ಕೈಯಲ್ಲಿ ಸಿಕ್ಕರೆ ನಾವು ಊಹಿಸಲು ಅಸಾಧ್ಯವಾದ ರೂಪ ಹೊಂದಿ ಅಚ್ಚರಿ ಮೂಡಿಸುತ್ತವೆ. ನಮ್ಮ ನಡುವೆ ಇಂದಿಗೂ ಅಂತಹ ಕುಶಲ ಕಲಾವಿದರು ಸಾಕಷ್ಟು ಸಂಖ್ಯೆ ಯಲ್ಲಿದ್ದಾರೆ. ಅಂತಹವರಲ್ಲಿ ಬೆಂಗಳೂರಿನ ಕೆಂಗೇರಿ ಉಪಗನಗರದಲ್ಲಿ ವಾಸವಾಗಿರುವ ತೇಜೋವತಿ ಆಚಾರ್ಯ ಒಬ್ಬರು.

ಚಿಕ್ಕ ವಯಸ್ಸಿನಿಂದಲೇ ತಮಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಉಪಯೋಗಿಸಿ ಬೊಂಬೆ, ಹೂವು ಸೇರಿದಂತೆ ನಾನಾ ವಿಧವಾದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಹವ್ಯಾಸ ತೇಜೋವತಿಯವರದಾಗಿತ್ತು. ಮುಂದೆ ಮದುವೆಯಾದ ಬಳಿಕ ಪತಿಯ ಪ್ರೋತ್ಸಾಹದೊಂದಿಗೆ ತಮ್ಮ ಸೃಜನಶೀಲ ಕಲಾಸೇವೆಯನ್ನು ಮುಂದುವರಿಸಿದರು.

ಜ್ಞಾನಬೋಧಿನಿ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿದ್ದ ತೇಜೋವತಿಯವರು ಹಲವು ವಸ್ತುಗಳಿಂದ ಅಪರೂಪದ ಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಮಣ್ಣು, ಬೆತ್ತ, ಬಟ್ಟೆಗಳಿಂದ ನಾನಾ ವಿಧದ ಕಲಾಕೃತಿಗಳನ್ನು ರಚಿಸುವ ಇವರು ದಾರದಿಂದ ಗಣೇಶ, ಹೂವು, ಬಳ್ಳಿಗಳಂತಹ ಕಲಾಕೃತಿಗಳನ್ನು ರಚಿಸುತ್ತಾರೆ. ಹೊಲಿಗೆ, ಎಂಬ್ರಾಯಿಡರಿ, ಪೇಂಟಿಂಗ್ಸ್, ಬೆಂಡಿನಿಂದ ಬೊಂಬೆಗಳ ರಚನೆ, ಹ್ಯಾಂಡಲ್ ಎಂಬ್ರಾಯಿಡರಿ, ಚಾರ್‌ಕೋಲ್ ಪೇಂಟಿಂಗ್‌, ಎಂಬೋಸಿಂಗ್‌, ಎನ್‌ಗ್ರೇವಿಂಗ್‌, ಕಟ್‌ ಫಾಲಿಂಗ್‌, ಫ್ಯಾಬ್ರಿಕ್‌ ಪೇಂಟಿಂಗ್‌ ಗಳಲ್ಲಿಯೂ ಇವರು ಪರಿಣಿತರು. ನಾನಾ ವಿಧದ ಅನುಪಯುಕ್ತ ವಸ್ತುಗಳನ್ನು ಬಳಸಿ ಗ್ರೀಟಿಂಗ್‌ ಕಾರ್ಡ್‌, ಬೊಂಬೆಗಳು, ನಿಜವಾದ ಹೂಗಳಂತೆ ಕಾಣುವ ಹೂವುಗಳನ್ನು ಸೃಷ್ಟಿಸುತ್ತಾರೆ. ಮೈದಾಹಿಟ್ಟು ಬಳಸಿ ಅದರಿಂದ ಬಟ್ಟೆ, ಕಾಗದಗಳಲ್ಲಿ ಹೂವುಗಳನ್ನು ಮಾಡುತ್ತಾರೆ. ಕ್ರೋಶಾ, ನಿಟ್ಟಿಂಗ್‌ ಗಳಿಂದ ಕಲಾಕೃತಿಗಳನ್ನು ರೂಪಿಸುವ ಇವರ ಪ್ರತಿಭೆ ಅಪರೂಪವೇ ಸರಿ! ಬೆಂಗಳೂರು ನಗರದ ಕಬ್ಬನ್‌ಪಾರ್ಕ್‌ನ ಬಾಲಭವನದಲ್ಲಿ ನಡೆಯುವ ಬೇಸಿಗೆ ಶಿಬಿರಗಳಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುವ ತೇಜೋವತಿ ಚಿಕ್ಕ ಮಕ್ಕಳಿಗಾಗಿ ಪೇಂಟಿಂಗ್ಸ್, ಪೇಪರ್‌ ಕಟ್ಟಿಂಗ್‌, ನಾನಾ ವಿಧದ ಹೂವಿನ ರಚನೆಗಳನ್ನು ಕಲಿಸುತ್ತಾರೆ. ಈ ಮೂಲಕವಾಗಿ ಅವರು ಮಕ್ಕಳಲ್ಲಿಯೂ ಈ ಕಲೆ ಅರಳುವಂತೆ ಮಾಡುತ್ತಿದ್ದಾರೆ. ಕಸದಿಂದ ರಸ ಎನ್ನುವಂತೆ ವಿವಿಧ ಬಟ್ಟೆಯ ತುಂಡುಗಳನ್ನು ಬಳಸಿ ತಯಾರಿಸುವ ಸುಂದರವಾದ ಟೇಬಲ್ ಕ್ಲಾತ್‌, ವಿವಿಧ ಬಗೆಯ ವ್ಯಾನಿಟಿ ಬ್ಯಾಗ್‌ಗಳನ್ನು ತಯಾರಿಸುವ ಇವರ ಕಲಾ ನೈಪುಣ್ಯತೆಗೆ ತಲೆದೂಗಲೇಬೇಕು. ದೆಹಲಿಯ ಕೇಂದ್ರೀಯ ಸಂಸ್ಕೃತಿ ಸಂಶೋಧನಾ ತರಬೇತಿ ಸಂಸ್ಥೆಯ ವತಿಯಿಂದ ವರ್ಷಕ್ಕೊಮ್ಮೆ ಆಯೋಜಿಸಲ್ಪಡುವ `ಕಸದಿಂದ ರಸ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ತೇಜೋವತಿ ಉಪನ್ಯಾಸ ನೀಡುತ್ತಾರೆ. ರಾಜ್ಯದ ನಾನಾ ಭಾಗಗಳಲ್ಲಿ ನಡೆದ ಕರಕುಶಲ ವಸ್ತು ಪ್ರದರ್ಶನಗಳಲ್ಲಿ ತಮ್ಮ ಅಪರೂಪದ ರಚನೆಗಳನ್ನು ಪ್ರದರ್ಶಿಸಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ಕೆಮ್ಲಿನ್‌ ವಿಶ್ವವಿದ್ಯಾನಿಲಯದಿಂದ ಬಂಬೂ ಆರ್ಟ್ಸ್ ಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಇತ್ತೀಚೆಗೆ ಮೂಲೆಗುಂಪಾಗುತ್ತಿರುವ  `ಬಾಟಿಕ್‌' ಎನ್ನುವ ಅಪೂರ್ವ ಕಲೆಯ ಕುರಿತಂತೆ ಪರಿಣಿತಿ ಸಾಧಿಸಿರುವ ಇವರು ಯುವ ಪೀಳಿಗೆಗೆ ಸಹ ಈ ಕಲೆಯ ಕುರಿತು ತರಬೇತಿ ನೀಡುತ್ತಾ ಬರುತ್ತಿದ್ದಾರೆ. ಇನ್ನು ಕೆಲವರಿಗೆ ಇಂತಹ ಕರಕುಶಲ ಕಲೆಗಳಲ್ಲಿ ಆಸಕ್ತಿ ಇದ್ದರೂ ಕಲಿಯಲು ಸಾಧ್ಯವಾಗುವುದಿಲ್ಲ. ಅಂತಹ ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ತೇಜೋವತಿ ಕಡಿಮೆ ವೆಚ್ಚದಲ್ಲಿ ಅವರಿಷ್ಟದ ಕಲಾಕೃತಿ ರಚಿಸುವುದನ್ನು ಕಲಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