ಟಕ್‌…ಟಕ್‌….ಟಕ್‌…. ಎನ್ನುವ ಕುದುರೆ ಕಾಲುಗಳ ಲಯಬದ್ಧವಾದ ಶಬ್ದ ಕೇಳಿಬರುತ್ತದೆ. ಬಹುಶಃ ಕರ್ನಾಟಕಕ್ಕೆ ಪ್ರವಾಸಕ್ಕೆ ಬರುವವರಿಗೆ ಟಾಂಗಾ ದರ್ಶನವಾಗುವುದು ಮೈಸೂರು ನಗರದಲ್ಲಿ ಮಾತ್ರ.

ಇಂದು ವಿಶ್ವದ ಅತ್ಯಂತ ದುಬಾರಿ ಕಾರುಗಳು ಹಾಗೂ ಬೈಕ್‌ಗಳು ಮೈಸೂರಿನಲ್ಲಿ ಓಡಾಡುತ್ತಿದ್ದರೂ, ಪ್ರತಿ ಕುಟುಂಬ ಒಂದಲ್ಲ ಒಂದು ವಾಹನ ಹೊಂದಿದ್ದರೂ, ಟಾಂಗಾ ಸಂಸ್ಕೃತಿ ಇನ್ನೂ ಜೀವಂತಾಗಿರುವುದು ಅದು ಪ್ರವಾಸಿಗರಿಂದ ಮಾತ್ರ ಎಂದರೆ ತಪ್ಪಾಗಲಾರದು. ನೀವು ಮೈಸೂರಿಗೆ ಪ್ರವಾಸಕ್ಕೆ ಬಂದರೆ ಖಂಡಿತ ಟಾಂಗಾದಲ್ಲಿ ಅರಮನೆ ಸುತ್ತ ಒಂದು ರೌಂಡ್ ಹೊಡೆಯಲೇಬೇಕು. ಏಕೆಂದರೆ ಆ ಮಜಾ ನಿಮಗೆ ಆಡಿ, ಬೆನ್ಝ್ ನಂತಹ ಕಾರುಗಳಲ್ಲಿ ಸುತ್ತಾಡಿದರೂ ಸಿಗುವುದಿಲ್ಲ. ಅಷ್ಟು ಮಾತ್ರವಲ್ಲ, ನಿಮ್ಮಂತಹ ಪ್ರವಾಸಿಗರು ಹೀಗೊಂದು ಸುತ್ತು ಬರುವುದರಿಂದಲೇ ಆ ಟಾಂಗಾವಾಲಾಗಳ ಜೀವನ ನಡೆಯುವುದು ಎನ್ನುವುದನ್ನು ನೆನಪು ಮಾಡಿಕೊಳ್ಳಿ.

ನಗರದ ಹೃದಯ ಭಾಗದಲ್ಲಿರುವ ಅರಮನೆಯ ಮುಂದೆ ಮಾತ್ರ ಟಾಂಗಾಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ನಗರದ ಇತರ ಕೆಲವು ಕಡೆ ಜಟಕಾ ನಿಲ್ದಾಣಗಳನ್ನು ನಿರ್ಮಿಸಿದ್ದರೂ ಇನ್ನೂ ಟಾಂಗಾಗಳು ಇಲ್ಲಿ ನಿಲ್ಲುತ್ತಿಲ್ಲ. ಏಕೆಂದರೆ ಅರಮನೆಗೆ ಬರುವ ಪ್ರವಾಸಿಗರು ಮಾತ್ರ ಬಾಡಿಗೆಗೆ ಟಾಂಗಾ ಕೊಂಡು ನಗರ ಪ್ರದಕ್ಷಿಣೆಗೆ ಹೋಗುತ್ತಾರೆಯೇ ಹೊರತು ಸ್ಥಳೀಯರು ಇದನ್ನು ಬಳಸುವುದು ಬಹಳ ಅಪರೂಪ. ಮಕ್ಕಳಿಗಾಗಿ ಆಗೊಮ್ಮೆ ಈಗೊಮ್ಮೆ ಟಾಂಗಾ ಏರುವ ದಂಪತಿಗಳೂ ಇದ್ದಾರೆ.

ಸಂಚಾರದ ಅವಿಭಾಜ್ಯ ಅಂಗ

ಸುಮಾರು 80ರ ದಶಕದಲ್ಲಿ ನಗರದ ಸರಸ್ವತಿಪುರಂ ಬಡಾವಣೆಯ ಕಡೆಗೆ ಒಂದು ಟಾಂಗಾ ಬರುತ್ತಿದೆ ಎಂದರೆ ಅದರಲ್ಲಿ ನಟ ಕೆ.ಎಸ್‌. ಅಶ್ವಥ್‌ ಬರುತ್ತಿದ್ದಾರೆ ಎನ್ನುವುದು ಗ್ಯಾರಂಟಿ. ಆ ಕಾಲದಲ್ಲಿ ಕಾರು, ಸ್ಕೂಟರ್‌, ಬೈಕ್‌ ಹಾಗೂ ಆಟೋಗಳಿದ್ದರೂ ಅವರು ಅದನ್ನು ಬಳಸದೆ ಟಾಂಗಾದಲ್ಲೇ ಬರುತ್ತಿದ್ದರು.

