ಲಾಕ್‌ಡೌನ್‌ ಕಾಲವಾದ್ದರಿಂದ ಮಧ್ಯಾಹ್ನ ಗಡದ್ದಾಗಿ ಉಂಡು ಮಲಗಿದ್ದೆ. ಸ್ವಲ್ಪ ಗೊರಕೆ ಹೊಡೆದು 4 ಗಂಟೆಗೆ ಎದ್ದು ಮನೆಯ ಅಂಗಳದಲ್ಲಿ ಅಡ್ಡಾಡೋಣ ಎಂದು ಹೊರಬರಲು ಹಾಲ್‌ ದಾಟಲು ಯತ್ನಿಸುತ್ತಿದ್ದೇನೆ…. ಅಲ್ಲಿ ಕಾಲಿಡಲಿಕ್ಕೂ ಜಾಗವಿಲ್ಲದಂತೆ ಏನೇನೋ ಹರಡಿಕೊಂಡಿತ್ತು.

ವಿವೇಕ ಕಂಟ್ರೊಲ್ ಮಾಡುತ್ತಿದ್ದರೂ ಮನಸ್ಸು ಚೀರುವಂತೆ ಪ್ರೇರೇಪಿಸಿತು, “ಏನಿದು ಕರ್ಮ…. ಜನ ಮನೆಯಲ್ಲಿ ನೆಮ್ಮದಿಯಾಗಿ ಓಡಾಡೋದು ಬೇಡವೇ? ಹೀಗಾ ನೀನು ವಸ್ತುಗಳನ್ನು ಹರಡುವುದು?

”ಅತ್ತಲಿಂದ ಶ್ರೀಮತಿಯ ಉತ್ತರ ಅಷ್ಟೇ ಗಡುಸಾಗಿತ್ತು, “ದಿನವಿಡೀ ಆರಾಮಾಗಿ ನಿದ್ದೆ ಮಾಡ್ತಾ ಇರ್ತೀರಿ. ಈಗ ಬಿಡುವಾಗಿದ್ದರೆ ನೀವೇ ಅದನ್ನೆಲ್ಲ ನೀಟಾಗಿ ಎತ್ತಿಟ್ಟು ಸಹಕರಿಸಬಾರದೇ?

”ಈಗ ಧೈರ್ಯ ತೆಗೆದುಕೊಂಡು ನಾನೂ ಗೊಣಗುಟ್ಟಿದೆ,

“ಈಗ ನೀನೂ ನನ್ನ ತರಹವೇ ವರ್ಕ್‌ ಫ್ರಂ ಹೋಂ ಅಂತ ದಿನವಿಡೀ ಮನೆಯಲ್ಲೇ ಇರ್ತೀಯಾ ತಾನೇ? ಇಂಥ ಶುಚಿತ್ವದ ಕೆಲಸಗಳನ್ನೆಲ್ಲ ನೀನೇ ಮಾಡೋದು ತಾನೇ?”

“ನೀವು ಮಾತ್ರ ದಿನವಿಡೀ ಗೊರಕೆ ಹೊಡೆಯೋದು ಬಿಟ್ಟು ಏನು ಕಡಿದು ಕಟ್ಟೆ ಹಾಕ್ತಿರೋದು? ಮನೆಯ ಕ್ಲೀನಿಂಗ್‌ ಕೆಲಸ ಮಾಡಿದರೆ ಕೈಗಳು ಸವೆದು ಹೋಗುತ್ತೇನೋ?” ಅಂದುಕೊಂಡದ್ದಕ್ಕಿಂತಲೂ ಮಾತು ಮೊನಚಾಗಿತ್ತು.

ನಾನು ಎದೆ ಸೆಟೆಸಿ ಹೇಳಿದೆ, “ಇದೆಲ್ಲ ನನ್ನ ಕೆಲಸಲ್ಲ… ನಾನು ಗಂಡಸು!”

ಆಗ ಸುಮಿ ಹತ್ತಿರ ಬಂದು ಹೇಳಿದಳು, “ಹೌದೇ? ಯಾವ ಮಹಾ ಗ್ರಂಥದಲ್ಲಿ ಗಂಡಸರು ಮನೆಗೆಲಸ ಮಾಡಬಾರದು ಅಂತಿದೆ? ತೋರಿಸಿ ನೋಡೋಣ?”

“ಅದು ನಾನೇ ರಚಿಸಿದ ಗ್ರಂಥದಲ್ಲಿದೆ!”

ಸುಮಿ ಸೀರೆಯ ಸೆರಗನ್ನು ಎಳೆದು ಸೊಂಟಕ್ಕೆ ಸಿಗಿಸಿ ಪೂರ್ತಿ ತಯಾರಾಗುತ್ತಾ, “ಓಹೋ… ಹಾಗೋ… ಹಾಗಿದ್ದರೆ ಗಂಡಸು ಮಾತ್ರ ಇಂತಿಂಥ ಕೆಲಸಗಳನ್ನು ಮಾಡಬೇಕು ಅಂತಲೂ ಬರೆದಿರಬೇಕಲ್ಲವೇ? ಅವೇನು ಅಂತ ಹೇಳಿ ನೋಡೋಣ!” ಎಂದು ಎರಡೂ ಕೈ ತಟ್ಟುವಂತೆ ಒದರುತ್ತಾ ಸಿಡುಕಿದಳು.

