ಮದುವೆ ಸೀಸನ್‌ ಬಂದರೂ ಬ್ಯೂಟಿ ಪಾರ್ಲರ್‌ಗಳಿಗೆ ಮೊದಲಿನಂತೆ ಬಿಸ್‌ನೆಸ್‌ ಸಿಗುತ್ತಿಲ್ಲ. ಹಾಗಾಗಿ ಬ್ಯೂಟಿ ಪಾರ್ಲರ್‌ ಬಿಸ್‌ನೆಸ್‌ ವಹಿವಾಟು ಸ್ವಲ್ಪ ಮಂದಗೊಂಡಿದೆ. ಜಿಎಸ್‌ಟಿಯಿಂದ ಮಹಿಳೆಯರ ಸೌಂದರ್ಯದ ಖರ್ಚು ಏರಿಕೆಯಾಗಿದೆಯೇ?

ಬೆಂಗಳೂರಿನ ಪ್ರಸಿದ್ಧ ಸ್ಥಳವೊಂದರ ಬ್ರ್ಯಾಂಡೆಡ್‌ ಬ್ಯೂಟಿಪಾರ್ಲರಿನಲ್ಲಿ ಮಹಿಳೆಯೊಬ್ಬರು ಹೇರ್‌ಕಟಿಂಗ್‌ ಹಾಗೂ ಹೇರ್‌ ಸ್ಪಾ ಮಾಡಿಸಿಕೊಂಡರು. ಬಳಿಕ ಬಿಲ್‌ ನೋಡಿ ಆ ಮಹಿಳೆ ಬ್ಯೂಟಿ ಪಾರ್ಲರ್‌ನ ಉಸ್ತುವಾರಿ ಗಮನಿಸುವ ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಹೇಳಿದಳು, “ಮುಂಚೆ ನಾನು ಈ ಎರಡೂ ಸೇವೆಗಳನ್ನು ಬಹಳ ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಳ್ಳುತ್ತಿದ್ದೆ….” ಕೌಂಟರ್‌ನಲ್ಲಿ ಕುಳಿತಿದ್ದ ಯುವತಿ ಹೇಳಿದಳು, “ಮೊದಲು ಸರ್ವೀಸ್‌ ಟ್ಯಾಕ್ಸ್ ಶೇ.12ರಷ್ಟು ಇತ್ತು. ಅದೀಗ 18% ಹೆಚ್ಚಾಗಿದೆ.”

ಆ ಮಹಿಳೆಗೆ ಈ ವಿಷಯ ಸರಿಹೋಗಲಿಲ್ಲ. ಹೆಚ್ಚಿನ ಬಿಲ್‌ ಮೊತ್ತವನ್ನು ಆ ಮಹಿಳೆ ಕೊಡಲು ಸಿದ್ಧರಿರಲಿಲ್ಲ. ಆಕೆ ಹೇಳಿದಳು, “ನೀವು ನನಗೆ ಬಿಲ್‌ ಕೊಡಬೇಡಿ, ನನಗೆ ಟ್ಯಾಕ್ಸ್ ಕೊಡಬೇಕಿಲ್ಲ.”

ಆ ಮಾತಿಗೆ ಸೆಲೂನ್‌ನಲ್ಲಿ ಇದ್ದ ಮಹಿಳೆ ಹೇಳಿದಳು, “ಬಿಲ್‌ ಇಲ್ಲದೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಟ್ಯಾಕ್ಸ್ ಪಾವತಿ ಮಾಡಲೇಬೇಕು.”

ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಹಣ ಪಾವತಿ ಮಾಡಿದಳು. ಆದರೆ ಹೊರಗೆ ಕಾಲಿಡುತ್ತ ಆಕೆ ಗುಡುಗುತ್ತ ಹೇಳಿದಳು, “ನೀವು ಟ್ಯಾಕ್ಸ್ ಬಂದ್‌ ಮಾಡದೇ ಇದ್ದರೆ ನಾವು ನಿಮ್ಮ ಬಳಿ ಸರ್ವೀಸ್‌ ತೆಗೆದುಕೊಳ್ಳಲು ಬರುವುದೇ ಇಲ್ಲ.”

