ಭಾರತದಲ್ಲಿ ವಿಚ್ಛೇದನದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿವೆ. 10 ವರ್ಷಗಳ ಹಿಂದಿನತನಕ 1000 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ವಿಚ್ಛೇದನ ಪಡೆಯುತ್ತಿದ್ದ. ಆದರೆ ಈಗ 1000ಕ್ಕೆ 13ಕ್ಕಿಂತ ಹೆಚ್ಚಾಗಿದೆ. ವಿಚ್ಛೇದನ ಅರ್ಜಿ ಸಲ್ಲಿಕೆಯ ಪ್ರಮಾಣದಲ್ಲಿ ಭಾರಿ ಹೆಚ್ಚಳ ಉಂಟಾಗಿರುವುದು ಗಮನಕ್ಕೆ ಬರುತ್ತಿದೆ. ಬೆಂಗಳೂರು, ಮುಂಬೈ, ಕೋಲ್ಕತಾ, ಚೆನ್ನೈ, ಲಖ್ನೌದಂತಹ ದೊಡ್ಡ ದೊಡ್ಡ ನಗರಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಿರುವುದು ಕಂಡುಬರುತ್ತವೆ. ಈ ನಗರಗಳಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸುವವರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ.
2004ರಲ್ಲಿ ಮುಂಬೈನಲ್ಲಿ 11,667 ವಿಚ್ಛೇದನದ ಪ್ಪಕರಣಗಳು ದಾಖಲಾಗಿದ್ದವು. 2010ರಲ್ಲಿ ಇದರ ಪ್ರಮಾಣ 5248 ಇತ್ತು. ಅದೇ ರೀತಿ 2014ರಲ್ಲಿ ಲಖ್ನೌ ಹಾಗೂ ದೆಹಲಿಯಲ್ಲಿ ಇದರ ಪ್ರಮಾಣ 8347 ಮತ್ತು 2000 ಇತ್ತು. 2010ರಲ್ಲಿ ಇದರ ಪ್ರಮಾಣ 2388 ಹಾಗೂ 920 ಇತ್ತು.
ವಿಚ್ಛೇದನದ ಪ್ರಕರಣಗಳಲ್ಲಿ ಈ ಪ್ರಮಾಣದ ಹೆಚ್ಚಳ ಹಾಗೂ ದಂಪತಿಗಳ ನಡುವೆ ಹೆಚ್ಚುತ್ತಿರುವ ಮನಸ್ತಾಪಕ್ಕೆ ಏನು ಕಾರಣ? ಸಂಬಂಧಗಳು ಏಕೆ ಗಟ್ಟಿಯಾಗಿ ಉಳಿಯುತ್ತಿಲ್ಲ? ಸಂಬಂಧಗಳ ವಯಸ್ಸನ್ನು ಕಿರಿದುಗೊಳಿಸುತ್ತಿರುವ ಆ ಕಾರಣಗಳಾದರೂ ಏನು?
ಈ ನಿಟ್ಟಿನಲ್ಲಿ ಅಮೆರಿಕದ ಮನೋತಜ್ಞ ಹಾಗೂ ಮ್ಯಾರೇಜ್ ಎಕ್ಸ್ ಪರ್ಟ್ ಜಾನ್‌ಗಾಟ್‌ಮ್ಯಾನ್ ತಮ್ಮ 40 ವರ್ಷಗಳ ಅಧ್ಯಯನ ಹಾಗೂ ಅನುಭವದ ಆಧಾರದ ಮೇಲೆ ಒಂದು ನಿಷ್ಕರ್ಷೆಗೆ ಬಂದರು. ಮುಖ್ಯವಾಗಿ 4 ಕಾರಣಗಳಿದ್ದು, ಅವುಗಳಿಂದಾಗಿ ದಂಪತಿಗಳಲ್ಲಿ ಮಾತುಕಥೆ ರಹಿತ ವಾತಾವರಣ ಸೃಷ್ಟಿಯಾಗುತ್ತದೆ. ಈ ಸ್ಥಿತಿ ಉತ್ಪನ್ನವಾದರೆ ಮುಂದಿನ 6 ವರ್ಷಗಳಲ್ಲಿ ಅವರ ವಿಚ್ಛೇದನಾಗುತ್ತದೆ.
ಟೀಕಾತ್ಮಕ ಧೋರಣೆ : ಅಂದಹಾಗೆ ಎಂದಾದರೊಮ್ಮೆ ಒಬ್ಬರು ಮತ್ತೊಬ್ಬರನ್ನು ಟೀಕಿಸುತ್ತಾರೆ. ಗಂಡಹೆಂಡತಿಯ ನಡುವೆ ಇದು ಸಾಮಾನ್ಯ. ಆದರೆ ಯಾವಾಗ ಅದು ವಿಕೋಪಕ್ಕೆ ಹೋಗುತ್ತದೆಂದರೆ, ಟೀಕೆ ಮಾಡುವ ವಿಧಾನ ಎಷ್ಟು ಕೆಟ್ಟದಾಗಿರುತ್ತದೆಂದರೆ, ಅದು ಟೀಕಿಸಲ್ಪಡುವ ವ್ಯಕ್ತಿಯ ಹೃದಯಕ್ಕೆ ನಾಟುವಂತಿರುತ್ತದೆ. ಎಂಥದೇ ಸ್ಥಿತಿಯಲ್ಲೂ ಒಬ್ಬರು ಇನ್ನೊಬ್ಬರನ್ನು ತಪ್ಪಿತಸ್ಥರು ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅವರ ಮೇಲೆ ಆರೋಪಗಳ ಸುರಿಮಳೆ ಗೈಯ್ಯುತ್ತಾರೆ. ಇಂತಹ ಸ್ಥಿತಿಯಲ್ಲಿ ಗಂಡಹೆಂಡತಿ ಅದೆಷ್ಟು ದೂರ ಹೋಗಿ ಬಿಡುತ್ತಾರೆಂದರೆ, ಅವರು ಪುನಃ ಹತ್ತಿರ ಬರುವುದು ಕಠಿಣವೆಂಬಂತೆ ಅನಿಸುತ್ತದೆ.