“ಅದು…. ಅದು…. ಬೇಕಾದಷ್ಟು ಬರೆದಿದೆ. ಇದೆಲ್ಲ ನಿನ್ನಂಥವರಿಗೆ ಎಲ್ಲಿ ಗೊತ್ತಾಗಬೇಕು?”ಎಲ್ಲಿತ್ತೋ ಕೆಂಡಾಮಂಡಲ ಸಿಟ್ಟು, ಧುತ್ತೆಂದು ಅವಳ ಮುಖ ಆಕ್ರಮಿಸಿತು,

“ಕ್ವಾರಂಟೈನ್‌ನಲ್ಲಿದ್ದೀರಿ ಅಂತ ತುಸು ಜ್ಞಾನವಿರಲಿ. ಆದಷ್ಟೂ ಡಿಸ್ಟೆನ್ಸ್ ಮೇಂಟೇನ್‌ ಮಾಡಿ.”

“ಅದನ್ನೇ ನಾನೂ ಮಾಡ್ತಿರೋದು. ಅದಕ್ಕೆ ನೀನಿರುವ ಜಾಗ ಬಿಟ್ಟು ದೂರ ನಮ್ಮ ರೂಮಿಗೆ ಹೋಗಿ ಬಾಗಿಲು ಹಾಕ್ಕೋತೀನಿ. 24 ಗಂಟೆ ಒಟ್ಟಿಗಿದ್ದರೂ ಈ ಅಂತರ ಮಾತ್ರ ತಪ್ಪಲಿಲ್ಲ…..”

ನಾನು ಸುಮಿಯನ್ನು ಬಳಸಲು ಅವಳ ಹತ್ತಿರ ಸರಿದರೆ, ಅವಳು ಬೇಕೆಂದೇ ದೂರ ಸರಿಯುತ್ತಾ, “ಇಂಥ ಬೇಕೂಫಿ ಕೆಲಸ ಮಾಡೋದು ಬಿಟ್ಟು ಸ್ವಲ್ಪ ಪ್ರಯೋಜನಕಾರಿ ಆಗುವ ಕೆಲಸ ಮಾಡಿ.”

“ಇದೂ ನಮ್ಮಿಬ್ಬರ ಬಾಂಧವ್ಯಕ್ಕೆ ಬೇಕಾದ ಕೆಲಸವೇ ಅಲ್ಲವೇ…..?” ಕಣ್ಣು ಮಿಟುಕಿಸುತ್ತಾ ಹೇಳಿದೆ.

“ಈ ಕರ್ಮಕಾಂಡಗಳಿಗೇನೂ ಕೊರತೆ ಇಲ್ಲ. ಅದಕ್ಕಿಂತಲೂ ಒಂದು ರಾಶಿ ಮುಖ್ಯ ಕೆಲಸ ಬಾಕಿ ಇದೆ. ಮೊದಲು ಅದನ್ನು ಪೂರೈಸೋದು ನೋಡಿ. ಆಗಲೇ ರಾತ್ರಿಗೆ ಭೋಜನ!”

“ಆಗಲೇ ಹೇಳಿದೆನಲ್ಲ…. ಅದೆಲ್ಲ ನನ್ನಂಥ ಗಂಡಸರ ಕೆಲಸ ಅಲ್ಲ ಅಂತ!”

ಸುಮಿಗಂತೂ ಪಿತ್ತ ನೆತ್ತಿಗೇರಿತ್ತು, “ಈಗೇನು…..? ಅಡುಗೆಮನೆಗೆ ಬಂದು ಅಲ್ಲಿ ಬಿದ್ದಿರೋ ರಾಶಿ ಪಾತ್ರೆ ಉಜ್ಜಿ ಹಾಕ್ತೀರೋ ಇಲ್ಲವೇ?” ಕಟಕಟನೆ ಹಲ್ಲು ಕಡಿಯುತ್ತಿದ್ದಳು.

“ಇಂಥ ತಿಕ್ಕಲು ಕೆಲಸಗಳನ್ನು ನನಗೆ ಹೇಳಬೇಡ ಅಂತ ಎಷ್ಟು ಸಲ ಹೇಳೋದು?”

“ಬಾಯಿ ಮುಚ್ಚಿಕೊಂಡು ಬಂದು ಪಾತ್ರೆ ತೊಳೆದರೆ ಸರಿ….. ಇಲ್ಲದಿದ್ದರೆ ಏನು ಮಾಡ್ತೀನಿ ಗೊತ್ತಾ?”

“ಮಹಾ…. ಏನು ಮಾಡಿಬಿಡ್ತೀಯಾ?”

“ಇರಿ ಮಾಡ್ತೀನಿ ನಿಮಗೆ….. ಈಗಲೇ ಪೊಲೀಸರಿಗೆ ಫೋನ್‌ ಮಾಡಿ ಇಲ್ಲೊಂದು ಕೋವಿಡ್‌-19 ಕೇಸ್‌ ಪೇಶೆಂಟ್‌ ಇದೆ, ಈ ಕೊರೋನಾ ಹೆಮ್ಮಾರಿ ಮನೆಮಂದಿಗೆ ರೋಗ ಹರಡುವುದಕ್ಕೆ ಮುಂಚೆ ಎಳಕೊಂಡು ಹೋಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಅಂತ ಈಗಲೇ ಕಂಪ್ಲೇಂಟ್‌ ಕೊಡ್ತೀನಿ!”