ಜಿಎಸ್‌ಟಿಯಿಂದ ದೊಡ್ಡ ಸಂಕಷ್ಟ

ಸೆಲೂನ್‌ನರವರ ಜೊತೆ ಮಾತುಕತೆ ನಡೆಸಿದ ಬಳಿಕ ತಿಳಿದುಬಂದ ವಿಷಯವೇನೆಂದರೆ, ಜಿಎಸ್‌ಟಿ ಶುರುವಾದ ಬಳಿಕ ದಿನ ಈ ತೆರನಾದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುತ್ತಿದೆ. ಕೆಲವು ಗ್ರಾಹಕರು ಹೇಗಿದ್ದಾರೆಂದರೆ, ಅವರು ಯಾವುದೇ ಟ್ಯಾಕ್ಸ್ ಇರದ ಪಾರ್ಲರ್‌ಗಳಿಗೆ ಹೋಗುತ್ತಾರೆ. ಅಂದಹಾಗೆ ಆ ಪಾರ್ಲರ್‌ಗಳು ಯಾವುದೇ ರಸೀದಿ ನೀಡುವುದಿಲ್ಲ. ಆದರೆ ಜಿಎಸ್‌ಟಿ ತೆರಿಗೆ ಅನ್ವಯ ಆದ ಬಳಿಕ ತಮ್ಮ ರೇಟ್‌ಗಳನ್ನು ಹೆಚ್ಚಿಸಿಕೊಂಡರು. ಆದರೆ ಬ್ರ್ಯಾಂಡೆಡ್‌ ಪಾರ್ಲರ್‌ಗಳಿಗೆ ಹೋಲಿಸಿದರೆ ಇವರ ರೇಟುಗಳು ಕಡಿಮೆ ಇರುತ್ತವೆ. ಕಡಿಮೆಯಾದ ತಮ್ಮ ಪಾರ್ಲರ್‌ಗಳ ವಹಿವಾಟನ್ನು ಹೆಚ್ಚಿಸಲು ಬ್ರ್ಯಾಂಡೆಡ್‌ ಪಾರ್ಲರುಗಳು ಹೊಸದೊಂದು ವಿಧಾನದಲ್ಲಿ ಗ್ರಾಹಕರಿಗೆ ತಿಳಿವಳಿಕೆ ನೀಡಲು ಆರಂಭಿಸಿವೆ. ಜಿಎಸ್‌ಟಿ ಶುರುವಾದ ಬಳಿಕ ಪಾರ್ಲರುಗಳ ಸರ್ವೀಸ್‌ ರೇಟ್‌ಗಳು ಬದಲಾಗಿವೆ. ಈ ಬದಲಾದ ದರಗಳಲ್ಲಿ ಗ್ರಾಹಕರಿಂದ ಪಡೆಯಲಾಗುವ ಸರ್ವೀಸ್‌ ಚಾರ್ಜ್‌ಗಳಲ್ಲಿ ಯಾವುದೇ ಬಗೆಯ ತೆರಿಗೆಯನ್ನು ತೋರಿಸಲಾಗುವುದಿಲ್ಲ.

ಅಂದಹಾಗೆ, ಹೇರ್‌ಕಟಿಂಗ್‌ ಮತ್ತು ಹೇರ್‌ ಸ್ಪಾಗಾಗಿ ಮುಂಚೆ 500/ ರೂ. ವಸೂಲಿ ಮಾಡಲಾಗುತ್ತಿತ್ತು. ಜಿಎಸ್‌ಟಿ ಬಳಿಕ ಅದನ್ನು 600 ರೂ.ಗಳಿಗೆ ಹೆಚ್ಚಿಸಲಾಯಿತು. ಈ 600ರೂ.ಗಳಲ್ಲಿ ಗ್ರಾಹಕರಿಂದ ಯಾವುದೇ ತೆರಿಗೆ ವಸೂಲಿ ಮಾಡಲಾಗುವುದಿಲ್ಲ. ಆಗ ಗ್ರಾಹಕನಿಗೆ ತಾನೇನು ತೆರಿಗೆ ಕೊಡುತ್ತಿಲ್ಲ ಎಂದು ಸಮಾಧಾನವಾಗುತ್ತದೆ.

