ಕಥೆ – ಶಾರದಾ ಶ್ರೀನಾಥ್
“ಅಮ್ಮಾ, ನಾನು ಈವತ್ತೇ ನನ್ನ ಹೊಸ ವಾಟರ್ ಬಾಟಲ್ ತೆಗೆದುಕೊಂಡು ಹೋಗುತ್ತೇನೆ,” ಪುಟ್ಟ ಖುಷಿ ಕುಣಿಯುತ್ತಾ ಬಂದು ಹೇಳಿದಳು.
“ಓ.ಕೆ.,” ಎನ್ನುತ್ತಾ ನಾನು ಅವಳನ್ನು ಸ್ಕೂಲ್ ವ್ಯಾನ್‌ಗೆ ಸಿದ್ಧಪಡಿಸಿದೆ.
“ಮೀನಾ, ನಿನ್ನ ಪಾರ್ಲರ್‌ನ ಸಾಮಾನು ಲಿಸ್ಟ್ ಸತೀಶನಿಗೆ ಕೊಟ್ಟಿದ್ದೇನೆ. 11-12 ಗಂಟೆ ಹೊತ್ತಿಗೆ ಸಾಮಾನು ತಂದುಕೊಡುತ್ತಾನೆ. ಚೆಕ್ ಮಾಡಿಕೋ,” ರಾಘವ್ ತಿಂಡಿ ತಿನ್ನುತ್ತಾ ಹೇಳಿದರು.
ರಾಘವ್ ಆಫೀಸಿಗೆ ಹೋಗುವಾಗ ಮಗಳನ್ನು ಶಾಲೆಗೆ ಬಿಟ್ಟುಹೋಗುತ್ತಿದ್ದರು. ಇಲ್ಲವಾದರೆ ನಾನು ಅವಳನ್ನು ಶಾಲೆಗೆ ಕರೆದೊಯ್ಯಬೇಕಾಗುತ್ತಿತ್ತು. ನನ್ನ ಕೆಲಸವನ್ನೆಲ್ಲ ಮುಗಿಸಿ ಮಧ್ಯಾಹ್ನ 1 ಗಂಟೆಗೆ ಅವಳನ್ನು ಕರೆತರುತ್ತಿದ್ದೆ. ಅವರಿಬ್ಬರೂ ಹೋದ ಮೇಲೆ ನಾನು ಆರಾಮ ಕುರ್ಚಿಯಲ್ಲಿ ಕುಳಿತು ದಿನಪತ್ರಿಕೆಯನ್ನು ಕೈಗೆತ್ತಿಕೊಂಡೆ.
ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಬಾಗಿಲು ಬಡಿದರು. ಬಾಗಿಲು ತೆರೆದರೆ ಎದುರುಮನೆಯ ಮಮತಾ ಏದುಸಿರು ಬಿಡುತ್ತಾ ನಿಂತಿದ್ದಳು.
“ಏನಾಯಿತು? ಎಲ್ಲಿಂದ ಓಡಿ ಬರುತ್ತಿದ್ದೀಯಾ?” ಎಂದು ಕೇಳಿದೆ. ಅವಳು ಕಡ್ಡಿಯನ್ನು ಗುಡ್ಡ ಮಾಡುವ ಸ್ವಭಾವದವಳು ಎಂದು ನನಗೆ ಗೊತ್ತಿತ್ತು.
“ಮೀನಾ… ಒಂದು ಕೆಟ್ಟ ಸುದ್ದಿ. ಮೋಹನನ ಹೆಂಡತಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆ.”
“ಏನು…. ಏನು ಹೇಳುತ್ತಿದ್ದೀಯಾ?”
“ಹೌದು,” ಎಂದು ಅವಳು ಆ ಕಥೆ ಹೇಳತೊಡಗಿದಳು.
ಮಮತಾಳನ್ನು ಕಳುಹಿಸಿ ಬಂದು ಕುಳಿತ ಮೇಲೆ ನನ್ನ ಬುದ್ಧಿ ಮಂಕಾಗಿಬಿಟ್ಟಿತು. ಪ್ರಮೀಳಾ ಇದೇನು ಮಾಡಿಕೊಂಡಳು? 2 ವರ್ಷದ ಪುಟ್ಟ ಮಗುವನ್ನು ಬಿಟ್ಟು, ಜೊತೆಗೆ ಅವಳು ಗರ್ಭಿಣಿ ಕೂಡ ಆಗಿದ್ದಳು. ಅಂದರೆ, ಎಳೆಯ ಜೀವವನ್ನೂ ತನ್ನೊಂದಿಗೆ ದಹಿಸಿಬಿಟ್ಟಳು. ಅವಳು ಹಾಗೇಕೆ ಮಾಡಿದಳು? ಅದೇಕೆಂದು ನನಗೆ ಗೊತ್ತಿತ್ತು….. ಆದರೂ ನಾನು ದಂಗು ಬಡಿದು ಕುಳಿತಿದ್ದೆ. ತಲೆಯಲ್ಲಿ ಅನೇಕ ಪ್ರಶ್ನೆಗಳು ಸುತ್ತುತ್ತಿದ್ದವು.
ಮೋಹನನನ್ನು ನಾನು ಚೆನ್ನಾಗಿ ಬಲ್ಲವಳಾಗಿದ್ದೆ. ಅವನ ಮದುವೆಗೆ ನಾನು ಹೋಗಿರಲಿಲ್ಲ. ಆದರೆ ಅವನ ಪತ್ನಿ ಸುಂದರಿ ಮತ್ತು ಸುಶೀಲೆಯೆಂದು ಇತರರು ಹೇಳುವುದನ್ನು ಕೇಳಿದ್ದೆ. ನಂತರದ ದಿನಗಳಲ್ಲಿ ತಿಳಿದು ಬಂದ ವಿಷಯವೆಂದರೆ, ಮೋಹನ್ ಮಾತುಮಾತಿಗೆ ಪತ್ನಿಯನ್ನು ಶಾರೀರಿಕ ಮತ್ತು ಮಾನಸಿಕವಾಗಿ ಹಿಂಸಿಸುತ್ತಾನೆ. ಅವಳನ್ನು ತವರಿಗೆ ಹೋಗಗೊಡುವುದಿಲ್ಲ. ಅವಳ ತಂದೆ ತಾಯಿಯರನ್ನೂ ನಿಂದಿಸುತ್ತಾನೆ.
ಒಮ್ಮೆ ಸಮಾರಂಭವೊಂದರಲ್ಲಿ ಅವನ ಪತ್ನಿಯ ಭೇಟಿಯಾಗಿತ್ತು. ಆಗ ಅವಳು ಕಣ್ಣುಗಳಲ್ಲಿ ನೀರು ತುಂಬಿಕೊಂಡು 2 ಮಾತು ಹೇಳಿದ್ದಳು, “ನಿಮ್ಮ ಹಾಗೆ ನೆಮ್ಮದಿಯಾಗಿರುವುದನ್ನು ನಾವು ಕೇಳಿಕೊಂಡು ಬಂದಿಲ್ಲ.”
ಹೌದು, ಮೋಹನನ ಮುಷ್ಟಿಯಿಂದ ಬಿಡಿಸಿಕೊಂಡು ನಾನು ನೆಮ್ಮದಿಯಾಗಿರುವುದು ನಿಜ. ರಾಘವ್ ನನಗೆ ಒತ್ತಾಸೆಯಾಗಿ ನಿಂತು ಸಂರಕ್ಷಿಸಿಲ್ಲದಿದ್ದರೆ ನನ್ನ ಬಾಳು ಛಿದ್ರಛಿದ್ರವಾಗಿ ಬಿಟ್ಟಿರುತ್ತಿತ್ತು. ಯೋಚಿಸುತ್ತಾ ಕುಳಿತಿದ್ದಂತೆ ನನ್ನ ಮನಸ್ಸು ಅತೀತದ ಆಳಕ್ಕಿಳಿಯಿತು……
“ಮ್ಯಾಮ್, ಈ ಬಣ್ಣ ನಿಮಗೆ ಚೆನ್ನಾಗಿ ಒಪ್ಪುತ್ತದೆ,” ಗುಲಾಬಿ ಬಣ್ಣದ ಸೀರೆಯುಟ್ಟು ಅಂಗಡಿಯಿಂದ ಬಂದು ನಾನು ಮನೆಯ ಗೇಟ್ ತೆರೆಯುವಾಗ ಹಿಂದಿನಿಂದ ಧ್ವನಿ ಕೇಳಿಸಿತು.
ನಾವು ಹೊಸದಾಗಿ ಅಲ್ಲಿ ಮನೆ ಮಾಡಿಕೊಂಡು ಬಂದಿದ್ದೆವು. ಮೋಹನ ನಮ್ಮ ಬೀದಿಯದೇ ಹುಡುಗ. 23-24 ವಯಸ್ಸಿನ ಅವನ ದಷ್ಟಪುಷ್ಟ ಶರೀರ ಆಕರ್ಷಕವಾಗಿತ್ತು.
“ಥ್ಯಾಂಕ್ಸ್,” ಎಂದು ಹೇಳಿದೆ. ನನ್ನನ್ನೇ ದಿಟ್ಟಿಸುತ್ತಿದ್ದ ಮೋಹನನ ದೃಷ್ಟಿಯನ್ನು ಎದುರಿಸಲಾರದೆ ಪಕ್ಕಕ್ಕೆ ತಿರುಗಿದೆ.
“ಭಗವಂತ ಕೆಲವರನ್ನು ವಿರಾಮವಾಗಿ ಕುಳಿತು ಸೃಷ್ಟಿಸುವನಂತೆ. ಅಂಥವರಲ್ಲಿ ನೀವು ಒಬ್ಬರು,” ಮೋಹನ ಸಂಕೋಚವಿಲ್ಲದೆ ಹೇಳಿದ.
“ಇದು ಅತಿಯಾಯಿತು,” ಎನ್ನುತ್ತಾ ನಾನು ನಗೆ ಬೀರಿದೆ.
ಮನೆಯೊಳಗೆ ಬಂದು ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡೆ. ಹೌದು, ಭಗವಂತ ನನ್ನನ್ನು ವಿರಾಮವಾಗಿ ಕುಳಿತು ಸೃಷ್ಟಿಸಿರಬೇಕು. ಹಾಲಿನಂತಹ ಮೈಬಣ್ಣ, ಮಿಂಚಿನಂತಹ ಕಣ್ಣುಗಳು ನನ್ನ ಸೌಂದರ್ಯಕ್ಕೆ ಪುಟವಿಟ್ಟಂತಿದ್ದ. ನನ್ನ ಆಯ್ಕೆಯ ಉಡುಪುಗಳ ಬಗ್ಗೆ ಜನರು ಯಾವಾಗಲೂ ಮೆಚ್ಚುಗೆಯಿಂದ ಚರ್ಚಿಸುತ್ತಿದ್ದರು.