ಒಳಗೊಳಗೆ ಬಹಳ ಹೆದರಿಕೆ ಆಯ್ತು. ಹಾಗೆಲ್ಲ ತೋರಿಸಿಕೊಳ್ಳಲು ಆದೀತೇ? ಗಂಡಸ್ತನ ನೆನಪಾಗಿ ಗುಡುಗಿದೆ, “ಹೀಗೆ ಗುಡುಗಿದರೆ ನಾನೇನು ಭಯಪಡೋಲ್ಲ…. ನಿನಗೆ ಮಾತ್ರ ಫೋನ್‌ ಮಾಡೋಕ್ಕೆ ಬರುತ್ತೆ, ನನಗೆ ಮಾತ್ರ ಬರೋಲ್ಲವೇ? ಅದೇ ತರಹ ನಾನು ಪೊಲೀಸರಿಗೆ ತಕ್ಷಣ ಕಂಪ್ಲೇಂಟ್‌ ಕೊಟ್ಟು ಈ ಕೊರೋನಾ ಹೆಮ್ಮಾರೀನಾ ಎಳೆದುಕೊಂಡು ಹೋಗಿ, ವಿಕ್ಟೋರಿಯಾ ಆಸ್ಪತ್ರೆ ತುಂಬಿಹೋಗಿದ್ದರೆ, ಓಪನ್‌ಗ್ರೌಂಡ್‌ ಇರುವಂಥ ಅರಮನೆ ಮೈದಾನ, ಜಿ.ಕೆ.ವಿ.ಕೆ. ಕ್ಯಾಂಪಸ್‌ ಎಲ್ಲಾದರೂ ಎಸೆಯಿರಿ ಅಂತೀನಿ!”

ಆಗ ಸುಮಿ ಒಂದಿಷ್ಟೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೇಳಿದಳು, “ಅಷ್ಟೇ ತಾನೇ….. ಧಾರಾಳ ಹೇಳಿಕೊಳ್ಳಿ…… ಅವರು ನನ್ನನ್ನು ಪರೀಕ್ಷಿಸುತ್ತಾರೆ. ಆ ಪರೀಕ್ಷೆಯಲ್ಲಿ ಏನೂ ಇಲ್ಲ….. ನೆಗೆಟಿವ್‌ ಅಂತ ಬರುತ್ತೆ. ಆನ್‌ ಬೆನಿಫಿಟ್‌ ಆಫ್‌ ಡೌಟ್‌….. 14 ದಿನ ಕ್ವಾರಂಟೈನ್‌ ಅಂತ ಹೇಳ್ತಾರೆ. ಅದು ನನಗೆ ಆರಾಮ ಆಯ್ತಲ್ವಾ? ಆಗ ಇಡೀ ಮನೆಗೆಲಸದ ಜವಾಬ್ದಾರಿ ನಿಮ್ಮ ತಲೆ ಮೇಲೆ ಬೀಳುತ್ತೆ. ಈಗಂತೂ ನಾನು ಬಿಸಿ ಬಿಸಿ ಮಾಡಿ ತಟ್ಟೆಗೆ ಬಡಿಸ್ತೀನಿ, ನಾನು ಅಲ್ಲಿಗೆ ಹೋದ ಮೇಲೆ ನಿಮಗೇ ಗೊತ್ತಾಗುತ್ತೆ.

“ದೊಡ್ಡದಾಗಿ ಈಗ ರೋಫ್‌ ಹೊಡೀತಿದ್ದೀರಲ್ಲ….. ನೀವೇ ಕೈಬಾಯಿ ಸುಟ್ಟುಕೊಂಡು ಹಸಿಬಿಸಿ ಬೇಯಿಸಿಕೊಂಡಾಗ ಗೊತ್ತಾಗುತ್ತೆ,

`ಹೆಂಡತಿೂಬ್ಬಳು ಮನೊಳಗಿದ್ದರೆ ನನಗದೇ ಕೋಟಿ ರೂಪಾಯಿ…..’ ಅಂತ ಯಾಕೆ ಕವಿತೆ ಕಟ್ಟಿದರು ಅಂತ…. ಮಾಡಿದ್ದನ್ನು ನೀವೇ ತಿನ್ನಬೇಕು, ಆ ಪಾತ್ರೆ ಪರಡಿ ನೀವೇ ತೊಳೀಬೇಕು, ಮನೆ ಗುಡಿಸಿ ಸಾರಿಸಬೇಕು….. ಇಲ್ಲದಿದ್ದರೆ ಕೊರೋನಾ…. ಕೊರೋನಾ…. ಗೊತ್ತು ತಾನೇ?”