ತಿರಸ್ಕಾರದ ಧೋರಣೆ : ನಿಮ್ಮ ಮನಸ್ಸಿನಲ್ಲಿ ಸಂಗಾತಿಯ ಬಗೆಗೆ ಅಸಹನೀಯ ಹಾಗೂ ತಿರಸ್ಕಾರದ ಧೋರಣೆ ಬಂದುಬಿಟ್ಟಲ್ಲಿ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ ಎನಿಸುತ್ತದೆ. ತಿರಸ್ಕಾರ ಪ್ರದರ್ಶನವೆಂದರೆ ಸಂಗಾತಿಯನ್ನು ಕಡೆಗಣಿಸುವುದು, ಎಚ್ಚರಿಕೆ ಕೊಡುವುದು. ಹೀಗೆ ಎದುರಿನ ವ್ಯಕ್ತಿಗೆ ಮಹತ್ವವೇ ಇಲ್ಲ ಎಂಬಂತೆ ತೋರಿಸಿಕೊಡುವುದಾಗಿರುತ್ತದೆ. ಈ ರೀತಿಯ ವರ್ತನೆಗಳು ಸಂಬಂಧದ ಬೇರುಗಳಿಗೆ ನೋವು ನೀಡುತ್ತದೆ.
ಸ್ವರಕ್ಷಣೆಯ ಅಭ್ಯಾಸ : ಸಂಗಾತಿಯ ಮೇಲೆ ಆರೋಪ ಹೊರಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಧೋರಣೆ ಶೀಘ್ರವೇ ಸಂಬಂಧಕ್ಕೆ ಮುಳುವಾಗಿ ಪರಿಣಮಿಸಬಹುದು. ಗಂಡಹೆಂಡತಿ ಯಾವುದೇ ಸ್ಥಿತಿಯಲ್ಲಿ ಪರಸ್ಪರರಿಗೆ ಸಹಕಾರ ನೀಡಬೇಕೆಂದು ಅಪೇಕ್ಷಿಸಲಾಗುತ್ತದೆ. ಆದರೆ ಒಬ್ಬರು ಇನ್ನೊಬ್ಬರನ್ನು ವಿರೋಧಿಸುತ್ತ ಹೊರಟರೆ ಅವರ ಸಂಬಂಧವನ್ನು ಯಾರೊಬ್ಬರೂ ಕಾಪಾಡಲು ಆಗದು.
ದೇಶದಲ್ಲಿ ಹೆಚ್ಚುತ್ತಿರುವ ವಿಚ್ಛೇದನದ ಪ್ರಕರಣಗಳು ಮತ್ತು ದಂಪತಿಗಳ ನಡುವೆ ಹೆಚ್ಚುತ್ತಿರುವ ಮತಭೇದಗಳ ಕಾರಣಗಳನ್ನು ಕೇಳಿ ಆಶ್ಚರ್ಯವಾಗುತ್ತದೆ. ಈ ಸಂಬಂಧಗಳು ಏಕೆ ಸ್ಥಿರವಾಗಿ ಉಳಿಯುತ್ತಿಲ್ಲ? ಸಂಬಂಧಗಳ ಆಯುಷ್ಯ ಕಿರಿದಾಗಲು ಏನು ಕಾರಣ…..?
ಸಂಗಾತಿಯನ್ನು ಗೌರವಿಸಿ
ನೀವು ನಿಮ್ಮ ವಿವಾಹವನ್ನು ಯಶಸ್ವಿಗೊಳಿಸಬೇಕೆಂದರೆ, ಎಲ್ಲಕ್ಕೂ ಮೊದಲು ಸಂಗಾತಿಯನ್ನು ಗೌರವಿಸಬೇಕಾಗುತ್ತದೆ. ಅದಕ್ಕಾಗಿ ನೀವು ಸಂಗಾತಿಗೆ ಮನವರಿಕೆ ಮಾಡಿಕೊಡಬೇಕಾದ ವಿಷಯವೆಂದರೆ, ನಾನು ನಿಮ್ಮನ್ನು ಸಮಾನ ಎಂದು ಗೌರವಿಸುತ್ತೇನೆ. ನಿಮ್ಮನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ನಿರ್ಧಾರ ಕೈಗೊಳ್ಳುತ್ತೇನೆ. ನೀವು ಸಂಗಾತಿಯ ಬಗೆಗಿನ ವಿಷಯಗಳನ್ನು ಗೌಪ್ಯವಾಗಿಡುವುದು ಕೂಡ ಅಷ್ಟೇ ಅತ್ಯವಶ್ಯಕ.