ಈ ಬಗ್ಗೆ ಪಾರ್ಲರಿನವರನ್ನು ಕೇಳಿದರೆ, ಕಂಪನಿಯೇ ನೇರವಾಗಿ ತೆರಿಗೆ ಪಾವತಿಸುತ್ತಿದೆ ಎಂದು ಹೇಳಿಕೆ ನೀಡುತ್ತಾರೆ. ಗ್ರಾಹಕರೊಂದಿಗಿನ ಜಂಜಾಟವಂತೂ ಈ ರೀತಿ ಕಡಿಮೆಯಾಯಿತು. ಗ್ರಾಹಕರಿಗೆ ಅನಿಸುವುದೇನೆಂದರೆ,  ಪಾರ್ಲರಿನವರು ತಮ್ಮ ಸರ್ವೀಸ್‌ ಚಾರ್ಜ್‌ ಹೆಚ್ಚಿಸಿದ್ದಾರೆ. ಗ್ರಾಹಕರು ಬೇರೆ ಬೇರೆ ಸರ್ವೀಸ್‌ ತೆಗೆದುಕೊಳ್ಳಲು ಬಯಸಿದರೆ ಅವರಿಗೆ ತೆರಿಗೆ ಪಾವತಿಸಲು ಹೇಳಲಾಗುತ್ತದೆ. ಒಂದು ವೇಳೆ 2 ರಿಂದ 4 ರಂತೆ ಸರ್ವೀಸ್‌ ಸೇರಿಸಿ ತೆಗೆದುಕೊಂಡರೆ ಅವರಿಂದ ತೆರಿಗೆ ವಸೂಲಿ ಮಾಡಲಾಗುವುದಿಲ್ಲ.

ಗ್ರಾಹಕರಲ್ಲಿ ಆಕ್ರೋಶ

ಇಂತಹ ಪ್ಯಾಕೇಜ್‌ಗಳಿಂದ ತಮ್ಮ ಪರ್ಸ್‌ಗೆ ಭಾರಿ ಹೊರೆ ಬೀಳುತ್ತದೆ ಎಂದು ಗ್ರಾಹಕರು ಹೇಳುತ್ತಾರೆ. ಹೆಚ್ಚಿನ ಗ್ರಾಹಕರು ಹೇರ್‌ ಕಟಿಂಗ್‌ ಮತ್ತು ಫೇಶಿಯಲ್‌ಗಾಗಿ ಬರುತ್ತಾರೆ. ಒಂದು ವೇಳೆ ಅವರು ಎರಡೂ ಸರ್ವೀಸ್‌ಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳ ಬಯಸಿದರೆ ತೆರಿಗೆ ಕೊಡಬೇಕಾಗುತ್ತದೆ. ಒಂದು ವೇಳೆ ಅದರಲ್ಲಿ 1, 2 ಹಾಗೂ ಸರ್ವೀಸ್‌ ಸೇರಿಕೆ ಪ್ಯಾಕೇಜ್‌ ಮಾಡಲಾಗುತ್ತದೆ. ಇದರಲ್ಲಿ ತೆರಿಗೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಪ್ಯಾಕೇಜ್‌ನ ಖರ್ಚು ದ್ವಿಗುಣವಾಗುತ್ತದೆ.

ಸೆಲೂನ್‌ನವರದು ವಿಭಿನ್ನ ತರ್ಕ. ಅವರು ಜಿಎಸ್‌ಟಿ ವಿರುದ್ಧ ಮುಕ್ತವಾಗಿ ಧ್ವನಿ ಎತ್ತಲು ಹಿಂದೇಟು ಹಾಕುತ್ತಾರೆ. ಪಾರ್ಲರಿನವರು ನೀಡುವ ಸರ್ವೀಸ್‌ಗೆ ಅವರು ಕೇವಲ 18% ತೆರಿಗೆಯನ್ನಷ್ಟೇ ತೆಗೆದುಕೊಳ್ಳುತ್ತೇವೆ. ಅದರ ಹೊರತಾಗಿಯೂ ಕೆಲವು ಉತ್ಪನ್ನಗಳ ಮೇಲೆ 25% ಹೆಚ್ಚುವರಿ ತೆರಿಗೆ ತೆರಬೇಕಾಗುತ್ತದೆ. ಅದಕ್ಕಾಗಿ ತಮ್ಮ ರೇಟ್‌ಗಳನ್ನು ಹೆಚ್ಚಿಸಬೇಕಾಯಿತು ಎನ್ನುತ್ತಾರೆ.

ಸೆಲೂನ್‌ನವರು ಹೇಳುವುದೇನೆಂದರೆ, ಜಿಎಸ್‌ಟಿ ಜಾರಿಗೆ ಬಂದ ಬಳಿಕ ಬ್ಯೂಟಿ ಸರ್ವೀಸ್‌ ಅಷ್ಟೇ ಅಲ್ಲ, ಹೆಲ್ತ್ ಸರ್ವೀಸ್‌ ಕೂಡ ದುಬಾರಿ ಆಗಿವೆ.