ಇದಕ್ಕೂ ಹಿಂದೆ ಜಟಕಾ ಬಂಡಿಗಳು ನಗರದ ಅವಿಭಾಜ್ಯ ಅಂಗವಾಗಿದ್ದು ಎಲ್ಲಾ ನಗರವಾಸಿಗಳು ಪ್ರಯಾಣಕ್ಕೆ ಟಾಂಗಾಗಳನ್ನೇ ಬಳಸುತ್ತಿದ್ದರು. ದೂರದ ಗ್ರಾಮಗಳಿಗೂ ಟಾಂಗಾಗಳನ್ನೇ ಬಳಸುತ್ತಿದ್ದರು.

ಕಾಲ ಬದಲಾದಂತೆ ಬದುಕಿನ ಧಾವಂತಕ್ಕೆ ಹೊಂದಿಕೊಳ್ಳುತ್ತಾ, ಆಧುನಿಕತೆಗೆ ಮಾರುಹೋದ ಪರಿಣಾಮ, ಜನರು ವಿವಿಧ ವಾಹನಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರಿಂದ ಟಾಂಗಾದಲ್ಲಿ ಪ್ರಯಾಣಿಸುವವರ ಸಂಖ್ಯೆ ಕ್ಷೀಣಿಸಿ ಹೋಯಿತು. ಆದರೆ ಟಾಂಗಾವಾಲಾಗಳು ಮಾತ್ರ ಅಪ್ಪನ ನಂತರ ಮಗ ಇದೇ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ನೂರು ವರ್ಷದ ಇತಿಹಾಸ

ಸುಮಾರು 1897ರ ಆ ದಿನಗಳಲ್ಲಿ ಪ್ರಯಾಣಕ್ಕೆ ಎತ್ತಿನ ಗಾಡಿಯನ್ನೇ ಅವಲಂಬಿಸಲಾಗುತ್ತಿತ್ತು. ಆಗ ಮಹಾರಾಜರು ಟಾಂಗಾ ಗಾಡಿಗಳನ್ನು ಸ್ಥಳೀಯರ ಪ್ರಯಾಣದ ಉಪಯೋಗಕ್ಕೆ ಅನುವು ಮಾಡಿಕೊಟ್ಟರು. ಅಂದು ಟಾಂಗಾದಲ್ಲಿ ಪ್ರಯಾಣಿಸುವುದೆಂದರೆ ಒಂದು ಪ್ರತಿಷ್ಠೆಯಾಗಿತ್ತು. ಅಂದು ಇದರ ಉಸ್ತುವಾರಿಕೆಯನ್ನು ಮುನಿಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನಿಸಿಪಾಲಿಟಿಗೆ ಬಾಡಿಗೆ ಪಾವತಿಸಿ ಟಾಂಗಾದಲ್ಲಿ ಹೋಗಬೇಕಾಗಿತ್ತು. ಅಂದು ನಗರದಲ್ಲಿ ಸುಮಾರು 600ಕ್ಕೂ ಹೆಚ್ಚು ಟಾಂಗಾ ಗಾಡಿಗಳಿದ್ದವು ಎನ್ನಲಾಗುತ್ತದೆ.

ಸುತ್ತಲಿನ ತಾಲ್ಲೂಕುಗಳಾದ ಶ್ರೀರಂಗಪಟ್ಟಣ, ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಹುಣಸೂರು, ಕೆ.ಆರ್‌. ನಗರಗಳಲ್ಲೂ ಟಾಂಗಾ ಜನಪ್ರಿಯವಾಗಿತ್ತು. ಹೀಗಾಗಿಯೇ ದಶಕಗಳ ಹಿಂದೆ ನರಸಿಂಹರಾಜು ಪ್ರಮುಖ ಪಾತ್ರದಲ್ಲಿದ್ದ `ಮೈಸೂರು ಟಾಂಗಾ’ ಚಿತ್ರ ಜನಪ್ರಿಯತೆ ಗಳಿಸಿತ್ತು.