ಈಗಂತೂ ನನಗೆ ನಿಜವಾಗಿಯೂ ಹೆದರಿಕೆ ಶುರುವಾಯಿತು, “ಏ…. ಇದನ್ನೆಲ್ಲ ನಾನು ತಮಾಷೆಗೆ ಹೇಳಿದ್ದು ಕಣೆ…… ನಿನ್ನನ್ನು ಹೃದಯಾಂತರಾಳದಿಂದ ಪ್ರೀತಿಸುವ ಈ ನಿನ್ನ ಗಂಡ ಎಲ್ಲಾದರೂ ನಿನ್ನ ವಿರುದ್ಧ ಪೊಲೀಸ್‌ ಕಂಪ್ಲೇಂಟ್‌ ಕೊಡ್ತಾನಾ…..? ನೋಡು, ಈ ಪಾತ್ರೆಗೀತ್ರೆ ಉಜ್ಜೋದು…. ಇವೆಲ್ಲ ನನಗೆ ಬರೋಲ್ಲ.  ಉಳಿದಂತೆ ಅದೇನೋ ಶುಚಿತ್ವ ಶುಭ್ರತೆ ಅಂತ ಹೇಳ್ತಿದ್ದೆಯಲ್ಲ, ಬೇಕಾದ್ರೆ ಅದನ್ನು ಮಾಡ್ತೀನಿ.”

ತಕ್ಷಣ ನಾನು ಬಾಬು, ಪುಟ್ಟಿಗೆ ಆವಾಜ್‌ ಹಾಕಿದೆ. “ಬನ್ರೋ ಇಲ್ಲಿ…. ನಡೀರಿ, ಅಮ್ಮಂಗೆ ಸ್ವಲ್ಪ ಹೆಲ್ಪ್ ಮಾಡೋಣ. ಅದೇನೋ ಕೊರೋನಾ ವಿರುದ್ಧ ಹೈಜೀನ್‌ ಸಮರವಂತೆ. ಹಾಗೇಂತ ಶುಭ್ರತೆ ಸ್ವಚ್ಛತೆ ಅಂತ ಒಂದಿಷ್ಟು ಸಹಾಯ ಮಾಡೋಣ,” ಎಂದು ಮಕ್ಕಳನ್ನು ಹುರಿದುಂಬಿಸಿದೆ.

ಮಧ್ಯದಲ್ಲೇ ತಡೆಯುತ್ತಾ ಸುಮಿ ಹೇಳಿದಳು, “ಅದೆಲ್ಲ ಏನೂ ಬೇಡ. ನಿಮ್ಮ ಸಹಾಯದ ಕಾಟವೇ ಸಾಕಾಗಿರುವಾಗ ಇನ್ನು ಈ ಚಿಲ್ಲರೆಗಳನ್ನು ಬೇರೆ ಕರೆದಿರಾ? ಸ್ವಚ್ಛತೆ ಶುಭ್ರತೆ ಅನ್ನೋದೆಲ್ಲ ಬಿಟ್ಟು ನಾನು ಹೇಳೋ ಸಿಂಪಲ್ ಕೆಲಸ ಮಾಡಿ ಸಾಕು.”

ನಾನೂ ಹಠ ಬಿಡದೆ, “ಸ್ವಚ್ಛತೆ ಶುಭ್ರತೆ ಕೆಲಸ ನನಗೆ ಬಹಳ ಸಲೀಸು. ನೋಡು ನೋಡು…. ಎಲ್ಲಾ ಕಡೆ ಎಷ್ಟು ಜೇಡರಬಲೆ ತುಂಬಿಕೊಂಡಿದೆ, ಎಲ್ಲಾ ಕಡೆ ಗಲೀಜು ಕೊಳಕಿದೆ. ಇದೆಲ್ಲ ನಾನು ಶುಭ್ರ ಮಾಡ್ತೀನಿ ಬಿಡು.”

ಸುಮಿ ಅಲ್ಟಿಮೇಟ್‌ ಇಶ್ಯು ಮಾಡುತ್ತಾ, “ಸ್ವಚ್ಛತೆಯೂ ಬೇಡ ಶುಭ್ರತೆಯೂ ಬೇಡ…. ಹೇಗಿದೆಯೋ ಹಾಗೇ ಇರಲಿ ಬಿಡಿ. ನಿಮ್ಮ ಗಂಡಸ್ತನದ ಜೋರನ್ನು ಆ ಪಾತ್ರೆ ಮೇಲೆ ತೋರಿಸಿ, ಸಾಕು.”

ನಾನು ತಡಬಡಾಯಿಸಿದೆ, “ನೋಡು…. ನೋಡು…. ಮತ್ತೆ ಮತ್ತೆ ಹೇಳ್ತಾ ಇದ್ದೀನಿ, ಇದೆಲ್ಲ ನನ್ನ ಕೆಲಸ ಅಲ್ಲ. ಏನೋ, ನಿನಗೊಂದು ಸಹಾಯ ಆಗಲಿ ಅಂತ ಮಾಡ್ತಾ ಇದ್ದೀನಿ. ಹಾಗಿರುವಾಗ ನನಗೆ ಆಗುವ ಕೆಲಸ ಮಾಡಲು ಬಿಡು.”