ಇದರಿಂದ ಗ್ರಾಹಕರ ಮೇಲೆ 2 ಬಗೆ ಪ್ರಭಾವಗಳು ಉಂಟಾಗಿದೆ. ಮೊದಲನೆಯದ್ದು ಕಡಿಮೆ ಹಣ ಕೊಡಲು ಗ್ರಾಹಕರು ಹೈಜೀನ್‌ ದೃಷ್ಟಿಯಿಂದ ಸರಿಯಲ್ಲದ ಪಾರ್ಲರುಗಳಿಗೆ ಹೋಗುತ್ತಿದ್ದಾರೆ. ಎರಡನೇದು, ನಾನ್‌ ಬ್ರ್ಯಾಂಡೆಡ್‌ ಬ್ಯೂಟಿ ಪ್ರಾಡಕ್ಟ್ಸ್ ಬಳಕೆ ಮಾಡುತ್ತಾರೆ. ಅದು ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಸುರಕ್ಷಿತವಲ್ಲ.

ಪಾರ್ಲರ್‌ಗಳ ದರ ಹೆಚ್ಚಳ

ನಾನ್‌ ಬ್ರ್ಯಾಂಡೆಡ್‌ ಪಾರ್ಲರ್‌ಗಳು ಮೊದಲೇ ತಮ್ಮ ದರಪಟ್ಟಿ ಹೆಚ್ಚಿಸಿವೆ. ಆದರೆ ಸರ್ವೀಸ್‌ನಲ್ಲಿ ಮಾತ್ರ ಯಾವುದೇ ಸುಧಾರಣೆ ಮಾಡಿಲ್ಲ. ಶ್ರೀಮಂತ ವರ್ಗದ ಜನರು ಪುನಃ ಬ್ರ್ಯಾಂಡೆಡ್‌ ಪಾರ್ಲರ್‌ಗಳಿಗೆ ಬರುತ್ತಿದ್ದಾರೆ. ಅವರು ದುಬಾರಿ ಪ್ಯಾಕೇಜ್‌  ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಸೌಂದರ್ಯದ ಮೇಲೆ ಮಾಡುವ ಖರ್ಚು ಈಗ ಮೊದಲಿಗಿಂತ ಹೆಚ್ಚಾಗಿದೆ. ಇಂತಹ ಪಾರ್ಲರ್‌ಗಳಿಗೆ ನಿಯಮಿತವಾಗಿ ಹೋಗುವ ಸ್ನೇಹಾ ಹೀಗೆ ಹೇಳುತ್ತಾರೆ, “ಜಿಎಸ್‌ಟಿಯನ್ವಯ ಪಾರ್ಲರ್‌ಗಳಿಗೆ 12% ನಿಂದ 18%ಗೆ  ತೆರಿಗೆ ಹೆಚ್ಚಳವಾಗಿದೆ. ಇದೇ ನೆಪ ಮಾಡಿಕೊಂಡು ಪಾರ್ಲರುಗಳು ತಮ್ಮ ಸೇವೆಯ ಶುಲ್ಕ ಹೆಚ್ಚಿಸಿವೆ. ಇದರಿಂದ ಪಾರ್ಲರುಗಳ ಖರ್ಚು ಹೆಚ್ಚಾಗಿದೆ. ಮೊದಲು ನಾನು ಪಾರ್ಲರ್‌ಗೆಂದು ಪ್ರತಿ ತಿಂಗಳು 2500 ರೂ. ಖರ್ಚು ಮಾಡುತ್ತಿದ್ದೆ. ಅದೀಗ 4000 ರೂ.ಗಳಿಗೆ ಏರಿದೆ. ಅದರಲ್ಲಿ ಮೇಕಪ್‌ ಖರ್ಚು ಸೇರಿಲ್ಲ.”