ಸಂಗಾತಿಯ ಬಗೆಗಿನ ನಿಮ್ಮ ವರ್ತನೆ ಕರುಣೆಭರಿತ, ಪ್ರೀತಿಭರಿತ ಮತ್ತು ತಿಳಿವಳಿಕೆಯಿಂದ ಕೂಡಿರಲಿ. ನಿಮ್ಮ ಒಂದು ದಿನ ತೀರಾ ಕೆಟ್ಟದಾಗಿ ಕಳೆದಿದ್ದರೆ, ಅದರ ಸ್ಪಷ್ಟ ಕರಿನೆರಳು ನಿಮ್ಮ ಭವಿಷ್ಯದ ಮೇಲೆ ಗೋಚರಿಸುತ್ತಿದ್ದಲ್ಲಿ, ನೀವು ಸಂಗಾತಿಯಲ್ಲಿ ಕ್ಷಮೆ ಕೇಳಲು ಮುಂದಾಗಿ. ನೀವು ಸಂಗಾತಿಯ ಜೊತೆ ಮದುವೆಯಾಗಿದ್ದೀರಿ. ಆ ಕಾರಣದಿಂದ ಅವರ ಜೊತೆ ದುರ್ವರ್ತನೆ ತೋರುವ ಬದಲು ಸಂಗಾತಿಯ ಬಗ್ಗೆ ಗೌರವ ಕೊಡಿ.
– ಎಸ್. ಮಹೇಶ್ವರಿ
ಮಾತುರಹಿತ ಸ್ಥಿತಿ : ವ್ಯಕ್ತಿಯೊಬ್ಬ ತನ್ನ ಸಂಗಾತಿಯ ಬಗ್ಗೆ ಉದಾಸೀನತೆಯ ಧೋರಣೆ ತಳೆದುಬಿಟ್ಟರೆ, ಅವರ ನಡುವಿನ ಮಾತುಕಥೆ ನಿಂತುಹೋಗುತ್ತದೆ. ಈ ನಿರ್ಲಕ್ಷ್ಯ ಉದಾಸೀನ ಧೋರಣೆ ಹಾಗೆಯೇ ಮುಂದುವರಿದಿದ್ದರೆ ಇಬ್ಬರ ನಡುವೆ ಆವರಿಸಿದ ಈ ಗೋಡೆ ಈವರೆಗೆ ಇದ್ದ ಅಷ್ಟಿಷ್ಟು ಒಳ್ಳೆಯ ಜೀವನವನ್ನು ಕೊನೆಗೊಳಿಸುತ್ತದೆ.
ಬೇರೆ ಕೆಲವು ಕಾರಣಗಳು
ಕ್ವಾಲಿಟಿ ಟೈಮ್ : ಬೆಂಗಳೂರಿನ `ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್’ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ವಿಚ್ಛೇದನಕ್ಕೆ ಪ್ರಮುಖ ಕಾರಣ, ಗಂಡಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವಿಕೆ. ಆರ್ಥಿಕ ನಿರಾವಲಂಬನೆ ಕಾರಣ ಈ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಹೊರಟಿದೆ.
ಈ ಸಂಶೋಧನೆ ಅಥವಾ ಸಮೀಕ್ಷೆಯಿಂದ ಸ್ಪಷ್ಟವಾದ ಒಂದು ಸಂಗತಿಯೇನೆಂದರೆ, ಶೇ.53ರಷ್ಟು ಮಹಿಳೆಯರು ತಮ್ಮ ಗಂಡಂದಿರ ಜೊತೆ ಜಗಳವಾಡುತ್ತಾರೆ. ಏಕೆಂದರೆ ಅವರ ಪತಿ ಅವರೊಂದಿಗೆ ಸಾಕಷ್ಟು ಸಮಯ ಕಳೆಯುವುದಿಲ್ಲ ಎನ್ನುವುದಾಗಿರುತ್ತದೆ. ಶೇ.31.7 ರಷ್ಟು ಪುರುಷರು ತಮ್ಮ ಹೆಂಡತಿಯರ ಜೊತೆ ಜಗಳವಾಡುತ್ತಾರೆ. ಉದ್ಯೋಗಸ್ಥ ಹೆಂಡತಿಯರು ಕುಟುಂಬಕ್ಕಾಗಿ ಸಾಕಷ್ಟು ಸಮಯ ಕೊಡುತ್ತಿಲ್ಲ ಎನ್ನುವುದಾಗಿರುತ್ತದೆ.
ಸೋಶಿಯಲ್ ಮೀಡಿಯಾ : ಅಮೆರಿಕಾದಲ್ಲಿ ಇತ್ತೀಚೆಗಷ್ಟೆ ನಡೆಸಿದ ಅಧ್ಯಯನದಿಂದ ತಿಳಿದು ಬಂದ ಸಂಗತಿಯೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಸಮಯ ಕಳೆಯುತ್ತಿರುವ ಪ್ರವೃತ್ತಿಗೂ ವಿಚ್ಛೇದನದ ಪ್ರಕರಣಗಳಿಗೂ ಪರಸ್ಪರ ಸಂಬಂಧವಿದೆ.
ವ್ಯಕ್ತಿಯೊಬ್ಬ ಎಷ್ಟು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿರುತ್ತಾನೊ ಕುಟುಂಬ ಒಡೆಯುವ ಅಪಾಯ ಹೆಚ್ಚಿಗೆ ಇರುತ್ತದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರಬಹುದು.