ಸುಮಿ ಮತ್ತೆ ಸಿಡುಕಿದಳು, “ ಒಂದು ಸಲ ಹೇಳಿದೆನಲ್ಲ…. ಸ್ವಚ್ಛತೆ ಶುಭ್ರತೆ ಕೆಲಸ ಈಗ ಬೇಡ ಅಂತ….. ಮತ್ತೇಕೆ ಅದರ ಹಿಂದೆ ಬಿದ್ದಿದ್ದೀರಿ?”

ಆಗ ನಾನೂ ಜೋರಾಗಿ ಕಿರುಚಾಡಿದೆ, “ಯಾಕೆ ಮಾಡಬಾರದು ಅಂತ? ಇಷ್ಟು ಕೊಳಕು ಗಲೀಜಿನ ಮಧ್ಯೆ ನಾವು ಹೇಗೆ ಬದುಕಲು ಸಾಧ್ಯ? ನಾವಿಬ್ಬರೂ ಬಾಯಿ ಮಾತಿಗೆ ಕೊರೋನಾ ಬಂದಿದೆ ಅಂತ ಒಬ್ಬರ ಮೇಲೆ ಒಬ್ಬರು ಸುಳ್ಳು ಸುಳ್ಳೇ ಅಪವಾದ ಹೊರಿಸಿದರೆ ಈಗ ಅದೇ ನಿಜವಾಗಿ ಬಿಡುತ್ತೆ ಈ ಕೊಳಕಿನ ದೆಸೆಯಿಂದ. ನಿನಗೆ ತವರಿನಲ್ಲಿ ಈ ತರಹ ಕೊಳಕು ಗಲೀಜು ಮಧ್ಯೆ ವಾಸ ಮಾಡಿ ಅಭ್ಯಾಸ ಇರಬಹುದು. ಆದರೆ ನನಗಂತೂ ಖಂಡಿತಾ ಇಲ್ಲ. ಇಷ್ಟು ಕೊಳಕಿನ ಮಧ್ಯೆ ಬಾಳಿ ಬದುಕಿದ ಇತಿಹಾಸ ನಮ್ಮ ಮನೆಯವರಿಗೆ ಯಾರಿಗೂ ಇಲ್ಲ. ಆದ್ದರಿಂದ ನಾನು ಸ್ವಚ್ಛತೆ ಮಾಡಿಯೇ ತೀರುತ್ತೇನೆ. ಹೈಜೀನ್‌ ಅಂದ್ರೆ ಸ್ವಲ್ಪ ಬೆಲೆ ಇಲ್ಲವಾಗಿದೆ….”

ಸುಮಿ ಮುಖ ಸೊಟ್ಟಗೆ ತಿರುವುತ್ತಾ, “ಓಹೋ…. ದೊಡ್ಡ ಮಿಸ್ಟರ್‌ ಪರ್ಫೆಕ್ಟ್ ಕ್ಲೀನೂ…. ಬಂದುಬಿಟ್ರು ಹೇಳೋಕ್ಕೆ…. ನಿಮ್ಮ ಪರಂಪರೆ ಪೂರ್ತಿ ಏನೋ ದೊಡ್ಡದಾಗಿ ವೈಟ್‌ಹೌಸ್‌ನಲ್ಲೇ ನೆಲೆ ನಿಂತವರಂತೆ… ನಾನು ಆ ರಸ್ತೆ ಬದಿ ದೊಡ್ಡ ಮೋರಿ ಪೈಪ್‌ಗಳಲ್ಲಿ ವಾಸವಿದ್ದವಳಲ್ಲ…. ಈಗ ಸದ್ಯಕ್ಕೆ ಹೈಜೀನ್‌ ನನಗೆ  ಬೇಕಿಲ್ಲ.”

ನನಗೂ ಸಿಟ್ಟೇರಿತು, “ಯಾಕೆ? ಅದೇ ಯಾಕೆ ಅಂತ ಆಗಿನಿಂದ ಬಡ್ಕೊಂತಿದ್ದೀನಿ. ಇಂಥ ಕೊಳಕಿನ ಮನೆಯಲ್ಲಿ ನಿನಗೆ ವಾಸ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ? ಈಗಂತೂ ಆಫೀಸ್‌ ಕಾಟವಿಲ್ಲದೆ ದಿನದ 24 ಗಂಟೆ ಮನೆಯಲ್ಲೇ ತಾನೇ ಬಿದ್ದಿರ್ತೀಯಾ?”

ಸುಮಿ ತುಟಿ ವಕ್ರವಾಗಿ ತಿರುಗಿಸುತ್ತಾ, “ಹ್ಞಾಂ….. ಇದೇ ಕೊಳಕು ಮನೆಯಲ್ಲೇ ನಾನು ಹೇಗೋ ಇದ್ದುಕೊಳ್ತೇನೆ. ನನಗೆ ಬೇರೆಲ್ಲೂ ಹೋಗಬೇಕಿಲ್ಲ. ನಾನೀರುವಲ್ಲೇ ನೀವು ಮಕ್ಕಳೂ ಇರಬೇಕು ಅಂತ ಬಯಸುತ್ತೀನಿ….”