ಮದುವೆ ಸೀಸನ್‌ನಲ್ಲೂ

ನಾನ್‌ ಬ್ರ್ಯಾಂಡೆಡ್‌ ಪಾರ್ಲರ್‌ಗಳಿಗೆ ಹೋಗುವ ಪ್ರಿಯಾಂಕಾ ಹೀಗೆ ಹೇಳುತ್ತಾರೆ, “ನಾನ್‌ ಬ್ರ್ಯಾಂಡೆಡ್‌ ಪಾರ್ಲರ್‌ಗಳು ತೆರಿಗೆ ಪಾತಿಸುವುದಿಲ್ಲ. ಅವರು ಕೊಡುವುದು ಕೈಯಿಂದ ಬರೆದ ರಸೀದಿ. ಆ ರಸೀದಿಯಲ್ಲಿ ಪಾರ್ಲರ್‌ನ ಹೆಸರು ಕೂಡ ನಮೂದಿಸಲಾಗಿರುವುದಿಲ್ಲ. ಬ್ರ್ಯಾಂಡೆಡ್‌ ಹಾಗೂ ನಾನ್‌ ಬ್ರ್ಯಾಂಡೆಡ್‌ ಪಾರ್ಲರ್‌ನಲ್ಲಿ ನೀಡಲಾಗುವ ಸರ್ವೀಸ್‌ನಲ್ಲಿ ಒಂದೂವರೆಯಿಂದ 2 ಪಟ್ಟು ಅಂತರ ಇರುತ್ತದೆ. ಮೊದಲಿಗೆ ಹೋಲಿಸಿದರೆ ಈಗ ಎರಡೂ ಕಡೆ ಹೆಚ್ಚು ಹಣ ಪಾವತಿಸಬೇಕಾಗಿ ಬರುತ್ತದೆ. ಸಾಮಾನ್ಯವಾಗಿ ಮಹಿಳೆಯರು ಸರ್ಕಾರದ ಮುಖಾಂತರ ಹಾಕಲ್ಪಡುವ ತೆರಿಗೆಗಳಿಗೂ ತಮಗೂ ಏನು ಸಂಬಂಧ ಎಂದು ಯೋಚಿಸುತ್ತಾರೆ.”

ಯಾವುದೇ ಬಗೆಯ ತೆರಿಗೆಯಿರಲಿ, ಅದು ಮಹಿಳೆಯರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೋ ಎಂದು ಅವರಿಗೆ ಅರಿವಿರುವುದಿಲ್ಲ. ಜಿಎಸ್‌ಟಿ ಅದಕ್ಕೊಂದು ಸ್ಪಷ್ಟ ನಿದರ್ಶನ. ಜಿಎಸ್‌ಟಿಯಿಂದಾಗಿ ಸೌಂದರ್ಯದ ಮೇಲಿನ ಖರ್ಚು ಹೆಚ್ಚಾಗಿದೆ. ಅದರ ಪರಿಣಾಮ ಬ್ರೈಡಲ್ ಸೀಸನ್‌ಗೂ ಉಂಟಾಗಿದೆ. ಮೊದಲು ಮದುವೆ ಸೀಸನ್‌ನಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಮಹಿಳಾ ವ್ಯಾಪಾರಿ ಸಂಘಟನೆಯ ಅಧ್ಯಕ್ಷೆ ಅನಿತಾ ಶರ್ಮ ಹೀಗೆ ಹೇಳುತ್ತಾರೆ, “ಮೊದಲು 500 ಗ್ರಾಂನ  ಒಂದು ವ್ಯಾಕ್ಸ್ ಪ್ಯಾಕೇಜ್‌ಗೆ 25 ರಿಂದ 30 ರೂ.ಗಳಷ್ಟು ಹೆಚ್ಚಾಗಿದೆ. ಮೊದಲು ವ್ಯಾಕ್ಸಿಂಗ್‌ಗೆ 150 ರೂ. ತೆಗೆದುಕೊಳ್ಳಲಾಗುತ್ತಿತ್ತು. ಅದು ಕೂಡ ಈಗ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರು ತಾವೇ ಸ್ವತಃ ವ್ಯಾಕ್ಸಿಂಗ್‌ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಒಳ್ಳೆಯ ಪರಿಣಾಮ ಲಭಿಸುವುದಿಲ್ಲ.”

ಪ್ರತಿಯೊಂದು ಬ್ಯೂಟಿ ಸರ್ವೀಸ್‌ನಲ್ಲಿ ಇದೇ ತೆರನಾಗಿ ದರಗಳು ಹೆಚ್ಚಾಗಿವೆ. ಅದರಿಂದಾಗಿ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಯಾವ ಗ್ರಾಹಕರು ಪಾರ್ಲರಿಗೆ ಬರುತ್ತಿದ್ದಾರೊ, ಅವರು ಹೆಚ್ಚಿಗೆ ತೆರಬೇಕಾಗುತ್ತಿದೆ. ಜಿಎಸ್‌ಟಿಯ ತಪ್ಪು ನಿರ್ಧಾರ ತಮ್ಮ ಖಾಸಗಿ ಜೀವನದ ಮೇಲೂ ಉಂಟಾಗುತ್ತಿದೆ ಎಂದು ಮಹಿಳಾ ವರ್ಗ ಹೇಳುತ್ತಿದೆ.

– ಶೈಲಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