ಇಂತಹ ಹೊಗಳಿಕೆಗಳು ನನಗೆ ಅಭ್ಯಾಸವಾಗಿತ್ತು. ಆದರೆ ಮೋಹನನ ಮೆಚ್ಚುಗೆ ನನ್ನ ಮೈ ನವಿರೇಳಿಸಿತು. ಅವನ ಸೆಳೆಯುವ ನೋಟ, ಅರ್ಥಪೂರ್ಣ ಮುಗುಳ್ನಗೆ ಇವೆಲ್ಲ ನನಗೆ ಇಷ್ಟವಾಯಿತು. ನಿಜ ಹೇಳಬೇಕೆಂದರೆ ಅವನ ಮಾತಿಗಿಂತ ಅವನ ಮಂದಹಾಸ ನನ್ನನ್ನು ಆಕರ್ಷಿಸಿತು.
ಆಗ ಖುಷಿ ಇನ್ನೂ ಪುಟ್ಟ ಮಗು. ನನ್ನ ಪಾರ್ಲರ್‌ನ ಕೆಲಸ ಮತ್ತು ಮಗು ಎರಡನ್ನೂ ಸುಧಾರಿಸುವುದು ನನಗೆ ಸಮಸ್ಯೆಯಾಗುತ್ತಿತ್ತು. ಒಂದು ದಿನ ನಾನು ರಾಘವನೊಡನೆ ನನ್ನ ಕಷ್ಟ ಹೇಳಿಕೊಳ್ಳುತ್ತಿದ್ದಾಗ ಮೋಹನ ಮನೆಗೆ ಬಂದ. ತಾನು ಸಹಾಯ ಮಾಡುವುದಾಗಿ ಆಶ್ವಾಸನೆ ಇತ್ತ. ನನಗಿಂತ ಮುಂದಾಗಿ ರಾಘವ್ ಅದನ್ನು ಒಪ್ಪಿಕೊಂಡರು.
ಅಂದಿನಿಂದ ಮೋಹನ್ ದಿನ ನನ್ನ ಕೆಲಸಗಳಲ್ಲಿ ನೆರವಾಗಲು ಮನೆಗೆ ಬರತೊಡಗಿದ. ಅಂಗಡಿಗೆ ಅಥವಾ ಪಾರ್ಲರ್‌ಗೆ ತನ್ನ ಗಾಡಿಯಲ್ಲಿ ಕರೆದೊಯ್ಯುತ್ತಿದ್ದ. ಆಗೆಲ್ಲ ಹತ್ತಿ ಇಳಿಯುವಾಗ ನನ್ನ ಕೈ ಅವನಿಗೆ ತಗುಲಿದರೆ ತುಂಟತನದಿಂದ ಮುಗುಳ್ನಗುತ್ತಿದ್ದ. ಅವನ ತುಂಟನಗೆ ನನಗೆ ಇಷ್ಟವಾದರೂ, ಹೊರಗೆ ಕೃತಕ ಕೋಪದಿಂದ ಅವನನ್ನು ನೋಡುತ್ತಿದ್ದೆ. ಆಗ ಅವನು ಸಾರಿ ಎಂದು ಹೇಳಿ ಮುಖ ತಿರುಗಿಸುತ್ತಿದ್ದ. ಕ್ರಮೇಣ ಅವನ ಸಂಗ ನನಗೆ ಅಭ್ಯಾಸವವಾಗಿಬಿಟ್ಟಿತು.
ರಾಘವ್ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಬೆಳಗ್ಗೆ ಮನೆಯಿಂದ ಹೊರಟರೆ ಕತ್ತಲಿನ ನಂತರವೇ ಅವರು ಮನೆ ಸೇರುತ್ತಿದ್ದುದು. ಕೆಲವು ಸಲ ಆಫೀಸಿನ ಕೆಲಸಕ್ಕಾಗಿ ಬೇರೆ ಊರಿಗೂ ಹೋಗಬೇಕಾಗುತ್ತಿತ್ತು. ರಾಘವ್ ಒಳ್ಳೆಯ ಮನುಷ್ಯ. ಆದರೆ ರಸಿಕತೆ ಅವರಿಂದ ದೂರ. ಅವರಿಗೆ ನನ್ನ ರೂಪಕ್ಕಿಂತ ಆಫೀಸಿನ ಫೈಲ್‌ಗಳ ಆಕರ್ಷಣೆಯೇ ಹೆಚ್ಚು. ಆದರೂ ನನ್ನ ಮತ್ತು ಖುಷಿಯ ಅಗತ್ಯಗಳನ್ನು ಚೆನ್ನಾಗಿ ಗಮನಿಸುತ್ತಿದ್ದರು.
ವಯಸ್ಸಿನ ಪ್ರಭಾವವೋ ಅಥವಾ ಮನಸ್ಸಿನ ದೌರ್ಬಲ್ಯವೋ ನನ್ನ ಚಂಚಲ ಮನಸ್ಸನ್ನು ಅತೃಪ್ತಿ ಕಾಡತೊಡಗಿತು. ನನ್ನ ಮನಸ್ಸಿನ ಶಾಂತ ಸರೋವರದಲ್ಲಿ ಮೌನವಾಗಿ ಮಲಗಿದ್ದ ಕಾಮನೆಗಳನ್ನು ಮೋಹನ್ ತನ್ನ ಆಕರ್ಷಣೆಯ ಮೋಡಿಯ ಕಲ್ಲನ್ನೆಸೆದು ಎಬ್ಬಿಸಿದ.
ಮೋಹನನ ಹುಡುಗಾಟಿಕೆ, ತಿಳಿದೋ ತಿಳಿಯದೆಯೋ ಆಗುವ ಅವನ ಸ್ಪರ್ಶ, ಅವನ ಉತ್ಸಾಹಭರಿತ ಸಂಗ ಇವುಗಳೆಲ್ಲ ನನ್ನನ್ನು ರೋಮಾಂಚನಗೊಳಿಸತೊಡಗಿದವು. ಅವನು ಮೊದಲೇ ನಿರ್ಲಕ್ಷ್ಯ ಮತ್ತು ಮುನ್ನುಗ್ಗುವ ಸ್ವಭಾವದವನು. ನನ್ನ ಮೌನವನ್ನು ಒಪ್ಪಿಗೆಯೆಂದು ಭಾವಿಸಿರಬಹುದು. ಈಗ ಅವನು ಹೆಚ್ಚಾಗಿ ನನ್ನ ಜೊತೆಗೇ ಇರತೊಡಗಿದ.
ನಾನು ಆ ಜಾಗಕ್ಕೆ ಹೊಸದಾಗಿ ಬಂದಿದ್ದವಳು. ರಾಘವ್ ಯಾರೊಡನೆಯೂ ಮಾತಿಗೆ ನಿಂತವರೇ ಅಲ್ಲ. ಹೀಗಾಗಿ ಸುತ್ತಲಿನವರನ್ನು ನಾನು ಲೆಕ್ಕಿಸಲಿಲ್ಲ. ಆದರೆ ಪಾರ್ಲರ್ ಮಹಿಳೆಯರು ನಮ್ಮ ಬಗ್ಗೆ ತಿಳಿಯಲು ಕುತೂಹಲದಿಂದ ಕೂಡಿದ್ದರು. ಆದರೆ ನಾನು ಉನ್ಮತ್ತಳಾಗಿ ನನ್ನ ಕೆಲಸ ಮಾಡುತ್ತಿದ್ದೆ.
ನನ್ನಂತೆ ಖುಷಿ ಸಹ ಮೋಹನನ ಮೋಹಪಾಶದಲ್ಲಿ ಸಿಲುಕಿದ್ದಳು. ಆದರೆ ಖುಷಿ ಇನ್ನೂ ಮಗು. ಮಕ್ಕಳು ಪ್ರೀತಿಯಿಂದ ಮಾತನಾಡಿಸಿದವರನ್ನು ಅಂಟಿಕೊಳ್ಳುತ್ತಾರೆ. ಆದರೆ ನಾನು ಪ್ರೌಢಳಾಗಿದ್ದೂ ಮುಗ್ಧೆಯಂತಿದ್ದೆ.
ಹೀಗಿರುವಾಗ ಒಮ್ಮೆ ರಾಘವ್ ಚೆನ್ನೈಗೆ ಹೋಗಿದ್ದರು. ನಮ್ಮ ಮನೆಗೆ ಸ್ವಲ್ಪ ದೂರದಲ್ಲಿ ನಮ್ಮ ದೂರ ಸಂಬಂಧಿ ಗಿರಿಜಮ್ಮನ ಮನೆ ಇತ್ತು. ನಾನು ಸಾಮಾನು ತರಲು ಹೋಗುವಾಗ ಖುಷಿಯನ್ನು ಅವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದೆ. ಅದೇ ರೀತಿ ಆ ದಿನ ಮಗುವನ್ನು ಗಿರಿಜಮ್ಮನ ಹತ್ತಿರ ಬಿಟ್ಟು ಪಾರ್ಲರ್‌ನ ಕೆಲವು ಸಾಮಾನುಗಳನ್ನು ತರಲು ಮೋಹನನ ಜೊತೆ ಹೋದೆ.
ಮಾರ್ಕೆಟ್‌ನಿಂದ ಹಿಂದಿರುಗುವಾಗ ತಡವಾಗಿಬಿಟ್ಟಿತು. ಕೊಂಚ ಮಳೆಯೂ ಬಂದು ನೆನೆದಿದ್ದೆ. ಮನೆಯ ಹತ್ತಿರ ಬಂದಾಗ ಮೋಹನ್ ಜೋರಾಗಿ ಬ್ರೇಕ್ ಹಾಕಲು ನಾನು ಮುಗ್ಗರಿಸಿ ಅವನ ಭುಜವನ್ನು ಹಿಡಿದೆ. ಅದೊಂದು ಬಗೆಯ ಸುಖಾನುಭವವಾಗಿತ್ತು. ಆದರೂ ಅದನ್ನು ತೊರಗೊಡದೆ ಬೀಗ ತೆಗೆದು ಮನೆಯೊಳಗೆ ಬಂದೆವು.