ನನಗಂತೂ ತಲೆ ಸುತ್ತಿ ಬಂತು, “ಏನಿದು ಕರ್ಮ ಅಂತೀನಿ….? ಶುಭ್ರತೆ ಸ್ವಚ್ಛತೆಗೂ ಈ ಮನೆ ಬಿಟ್ಟು ಬೇರೆಲ್ಲೋ ಹೋಗುವುದಕ್ಕೂ ಏನು ಸಂಬಂಧ? ನಿನಗಂತೂ ಯಾವುದನ್ನು ಯಾವುದಕ್ಕೆ ಸೇರಿಸಿ ಹೇಳಬೇಕು ಅಂತ ಒಂದೂ ಗೊತ್ತಾಗೋದಿಲ್ಲ ಬಿಡು…..”

“ಅದಕ್ಕೂ ಇದಕ್ಕೂ ಸಂಬಂಧ ಯಾಕಿಲ್ಲ. ಬಿಲ್‌ಕುಲ್‌…. ಸಾಲಿಡ್‌…. ಜಬರ್ದಸ್‌ ಅಂತ ಸಂಬಂಧವಿದೆ.”

ಅದಕ್ಕೆ ನಾನು ಕೇಳಿದೆ, “ಅದನ್ನೇ ನಾನೂ ಕೇಳ್ತಿರೋದು…. ಎಂಥದು ಆ ದರಿದ್ರ ಸಂಬಂಧ? ನಿನ್ನಂಥ ದಡ್ಡಿ ತಲೆಗೆ ಅದು ಹೊಳೆದಿದೆ ಅಂದಮೇಲೆ ಅದೇನು ಅಂತ ತಿಳಿದುಕೊಂಡೇ ಬಿಡೋಣ…..”

ಸುಮಿ ಭುಜ ಹಾರಿಸುತ್ತಾ ಉಡಾಫೆಯಿಂದ ಹೇಳಿದಳು, “ಇದರಲ್ಲಿ ದಡ್ಡಿ, ಮಹಾ ಜಾಣೆ ಅನ್ನೋಂಥ ತರ್ಕ ಏನೂ ಇಲ್ಲ. ನೋಡಿ, ಮನೆಯಲ್ಲಿ ಎಷ್ಟು ಕೊಳಕು ತುಂಬಿಕೊಂಡಿರುತ್ತದೋ ಅಷ್ಟೇ ನಮ್ಮ ಇಮ್ಯುನಿಟಿ ಸಿಸ್ಟಮ್ ಚೆನ್ನಾಗಿರುತ್ತದೆ. ನಮ್ಮ ಆಂತರಿಕ ಇಮ್ಯುನಿಟಿ ಸಿಸ್ಟಮ್ ಚೆನ್ನಾಗಿದ್ದಷ್ಟೂ ಕೊರೋನಾ ಹೆಮ್ಮಾರಿಯ ಕಾಟ ತಾನೇ ತಗ್ಗುತ್ತದೆ. ಹಾಗಾಗಿ ನಾವು ಅಂಥ ಕೊಳಕು ವಾತಾರಣದಲ್ಲಿದ್ದರೆ ಕೊರೋನಾದ ಕಾಟ ಇರೋದಿಲ್ಲ, ನಾವು ಅದರ ದೆಸೆಯಿಂದ ವಿಕ್ಟೋರಿಯಾ….. ಜಿ.ಕೆ.ವಿ.ಕೆ. ಅಂತ ಅಲೆಯಬೇಕಾದ ಕರ್ಮ ಇರೋಲ್ಲ….”

ಒಂದು ಕ್ಷಣ ನನ್ನ ತಲೆ ಗಿರ್ ಎಂದಿತು. “ಇದೆಂಥ ಲಾಜಿಕ್ಕೇ ನಿಂದು…. ಸುಡುಗಾಡು? ಕೊಳಕು ವಾತಾವರಣದಲ್ಲಿದ್ದರೆ ಕೊರೋನಾ ಬರೋಲ್ಲ ಅಂತ ನಿನ್ನ ತಲೆಗೆ ತುಂಬಿದವರಾರೇ?”

ಸುಮಿ ಅತ್ಯಧಿಕ ವಿಶ್ವಾಸದಿಂದ ಹೇಳಿದಳು, “ನೀವೇ ಸ್ವಲ್ಪ ತಲೆ ಉಪಯೋಗಿಸಿ ನೋಡ್ರಿ…. ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ. ತವರು ಬಿಟ್ಟ ಕೊರೋನಾ ಬೇರೆ ಯಾವ ದೇಶಗಳಲ್ಲಿ ಅತ್ಯಧಿಕ ಅಮಾಯಕ ಜನರ ಬಲಿ ತೆಗೆದುಕೊಂಡಿತು ಹೇಳಿ…..”

ನಾನು ಯೋಚಿಸುತ್ತಾ ಉತ್ತರಿಸಿದೆ, “ಅದೇ ಇಟಲಿ, ಸ್ಪೇನ್‌, ಅಮೆರಿಕಾ, ಇಂಗ್ಲೆಂಡ್‌…..”

“ಜೊತೆಗೆ ಇನ್ನೂ ಇರಬೇಕಲ್ಲ….”

“ಫ್ರಾನ್ಸ್, ಕೆನಡಾ ಇತ್ಯಾದಿ…..”