ಮೊದಲನೆಯದು, ಸಾಮಾಜಿಕ ಜಾಲತಾಣಗಳಲ್ಲಿ ಮಗ್ನನಾಗಿರುವ ವ್ಯಕ್ತಿ ಹೆಂಡತಿಗೆ ಕೊಡುವ ಸಮಯ ಕಡಿಮೆಯಾಗುತ್ತದೆ. ಅವನು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಲೈಕ್ಸ್ ಮತ್ತು ಕಮೆಂಟ್ಸ್ ಪಡೆಯಲು ಕಾತುರನಾಗಿರುತ್ತಾನೆ. ಎರಡನೆಯದು, ಆ ವ್ಯಕ್ತಿಗೆ ಬಾಹ್ಯ ಸಂಬಂಧ ಏರ್ಪಡುವ ಸಾಧ್ಯತೆಗಳು ಹೆಚ್ಚುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್‌ಶಿಪ್‌ಅಕ್ಸೆಪ್ಟ್ ಮಾಡುವುದು ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯಂತ ಸುಲಭವಾಗಿರುತ್ತದೆ.
ಯಶಸ್ವಿ ಹಾಗೂ ಸಂಬಂಧದ ದೀರ್ಘಾಯುಷ್ಯಕ್ಕೆ ಕಷ್ಟದ ಸಮಯದಲ್ಲಿ ಪರಸ್ಪರರಿಗೆ ಜೊತೆ ಕೊಡಬೇಕು. ಇದರಿಂದ ಪರಸ್ಪರ ಸಂಬಂಧ ಗಟ್ಟಿಗೊಳ್ಳುತ್ತದೆ. ವಿವಾದದ ಸಾಧ್ಯತೆ ಏನೇನೂ ಇರುವುದಿಲ್ಲ………
ಹೀಗೆ ರೂಪಿಸಿಕೊಳ್ಳಿ ಸುಖಕರ ಜೀವನ
ಗಂಡಹೆಂಡತಿಯ ಜೀವನದಲ್ಲಿ ಪರಸ್ಪರ ಸಂಬಂಧ ಮಹತ್ವದ ಪಾತ್ರ ನಿಭಾಯಿಸುತ್ತದೆ. 30%ಗಿಂತ ಹೆಚ್ಚು ಹೊಸ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಇಂತಹ ಸ್ಥಿತಿಯಲ್ಲಿ ವಿಚ್ಛೇದನದ ಅಪಾಯಗಳನ್ನು ಕಡಿಮೆಗೊಳಿಸುವ, ಸಮಸ್ಯೆಗಳಿಂದ ಹೊರಬರುವ ಹಾಗೂ ಆರೋಗ್ಯಕರ ಸಂಬಂಧ ಕಾಯ್ದುಕೊಂಡು ಹೋಗಲು ಕೆಳಕಂಡ ಉಪಾಯಗಳನ್ನು ಅನುಸರಿಸಿ :
ಗಂಡಹೆಂಡತಿಯ ನಡುವೆ ಭಾವನಾತ್ಮಕ ವಿರಕ್ತಿಯ ಕಾರಣದಿಂದ ವಿಚ್ಛೇದನದ ಸ್ಥಿತಿ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಪರಸ್ಪರರ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು, ಅವರ ದೃಷ್ಟಿಕೋನ ತಿಳಿಯುವುದು ಹಾಗೂ ಅವರನ್ನು ನಗಿಸಲು ಪ್ರಯತ್ನಿಸುವುದು ಅತ್ಯವಶ್ಯ.
ಸಂಶೋಧಕರು ಕಂಡುಕೊಂಡಿದ್ದೇನೆಂದರೆ, ಮಾತುಕತೆ ನಡೆಸುವ ವಿಧಾನ ಸಮರ್ಪಣಾ ಮನೋಭಾವ, ವ್ಯಕ್ತಿತ್ವದ ವಿಶೇಷತೆಗಳು ಅಥವಾ ಒತ್ತಡಪೂರ್ಣ ಜೀವನಕ್ಕಿಂತ ಹೆಚ್ಚು ಮಹತ್ವದ್ದಾಗಿವೆ. ಇದರಿಂದ ದಂಪತಿಗಳ ಜೀವನ ವಿಚ್ಛೇದನದತ್ತ ಹೋಗುವ ಸಾಧ್ಯತೆ ಇದೆಯೇ ಎಂದು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಂಗಾತಿಯ ಭಾವನೆಗಳು, ಆಸಕ್ತಿಗಳು ಮತ್ತು ವಿಚಾರಗಳನ್ನು ಪ್ರಶಂಸಿಸಬೇಕು. ಅದಕ್ಕಾಗಿ ಚಿಕ್ಕಪುಟ್ಟ ಕೆಲಸಗಳಿಗಾಗಿ ಧನ್ಯವಾದ ಹೇಳಲು ಮರೆಯಬೇಡಿ.
ಜೀವನದಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸಬೇಕು. ಉದಾಹರಣೆಗಾಗಿ ಉದ್ಯೋಗದ ಸವಾಲುಗಳು, ಆರೋಗ್ಯದ ಪ್ರಕರಣಗಳು, ಭವಿಷ್ಯದ ಚಿಂತೆಗಳು. ಈ ಸಮಸ್ಯೆಗಳು ಸಾಮಾನ್ಯವಾಗಿ ಸಂಬಂಧಗಳನ್ನು ಪ್ರಭಾವಿತಗೊಳಿಸುತ್ತವೆ. ಹಾಗಾಗಿ ಗಂಡಹೆಂಡತಿ ತಿಳಿವಳಿಕೆ ಮತ್ತು ಪರಿಪಕ್ವತೆಯ ಜೊತೆಗೆ ಅವನ್ನು ಎದುರಿಸಬೇಕು.