“ಮೋಹನ್, ನೀನೀಗ ಹೊರಡು… ಬಹಳ ಹೊತ್ತಾಗಿದೆ. ನಾನು ಹೋಗಿ ಖುಷಿಯನ್ನು ಕರೆದುಕೊಂಡು ಬರುತ್ತೇನೆ,” ಎಂದು ನಾನು ಹೇಳುತ್ತಿದ್ದರೂ ಅವನು ಸೋಫಾದ ಮೇಲೆ ಕುಳಿತೇ ಇದ್ದ.
“ರಾತ್ರಿ ಇಲ್ಲೇ ಉಳಿದರೆ ಹೇಗೆ?” ಅವನ ಕಣ್ಣುಗಳಲ್ಲಿ ಮತ್ತೆ ತುಂಟತನ ಇಣುಕುತ್ತಿತ್ತು.
ಬೇಡವೆಂದು ಹೇಳಲು ನನ್ನಿಂದಾಗಲಿಲ್ಲ. ಜಿನುಗುವ ಮಳೆ ವಾತಾವರಣದ ಪ್ರಭಾವವೋ ಅಥವಾ ಒದ್ದೆ ದೇಹದ ಅಮಲೋ, ನಾವಿಬ್ಬರೂ ಮರುಳಾದೆವು. ಮೋಹನ್ ನನ್ನ ಕೈ ಹಿಡಿದು ಪಕ್ಕದಲ್ಲಿ ಕುಳ್ಳಿರಿಸಿಕೊಂಡ. ಇಡೀ ರಾತ್ರಿ ನನಗೆ ಮಗುವಾಗಲಿ, ನನ್ನ ಸತಿ ಧರ್ಮವಾಗಲಿ ನೆನಪಾಗಲಿಲ್ಲ.
ರಾತ್ರಿಯ ಆ ಘಟನೆಯ ನಂತರ ನಾನು ಬೆಳಗ್ಗೆ ಸಹಜಭಾವದಿಂದಲೇ ಎದ್ದೆ. ಅಲ್ಲದೆ ಒಂದು ಬಗೆಯ ತಾಜಾತನವನ್ನು ಅನುಭವಿಸಿದೆ. ಮೋಹನನ ಸಂಗ ನನಗೆ ಜೀವನದಲ್ಲಿ ಒಂದು ಬಗೆಯ ಉತ್ಸಾಹವನ್ನು ತುಂಬಿಸಿತು. ಆಗ ನನ್ನ ಮನಸ್ಸಿನಲ್ಲಿ ಅಪರಾಧಪ್ರಜ್ಞೆ ಅಥವಾ ದುಃಖಭಾವ ಮೂಡಲಿಲ್ಲ. ಬದಲಿಗೆ ನಾವು ಸಂತೋಷದಿಂದ ಕೂಡಿದ್ದೆವು. ಗಿರಿಜಮ್ಮನ ಮನೆಗೆ ಮಗುವನ್ನು ಕರೆತರಲು ಹೋದೆ. `ರಾತ್ರಿ ಬಹಳ ತಡವಾಗಿತ್ತು. ಸುಮ್ಮನೆ ನಿಮಗೆ ಡಿಸ್ಟರ್ಬ್ ಆಗಬಾರದೆಂದು ಬರಲಿಲ್ಲ,’ ಎಂದು ಅವರಿಗೆ ಹೇಳಿದೆ. ಅವರು ನನ್ನ ಮಾತನ್ನು ನಂಬಿದರು.
ಖುಷಿಗೆ ತಿಂಡಿ ತಿನ್ನಿಸುತ್ತಾ ಯೋಚಿಸಿದೆ, `ನಾಳೆ ರಾಘವ್ ಬಂದು ಬಿಡುತ್ತಾರೆ…. ಇಂದು ರಾತ್ರಿಯೂ…. ನಾನು ತೇಲಿಹೋದೆ. ಸಾಯಂಕಾಲ ಕೆಲಸವನ್ನೆಲ್ಲ ಬೇಗನೆ ಮುಗಿಸಿದೆ. ನಿರೀಕ್ಷೆಯಂತೆ ಕತ್ತಲಾದ ಕೂಡಲೇ ಮೋಹನ್ ಬಂದ. ಖುಷಿಯನ್ನು ಮಲಗಿಸಿ ನಾವಿಬ್ಬರೂ ಪ್ರೀತಿ ಸಾಗರದಲ್ಲಿ ಮುಳುಗಿದೆವು.
ರಾಘವ್ ಚೆನ್ನೈನಿಂದ ಬಂದ ಮೇಲೆ ನಾವು ಮತ್ತೆ ಸೇರಲು ಸಾಧ್ಯವಾಗಲಿಲ್ಲ. 10-12 ದಿನಗಳು ಕಳೆಯುವಷ್ಟರಲ್ಲಿ ನಮಗೆ ಚಡಪಡಿಕೆ ಉಂಟಾಯಿತು. ಇಬ್ಬರೂ ಮಾತನಾಡಿಕೊಂಡು ಮನೆ ಬಿಟ್ಟು ಹೋಗಲು ತೀರ್ಮಾನಿಸಿದೆವು. ಅದರ ಪರಿಣಾಮ ಏನಾಗಬಹುದೆಂಬ ಕರಿನೆರಳು ನಮಗಾಗಲಿಲ್ಲ. ಮೋಹನಿಗೇನೋ ಅವನ ಕುಟುಂಬದವರೊಡನೆ ವಿಶೇಷ ಬಾಂಧವ್ಯವಿರಲಿಲ್ಲ. ಆದರೆ ಒಬ್ಬ ಪತ್ನಿ ಮತ್ತು ತಾಯಿಯಾದ ನಾನು ಅವನ ದೈಹಿಕ ಆಕರ್ಷಣೆಯ ಸೆಳೆತವನ್ನು ಹತ್ತಿಕ್ಕಲಾರದೆ ಅವನ ಜೊತೆ ಹೋಗಲು ಉತ್ಸುಕಳಾದೆ.
ಒಂದು ದಿನ ಬೆಳಗ್ಗೆ ರಾಘವ್ ಆಫೀಸ್‌ಗೆ ಹೊರಟ ಮೇಲೆ, ಎಂದಿನಂತೆ ಖುಷಿಯನ್ನು ಡೇ ಕೇರ್ ಸೆಂಟರ್‌ನಲ್ಲಿ ಬಿಟ್ಟು ಬಂದೆ. ನಂತರ ನನ್ನ ಹೊಸ ಪ್ರಯಾಣದತ್ತ ಮುಖ ಮಾಡಿದೆ.
ಈಗ ಅದನ್ನು ಜ್ಞಾಪಿಸಿಕೊಂಡರೆ ನನ್ನ ಬಗ್ಗೆ ನನಗೆ ಅಸಹ್ಯವೆನಿಸುತ್ತದೆ. ಆದರೆ ಆಗ ವಿಷಯ ವಾಸನೆಯ ಬಿರುಗಾಳಿಯ ಮುಂದೆ ನನ್ನ ಸತೀತ್ವ ಮತ್ತು ಮಾತೃತ್ವಗಳೆರಡೂ ಸೋತುಹೋಗಿದ್ದವು.
ಗೋವಾದ ರೆಸಾರ್ಟ್ ಒಂದರಲ್ಲಿ 2-3 ದಿನಗಳು ಕಳೆದ ನಂತರ ನಮ್ಮ ಅಮಲು ಕೊಂಚ ಇಳಿಯಿತೆಂದು ಹೇಳಬಹುದು. ಜೀವನದಲ್ಲಿ ಶಾರೀರಿಕ ಅಗತ್ಯಕ್ಕಿಂತ ಹೆಚ್ಚಿನದು ಬೇರೆಯೂ ಇದೆಯೆಂದು ಆಗ ಕೊಂಚ ಅರಿವಿಗೆ ಬಂದಿತು. ಅದಕ್ಕೆ ಮುಖ್ಯ ಕಾರಣ ಹಣದ ಕೊರತೆ. ಮೋಹನ್ ಮನೆಯಿಂದ ತಂದಿದ್ದ 10-15 ಸಾವಿರ ರೂಪಾಯಿಗಳು ಮುಗಿಯಲು ಬಂದಿದ್ದವು. ನನ್ನ ಹತ್ತಿರವಿದ್ದ ಕ್ಯಾಶ್‌ನ್ನು ಮೋಹನನ ಕೈಗಿತ್ತೆ.
“ಇಷ್ಟರಿಂದ ಏನಾಗುತ್ತದೆ?” ಅವನ ಧ್ವನಿ ಕೋಪದಿಂದ ಕೂಡಿತ್ತು.
“ನಾನೇನು ಮಾಡಲಿ? ನನ್ನ ಹತ್ತಿರ ಇದ್ದುದನ್ನು ನಿನಗೆ ಕೊಟ್ಟಿದ್ದೇನೆ. ಮುಂದೇನು ಮಾಡಬೇಕು ಅನ್ನೋದನ್ನು ನೀನು ನೋಡಿಕೊ,” ನಾನೂ ಕೋಪದಲ್ಲಿ ಹೇಳಿದೆ.
“ಏನು, ಎಲ್ಲ ಜವಾಬ್ದಾರಿನೂ ನನ್ನದೇನಾ? ನೀನೂ ಸ್ವಲ್ಪ ತರಬಹುದಿತ್ತಲ್ಲ,” ಮೋಹನ ಸಿಟ್ಟಿನಿಂದ ಕೂಗಿದ.
“ಜೇಬು ಖಾಲಿ ಇದ್ದರೂ ದೊಡ್ಡ ಗಂಡಸಿನ ಹಾಗೆ ಆಗ ಮಾತನಾಡುತ್ತಿದ್ದೆ. ಈಗ ಎಲ್ಲಿ ಹೋಯಿತು ನಿನ್ನ ಗಂಡಸುತನ? ಈ ಖರ್ಚಿನ ಬಗ್ಗೆ ನೀನು ಮೊದಲೇ ಯೋಚನೆ ಮಾಡಬೇಕಿತ್ತು,” ನಾನೂ ಸಿಟ್ಟಿನಿಂದ ಹೇಳಿ ನನ್ನ ಮೈ ಮೇಲಿದ್ದ ಒಡವೆಗಳನ್ನು ಬಿಚ್ಚಿ ಅವನ ಕೈಗೆ ಕೊಟ್ಟೆ.
“ನನ್ನ ಮೇಲೆ ಕೂಗಾಡುವ ಬದಲು ನೀನು ಇನ್ನೇನು ಕೊಡಬಹುದು ಅಂತ ಯೋಚಿಸು. ಒಡವೆ ಕೊಡುವುದಿದ್ದರೆ ಎಲ್ಲವನ್ನೂ ಕೊಡು…. ಮಾಂಗಲ್ಯ ಸಹ,” ಎನ್ನುತ್ತಾ ಮೋಹನ್ ನನ್ನತ್ತ ಧಾವಿಸಿದ.