“ನೋಡಿದ್ರಾ….. ಅದನ್ನೇ ನಾನು ಹೇಳಿದ್ದು. ಇವೆಲ್ಲ ಸ್ವಚ್ಛತೆ ಶುಭ್ರತೆಗಳಲ್ಲಿ ಮೂರು ಲೋಕಕ್ಕೂ ಸಾಟಿ ಇಲ್ಲದಂಥ ದೇಶಗಳು….. ಇವು ಎಷ್ಟು ಸ್ವಚ್ಛ ಶುಭ್ರವಾಗಿದ್ದವೋ ಕೊರೋನಾ ಕಾಟ ಅಷ್ಟೇ ಹೆಚ್ಚುತ್ತಾ ಹೋಯಿತು. ಜನರ ಪ್ರಾಣ ಕುಗ್ಗುತ್ತಾ ಹೋಯಿತು…..

“ಇಡೀ  ಏಷ್ಯಾ ಖಂಡದ ದೇಶಗಳನ್ನೇ ನೋಡಿ ಚೀನಾ  ಬಿಟ್ಟು ಕೊರೋನಾದ ರೋಗಿಗಳು ಎಷ್ಟು ಮಹಾ ಇದ್ದಾರೆ? ಅಷ್ಟೆಲ್ಲ ಯಾಕ್ರಿ….. ನಮ್ಮ ದೇಶದ ಕಥೆಯನ್ನೇ ತಗೊಳ್ಳಿ. ಇಡೀ ದೇಶದ ಯಾವ ಮಹಾನಗರಗಳು ಬಲು ನೀಟ್‌ ಸಿಟಿ ಎನಿಸಿರುವವೋ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತಾ….. ಇಲ್ಲೆಲ್ಲಾ ಕೊರೋನಾ ಕಾಟ ಅತಿ ತೀವ್ರವಾಗಿದೆ. ಆದರೆ ಯಾವ ಯಾವ ಊರು, ದೇಶಗಳು ಕೊಳಗೇರಿ, ಗಲೀಜಿಗೆ ಕುಖ್ಯಾತಿ ಪಡೆದಿದ್ದೀ ಅಲ್ಲೆಲ್ಲ ಕೊರೋನಾ ಪ್ರಭಾವ ಇಲ್ಲವೇ ಇಲ್ಲ ಎಂದು ಸ್ಪಷ್ಟ ತಿಳಿಯುತ್ತದೆ. ನಮ್ಮ ದೇಶದ ವಿವಿಧ ಲೋಕಲ್ ನ್ಯೂಸ್‌ ಚಾನೆಲ್ಸ್ ನೋಡಿ, ನಗರದಲ್ಲಿ ಎಲ್ಲೆಡೆ ಕೊಳಕು ಹರಡುತ್ತಿದೆ ಅಂತ ತೋರಿಸ್ತಾನೇ ಇರ್ತಾರೆ. ಈಗ ಲಾಕ್‌ಡೌನ್‌ನಲ್ಲಿ ಎಷ್ಟೋ ನಗರಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಹಾಗೆಂದು ಕಾರ್ಪೋರೇಶನ್‌ನವರು ಕ್ಲೀನ್‌ ಮಾಡಿ ನಗರವನ್ನು ಶುಚಿಯಾಗಿಡುತ್ತಿದ್ದಾರಾ? ಇಲ್ಲವಲ್ಲ…..!

“ಅದು ಏಕೆಂದರೆ ಕೊರೋನಾ ಕೊಳಕು ಕಂಡು ಓಡುತ್ತದೆ. ಹೀಗಾಗಿ ಮನೆಯನ್ನು ಸ್ವಚ್ಛ ಶುಭ್ರ ಮಾಡುವುದು ಅಂತ ಮುಖ್ಯ ಕೆಲಸಲ್ಲ, ಅಸಲಿಗೆ ಮಾಡಲೂಬಾರದು. ಊಟ ಮಾಡಬೇಕು, ಅದಕ್ಕಾಗಿ ಅಡುಗೆ ಆಗಬೇಕು, ಆ ಪಾತ್ರೆ ತೊಳೆಯಬೇಕು…. ಸ್ನಾನ ಮಾಡಿ ಬಟ್ಟೆ ಬದಲಾಯಿಸಬೇಕು, ಅದಕ್ಕಾಗಿ ಬಟ್ಟೆ ಒಗೆದುಕೊಳ್ಳಬೇಕು, ಅಷ್ಟು ಸಾಕು. ಆದ್ದರಿಂದ ಮನೆ ಕ್ಲೀನ್‌ ಮಾಡು ನಿಮ್ಮ ವಿಚಾರಕ್ಕೆ ಬೈ ಬೈ ಹೇಳಿ. ಎಷ್ಟು ಕೊಳೆ ಹೆಚ್ಚಿರುತ್ತದೋ ನಮ್ಮ ಇಮ್ಯುನಿಟಿ ಪವರ್‌ ಅಷ್ಟೇ ಹೆಚ್ಚುತ್ತದೆ. ಆಗ ಕೊರೋನಾ ವಿರುದ್ಧ ಹೋರಾಡುವ ಶಕ್ತಿ ಅಷ್ಟೇ ಡಬಲ್ ಆಗುತ್ತದೆ. ಹೀಗಾಗಿ ಕ್ಲೀನಿಂಗ್‌ ಕೆಲಸ ಆಮೇಲೆ ನೋಡಿಕೊಂಡರಾಯಿತು. ಮೊದಲು ಲಕ್ಷಣವಾಗಿ ಪಾತ್ರೆ ತೊಳೆಯಿರಿ…. ನಿಮ್ಮೊಂದಿಗೆ ವಾದ ಮಾಡುತ್ತಾ ಸಂಜೆಯ ಕೊರೋನಾ ಟೀ ಮಾಡುವ ಟೈಂ ತಡವಾಯಿತು. ಹ್ಞೂಂ…. ಹೋಗಿ ಹೋಗಿ!” ಎಂದು ಗುಡುಗಿದಳು.