ನಿಮ್ಮ ಸಂಗಾತಿಯ ಭಾವನೆ, ವಿಚಾರಧಾರೆ, ಇಷ್ಟಾನಿಷ್ಟಗಳ ಪ್ರಶಂಸೆ ಮಾಡುತ್ತಿರಬೇಕು. ಸಂಗಾತಿಯನ್ನು ಗೌರವಾದರದಿಂದ ನಡೆಸಿಕೊಳ್ಳಿ. ಅವರು ನಿಮಗೆ ಮಾಡಿರಬಹುದಾದ ಸಣ್ಮಪುಟ್ಟ ಉಪಕಾರಗಳಿಗೂ ಕೃತಜ್ಞತಾಬದ್ಧರಾಗಿರಿ.
– ಡಾ. ಮನ್ವೀತ್
ಸಂಬಂಧಗಳ ಮೇಲೆ ಧರ್ಮದ ಪ್ರಭಾವ
ಸಾಮಾನ್ಯವಾಗಿ ಸಂಬಂಧಗಳಲ್ಲಿ ಒಮ್ಮೆ ಸಿಹಿ ಮತ್ತೊಮ್ಮೆ ಕಹಿ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಆದರೆ ಇದರರ್ಥ ನೀವು ನಿಮ್ಮ ತಪ್ಪುಗಳ ಮೇಲೆ ಗಮನ ಕೊಡಲೇಬಾರದು ಎಂದಲ್ಲ. ನೀವು ಇದರ ಪರಿಹಾರಕ್ಕೆಂದು ಪೂಜಾರಿಗಳು, ಜ್ಯೋತಿಷಿಗಳ ಬಳಿ ಓಡಿ ಹೋಗುತ್ತೀರಿ. ಅವರು ಗಂಡಹೆಂಡತಿಯ ಸಂಬಂಧ ಏಳೇಳು ಜನ್ಮದ್ದು ಎಂದು ಹೇಳುತ್ತಾರೆ. ಸಂಬಂಧ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಂಡತಿಗೆ ಶಿಕ್ಷೆ ಕೊಡುತ್ತಾರೆ. ಆಕೆ ಏನನ್ನೂ ಹೇಳಿಕೊಳ್ಳಬಾರದು, ಮೌನದಿಂದಿರಬೇಕು ಎನ್ನುತ್ತಾರೆ.
ಅಂದಹಾಗೆ ಧರ್ಮಗುರುಗಳ ಉದ್ದೇಶ ವ್ಯಕ್ತಿಗಳಿಬ್ಬರು 7 ಜನ್ಮಗಳ ಸುಳಿಯಲ್ಲಿ ಸಿಕ್ಕಿ ಒದ್ದಾಡಬೇಕು ಎನ್ನುವುದಾಗಿರುತ್ತದೆ. ಮನೆಯ ಜಗಳಗಳಿಂದ ಪಾರಾಗಲು ಬಗೆಬಗೆಯ ಅನುಷ್ಠಾನಗಳನ್ನು ಮಾಡುತ್ತಿರಬೇಕು. ತಮಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಿರಬೇಕೆಂದು ಬಯಸುತ್ತಾರೆ.
ಮಹಿಳೆಯರು ಹೆಚ್ಚು ಭಾವುಕರಾಗಿರುತ್ತಾರೆ. ಜಪತಪ, ದಾನಪುಣ್ಯದಲ್ಲಿ ನಂಬಿಕೆ ಇಡುತ್ತಾರೆ. ಅದರ ಲಾಭ ಪಡೆದುಕೊಳ್ಳಲು ಪೂಜಾರಿ ಪುರೋಹಿತರು ಕಾತುರದಿಂದ ಕಾಯುತ್ತಿರುತ್ತಾರೆ. ಏಕೆಂದರೆ ಅವರಿಗೆ ಅಷ್ಟಿಷ್ಟು ಮೊತ್ತ ಬರುತ್ತಿರಬೇಕೆಂದು ಅಪೇಕ್ಷಿಸುತ್ತಾರೆ.
ಒಂದು ಕುಟುಂಬದ ಜಗಳದಲ್ಲಿ ಮಂತ್ರವಾದಿ ಪ್ರವೇಶಿಸಿ ಇರುವಷ್ಟು ನೆಮ್ಮದಿ ಕೂಡ ಹಾಳಾಗಿ ಹೋಯಿತು. ಮನೆಜಗಳದಿಂದ ಪಾರಾಗಲು ಮನೆಯ ಹೆಂಗಸರು ಮಂತ್ರವಾದಿಯ ಬಾಗಿಲು ತಟ್ಟಿದರು. ದೆಹಲಿಯಲ್ಲಿ ನಡೆದ ಘಟನೆಯಿದು. ಮಹಿಳೆಯೊಬ್ಬಳು ತನ್ನ ಮಗ ಸೊಸೆಯ ಸಣ್ಣಪುಟ್ಟ ಜಗಳದ ಪರಿಹಾರಕ್ಕೆಂದು ಜ್ಯೋತಿಷಿಗಳು ಮಂತ್ರವಾದಿಯ ಬಳಿ ಹೋಗುತ್ತಿದ್ದಳು. ಅದಕ್ಕೆ ರೋಸಿಹೋದ ಮಗ ತಾಯಿಗೆ ಚಾಕುವಿನಿಂದ ಇರಿದು ಸಾಯಿಸಿಬಿಟ್ಟ. ಜ್ಯೋತಿಷಿ ಮಂತ್ರವಾದಿ ಹೇಳಿದಂತೆ ಮಾಡಲು ಹೋದಾಗ ಸೊಸೆಗೆ ತನ್ನ ಅತ್ತೆ ಏನೋ ಮಾಟ ಮಾಡಿಸುತ್ತಿದ್ದಾಳೆ ಎಂದು ಅನಿಸಿತು. ಆಗ ಮಗ ಸಿಟ್ಟಿನಿಂದ ಚಾಕುವಿನಿಂದ ಇರಿದುಬಿಟ್ಟ.