“ಇಲ್ಲ, ನಾನಿನದನ್ನು ಕೊಡುವುದಿಲ್ಲ. ಇದು ರಾಘವ್ ಕಟ್ಟಿದ ತಾಳಿ. ನಾನಿದನ್ನು ಬಿಚ್ಚುವುದಿಲ್ಲ,” ನಾನು ಭಾವಾವೇಶದಿಂದ ಹೇಳಿದೆ.
“ಓಹೋ! ಸತಿ ಸಾವಿತ್ರಿ. ಗಂಡ, ಮಗುವನ್ನು ಬಿಟ್ಟು ಬರುವಾಗ ನಿನಗೆ ಅವರ ಯೋಚನೆ ಇರಲಿಲ್ಲ. ಈಗ ಅದನ್ನು ತೆಗೆಯೋಲ್ಲ ಅಂತ ನಾಟಕ ಆಡುತ್ತಿದ್ದೀಯಾ?” ಮೋಹನನ ನಿಜರೂಪ ಹೊರಗೆ ಬಂದಿತು.
“ನಿನಗೆ ನಾಚಿಕೆ ಆಗುದಿಲ್ಲವೇನು….. ನಿನಗೋಸ್ಕರ ನಾನು ನನ್ನ ಮನೆ, ಮಗು ಎಲ್ಲವನ್ನೂ ಬಿಟ್ಟು ಬಂದಿದ್ದೇನೆ…..”
“ನೀನು ನನಗೇನೂ ಉಪಕಾರ ಮಾಡುತ್ತಿಲ್ಲ. ನಿನ್ನ ಗಂಡ ನಿನಗೆ ಕೊಡುವುದಕ್ಕೆ ಆಗದೆ ಇದ್ದುದನ್ನು ನಾನು ಕೊಟ್ಟಿದ್ದೇನೆ. ನನ್ನ ಜೊತೆ ಚೆನ್ನಾಗಿ ಮಜಾ ಮಾಡಿದ್ದೀಯಾ.”
ಮೋಹನನ ಬದಲಾದ ರೂಪವನ್ನು ಕಂಡು ನಾನು ಅಪ್ರತಿಭಳಾದೆ. ಮನಸ್ಸು ದುಃಖ, ಅಸಹಾಯಕತೆಯಿಂದ ಮರುಗಿತು. ಮೋಸ ಹೋದೆನೆಂಬ ಭಾವನೆಯಿಂದ ಕಣ್ಣೀರು ಹರಿಯಿತು. ಮನೆಯಿಂದ ಓಡಿ ಬಂದುದಕ್ಕಾಗಿ ವ್ಯಥೆ ನನ್ನ ಬುದ್ಧಿಗೇಡಿತನದ ಬಗ್ಗೆ ಕೋಪ ಎಲ್ಲ ನನ್ನನ್ನು ಕಂಗೆಡಿಸಿದವು.
ನಾನು ಅಳುತ್ತಿರುವುದನ್ನು ಕಂಡು ಮೋಹನ್ ಹತ್ತಿರ ಬಂದು ಎಂದಿನಂತೆ ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ. ಆದರೆ ಅದು ನನಗೆ ನಾಟಕೀಯವಾಗಿ ತೋರಿತು. ನಾನು ಆವೇಶದಿಂದ ಅವನ ಕೆನ್ನೆಗೊಂದು ಬಾರಿಸಿದೆ, “ದೂರ ಹೋಗು, ನನ್ನ ಹತ್ತಿರ ಬರಬೇಡ.”
“ಏಯ್, ಯಾಕೆ ಕಿರುಚುತ್ತೀಯಾ…? ತಲೆ ಕೆಟ್ಟಿದೆಯೇನು ನಿನಗೆ? ಜನರ ಗುಂಪು ಸೇರುತ್ತೆ ಅಷ್ಟೇ. ನೀನು ಮನೆ ಬಿಟ್ಟು ಓಡಿ ಬಂದಿದ್ದೀಯ ಅನ್ನುವುದನ್ನು ಮರೆಯಬೇಡ….. ಸರಿ, ನಿನ್ನಿಷ್ಟ ಬಂದ ಹಾಗೆ ಮಾಡಿಕೊ,” ಎಂದು ಮೋಹನ ಕಾಲು ಅಪ್ಪಳಿಸುತ್ತಾ ರೂಮಿನಿಂದ ಹೊರನಡೆದ.
ನನಗೊದಗಿದ ಪರಿಸ್ಥಿತಿಗೆ ನಾನು ಯಾರನ್ನು ದೂಷಿಸಲಿ? ರಾಘವ್ ಒಂದೆರಡು ಸಲ ಮೋಹನನ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ್ದರು. ಆದರೆ ಆಗ ಮೋಹನನ ಮೋಹದ ಭೂತ ನನ್ನನ್ನು ಆವರಿಸಿತ್ತು. ಹಿಂದೆ ಮುಂದೆ ಯೋಚಿಸದೆ ಇಂತಹ ಕೆಲಸ ಮಾಡಿದ್ದೆ. ಈಗ ಅದಕ್ಕಾಗಿ ಲಜ್ಜಿತಳಾಗಿ ಅಳುವುದಷ್ಟೇ ನನ್ನ ಪಾಲಿಗೆ ಉಳಿದಿತ್ತು.
ಸಾಯಂಕಾಲವಾಯಿತು. ಮೋಹನ ಬರಲಿಲ್ಲ ನನಗೆ ಭಯವಾಗತೊಡಗಿತು. ಅವನು ನನ್ನನ್ನು ಬಿಟ್ಟು ಹೋದರೆ ಏನು ಮಾಡುವುದು? ಎಲ್ಲಿ ಹೋಗುವುದು? ಮೊದಲೇ ಪರಸ್ಥಳ…. ಜೊತೆಗೆ ಕೈಯಲ್ಲಿ ಒಂದು ಕಾಸೂ ಇಲ್ಲ. ನನ್ನ ವಿನಾಶಕಾಲ ಪ್ರಾರಂಭವಾಯಿತು ಎಂದುಕೊಂಡೆ. ಪವಿತ್ರವಾದ ಸಂಬಂಧವನ್ನು ಬಿಟ್ಟು ಬಂದುದಕ್ಕೆ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ರಾಘವನಂತಹ ಒಳ್ಳೆಯ ಪತಿ ಮತ್ತು ನನ್ನ ಮುಗ್ಧ ಮಗುವಿಗೆ ಮೋಸ ಮಾಡಿರುವ ಫಲವನ್ನು ಉಣ್ಣಬೇಕಾಗಿದೆ.
ಮೋಹನನಿಗೆ ಮತ್ತೆ ಮತ್ತೆ ಕಾಲ್ ಮಾಡಿದೆ. ಆದರೆ ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಾಘವ್ ಕೂಡ ಹೀಗೇ ಚಿಂತಿಸುತ್ತಿರಬಹುದು ಎಂದುಕೊಂಡು ಫೋನ್ ಮಾಡಬೇಕೆಂದುಕೊಂಡೆ. ಆದರೆ ಅವರಿಗೆ ಏನೆಂದು ಹೇಳುವುದು? ಮೋಹನ್ ತಂದುಕೊಟ್ಟಿದ್ದ ಹೊಸ ಸಿಮ್ ನಲ್ಲಿ ಬೇರೆ ಯಾವುದೇ ನಂಬರ್ ಸೇವ್ ಆಗಿರಲಿಲ್ಲ. ರಾತ್ರಿಯಾಯಿತು. ನನ್ನ ಧೈರ್ಯ ಸಂಪೂರ್ಣವಾಗಿ ಉಡುಗಿಹೋಯಿತು.
ಆಗ ಬಾಗಿಲು ತಟ್ಟಿದ ಶಬ್ದ ಕೇಳಿ ಓಡಿಹೋಗಿ ಬಾಗಿಲು ತೆರೆದೆ. ಎದುರಿಗೆ ರಾಘವ್‌ನನ್ನು ಕಂಡು ಬೆಚ್ಚಿದೆ. ಅವರನ್ನು ಅಪ್ಪಿಕೊಂಡು ಮನಸಾರೆ ಅಳಬೇಕೆಂದು ಅನಿಸಿತು. ಆದರೆ ನನ್ನ ತಲೆಯ ಮೇಲೆ ಕೊಡಗಟ್ಟಲೆ ನೀರು ಸುರಿದಂತೆ ಪೆಚ್ಚಾದೆ. ಅವರ ಜೊತೆ ಮೋಹನನ ತಂದೆಯೂ ಇದ್ದರು. ರೂಮಿನೊಳಗೆ ನಾನೊಬ್ಬಳೇ ಇರುವುದನ್ನು ಕಂಡು ಅವರು ಹೊರಗೇ ಉಳಿದರು.
ರಾಘವ್ ಒಳಗೆ ಬಂದು ಸ್ನೇಹದಿಂದ ನನ್ನ ಬೆನ್ನು ಸವರಿದರು. ನಾನು ಕರಗಿ ಅವರನ್ನು ತಬ್ಬಿಕೊಂಡೆ, “ನನ್ನನ್ನು ಕ್ಷಮಿಸಿ, ನನ್ನಿಂದ ಬಹು ದೊಡ್ಡ ತಪ್ಪಾಗಿದೆ,” ನಾನು ಬಿಕ್ಕಳಿಸುತ್ತಾ ಹೇಳಿದೆ.
ರಾಘವ್ ನನ್ನನ್ನು ಸಮಾಧಾನಗೊಳಿಸಿ, “ಮೀನಾ, ಮನೆಗೆ ಹೋಗೋಣ ನಡಿ. ಖುಷಿ ನಿನಗಾಗಿ ಕಾಯುತ್ತಿದ್ದಾಳೆ,” ಎಂದರು.
“ಅಯ್ಯೋ, ನಾನು ಯಾವ ಮುಖ ಹೊತ್ತು ಮನೆಗೆ ಬರಲಿ? ಕ್ಷಮಿಸಲಾರದಂತಹ ತಪ್ಪನ್ನು ಮಾಡಿಬಿಟ್ಟಿದ್ದೇನೆ,” ನನಗೆ ಮತ್ತೆ ಅಳು ಉಕ್ಕಿ ಬಂದಿತು.