ನಾನಂತೂ ಗರ ಬಡಿದವನಂತೆ ಅವಳ ಮಾತುಗಳನ್ನು ಅರಗಿಸಿಕೊಳ್ಳಲಾರದೆ ಹಾಗೇ ನಿಂತುಬಿಟ್ಟೆ. ಇಂಥ ಮಹಾನ್‌ ತರ್ಕಕ್ಕೆ ಏನೆಂದು ಉತ್ತರ ಕೊಡಲಿ? ಈ ಮಹಾತಾಯಿ ನಮ್ಮ ವಿಶ್ವಸಂಸ್ಥೆಗೆ ಮುಂದಿನ ಅಧ್ಯಕ್ಷಳಾದರೆ ಪ್ರಪಂಚದ ಗತಿ ಏನು? ಇತ್ತ ನಮ್ಮ ದೇಶದ ನಾಯಕರು ಸ್ವಚ್ಛ ಭಾರತ ಮಿಷನ್‌ ಹೆಸರಲ್ಲಿ ಸದಾ ಸ್ವಚ್ಛತೆ ಶುಭ್ರತೆಗೆ ಆದ್ಯತೆ ಕೊಡಿ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇವಳು ನೋಡಿದರೆ ಹೊಸ ಸಿದ್ಧಾಂತವನ್ನೇ ಮಂಡಿಸುತ್ತಿದ್ದಾಳೆ. ಅರ್ಥವಾಯಿತೋ ಸಿದ್ಧಾಂತ….. ಹಿರಿಯರು ಹೇಳಿದ್ದು ಅರ್ಥಾಗಲಿಲ್ಲವೇ ಅದೇ ವೇದಾಂತ! ಇವಳು ಹೇಳುತ್ತಿರುವ ಸಿದ್ಧಾಂತ ನಿಜಕ್ಕೂ ತರ್ಕಬದ್ಧವೇ? ನಾವು ಸ್ವಚ್ಛತೆ ಶುಭ್ರತೆಗೆ ಆದ್ಯತೆ ಕೊಟ್ಟು ಒಂದು ಬಂಡಿ ಫ್ರೆಶ್‌ ಫ್ಲೋರ್‌ ಕ್ಲೀನರ್ಸ್‌, ಡಿಸ್‌ಇನ್‌ಫೆಕ್ಟೆಂಟ್‌, ಆ್ಯಂಟಿ ಜರ್ಮಿಸೈಡ್ಸ್, ಡೆಟಾಲ್‌ ಹಾಕಿ ಮನೆ ಒರೆಸುವುದು, ತೊಳೆಯುವುದು, ಗಳಿಗೆಗೊಮ್ಮೆ ಸ್ಯಾನಿಟೈಸರ್‌, ಆ ರೈಸರ್‌ ಈ ರೈಸರ್‌ಗಳಿಂದ ದೇಹಾದ್ಯಂತ ಸವರಿಕೊಳ್ಳುವುದು…. ಇದೆಲ್ಲ ಮಹಾ ತಪ್ಪೇ?

ಹಾಗಾದರೆ ಹಾಳು ಜಾಹೀರಾತುಗಳಿಗೆ ಮರುಳಾಗಿ ನಾವು ಈ ಪ್ರಾಡಕ್ಟ್ಸ್ ಗಳಿಗೆ ದಂಡಕ್ಕೆ ಹಣ ಸುರಿಯುತ್ತಿದ್ದೇವೆಯೇ? ಹೆಚ್ಚಿನ ಶುಭ್ರತೆ ಸ್ವಚ್ಛತೆ ಕಂಡು ಕೊರೋನಾ ಅಲ್ಲೇ ಝಾಂಡಾ ಊರಿಬಿಡುತ್ತದೆಯೇ? ರಂಗಿ ನಿಂಗಿಯರು ಮನೆಮನೆಗಳಿಗೆ ಬಂದು ನಿಮಿಷಾರ್ಧದಲ್ಲಿ ಗುಡಿಸಿ ಸಾರಿಸಿ ಹೋಗಿಬಿಡುವ ಸಿದ್ಧಾಂತದ ಹಿಂದೆ ಇದೇ ರಹಸ್ಯ ಅಡಗಿರಬಹುದೇ? ಏನೇನೂ ಅರಿಯದ ಮುಗ್ಧ ನಾನು, ಮೊದಲು ಪಾತ್ರೆ ತೊಳೆದು ಮುಗಿಸ್ತೀನಿ….. ಹುಶ್‌!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