ಸಂಬಂಧ ಬಲಗೊಳ್ಳಲಿ
ಸಂಬಂಧ ಏರ್ಪಡುವುದು ಸುಲಭ. ಆದರೆ ಅದನ್ನು ನಿಭಾಯಿಸುವುದು ಕಠಿಣ. ಜಾನ್‌ಗಾಟ್‌ಮ್ಯಾನ್‌ರ ಪ್ರಕಾರ ದಂಪತಿಗಳು ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಬೇಕು.
ಲವ್ ಮ್ಯಾಪ್‌ಬಳಸಿ : ಲವ್ ಮ್ಯಾಪ್‌ಎನ್ನುವುದು ಮಾನವ ಮೆದುಳಿನ ಒಂದು ಭಾಗವಾಗಿದ್ದು, ಅಲ್ಲಿ ವ್ಯಕ್ತಿ ತನ್ನ ಸಂಗಾತಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿ ಅಂದರೆ ತೊಂದರೆಗಳು, ಅಪೇಕ್ಷೆಗಳು, ಕನಸುಗಳ ಸಹಿತವಾಗಿ ಸಮಸ್ತ ಸಂಗತಿಗಳು ಹಾಗೂ ಭಾವನೆಗಳನ್ನು ಒಂದು ಕಡೆ ಸಂಗ್ರಹಿಸಿ ಇಟ್ಟಿರುತ್ತಾನೆ. ಗಾಟ್‌ಮ್ಯಾನ್‌ರ ಪ್ರಕಾರ, ದಂಪತಿಗಳು ಲವ್ ಮ್ಯಾಪ್‌ನ್ನು ಪರಸ್ಪರರ ಬಗೆಗಿನ ತಿಳಿವಳಿಕೆ, ಆತ್ಮೀಯತೆ ಮತ್ತು ಪ್ರೀತಿಯನ್ನು ಪ್ರದರ್ಶಿತಗೊಳಿಸಲು ಬಳಸಬೇಕು.
ಸದಾ ಜೊತೆ ಕೊಡಿ : ಸಂಗಾತಿಯ ಜೀವನಕ್ಕೆ ಸಂಬಂಧಪಟ್ಟ ಪ್ರತಿಯೊಂದು ಸಂದರ್ಭದಲ್ಲೂ ಜೊತೆಗಿರಿ. ಪರಿಪೂರ್ಣ ಉತ್ಸಾಹ ಮತ್ತು ಪ್ರೀತಿಯಿಂದ ಅವರ ಸುಖದುಃಖಗಳಲ್ಲಿ ಭಾಗಿಯಾಗಿ.
ಒಪ್ಪಿಗೆ ಪಡೆದುಕೊಳ್ಳಿ : ಯಾವುದೇ ಬಗೆಯ ನಿರ್ಧಾರ ಕೈಗೊಳ್ಳುವ ಮುನ್ನ ಅಥವಾ ಮಹತ್ವದ ಕೆಲಸ ಮಾಡುವ ಸಂದರ್ಭದಲ್ಲಿ ಸಂಗಾತಿಯನ್ನು ಮರೆಯಬೇಡಿ. ಆತನ ಒಪ್ಪಿಗೆ ತೆಗೆದುಕೊಳ್ಳಿ.
ಒತ್ತಡ ದೂರಗೊಳಿಸಿ : ಗಂಡಹೆಂಡತಿಯ ನಡುವೆ ದೀರ್ಘಕಾಲದ ತನಕ ಒತ್ತಡ ಇರಲೇಬಾರದು. ಸಂಗಾತಿ ನಿಮ್ಮ ಯಾವುದಾದರೂ ಮಾತಿನಿಂದ ನೊಂದಿದ್ದರೆ, ಮಧುರ ಶಬ್ದಗಳ ಲೇಪನ ಹಚ್ಚಿ. ಪರಸ್ಪರರಲ್ಲಿ ಹೊಂದಾಣಿಕೆ ರೂಪಿಸಿಕೊಳ್ಳಿ.