ರಾಘವ್ ಬಹಳ ಹೊತ್ತು ನನಗೆ ತಿಳಿ ಹೇಳಿದರು. ಮೋಹನನ ಒಬ್ಬ ಗೆಳೆಯನಿಂದ ನಮ್ಮ ವಿಷಯ ಪತ್ತೆ ಮಾಡಿ ಎಷ್ಟು ಕಷ್ಟಪಟ್ಟು ಇಲ್ಲಿಗೆ ಬಂದೆನೆಂದು ವಿವರಿಸಿದರು. ಅದನ್ನು ಕೇಳಿ ನನಗೆ ಮತ್ತಷ್ಟು ನಾಚಿಕೆಯಾಯಿತು. ಕಡೆಗೆ ಮನೆಗೆ ಹೊರಡಲು ಸಿದ್ಧಳಾದೆ. ಅಷ್ಟಲ್ಲದೆ, ನಾನು ಮತ್ತೇನು ಮಾಡಲು ಸಾಧ್ಯವಿತ್ತು?
ಮೋಹನನ ತಂದೆ ಚಿಂತಿಸುತ್ತಾ ಕುಳಿತಿದ್ದರು. “ಅಂಕಲ್, ನೀವು ಮೋಹನನ ಜೊತೆ ಮಾತನಾಡಿ ಅವನನ್ನು ಕರೆದುಕೊಂಡು ಬನ್ನಿ. ನಾನು ಮೀನಾಳನ್ನು ಕರೆದುಕೊಂಡು ಹೋಗುತ್ತೇನೆ,” ರಾಘವ್ ಅವರಿಗೆ ಹೇಳಿ ನನ್ನ ಕೈ ಹಿಡಿದುಕೊಂಡು ಹೊರಗೆ ಬಂದರು.
ನಾವು ಮನೆ ತಲುಪಿದೆವು. ರಾಘವ್‌ನ ತಂದೆ ತಾಯಿ ಮತ್ತು ನನ್ನ ಅಣ್ಣ ಅಲ್ಲಿದ್ದರು. ನನ್ನನ್ನು ಕಂಡ ಕೂಡಲೇ ಅಜ್ಜಿಯ ತೊಡೆಯ ಮೇಲಿದ್ದ ಖುಷಿ, “ಮಮ್ಮಾ,” ಎನ್ನುತ್ತಾ ಓಡಿ ಬಂದು ನನ್ನನ್ನು ತಬ್ಬಿಕೊಂಡಳು. ನಾನು ಅವಳನ್ನೆತ್ತಿಕೊಂಡು ಮುದ್ದಿಸಿದೆ. ಅಲ್ಲಿದ್ದವರಿಗೆ ಇದು ನಾಟಕೀಯಾಗಿ ತೋರಿರಬಹುದು. ರಾಘವ್ ಎದುರಿಗಿದ್ದುದರಿಂದ ಯಾರೂ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಆದರೆ ಅವರ ದೃಷ್ಟಿಯಲ್ಲಿ ಕೋಪ ತುಂಬಿತ್ತು. ನನ್ನ ಅಣ್ಣ ಸಹ ನನ್ನಿಂದ ದೂರವೇ ಇದ್ದ.
ನಾನು ಹೆಚ್ಚಿನ ಸಮಯವೆಲ್ಲ ನನ್ನ ಕೋಣೆಯಲ್ಲಿಯೇ ಇರುತ್ತಿದ್ದೆ. ರಾಘವ್ ನನಗೆ ಊಟ ತಿಂಡಿ ತಂದುಕೊಡುತ್ತಿದ್ದರು. ನಾನು ಹಿಂತಿರುಗಿದ್ದುದರಿಂದ ಖುಷಿಗೆ ಮಾತ್ರ ಸಂತೋಷವಾಗಿತ್ತು. 2-3 ದಿನಗಳು ಕಳೆದರೂ ನನ್ನ ಅತ್ತೆ, ಮಾವ, ಅಣ್ಣ ಯಾರೂ ನನ್ನೊಂದಿಗೆ ಮಾತನಾಡಿರಲಿಲ್ಲ.
ಹೀಗೇ ಒಂದು ರಾತ್ರಿ ಇದ್ದಕ್ಕಿದ್ದಂತೆ ನನಗೆ ಎಚ್ಚರವಾಯಿತು. ಖುಷಿ ನನ್ನ ಪಕ್ಕ ಮಲಗಿದ್ದಳು. ಆದರೆ ರಾಘವ್ ಅಲ್ಲಿರಲಿಲ್ಲ. ನಾನು ಎದ್ದು ಹೊರಗೆ ಬಂದೆ. ಡ್ರಾಯಿಂಗ್ ರೂಮಿನಿಂದ ಕೇಳಿಬರುತ್ತಿದ್ದ ಮಾತು ನನ್ನನ್ನು ತಡೆದು ನಿಲ್ಲಿಸಿತು.
ನನ್ನ ಅಣ್ಣ ಹೇಳುತ್ತಿದ್ದರು, “ಭಾವ, ಅಂಕಲ್ ಹೇಳುವುದನ್ನು ನಾನು ಒಪ್ಪುತ್ತೇನೆ. ನನ್ನ ತಂಗಿ ನಾಚಿಕೆಗೇಡಿನ ಕೆಲಸ ಮಾಡಿದ್ದಾಳೆ. ಅದರಿಂದ ಇನ್ನು ಮುಂದೆ ನಿಮ್ಮ ಸಂಬಂಧ ಸರಿಹೋಗುವುದಿಲ್ಲ. ನೀವು ಜೀವನ ಪರ್ಯಂತ ಅದನ್ನು ಅನುಭವಿಸಬೇಕು. ಮತ್ತೆ ಮುಂದೆ ಖುಷಿ ಕೂಡ ಅನುಭವಿಸಬೇಕು.”
“ಇಲ್ಲಿ ಕೇಳಿ,” ರಾಘವ್ ಏನೋ ಹೇಳಲು ಪ್ರಯತ್ನಿಸಿದರು. “ಇಲ್ಲ ಭಾವ, ನೀವು ಕೇಳಿ…. ಖುಷಿ ಈಗ ಚಿಕ್ಕವಳು. ಅವಳು ದೊಡ್ಡವಳಾದ ಮೇಲೆ ಈ ವಿಷಯ ತಿಳಿದರೆ ತನ್ನ ಅಮ್ಮನನ್ನು ಕ್ಷಮಿಸುವುದಕ್ಕೆ ಆಗುವುದಿಲ್ಲ. ಮತ್ತೆ ಯೋಚಿಸಿ, ಅವಳ ಅಮ್ಮ ಇಂಥವಳು ಅಂತ ಗೊತ್ತಾದರೆ ಅವಳನ್ನು ಯಾರು ಮದುವೆಯಾಗುತ್ತಾರೆ?”
“ಸ್ಟಾಪ್ ಇಟ್ ಜಗದೀಶ್…. ಬಾಯಿಗೆ ಬಂದದ್ದು ಮಾತನಾಡಬೇಡಿ,” ರಾಘವ್ ಕೋಪದಿಂದ ಹೇಳಿದರು.
“ಜಗದೀಶ್ ಹೇಳುವುದರಲ್ಲಿ ಏನು ತಪ್ಪಿದೆ…… ಅವಳ ರಕ್ತ ಹಂಚಿಕೊಂಡು ಹುಟ್ಟಿರುವ ಅಣ್ಣ ಅವನು. ಅವಳು ಮಾಡಿರುವುದನ್ನು ಸಹಿಸುವುದಕ್ಕೆ ಅವನಿಗೇ ಆಗುತ್ತಿಲ್ಲ. ಹಾಗಿರುವಾಗ ಅವಳ ಪರ ವಹಿಸಿಕೊಳ್ಳುವವನು ನೀನು ಎಂಥವನು?” ರಾಘವ್‌ನ ತಂದೆ ಮಧ್ಯೆ ಮಾತನಾಡಿದರು.
“ಅಪ್ಪ, ನೀವೆಲ್ಲರೂ ಅರ್ಥ ಮಾಡಿಕೊಳ್ಳಿ. ಮೀನಾಳ ಸ್ವಭಾವ ಏನು ಅಂತ ನನಗೆ ಗೊತ್ತು. ಅವಳು ತಪ್ಪು ಮಾಡಿದ್ದಾಳೆ ಅಂದರೆ, ಅದರಲ್ಲಿ ನನ್ನ ಪಾಲೂ ಸಹ ಇರುತ್ತದೆ. ಅವಳ ಆಸೆ, ಬಯಕೆಯನ್ನು ನಾನು ಅಲಕ್ಷಿಸಿದ್ದೇನೆ. ಅದರಿಂದಲೇ ಹಾಗಾಗಿದೆ,” ರಾಘವನ ಸ್ವರದಲ್ಲಿ ನೋವಿತ್ತು.
“ಮೀನಾ ತಪ್ಪು ಮಾಡಿಲ್ಲ ಅಂತ ನಾನು ಹೇಳುತ್ತಿಲ್ಲ. ಆದರೆ ಅದೇ ತಪ್ಪನ್ನು ಮೋಹನ್ ಕೂಡ ಮಾಡಿದ್ದಾನೆ. ನಿಮ್ಮ ಸಮಾಜ ಅವನಿಗೆ ಮಾತ್ರ ಏನೂ ಹೇಳುವುದಿಲ್ಲ. ನಾಳೆ ಅವನು ಇದೇ ಬೀದಿಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಾನೆ. ಹಾಗಿರುವಾಗ ಮೀನಾಳಿಗೆ ಮಾತ್ರ ಶಿಕ್ಷೆ ಏಕೆ? ನಾನು ಅವಳ ಪತಿ. ಬಾಳ ಸಂಗಾತಿಯಾಗಿ ಇರುವುದಾಗಿ ವಚನ ನೀಡಿದ್ದೇನೆ. ಮತ್ತೆ ಈ ಕಷ್ಟಕಾಲದಲ್ಲಿ ಅವಳ ಕೈ ಬಿಡಲೇ? ಇದೇ ತಪ್ಪನ್ನು ನಾನು ಮಾಡಿದ್ದರೆ ನೀವು ಅವಳಿಗೆ, `ಆಗಿದ್ದು ಆಯಿತು, ಅವರನ್ನು ಕ್ಷಮಿಸಿ ನಿನ್ನ ಸಂಸಾರ ಉಳಿಸಿಕೊ,’ ಅಂತ ಬುದ್ಧಿ ಹೇಳುತ್ತಿದ್ದೀರಿ ತಾನೇ?