ದಸರಾ ಸಂದರ್ಭದಲ್ಲಿ ಗೌರವ ಸ್ಥಾನ

ವರ್ಷದ ಇತರ ದಿನಗಳಲ್ಲಿ ನೆನಪಾಗದ ಟಾಂಗಾಗಳು, ಮೈಸೂರಿನ ವಿಶ್ವವಿಖ್ಯಾತ ದಸರಾ ಹಬ್ಬದ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವುದರಿಂದ ಹೆಚ್ಚು ಬೇಡಿಕೆಯನ್ನೂ ಪಡೆದುಕೊಳ್ಳುತ್ತವೆ. ಟಾಂಗಾವಾಲಾಗಳು ಸಮವಸ್ತ್ರ ಧರಿಸಿ ಗಾಡಿಗಳ ಮುಂದೆ ನಿಂತವರೆಂದರೆ ಅದರ ನೋಟವೇ ಬೇರೆ. ವೈಭವದ ಮೆರವಣಿಗೆಯ ಸಂದರ್ಭದಲ್ಲಿ ಠೀವಿಯಿಂದ ಪೋಷಾಕು ಧರಿಸಿ ಮುಂದೆ ಹೋಗುತ್ತಿದ್ದರು. ಇಂದಿಗೂ ಕೂಡ ದಸರಾ ಬಂದಾಗ ಮಾತ್ರ ಟಾಂಗಾಗಳಿಗೆ ಒಂದಷ್ಟು ಸಂಪಾದನೆ. ಇಲ್ಲದಿದ್ದರೆ ನಿತ್ಯ ಕುದುರೆಗೆ ಹುಲ್ಲು, ಹುರುಳಿ ಒದಗಿಸುವುದೇ ಕಷ್ಟಕರವಾಗಿರುತ್ತದೆ.

ಕ್ವೀನ್ವಿಕ್ಟೋರಿಯಾ

ಇಂದು ನಗರದ ಟಾಂಗಾಗಳ ಸ್ವರೂಪ ಬದಲಾಗಿದೆ. ಇಂಗ್ಲೆಂಡಿನ ಮಹಾರಾಣಿ ಕ್ವೀನ್‌ ವಿಕ್ಟೋರಿಯಾ ಬಳಸುತ್ತಿದ್ದ ಮಾದರಿಯ ಟಾಂಗಾಗಳು ಬಂದಿವೆ. ಅದನ್ನು ಕೋಚ್‌ ಗಾಡಿ ಎಂದೂ ಕರೆಯುತ್ತಾರೆ. ಆ ಟಾಂಗಾದಲ್ಲಿ ಹೋಗುವ ಮಜವೇ ಬೇರೆ, ರಾಯಲ್ ಆಗಿರುತ್ತದೆ ಎಂದು ಹೋಗಿ ಬಂದವರು ಹೇಳುತ್ತಾರೆ. ಇದರಲ್ಲಿ ಪ್ರಯಾಣ ತುಸು ದುಬಾರಿಯಾದರೂ ಈ ಟಾಂಗಾ ಪ್ರಯಾಣಕ್ಕೆ ಹೊಸ ಅನುಭವ ನೀಡುತ್ತದೆ. ಈ ಕೋಚ್‌ಗಳಿಗೆ ಮೈಸೂರು ಮಹಾನಗರಪಾಲಿಕೆಯ ವತಿಯಿಂದ ಲೋನ್‌ ಕೂಡ ನೀಡಲಾಗಿದ್ದು, ಈ ಕೋಚ್‌ಗಳು ಸುಮಾರು 3 ಲಕ್ಷ ರೂ.ಗಳಷ್ಟು ವೆಚ್ಚವಾಗುತ್ತದೆ. ಸರ್ಕಾರದ ವತಿಯಿಂದ ಸಾಕಷ್ಟು ಸಬ್ಸಿಡಿ ನೀಡಿದ್ದರೂ ಸಂಪಾದನೆ ಇಲ್ಲದ್ದರಿಂದ ಲೋನ್‌ ಕಟ್ಟಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ಟಾಂಗಾ ಮಾಲೀಕರ ಅಳಲು. ಪ್ರವಾಸಿ ತಾಣಗಳಲ್ಲಿ ಈ ಟಾಂಗಾಗಳಿಗೆ ನಿಲುಗಡೆಯ ಅವಕಾಶ ನೀಡಿದರೆ, ಪ್ರವಾಸಿಗರು ಆಕರ್ಷಿತರಾಗಿ ಬರುತ್ತಾರೆ. ಇದರಿಂದ ನಮಗೆ ಒಂದಷ್ಟು ಸಂಪಾದನೆ ಆಗುತ್ತದೆ ಎನ್ನುತ್ತಾರೆ.

ಅದೇನೇ ಇರಲಿ, ಮೈಸೂರು ಎಂದರೆ ಟಾಂಗಾ ನೆನಪಾಗದೇ ಇರದು. ಆದರೆ ಟಾಂಗಾವಾಲಾಗಳ ಬದುಕಿದು ಜಟಕಾ ಬಂಡಿ…. ಇದು ವಿಧಿ ಓಡಿಸುವ ಬಂಡಿ ಎನ್ನುವುದಂತೂ ಸತ್ಯ.

ಸಾಲೋಮನ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