ಹೆಚ್ಚು ದೂರ ಆಗಬೇಡಿ : ಗಂಡ ಹೆಂಡತಿಯ ನಡುವೆ ವಿವಾದ ಒಮ್ಮೊಮ್ಮೆ ಅದೆಷ್ಟು ವಿಕೋಪಕ್ಕೆ ಹೋಗುತ್ತದೆಂದರೆ ಸಮೀಪ ಬರುವ ಎಲ್ಲ ದಾರಿಗಳೂ ಮುಚ್ಚಿಹೋಗುತ್ತವೆ. ಇಬ್ಬರೂ ಆ ಬಗ್ಗೆ ಮಾತುಕತೆಯನ್ನೇನೋ ನಡೆಸುತ್ತಾರೆ. ಆದರೆ ಸಕಾರಾತ್ಮಕ ನಿಲುವು ತಾಳಲು ಆಗದು. ಪ್ರತಿಯೊಂದು ವಾದವಿವಾದದ ಬಳಿಕ ಅವರು ಮತ್ತಷ್ಟು ಕುಗ್ಗಿದಂತೆ ಭಾವಿಸುತ್ತಾರೆ. ಇಂತಹ ಸಂದರ್ಭ ಬರದೇ ಇರುವಂತೆ ನೋಡಿಕೊಳ್ಳಬೇಕೆಂದು ಗಾಟ್‌ಮ್ಯಾನ್ ಹೇಳುತ್ತಾರೆ. ಗಂಡಹೆಂಡತಿಯ ಸಂಬಂಧದಲ್ಲಿ ವಿವಾದ ಏಕೆ ಹೆಚ್ಚುತ್ತಾ ಹೋಗುತ್ತದೆಂದರೆ, ಅವರ ಮಾತುಕತೆಯಲ್ಲಿ ಮಾಧುರ್ಯ, ಉತ್ಸಾಹ ಮತ್ತು ಆತ್ಮೀಯತೆಯ ಕೊರತೆ ಇರುತ್ತದೆ. ಅವರು ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಈ ಅಂತರ ಎಷ್ಟೇ ಹೆಚ್ಚಾದರೂ ದಂಪತಿಗಳಿಗೆ ಇದರ ಮೂಲ ಎಲ್ಲಿದೆ ಎನ್ನುವುದು ಗೊತ್ತಾಗಬೇಕು. ಅದನ್ನು ಹೇಗೆ ನಿವಾರಿಸಬೇಕು ಎನ್ನುವುದು ಕೂಡ ತಿಳಿದಿರಬೇಕು.
ಸಂಗಾತಿಗೆ ಒಳ್ಳೆ ಅನುಭವ ಉಂಟು ಮಾಡಿ : ತನ್ನ ಸಂಗಾತಿಗೆ ಯಾವುದು ಇಷ್ಟ, ಯಾವುದರಿಂದ ಅವರು ಖುಷಿ ಪಡುತ್ತಾರೆ ಎನ್ನುವುದು ಇಬ್ಬರಿಗೂ ತಿಳಿದಿರಬೇಕು. ಸಂಗಾತಿಯೊಂದಿಗೆ ಕಳೆದ ಕ್ಷಣಗಳನ್ನು ಆಗಾಗ ನೆನಪಿಸಿ. ಅದೇ ಪ್ರೀತಿಯನ್ನು ನೀವು ಪುನಃ ಅನುವಭಕ್ಕೆ ತಂದುಕೊಳ್ಳಬಹುದು.
– ಗಿರಿಜಾ ಶಂಕರ್
ಒಳ್ಳೆಯ ಸಂಬಂಧಕ್ಕೆ ಅಗತ್ಯ ಮಾತುಗಳು…..
ಸಂಗಾತಿಯ ಜೊತೆ ಸುಖಕರ ವೈವಾಹಿಕ ಜೀವನ ಕಳೆಯಲು ಏನೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ…..
ವಿಶ್ವಾಸ : ನೀವು ನಿಮ್ಮ ಸಂಗಾತಿಯ ಮೇಲೆ ಅದೆಷ್ಟು ವಿಶ್ವಾಸ ಇಡುತ್ತೀರಿ, ಸಂಗಾತಿ ನಿಮ್ಮ ಮೇಲೆ ಅದೆಷ್ಟು ವಿಶ್ವಾಸ ಇಡುತ್ತಾರೆ ಎನ್ನುವುದರ ಮೇಲೆ ನಿಮ್ಮ ಸಂಬಂಧದ ಭವಿಷ್ಯ ನಿರ್ಧಾರವಾಗುತ್ತದೆ.
ನಿಕಟತೆ : ಲೇಖಕ ರೊನಾಲ್ಡ್ ಎಡ್ಲರ್ 4 ಪ್ರಕಾರದ ನಿಕಟತೆಗಳ ಬಗ್ಗೆ ಹೇಳುತ್ತಾರೆ. ಅದರಿಂದ ನಾವು ಸಂಗಾತಿಯ ಜೊತೆ ನಿಕಟರಾಗಿರುವ ಅನುಭವ ಮಾಡಿಕೊಳ್ಳಬಹುದು. ಮೊದಲನೆಯದು ದೈಹಿಕವಾಗಿ, ಎರಡನೆಯದು ಮಾನಸಿಕವಾಗಿ, ಮೂರನೆಯದು ಇಂಟಲೆಕ್ಚುವಲ್ ಮತ್ತು ನಾಲ್ಕನೆಯದು ಶೆಫರ್ಡ್ ಆ್ಯಕ್ಟಿವಿಟೀಸ್.
ಸಹಜತೆ : ಸಂಬಂಧದಲ್ಲಿ ಸಹಜತೆ ಇರುವುದು ಅತ್ಯವಶ್ಯಕ. ನೀವು ಸಂಗಾತಿಯ ಜೊತೆ ಇದ್ದಾಗ ನಿಮಗೆ ಸಹಜ ಭಾವನೆ ಬರುತ್ತದೆಯೇ? ಹೌದು ಎಂದಾದಲ್ಲಿ ನಿಮ್ಮ ಸಂಬಂಧ ಹೆಚ್ಚು ವರ್ಷಗಳ ಕಾಲ ನಡೆಯುತ್ತದೆ.