“ಅವಳು ಒಂದು ಹೆಣ್ಣಾಗಿರುವುದರಿಂದ ಅವಳು ಮಾಡಿದ ತಪ್ಪಿಗೆ ಶೂಲಕ್ಕೇರಿಸುವಿರಾ? ನನಗಿದು ಖಂಡಿತ ಒಪ್ಪಿಗೆ ಇಲ್ಲ. ಅಪ್ಪಾ, ಮೀನಾ ಇಲ್ಲದೆ ನನ್ನ ಮತ್ತು ಖುಷಿಯ ಜೀವನ ಅಪೂರ್ಣ. ಅವಳ ಬಾಳನ್ನು ಹಾಳು ಮಾಡಲಾರೆ. ಇದು ನನ್ನ ಕೊನೆಯ ತೀರ್ಮಾನ.”
ರಾಘವ್‌ನ ತರ್ಕಬದ್ಧ ಮಾತಿಗೆ ಉತ್ತರಿಸಲಾಗದೆ ಎಲ್ಲರೂ ಮೌನವಾಗಿದ್ದರು. `ರಾಘವ್, ನನ್ನನ್ನು ಕ್ಷಮಿಸಿ. ಹೊರಗಿನ ಆಕರ್ಷಣೆಗೆ ಮರುಳಾಗಿ ನಿಮಗೆ ಮೋಸ ಮಾಡಿದೆ. ದೊಡ್ಡ ಪೆಟ್ಟು ಕೊಟ್ಟೆ. ನಿಜವಾಗಿಯೂ ನಾನು ಕ್ಷಮೆಗೆ ಯೋಗ್ಯಳಲ್ಲ,’ ಎಂದು ನನ್ನ ಮನಸ್ಸು ಚೀರಿತು.
ಈ ಘಟನೆ ನಡೆದು ಒಂದು ತಿಂಗಳಾಯಿತು. ಸಮಯ ಎಲ್ಲವನ್ನೂ ಸರಿಪಡಿಸುತ್ತದೆ ಎಂಬ ಮಾತಿನಂತೆ ರಾಘವ್ ಮತ್ತು ನಾನು ಸಾಮಾನ್ಯವಾದ ರೀತಿಯಲ್ಲಿ ನಡೆದುಕೊಳ್ಳತೊಡಗಿದೆ. ಆದರೆ ಹೊರಗಿನ ಜನರನ್ನು ಎದುರಿಸಲು ನಾನು ಹಿಂಜರಿಯುತ್ತಿದ್ದೆ. ಮೋಹನನ ಬಗ್ಗೆ ಯಾವ ಸುದ್ದಿಯೂ ನನಗೆ ತಿಳಿಯಲಿಲ್ಲ.
ಒಂದು ದಿನ ಸಾಯಂಕಾಲ ರಾಘವ್ ಬೇಗನೆ ಬಂದರು.“ಇಷ್ಟು ಬೇಗ ಬಂದಿದ್ದೀರಿ,” ನಾನು ಆಶ್ಚರ್ಯದಿಂದ ಕೇಳಿದೆ.
“ಹೊರಗಡೆ ಹೋಗಿ ಬರೋಣ. ಹೊರಡು,” ರಾಘವ್ ಪ್ರಸನ್ನತೆಯಿಂದ ನುಡಿದರು.
“ಖುಷಿ ಮಲಗಿದ್ದಾಳಲ್ಲ……” ನಾನು ತಪ್ಪಿಸಿಕೊಳ್ಳಲು ನೆಪ ಹೇಳಿದೆ.
“ಗಿರಿಜಮ್ಮನಿಗೆ ಹೇಳಿ ಬಂದಿದ್ದೇನೆ. ಅವರು ನೋಡಿಕೊಳ್ಳುತ್ತಾರೆ.”
ರಾಘವ್‌ಗೆ ಬೇಸರ ಉಂಟು ಮಾಡಲು ನನಗೆ ಇಷ್ಟವಿರಲಿಲ್ಲ. ನಾನು ಅಲಂಕರಿಸಿಕೊಂಡು ಹೊರಟೆವು.
ನಾನು ಅಂದಿನಿಂದ ಮನೆಯ ಹೊರಗೆ ಕಾಲಿಟ್ಟಿರಲೇ ಇಲ್ಲ. ಈಗ ಸಂಕೋಚದಿಂದ ಹೊರಗೆ ಬಂದೆ. ಗೇಟ್ ತೆರೆಯುವಾಗ ನನ್ನ ದೃಷ್ಟಿ ಮೋಹನನ ಮನೆಯ ಕಡೆಗೆ ಹರಿಯಿತು. ಅವನು ಬಾಲ್ಕನಿಯಲ್ಲಿ ನಿಂತು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ.
ಆ ಘಟನೆಯ ನಂತರ ಇದೇ ಮೊದಲ ಬಾರಿ ಮೋಹನನ ಮುಖವನ್ನು ನೋಡಿದೆ. ನನ್ನ ಕೈ ಕಾಲು ನಡುಗಿ ಕುಸಿಯುವಂತಾಯಿತು. ಆಗ 2 ಬಲಿಷ್ಠ ತೋಳುಗಳು ನನ್ನನ್ನು ಬಳಸಿ ಆಸರೆ ನೀಡಿದವು. ರಾಘವ್ ಸ್ನೇಹಪೂರ್ಣವಾಗಿ ನನ್ನ ಕೈ ಹಿಡಿದು ಕಾರಿನಲ್ಲಿ ಕುಳ್ಳಿರಿಸಿದರು. ಅಕ್ಕಪಕ್ಕದ ಮನೆಗಳಿಂದ ಹಲವು ಜೋಡಿ ಕಣ್ಣುಗಳು ನಾವು ಮರೆಯಾಗುವವರೆಗೂ ನಮ್ಮನ್ನೇ ನೋಡುತ್ತಿದ್ದವು.
ಸುಂದರ, ವೈಭವೋಪೇತ ಹೋಟೆಲ್ ಪ್ರವೇಶಿಸಿದೆವು. ಹಾಲ್‌ನ ಮಂದವಾದ ಬೆಳಕಿನಲ್ಲಿ ರಾಘವ್ ನನ್ನನ್ನು ಡ್ಯಾನ್ಸ್ ಗೆ ಕರೆದರು. ನಾನು ಸಂತೋಷದಿಂದ ಅವರ ಸಾಮೀಪ್ಯ ಸುಖವನ್ನು ಅನುಭವಿಸುತ್ತಾ ಡ್ಯಾನ್ಸ್ ಮಾಡಿದೆ. ಡಿನ್ನರ್ ಆದ ನಂತರ ರಾಘವ್ ನನ್ನನ್ನು ತಾವು ಮೊದಲೇ ಬುಕ್ ಮಾಡಿದ್ದ ಹೋಟೆಲ್ ರೂಮ್ ಗೆ ಕರೆದೊಯ್ದರು.
“ಇದೆಲ್ಲ ಯಾಕೆ ಬೇಕಿತ್ತು?” ರೂಮ್ ಬೀಗ ತೆಗೆಯುತ್ತಿದ್ದಾಗ ನಾನು ಕೇಳಿದೆ.
“ಮೊದಲು ಒಳಗೆ ಬಾ,” ಎನ್ನುತ್ತಾ ರಾಘವ್ ನನ್ನನ್ನು ತೋಳುಗಳಿಂದ ಎತ್ತಿಕೊಂಡರು.
“ಇದೇನು ಮಾಡುತ್ತಿದ್ದೀರಿ? ಎಲ್ಲರೂ ನೋಡುತ್ತಿದ್ದಾರೆ,” ನಾನು ನಾಚಿಕೊಳ್ಳುತ್ತಾ ಹೇಳಿದೆ.
“ನೋಡಲಿ ಬಿಡು. ನನ್ನ ಮುದ್ದಿನ ಮಡದಿ ಎಂತಹ ಸುಂದರಿ ಅಂತ ಅವರಿಗೂ ತಿಳಿಯಲಿ,” ಎನ್ನುತ್ತಾ ರಾಘವ್ ನನ್ನನ್ನು ಬೆಡ್ ಮೇಲೆ ಮಲಗಿಸಿದರು. ನಂತರ ತಮ್ಮ ಜೇಬಿನಿಂದ ಒಂದು ಪುಟ್ಟ ಗಿಫ್ಟ್ ತೆಗೆದು ರೊಮ್ಯಾಂಟಿಕ್ ರೀತಿಯಲ್ಲಿ ಅದನ್ನು ನನಗೆ ಕೊಟ್ಟರು. ಅದರೊಳಗಿನಿಂದ ಒಂದು ಹಾರ್ಟ್ ಶೇಪ್‌ನ ವಜ್ರದುಂಗುರನ್ನು ಹೊರತೆಗೆದು ನನ್ನ ಬೆರಳಿಗೆ ತೊಡಿಸಿದರು.
“ಥ್ಯಾಂಕ್ಸ್ ರಾಘವ್,” ಎನ್ನುತ್ತಾ ಅವರನ್ನು ಅಪ್ಪಿಕೊಂಡೆ. ನನ್ನ ಕಣ್ಣೀರಿನಿಂದ ನೀರು ಹರಿಯಿತು.
ಬೆನ್ನು ಒದ್ದೆಯಾದ ಅನುಭವವಾದಾಗ ಅವರು ನನ್ನ ಮುಖವನ್ನು ತಮ್ಮ ಕೈಯಲ್ಲಿ ಹಿಡಿದ ರಾಘವ್, “ಏನಿದು? ಅಳುತ್ತಿದ್ದೀಯಾ?” ಎಂದು ಕೇಳಿದರು.
“ನಾನು ನಿಮಗೆಷ್ಟು ನೋವು ಕೊಟ್ಟಿದ್ದೇನೆ….. ಯಾವ ಬಾಯಿಂದ ಕ್ಷಮೆ ಕೇಳಲಿ?”
“ಸಾಕು ಮೀನಾ, ಈ ವಿಷಯವನ್ನು ಇವನ್ನು ಯಾವತ್ತೂ ಮಾತನಾಡಬೇಡ. ನೀನು ನನ್ನ ಪ್ರೇಯಸಿ, ಪ್ರೇರಣೆ ಎರಡೂ ಆಗಿದ್ದೀಯ. ಒಂದು ವಿಷಯ ಜ್ಞಾಪಕದಲ್ಲಿ ಇಟ್ಟುಕೊ. ಎಲ್ಲಿಯವರೆಗೆ ನಿನ್ನನ್ನು ನೀನು ಕ್ಷಮಿಸುವುದಿಲ್ಲವೋ ಅಲ್ಲಿಯವರೆಗೆ ಎಲ್ಲರೂ ನಿನ್ನನ್ನು ದೋಷಿಯಾಗಿ ಕಾಣುತ್ತಾರೆ. ನೀನು ಇದರಿಂದ ಹೊರಗೆ ಬಂದು ಆತ್ಮಗೌರವದಿಂದ ಬಾಳಬೇಕು,” ರಾಘವ್ ನನ್ನನ್ನು ತಬ್ಬಿ ಹಿಡಿದು ಹೇಳಿದರು.
ಆ ಸುಂದರ ರಾತ್ರಿಯಂದು ರಾಘವ್‌ನ ಪವಿತ್ರ ತೋಳುಗಳ ಅಪ್ಪುಗೆಯಲ್ಲಿ ನಾನು ನೆಮ್ಮದಿಯಿಂದ ನಿದ್ರಿಸಿದೆ. ಅವರ ಪ್ರೀತಿಯ ಮುಂದೆ ಮೋಹನನ ಶಾರೀರಿಕ ಆಕರ್ಷಣೆ ಕಳಾಹೀನವಾಗಿ ತೋರಿತು.
ಮನೆಗೆ ಬಂದ ಮೇಲೆ ನಮ್ಮ ಜೀವನ ಬದಲಾಯಿತು. ನನ್ನ ಆ ತಪ್ಪನ್ನು ಬುದ್ಧಿಗೇಡಿತನ ಎಂದು ಭಾವಿಸಿ ಮರೆಯತೊಡಗಿದೆ. ರಾಘವ್‌ನ ಪ್ರೀತಿ ವಿಶ್ವಾಸಗಳು ನನ್ನ ಮನಸ್ಸನ್ನು ಆವರಿಸಿದ.
ಒಂದು ದಿನ ರಾಘವ್ ನನಗೆ ಪಾರ್ಲರ್‌ನ್ನು ಮತ್ತೆ ಪ್ರಾರಂಭಿಸಲು ಹೇಳಿದರು. ನಾನು ಆ ಬಗ್ಗೆ ಯೋಚಿಸತೊಡಗಿದೆ. ತಿಂಗಳುಗಳಿಂದ ಪಾರ್ಲರನ್ನು ತೆರೆದೇ ಇರಲಿಲ್ಲ. ಅಲ್ಲದೆ, ಅಲ್ಲಿಗೆ ಬರುವ ಮಹಿಳೆಯರ ಪ್ರಶ್ನಾರ್ಥಕ ದೃಷ್ಟಿಯನ್ನು ಎದುರಿಸುವ ಚಿಂತೆ. ಆದರೆ ರಾಘವ್ ನನ್ನನ್ನು ಹುರಿದುಂಬಿಸಿದರು.
ಮರುದಿನ ಕೆಲಸದಾಕೆಯನ್ನು ಜೊತೆ ಮಾಡಿಕೊಂಡು ಪಾರ್ಲರ್‌ನ್ನು ಸ್ವಚ್ಛಗೊಳಿಸಿದೆ. ಎಕ್ಸ್ ಪೈರ್ ಆಗಿದ್ದ ಕಾಸ್ಮೆಟಿಕ್‌ಗಳನ್ನು ಬಿಸಾಡಿ ಎಲ್ಲವನ್ನೂ ವ್ಯವಸ್ಥಿತಗೊಳಿಸಿದೆ. ಅಗತ್ಯ ವಸ್ತುಗಳ ಲಿಸ್ಟ್ ಮಾಡಿಕೊಂಡು ತರಿಸಿದೆ. ಪಾರ್ಲರ್‌ನ್ನು ಪುನರಾರಂಭಿಸಿ 2-3 ದಿನಗಳು ಕಳೆದರೂ ಯಾರೂ ಬರಲಿಲ್ಲ. ಇಡೀ ದಿನ ಕುಳಿತು ಕಾದದ್ದೇ ಆಯಿತು. ರಾಘವ್‌ಗೆ ನನ್ನ ಚಿಂತೆ ಅರ್ಥವಾಯಿತು.
ಒಂದು ದಿನ ರಾಘವ್ ತಮ್ಮ ಸಹೋದ್ಯೋಗಿ ಮತ್ತು ಅವರ ಪತ್ನಿಯನ್ನು ಮನೆಗೆ ಆಹ್ವಾನಿಸಿದರು. ಎಲ್ಲರೂ ಊಟ ಮುಗಿಸಿ ಮಾತನಾಡುತ್ತಾ ಕುಳಿತೆವು. ಮಾತಿನ ಮಧ್ಯೆ ರಾಘವ್ ನನ್ನ ಪಾರ್ಲರ್ ಬಗ್ಗೆ ಹೇಳಿ ನನ್ನ ಟ್ಯಾಲೆಂಟ್ ನ್ನು ಹೊಗಳಿದರು. ಆಕೆ ಪಾರ್ಲರ್ ನೋಡಲು ಬಯಸಿದರು. ನೋಡಿ ತೃಪ್ತಿಪಟ್ಟರು. ಮರುದಿನವೇ ತಮ್ಮ ಒಬ್ಬ ಗೆಳತಿಯೊಡನೆ ಬಂದು ತಮಗೆ ಬೇಕಾದುದನ್ನೆಲ್ಲ ಮಾಡಿಸಿಕೊಂಡರು. ನಾನು ಉತ್ಸಾಹದಿಂದ ಕೆಲಸ ಮಾಡಿದೆ.
ಅವರು ಹೋದ ನಂತರ ಮತ್ತಿಬ್ಬರು ಬಂದರು. ನಾನು ನಗುತ್ತಾ ಅವರನ್ನು ಸ್ವಾಗತಿಸಿದೆ. ಅವರು ಹೇರ್ ಸ್ಟೈಲ್ ಮತ್ತು ವ್ಯಾಕ್ಸಿಂಗ್ ಮಾಡಿಸಿಕೊಂಡರು. ಅವರಿಬ್ಬರಿಗೂ ನನ್ನ ಕೆಲಸ ಮೆಚ್ಚುಗೆಯಾಯಿತು.
ಒಂದು ದಿನ ಬೆಳಗ್ಗೆಯೇ ಡೋರ್ ಬೆಲ್ ಆಯಿತು. ಕೆಲಸದವಳು ಬಂದಳೆಂದು ನಾನು ಹೋಗಿ ಬಾಗಿಲು ತೆರೆದರೆ, ಎದುರಿಗೆ ಮೋಹನ್ ನಿಂತಿದ್ದ ನನ್ನ ಮನಸ್ಸು ಕಹಿಯಾಯಿತು. ಮುಖ ಗಂಟಿಕ್ಕಿತು.“ರಾಘವ್ ಸರ್ ಇದ್ದಾರಾ?” ಮೋಹನ್ ನಿಧಾನವಾಗಿ ಕೇಳುತ್ತಾ ಕಣ್ಣಿನಲ್ಲೇ ನನ್ನನ್ನು ಅಳೆಯುವಂತೆ ನೋಡಿದ. ಅವನ ಮೇಲೆ ನನಗೆ ತಿರಸ್ಕಾರ ಹುಟ್ಟಿತು. `ಇವನೇನು ಇನ್ನೂ ನನ್ನ ಮೇಲೆ ಆಸೆ ಇರಿಸಿಕೊಂಡಿದ್ದಾನೇನು? ತನ್ನನ್ನು ತಾನು ಏನೆಂದು ತಿಳಿದಿದ್ದಾನೆ?’
ಅವನಿಗೆ ಒರಟಾಗಿ ಉತ್ತರ ಕೊಡಬೇಕೆಂದುಕೊಂಡೆ. ಅಷ್ಟರಲ್ಲಿ ರಾಘವ್ ಹಿಂದಿನಿಂದ ಮಾತನಾಡಿದರು, “ಬಾ ಮೋಹನ್, ನಿನ್ನನ್ನೇ ಕಾಯುತ್ತಿದ್ದೆ.”
“ಹೇಳಿ ಸರ್, ಏನು ಮಾಡಲಿ?” ಮಾತಿನಲ್ಲಿ ಜೇನು ಬೆರೆಸಿ ಆ ಲಜ್ಜಾಹೀನ ಮಾತನಾಡಿದ.
“ಡಾರ್ಲಿಂಗ್, ಮೋಹನನಿಗೆ ಏನಾದರೂ ಕುಡಿಯಲು ತೆಗೆದುಕೊಂಡು ಬಾ,” ರಾಘವ್ ಒತ್ತಿ ಹೇಳಿದರು.
“ತರುತ್ತೇನೆ,” ಎಂದು ಹೇಳಿ ನಾನು ಅಲ್ಲಿಂದ ಒಳಸರಿದೆ.
“ಮೋಹನ್, ಇದೇ ತಿಂಗಳ 20ನೇ ತಾರೀಖಿಗೆ ನನ್ನ ಪತ್ನಿಯ ಜನ್ಮದಿನ. ಅದಕ್ಕಾಗಿ ಒಂದು ಪಾರ್ಟಿ ಏರ್ಪಾಟು ಮಾಡಲು ಯೋಚಿಸುತ್ತಿದ್ದೇನೆ.”
“ಬಹಳ ಒಳ್ಳೆಯದು ಸರ್. ನಾನು ಎಲ್ಲ ಏರ್ಪಾಟು ಮಾಡುತ್ತೇನೆ,” ಮೋಹನ ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿದ್ದ.
ರಾಘವ್‌ನ ಸೂಚನೆಯ ಪ್ರಕಾರ ಮೋಹನ್ ಗಾರ್ಡನ್‌ನಲ್ಲಿ ನಿಜಕ್ಕೂ ಬಹಳ ಚೆನ್ನಾಗಿ ಏರ್ಪಾಟು ಮಾಡಿದ. ಈ ಕೆಲಸಗಳ ನಡುವೆ ಅವನು ಅವಕಾಶ ಸಿಕ್ಕಿದಾಗೆಲ್ಲ ನನ್ನನ್ನು ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದನು. ಹಿಂದೆ ಅವನ ಈ ತುಂಟತನಕ್ಕೆ ನಾನು ಮರಳಾಗಿಬಿಟ್ಟಿದ್ದೆ. ಆದರೆ ಇಂದು ಅದನ್ನು ಕಂಡು ಕೋಪದಿಂದ ಕನಲುವಂತಾಗುತ್ತಿತ್ತು. ಆದರೆ ರಾಘವ್ ಹಿಂದಿನಿಂದ ಬಂದು ಘರ್ಷಣೆಯನ್ನು ತಪ್ಪಿಸುತ್ತಿದ್ದರು.