ಗೌರವ : ಜಾನ್‌ಗಾಟ್‌ಮ್ಯಾನ್‌ರ 20 ವರ್ಷಗಳ ನಿರಂತರ ಸಂಶೋಧನೆಯಿಂದ ತಿಳಿದುಬಂದ ಒಂದು ಸಂಗತಿಯೆಂದರೆ, ವಿಚ್ಛೇದನಕ್ಕೆ ಎಲ್ಲಕ್ಕೂ ಮುಖ್ಯ ಕಾರಣವೆಂದರೆ, ಗಂಡಹೆಂಡತಿ ಪರಸ್ಪರರಿಗೆ ಗೌರವ ಕೊಡದೇ ಇರುವುದಾಗಿದೆ. ಪರಸ್ಪರರಿಗೆ ಗೌರವ ಕೊಡುವುದರ ಬದಲಿಗೆ ಮನಸ್ಸಿನಲ್ಲಿ ಸದಾ ನಕಾರಾತ್ಮಕ ಭಾವನೆಗಳನ್ನು ತುಂಬಿಕೊಂಡಿದ್ದರೆ, ನೀವು ಸದಾ ವ್ಯಂಗ್ಯದ ಬಾಣಗಳಿಂದ ತಿವಿಯುತ್ತಿದ್ದರೆ, ನಿಮ್ಮ ಸಂಬಂಧಕ್ಕೆ ಅಂತ್ಯ ಸಮೀಪಿಸಿದೆ ಎಂದರ್ಥ. ಕಮ್ಯುನಿಕೇಶನ್ ಸ್ಟಡೀಸ್‌ನಲ್ಲಿ ಇದನ್ನು `ಟಫ್ ಟು ಎ ಪರ್ಸನ್ ಅಂಡ್ ಸಾಫ್ಟ್ ಆನ್ ದಿ ಇಶ್ಯೂ’ ಎಂದು ಹೇಳಲಾಗುತ್ತದೆ.
ವಿವಾದ ಹೆಚ್ಚಿಸಬೇಡಿ : ಪ್ರತಿಯೊಂದು ಮನೆಯಲ್ಲೂ ಜಗಳಗಳಾಗುತ್ತವೆ. ಆದರೆ ಅವನ್ನು ಮುಂದುವರಿಸಿಕೊಂಡು ಹೋಗಬೇಡಿ. ಕೆಲವರು ಜಗಳದ ಸಮಯದಲ್ಲಿ ಜೋರು ಜೋರಾಗಿ ಕೂಗಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅಗತ್ಯ ಮಾತುಗಳು ಗೌಣವಾಗುತ್ತವೆ. ದಂಪತಿಗಳು ಅನಗತ್ಯ ಮಾತುಗಳಲ್ಲಿ ಮುಳುಗಿಹೋಗುತ್ತಾರೆ. ಭಾವನಾತ್ಮಕವಾಗಿ ಅವರಿಗೆ ಸಂಬಂಧ ಹೊರೆ ಎಂಬಂತೆ ಭಾಸವಾಗುತ್ತದೆ, ಮನಸ್ಸಿನಿಂದ ನಿಕಟವಾಗಿದ್ದಾಗಲೇ ನೀವು ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯ. ಆಗಲೇ ನಿಮ್ಮ ಸಂಬಂಧ ಮೊದಲಿನಂತಾಗಬಹುದು.
ಸಂಕಷ್ಟದಲ್ಲಿ ಜೊತೆಗೂಡಿ : ಸಂಕಷ್ಟದ ಸಮಯದಲ್ಲಿ ಸಂಗಾತಿ ಜೊತೆ ಕೊಡಬೇಕು. ಆಗಲೇ ನಿಮ್ಮ ನಡುವಿನ ಸಂಬಂಧ ಯಶಸ್ವಿ ಎನಿಸಿಕೊಳ್ಳುತ್ತದೆ. ಜೊತೆಗೆ ಅದು ಹೆಚ್ಚು ವರ್ಷಗಳ ಕಾಲ ಮುಂದುವರಿಯುತ್ತವೆ. ಆರ್ಥಿಕ ಸವಾಲುಗಳೇ ಆಗಿರಬಹುದು ಅಥವಾ ದೈಹಿಕ ಸಮಸ್ಯೆಗಳೇ ಇರಬಹುದು, ಆಗ ನೀವು ಜೊತೆಗಿರುವುದು ಸಂಗಾತಿಗೆ ಧೈರ್ಯ ಕೊಡುತ್ತದೆ.
ಆರ್ಥಿಕ ನಿರ್ಧಾರಗಳಿಗೆ ಸಮ್ಮತಿ : ಒಂದು ಅಧ್ಯಯನದ ಪ್ರಕಾರ, ಗಂಡ ಹೆಂಡತಿಯರಲ್ಲಿ ವಾರಕ್ಕೊಮ್ಮೆ ಆರ್ಥಿಕ ನಿರ್ಧಾರಗಳ ಬಗ್ಗೆ ಪರಸ್ಪರ ಅಸಮ್ಮತಿ ವ್ಯಕ್ತಪಡಿಸುತ್ತಾರೊ, ಅವರ ನಡುವೆ ವಿಚ್ಛೇದನದ ಸಾಧ್ಯತೆ ಶೇ.30ರಷ್ಟು ಹೆಚ್ಚುತ್ತದೆ.