ಸಾಯಂಕಾಲ ರಾಘವ್ ಸಮಾರಂಭಕ್ಕಾಗಿ ತಂದುಕೊಟ್ಟಿದ್ದ ಡ್ರೆಸ್ ತೊಟ್ಟು ನಾನು ಅವರ ಕೈಹಿಡಿದು ಹಾಲ್ ಪ್ರವೇಶಿಸಿದೆ. ಅತಿಥಿಗಳೆಲ್ಲರೂ ಮೆಚ್ಚುಗೆಯ ದೃಷ್ಟಿ ಬೀರಿ ಕರತಾಡನ ಮಾಡಿ ನಮ್ಮನ್ನು ಸ್ವಾಗತಿಸಿದರು. ಪುಟ್ಟ ಖುಷಿ ಪಿಂಕ್ ಕಲರ್ ಫ್ರಾಕ್‌ನಲ್ಲಿ ಬೊಂಬೆಯಂತೆ ಕಾಣುತ್ತಿದ್ದಳು.
ಕೇಕ್ ಕತ್ತರಿಸಿ ನಾನು ಮೊದಲು ಖುಷಿಯ ಬಾಯಿಗೆ ಕೇಕ್ ಇಟ್ಟೆ. ನಂತರ ರಾಘವ್ ಮತ್ತು ನಾನು ಪರಸ್ಪರರಿಗೆ ತಿನ್ನಿಸಿದೆವು.
ಆಗ ಇದ್ದಕ್ಕಿದ್ದಂತೆ ಲೈಟ್ಸ್ ಆಫ್ ಆದವು. ಯಾರಿಗೂ ಏನೂ ಕಾಣಿಸುತ್ತಿರಲಿಲ್ಲ. ಎಲ್ಲರೂ ನಿಂತಲ್ಲೇ ನಿಂತಿದ್ದರು. ಕೆಲವರು ಮೆಲು ದನಿಯಲ್ಲಿ ಮಾತನಾಡುತ್ತಿದ್ದುದು ಕೇಳಿಸುತ್ತಿತ್ತು. ಯಾರೋ ತಟ್ಟನೆ ನನ್ನ ಕೈ ಹಿಡಿದು ಒಂದು ಪಕ್ಕಕ್ಕೆ ಕರೆದೊಯ್ದರು. ಒಂದು ಕ್ಷಣ ನನಗೇನೂ ಅರ್ಥವಾಗಲಿಲ್ಲ. ಮರುಗಳಿಗೆಗೆ ಆ ಸ್ಪರ್ಶದ ಅನುಭವದ ಅರಿವಾಗುತ್ತಲೇ ನಾನು ಆ ವ್ಯಕ್ತಿಯ ಕೆನ್ನೆಗೆ ಬಲವಾಗಿ ಬಾರಿಸಿದೆ.
ಆಗ ಲೈಟ್ ಬಂದಿತು. ನನ್ನ ಊಹೆ ಸರಿಯಾಗಿತ್ತು. ಆ ವ್ಯಕ್ತಿ ಬೇರಾರೂ ಅಲ್ಲದೆ ಮೋಹನನೇ ಆಗಿದ್ದ. ಲೈಟ್ ಹೋದ ಅವಕಾಶದ ಲಾಭ ಪಡೆಯಲು ಪ್ರಯತ್ನಿಸಿದ್ದ. ನನ್ನ ಮನಸ್ಸಿನಲ್ಲಿ ಅವನ ಬಗೆಗಿದ್ದ ಕೋಪವೆಲ್ಲ ನಾಲಿಗೆಗೆ ನುಗ್ಗಿ ಬಂದಿತು. ನಾನು ಮನಸಾರೆ ಅವನನ್ನು ಬಯ್ಯತೊಡಗಿದೆ.
ರಾಘವ್ ಹಿಂದಿನಿಂದ ಬಂದು ನನ್ನ ಕೈ ಅದುಮಿದರು. ಅಲ್ಲಿದ್ದವರನ್ನು ಕುರಿತು ಹೇಳತೊಡಗಿದರು, “ಮಿತ್ರರೇ, ವಾಸ್ತವವನ್ನು ನೀವೆಲ್ಲ ಅರ್ಥ ಮಾಡಿಕೊಂಡಿರುವಿರಿ. ಹಿಂದೆ ನಡೆದುದರಲ್ಲಿ ನನ್ನ ಪತ್ನಿಯ ದೋಷವಿದೆ ಎಂದರೆ ನಾನು ಒಪ್ಪುವುದಿಲ್ಲ. ಹಿಂದೆ ಅವಳ ಮೇಲಿದ್ದ ಪ್ರೀತಿ, ಗೌರವಗಳೇ ನನಗೆ ಇಂದೂ ಇದೆ. ಈಗ ಅದು ಇನ್ನೂ ಹೆಚ್ಚಾಗಿದೆ. ಮೊದಲು ಮಾಡಿದ ತಪ್ಪನ್ನೇ ಮತ್ತೆ ಮಾಡಲು ಪ್ರಯತ್ನಿಸಿದವನಿಗೆ ಶಿಕ್ಷೆಯಾಗಬೇಕಾಗಿದೆ. ನೀವು ನಡೆದದ್ದೆನ್ನೇ ನೋಡಿರುವಿರಿ. ಸತ್ಯ ನಿಮ್ಮ ಕಣ್ಣ ಮುಂದೆಯೇ ಇದೆ.”
ಪೆಟ್ಟು ತಿಂದ ಬಳಿಕ ಮೋಹನ ಕೋಪ ಮತ್ತು ತಿರಸ್ಕಾರದಿಂದ ನನ್ನನ್ನು ದುರುಗುಟ್ಟಿ ನೋಡತೊಡಗಿದ. ಆದರೆ ರಾಘವ್ ಮಾತು ಮತ್ತು ಜನರ ತೀಕ್ಷ್ಣದೃಷ್ಟಿಯನ್ನು ಎದುರಿಸಲಾರದೆ ತಲೆ ತಗ್ಗಿಸಿ ನಿಂತ. ಆಗ ಅವನ ತಂದೆ ತಾಯಿಯರು ಅವನನ್ನು ಅಲ್ಲಿಂದ ಕರೆದುಕೊಂಡು ಹೋದರು.
ಪಾರ್ಟಿಯಲ್ಲಿ ಉಂಟಾದ ಈ ಅನಿರೀಕ್ಷಿತ ತಡೆಗಾಗಿ ರಾಘವ್ ಮತ್ತು ನಾನು ಅತಿಥಿಗಳ ಕ್ಷಮೆ ಕೋರಿದೆವು. ನಂತರ ಎಲ್ಲರೂ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪಾರ್ಟಿಯಲ್ಲಿ ನಡೆದ ಘಟನೆಯಿಂದ ನನ್ನಲ್ಲಿ ಮರೆಯಾಗಿದ್ದ ಆತ್ಮವಿಶ್ವಾಸ ಮರಳಿ ಬಂದಿತು. ರಾಘವ್ ಸಾಂಗತ್ಯ ನನ್ನಲ್ಲಿ ಧೈರ್ಯ ತುಂಬಿತು. ನನ್ನ ಅಪರಾಧಿಪ್ರಜ್ಞೆಯನ್ನು ಹೋಗಲಾಡಿಸಿ ಸಮಾಜದಲ್ಲಿ ನಿರಾಳವಾಗಿ ನಡೆಯಲು ಆಗಲೆಂದು ರಾಘವ್ ಇದೆಲ್ಲ ಏರ್ಪಾಟು ಮಾಡಿದ್ದರು. ಮೋಹನನನ್ನು ನನಗಿಂತ ಚೆನ್ನಾಗಿ ಅವರೇ ಅರ್ಥ ಮಾಡಿಕೊಂಡಿದ್ದರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು.
ಅಂದಿನಿಂದ ನಾನು ಹಿಂಜರಿಕೆ ಇಲ್ಲದೆ, ಹೊರಗೆ ಹೋಗತೊಡಗಿದೆ. ಮೋಹನನ ತಂದೆತಾಯಿ ಆ ಮನೆಯನ್ನು ಬಿಟ್ಟು ಬೇರೆ ಕಡೆಗೆ ಹೋದರೆಂದು ಸುದ್ದಿ ತಿಳಿಯಿತು. ಅದನ್ನು ಕೇಳಿ ನಾನು ನೆಮ್ಮದಿಯ ಉಸಿರು ಹೊರಹಾಕಿದೆ.
ಅವರು ಮನೆ ಬದಲಿಸಿದ 7-8 ತಿಂಗಳ ನಂತರ ಮೋಹನನ ಮದುವೆ ನಡೆಯಿತೆಂಬ ಸುದ್ದಿಯೂ ತಿಳಿಯಿತು. ಆಗೊಮ್ಮೆ, ಈಗೊಮ್ಮೆ ತೇಲಿ ಬಂದ ವಿಷಯಗಳಿಂದ ಅವನು ಪತ್ನಿಯನ್ನು ಬಹಳ ಹಿಂಸಿಸುತ್ತಾನೆಂದು ತಿಳಿಯಿತು. ಅವನ ಕಪಟ ಮೋಹಪಾಶಕ್ಕೆ ಸಿಕ್ಕಿ ನರಳಬೇಕಿದ್ದ ನಾನು ರಾಘವ್ ನಂತಹ ಪತಿ ದೊರಕಿದ್ದರಿಂದ ಧನ್ಯಳಾದೆ ಎಂದು ಭಾವಿಸಿದೆ.
ಕುಳಿತಲ್ಲೇ ಅತೀತದಲ್ಲಿ ಮುಳುಗಿದ್ದ ನಾನು ಗಂಟೆ ಹೊಡೆದ ಸದ್ದಿಗೆ ಬೆಚ್ಚಿದೆ. ಓಹ್! ಖುಷಿಯ ಸ್ಕೂಲ್ ಮುಗಿಯುವ ಸಮಯವಾಗಿ ಬಿಟ್ಟಿತ್ತು. ಮನೆಯ ಕೆಲಸವೆಲ್ಲ ಹಾಗೇ ಬಿದ್ದಿದ್ದವು. ನಾನು ಎದ್ದು ಮನೆಗೆ ಬೀಗ ಹಾಕಿ ಖುಷಿಯನ್ನು ಕರೆತರಲು ಹೊರಟೆ.
ದಾರಿಯಲ್ಲಿ ನಡೆಯುವಾಗ ಪ್ರಮೀಳಾಳ ಸಾವಿನ ಬಗ್ಗೆ ಯೋಚಿಸಿ ಬಹಳ ದುಃಖವಾಯಿತು. ಆದರೆ ನೀಚ ಮೋಹನನ ಬಗೆಗೆ ನನ್ನಲ್ಲಿ ಕೊಂಚ ಸಹಾನುಭೂತಿ ಇರಲಿಲ್ಲ.